Tuesday, September 29, 2009

ಸಾವಿಲ್ಲದ ಸಾವಯವ ಕೃಷಿಯೊಂದಿಗೆ ಬಂಗಾರದ ಬದುಕು.!

ಮಂಗಳೂರು,ಸೆ.29: ಕೃಷಿ ಉತ್ತಮ,ವ್ಯಾಪಾರ ಮಧ್ಯಮ,ನೌಕರಿ ಕನಿಷ್ಠ ಇದು ಸ್ವಾಭಿಮಾನಿ ಸಾವಯವ ಕೃಷಿಕ ಎಡ್ವರ್ಡ್ ರೆಬೆಲ್ಲೋ ಅವರ ನೇರ ನುಡಿ.ಎರಡು ಎಕರೆ ಕಾಡು,ಗುಡ್ಡ ಪ್ರದೇಶದ ಭೂಮಿಯಲ್ಲಿ ಏನೆಲ್ಲಾ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರೆ ಏನು ಸಾಧ್ಯವಿಲ್ಲ ಎಂಬ ಉತ್ತರ ಇವರದ್ದು. ಸುದ್ದಿ ಮಾದ್ಯಮಾ, ಕೃಷಿ ಪತ್ರಿಕೆಗಳಿಂದ ದೊರೆಯುವ ಮಾಹಿತಿಯ ಜಾಡು ಹಿಡಿದು ಎಲ್ಲೆಡೆಯಿಂದ ಅಪರೂಪದ,ಹೆಚ್ಚಿನ ಲಾಭವನ್ನು ತಂದು ಕೊಡುವ ಗಿಡಗಳನ್ನು ಸಂಗ್ರಹಿಸಿ ತಂದು,ತಮ್ಮ ತೋಟದಲ್ಲಿ ಬೆಳೆದು ಮಾರುಕಟ್ಟೆಯ ಬೇಡಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಾವಯವ ಕೃಷಿಯನ್ನು ಲಾಭದಾಯಕ ಕೃಷಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ಕೇವಲ ರಂಬುಟಾನ್ ಹಣ್ಣಿನಿಂದ ವಾರ್ಷಿಕ ಕ್ವಿಂಟಾಲ್ ಹಣ್ಣು ಮತ್ತು 7 ರಿಂದ 8000 ರೂ.ಗಳನ್ನು ಸಂಪಾದಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.ಕಾಲು ಹಾದಿಯಲ್ಲಿರುವ ಗುಡ್ಡದ ನಡುವೆ ಇರುವ ಇವರ ಕೃಷಿ ಭೂಮಿಯನ್ನು ಕಾಲು ಹಾದಿಯಲ್ಲೇ ತಲುಪಬೇಕು; ಮನೆಯಿಂದ 3/4 ಕಿ.ಮೀನಷ್ಟು ದೂರವಿರುವ ತೋಟಕ್ಕೆ ತಲೆಯ ಮೇಲೆ ಸಾವಯವ ಗೊಬ್ಬರವನ್ನು ಹೊತ್ತುಕೊಂಡು ತರಬೇಕು. ಏಪ್ರಿಲ್ ನಿಂದ ಜೂನ್ ವರೆಗೆ ಇವರ ಸಾವಯವ ತೋಟಕ್ಕೆ ನೀರು ಇರುವುದಿಲ್ಲ.ಇವರ ಭೂಮಿಯ ಸುತ್ತ ಬೋರ್ ವೆಲ್ ಗಳಿರುವುದರಿಂದ ಬೇಸಿಗೆ ದಿನಗಳಲ್ಲಿ ಇವರ ತೋಟದಲ್ಲಿರುವ ನೀರಿನ ಮೂಲ ಬತ್ತುತ್ತದೆ. ಆದರೂ ಇವರ ತೋಟ ಮಾತ್ರ ಹಸಿರಿನಿಂದ ಕಂಗೊಳಿಸುತ್ತದೆ; ರಾಸಾಯಿನಿಕ ಗೊಬ್ಬರ ಬಳಕೆಯಿಂದ ಭೂಮಿ ಹಾಳು;ಅಲ್ಲದೆ ಹೆಚ್ಚಿನ ಖರ್ಚು,ಇವರು ತಮ್ಮ ತೋಟಕ್ಕೆ ಜೀವಾಮೃತವನ್ನು ಸಹ ಬಳಸುವುದಿಲ್ಲ ಬರೇ ಹಟ್ಟಿ ಗೊಬ್ಬರ. ಇದಕ್ಕಾಗಿ ಅವರು ಕೇವಲ ಎರಡು ಹಸುಗಳನ್ನು ಸಾಕುತ್ತಾರೆ. ಜಾನುವಾರುಗಳನ್ನು ಸಾಕುವುದು ಕೃಷಿ ಕೆಲಸಕ್ಕಿಂತ ಹೆಚ್ಚಿನ ಪರಿಶ್ರಮವನ್ನು ಬೇಡುತ್ತದೆ, ಹಾಗಾಗಿ ಕೇವಲ ಎರಡು ಹಸುಗಳನ್ನು ಸಾಕಿ ಇದರ ಗಂಜಲದಿಂದಲೇ ತಮ್ಮ ತೋಟವನ್ನು ಕಾಪಾಡಿಕೊಂಡಿದ್ದಾರೆ.ಸುಮಾರು 18 ಲೀಟರ್ ನಷ್ಟು ಹಾಲನ್ನು ಮಾರುತ್ತಾರೆ.
ಎರಡು ಎಕರೆ ಗುಡ್ಡದಲ್ಲಿ ಕೇವಲ ಒಂದು ಎಕರೆ ಭೂಮಿಯಲ್ಲಿ ಮಾತ್ರ ಕೃಷಿ ಮಾಡಿರುವ ಈ ತೋಟದಲ್ಲಿ ಕಾಲಿಡುವಾಗ ಎಚ್ಚರದಿಂದ ನಡೆಯಬೇಕಾಗುತ್ತದೆ. ಎಲ್ಲಿ ನೋಡಿದರೂ ಗಿಡ,ಮರಗಳು,ಹೂವುಗಳು.ಕೀಟಗಳಿಂದ ಹಣ್ಣನ್ನು ಸಂರಕ್ಷಿಸಲು ಹೂವುಗಳನ್ನು ಬೆಳೆಸಿರುವ ಇವರು, ಮಂಗಗಳ ಹಾವಳಿ ತಡೆಯ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ.ತೆಂಗು,ಅಡಿಕೆ, ರಂಬುಟಾನ್, ಮಲಯನ್ ಆಪಲ್,ಡುರಿಯಾನ್ ಹಣ್ಣು, ಮಲೇಷಿಯನ್ ವೆನಿಲಾ, ಮುಸುಂಬಿ, ವಿವಿಧ ಜಾತಿಯ ಹಲಸು ಗಿಡಗಳನ್ನು ರಾಜ್ಯದೆಲ್ಲೆಡೆಯಿಂದ ಸಂಗ್ರಹಿಸಿ ತಂದಿದ್ದಾರೆ. ಕಿತ್ತಳೆ,ಪೇರಳೆ,ಬೀಜ ರಹಿತ ನೀಲಿ, ಬಿಳಿ ನೇರಳೆ, ಚಿಕ್ಕು,ಅಂಜೂರಾ, ಬಾಳೆ,ಡ್ರ್ಯಾಗನ್ ಫ್ರೂಟ್,ಕಾಂಬೋಡಿಯಾ ಮಸ್ಕ್ ಫ್ರೂಟ್,ಥಾಯ್ಲ್ಯಾಂಡ್ ನ ಸ್ನೇಕ್ ಫ್ರೂಟ್ ಸೇರಿದಂತೆ ಹಲವಾರು ಜಾತಿಯ ಹಣ್ಣುಗಳು ಜೊತೆಯಲ್ಲಿ ಕರಿ ಮೆಣಸು,ಏಲಕ್ಕಿ,ಕೋಕ್ಕೋ,ಕಾಫಿ,ನೆಲ್ಲಿಕಾಯಿ,ಹುಣಸೇಗಿಡ,ದೀವಿ ಹಲಸಿನ ಗಿಡ,ನೀರು ಹಲಸು, ಹೆಬ್ಬಲಸು,ಸಿಹಿ ಬಿದಿರು ಗಿಡಗಳನ್ನು ಬೆಳೆಯಲಾಗಿದೆ. ಹಲಸಿನಲ್ಲಿ ಬೆಳಗಾವಿಯಿಂದ ಖಾನಾಪುರ ವೆರೈಟಿ,ಧಾರವಾಡದ ಕಿತ್ತೂರು ರಾಣಿ, ಸಾಗರದ ಚಂದ್ರಬಕ್ಕೆ,ದೊಡ್ಡಬಳ್ಳಾಪುರದ ಹಲಸು, ಲಾಲ್ ಬಾಗ್ ನಿಂದ ತಂದ ಮಧುರಾ,ಜಯಚಂದ್ರ ಹಲಸಿನ ಗಿಡಗಳನ್ನು ಈಗ ಬೆಳೆಸುತ್ತಿದ್ದಾರೆ. ದೀವಿ ಹಲಸಿನ ಮರ ಟೊಳ್ಳಾಗಿರುವುದರಿಂದ ಇದನ್ನು ಹೆಬ್ಬಲಸಿನಿಂದ ಕಸಿ ಮಾಡಲಾಗಿದೆ. ಕರಿಮೆಣಸಿನ ಗಿಡವನ್ನು ಮರಹಿಪ್ಪಲಿಯೊಂದಿಗೆ ಕಸಿ ಮಾಡಿ ಪೊದೆಗಳಂತೆ ಬೆಳೆಸಲಾಗುತ್ತಿದೆ. ಪೇರಳೆ ಗಿಡದಲ್ಲಿ ಬಿಡುವ ಹಣ್ಣು ಒಂದು ಕೆ.ಜ ತೂಕವಿದೆ.! ಇವರ ತೋಟದಲ್ಲಾಗುವ ಪರಿಮಳಭರಿತ ಲಿಂಬೆ ಹಣ್ಣಿಗೆ ಶಾಶ್ವತ ಗ್ರಾಹಕರಿದ್ದಾರೆ.
ತೋಟದ ಎಲ್ಲಾ ಕೆಲಸವನ್ನು ಪ್ರೀತಿ ಹಾಗೂ ಶ್ರದ್ಧೆಯಿಂದ ಒಬ್ಬರೇ ನಿರ್ವಹಿಸುವ ಇವರು,ಹೊಸ ಗಿಡಗಳನ್ನು ಕೊಂಡು ತರುವುದು ಮಾತ್ರವಲ್ಲದೆ, ತಮ್ಮದೇ ತೋಟದಲ್ಲಿ ಕಸಿ ಕಟ್ಟುವಂತಹ ಹಲವು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಹೊಸ ಗಿಡಗಳನ್ನು ಮಾರಾಟ ಮಾಡುತ್ತಾರೆ; ಕೃಷಿಗೆ ಹೆಚ್ಚಿನ ಬಂಡವಾಳವಿಲ್ಲ,ಸ್ಲರಿಯಲ್ಲದೆ ಗಿಡದ ಬುಡದಲ್ಲೇ ಲಭ್ಯವಿರುವ ಸೊಪ್ಪು,ಕಸಕಡ್ಡಿ ಜೊತೆ ಗೋಬರ್ ಗ್ಯಾಸ್ ವೇಸ್ಟ್, ತರಕಾರಿ ವೇಸ್ಟ್ ಬಳಸುತ್ತಾರೆ.ಬ್ಯಾಂಕ್ ನಿಂದ ಸಾಲವಾಗಲೀ, ಸರ್ಕಾರದಿಂದ ಸಹಾಯವಾಗಲಿ ಪಡೆಯದ ಇವರಿಗೆ ತಮ್ಮ ತೋಟದಿಂದ ಬರುವ ವಾರ್ಷಿಕ ಆದಾಯ 20 ಸಾವಿರ ರೂ., ಇವರಿಗೆ ಖರ್ಚಾಗುವುದು ಗಿಡಗಳನ್ನು ತರಲು ಹಾಗೂ ಊರಿಂದೂರಿಗೆ ಪ್ರಯಾಣಿಸಲು. ಎಲ್ಲೆಡೆಯೂ ಕೃಷಿಯ ಬಗ್ಗೆ ನಿರುತ್ಸಾಹ,ಐಟಿ ಬಿಟಿ,ಸರ್ಕಾರಿ ನೌಕರಿಯ ಬಗ್ಗೆ ಚಿಂತಿಸುವ ಪ್ರಸಕ್ತ ಸಮಯದಲ್ಲಿ ಸಾವಿಲ್ಲದ ಸಾವಯವ ಕೃಷಿಯ ಬಗ್ಗೆ,ಭೂಮಿಯ ಫಲವತ್ತತೆಯನ್ನು ನಾಶಪಡಿಸದೆ ಸದ್ಬಳಕೆ ಮಾಡುವ ಬಗ್ಗೆ ಎಲ್ಲರಿಗೂ ಸ್ಪೂರ್ತಿಯಾಗಿ ನಿಲ್ಲುತ್ತಾರೆ ಇಂತಹ ಸ್ವಾವಲಂಬಿ ಕೃಷಿಕರು.
ಸಮಯಪ್ರಜ್ಞೆ ಮತ್ತು ಮಾಹಿತಿಯಿಂದ ಒಂದೇ ಬೆಳೆಗೆ ಅವಲಂಬಿತರಾಗದೆ,ಕೃಷಿಯಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿರುವ ಇವರು, ಊರ ತರಕಾರಿಗಳಿಗೆ ಬೇಡಿಕೆಯಿರುವ ಸಂದರ್ಭದಲ್ಲಿ ತರಕಾರಿ ಬೆಳೆದು 8 ರಿಂದ 10,000 ರೂ. ಗಳಿಸುತ್ತಾರೆ. ಆಸಕ್ತ ಕೃಷಿಕರಿಗೆ ಮಾತ್ರ ಎಲ್ಲಾ ಮಾಹಿತಿಯನ್ನು ನೀಡಲು ಸಿದ್ಧರಿರುವ ಇವರ ವಿಳಾಸ ಎಡ್ವರ್ಡ್ ರೆಬೆಲ್ಲೋ, ತಾರಿಪಡ್ಪು ನಿವಾಸ, ತಾಕೊಡೆ ಮೂಡಬಿದ್ರೆ- ಮೊಬೈಲ್:9449471542.

