Tuesday, March 29, 2011

ಜಿಲ್ಲಾಧಿಕಾರಿ ನಿರ್ಧಾರ;ಪರಿಶಿಷ್ಟರ ಜಮೀನು ಒತ್ತುವರಿ, ಪರಾಭಾರೆ ತಡೆಗೆ ಕಠಿಣ ಕ್ರಮ

ಮಂಗಳೂರು,ಮಾರ್ಚ್.29:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಂಜೂರಾದ ಜಮೀನನ್ನು 15 ವರ್ಷ ಕಡ್ಡಾಯವಾಗಿ ಪರಭಾರೆ ಮಾಡಬಾರದು ಎಂಬ ಕಾನೂನು ಇದೆ. ಆದರೂ ಹಲವು ಕಾರಣಗಳಿಂದ ಇಂತಹ ಜಮೀನು ಪರಾಭಾರೆ ಮತ್ತು ಒತ್ತುವರಿಯಾಗಿರುವುದು ಕಂಡು ಬಂದಿದೆ. ಇಂತಹ ಜಮೀನನ್ನು ಪತ್ತೆ ಹಚ್ಚಿ ಮೂಲ ಹಕ್ಕುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಕಂದಾಯ ಇಲಾಖೆ ಕೈಗೆತ್ತಿಕೊಂಡಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತಿಳಿಸಿದರು.

ಮೂಲ ಹಕ್ಕುದಾರರಿಗೆ ಜಮೀನನ್ನು ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಿಂದ ಹಲವು ಆದೇಶಗಳಾಗಿವೆ. ಆದರೂ ಆದೇಶಗಳು ತಳ ಹಂತದಲ್ಲಿ ಕಾರ್ಯಗತಗೊಳ್ಳದೆ ಮೂಲ ಫಲಾನುಭವಿಗಳಿಗೆ ತೊಂದರೆಯಾಗಿತ್ತು.
ತಳಮಟ್ಟದಲ್ಲಿ ಆಗಿರುವ ವೈಫಲ್ಯವನ್ನು ಮನಗಂಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಡಿ.ಸಿ.ಮನ್ನಾ ಜಮೀನು ಹಾಗೂ ಭೂ ಪರಾಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್ ಆಕ್ಟ್ )ಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಅಧೀನ ಅಧಿಕಾರಿಗಳಿಗೆ ನಿರ್ದೇಶನ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ನಿರ್ದೇಶದನ್ವಯ ಮಂಗಳೂರು ಸಹಾಯಕ ಆಯುಕ್ತರು ವಿಟ್ಲದಲ್ಲಿ ಇಂತಹ ಆರು ಪ್ರಕರಣಗಳ ಬಗ್ಗೆ ಗಮನಹರಿಸಿ ಮೂಲ ಹಕ್ಕುದಾರರಿಗೆ ಜಮೀನನ್ನು ಹಸ್ತಾಂತರಿಸಿದ್ದಾರೆ. ಪಿಟಿಸಿಎಲ್ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ವಿಶೇಷ ಕ್ರಮಗಳನ್ನು ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿಯೇ ಮೀಸಲಾಗಿರುವ ಜಮೀನು ವಿವಿಧ ಕಾರಣಗಳಿಗಾಗಿ ಹಲವರಿಂದ ಒತ್ತುವರಿಯಾಗಿರುವುದು, ಕಂದಾಯ ಇಲಾಖೆಯಿಂದ ಮಂಜೂರಾಗಿರುವುದು ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಿರುವುದು ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿದೆ.ಜಿಲ್ಲೆಯಲ್ಲಿ ಈ ಉದ್ದೇಶಕ್ಕಾಗಿ ಒಟ್ಟು 7,600 ಎಕರೆ ಭೂಮಿ ಮೀಸಲಾಗಿದ್ದು, 5,800 ಎಕರೆ ವಿವಿಧ ಫಲಾನುಭವಿಗಳಿಗೆ ಮಂಜೂರಾಗಿದೆ. ಮೀಸಲಾಗಿರುವ ಮಿಕ್ಕುಳಿದ 1,800 ಎಕರೆ ಜಮೀನಿನಲ್ಲಿ ಬಹುಭಾಗ ಅತಿಕ್ರಮಣಕ್ಕೆ ಒಳಗಾಗಿದ್ದು, ಶೀಘ್ರದಲ್ಲಿಯೇ ಅವುಗಳನ್ನು ತೆರವುಗೊಳಿಸಲಾಗುವದು. ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿರುವ ಜಮೀನನ್ನು ತೆರವು ಪ್ರಕ್ರಿಯೆಯಿಂದ ಹೊರಗಿಡಲಾಗುವುದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಟಿಸಿಎಲ್ ಕಾಯ್ದೆಯ ಜಾರಿ, ಡಿ.ಸಿ.ಮನ್ನಾ ಜಮೀನಿನ ಪುನರ್ಪರಿಶೀಲನೆ ಮತ್ತು ಮೂಲ ಹಕ್ಕುದಾರರಿಗೆ ಜಮೀನು ಹಸ್ತಾಂತರಿಸುವ ಕಾರ್ಯಕ್ರಮವನ್ನು ಬಹಳ ವರ್ಷಗಳ ನಂತರ ದ.ಕ.ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.