Friday, August 31, 2012

ಜಿಲ್ಲೆಯ ಅತ್ಯುತ್ತಮ 19 ಎಸ್ ಡಿ ಎಂಸಿಗಳಿಗೆ ಅಭಿನಂದನೆ

ಮಂಗಳೂರು, ಆಗಸ್ಟ್. 31 :ಮಾತೃ ಭಾಷೆಯಲ್ಲಿ ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ಲಭ್ಯವಾಗಿಸಲು ಸಂಘಟಿತ ಯತ್ನ ಹಾಗೂ ಸಮುದಾಯದ ಸಹಕಾರ ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಅವರು ಹೇಳಿದರು.
ಅವರಿಂದು ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಡಯೆಟ್) ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಡಯೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಎಸ್ ಡಿಎಂಸಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರ ಪ್ರತಿಯೊಂದು ಮಗುವು ಶಿಕ್ಷಣದಿಂದ ವಂಚಿತವಾಗದಂತೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಶಿಕ್ಷಕರ ಮತ್ತು ಪೋಷಕರ ಸಹಕಾರ ಅತ್ಯಗತ್ಯ ಎಂದ ಅಧ್ಯಕ್ಷರು, ಸರ್ಕಾರದ ಸೌಲಭ್ಯಗಳು ಸದುಪಯೋಗವಾಗ ಬೇಕಾದರೆ ಮಕ್ಕಳು ಬೆಳೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಮತ್ತು ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಶ್ಲಾಘಿಸುವ ಕೆಲಸಗಳಾಗಬೇಕು. ಬೆನ್ನುತಟ್ಟಿ ಪ್ರೋತ್ಸಾಹಿಸುವುದರಿಂದ ಉತ್ತಮ ಕೆಲಸಗಳಾಗಲು ಸಾಧ್ಯ. ಅಂತಹ ಕೆಲಸವನ್ನು ಇಂದು ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳ ಆವರಣಗೋಡೆ ನಿರ್ಮಾಣಕ್ಕೆ ಜಿ.ಪಂ.ವತಿಯಿಂದ ರೂ.1.5ಲಕ್ಷ ಅನುದಾನ ಒದಗಿಸುತ್ತಿದ್ದು ಹೆಚ್ಚುವರಿ ಹಣದ ಅಗತ್ಯವಿದ್ದಲ್ಲಿ ಸ್ಥಳೀಯ ಪಂಚಾಯತ್ ಸಹಕಾರದಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಲಹೆ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯತ್ತಲೂ ಆಕರ್ಷಿತರಾಗಬೇಕೆಂಬ ನಿಟ್ಟಿನಲ್ಲಿ `ಕೃಷಿ ದರ್ಶನ' ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು ಸೆಪ್ಟೆಂಬರ್ ತಿಂಗಳಿನಿಂದ ದ.ಕ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ ಎಂದು ಹೇಳಿದ್ದಾರೆ.
ಮಕ್ಕಳು ಕೃಷಿ ಚಟುವಟಿಕೆಯತ್ತ ಆಕರ್ಷಿತರಾಗಬೇಕೆಂಬುದು `ಕೃಷಿ ದರ್ಶನ'ದ ಮುಖ್ಯ ಉದ್ದೇಶ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಶಿಕ್ಷಕರು, ಎಸ್ಡಿಎಂಸಿಯವರು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಾಲೆಯ ಬೆಳವಣಿಗೆಯಲ್ಲಿ ಎಸ್ಡಿಎಂಸಿಗಳ ಪಾತ್ರ ಮಹತ್ತರವಾದುದು ಎಂದರು.
ಇದೇ ಸಂದರ್ಭ ಉತ್ತಮ ಸಾಧನೆ ತೋರಿದ ಜಿಲ್ಲೆಯ 19 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಶಾಲಾಭಿವೃದ್ಧಿ ಸಮಿತಿಯನ್ನು ತಲಾ ರೂ.3 ಸಾವಿರ ನಗದಿನೊಂದಿಗೆ ಪ್ರಶಸ್ತಿ ಪತ್ರವಿತ್ತು ಗೌರವಿಸಲಾಯಿತು.
ಡಿಡಿಪಿಐ ಮೋಸೆಸ್ ಜಯಶೇಖರ್, ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಸಹ ನಿರ್ದೇಶಕ ಆನಂದ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್ ಭಟ್ ಅತಿಥಿಗಳಾಗಿದ್ದರು.
ಡಯೆಟ್ ಪ್ರಾಚಾರ್ಯ ಪಾಲಾಕ್ಷಪ್ಪ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ನಗರ ಕ್ಷೇತ್ರ ಶಿಕ್ಷಣಾಧಿಕಾರಿ ದಯಾವತಿ ಸ್ವಾಗತಿಸಿದರು.

ಅಭಿನಂದಿಸಲ್ಪಟ್ಟ 19 ಎಸ್ ಡಿ ಎಂಸಿಗಳು:
ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ದೇವಶ್ಯ ಪಡೂರು, ದ.ಕ.ಜಿ.ಪಂ . ಸ.ಹಿ.ಪ್ರಾ.ಶಾಲೆ ಪಡಿಬಾಗಿಲು ವಿಟ್ಲ, ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಇರಾ, ಬೆಳ್ತಂಗಡಿ ತಾಲೂಕಿನ ಸ.ಹಿ.ಪ್ರಾ.ಶಾಲೆ ಕರಂಬಾರು, ಸ.ಹಿ.ಪ್ರಾ.ಶಾಲೆ ಓಡಿಲ್ನಾಳ ಮತ್ತು ಕಂಚಿನಡ್ಕ ಸ.ಕಿ.ಪ್ರಾ.ಶಾಲೆ. ಮಂಗಳೂರು ನಗರದ ಸ.ಹಿ.ಪ್ರಾ.ಶಾಲೆ ಗಾಂಧಿನಗರ, ಸ.ಮಾ. ಉ. ಹಿ.ಪ್ರಾ.ಶಾಲೆ ಮರಕಡ, ಸ.ಹಿ.ಪ್ರಾ.ಶಾಲೆ ಬೆಂಗ್ರೆ ಕಸಬ, ಸ.ಹಿ.ಪ್ರಾ.ಶಾಲೆ ಅದ್ಯಪಾಡಿ, ಸ.ಹಿ.ಪ್ರಾ.ಶಾಲೆ ಪಡುಪಣಂಬೂರು, ಸ.ಹಿ.ಪ್ರಾ.ಶಾಲೆ ಬಡಗ ಎಕ್ಕಾರು, ಮೂಡಬಿದ್ರೆಯ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಕೋಡಂಗಲ್ಲು, ಕೋಟೆ ಬಾಗಿಲು, ಪುತ್ತೂರು ತಾಲೂಕಿನ ಸ.ಹಿ.ಪ್ರಾ.ಶಾಲೆ ಪೆರ್ಲಂಪಾಡಿ ಶಾಲೆ, ಸ.ಹಿ.ಪ್ರಾ.ಶಾಲೆ ಶಾಂತಿನಗರ, ಸ.ಉ.ಹಿ.ಪ್ರಾ.ಶಾಲೆ ಕುದ್ಮಾರು, ಸುಳ್ಯ ತಾಲೂಕಿನ ಜಯನಗರ ಸರಕಾರಿ ಶಾಲೆ ಮತ್ತು ಮಡಪ್ಪಾಡಿ ಸ.ಹಿ.ಪ್ರಾ.ಶಾಲೆ.