Saturday, September 26, 2009

ಜನಸ್ಪಂದನದಲ್ಲಿ ಸಚಿವರಿಂದ 1,60,000 ರೂ.ಪರಿಹಾರ ವಿತರಣೆ

ಮಂಗಳೂರು,ಸೆ.26:ಜನರ ಬಳಿಗೆ ಆಡಳಿತ ಎಂಬ ಘೋಷ ವಾಕ್ಯದಡಿ ಆರಂಭಗೊಂಡ ಜನಸ್ಪಂದನ ಕಾರ್ಯಕ್ರಮ ಇಂದು ಜನರ ಕಷ್ಟಗಳಿಗೆ ಅಧಿಕಾರಿಗಳ ಸ್ಪಂದಿಸುವಿಕೆಯನ್ನು ಖಾತರಿ ಪಡಿಸಲು ಸಹಕಾರಿಯಾಗುತ್ತಿದೆ ಎಂದು ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜೆ.ಕೃಷ್ಣ ಪಾಲೆಮಾರ್ ಅವರು ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾರ್ಥಮಿಕ ಶಾಲೆ ಕಿಲೆಂಜಾರು, ಕುಪ್ಪೆಪದವಿನಲ್ಲಿ ಮಂಗಳೂರು ತಾಲೂಕು ಗುರುಪುರ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಫಲ ಲಭ್ಯವಾಗಬೇಕು ಎಂದ ಅವರು, ಇಂದು ನೇರವಾಗಿ ಜನರಿಂದ ಸಮಸ್ಯೆಗಳನ್ನು ಆಲಿಸಿ,ಅರ್ಜಿಗಳನ್ನು ಸ್ವೀಕರಿಸಿ ಪ್ರತಿಯೊಂದು ಅರ್ಜಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.ತಾವು ನೇರವಾಗಿ ಸ್ವೀಕೃತಿ ನೀಡದೆ ಸ್ವೀಕರಿಸಿದ ಅರ್ಜಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಇಂತಹ ಅರ್ಜಿಗಳ ಪರಿಶೀಲನೆಗೆಂದೇ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ ಹಾಗಾಗಿ ಅರ್ಜಿ ವಿಲೇವಾರಿಯ ಬಗ್ಗೆ ಯಾವುದೇ ಸಂಶಯ ಬೇಡ ಎಂದರು.ಇಂದಿನ ಸಭೆಯಲ್ಲಿ ಮೆಸ್ಕಾಂ, ಅರಣ್ಯ, ಕಂದಾಯ ಹಾಗೂ ಪ್ರಮುಖವಾಗಿ ಬಿಪಿಎಲ್ ಕಾರ್ಡ್ ಗಳ ವಿತರಣೆಯ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಯಿತು ಎಂದ ಅವರು,ಮೆಸ್ಕಾಂನ ಅಧಿಕಾರಿಗಳಿಗೆ ಭಾಗ್ಯಜ್ಯೋತಿ ಹಾಗೂ ಕುಟೀರಜ್ಯೋತಿ ಯೋಜನೆಯಡಿ 2ತಿಂಗಳೊಳಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಲಾಗಿದೆ ಎಂದರು.
10 ಲಾರಿಗಳಿಗೆ ದಂಡ:ಇದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಕಸ ಬಿಸಾಡಿ ಪರಿಸರ ಮಾಲಿನ್ಯ ಉಂಟು ಮಾಡುವ ಲಾರಿಗಳ ವಿರುದ್ಧ ಗ್ರಾಮಪಂಚಾಯಿತಿ ಕಾರ್ಯದರ್ಶಿಗಳು ದೂರು ಸ್ವೀಕರಿಸಿ ಪೊಲೀಸರಲ್ಲಿ ದೂರು ದಾಖಲಿಸಬಹುದು. ಈಗಾಗಲೇ ಈ ಸಂಬಂಧ ಪರಿಸರ ಇಲಾಖೆಯಿಂದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದ್ದು, ಈಗಾಗಲೇ 10 ಲಾರಿಗಳಿಂದ ದಂಡ ವಸೂಲಿ ಮಾಡಿ ಪರಿಸರವನ್ನು ಶುಚಿ ಗೊಳಿಸಲಾಗಿದೆ.ಇದೇ ಲಾರಿಗಳು ಮತ್ತೆ ಇಂತಹ ಕಾಯಕ ಮುಂದುವರಿಸಿದರೆ ಲಾರಿಗಳ ಜಪ್ತಿ ಮತ್ತು ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
26 ಗ್ರಾಮಗಳ ಜನರು ಪಾಲ್ಗೊಂಡಿದ್ದ ಇಂದಿನ ಜನಸಂಪರ್ಕ ಸಭೆಯಲ್ಲಿ 175 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸವಲತ್ತು ಹಾಗೂ ಮಾಸಾಶನ, 100 ಜನರಿಗೆ ತೆಂಗಿನ ಸಸಿ, ಇಂದಿರಾ ಆವಾಸ್ ಯೋಜನೆಯಡಿ 9 ಫಲಾನುಭವಿಗಳಿಗೆ ಸವಲತ್ತು,ಆಶ್ರಯ ಯೋಜನೆಯಡಿ 6 ಫಲಾನುಭವಿಗಳಿಗೆ 45,000ರೂ.ನೆರವು ವಿತರಿಸಲಾಯಿತು. ಇಬ್ಬರು ಮಹಿಳೆಯರಿಗೆ ಮಡಿಲು ಕಿಟ್,ಪ್ರಸೂತಿ ಆರೈಕೆ ಯೋಜನೆಯಡಿ ನಾಲ್ವರಿಗೆ ಸಹಾಯಧನವನ್ನೂ ವಿತರಿಸ ಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣ ಅಮೀನ್, ವಿನೋದ್ ಮಾಡಾ, ತಾ.ಪಂ.ಸದಸ್ಯರಾದ ಲತಾ ಜಿ.ರೈ, ಪೃಥ್ವಿರಾಜ್ ಆರ್.ಕೆ., ಶಿವಪ್ಪ, ಮುಚ್ಚೂರು ಗ್ರಾ.ಪಂ.ಅಧ್ಯಕ್ಷ ಜನಾರ್ಧನ ಗೌಡ,ಮಾತನಾಡಿದರು. ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ತಹಸೀಲ್ದಾರ್ ರವಿಚಂದ್ರ ನಾಯಕ್, ಉಪತಹಸೀಲ್ದಾರ್ , ಡಾ.ರತ್ನಾಕರ್ ನಾಯಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Friday, September 25, 2009

ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಅಕ್ರಮ ತಡೆಗೆ ಎನ್ ಫೋರ್ಸ್ ಮೆಂಟ್ ಸೆಲ್: ಸಚಿವ ಸುರೇಶ್ ಕುಮಾರ್

ಮಂಗಳೂರು,ಸೆ.25:ಮಹಾ ನಗರಪಾಲಿಕೆಗಳ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಎಲ್ಲಾ ಕಾರ್ಪೊರೇಷನ್ ಮಿತಿಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಡಿ ಎನ್ ಫೋರ್ಸಮೆಂಟ್ ಸೆಲ್ ನ್ನು ಸ್ಥಾಪಿಸಲು ಚಿಂತನೆ ನಡೆದಿದೆ ಎಂದು ರಾಜ್ಯ ನಗರಾಭಿವೃದ್ಧಿ, ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾದ ಎಸ್.ಸುರೇಶ್ ಕುಮಾರ್ ತಿಳಿಸಿದರು.

ಬೃಹತ್ ಬೆಂಗಳೂರು ಮಹಾ ನಗರಪಾಲಿಕೆ ಮಾದರಿಯಲ್ಲಿ ಅಕ್ರಮ ಕಟ್ಟಡ ತಡೆಗೆ ಅದರಲ್ಲೂ ಪ್ರಮುಖವಾಗಿ ಪಾರ್ಕಿಂಗ್ ಪ್ಲೇಸ್ ಗಳ ಸಂರಕ್ಷಣೆಗೆ ಡಿಐಜಿ ಸ್ತರದ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲು ಯೋಜನೆ ರೂಪಿಸಲಾಗಿದೆ ಎಂದು ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು. ಕಾರ್ಪೊರೇಷನ್ ನಿಯಮಗಳನ್ನು ಅನುಷ್ಙಾನಕ್ಕೆ ತರಲು ಹಿಂದೇಟು ಹಾಕುವುದಾದರೆ ಯೋಜನೆಗಳು ಹಾಗೂ ಅಧಿಕಾರಿಗಳ ಅಗತ್ಯವಿಲ್ಲ ಎಂದು ಅವರು, ಈ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮಗಳಲ್ಲೂ ಬದಲಾವಣೆ ತರುವುದಾಗಿ ನುಡಿದರು. ಬೆಂಗಳೂರಿನ ವಾಹನ ದಟ್ಟಣೆ, ಕಟ್ಟಡ ನಿರ್ಮಾಣ ಮಾದರಿ, ಪಾರ್ಕಿಂಗ್ ವ್ಯವಸ್ಥೆಗಳನ್ನು ಕಣ್ಮುಚ್ಚಿ ಅನುಸರಿಸದೆ ಅಲ್ಲಿನ ವ್ಯವಸ್ಥೆಯ ಬಗ್ಗೆ ಅರಿತು ಲೋಪಗಳ ಬಗ್ಗೆ ತಿಳಿದು ಅಂತಹ ಲೋಪಗಳು ಸಂಭವಿಸದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.
ಮಂಗಳೂರು ನಗರದಲ್ಲಿ ಮುಖ್ಯಮಂತ್ರಿಯ ನೂರು ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನ ಅಡಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್, ಶಾಸಕರಾದ ಯೋಗೀಶ್ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.

