Friday, March 11, 2011

ಸ್ವಚ್ಛ ಮಂಗಳೂರಿಗಾಗಿ ಸಾಮೂಹಿಕ ಶ್ರಮದಾನ-ಸುಭೋದ್ ಯಾದವ್

ಮಂಗಳೂರು,ಮಾರ್ಚ್.11:ಸ್ವಚ್ಛ ಹಸಿರು ಪ್ರಗತಿದಾಯಕ ಮಂಗಳೂರಿಗಾಗಿ ಮಾರ್ಚ್ 27 ರಂದು ಒಂದು ದಿನ ಅಧಿಕಾರಿಗಳು,ಸಾರ್ವಜನಿಕರು,ಚುನಾಯಿತ ಪ್ರತಿನಿಧಿಗಳು, ವಿದ್ಯಾರ್ಥಿಗಳು,ವಕೀಲರು ಸೇರಿದಂತೆ ಆಯಾ ಪ್ರದೇಶದ ಎಲ್ಲರೂ ಅಂದು ಬೆಳಿಗ್ಗೆಯಿಂದ ಸಂಜೆ ತನಕ ತಮ್ಮ ಪರಿಸರ ಸ್ವಚ್ಛತೆಗಾಗಿ ಶ್ರಮದಾನ ಮಾಡಲು ಮುಂದೆ ಬರಬೇಕೆಂದು ದ.ಕ.ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಸ್ವಚ್ಛ ಮಂಗಳೂರಿಗಾಗಿ ಶ್ರಮದಾನ ಸಮಿತಿ ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ನಗರದಲ್ಲಿ ಯಾವ ವಾರ್ಡ್ ಸ್ವಚ್ಛತೆಗೆ ಅತ್ಯಂತ ಸಮರ್ಪಕವಾಗಿದೆ ಎಂಬ ಪಟ್ಟಿಯನ್ನು ಇನ್ನೆರೆಡು ದಿನಗಳಲ್ಲಿ ತಯಾರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ನಗರದ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ಸಾರ್ವಜನಿಕರು ವಿಶೇಷವಾಗಿ ಸಂಬಂಧಪಟ್ಟ ಪರಿಸರದ ಜನರು ಸ್ವಚ್ಛ ಮಂಗಳೂರು ಶ್ರಮದಾನಕ್ಕಾಗಿ ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಹಾಗೂ ಕಾಟಾಚಾರಕ್ಕಾಗಿ ಪತ್ರಿಕೆಯಲ್ಲಿ ಫೋಟೋ ಬರಬೇಕೆಂಬ ಪ್ರಚಾರದ ಗೀಳಿನಿಂದ ಶ್ರಮದಾನದಲ್ಲಿ ಭಾಗವಹಿಸದೇ,ಸ್ವಚ್ಛತೆ ಕಾರಣಕ್ಕಾಗಿ ಸ್ವಾಸ್ಥ್ಯ ಮಂಗಳೂರು ನಗರಕ್ಕಾಗಿ ಶ್ರಮದಾನದಲ್ಲಿ ಸ್ವಯಂಸ್ಪೂರ್ತಿಯಿಂದ ಭಾಗವಹಿಸುವಂತೆ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಎನ್.ಸಂಜೀವ ಅವರು ಮಾತನಾಡಿ ಮಾರ್ಚ್ 27 ರಂದು ರಾಜ್ಯ ಸರಕಾರಿ ನೌಕರರು,ಜಿಲ್ಲಾಧಿಕಾರಿಗಳ ಕಚೇರಿ ಆವರಣ,ಸ್ಟೇಟ್ ಬ್ಯಾಂಕ್ ಸುತ್ತ ಮುತ್ತ ಸ್ವಚ್ಛತೆಗಾಗಿ ಶ್ರಮದಾನ ಮಾಡುವುದಾಗಿ ತಿಳಿಸಿದರು.
ಸ್ತ್ರೀಶಕ್ತಿ ಸಂಘಗಳು,ಸ್ವಸಹಾಯ ಸಂಘಗಳು, ಸೇರಿ ಎಲ್ಲಾ ಯುವಕ/ಯುವತಿ ಸಂಘ ಸಂಸ್ಥೆಗಳು ಈ ಕಾರ್ಯದಲ್ಲಿ ಭಾಗಿಗಳಾಗಿ ಶ್ರಮದಾನ ಮಾಡುವಂತೆ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.