Thursday, August 30, 2012

ಕಾಲಬದ್ಧ ಸೇವೆಯೇ 'ಸಕಾಲ': ಅಪರ ಜಿಲ್ಲಾಧಿಕಾರಿ

ಮಂಗಳೂರು, ಆಗಸ್ಟ್. 30:-ಬದಲಾವಣೆಯ ಪರ್ವಕಾಲದಲ್ಲಿ ಸಮಾನ ಆಲೋಚನೆಯ ಸುಸಂಸ್ಕೃತಿಯನ್ನು ಬಿತ್ತುವ ಹಾಗೂ ಕಾಲಬದ್ಧ ಸೇವೆಯನ್ನು ನೀಡುವುದೇ 'ಸಕಾಲ' ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ 2011ರ ಉದ್ದೇಶವೆಂದು ಅಪರ ಜಿಲ್ಲಾಧಿಕಾರಿ ದಯಾನಂದ ಕೆ.ಎ. ಇವರು ತಿಳಿಸಿದರು.
ಅವರು ಇಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಾರ್ತಾ ಇಲಾಖೆ, ದಕ್ಷಿಣಕನ್ನಡ ಜಿಲ್ಲಾಡಳಿತ ಹಾಗೂ ತಾಲ್ಲೂಕು ಪಂಚಾಯತ್ ಪುತ್ತೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ, ಸಕಾಲ ಕುರಿತು ಸಂವಾದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಎಲ್ಲರೂ ಸಮಾನರು ಎಂಬ ತತ್ವದಡಿಯ ಜನಸಾಮಾನ್ಯರ ಕೆಲಸ ಆದ್ಯತೆಯಲ್ಲಿ ಸರಣಿ ಪ್ರಕಾರವೇ ನಡೆಯಬೇಕು; ಎಲ್ಲರಿಗೂ ಸಮಾನ ಪ್ರಾತಿನಿಧ್ಯ ಹಾಗೂ ಅವಕಾಶ ನೀಡಬೇಕೆಂಬುದು ಸಕಾಲದ ಉದ್ದೇಶ. ಪ್ರಸಕ್ತ ಸನ್ನಿವೇಶದಲ್ಲಿ ಆಲೋಚನಾ ಶಕ್ತಿಗಳ (ಅಧಿಕಾರಿಗಳ) ಮೇಲೆ ಒತ್ತಡಗಳು ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಆಡಳಿತವನ್ನು ಕಂಪ್ಯೂಟರೀಕೃತ ಗೊಳಿಸುವುದರಿಂದ ವ್ಯವಸ್ಥೆಯಿಂದ ಭೃಷ್ಟಾಚಾರ ನಿರ್ಮೂಲನೆ ಸಾಧ್ಯ ಎಂಬ ಸದುದ್ದೇಶದಿಂದ ಸಕಾಲ ಯೋಜನೆಯನ್ನು ಸರ್ಕಾರ ಆರಂಭಿಸಿದೆ.
ಮಾರ್ಚ್ 1, 2011 ರಲ್ಲಿ ಪುತ್ತೂರಿನಲ್ಲಿ ಪೈಲಟ್ ಯೋಜನೆಯಡಿ ಸಕಾಲ ಯೋಜನೆ ಜಾರಿಗೆ ತರಲಾಗಿತ್ತು. ಪುತ್ತೂರು ತಾಲೂಕಿನಲ್ಲಿ ಇದುವರೆಗೆ ಒಟ್ಟು 67,387 ಅರ್ಜಿಗಳು ಸ್ವೀಕೃತವಾಗಿದ್ದು, 64,417 ಅರ್ಜಿಗಳ ವಿಲೇ ಆಗಿದೆ. ಕೇವಲ 1.76 ಶೇಕಡಾ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆಡಳಿತವನ್ನು ಹಾಗೂ ಅಧಿಕಾರಿಗಳನ್ನು ಸಕಾರಾತ್ಮಕವಾಗಿ ಪರಿಚಯಿಸುವ ಯೋಜನೆಯೂ ಇದಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2,90,803 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದು, 2,70,242 ಅರ್ಜಿಗಳಿಗೆ ಉತ್ತರ ನೀಡಲಾಗಿದೆ. 4756 ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ. ಸಕಾಲದಿಂದ ಕ್ರಾಂತಿ ತಕ್ಷಣಕ್ಕೇ ಆರಂಭವಾಗದಿದ್ದರೂ ಈ ಯೋಜನೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸಲು ಇನ್ನು 2 ರಿಂದ 3 ವರ್ಷಗಳು ಬೇಕಾಗಬಹುದೆಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಈ ಯೋಜನೆಯಡಿ ಅನಕ್ಷರಸ್ಥರ ಪರವಾಗಿ ಅಧಿಕಾರಿಗಳು ಇರುತ್ತಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಹಿತಿ ಹಕ್ಕು ಕಾಯಿದೆಯಷ್ಟೆ ಸಬಲ, ಜನಪರ ಕಾಯಿದೆ ಇದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕಾಯಿದೆಯಡಿ ಬರುವ ಎಲ್ಲ ಇಲಾಖೆಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದೆ ಎಂದು ಸಕಾಲದ ಜಿಲ್ಲಾ ನೋಡಲ್ ಅಧಿಕಾರಿಯೂ ಆಗಿರುವ ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಸಂವಾದದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಭುಭಟ್, ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ 'ಸಕಾಲ'ದ ಪ್ರಯೋಜನವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕೆಂದು ಸಲಹೆ ಮಾಡಿದರು.
ಪುತ್ತೂರು ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪುಲಸ್ತ್ಯ ರೈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಕಾಲ ಸದಾಶಯದ ಯೋಜನೆಯಾಗಿದ್ದು, ಇದರಿಂದ ಜನಸಾಮಾನ್ಯರಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಜಯಾನಂದ ಪೂಜಾರಿ ಮಾತನಾಡಿ ಶುಭ ಹಾರೈಸಿದರು.
ವಾರ್ತಾಧಿಕಾರಿ ಶ್ರೀಮತಿ ರೋಹಿಣಿ.ಕೆ.ಇವರು ಸ್ವಾಗತಿಸಿ ವಂದಿಸಿದರು. ವಾರ್ತಾ ಇಲಾಖೆಯ ಫ್ರಾನ್ಸಿಸ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.
Tuesday, August 28, 2012

ಜಿಲ್ಲೆಯಲ್ಲಿ ಬಿದ್ದ ಮಳೆ ವಿವರ

ಮಂಗಳೂರು, ಆಗಸ್ಟ್. 28:ದಕ್ಷಿಣಕನ್ನಡ ಜಿಲ್ಲೆಯಲ್ಲಿ2012 ನೇ ಜನವರಿಯಿಂದ ಆಗಸ್ಟ್ 28 ರ ವರೆಗೆ ಸರಾಸರಿ ಒಟ್ಟು 2532.5 ಮಿಲಿಮೀಟರ್ ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 152.56 ಮಿಲಿಮೀಟರ್ ಮಳೆಯಾಗಿರುವುದು ದಾಖಲಾಗಿದೆ. ದಿನಾಂಕ 28-8-12 ರಂದು ಒಟ್ಟು 162.3 ಮಿಲಿಮೀಟರ್ ಮಳೆಯಾಗಿದ್ದು ಕಳೆದ ವರ್ಷ ಇದೇ ದಿನಾಂಕದಂದು 72.6 ಮಿಲಿಮೀಟರ್ ಮಳೆಯಾಗಿರುತ್ತದೆ. ತಾಲೂಕುವಾರು ದಿನಾಂಕ 28 ರಂದು ಬಿದ್ದಿರುವ ಮಳೆ ವಿವರ ಇಂತಿದೆ.ಆವರಣದಲ್ಲಿ ಕಳೆದ ವರ್ಷ ಬಿದ್ದಿರುವ ಮಳೆ ಪ್ರಮಾಣವನ್ನು ನೀಡಲಾಗಿದೆ.
ಬಂಟ್ವಾಳ 41.8 ಮಿಲಿಮೀಟರ್(26.8 ಮಿಲಿ ಮೀಟರ್) ಬೆಳ್ತಂಗಡಿ 25.8 ಮಿಲಿ ಮೀಟರ್(4.2 ಮಿಲಿ ಮೀಟರ್) ಮಂಗಳೂರು 48.7 ಮಿಲಿ ಮೀಟರ್ (3.6ಮಿಲಿಮೀಟರ್) ಪುತ್ತೂರು 25.6 ಮಿಲಿ ಮೀಟರ್(23.4 ಮಿಲಿ ಮೀಟರ್) ಸುಳ್ಯ 20.4 ಮಿಲಿ ಮೀಟರ್(14.6ಮಿಲಿ ಮೀಟರ್) ಮಳೆಯಾಗಿರುತ್ತದೆ.
ಮಳೆ ಹಾನಿ ವಿವರ:ಜಿಲ್ಲೆಯಲ್ಲಿ ದಿನಾಂಕ 28-8-12 ರವರೆಗೆ ಒಟ್ಟು 289 ಮನೆಗಳಿಗೆ ಹಾನಿಯಾಗಿ ಒಟ್ಟು ರೂ.7.54 ಲಕ್ಷಗಳ ಪರಿಹಾರವನ್ನು ಪಾವತಿ ಮಾಡಲಾಗಿರುತ್ತದೆ. ಇದರಲ್ಲಿ ಪ್ರತೀ ತಾಲೂಕಿನಲ್ಲಿ ಹಾನಿಯಾದ ವಿವರ ಮತ್ತು ಪಾವತಿಯಾದ ಪರಿಹಾರದ ಮೊತ್ತ ಇಂತಿದೆ. ಮಂಗಳೂರು 64 ಪ್ರಕರಣಗಳು ದಾಖಲಾಗಿ ರೂ.1.43 ಲಕ್ಷಗಳನ್ನು ಪಾವತಿಸಿದ್ದು 10 ಪ್ರಕರಣಗಳು ಬಾಕಿ ಉಳಿದಿರುತ್ತವೆ. ಬಂಟ್ವಾಳ ತಾಲೂಕಿನಲ್ಲಿ 82 ಪ್ರಕರಣಗಳು ದಾಖಲಾಗಿ ರೂ.2.46 ಲಕ್ಷ ಪರಿಹಾರ ಪಾವತಿಯಾಗಿದೆ. ಪುತ್ತೂರು ತಾಲೂಕಿನಲ್ಲಿ 27 ಪ್ರಕರಣಗಳಿಗೆ ರೂ.0.59 ಲಕ್ಷಗಳ ಪಾವತಿಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ45 ಪ್ರಕರಣಗಳಲ್ಲಿ ರೂ.1.34 ಲಕ್ಷ ಪಾವತಿಯಾಗಿದೆ. ಸುಳ್ಯ ತಾಲೂಕಿನಲ್ಲಿ 53 ಪ್ರಕರಣಗಳಿಗೆ ರೂ. 1.23 ಲಕ್ಷ ಪಾವತಿಯಾಗಿದೆ. ಕಡಬದಲ್ಲಿ 4 ಪ್ರಕರಣಗಳಲ್ಲಿ 0.09 ಲಕ್ಷ ಪಾವತಿಯಾಗಿ ,ಮೂಡಬಿದ್ರೆಯಲ್ಲಿ14 ಪ್ರಕರಣಗಳಲ್ಲಿ 0.40 ಲಕ್ಷ ಪಾವತಿಯಾಗಿದೆ. ಜಾನುವಾರು ಹಾನಿಯಲ್ಲಿ ಪುತ್ತೂರಿನ 1 ಪ್ರಕರಣದಲ್ಲಿ ರೂ.10,000/-ವನ್ನು ಪಾವತಿ ಮಾಡಲಾಗಿದೆ.ಕೃಷಿ ಬೆಳೆ ಹಾನಿಯಲ್ಲಿ 80.76 ಎಕ್ರೆಯಲ್ಲಿ ಒಟ್ಟು 53 ಪ್ರಕರಣಗಳಲ್ಲಿ 97,632 ರೂ.ಗಳನ್ನು ಪಾವತಿಸಲಾಗಿದೆ. ತೋಟಗಾರಿಕಾ ಬೆಳೆಯಲ್ಲಿ ಒಟ್ಟು 24.73 ಎಕ್ರೆಯಲ್ಲಿ 19 ಪ್ರಕರಣಗಳು ದಾಖಲಾಗಿರೂ. 34,156/- ಪಾವತಿ ಮಾಡಲಾಗಿದೆ.ಪ್ರಾಕೃತಿಕ ವಿಕೋಪದಿಂದ ಒಟ್ಟು 10 ಜನರು ದಿನಾಂಕ 1-4-12 ರಿಂದ 28-8-12 ರ ವರೆಗೆ ಮರಣ ಹೊಂದಿದ್ದು ಇವರಿಗೆ ತಲಾ ರೂ.1.50 ಲಕ್ಷ ಅನುಕಂಪ ಅನುದಾನವನ್ನು ಪಾವತಿಸಿದೆಯೆಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