ಕರಾವಳಿ ಜೀವವೈವಿಧ್ಯ ಸಂರಕ್ಷಣೆ, ಸಮುದ್ರ ಕೊರೆತ ತಡೆಗೆ ಹಸಿರುಗೋಡೆ

ಮಂಗಳೂರು,ಸೆ.25:ಸಮುದ್ರ ಕೊರೆತ ತಡೆಗೆ ಹಸಿರುಗೋಡೆ ನಿರ್ಮಾಣವೇ ಪರಿಹಾರ; 3ಜಿಲ್ಲೆಗಳಲ್ಲಿ ಈ ಸಂಬಂಧ ಪ್ರತೀ ವರ್ಷ ಅಪಾರ ಹಾನಿ ಸಂಭವಿಸುತ್ತಿದ್ದು, ಕಲ್ಲಿನ ತಡೆಗೋಡೆ ನಿರ್ಮಾಣ ಸಮಸ್ಯೆಗೆ ಪರಿಹಾರವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಸಂಬಂಧ ಬೆಂಗಳೂರಿನ ಅರಣ್ಯ ಭವನದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ, ಜೀವವೈವಿಧ್ಯ ಮಂಡಳಿ ಸಂಯುಕ್ತವಾಗಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಮಾತನಾಡಿದರು.ಸಭೆಯಲ್ಲಿ ಕರಾವಳಿಯ ಜೀವವೈವಿಧ್ಯಕ್ಕಾಗಿರುವ ಹಾನಿಯ ಬಗ್ಗೆ, ಜನಪರ ಯೋಜನೆಗಳಲ್ಲಿ ಸಮಗ್ರ ಜನ ಪಾಲ್ಗೊಳ್ಳುವಿಕೆಯ ಬಗ್ಗೆ ವಿವರವಾದ ಚರ್ಚೆ ನಡೆಸಲಾಯಿತು. ಕಡಲ್ಕೊರೆತ ತಡೆ ಜವಾಬ್ದಾರಿ ಅರಣ್ಯ ಇಲಾಖೆಯದ್ದಾಗಬೇಕು; ಏಷ್ಯನ್ ಡೆವಲಪ್ ಬ್ಯಾಂಕ್ ಬೆಂಬಲದ ಉಳ್ಳಾಲ ಕಡಲ್ಕೊರೆತ ತಡೆ ಮಾದರಿ ಯೋಜನೆಯಲ್ಲಿ ಪರಿಸರ ಅರಣ್ಯ ಕುರಿತು ಆದ್ಯತೆ ನೀಡಬೇಕು, ರಾಜ್ಯ ಪರಿಸರ ಅರಣ್ಯ ಇಲಾಖೆ, ಬಂದರು ಇಲಾಖೆ ಹೆಚ್ಚಿನ ಕಾಳಜಿ ವಹಿಸಿ ಕಾರ್ಯೋನ್ಮುಖರಾಗಬೇಕು. ಸಂಶೋಧಕರು,ಸಂಸ್ಥೆಗಳು ಹಸಿರುಗೋಡೆ ನಿರ್ಮಾಣ ಪ್ರಯೋಗದಲ್ಲಿ ಪಾಲ್ಗೊಳ್ಳುವಂತೆ, ಸಮಗ್ರ ಕ್ರಿಯಾ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಬೇಕು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಕಡಲ್ಕೊರೆತ ತಡೆಗೆ ಕಲ್ಲು ಗೋಡೆ ಮಾಡಿದರೆ ಅದರ ಪಕ್ಕದ ಪ್ರದೇಶ ನಾಶವಾಗುತ್ತದೆ; ಮರಳು ತೆಗೆಯುವ ಕಾರ್ಯದಿಂದ ಅಳಿವೆಗಳು ಕಣ್ಮರೆ ಆಗುತ್ತಿವೆ; ನೈಸರ್ಗಿಕ ಕಾಂಡ್ಲಾ ಇನ್ನಿತರ ಸಸ್ಯವರ್ಗ ನಾಶವಾಗುತ್ತಿದೆ. ಸುರಹೊನ್ನೆ ಮರ, ಪೊಂಗಾಮಿಯಾ, ಗಾಳಿ,ಗೇರು,ಐಪೋಮಿಯಾಬಳ್ಳಿ, ಕಾಂಡ್ಲಾ ಗಿಡಗಳನ್ನು ಸಮುದ್ರದ ಅಂಚಿನಲ್ಲಿ ವ್ಯಾಪಕವಾಗಿ ಬೆಳೆಸುವುದೇ ನಿಜವಾದ ಪರಿಹಾರ ಎಂದು ಕಾರವಾರ ಮೆರೈನ್ ಬಯಾಲಜಿ ಸ್ನಾತಕೋತ್ತರ ಕೇಂದ್ರದ ತಜ್ಞ ಪ್ರೊ. ವಿ.ಎನ್.ನಾಯಕ್ ವ್ಯಾಖ್ಯಾನಿಸಿದರು.
ರಾಜ್ಯ ವನ್ಯಜೀವಿ ವಾರ್ಡನ್ ಬಿ.ಕೆ.ಸಿಂಗ್ ಅವರು, ಜಲಚರ ಪ್ರಾಣಿಗಳ ಬಗ್ಗೆ ಅಧಿಕಾರಿಗಳ ಇರುವ ಮಾಹಿತಿ ಸಾಲದು;ಅರಣ್ಯ ಇಲಾಖಾ ಅಧಿಕಾರಿಗಳಿಗೆ ಇನ್ನಷ್ಟು ಮಾಹಿತಿ ನೀಡುವ ಕೆಲಸವಾಗಬೇಕು ಎಂದರು.
ಪರಿಸರ ಇಲಾಖೆಯ ತಾಂತ್ರಿಕ ನಿರ್ದೇಶಕರಾದ ಪುಟ್ಟಬುದ್ದಿ ಅವರು ಮಾತನಾಡಿ, ಕರಾವಳಿ ನಿಯಂತ್ರಣ ಕಾಯಿದೆ ಮೂಲಕ ಅತಿಕ್ರಮಣ ತಡೆಗೆ ಪ್ರಯತ್ನ ಸಾಗಿದೆ. ದೇಶದ 3 ಮಾದರಿ ಯೋಜನೆಗಳಲ್ಲಿ ಉಳ್ಳಾಲ ಕಡಲ್ಕೊರೆತ ತಡೆ ಯೋಜನೆ ಒಂದು; ಈಗ ಈ ಯೋಜನೆಯ ತಯಾರಿ ನಡೆದಿದೆ ಎಂದು ಮಾಹಿತಿ ನೀಡಿದರು.ಬಂದರು ಇಲಾಖೆ ವಿಶೇಷ ಇಂಜಿನಿಯರ್ ಕೆ.ಎಸ್.ಜಂಬಾಳೆ, ಇದಕ್ಕಾಗಿ ಉಡುಪಿ, ಹೊನ್ನಾವರ,ಕಾರವಾರ ಪ್ರದೇಶದಲ್ಲಿ ಒಟ್ಟು ರೂ.18 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಉಳ್ಳಾಲ ಮಾದರಿ ಯೋಜನೆಗೆ ನ್ಯೂಜಿಲೆಂಡ್ ತಜ್ಞರು ಮಾರ್ಗದರ್ಶನ ನೀಡಲಿದ್ದು,ಈ ಯೋಜನೆಯ ಅಂದಾಜು ವೆಚ್ಚ 601 ಕೋಟಿ ರೂ.ಎಂದು ತಿಳಿಸಿದರು.
ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿ ದೀಪಕ್ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಜೀವವೈವಿಧ್ಯ ಮಂಡಳಿ ಅಧಿಕಾರಿ ಮಂಜುನಾಥ್, ಕಾರವಾರ ಜಿಲ್ಲಾ ಜಲಾನಯನ ಅಧಿಕಾರಿ ಜೆ.ಕೆ.ಹೆಗಡೆ, ಶಿವರಾಜೇಗೌಡ ವಿಷಯ ಮಂಡಿಸಿದರು.

Thursday, September 24, 2009

ನಾಡದೋಣಿಗೆ ಸೀಮೆಎಣ್ಣೆ ಪೂರೈಸುವ ಭರವಸೆ

ಮಂಗಳೂರು,ಸೆ.24:ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆಯಲ್ಲಾಗುವ ಅಡಚಣೆ ನಿವಾರಿಸಲು ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ನೀಡಿದ್ದಾರೆ.
ಸೀಮೆಎಣ್ಣೆ ಪೂರೈಕೆಯಲ್ಲಿ ಆಗುವ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಉಪಸ್ಥಿತಿಯಲ್ಲಿ ಮೀನುಗಾರರ ಮುಖಂಡರೊಂದಿಗೆ ಸಭೆ ನಡೆಸಿದ ಪಾಲೆಮಾರ್ ಅವರು ಈ ಭರವಸೆ ನೀಡಿದರು. ನಾಡದೋಣಿ ಮೀನುಗಾರರಿಗೆ ಪ್ರತಿತಿಂಗಳೂ 200 ಲೀ. ಸೀಮೆಎಣ್ಣೆ ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಹಲವಾರು ಅರ್ಜಿಗಳು ಬಂದಿದ್ದು, ಪೂರೈಕೆಯಲ್ಲಿ ಲೋಪವಾಗಿದೆ. ಮುಂದಿನ ತಿಂಗಳು ತಲಾ 185 ಲೀ ಎಣ್ಣೆ ನೀಡಲಾಗುವುದು. ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಭರವಸೆಯನ್ನು ಅವರು ನೀಡಿದರು.

Wednesday, September 23, 2009

ಸ್ವತಂತ್ರ್ಯ ಮಾಧ್ಯಮ ಮತ್ತು ಶಿಕ್ಷಣದಿಂದ ಉತ್ತಮ ಸಮಾಜ:ರಾಜ್ಯಪಾಲ ಎಚ್.ಆರ್.ಭಾರಧ್ವಾಜ

ಮಂಗಳೂರು,ಸೆ.23:ಪ್ರಜಾಪ್ರಭುತ್ವದ ನಾಲ್ಕನೆ ಅಂಗವೆಂದು ಪರಿಗಣಿಸಲ್ಪಟ್ಟಿರುವ ಪತ್ರಿಕೋದ್ಯಮಕ್ಕೆ ಸಂಪೂರ್ಣ ಸ್ವಾತಂತ್ರ್ಯದ ಅಗತ್ಯವನ್ನು ಪ್ರತಿಪಾದಿಸಿದ ರಾಜ್ಯಪಾಲ ಹಂಸರಾಜ ಭಾರಧ್ವಾಜ ಅವರು,ಸತ್ಯವನ್ನು ಜನರಿಗೆ ತಿಳಿಸುವ ಪ್ರಮುಖ ಹೊಣೆ ಪ್ರತ್ರಿಕೋದ್ಯಮ ಮತ್ತು ನ್ಯಾಯಾಂಗದ್ದು ಎಂದರು.
ಇಂದು ಸಂತ ಅಲೋಷಿಯಸ್ ಕಾಲೇಜಿನಲ್ಲಿ ಸಮುದಾಯ ರೇಡಿಯೋ ಸಾರಂಗನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು,ಮಾಧ್ಯಮ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಮಾತನಾಡಿದರು. ಮಾಧ್ಯಮಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತಾಗಲು ಸರ್ಕಾರ ನೆರವಾಗಬೇಕು ಎಂದ ಅವರು ನ್ಯಾಯಾಂಗ ಮತ್ತು ಪತ್ರಿಕೋದ್ಯಮ ನಿಷ್ಪಕ್ಷವಾಗಿ ಕರ್ತವ್ಯ ನಿರ್ವಹಿಸಿದರೆ ಜನರಿಗೆ ಅನುಕೂಲ.ಬಡತನ ಮತ್ತು ನಿರ್ಲಕ್ಷ್ಯವನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದ ಅವರು. ಶಿಕ್ಷಣ ಮತ್ತು ಸಾಮಾಜಿಕ ಶಾಂತಿಯಿಂದ ಅಭಿವೃದ್ಧಿ ಸಾಧ್ಯ ಎಂದ ಅವರು,ಜವಾಬ್ದಾರಿಯುತ ಸ್ಥಾನದಲ್ಲಿರುವವರ ಧ್ಯೇಯ ಜನಸೇವೆಯಾಗಿರಬೇಕು ಎಂದೂ ನುಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಕಾನೂನು ಸಚಿವ ಡಾ.ವೀರಪ್ಪ ಮೊಯಿಲಿ ಅವರು, 21ನೇ ಶತಮಾನದಲ್ಲಿ ಸೈಬರ್ ಅಪರಾಧ ತಡೆಯಲು ಕಾನೂನಿನ ಸವಾಲುಗಳ ಕುರಿತು ಮಾತನಾಡಿ,ಯಾವುದೇ ರೀತಿಯ ಅಪರಾಧ ಮತ್ತು ಅಪರಾಧಿಗಳ ಪತ್ತೆಗೆ ನಮ್ಮ ದೇಶದ ಕಾನೂನು ಶಕ್ತವಾಗಿದೆಯಲ್ಲದೆ, ಸೈಬರ್ ಕ್ರೈಮ್ ತಡೆಗೆ ಎರಡು ತಿಂಗಳೊಳಗೆ ಹೊಸ ಕಾನೂನನ್ನು ರೂಪಿಸುವುದಾಗಿ ಘೋಷಿಸಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಡಾ. ವಿ.ಎಸ್. ಆಚಾರ್ಯ ಅವರು ಕರ್ನಾಟಕ ದರ್ಶನ 2020 ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿ ಕಾರ್ಯೋನ್ಮುಖವಾಗಿರುವ ಸರ್ಕಾರ ರಾಜ್ಯವನ್ನು ನಂಬರ್ ವನ್ ಆಗಿ ರೂಪಿಸಲು ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬಡ ಮತ್ತು ಗ್ರಾಮೀಣ ಜನರಿಗೆ ಸರ್ಕಾರದ ಸವಲತ್ತುಗಳು ದೊರೆಯಲು ಈಗಾಗಲೇ ಕೈಗೊಂಡಿರುವ ನೂತನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು,ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದರು. %56ರಷ್ಟು ಕೃಷಿಕರಿರುವ ರಾಜ್ಯದಲ್ಲಿ ಅವರು ಜಿಎಸ್ ಡಿಪಿ ಕೇವಲ 19.3%.ಸರ್ಕಾರಮತ್ತು ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯವನ್ನು ಶೈಕ್ಷಣಿಕವಾಗಿ ನಂಬರ್ ವನ್ ಮಾಡಲು ಆದ್ಯತೆ.ಹೈನುಗಾರಿಕೆಯಲ್ಲಿ ಅವಿಭಜಿತ ಜಿಲ್ಲೆಗಳು ಮುಂಚೂಣಿಯಲ್ಲಿದ್ದು, ಉಡುಪಿಯಲ್ಲೂ ವಿಮಾನ ನಿಲ್ದಾಣ ಸ್ಥಾಪನೆಗೆ ಭೂಸ್ವಾಧೀನ ಕಾರ್ಯ ಆರಂಭಿಸಲಾಗಿದೆ. ಮಂಗಳೂರು-ಮುಂಬೈಗೆ ಹಗಲು ರೈಲು ಓಡಿಸುವ ಬಗ್ಗೆ,ಬೆಂಗಳೂರು-ಮಂಗಳೂರು ಹಗಲು ರೈಲಿನ ಬಗ್ಗೆ ಕೇಂದ್ರ ಕಾನೂನು ಸಚಿವರ ಸಹಕಾರವನ್ನು ಕೋರಿದ ಅವರು,ದ.ಕ ಮತ್ತು ಉಡುಪಿಯಲ್ಲಿ 170 ಕಿ.ಮೀ ವ್ಯಾಪ್ತಿಯ ಸಮುದ್ರತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಮೀನುಗಾರಿಕೆ ಹಾಗೂ ವಾಣಿಜ್ಯ ಉದ್ದೇಶದ ಬಂದರುಗಳ ನಿರ್ಮಾಣದ ಬಗ್ಗೆ ಚಿಂತಿಸಲಾಗಿದೆ ಎಂದರು.
ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು.ಟಿ.ಖಾದರ್ ಉಪಸ್ಥಿತರಿದ್ದರು. ಮಂಗಳೂರಿನ ಬಿಷಪ್ ಡಾ.ಅಲೋಷಿಯಸ್ ಪಿ.ಡಿ ಸೋಜಾ ಆಶೀರ್ವವಚನ ನೀಡಿದರು. ಫಾ.ಜೋಸೆಫ್ ರಾಡ್ರಿಗಸ್ ಸ್ವಾಗತಿಸಿದರು.