Monday, August 27, 2012

ಸಣ್ಣ ಪ್ರಯತ್ನಗಳಿಂದ ಅದ್ಭುತ ಪರಿಣಾಮಗಳು: ಯೋಗೀಶ್ ಭಟ್

ಮಂಗಳೂರು, ಆಗಸ್ಟ್. 27 : ನಮ್ಮ ಯುವಶಕ್ತಿ/ವಿದ್ಯಾರ್ಥಿ ಶಕ್ತಿಗಳು ಕಲಿಕೆಯ ನಡುವೆ ಸಮಾಜ ಮುಖಿಯಾದ ಕೆಲಸಗಳನ್ನು ಮಾಡುವುದರಿಂದ ಸಾಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಾಧ್ಯ ಎಂದು ವಿಧಾನಸಭಾ ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಹೇಳಿದರು.
ಇಂದು ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ದ.ಕ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 'ಜಿಲ್ಲಾ ಯುವಜನ ಕಾರ್ಯಾಗಾರ' ಉದ್ಘಾಟಿಸಿ ಮಾತನಾಡುತ್ತಿದ್ದರು.
ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ವೆನ್ ಲಾಕ್ ಹಿಂದಿರುವ ಕೊಳಗೇರಿಯಲ್ಲಿ ತಾನು ಕಲಿತದ್ದನ್ನು ಮತ್ತು ಅಲ್ಲಿಯ ಮಕ್ಕಳಿಗೆ ವಾರದಲ್ಲಿ ಎರಡು ದಿನ ಕಲಿಸುತ್ತಿದ್ದದ್ದನ್ನು ಜ್ಞಾಪಿಸಿಕೊಂಡ ಉಪಸಭಾಪತಿಗಳು, ಬಳಿಕ ಅಲ್ಲಿ ಆದ ಬದಲಾವಣೆಗಳು, ಪ್ರೀತಿ ಮತ್ತು ಜ್ಞಾನ ಹಂಚುವಿಕೆಯಿಂದ ದೊರೆಯುವ ಸಂತೋಷವನ್ನು ವಿವರಿಸಿದರು.
ಇಂದು ಯುವ ನೀತಿ ರೂಪಿಸಲು ತಮ್ಮ ಸರ್ಕಾರ ಪಡುತ್ತಿರುವ ಯತ್ನದ ಬಗ್ಗೆ ಬೆಳಕು ಚೆಲ್ಲಿದ ಅವರು, ತಮ್ಮ ಅಮೆರಿಕ ಪ್ರವಾಸ ವೇಳೆ ಅಲ್ಲಿನ ಜನರು ತಮ್ಮ ಜೀವನದಲ್ಲಿ ಕಡ್ಡಾಯವಾಗಿ ಮಾಡುತ್ತಿರುವ ಸಾಮಾಜಿಕ ಸೇವೆಯಂತೆ ಇಲ್ಲೂ ಸಾಮಾಜಿಕ ಸೇವೆಗೆ ಅಂಕಗಳು ನೀಡುವಂತಾಗಬೇಕು ಎಂದರು. ಸೇವೆಗೂ ಅಂಕ ನೀಡುವಂತಾದರೆ ಎಲ್ಲ ವಿದ್ಯಾರ್ಥಿಗಳಲ್ಲೂ ಸೇವೆಯ ಬಗ್ಗೆ ಜ್ಞಾನ ಪಡೆಯುವ ಅನಿವಾರ್ಯತೆ ಎದುರಾಗುತ್ತದೆ; ಇದರಿಂದ ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂದರು. ಅಮೇರಿಕಾದ ಶಿಕ್ಷಣ ನೀತಿಯಂತೆ ನಮ್ಮಲ್ಲೂ ಸಮಾಜ ಸೇವೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಬೇಕು. ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನೆಗಳ ನೇರ ಲಾಭ ಜನರಿಗಾಗಬೇಕು. ಆಗ ಪ್ರತಿಯೊಬ್ಬ ನಾಗರೀಕರು ಸಾಮಾಜಿಕ ಹೊಣೆ ಅರಿಯಲು ಸಾಧ್ಯ ಎಂದರು.
ನಮ್ಮ ಮಾಜಿ ರಾಷ್ಟ್ರಪತಿಗಳಾದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಉಲ್ಲೇಖಿಸಿದ ಅವರು, ಎಲ್ಲ ಜ್ಞಾನವು ಆಧ್ಯಾತ್ಮ ಜ್ಞಾನದಡಿ ಬೆಳೆಯುವುದರಿಂದ ಯುವಕರಲ್ಲಿ ಆತ್ಮಹತ್ಯೆಯಂತಹ ಪ್ರವೃತ್ತಿಗಳು ಕಡಿಮೆಯಾಗಲಿವೆ ಎಂದರು.
ಉತ್ತಮ ಕಾರ್ಯಾಗಾರಗಳು, ಸಾಧಕರ ಜೀವನ ಚರಿತ್ರೆಯಿಂದ ಬದುಕುವ ಕಲೆಯನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ, ತಾನು ಪ್ರತೀ ಸಾರಿ ರಕ್ತದಾನ ಮಾಡುವಾಗಲೂ ದೊರೆಯುವ ಆತ್ಮತೃಪ್ತಿ ವರ್ಣಿಸಲಸಾಧ್ಯ ಎಂದರು. ನಮ್ಮ ಸಮಾಜಕ್ಕೆ ಇಂದು ಬರೀ ಬುದ್ಧಿವಂತ ಮಕ್ಕಳು ಮಾತ್ರ ಬೇಕೆಂಬ ಹಂಬಲ; ಆದರೆ ನಮಗಿಂದು ಸಮಚಿತ್ತ ಹೊಂದಿದ ಉತ್ತಮ ಮಕ್ಕಳ ಅಗತ್ಯವಿದೆ. ವೈಯಕ್ತಿಕ ಅಭಿವೃದ್ಧಿಗಿಂತ ಸಮುದಾಯ ಅಭಿವೃದ್ಧಿಯ ಹಂಬಲ ನಮ್ಮದಾಗಬೇಕಿದೆ ಎಂದರು. ಸ್ವಾಮಿ ವಿವೇಕಾನಂದರು ಪ್ರಪಂಚಕ್ಕೆ ಮಾದರಿ ಯುವಶಕ್ತಿ ಎಂದ ಅವರು, ನಮ್ಮ ಯುವಶಕ್ತಿಗೆ ಅವರು ಮಾದರಿಯಾಗಲಿ ಎಂದರು.
ಸರ್ಕಾರ ಯುವನೀತಿ ಹೊಂದಲು 25 ಕೋಟಿ ರೂ.ಗಳನ್ನು ಮೀಸಲಿಟಿದ್ದು, ಈಗಾಗಲೇ ಈ ಸಂಬಂಧ 15 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಯುವ ಜನಾಂಗಕ್ಕೆ ಸಂಬಂಧಿಸಿ ಸಮಗ್ರ ನೀತಿ ರಚನೆ ಇಂದಿನ ಅಗತ್ಯವಾಗಿದ್ದು, ಇದಕ್ಕೆ ಅಂತಿಮ ರೂಪು ರೇಷೆ ನೀಡಲು ಸರ್ಕಾರ ಸಜ್ಜಾಗಿದೆ ಎಂದರು.
ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಗಣನಾಥ ಎಕ್ಕಾರ್, ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪಿ ಪಾಶ್ರ್ವನಾಥ್, ದ.ಕ. ಜಿಲ್ಲಾ ಯುವಜನ ಒಕ್ಕೂಟದ ಹರೀಶ್ ಬೈಕಂಪಾಡಿ ಅತಿಥಿಗಳಾಗಿದ್ದರು. ಭಾರತೀಯ ಭೂವೈಜ್ಞಾನಿಕ ಸವೇಕ್ಷಣಾದ ಅಬ್ದುಲ್ಲಾ ಅವರು ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಘಟಕದ ಸಂಯೋಜಕರು ಹಾಗೂ ಉಪನ್ಯಾಸಕ ದಯಾನಂದ ಅವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರೇಯಾ ಸುವರ್ಣ ಪ್ರಾರ್ಥಿಸಿದರು.


Saturday, August 25, 2012

ಮನಪಾಗೆ ಹೆಚ್ಚಿನ ಅನುದಾನ ಮತ್ತು ಅಧಿಕಾರಕ್ಕೆ ಚಿಂತನೆ : ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

ಮಂಗಳೂರು, ಆಗಸ್ಟ್.25: ಮಹಾನಗರ ಪಾಲಿಕೆಯ ಆಯುಕ್ತರಿಗೆ ಅನುದಾನ ಬಳಕೆ ಮತ್ತು ಹೆಚ್ಚುವರಿ ಅಧಿಕಾರ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಮಂಗಳೂರು ಮಹಾನಗರ ಪಾಲಿಕೆಯ ನವೀಕೃತ ಮಂಗಳಾ ಸಭಾಂಗಣ ಉದ್ಘಾಟಿಸಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಮತ್ತು ದಿನಕೂಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುಂಬೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಅಣೆಕಟ್ಟನ್ನು ವರ್ಷದೊಳಗೆ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಒದಗಿಸುವಂತೆ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಪಾಲಿಕೆ ಸದಸ್ಯ ಶಶಿಧರ ಹೆಗ್ಟೆ ಅವರು ಮೇಯರ್ ಗುಲ್ಜಾರ್ ಭಾನು ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಮನವಿಗೆ ಮುಖ್ಯಮಂತ್ರಿ ಸಕಾರಾತ್ಮವಾಗಿ ಸ್ಪಂದಿಸುವ ಭರವಸೆ ನೀಡಿದರು.
ನಗರಾಭಿವೃದ್ದಿ ಮತ್ತು ಕಾನೂನು ಸಚಿವರಾದ ಸುರೇಶ್ ಕುಮಾರ್ ಅವರು ಮಾತನಾಡಿ ಈ ನೂತನ ಸಭಾಂಗಣಲ್ಲಿ ನಡೆಯುವ ಕಲಾಪಗಳು, ನಿರ್ಣಯಗಳು ಜನಹಿತವಾಗಲಿ ಮತ್ತು ಇತರರಿಗೆ ಮಾದರಿ ಯಾಗಲಿ ಎಂದು ಶುಭ ಹಾರೈಸಿದರು. ವಿಧಾನಸಭ ಉಪಾಧ್ಯಕ್ಷ ಯೋಗೀಶ್ ಭಟ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ, ಶಾಸಕ ರಾದ ಕೃಷ್ಣ ಪಾಲೆಮಾರ್, ಯು.ಟಿ .ಖಾದರ್ ಸಂಸದ ನಳಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾ. ಗಣೇಶ್ ಕಾರ್ಣಿಕ್ , ಜಿ.ಪಂ.ಅಧ್ಯಕ್ಷೆ ಶೈಲಜಾ ಭಟ್, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಉಪ ಮೇಯರ್ ಅಮಿತಕಲಾ, ಆಯುಕ್ತ ಡಾ. ಹರೀಶ್ ಕುಮಾರ್ಉಪಸ್ಥಿತರಿದ್ದರು.
ಪಾಲಿಕೆ ಸದಸ್ಯ ಶಂಕರ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ಮನಪಾ ಜಂಟಿ ಆಯುಕ್ತ ಶ್ರೀಕಾಂತ್ ರಾವ್ ವಂದಿಸಿದರು.