ರಾಜ್ಯವನ್ನು ವಿದ್ಯುತ್ ಸ್ವಾವಲಂಬಿಯಾಗಿಸಲು 3ಹಂತದ ಯೋಜನೆ:ಇಂಧನ ಸಚಿವ ಈಶ್ವರಪ್ಪ

ಮಂಗಳೂರು,ಸೆ.22:ರಾಜ್ಯವನ್ನು ವಿದ್ಯುತ್ ಸ್ವಾವಲಂಬಿಯನ್ನಾಗಿಸಲು 3 ಹಂತದಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಇಂಧನ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಇಂದು ನಗರದ ಕದ್ರಿಯ ಹೆಚ್. ಆರ್. ಡಿ ಸೆಂಟರ್ ಕದ್ರಿಯಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜಿಗಾಗಿ 33/11 ಕೆ.ವಿ.ವಿದ್ಯುತ್ ಉಪಕೇಂದ್ರಗಳ 33ಕೆವಿ ಭೂಗತ ಕೇಬಲ್ ಕಾಮಗಾರಿಗಳ ಪ್ರಾರಂಭ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ವಿತರಣಾ ನಿಯಂತ್ರಣ ಕೇಂದ್ರಗಳ ಕಟ್ಟಡ ಸಮುಚ್ಚಯದ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡುತ್ತಿದ್ದರು. ರಾಜ್ಯದಲ್ಲಿ 10,000ಮೆ.ವ್ಯಾ ವಿದ್ಯುತ್ ಗೆ ಬೇಡಿಕೆ ಇದ್ದು ಪ್ರಸ್ತುತ 7,000 ಮೆ.ವ್ಯಾ ಉತ್ಪಾದಿಸಲಾಗುತ್ತಿದೆ. ಬೇಡಿಕೆ ಪೂರೈಸಲು 3,000 ಮೆ.ವ್ಯಾ ವಿದ್ಯುತ್ ಅಗತ್ಯವಿದ್ದು ಮೊದಲ ಹಂತವಾಗಿ ವಿದ್ಯಾರ್ಥಿಗಳಿಗೆ ಮತ್ತು ರೈತರ ಹಿತವನ್ನು ಗಮನದಲ್ಲಿರಿಸಿ 3ಸಾವಿರ ಕೋಟಿ ರೂ.ಮೌಲ್ಯದ ವಿದ್ಯುತ್ ಖರೀದಿಸಿ ಪೂರೈಸಲಾಗಿದೆ.ಎರಡನೇ ಹಂತದಲ್ಲಿ ಅಪೂರ್ಣವಾಗಿರುವ ಎಲ್ಲಾ ವಿದ್ಯುತ್ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಎಲ್ಲಾ ಅಸಂಪ್ರಾದಾಯಿಕ ಇಂಧನ ಮೂಲಗಳಿಂದ ಹಾಗೂ ಸೌರಶಕ್ತಿಯಿಂದ 1250ಮೆ.ವ್ಯಾ ವಿದ್ಯುತ್ ಉತ್ಪಾದಿಸಿ ಸಮಸ್ಯೆ ನಿವಾರಣೆಗೆ ಯತ್ನಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.ಜೇವರ್ಗಿ, ಘಟಪ್ರಭ,ಗುಂಡ್ಯ,ಶಿವನಸಮುದ್ರ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಮೂರನೇ ಹಂತದಲ್ಲಿ ರಾಜ್ಯಕ್ಕೆ ಮುಂದಿನ 10 ವರ್ಷಗಳಿಗೆ ಬೇಕಾಗುವ ವಿದ್ಯುತ್ ಗೆ ಎನ್ ಟಿ ಪಿ ಸಿ ಯೊಂದಿಗೆ ಒಪ್ಪಂದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಗೆ ಹಾಗೂ ನಗರಗಳಲ್ಲಿ ಕನಿಷ್ಠ 22 ಗಂಟೆ ನಿರಂತರ ವಿದ್ಯುತ್ ಪೂರೈಕೆಗೆ ಅ.5 ರಂದು ಹೊಸಕೋಟೆಯಲ್ಲಿ ಮುಖ್ಯಮಂತ್ರಿಗಳು ನಿರಂತರ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
1234 ಹುದ್ದೆಗಳಿಗೆ ನೇರ ನೇಮಕಾತಿ ಹಾಗು ಹಾಲಿ ಕಾಂಟ್ರ್ಯಾಕ್ಟ್ ಬೇಸಿಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಪರ್ಮನೆಂಟ್ ಮಾಡಲಾಗುವುದು ಎಂದರು.ಪರಿಸರ ನಾಶದ ಹೆಸರಿನಲ್ಲಿ ಅಭಿವೃದ್ಧಿಗೆ ಅಡ್ಡಿಯಾದರೆ ಮುಂದಿನ ದಿನಗಳಲ್ಲಿ ಜನರಿಗೆ ತೊಂದರೆಯಾಗಲಿದೆ.ಲಿಂಗನಮಕ್ಕಿ ಇಲ್ಲಿದಿದ್ದರೆ ಇಂದು ರಾಜ್ಯ ಕತ್ತಲಿನಲ್ಲಿರುತ್ತಿತ್ತು ಎಂದೂ ಅವರು ನುಡಿದರು.
ಸಮಾರಂಭದಲ್ಲಿ ಉಪಸ್ಥಿತಿಯನ್ನು ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು,ಜಿಲ್ಲೆಗೆ ನಿರಂತರ ವಿದ್ಯುತ್ ಗೆ ಪರಿಸರ ಇಲಾಖೆಸಂಪೂರ್ಣ ಸಹಕಾರ ನೀಡಲಿದೆ ಎಂದರು. ನವರಾತ್ರಿಯ ಸಂದರ್ಭದಲ್ಲಿ ವಿದ್ಯುಚ್ಛಕ್ತಿ ವರ್ಧನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಯೋಗೀಶ್ ಭಟ್ ಅವರು,ನಿಗದಿತ ಸಮಯಮಿತಿಯಲ್ಲಿ ಜಿಲ್ಲೆಯಲ್ಲಿ 4 ಸಬ್ ಸ್ಟೇಷನ್ ರಚನೆಗೆ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕು;ಭೂಗತ ಕೇಬಲ್ ಅಳವಡಿಕೆಗೆ ಹಾಗೂ ಯೋಜನೆಗಳ ಸಾಕಾರಕ್ಕೆ ಕೆಪಿಟಿಸಿಎಲ್ ನ ಸಹಕಾರದ ಅಗತ್ಯದ ಬಗ್ಗೆ ಸಚಿವರ ಗಮನ ಸೆಳೆದರು.ಸಭೆಯನ್ನುದ್ದೇಶಿಸಿ ಲೋಕಸಭಾ ಸದಸ್ಯ ನಳಿನ್ ಕುಮಾರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಮಹಾಪೌರ ಎಂ.ಶಂಕರ ಭಟ್ ಮಾತನಾಡಿದರು.ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮೋನಪ್ಪ ಭಂಡಾರಿ,ತಾಂತ್ರಿಕ ನಿರ್ದೇಶಕ ಸಿ. ಎಸ್. ಗಣೇಶ್, ಮುಖ್ಯ ಇಂಜಿನಿಯರ್ ಎಂ. ಮಹದೇವ್ ಉಪಸ್ಥಿತರಿದ್ದರು. ನಂತರ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಯೋಜನೆಗಳ ಬಗ್ಗೆ ವಿವರಿಸಿದರು.

Friday, September 18, 2009

ಪಶ್ವಿಮಘಟ್ಟ ಕಾರ್ಯಪಡೆಯಿಂದ ಸೆ.26ರಂದು ವರದಿ ಸಲ್ಲಿಕೆ

ಮಂಗಳೂರು,ಸೆ.18: ಪಶ್ಚಿಮಘಟ್ಟ ಕಾರ್ಯಪಡೆ ತನ್ನ ಅಧ್ಯಯನ ವರದಿ ಮತ್ತು ಶಿಫಾರಸ್ಸುಗಳನ್ನು ಸೆ.26ರಂದು ಸರಕಾರಕ್ಕೆ ಸಲ್ಲಿಸಲಿದೆ ಎಂದು ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಜೀವವೈವಿಧ್ಯ ಸಂರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆ, ತಾಲೂಕು,ಗ್ರಾ.ಪಂ.ಮಟ್ಟದಲ್ಲಿ ಜೀವವೈವಿಧ್ಯ ರಕ್ಷಣೆಯ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯತ್ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಹಿಸಲಾಗುವುದು ಎಂದು ಹೇಳಿದರು. ಅರಣ್ಯ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿ ಇದ್ದು ಸ್ಥಳೀಯರಿಗೆ ಆದ್ಯತೆ ನೀಡಿ ಹುದ್ದೆ ಭರ್ತಿ ಮಾಡಲಾಗುವುದು ಎಂದರು. ಕರಾವಳಿಯ ಸೂಕ್ಷ್ಮ ಪ್ರದೇಶ,ಅಳಿವೆ ಪ್ರದೇಶಗಳನ್ನು ಗುರುತಿಸಿ ರಕ್ಷಿಸಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದರು. ನೇತ್ರಾವತಿ ತಿರುವು ಯೋಜನೆ ಅವೈಜ್ಞಾನಿಕವಾಗಿರುವುದರಿಂದ ಯೋಜನೆ ಕಾರ್ಯಸಾಧುವಲ್ಲ ಎಂದರು.ಕಡಲ್ಕೊರೆತ ತಡೆಯಲು ಹಸಿರು ತಡೆಗೋಡೆ( ಗ್ರೀನ್ ವಾಲ್ ) ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದ್ದು ಈ ಸಂಬಂಧ ಸೆ.23ರಂದು ಬೆಂಗಳೂರಿನಲ್ಲಿ ಪರಿಸರ ವಿಜ್ಞಾನಿಗಳ, ಜೀವವೈವಿಧ್ಯ,ಅರಣ್ಯ, ಬಂದರು ಮತ್ತು ಇಲಾಖಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.

Thursday, September 17, 2009

ಸಾಮಾಜಿಕ ಸಮಾನತೆಗೆ ಉದ್ಯೋಗಖಾತ್ರಿ ಯೋಜನೆ

ಮಂಗಳೂರು,ಸೆ.17:ಉದ್ಯೋಗಖಾತ್ರಿ ಯೋಜನೆ ಜನರಿಗೋಸ್ಕರ ರೂಪಿಸಿರುವ ಕಾಯಿದೆಯಾಗಿದ್ದು, ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಬಂಟ್ವಾಳ ಕ್ಷೇತ್ರ ಶಾಸಕರಾದ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳದ ಸುರಿಬೈಲಿನ ದ.ಕ.ಜಿ.ಪಂ ಹಿ.ಪ್ರಾ. ಶಾಲೆಯಲ್ಲಿ ವಾರ್ತಾ ಇಲಾಖೆ ಸ್ಥಳೀಯಾಡಳಿತದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ 'ಸ್ವಾವಲಂಬನೆಗಾಗಿ ಉದ್ಯೋಗಖಾತ್ರಿ'ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಾಮರಸ್ಯ ಮತ್ತು ಸಹಕಾರದಿಂದ ಅಭಿವೃದ್ಧಿ ಸಾಧ್ಯ ಎಂದ ಅವರು, ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ, ಅಧಿಕಾರಿಗಳ ಕರ್ತವ್ಯಪ್ರಜ್ಞೆ ಮತ್ತು ಫಲಾನುಭವಿಗಳ ಪಾಲ್ಗೊಳ್ಳುವಿಕೆಯಿಂದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು.ನರೇಗಾ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು,ದುಡಿಯುವ ಕೈಗಳಿಗೆ ಉದ್ಯೋಗ ನೀಡಲಿದೆ ಎಂದರು.ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಎಂ.ಬಾಬು,ಜಿ.ಪಂ.ಸದಸ್ಯರಾದ ಮಮತ ಗಟ್ಟಿ ಸೇರಿದಂತೆ ಸ್ಥಳೀಯಾಡಳಿತದ ಸದಸ್ಯರು, ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಕೊಲ್ನಾಡು ಗ್ರಾ.ಪಂ. ಅಧ್ಯಕ್ಷರಾದ ಜಯಂತಿ ಎಸ್. ಪೂಜಾರ್ ಸಮಾರಂಭದಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಇ ಒ ವಸಂತರಾಜ್ ಶೆಟ್ಟಿ, ತೋಟಗಾರಿಕೆ ಅಧಿಕಾರಿ ಸಂಜೀವ ನಾಯ್ಕ ಅವರು ಮಾಹಿತಿ ನೀಡಿ,ಜನರ ಪ್ರಶ್ನೆಗಳಿಗೆ ಉತ್ತರಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಯೋಜನೆಯ ಬಗ್ಗೆ ಗಿರೀಶ್ ನಾವಡ ತಂಡದಿಂದ ನಾಟಕ ಪ್ರದರ್ಶನ ಮತ್ತು ವಸ್ತುಪ್ರದರ್ಶನವಿತ್ತು.
ಸುರಿಬೈಲು ಶಾಲೆಯ ಮಕ್ಕಳು ಪ್ರಾರ್ಥಿಸಿದರು ಮತ್ತು ಆಶಯಗೀತೆ ಹಾಡಿದರು.ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ,ಪ್ರಾಸ್ತಾವಿಕ ಮಾತನ್ನಾಡಿದರು.ಗ್ರಾ.ಪಂ.ಕಾರ್ಯದರ್ಶಿ ಪೂವಪ್ಪ ಬಂಗೇರ ವಂದಿಸಿದರು.ಶಾಲೆಯ ಶಿಕ್ಷಕರು ಮತ್ತು ಎಸ್ ಡಿ ಎಂಸಿ ಅಧ್ಯಕ್ಷ ಅಬೂಬಕ್ಕರ್ ಕಾರ್ಯಕ್ರಮ ಆಯೋಜಿಸಲು ಸಂಪೂರ್ಣ ಸಹಕಾರ ನೀಡಿದರು.