ಸುಸ್ಥಿರ ನಗರ ಯೋಜನೆ ಮತ್ತು ಸೌಂದರೀಕರಣ ಮೂಡಾದ ಆದ್ಯತೆಯಾಗಬೇಕು: ಸಿ ಟಿ ರವಿ

ಮಂಗಳೂರು ಆಗಸ್ಟ್ 25 : ನಗರಾಭಿವೃದ್ಧಿ ಪ್ರಾಧಿಕಾರ ನಗರದ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ಸಮಗ್ರ ಅಭಿವೃದ್ಧಿಯಾಗುವಾಗ ಆಮ್ಲಜನಕ ವಲಯ (ಆಕ್ಸಿಜನ್ ಝೋನ್) ಗಳನ್ನು ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದರು.ಅವರಿಂದು ಮಂಗಳೂರು ನಗರಾಭಿವೃದ್ಧಿ ಕಚೇರಿಯಲ್ಲಿ ಆಯೋಜಿಸಿದ್ದ ಮೂಡಾದ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮಂಗಳೂರು ನಗರ ವಿಪರೀತವೆನಿಸುವ ರೀತಿಯಲ್ಲಿ ಬೆಳೆಯುತ್ತಿದೆ. ನಗರದಲ್ಲಿ ಮೇಲೇಳುತ್ತಿರುವ ಅಪಾರ್ಟ್ ಮೆಂಟ್ ಗಳನ್ನು ನೋಡಿದರೆ ಧಾರಣಾ ಸಾಮಥ್ರ್ಯ ಹಾಗೂ ರಸ್ತೆ, ನೀರು ಗಳಿಲ್ಲದ ಸಂದಿಗಳಲ್ಲಿ 30 ಅಂತಸ್ತಿನ ಮಳಿಗೆಗಳು ನಿರ್ಮಾಣವಾಗುತ್ತಿರುವುದು ಆರೋಗ್ಯಕರವಲ್ಲ ಎಂದು ಅಭಿಪ್ರಾಯಪಟ್ಟರು.
ಎಲ್ಲಾ ಲೇಔಟ್ ಗಳಲ್ಲೂ ಕಡ್ಡಾಯವಾಗಿ ಪಾರ್ಕ್ ಗಳಿರಬೇಕಿದ್ದು ಪಾಕ್ರ್ ಅಭಿವೃದ್ಧಿಗೆ ಮೂಡಾ ಆದ್ಯತೆ ನೀಡಬೇಕು. ಈ ಸಂಬಂಧ ಮುಂದಿನ ಹತ್ತು ದಿನಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಿ ತನ್ನ ಮುಂದಿನ ಭೇಟಿಯ ವೇಳೆ ವರದಿ ಸಿದ್ಧಪಡಿಸಬೇಕೆಂದು ಸೂಚಿಸಿದರು.
ಮಂಗಳೂರಿಗೊಂದು ಲಾಲ್ ಬಾಗ್, ಕಬ್ಬನ್ ಪಾರ್ಕ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು. ಇಂತಹ ಉತ್ತಮ ಮಾದರಿಗಳನ್ನು ತಾನು ಮಂಗಳೂರಿನಿಂದ ಅಪೇಕ್ಷಿಸುತ್ತೇನೆ ಎಂದೂ ಅವರು ನುಡಿದರು.
ಎಲ್ಲ ಯೋಜನೆಗಳನ್ನು ಸಮಯಮಿತಿಯೊಳಗೆ ನಡೆಸಬೇಕೆಂದು ಸೂಚಿಸಿದ ಅವರು, ನಗರದ ಹಂಪನಕಟ್ಟೆಯಲ್ಲಿರುವ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ಯೋಜನೆ ಅನುಷ್ಠಾನದ ಕುರಿತು ಪ್ರಶ್ನಿಸಿದರು. ಮೂಡಾದ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ಮಾತನಾಡಿ, ನಗರದ ಸೌಂದರ್ಯಕ್ಕೆ ಮೆರುಗು ನೀಡುವ ಪಾರ್ಕಗಳು, ಹೊಸ ಲೇಔಟ್ ಗಳನ್ನು ಆರಂಭಿಸಲು ಚಾಲನೆ ನೀಡಲಾಗಿದ್ದು, ಹತ್ತು ದಿನಗಳೊಳಗೆ ಹಂಪನಕಟ್ಟಾ ಕಾರ್ ಪಾರ್ಕಿಂಗ್ ಗೆ ಇರುವ ಅಡೆತಡೆಗಳನ್ನು ನಿವಾರಿಸಲಾಗುವುದು ಎಂದರು. ಡಿಸೆಂಬರ್ ನಲ್ಲಿ ಇಲ್ಲಿ ಕಾಮಗಾರಿಗೆ ಚಾಲನೆ ನೀಡುವ ಭರವಸೆಯನ್ನು ಸಚಿವರಿಗೆ ನೀಡಿದರು.
ಉಪಸಭಾಪತಿ ಎನ್ ಯೋಗೀಶ್ ಭಟ್ ಅವರು ಮಾತನಾಡಿ, ಕದ್ರಿ ಪಾರ್ಕಿನಲ್ಲೇ ಲಾಲ್ ಬಾಗ್ ನಂತಹ ಗಾಜಿನಮನೆ, ತೋಟಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದರು. ಈ ಸಂಬಂಧ ಹಾಗೂ ಮಂಗಳಾ ಕಾರ್ನಿಷ್ ಯೋಜನೆ ಸಂಬಂಧ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶೀಘ್ರ ಸಭೆ ಕರೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮಾದರಿ ಪ್ರಸ್ತಾವನೆಗಳು ಇಲ್ಲಿಂದ ಸಲ್ಲಿಕೆಯಾಗಿದ್ದು, ಸರ್ಕಾರದ ಮಟ್ಟದಲ್ಲಿ ಬಾಕಿ ಇರುವ ಎಲ್ಲ ಕಡತಗಳನ್ನು ಸಭೆಗೆ ತನ್ನಿ ಎಂದು ಸಚಿವರು ಹೇಳಿದರು.
ಅಭಿವೃದ್ಧಿಗೆಂದು ಜನರಿಂದ ಪಡೆದ ತೆರಿಗೆ ಹಣವನ್ನು ಅದಕ್ಕೆಂದೇ ಮೀಸಲಿಡಿ ಎಂದ ಸಚಿವರು, ಈಗಿರುವ ಉದ್ಯಾನವನಗಳು ಮತ್ತು ಮುಂದೆ ಅಭಿವೃದ್ಧಿ ಪಡಿಸಲಿರುವ ಉದ್ಯಾನವನಗಳ ಬಗ್ಗೆ ಮುಂದಿನ ಸಭೆಯಲ್ಲಿ ತಮಗೆ ಸಮಗ್ರ ಮಾಹಿತಿ ಇರಬೇಕೆಂದರು.
ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಮೂಡಾ ಕಮಿಷನರ್ ಅಜಿತ್ ಕುಮಾರ್ ಹೆಗಡೆ, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಮೂಡಾ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮುಖ್ಯಮಂತ್ರಿಯವರಿಂದ ಶಿಲಾನ್ಯಾಸ

ಮಂಗಳೂರು, ಆಗಸ್ಟ್.25 : ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮನಪಾ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳೂರು ನಗರದ ಉರ್ವ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಶಿಲಾನ್ಯಾಸ ನೆರವೇರಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಭವನ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಸರಕಾರ 4 ಕೋಟಿ ರೂ. ಮಂಜೂರು ಮಾಡಿದ್ದು, 2 ಕೋಟಿ ರೂ.ಬಿಡುಗಡೆಗೊಳಿಸಿದೆ. ಭವನ ನಿರ್ಮಾಣಕ್ಕೆ ಮನಪಾದಿಂದ 40 ಲಕ್ಷ ರೂ. ಒದಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಪಾಲಿಕೆಯಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದರು. ನಗರಾಭಿವೃದ್ದಿ ಮತ್ತು ಕಾನೂನು ಸಚಿವ ಸುರೇಶ್ ಕುಮಾರ್,ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ವಿಧಾನ ಸಭಾ ಉಪ ಸಭಾಪತಿ ಎನ್.ಯೋಗಿಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ. ಕೃಷ್ಣ ಪಾಲೇಮಾರ್, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾ. ಗಣೇಶ್ ಕಾರ್ಣಿಕ್, ಯು.ಟಿ. ಖಾದರ್,ಮೇಯರ್ ಗುಲ್ಝಾರ್ ಭಾನು, ಜಿ.ಪಂ.ಅಧ್ಯಕ್ಷೆ ಶೈಲಜಾ ಭಟ್, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಮೂಡದ ಅಧ್ಯಕ್ಷ ರಮೇಶ್, ಉಪ ಮೇಯರ್ ಅಮಿತಕಲಾ, ಆಯುಕ್ತ ಡಾ. ಹರೀಶ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರದ ಕದ್ರಿ ಉದ್ಯಾನವನದಲ್ಲಿನ ಸಂಗೀತ ಕಾರಂಜಿಗೆ ಗಿಡ ನೆಡುವ ಮೂಲಕ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ವಿಧಾನ ಸಭಾ ಉಪ ಸಭಾಪತಿ ಎನ್.ಯೋಗಿಶ್ ಭಟ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಶಾಸಕ ಕೃಷ್ಣ ಜೆ. ಪಾಲೇಮಾರ್,ಅಭಯ ಚಂದ್ರ ಜೈನ್,ಯು.ಟಿ.ಖಾದರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಎಂಡೋ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

ಮಂಗಳೂರು, ಆ.25: ಎಂಡೋ ಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ನ ಮೂಲಕ ಪರಿಹಾರ ನೀಡುವ ಜೊತೆಗೆ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ರಾಜ್ಯಸರಕಾರ ಗಂಭೀರ ಚಿಂತನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಇಂದು ಮಂಗಳೂರಿಗೆ ಆಗಮಿಸಿ ವಿವಿಧ ಕಾರ್ಯ ಕ್ರಮ ಗಳಲ್ಲಿ ಭಾಗ ವಹಿಸಿದ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಎಂಡೋ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ನಡೆದಿದೆ ಮತ್ತು ಎಂಡೋಸಲ್ಫಾನ್ ಬಳಕೆಯನ್ನು ನಿಷೇಧ ಮಾಡಲಾಗಿದೆ. ಪರಿಹಾರದ ಜೊತೆಗೆ ಶಾಶ್ವತವಾಗಿ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿಚಿಂತನೆ ಆಗಬೇಕಾಗಿದೆ. ರಾಜ್ಯ ಸರಕಾರದಿಂದ ಈ ನಿಟ್ಟಿನಲಿ ಬೇಕಾದ ಅಗತ್ಯ ಕ್ರಮವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದರು.
ಕುದುರೆಮುಖ ಸಂತ್ರಸ್ತರಿಗೆ ಪುನರ್ವಸತಿ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಪುನರ್ವಸತಿ, ಪರಿಹಾರ ಮತ್ತು ಸ್ಥಳಾಂತರದ ಬಗ್ಗೆ ಸಮಗ್ರ ಚಿಂತನೆ ನಡೆಸಿ, ಸಂಬಂಧಪಟ್ಟ ದ.ಕ., ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಈ ಬಗ್ಗೆ ಶೀಘ್ರದಲ್ಲಿ ಪ್ರತ್ಯೇಕ ಸಭೆ ಕರೆದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ನವೀಕೃತ ಸಭಾಂಗಣ ಮಂಗಳೂರು ಅಭಿವೃದ್ಧಿಗೆ ಕಿರೀಟಪ್ರಾಯ ಎಂದು ಬಣ್ಣಿಸಿದ ಅವರು, ನಿರಂತರ ಕುಡಿಯುವ ನೀರಿನ ಯೋಜನೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜಾರಿಯಾದರೆ ನೀರಿನ ದರವೂ ಕಡಿಮೆಯಾಗಲಿದೆ ಎಂದವರು ಆಶಯ ವ್ಯಕ್ತಪಡಿಸಿದರು.
ಬರ ಪರಿಹಾರದ ಬಗ್ಗೆ ಕೇಂದ್ರ ತಂಡದ ಭೇಟಿಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಕಳೆದ ವಾರ ಕೇಂದ್ರ ಸರಕಾರದ ಸಚಿವರುಗಳಾದ ಶರದ್ ಪವಾರ್, ಜಯರಾಂ ರಮೇಶ್ ಬರಗಾಲ ಪರಿಸ್ಥಿತಿ ಬಗ್ಗೆ ಪರಿಶೀಲನಾ ಸಭೆ ನಡೆಸಿದಾಗ ದೀಘರ್ಾವಧಿ ಮತ್ತು ಅಲ್ಪಕಾಲಿಕ ಪರಿಹಾರ ಕ್ರಮಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ 7,000 ಕೋಟಿ ರೂ.ಗಳ ಅಲ್ಪಕಾಲಿಕ ಹಾಗೂ 4,400 ಕೋಟಿ ರೂ.ಗಳ ದೀರ್ಘವಧಿ ಯೋಜನೆ ಸೇರಿದಂತೆ ಒಟ್ಟು 11,400 ಕೋಟಿ ರೂ.ಗಳ ಪ್ಯಾಕೇಜ್ ಪರಿಹಾರ ನೀಡಲು ಕೇಂದ್ರವನ್ನು ಒತ್ತಾಯಿಸಲಾಗಿದೆ.
ಬರ ಪರಿಹಾರ ಮಾತ್ರವಲ್ಲ, ರೈತರಿಗೆ ನೆರವು ನೀಡುವ ನೀಟ್ಟಿನಲಿ ್ಲಕಳೆದ ಅಧಿವೇಶನದಲ್ಲಿ ದೃಢವಾದ ನಿಧರ್ಾರ ಕೈಗೊಳ್ಳಲಾಗಿದೆ. ಬಜೆಟ್ನಲ್ಲಿ 25,000 ಕೃಷಿ ಸಾಲ ಮನ್ನಾ ಮಾಡಲಾಗಿದೆ. ಇದುರಿಂದ 16,000 ಲಕ್ಷ ರೈತರಿಗೆ ಅನುಕೂಲವಾಗಿದೆ. ಇದರಿಂದ ರಾಜ್ಯ ಬಜೆಟ್ನ ಮೇಲೆ 3,600 ಕೋಟಿ ರೂ.ಗಳ ಭಾರ ಬೀಳಲಿದೆ. ಈ ಬಗ್ಗೆ ಈಗಾಗಲೇ ನಿರ್ಣಯವಾಗಿದ್ದು, ಸಾಲ ಮನ್ನಾ ಬಗ್ಗೆ ಒಂದೆರಡು ದಿನಗಳಲ್ಲಿ ಅಧಿಕೃತ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದರು.
ಕೇಂದ್ರ ಸರಕಾರಕ್ಕೆ ಬರಪರಿಹಾರಕ್ಕಾಗಿ 11,400 ಕೋಟಿ ರೂ.ಗಳ ಬೇಡಿಕೆಯಲ್ಲಿ ಈ ಸಾಲ ಮನ್ನಾ ಯೋಜನೆಗೂ ಕೇಂದ್ರದ ಸಹಕಾರ ನೀಡುವಂತೆ ಕೋರಲಾಗಿದೆ. ಜೊತೆಗೆ ಬಿತ್ತನೆ ಆಗಿರದ ಕಡೆಗಳಲ್ಲಿ ಪರಿಹಾರ ಹಾಗೂ ಬಿತ್ತನೆ ಆಗಿ ಬೆಳೆ ನಾಶ ಆಗಿರುವಲ್ಲಿಯೂ ಪರಿಹಾರಕ್ಕೆ ಕೇಂದ್ರವನ್ನು ಕೋರಲಾಗಿದೆ. ಕೇಂದ್ರ ಸರಕಾರ ಸಹಾಯ ಹಸ್ತ ನೀಡಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ, ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ನಗರಾಭಿವೃದ್ದಿ ಮತ್ತು ಕಾನೂನು ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


'ಎಲ್ಲರಿಗೂ ಮನೆ' ಖಾಸಗಿಯವರ ಸಹಕಾರಕ್ಕೆ ಸರ್ಕಾರದ ಶ್ಲಾಘನೆ

ಮಂಗಳೂರು, ಆಗಸ್ಟ್. 25:ವಸತಿ ಮನುಷ್ಯನ ಮೂಲಭೂತ ಸೌಕರ್ಯಗಳಲ್ಲಿ ಮುಖ್ಯವಾಗಿದ್ದು, ಎಲ್ಲರಿಗೂ ವಸತಿ ಸೌಕರ್ಯ ಒದಗಿಸಿಕೊಡುವುದು ನಮ್ಮ ಸರ್ಕಾರದ ಆದ್ಯತೆಗಳಲ್ಲಿ ಪ್ರಥಮವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಇಂದು ನಗರದಲ್ಲಿ ಕಾನ್ಫಡೆರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿ ಯೇಷನ್ ಆಫ್ ಇಂಡಿಯಾ ( ಕ್ರಡಾಯಿ)ದ ಎಲ್ಲರಿಗೂ ಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡುತ್ತಿದ್ದರು.
ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ವಸತಿ ಯೋಜನೆಗಳಡಿ ನಮ್ಮ ಸರ್ಕಾರ 8.9 ಲಕ್ಷ ಮನೆಗಳನ್ನು ನಿರ್ಮಿಸಿರುವುದಲ್ಲದೇ 1.27 ಲಕ್ಷ ನಿವೇಶಗಳನ್ನು ಒದಗಿಸಿದೆ, ಈ ವರ್ಷ ಸುಮಾರು 3 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ ಸರ್ಕಾರದ ಯೋಜನೆಗಳಿಂದಲೇ ವಸತಿ ಸಮಸ್ಯೆ ನಿವಾರಣೆಯಾಗದು ಖಾಸಾಗಿ ಅವರ ಸಹಭಾಗಿತ್ವವೂ ಮುಖ್ಯ,ಆದ್ದರಿಂದ ಖಾಸಗಿ ವಸತಿ ನಿರ್ಮಾಣದಲ್ಲಿ ತೊಡಗಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಸರ್ಕಾರ ಹಲವು ರೀತಿಯಲ್ಲಿ ನೆರವಾಗುತ್ತಿದೆ.
ಮೂಲಭೂತ ಸೌಕರ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀತಿಯೊಂದನ್ನು ರೂಪಿಸಲಾಗುತ್ತಿದ್ದು ಈಗಾಗಲೇ ಮೂಲಭೂತ ಸೌಕರ್ಯ ಮಸೂದೆಯ ಕರಡು ಸಿದ್ಧವಾಗಿದೆ ಎಂದರು.ರಿಯಲ್ ಎಸ್ಟೇಟ್ ವಲಯ ಪರಿಸರ ಸ್ನೇಹಿಯಾಗಿ, ಸಮಾಜಮುಖಿಯಾಗಿ ಕೈಗೆಟುಕುವ ದರದಲ್ಲಿ ಸಾಮಾನ್ಯರಿಗೆ ಮನೆ ದೊರಕಿಸಿ. ಇದಕ್ಕೆ ಪೂರಕ ಸನ್ನಿವೇಶ ಸೃಜಿಸಲು ಸರ್ಕಾರ ಶ್ರಮಿಸುತ್ತದೆ ಎಂದರು. ನಗರಾಭಿವೃದ್ಧಿ ಸಚಿವರಾದ ಸುರೇಶ್ ಕುಮಾರ್ ಅವರು ಶುಭ ಹಾರೈಸಿದರು. ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ ರವಿ, ವಿಧಾನ ಸಭಾ ಉಪಸಭಾಪತಿ ಎನ್.ಯೋಗಿಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೃಷ್ಣ.ಜೆ ಪಾಲೇಮಾರ್, ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಮೇಯರ್ ಶ್ರೀಮತಿ ಗುಲ್ಝಾರ್ ಭಾನು ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


Monday, August 20, 2012

ಮಂಗಳೂರಿನಲ್ಲಿ ಡಿ.ದೇವರಾಜ ಅರಸರ 97ನೇ ಜನ್ಮದಿನಾಚರಣೆ

ಮಂಗಳೂರು, ಆಗಸ್ಟ್.20: ಹಿಂದುಳಿದ ವರ್ಗಗಳ ನೇತಾರ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸರ 97ನೇ ಜನ್ಮದಿನಾಚರಣೆಯನ್ನು ಇಂದು ಮಂಗಳೂರಿನಲ್ಲಿ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಸಭಾ ಉಪ ಸಭಾಪತಿ ಎನ್.ಯೋಗಿಶ್ ಭಟ್, ಜಿಲ್ಲಾಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್, ಶಾಸಕರಾದ ಯು.ಟಿ.ಖಾದರ್, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಜಿ.ಪಂ.ಸದಸ್ಯರಾದ ಮಮತ ಗಟ್ಟಿ,ಚನ್ನಪ್ಪ ಕೋಟ್ಯಾನ್, ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್,ಅಪರ ಜಿಲ್ಲಾಧಿಕಾರಿ ಕೆ.ದಯಾನಂದ ಅವರು ಪಾಲ್ಗೊಂಡಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅರುಣ್ ಫುರ್ಟಡೋ ಅವರು ಅತಿಥಿಗಳನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಸತಿ ನಿಲಯಗಳಲ್ಲಿ ವಾಸ್ತವ್ಯ ಹೂಡಿ ಕಲಿತು ಶೇಕಡ 100 ರಷ್ಟು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ಹಾಗೂ ಪ್ರಬಂಧ ಸ್ಪರ್ಧೆಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ಥಿಗಳನ್ನು ಅತಿಥಿಗಳು ಪ್ರದಾನ ಮಾಡಿದರು.