ಜಿಲ್ಲೆಯ ಅಭಿವೃದ್ಧಿಗೆ ತಿಂಗಳಿಗೊಮ್ಮೆ ಪ್ರಗತಿಪರಿಶೀಲನೆ: ಎಂ.ಎನ್. ವಿದ್ಯಾಶಂಕರ್

ಮಂಗಳೂರು,ಸೆ.17:ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ರಾಷ್ಟ್ರೀಯ ಹೆದ್ದಾರಿ, ನಗರ ನೀರು ಸರಬರಾಜು, ವಿಮಾನ ನಿಲ್ದಾಣ ಪುನರ್ವಸತಿ, ಏಷಿಯನ್ ಫಾರೆಸ್ಟ್ ಶಿಪ್, ಅಕ್ರಮ ಗಣಿಗಾರಿಕೆ, ಮರಳು ಸಾಗಾಣಿಕೆ, ಎಮ್ ಆರ್ ಪಿ ಎಲ್ ತ್ಯಾಜ್ಯ ನಿರ್ವಹಣೆ, ನಗರದಲ್ಲಿ ಬೆಂಕಿ ಅವಘಡಗಳು, ಮೆಸ್ಕಾಂ ಕಾರ್ಯನಿರ್ವಹಣೆಯ ಬಗ್ಗೆ ಇಂದು ನೂತನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಂ.ಎನ್. ವಿದ್ಯಾಶಂಕರ್ ಅವರು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಇಂದು ದಿನಪೂರ್ತಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಮುಖ ಇಲಾಖೆಗಳ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದ ಕಾರ್ಯದರ್ಶಿಗಳು ಶೀಘ್ರದಲ್ಲೇ ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹಾಗೂ ದೆಹಲಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.ಮಧ್ಯಾಹ್ನ ಕಂದಾಯ ಇಲಾಖೆಯನ್ನು ಇನ್ನಷ್ಟು ಉತ್ತಮಪಡಿಸುವ ಬಗ್ಗೆ ಚರ್ಚೆ ನಡೆಸಿದರು.
ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮಯಮಿತಿ ನಿಗದಿಪಡಿಸಿ ಕಾರ್ಯೋನ್ಮುಖರಾಗುವ ಭರವಸೆಯನ್ನು ನೀಡಿದರು. ರಾಷ್ಟ್ರೀಯ ಹೆದ್ದಾರಿ 13ರಲ್ಲಿ 7 ಕಿ.ಮೀ. ವ್ಯಾಪ್ತಿಗೆ 585 ಲಕ್ಷ ರೂ., 48ರಲ್ಲಿ 12 ಕಿ.ಮೀ.ಗೆ 1,400 ಲಕ್ಷ, 17ರಲ್ಲಿ 5 ಕಿ.ಮೀ. 343 ಲಕ್ಷ ರೂ.ಗಳಿದ್ದು, ಮಳೆಗಾಲದ ನಂತರ ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಕುಕ್ಕೆ ಸುಬ್ರಮಣ್ಯ ದೇವಳ ಅಭಿವೃದ್ಧಿಯ ಬಗ್ಗೆಯೂ ಮಾಹಿತಿ ನೀಡಿದರು. ತುಂಬೆಯಲ್ಲಿ ವೆಂಟೆಡ್ ಡ್ಯಾಮ್ ನ ಎತ್ತರ ಹೆಚ್ಚಿಸುವ ಸಂಬಂಧ 35ರಿಂದ 40 ಕೋಟಿ ರೂ.ಗಳ ಅಂದಾಜು ವೆಚ್ಚ ತಯಾರಿಸಲಾಗಿದೆ ಎಂದರು. ಈ ಗವರ್ನೆನ್ಸ್ ಯೋಜನೆಯಡಿ ಬೆಂಗಳೂರು-1 ಮಾದರಿಯಲ್ಲಿ ಮಂಗಳೂರಿನಲ್ಲೂ ನವೆಂಬರ್ ತಿಂಗಳೊಳಗೆ ಆರಂಭಿಸುವುದಾಗಿ ನುಡಿದರು. ಇದಲ್ಲದೆ ಗುಲ್ಬರ್ಗಾ,ಶಿವಮೊಗ್ಗ, ದಾವಣಗೆರೆ, ತುಮಕೂರು,ಮೈಸೂರು, ಬಳ್ಳಾರಿಯಲ್ಲೂ ಇದೇ ಮಾದರಿ ಪಬ್ಲಿಕ್ ಪ್ರವೈಟ್ ಪಾರ್ಟ್ ನರ್ ಶಿಪ್ ನಡಿ ಯೋಜನೆ ರೂಪಿಸಲಾಗುವುದು ಎಂದರು. ಬೆಂಗಳೂರಿನಲ್ಲಿ ಇದು ಯಶಸ್ವಿಯಾಗಿರುವುದಾಗಿಯೂ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಅಪರ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ ಅವರು ಉಪಸ್ಥಿತರಿದ್ದರು.

Wednesday, September 16, 2009

ಸ್ಮಾರ್ಟ್ ಕಾರ್ಡ್ ನಿಂದ ಅಪರಾಧ ತನಿಖೆಗೆ ಸಹಕಾರ: ಐಜಿಪಿ ಹೊಸೂರ್

ಮಂಗಳೂರು,ಸೆ.16:ಅಪರಾಧ ಘಟನೆಗಳಲ್ಲಿ ವಾಹನಗಳು ಪ್ರಮುಖ ಪಾತ್ರ ವಹಿಸುತ್ತಿದ್ದು,ಅಪರಾಧಕ್ಕೆ ಬಳಕೆಯಾಗುವ ವಾಹನಗಳ ಪರವಾನಿಗೆ ರದ್ಧತಿ ಮತ್ತು ಮುಟ್ಟುಗೋಲು ಹಾಕಿಕೊಳ್ಳುವಂತೆ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್ ಅವರು ಹೇಳಿದರು.
ಇಂದು ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆರಂಭಿಸಲಾದ ಸ್ಮಾರ್ಟ್ ಕಾರ್ಡ್ ಸಾರ್ವಜನಿಕರಿಗೆ ನೀಡುವ ಮೂಲಕ ಗಣಕೀಕೃತ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು,ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಪರಸ್ಪರ ಸಹಕಾರದಿಂದ ಕರ್ತವ್ಯ ನಿರ್ವಹಿಸಿದರೆ ಸಮಾಜಘಾತುಕ ಶಕ್ತಿಗಳ ಪತ್ತೆ ಮತ್ತು ತಡೆ ಸಾಧ್ಯ ಎಂದರು.ಮಂಗಳೂರಿನಲ್ಲಿ ವಾಹನ ದಟ್ಟಣೆ ಮತ್ತು ಸಂಚಾರಿ ನಿಯಮಗಳನ್ನು ಸುಸೂತ್ರವಾಗಿ ಅನುಷ್ಠಾನಕ್ಕೆ ತರಲು ಆಧುನಿಕ ತಂತ್ರಜ್ಞಾನಗಳು ನೆರವಾಗಲಿದೆ. ಸ್ಥಳೀಯ ಸಾರಿಗೆ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದ್ದು,ಸಾರ್ವಜನಿಕರಿಂದ ದೂರುಗಳು ಬಾರದಂತೆ ಸಾರಿಗೆ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ನಡೆದುಕೊಳ್ಳಬೇಕೆಂದೂ ಈ ಸಂದರ್ಭದಲ್ಲಿ ಅವರು ಸಲಹೆ ಮಾಡಿದರು.
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜಂಟಿ ಸಾರಿಗೆ ಆಯುಕ್ತರಾದ ವಿಜಯ ವಿಕ್ರಂ ಅವರು ಸ್ಮಾರ್ಟ್ ಕಾರ್ಡ್ ಹೊಂದುವವರಿಗೆ ಒಂದು ವರ್ಷಗಳ ಅವಧಿಯಲ್ಲಿ ದೊರೆಯುವ ಸೌಲಭ್ಯಗಳು ಮತ್ತು ವಿಮಾ ಸೌಕರ್ಯಗಳ ಬಗ್ಗೆ ವಿವರಿಸಿದರಲ್ಲದೆ, ಈಗಾಗಲೇ ಬೆಂಗಳೂರು, ಗುಲ್ಬರ್ಗ, ಬೆಳಗಾಂ,ಧಾರವಾಡ, ಶಿವಮೊಗ್ಗ,ಮೈಸೂರುಗಳಲ್ಲಿ ಈ ಸೇವೆ ಜಾರಿಯಲ್ಲಿದ್ದು, ಇಂದಿನಿಂದ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆರಂಭಗೊಂಡಿದೆ. ಜಿಲ್ಲೆಯಲ್ಲಿ 2.71 ಲಕ್ಷ ವಾಹನಗಳಿದ್ದು,ಮುಂದಿನ ಎರಡು ವರ್ಷದೊಳಗೆ ಇವರೆಲ್ಲರೂ ತಮ್ಮ ಚಾಲನಾ ಅನುಜ್ಞಾ ಪತ್ರ ಮತ್ತು ನೋಂದಣೀ ಪುಸ್ತಕಗಳನ್ನು ಸ್ಮಾರ್ಟ್ ಕಾರ್ಡ್ ರೂಪಕ್ಕೆ ಪರಿವರ್ತಿಸಲು ಅವಕಾಶವಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್. ಎನ್. ರಮೇಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಆರ್ ಟಿ ಒ ಪುರುಷೋತ್ತಮ ಜೆ ಸ್ವಾಗತಿಸಿದರು. ಉಪ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ವಂದಿಸಿದರು.

Tuesday, September 15, 2009

ರಾಜ್ಯದ 208 ಕರಾವಳಿ ತೀರದ ಹಳ್ಳಿಗಳಲ್ಲಿ ಎನ್ ಪಿ ಆರ್ ಯೋಜನೆಯಡಿ ಗುರುತುಪತ್ರ

ಮಂಗಳೂರು,ಸೆ.15: ರಾಜ್ಯದ 208 ಕರಾವಳಿ ತೀರದ ಹಳ್ಳಿಗಳಲ್ಲಿ ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟರ್ ಯೋಜನೆಯಡಿ ಗುರುತು ಚೀಟಿ ನೀಡುವ ಯೋಜನೆಗೆ ಚಾಲನೆ ದೊರೆತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ 11 ಗ್ರಾಮಗಳಲ್ಲಿ ಸೆ.7ರಿಂದ ಜನವರಿ 20ರವರೆಗೆ ಸ್ಥಳೀಯ ನಿವಾಸಿಗಳನ್ನು ಗುರುತಿಸಿ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಜನಗಣತಿ ನಿರ್ದೇಶನಾಲಯದ ನಿರ್ದೇಶಕರಾದ ಟಿ.ಕೆ. ಅನಿಲ್ ಕುಮಾರ್ ಅವರು ಹೇಳಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಈಗಾಗಲೇ 2003 ಪಾಪ್ಯುಲೇಷನ್ ರೆಜಿಸ್ಟ್ರೇಷನ್ ಕಾಯಿದೆಯನ್ವಯ ಗುಜರಾತ್ ನಲ್ಲಿ ಈಗಾಗಲೇ ಈ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ರಾಜ್ಯದ ಉತ್ತರ ಕನ್ನಡದ 129 ಹಳ್ಳಿಗಳಲ್ಲಿ, ಉಡುಪಿಯ 68 ಹಳ್ಳಿಗಳಲ್ಲಿಯೂ ಈ ಯೋಜನೆಯನ್ನು ಅನುಷ್ಙಾನಕ್ಕೆ ತರಲು ಸಿದ್ಧತೆ ನಡೆಸಲಾಗಿದೆ. ದೇಶದ ಭದ್ರತೆಯ ದೃಷ್ಟಿಯಿಂದ ದೇಶ ನಿವಾಸಿಗಳಿಗೆ ನೀಡುವ ಗುರುತು ಚೀಟಿ ಇದಾಗಿದ್ದು, ಜನರ ಸಂಪೂರ್ಣ ಸಹಕಾರವನ್ನು ಕೋರಲಾಗಿದೆ.
ಮಂಗಳೂರಿನ ಅತಿಕಾರಿ ಬೆಟ್ಟು, ಪಡುಪಣಂಬೂರು, ಪಾವಂಜೆ, ಹಳೆಯಂಗಡಿ, ಮಳವೂರು, ಅರ್ಕುಳ, ಅಂಬ್ಲಮೊಗರು, ಹರೇಕಳ, ಪಾವೂರು, ತಲಪಾಡಿ, ಚಳೈರು ಗ್ರಾಮಗಳಲ್ಲಿ ಗುರುತು ಪತ್ರ ನೀಡಲಾಗುವುದು. ಕಂದಾಯ ಇಲಾಖೆ,ಮೀನುಗಾರಿಕೆ, ಶಿಕ್ಷಣ ಇಲಾಖೆ ಸಕ್ರಿಯವಾಗಿ ಪಾಲ್ಗೊಳ್ಳ ಬೇಕಿದ್ದು,ಜನಗಣತಿ ನಿರ್ದೇಶನಾಲಯ ಮತ್ತು ಬೆಲ್ ಕಂಪೆನಿಯ ಸಹಭಾಗಿತ್ವದಲ್ಲಿ ಮಾಡಲಾಗುವುದು.ವಿವಿಧ ಇಲಾಖೆಗಳ ಪರಸ್ಪರ ಸಹಕಾರದಿಂದ ಕರ್ತವ್ಯ ನಿರ್ವಹಣೆಯ ಅಗತ್ಯವನ್ನು ಪ್ರತಿಪಾದಿಸಿದ ಅವರು, ಮನೆ ಮನೆ ಭೇಟಿ ಸಂದರ್ಭದಲ್ಲಿ ಫೋಟೋಗ್ರಫಿ ಮತ್ತು ಬಯೋಮೆಟ್ರಿಕ್ ಪದ್ಧತಿಯ ಮುಖಾಂತರ ದಾಖಲೆಗಳನ್ನು ಸಂಗ್ರಹಿಸಲಾಗುವುದು. 15ರ ವಯೋಮಾನದವರಿಂದ ದಾಖಲೆಗಳನ್ನು ಸಂಗ್ರಹಿಸಲಾಗುವುದು ಹಾಗೂ 18ರ ಹರೆಯಕ್ಕಿಂತ ಮೇಲ್ಪಟ್ಟವರಿಗೆ ಗುರುತು ಚೀಟಿಗಳನ್ನು ವಿತರಿಸಲಾಗುವುದು ಎಂದರು.
ಮಂಗಳೂರಿನಲ್ಲಿ ಆರಂಭಿಸುವ ಕಾರ್ಯಕ್ರಮಕ್ಕೆ ಪ್ರಥಮ ಹಂತವಾಗಿ ಈ ಸಭೆ ನಡೆಸಿದ್ದು, ಸೆ.7ರಿಂದ 9ರವರೆಗೆ ನಿಗದಿತ ಗ್ರಾಮಗಳ ಮನೆ ಮನೆ ವಿವರಗಳನ್ನು ಕಲೆಹಾಕಿ ಅಂತಿಮ ಪಟ್ಟಿ ತಯಾರಿಸಲಾಗಿದೆ. 11ರಿಂದ 23ರವರೆಗೆ ಎನ್ಯಮರೇಶನ್ ಬ್ಲಾಕ್ ಗಳನ್ನು ಸಿದ್ಧಪಡಿಸುವಿಕೆ ಹಾಗೂ ತಾಲೂಕು ರೆಜಿಸ್ಟ್ರಾರ್ ಗಳ ನೇಮಕಕ್ಕೆ ಸ್ಪಷ್ಟ ರೂಪವನ್ನು ನೀಡುವುದು ಹಾಗೂ ಸೆ.30ರಿಂದ ಅಕ್ಟೋಬರ್ 8ರವರೆಗೆ 90 ಜನರ 20 ಬ್ಯಾಚ್ ಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ. 18 ಅಕ್ಟೋಬರ್ ನಿಂದ ಸಂಗ್ರಹಿಸಿದ ಸಂಪೂರ್ಣ ಮಾಹಿತಿಯನ್ನು ಸಿದ್ದಪಡಿಸಲು ಯೋಜನೆ ರೂಪಿಸಲಾಗಿದೆ.ಅಕ್ಟೋಬರ್ 5ರಿಂದ 15ರವರೆಗೆ ಮನೆ ಮನೆ ಭೇಟಿ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಸಸಿಹಿತ್ಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಗಳನ್ನು ಹಂಚಿಕೊಳ್ಳಲಾಯಿತು.
ಜಿಲ್ಲಾಧಿಕಾರಿ ವಿ.ಪೊನ್ನುರಾಜ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಬ್ರಮಣ್ಯೇಶ್ವರ ರಾವ್,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಅಡಿಷನಲ್ ಎಸ್ ಪಿ ರಮೇಶ್ ಉಪಸ್ಥಿತರಿದ್ದರು.

Monday, September 14, 2009

ರಸ್ತೆ ಬದಿಯಲ್ಲಿ ಕಸ ಎಸೆಯುವ ಲಾರಿಗಳ ವಿರುದ್ಧ ಕಠಿಣ ಕ್ರಮ: ಸಚಿವ ಪಾಲೆಮಾರ್

ಮಂಗಳೂರು,ಸೆ.14:ರಸ್ತೆ ಬದಿಗಳಲ್ಲಿ ಕಸ ಎಸೆಯುವ ಲಾರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದಲ್ಲದೆ,ಲಾರಿ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜೀವಿಶಾಸ್ತ್ರ,ಪರಿಸರ, ಬಂದರು, ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಎಚ್ಚರಿಕೆ ನೀಡಿದ್ದಾರೆ.
ಪರಿಸರ ಮಾಲಿನ್ಯಕ್ಕೆ ಮೂಲಕಾರಣವಾದ ಎಲ್ಲೆಂದರಲ್ಲಿ ಕಸ ಬಿಸಾಡುವ ಲಾರಿಗಳ ಬಗ್ಗೆ ನಾಗರೀಕ ಪ್ರಜ್ಞೆ ಇರುವ ನಾಗರೀಕರು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬಹುದು ಅಥವಾ ತಮ್ಮ ಕಾರ್ಯಾಲಯಕ್ಕೆ (2457919)ತಿಳಿಸಬಹುದು ಎಂದು ಅವರು ತಿಳಿಸಿದ್ದಾರೆ.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್ ಭಂಡಾರಿ

ಮಂಗಳೂರು,ಸೆ.14:ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 19ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.ಶಿಕ್ಷಣ ಇಲಾಖೆಯ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಗೈರು ಹಾಜರಾಗುವ ಬಗ್ಗೆ, ಶಾಲೆಗಳಲ್ಲಿ ಶಿಕ್ಷಕರು ಇಲ್ಲದಿರುವ ಬಗ್ಗೆ ಮತ್ತು ಶಾಲಾ ಕಟ್ಟಡಗಳ ದುರವಸ್ಥೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ವಿದ್ಯಾಂಗ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣದ ಬಗ್ಗೆ ಮತ್ತು ಶಾಲೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಅವರು ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಸದಸ್ಯರು ಶಾಸಕರು ಹಾಗೂ ಸಚಿವರೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು ತಂತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳ ಬಗ್ಗೆ ಆಸಕ್ತಿ ವಹಿಸಬೇಕು ಎಂದ ಅವರು,ತಮ್ಮ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಸದ್ವಿನಿಯೋಗ ಮಾಡಿ ಎಂದು ಸಲಹೆ ಮಾಡಿದರು.ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಆರೋಪಗಳ ವಿಚಾರಣೆಗಳನ್ನು ನಿಗದಿತ ಸಮಯಮಿತಿಯೊಳಗೆ ಮುಗಿಸುವಂತೆಯೂ ಅವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಸಾವಯವ ಕೃಷಿಯಲ್ಲಿ ಫಲಾನುಭವಿಗಳ ಆಯ್ಕೆ ಕುರಿತಂತೆ ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಕೃಷಿಇಲಾಖೆ ಜಂಟಿ ನಿರ್ದೇಶಕರು, 13 ಜನ ಅಧಿಕಾರೇತೆರ ಸದಸ್ಯರು ಹಾಗೂ 9ಜನ ಅಧಿಕಾರಿಗಳು ಸಾವಯವ ಕೃಷಿ ಮಿಷನ್ ಯೋಜನೆಯಡಿ ಫಲಾನುಭವಿಗಳನ್ನು ಸರ್ಕಾರದ ಮಾರ್ಗದರ್ಶನದಂತೆ ಆಯ್ಕೆ ಮಾಡಿರುತ್ತಾರೆ ಎಂದರು. ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರಲ್ಲಿ 7 ಕೃಷಿಕರನ್ನು ಆಯ್ಕೆ ಮಾಡಲಾಗಿದ್ದು, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ,ಪುತ್ತೂರು, ಸುಳ್ಯ ತಾಲೂಕುಗಳಿಗೆ ತಲಾ 24.5 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದರು.ಪ್ರತಿ ತಾಲೂಕಿನ 300 ರೈತರಿಗೆ ಸೌಲಭ್ಯ ನೀಡು ವ ಯೋಜನೆಯಿದೆ ಎಂದು ಹೇಳಿದರು
ಮಂಗಳೂರಿನ ಉಳ್ಳಾಲ ಪ್ರದೇಶ,ಹಾಗೂ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ 9 ಗ್ರಾಮ ಪಂಚಾಯತಿಗಳ 12 ಗ್ರಾಮಗಳಿಗೆ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಸರ್ಫೇಸ್ ವಾಟರ್ ಸಿಸ್ಟಮ್ ಅಡಿಯಲ್ಲಿ ನೀರು ಸರಬರಾಜು ಪ್ರಸ್ತಾವನೆಯನ್ನು 22 ಕೋಟಿ ರೂ.ಗಳಿಗೆ ತಯಾರಿಸಲಾಗಿದ್ದು, ಪ್ರಾಯೋಗಿಕವಾಗಿ ಮಂಗಳೂರು ತಾಲೂಕಿನ ಮುನ್ನೂರು ಮತ್ತು ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯಿತಿಗಳಲ್ಲಿ ಪ್ರಾಯೋಗಿಕವಾಗಿ ಕೈಗೊಳ್ಳಲಾಗಿದ್ದು ಇಲ್ಲಿನ ಯಶಸ್ಸಿನ ಬಳಿಕ ಜಲಮರುಪೂರಣ ವ್ಯವಸ್ಥೆಯನ್ನು ಉಳಿದೆಡೆಗಳಲ್ಲಿ ಅನುಷ್ಟಾನಕ್ಕೆ ತರುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯವನಿರ್ವಹಣಾಧಿಕಾರಿ ಪಿ. ಶಿವಶಂಕರ್ ಹೇಳಿದರು.
ಪಡಿತರ ಚೀಟಿ ವಿತರಣೆ, ಎಚ್ 1 ಎನ್ 1 ಬಗ್ಗೆ, ತೋಟಗಾರಿಕಾ ಇಲಾಖೆಯಲ್ಲಿ ಇಂಗುಗುಂಡಿ ನಿರ್ಮಾಣ ಮಾಡುವ ಬಗ್ಗೆ ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.ರಾಜೀವ್ ಗಾಂಧಿ ವಿದ್ಯುದೀಕರಣ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಜಿ.ಪಂ.ನಲ್ಲಿ ನಿರ್ಣಯ ತೆಗೆದುಕೊಂಡು ಯೋಜನೆಯನ್ನು ಆದ್ಯತೆಯ ಮೇಲೆ ಜಿಲ್ಲೆಗೆ ಪಡೆದುಕೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.ಸಭೆಯಲ್ಲಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷರಾದ ಜಗನ್ನಾಥ್ ಸಾಲಿಯಾನ್,ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಸದಾನಂದ ಮಲ್ಲಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ರಾಜಶ್ರೀ ಹೆಗಡೆ ಉಪಸ್ಥಿತರಿದ್ದರು.