Saturday, August 18, 2012

ದ.ಕ. ಜಿಲ್ಲೆಗೆ 'ನಿರ್ಮಲ ಗ್ರಾಮ' ಪುರಸ್ಕಾರ ಪ್ರದಾನ

ಮಂಗಳೂರು,ಆಗಸ್ಟ್.18: ನಿರ್ಮಲ ಭಾರತ ಅಭಿಯಾನದಡಿ ಶೇಕಡ 100 ರಷ್ಟು ಗುರಿಯನ್ನು ಸಾಧಿಸಿರುವ ದೇಶದ ಮೂರು ಜಿಲ್ಲೆಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯೂ ಒಂದಾಗಿದ್ದು, ಇಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ಎಚ್.ಆರ್.ಭಾರದ್ವಾಜ್ ಅವರು 'ನಿರ್ಮಲ ಗ್ರಾಮ' ಪುರಸ್ಕಾರವನ್ನು ಪ್ರದಾನ ಮಾಡಿದರು.
ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ. ಕೆ.ಟಿ.ಶೈಲಜಾ ಭಟ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭವ್ಯ ಗಂಗಾಧರ್, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರಾದ ಕೇಶವ ಭಟ್ ಅವರು ಘನತೆವೆತ್ತ ರಾಜ್ಯಪಾಲರಿಂದ ನಿರ್ಮಲ ಗ್ರಾಮ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭಲ್ಲಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಸ್ಥಳಿಯ ಶಾಸಕರಾದ ರೋಷನ್ ಬೇಗ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ್ ಅವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ ಅವರು ದ.ಕ.ಜಿಲ್ಲೆಯ ಮಂಗಳೂರು ಮತ್ತು ಸುಳ್ಯ ತಾಲೂಕು ಪಂಚಾಯತ್ ಹಾಗೂ ದ.ಕ.ಜಿಲ್ಲೆ ರಾಷ್ಟ್ರಮಟ್ಟದ ನಿರ್ಮಲ ಗ್ರಾಮ ಪುರಸ್ಕಾರ ಪಡೆಯುವುದರ ಮೂಲಕ ಕರ್ನಾಟಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಅಭಿನಂದಿಸಿದರು. ಪ್ರಸ್ಥಾವಿಕವಾಗಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ್ ಅವರು 2011 ನೇ ಸಾಲಿನ ರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲಾ ನಿರ್ಮಲ ಗ್ರಾಮ ಪುರಸ್ಕಾರ ಪಡೆದ 3 ಜಿಲ್ಲೆಗಳಲ್ಲಿ ದ.ಕ. ಜಿಲ್ಲೆಯು ಒಂದಾಗಿರುತ್ತದೆ ಮತ್ತು ರಾಜ್ಯದಲ್ಲಿ ಪ್ರಥಮ ಜಿಲ್ಲೆಯಾಗಿರುತ್ತದೆ ಹಾಗೂ ರಾಷ್ಟ್ರದಲ್ಲಿ 11 ನೇ ಜಿಲ್ಲೆಯಾಗಿರುತ್ತದೆ ಎಂದರು.
ಸಮಾರಂಭದಲ್ಲಿ ಮಾನ್ಯ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರು ದ.ಕ.ಜಿಲ್ಲೆಯ ಸಂಪೂರ್ಣ ಸ್ವಚ್ಛತಾ ಆಂದೋಲನ ಪ್ರಗತಿ, ಯಶೋಗಾಥೆಯನ್ನು ಮತ್ತು ವಿನೂತನ ಮಾದರಿ ಯೋಜನೆಗಳ ಅನುಷ್ಠಾನದ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದರು. ಮಾನ್ಯ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರು ತಾಲೂಕಿನಲ್ಲಿ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಸಹಕರಿಸಿದ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಸ್ವಯಂ ಸೇವಾ ಸಂಘಟನೆಗಳು, ಸಮುದಾಯ, ಎಲ್ಲಾ ಮಾಧ್ಯಮ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದರು.Friday, August 17, 2012

ಕೇಬಲ್ ಟಿವಿ ನೆಟ್ ವರ್ಕ ಸಂಸ್ಥೆಗಳಿಗೆ ದಾಖಲೆ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕ: ಜಿಲ್ಲಾಧಿಕಾರಿ