Friday, September 11, 2009

ಕೆಡಿಪಿ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಲು ಸೂಚನೆ

ಮಂಗಳೂರು,ಸೆ.11:ಜಿಲ್ಲೆಯ ಅಭಿವೃದ್ಧಿಗೆ ಮತ್ತು ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಲು ಅಧಿಕಾರಿಗಳ ಸಹಕಾರ ಮುಖ್ಯ;ಜಿಲ್ಲೆಯ ಪ್ರಗತಿ ಪರಿಶೀಲನೆಗಾಗಿ ಮೀಸಲಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಗೆ ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಹಾಜರಿದ್ದು, ಸಭೆಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಕಾಮಗಾರಿ ಅಭಿವೃದ್ಧಿ, ಸಾಧನೆಯ ಬಗ್ಗೆ ಮಾಹಿತಿ ನೀಡುವ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಹಾಜರಾದರೆ ಅಥವಾ ಮಾಹಿತಿ ಇಲ್ಲದೆ ಆಗಮಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು
ಹೇಳಿದರು.
ಭಾಗ್ಯಜ್ಯೋತಿ,ಕುಟೀರ ಜ್ಯೋತಿ ಯೋಜನೆಗಳ ಪ್ರಗತಿಯ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಹಾಗೂ ಮೆಸ್ಕಾಂನಿಂದ ಮಾಹಿತಿಯನ್ನು ಪಡೆದುಕೊಂಡ ಅವರು, ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ದೊರಕುವಂತಾಗಲು ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಇಂದಿರಾ ಆವಾಸ್ ಯೋಜನೆಯಡಿ ನಿಗದಿತ ಗುರಿ ತಲುಪದ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಅವರು ಅಸಮಾಧಾನ ವ್ಯಕ್ತಪಡಿಸಿ ನಿಗದಿತ ಗುರಿ ಸಾಧಿಸುವಂತೆ ಸೂಚಿಸಿದರಲ್ಲದೆ, ಈ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ಆಗಿರುವ ಲೋಪವೇ ಪ್ರಮುಖ ಸಮಸ್ಯೆಯಾಗಿದ್ದು, ಈ ಸಮಸ್ಯೆಯನ್ನು ಸರಿಪಡಿಸಿಕೊಂಡರ ಯೋಜನೆ ಯಶಸ್ವಿ ಅನುಷ್ಠಾನ ಸಾಧ್ಯ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವರೂ ಈ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಲು ಹೇಳಿದ್ದು, ಈ ತಿಂಗಳಲ್ಲಿ ಕಾಮಗಾರಿಗಳು ಆರಂಭಗೊಳ್ಳಬೇಕು ಎಂದು ಆದೇಶಿಸಿದರು.
ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮೆಸ್ಕಾಂ ಜೊತೆ ಚರ್ಚಿಸಿ ಆದ್ಯತೆಯ ಮೇಲೆ ಫಲಾನುಭವಿಗಳ ಮನೆಗೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಸಿ ಇ ಒ ಹೇಳಿದರು.ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳೊಡನೆ ಚರ್ಚಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮವಹಿಸಬೇಕು ಎಂದ ಅವರು, ಅತ್ಯುತ್ತಮ ಯೋಜನೆ ಇದಾಗಿದ್ದು,ಜಲಾನಯನ ಇಲಾಖೆ ಮತ್ತು ಇಂಜಿನಿಯರಿಂಗ್ ವಿಭಾಗ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸಮಾಡಬೇಕೆಂದರು.
ಸಭೆಯಲ್ಲಿ ಅಂಗನವಾಡಿಗಳಲ್ಲಿ 3ರಿಂದ 6 ವರ್ಷದ ಮಕ್ಕಳ ಹಾಜರಾತಿ ಕಡಿಮೆಯಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿ, 336 ಖಾಸಗಿ ಬಾಲವಾಡಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ವಿದ್ಯಾಂಗ ಇಲಾಖೆ ಮಾಹಿತಿ ನೀಡಬೇಕು ಎಂದರು. ವಿದ್ಯಾಂಗ ಇಲಾಖೆ ಉಪನಿರ್ದೇಶಕ ಚಾಮೇಗೌಡ ಅವರು ಬಾಲವಾಡಿ ಇರುವ ಶಾಲೆಗಳು ನೋಂದಣಿಯನ್ನು ಮಾಡಿಕೊಂಡಿವೆ ಎಂದರು. ಈ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಇದಲ್ಲದೆ ಈ ತಿಂಗಳಲ್ಲಿ ಪೌಷ್ಠಿಕ ಆಹಾರ ಬೇಡಿಕೆ ಪೂರಕವಾಗಿ ಬಂದಿಲ್ಲ ಎಂಬ ವಿಚಾರದ ಬಗ್ಗೆಯ ಸಭೆಯಲ್ಲಿ ಚರ್ಚಿಸಲಾಯಿತು.
ಸ್ವಚ್ಛತಾ ಆಂದೋಲನದಡಿ ಜಿಲ್ಲೆಯು ಮುಂಚೂಣಿಯಲ್ಲಿದ್ದು, 23 ಗ್ರಾಮಪಂಚಾಯಿತಿಗಳು ಪ್ರಸಕ್ತ ಸಾಲಿನಲ್ಲಿ ರಾಜ್ಯ ತಂಡದ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ್ದು, 15ನೇ ತಾರೀಖಿನ ನಂತರ ಕೇಂದ್ರ ತಂಡದ ಪರಿಶೀಲನೆ ನಡೆಯಲಿದೆ. ಈ ಕಾರ್ಯಕ್ರಮ ನಿರಂತರವಾಗಿದ್ದು,ಈ ಯೋಜನೆಯ ಯಶಸ್ಸಿಗೆ ಕಾರಣರಾದವರನ್ನು ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಅವರು ಅಭಿನಂದಿಸಿದರು. ಸಭೆಯಲ್ಲಿ ಉಪಕಾರ್ಯದರ್ಶಿ ಮಹಮ್ಮದ್ ನಝೀರ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾನಂದ ಮಲ್ಲಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶ್ರೀ ಹೆಗಡೆ, ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್ ಉಪಸ್ಥಿತರಿದ್ದರು.

Thursday, September 10, 2009

ಸೆ.13ರಂದು ಶಾಲಾ ಶಿಕ್ಷಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ

ಮಂಗಳೂರು,ಸೆ.10:ಪ್ರಾಥಮಿಕ ಶಾಲಾ ಸಹ ಶಿಕ್ಷಕ ಹುದ್ದೆಗಳಿಗೆ ನೇರ ನೇಮಕಾತಿಗೆ ಸೆ.13ರಂದು ಪೂರ್ವಾಹ್ನ 10.30ರಿಂದ 1.30ರವರೆಗೆ ನಗರದ ಪದವಿಪೂರ್ವ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಸರ್ಕಾರ ಪದವಿಪೂರ್ವ ಮಹಿಳಾ ಕಾಲೇಜು ಬಲ್ಮಠದಲ್ಲಿ 400 ಅಭ್ಯರ್ಥಿಗಳು, ಸರ್ಕಾರ ಪದವಿಪೂರ್ವ ಮಹಿಳಾ ಕಾಲೇಜು ರಥಬೀದಿಯಲ್ಲಿ 400 ಅಭ್ಯರ್ಥಿಗಳು,ಲೇಡಿಹಿಲ್ ವಿಕ್ಟೋರಿಯಾ ಹೆಣ್ಣು ಮಕ್ಕಳ ಪ್ರೌಢಶಾಲೆ ಉರ್ವದಲ್ಲಿ 400, ಬಿಇಎಂ ಸಂಯುಕ್ತ ಪದವಿಪೂರ್ವ ಕಾಲೇಜು ರಥಬೀದಿಯಲ್ಲಿ 170 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಒಟ್ಟು 1370ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Tuesday, September 8, 2009

ಗ್ರಾಮಾಭಿವೃದ್ಧಿ ಆಂದೋಲನದಡಿ ಮುಂದುವರಿಕಾ ಶಿಕ್ಷಣಕ್ಕೆ ಕಾಯಕಲ್ಪ

ಮಂಗಳೂರು,ಸೆ.8:ಅಪ್ನಾದೇಶ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನದಡಿ ಮಂಗಳೂರು ತಾಲೂಕನ್ನು ಮಾದರಿಯಾಗಿಸಿ 49 ಗ್ರಾಮಪಂಚಾಯಿತಿಗಳಲ್ಲಿ ಮುಂದುವರಿಕಾ ಶಿಕ್ಷಣ ಕೇಂದ್ರಗಳನ್ನು ಇನ್ನಷ್ಟು ಸಬಲವಾಗಿ ರೂಪುಗೊಳಿಸುವ ನಿರ್ಣಯ ವಿಶ್ವ ಸಾಕ್ಷರತಾ ದಿನಾಚರಣೆ ಸಂದರ್ಭದಲ್ಲಿ ಏರ್ಪಡಿಸಲಾದ ಸಾಕ್ಷರತಾ ದಿನಾಚರಣೆಯಲ್ಲಿ ಕೈಗೊಳ್ಳಲಾಯಿತು.
ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಾಕ್ಷರತೆ, ಸಶಕ್ತತೆ, ಸ್ವಚ್ಛತೆ, ಸೌಹಾರ್ದತೆಯ ಸಂದೇಶ ಸಾರುವ ಸಂವಾದ ರೂಪಿ ಕಾರ್ಯ ಕ್ರಮವನ್ನು ಸಾಕ್ಷರತಾ ಸ್ವಯಂ ಸೇವಕರ ವೇದಿಕೆ, ನವಸಾಕ್ಷರರ ಸಂಘ,ಜನ ಶಿಕ್ಷಣ ಟ್ರಸ್ಟ್ ಮತ್ತು ತಾಲೂಕು ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸಾಕ್ಷರತೆ ಮತ್ತು ಸ್ವಚ್ಛತೆಯ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ದುಡಿಯುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.ಸಮಾರಂಭದಲ್ಲಿ ಭಾಗವಹಿಸಿದ ಶಾಸಕ ಯು ಟಿ ಖಾದರ್ ಅವರು, ಸಮಾಜದ ಏಳಿಗೆಗೆ ಸ್ವಾರ್ಥರಹಿತವಾಗಿ ದುಡಿಯುವ ಸಂಘಟನೆಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರಲ್ಲದೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸುವ ಆಶ್ವಾಸನೆಯನ್ನು ಇತ್ತರು. ಸ್ವಚ್ಚತೆ,ಸಾಕ್ಷರತೆಯಲ್ಲಿ ಸಿಕ್ಕಿಂ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯವನ್ನು ನಂಬರ್ ವನ್ ಆಗಿ ರೂಪಿಸಲು ಇಂತಹ ಆಂದೋಲನಗಳಿಂದ ಮಾತ್ರ ಸಾಧ್ಯ ಎಂದು ಅವರು ನುಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಗಟ್ಟಿ ಸಮಾರಂಭದಲ್ಲಿ ಉದ್ಯೋಗಖಾತ್ರಿ ಯೋಜನೆಯ ಬಗ್ಗೆ ಮಾತನಾಡಿದರು. ಧರಣೇಂದ್ರ ಕುಮಾರ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಸ್ವಚ್ಛತಾಂದೋಲನವನ್ನು ಅನುಷ್ಠಾನಕ್ಕೆ ತಂದ ಬಗ್ಗೆ, ಜನಪ್ರತಿನಿಧಿಗಳಿಗೆ ಜನರ ಕೆಲಸ ಮಾಡಲು ಅಗತ್ಯವಾದ ಇಚ್ಚಾಶಕ್ತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೊಲೀಸ್ ಅಧಿಕಾರಿ ಬಿ.ಜೆ. ಭಂಡಾರಿ ಅವರು ಸಾಮಾಜಿಕ ಸಮಾನತೆ ಮತ್ತು ಶಿಕ್ಷಣದ ಮಹತ್ವವನ್ನು ವಿವರಿಸಿದರಲ್ಲದೆ ವ್ಯಾಜ್ಯ ಮುಕ್ತ ಗ್ರಾಮ ಎಂಬ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿದರು.ತಮ್ಮ 60ನೇ ವಯಸ್ಸಿನಲ್ಲಿ ಅಕ್ಷರ ಕಲಿತ ಹಿರಿಯ ನವಸಾಕ್ಷರ ಚೀಂಕ್ರ ಪೂಜಾರಿಯಿಂದ ಇತ್ತೀಚೆಗೆ ನವಸಾಕ್ಷರರಾಗಿ ಜನಪ್ರತಿನಿಧಿಗಳಾಗುವಷ್ಟು ಎತ್ತರಕ್ಕೆ ಏರಿದ ಮಹಿಳೆಯರು ತಮ್ಮ ಅನುಭವಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.ನವಸಾಕ್ಷರರ ಯಶೋಗಾಥೆ,ಸಂವಾದಗಳ ಬಳಿಕ 203 ಗ್ರಾಮ ಪಂಚಾಯಿತಿಗಳಲ್ಲೂ ಸ್ಥಳೀಯ ಜನರ ಮತ್ತು ಆಡಳಿತದ ಸಹಕಾರದಿಂದ ಮುಂದುವರಿಕ ಶಿಕ್ಷಣ ಕೇಂದ್ರಗಳು ಆರಂಭಿಸಲು ವಿಫಲವಾದರೆ ಮುಂದಿನ ವರ್ಷ ಕಾಟಾಚಾರದ ಸಾಕ್ಷರತಾ ದಿನಾಚರಣೆ ಅಗತ್ಯವಿಲ್ಲ ಎಂದು ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನ ಶೆಟ್ಟರು ಹೇಳಿದರು. ಶಿಕ್ಷಣದಂತಹ ಉತ್ತಮ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕುಂಪಲ ಅವರು ಹೇಳಿದರು.ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಯಾಳ ಜಿ ಹೆಗಡೆ ಇದಕ್ಕೆ ದನಿಗೂಡಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು ಅವರು ಈ ಸಂಬಂಧ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ಉದ್ಯೋಗಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

Sunday, September 6, 2009

ಮಂಗಳಕ್ರೀಡಾಂಗಣಕ್ಕೆ 5 ಕೋಟಿ ರೂ.ಸಿಂಥೆಟಿಕ್ ಟ್ರ್ಯಾಕ್

ಮಂಗಳೂರು,ಸೆ.6: ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗು ಕ್ರೀಡಾಳುಗಳ ಅಭ್ಯುದಯಕ್ಕೆ ಸರ್ಕಾರ ಸಕಲ ನೆರವುಗಳನ್ನು ನೀಡಲು ಬದ್ಧವಾಗಿದ್ದು, ಮಂಗಳಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರಿ ಕೃಷ್ಣ ಜೆ. ಪಾಲೇಮಾರ್ ತಿಳಿಸಿದ್ದಾರೆ.
ಇಂದು ಮಂಗಳಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದಸರಾ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ವಸ್ಥ ಹಾಗೂ ಸಾಮಾಜಿಕ ಸಹಬಾಳ್ವೆಗೆ ಕ್ರೀಡೆ ಪ್ರಯೋಜನಕಾರಿಯಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿನ ತರಬೇತಿಯನ್ನು ನೀಡುವುದರಿಂದ ಈ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆಯ್ಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ನಾಡ ಹಬ್ಬ ದಸರಾದಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದರಿಂದ ಉತ್ತಮ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ ಎಂದರು.
ರಾಷ್ಟ್ರ ಮಟ್ಟದ ಕಬ್ಬಡ್ಡಿ ಕ್ರೀಡಾಪಟು ಬಿನ್ಸಿ ಜೋಸೆಫ್ ಕ್ರೀಡಾಳುಗಳಿಗೆ ಪ್ರಮಾಣ ವಚನ ಬೋಧಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಭಂಡಾರಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ ಸಮಾರಂಭದಲ್ಲಿ ಪಾಲ್ಗೊಂಡು ಕ್ರೀಡಾಳುಗಳಿಗೆ ಸಂದೇಶ ನೀಡಿದರು. ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಸಿ. ರಮೇಶ್ ಸ್ವಾಗತಿಸಿದರು. ಇಲಾಖೆಯ ದೇವರಾಜ್ ವಂದಿಸಿದರು.

Saturday, September 5, 2009

ವಿಶ್ವ ತುಳು ಸಮ್ಮೇಳನಕ್ಕೆ1ಕೋಟಿ ರೂ.: ಡಾ.ಆಚಾರ್ಯ

ಮಂಗಳೂರು,ಸೆ.5: ಧರ್ಮಸ್ಥಳದ ಉಜಿರೆಯಲ್ಲಿ ರಾಜ್ಯ ತುಳು ಅಕಾಡೆಮಿಯ ಸಹಯೋಗದೊಂದಿಗೆ 2009 ಡಿಸೆಂಬರ್ 10 ರಿಂದ 13 ರವರೆಗೆ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ಪೂರ್ವಭಾವಿ ಸಿದ್ದತಾ ಸಮಾಲೋಚನ ಸಭೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಸರ್ಕಾರದ ಪರವಾಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೃಹ ಸಚಿವ ಶ್ರೀ ವಿ. ಎಸ್. ಆಚಾರ್ಯ ಅವರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ತುಳು ಸಮ್ಮೇಳನದ ಯಶಸ್ಸಿಗೆ ಪೂರಕ ನೆರವನ್ನು ಸರ್ಕಾರದಿಂದ ನೀಡುವ ಭರವಸೆ ನೀಡಿದರಲ್ಲದೆ, ಒಂದು ಕೋಟಿ ರೂ.ಗಳ ನೆರವನ್ನು ಘೋಷಿಸಿದರು. ತುಳು ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಗುರುತಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಸಭೆಗೆ ತಿಳಿಸಿದರಲ್ಲದೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ತುಳು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಕಾರ್ಯಕ್ರಮಕ್ಕೆ ಪೂರಕವಾಗಿ ರಸ್ತೆಗಳ ದುರಸ್ತಿಗೂ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೇಮಾರ್ ಅವರು, ತುಳು ಕಲಿಕೆಗೆ ಹಾಗೂ ಅಭಿವೃದ್ಧಿಗೆ ಸರ್ಕಾರ ಎಲ್ಲಾ ಅಗತ್ಯ ಸಹಕಾರ ನೀಡುವ ಭರವಸೆಯನ್ನು ನೀಡಿದರಲ್ಲದೇ ಇದೊಂದು ಅರ್ಥಪೂರ್ಣ ಮತ್ತು ಮಾದರಿ ಸಮ್ಮೇಳನ ಆಗಬೇಕೆಂಬ ಆಶಯ ವ್ಯಕ್ತಪಡಿಸಿದರು. ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಸಮ್ಮೆಳನದ ರೂಪು ರೇಷೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನಿನ್ನೆ-ಇಂದು-ನಾಳೆ ಎಂಬ ಪರಿಕಲ್ಪನೆಯಡಿ ನಡೆಯಲಿರುವ ಮುಖ್ಯ ಕಾರ್ಯಕ್ರಮಕ್ಕೆ ಪೂರಕವಾಗಿ ಸೆ.19,20ರಂದು ಕಾರ್ಕಳದಲ್ಲಿ ಸಾಹಿತ್ಯಗೋಷ್ಠಿ, ಅ.10ರಂದು ಬಂಟ್ವಾಳದಲ್ಲಿ ಎದುರುಕತೆ, ಗಾದೆ, ಕುಲಕಸುಬುಗಳು, 31ರಂದು ವಾಣಿಜ್ಯ, ವ್ಯವಹಾರ, ನೇತ್ರಾವತಿ ನದಿ ತಿರುವು ಯೋಜನೆ ಕುರಿತು ಚರ್ಚಾಗೋಷ್ಠಿ, ನ.7ರಂದು ಮೂಡಬಿದ್ರೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, 21ರಂದು ಆಭರಣ, ವೇಷಭೂಷಣ,ಜಾನಪದ ಔಷಧಿಗಳು, 28ರಂದು ಪುತ್ತೂರು,ಸುಳ್ಯದಲ್ಲಿ ಜಾನಪದ ಆಟೋಟ, 29ರಂದು ಕಾಸರಗೋಡಿನಲ್ಲಿ ತುಳುನಾಡಿನ ನಲಿಕೆಲು ನವರಸದಾಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಸಭೆಗೆ ವಿವರಿಸಿದರು.
ಸಭೆಯಲ್ಲಿ ತುಳು ಅಕಾಡೆಮಿ ಅಧ್ಯಕ್ಷ ಶ್ರೀ ಪಾಲ್ತಾಡಿ ರಾಮಕೃಷ್ಣ ಆಚಾರ್, ಸಂಸದ ಶ್ರೀ ನಳಿನ್ ಕುಮಾರ್,ಶಾಸಕರಾದ ಶ್ರೀ ಬಿ. ರಾಮನಾಥ ರೈ, ಶ್ರೀ ಯು.ಟಿ. ಖಾದರ್, ಶ್ರೀ ಅಭಯಚಂದ್ರ ಜೈನ್, ಕರಾವಳಿ ಪ್ರಾದಿಕಾರದ ಅಧ್ಯಕ್ಷ ಶ್ರೀ .ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಭಂಡಾರಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶ್ರೀ ಕುಂಬ್ಳೆ ಸುಂದರ ರಾವ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ್ ಶರ್ಮಾ, ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶೀ ಡಾ. ಮೋಹನ್ ಆಳ್ವ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು, ಪಾಲ್ಗೊಂಡಿದ್ದರು.

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ತಳಹದಿ - ಸಚಿವ ಪಾಲೇಮಾರ್

ಮಂಗಳೂರು,ಸೆ.5:ಗುರುಶಿಷ್ಯರ ಸಂಬಂಧ ವೃದ್ಧಿ ಇಂದಿನ ತುರ್ತು ಅಗತ್ಯವಾಗಿದ್ದು, ಉತ್ತಮ ಶಿಕ್ಷಣ ಮತ್ತು ಸಂಸ್ಕಾರದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಜೆ. ಪಾಲೇಮಾರ್ ಹೇಳಿದರು.
ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾ ಕ್ಷೇತ್ರದಲ್ಲಿನ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿದರು. ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಗೌರವ, ಆದರಗಳಿಂದ ನಡೆದರೆ ಮಾತ್ರ ಉತ್ತಮ ಸಮಾಜ ಸೃಷ್ಟಿಯಾಗಬಲ್ಲದು, ಈ ನಿಟ್ಟಿನಲ್ಲಿ ಚಿಂತನೆ ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟ ಅವರು, 580 ಪ್ರಾಥಮಿಕ ಶಾಲೆ, 300 ಪ್ರೌಢಶಾಲೆಗಳಿಗೆ 20,000ಕ್ಕೂ ಮೀರಿ ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.
ಯಾವುದೇ ಮಗುವು ವಿದ್ಯೆಯಿಂದ ವಂಚಿತವಾಗದಿರಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಶಿಕ್ಷಕರ ವೇತನದಲ್ಲೂ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗಿದೆ; ಇದಕ್ಕೆ ಪೂರಕವಾಗಿ ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳು ಸ್ಪಂದಿಸಬೇಕು ಕರೆ ನೀಡಿದರು. ಸಮಾರಂಭದಲ್ಲಿ 12 ಮ0ದಿ ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ ಮತ್ತು 5 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

Wednesday, September 2, 2009

ಅದಿರು ಲಾರಿ ಸಂಚಾರ ನಿಷೇಧ ಮುಂದುವರಿಕೆ

ಮಂಗಳೂರು,ಸೆ.2: ರಾಷ್ಟ್ರೀಯ ಹೆದ್ದಾರಿಯಲ್ಲಿ ಅದಿರು ಲಾರಿ ನಿಷೇಧಿಸಿ ಹೊರಡಿಸಿರುವ ಆದೇಶವನ್ನು 30.9.09ರ ಮಧ್ಯರಾತ್ರಿಯವರೆಗೆ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ವಿ. ಪೊನ್ನುರಾಜ್ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣಾ ಕೆಲಸ ನಡೆಸಲಾಗುತ್ತಿದ್ದು, ಅದಿರು ಲಾರಿ ನಿಷೇಧ ಮುಂದುವರಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಕೋರಿಕೆಯನ್ನು ಪರಿಶೀಲಿಸಿ ಈ ಆದೇಶವನ್ನು ಹೊರಡಿಸಲಾಗಿದೆ.

Tuesday, September 1, 2009

ಅತಿವೃಷ್ಠಿ:ದಕ್ಷಿಣ ಕನ್ನಡಕ್ಕೆ ಕೇಂದ್ರ ತಂಡ


ಮಂಗಳೂರು, ಸೆ.1: ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಒಟ್ಟು 5103.26 ಲಕ್ಷ ನಷ್ಟ ಸಂಭವಿಸಿದ್ದು, ಭತ್ತ, ಅಡಿಕೆ, ತೆಂಗು, ರಸ್ತೆ, ಸೇತುವೆ ಇತ್ಯಾದಿ ಒಟ್ಟು ನಷ್ಟ 3,902.98 ಲಕ್ಷ ರೂ., ಮನೆ, ತೋಟ ಇತ್ಯಾದಿ ಹಾನಿ 1,200.28 ಲಕ್ಷ ಹಾನಿ, ಜೀವಹಾನಿ 15, ಗಾಯ 8, ಮನೆ ಹಾನಿ 25, ಭಾಗಶ: ಮನೆ ಹಾನಿ 694 ನಷ್ಟವಾಗಿದೆ.
ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರದ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರು ಜಿಲ್ಲೆಯ ನಷ್ಟದ ಬಗ್ಗೆ ಸಮಗ್ರ ವಿವರ ನೀಡಿದರು. ಧರ್ಮಸ್ಥಳದ ಸನ್ನಿಧಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ನಾಶ ನಷ್ಟದ ವಿವರ ಸಂಗ್ರಹಿಸಿದ ತಂಡ, ನಂತರ ಧರ್ಮಸ್ಥಳದಿಂದ ಶಿಬಾಜೆ, ಶಿಶಿಲ, ಉಪ್ಪಿನಂಗಡಿ, ಗುರುವಾಯನಕೆರೆ, ಬೆಳ್ಗಂಗಡಿಗೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು. ಕೇಂದ್ರೀಯ ತಂಡದಲ್ಲಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಬಿ. ಬಾಮತಿ,ನವದೆಹಲಿಯ ಗ್ರಾಮೀಣಾಭಿವೃದ್ಧಿ ಮಂಡಳಿಯ ಜಂಟಿ ನಿರ್ದೇಶಕ ಪಿ. ಮನೋಜ್ ಕುಮಾರ್, ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಸಿ.ಆರ್. ಗಂಗಾಧರ್, ಸಿಇಓ ಶಿವ ಶಂಕರ್, ಸಂಶೋಧನಾ ಅಧಿಕಾರಿ ಆರ್. ಕೆ. ಶರ್ಮಾ, ಪಶುಸಂಗೋಪನೆಯ ಉಪನಿರ್ದೇಶಕ ಶಶಿಧರ್, ಪುತ್ತೂರು ಎ ಸಿ. ಡಾ. ಹರೀಶ್ ಕುಮಾರ್, ತಹಸೀಲ್ದಾರ್ ಕೆ. ಟಿ.ಕಾವೇರಿಯಪ್ಪ, ಬೆಳ್ತಂಗಡಿ ತಹಸೀಲ್ದಾರ್ ಎನ್. ಎಸ್. ಚಿದಾನಂದ ಮತ್ತಿತರ ಅಧಿಕಾರಿಗಳು ಸಮೀಕ್ಷಾ ತಂಡದಲ್ಲಿದ್ದರು.