ಮಂಗಳೂರು, ಆಗಸ್ಟ್.17 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೇಬಲ್ ಟಿ ವಿ ನೆಟ್ ವರ್ಕ್ ಸಂಸ್ಥೆಗಳು ಇದೇ ಆಗಸ್ಟ್ 31 ರೊಳಗೆ ತಮ್ಮ ಕಾರ್ಯಾಚರಣೆ ಸಂಬಂಧ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಜಿಲ್ಲಾಧಿಕಾರಿ ಡಾ. ಎನ್. ಎಸ್. ಚನ್ನಪ್ಪಗೌಡ ಅವರು ಸೂಚಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಕೇಬಲ್ ಟೆಲಿವಿಷನ್ ನೆಟ್ ವರ್ಕ ಅಧಿನಿಯಮ 1995 ಮತ್ತು ಅದರ ಮೇರೆಗೆ ಮಾಡಲಾದ ನಿಯಮಗಳ ಜಾರಿಯನ್ನು ಮೇಲ್ವಿಚಾರಣೆ ಮಾಡಲು ಸಂಘಟಿಸಿದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯಲ್ಲಿ ಈ ಸೂಚನೆ ನೀಡಿದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಕೇಬಲ್ ಆಪರೇಟರ್ ಗಳ ಅಕ್ರಮಗಳಿಗೆ ಸಂಬಂಧಿಸಿದಂತೆ ಮತ್ತು ಸ್ಥಳೀಯ ಮಟ್ಟದಲ್ಲಿ ಕೇಬಲ್ ಆಪರೇಟರ್ ಗಳು ಅನಪೇಕ್ಷಿತ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಕಾರಣ ಸಾರ್ವಜನಿಕ ಹಿತಾಸಕ್ತಿಯಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕೇಬಲ್ ಆಪರೇಟರ್ ಗಳ ಪಾತ್ರವನ್ನು ವಿವೇಚಿಸುವ ಸಮಿತಿಯನ್ನು ರಚಿಸಿ ಕೇಬಲ್ ಟೆಲಿವಿಷನ್ ನೆಟ್ ವರ್ಕ ಅಧಿನಿಯಮ 1995 ರ ಉಪಬಂಧಗಳನ್ನು ಜಾರಿಗೊಳಿಸುವ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತಂದಿರುತ್ತದೆ.
ಇದರಂತೆ ಇಂದು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ಸಭೆ ನಡೆದಿದ್ದು, 1.9.2012ರಿಂದ ಈ ಸಂಬಂಧ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ದೂರು ಕೋಶ ತೆರೆದು ನೋಡಲ್ ಅಧಿಕಾರಿಗಳನ್ನು ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ತಾಲೂಕು ಮಟ್ಟದಲ್ಲ್ಲೂ ದೂರು ಸ್ವೀಕರಿಸಲು ವ್ಯವಸ್ಥೆ ರೂಪಿಸಲು ಸಭೆ ನಿರ್ಧರಿಸಿತು.
ಎಲ್ಲಾ ಕೇಬಲ್ ಆಪರೇಟರ್ ಗಳು ಇನ್ನು ಮುಂದೆ ತಾವು ಪ್ರಸಾರ ಪಡಿಸುವ ಎಲ್ಲ ಕಾರ್ಯಕ್ರಮಗಳ ವಿವರಗಳನ್ನು ದಾಖಲಿಸಿ, ಜಿಲ್ಲಾಧಿಕಾರಿಗಳು ಕೇಳಿದ ತಕ್ಷಣ ದಾಖಲೆ ಸಹಿತ ಹಾಜರುಪಡಿಸಲು ಬದ್ಧರಾಗಿರಬೇಕು.
ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷ ರಾಗಿರುವರು. ನಗರ ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಸದಸ್ಯ ರಾಗಿರುವರು. ಜಿಲ್ಲಾಧಿ ಕಾರಿಯಿಂದ ನೇಮಕಗೊಂಡ ಜಿಲ್ಲೆಯ ಮಹಿಳಾ ಕಾಲೇಜಿನ ಪ್ರಾಂಶುಪಾಲರು, ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ, ಶಿಕ್ಷಣ ತಜ್ಞರು, ಮನ:ಶಾಸ್ತ್ರಜ್ಞರು, ಸಮಾಜ ಶಾಸ್ತ್ರಜ್ಞರು, ಮಹಿಳೆಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಸದಸ್ಯರಾಗಿರುವರು. ಜಿಲ್ಲೆಯ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುವರು.
ಸಮಿತಿಯ ಪ್ರಕಾರ್ಯಗಳು: ಕೇಬಲ್ ಟೆಲಿವಿಷನ್ ಮೂಲಕ ಪ್ರಸಾರವಾಗುವ ವಿಷಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು ದೂರು ನೀಡಿದರೆ ಸಮಿತಿ ಕ್ರಮಕೈಗೊಳ್ಳಲಿದೆ. ಯಾವುದೇ ಕಾರ್ಯಕ್ರಮ ಸಾರ್ವಜನಿಕ ವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ಅಥವಾ ಯಾವುದೇ ಸಮುದಾಯಕ್ಕೆ ವ್ಯಾಪಕ ಅತೃಪ್ತಿ ಅಥವಾ ನೋವು ಉಂಟು ಮಾಡಿದರೆ ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ಕೂಡಲೇ ತರುವುದು. ಅನಧಿಕೃತ ಅಥವಾ ನಕಲಿ ಚಾನೆಲ್ ಗಳು ಕಾರ್ಯನಿರ್ವಹಿಸಿದಂತೆ ಕೇಬಲ್ ನೆಟ್ ವಕ್ರ್ ನಲ್ಲಿ ಫ್ರೀ ಟು ಏರ್ ಚಾನೆಲ್ ಗಳು ಮತ್ತು ಅಜ್ಞಾಪಕ ಪ್ರಸಾರಕ್ಕೆ ಅಧಿಸೂಚಿಸಲಾದ ಚಾನೆಲ್ ಗಳು ಲಭ್ಯತೆ ಬಗ್ಗೆ ಮೇಲ್ವಿಚಾರಣೆ ಮಾಡುವುದು. ಕಾನೂನು ಉಲ್ಲಂಘಿಸಿದರೆ ಅಧಿನಿಯಮ 11 ರ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬಹುದು.
ಅಧಿನಿಯಮದಡಿ ಪೊಲೀಸು ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಹಾಯಕ ಆಯುಕ್ತರು ಕಾನೂನು ಕ್ರಮಕೈಗೊಳ್ಳಲು ಅಧಿಕೃತ ಅಧಿಕಾರಿಗಳೆಂದು ಅಧಿಸೂಚಿಸಿದೆ.
ಇಂದಿನ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಎ. ದಯಾನಂದ, ಶಿಕ್ಷಣ ತಜ್ಞ ಪ್ರೊ. ಎ ಎಂ ನರಹರಿ, ಬಲ್ಮಠ ಸರ್ಕಾರಿ ಹೆಮ್ಮಕ್ಕಳ ಮಹಾವಿದ್ಯಾಲಯದ ಪ್ರಾಂಶುಪಾಲರು ಶ್ರೀಮತಿ ತಾರ ರಾವ್, ವಿಶ್ವ ವಿದ್ಯಾನಿಲಯ ಕಾಲೇಜಿನ ಸಮಾಜ ಶಾಸ್ತ್ರಜ್ಞೆ ಶ್ರೀಮತಿ ಮಹೇಂದ್ರಮಣಿ ರಾವ್, ವಾಮಂಜೂರು ಧರ್ಮಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಸಿಸ್ಟರ್ ಡ್ಯಾಫ್ನಿ ಸಭೆಯಲ್ಲಿ ಉಪಸ್ಥಿತರಿದ್ದರು.
ಡಿಸೆಂಬರ್ ನಲ್ಲಿ ಕರಾವಳಿ ಉತ್ಸವ

ಮಂಗಳೂರು,ಆಗಸ್ಟ್.17:ಪ್ರತೀ ವರ್ಷದಂತೆ ವ್ಯವಸ್ಥಿತವಾಗಿ ಹಾಗೂ ಸಂಭ್ರಮದಿಂದ ಕರಾವಳಿ ಉತ್ಸವ ಆಚರಿಸಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದರು.
ಆಗಸ್ಟ್ 14ರಂದು ಜಿಲ್ಲಾ ಪಂಚಾಯತ್ ಮಿನಿಹಾಲ್ ನಲ್ಲಿ ಕರಾವಳಿ ಉತ್ಸವ ಸಂಬಂಧ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಉತ್ಸವದ ರೂಪು ರೇಷೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಸಲಹೆ ಮಾಡಿದರು. ಸಭೆಯಲ್ಲಿ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್,ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರನ್ನೊಳಗೊಂಡಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Wednesday, August 15, 2012

ಯೋಧ ಕೃಷ್ಣಪ್ಪನಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಂತಿಮ ನಮನ

ಮಂಗಳೂರು, ಆಗಸ್ಟ್.15: ಜಮ್ಮುವಿನ ಗಡಿ ಭಾಗದಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಲಿಯಾದ ASC (ಆರ್ಮಿ ಸರ್ವಿಸ್ ಕಾರ್ಪ್) 507 ನೇ ಬೆಟಾಲಿಯನ್ ನ ಯೋಧ ಕೃಷ್ಣಪ್ಪ ಗೌಡ ರ ಪಾರ್ಥಿವ ಶರೀರ ಇಂದು ಹುಟ್ಟೂರರಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ತರಲಾಯಿತು.
ಇದಕ್ಕೂ ಮುನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೃಷ್ಣಪ್ಪ ಗೌಡ ರ ಪಾರ್ಥಿವ ಶರೀರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಅವರು ಸರ್ಕಾರದ ಪರವಾಗಿ ಪುಷ್ಪ ನಮನದ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾಧಿಕಾರಿ ಡಾ. ಚನ್ನಪ್ಪ ಗೌಡ, ಜಿಲ್ಲಾ ಪೋಲಿಸ್ ಅಧಿಕ್ಷಕ ಅಭಿಷೇಕ್ ಗೊಯಲ್, ಜಿ.ಪಂ. ಸಿಇಒ ಡಾ. ಕೆ.ಎನ್. ವಿಜಯ ಪ್ರಕಾಶ್, ಮಂಗಳೂರು ಉಪ ವಿಭಾಗ ಧಿಕಾರಿ ವೆಂಕಟೇಶ್, ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಮತ್ತಿತರ ಪೋಲಿಸ್ ಅಧಿಕಾರಿಗಳು ಅಗಲಿದ ಯೋಧ ಕೃಷ್ಣಪ್ಪರಿಗೆ ಪುಷ್ಪ ನಮನ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 66 ನೇ ಸ್ವಾತಂತ್ರ್ಯ ಸಂಭ್ರಮಾಚರಣೆ;ಜಿಲ್ಲಾ ಉಸ್ತುವಾರಿ ಸಚಿವರಿಂದ ಸಂದೇಶ

66ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಈ ಶುಭ ಸಮಾರಂಭದಲ್ಲಿ ಉಪಸ್ಥಿತರಿರುವ ಲೋಕಸಭಾ ಸದಸ್ಯರೇ, ಜಿಲ್ಲೆಯ ಎಲ್ಲಾ ವಿಧಾನ ಸಭಾ ಸದಸ್ಯರೇ, ವಿಧಾನ ಪರಿಷತ್ತು ಸದಸ್ಯರೇ, ಸರಕಾರದ ವಿವಿಧ ಅಭಿವೃದ್ಧಿ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರುಗಳೇ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರೇ, ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರೆ, ಸ್ವಾತಂತ್ರ್ಯ ಹೋರಾಟಗಾರರೇ, ವಿವಿಧ ಇಲಾಖಾ ಅಧಿಕಾರಿಗಳೇ, ಮಾಧ್ಯಮ ಮಿತ್ರರೇ, ಪ್ರಶಸ್ತಿ ವಿಜೇತರೇ, ಶಾಲಾ ವಿದ್ಯಾರ್ಥಿಗಳೇ, ಪಥಸಂಚಲನದಲ್ಲಿ ಭಾಗವಹಿಸುವ ವಿವಿಧ ತಂಡಗಳ ಸದಸ್ಯರೇ ಹಾಗೂ ಸಮಸ್ತ ನಾಗರಿಕ ಬಂಧುಗಳೇ ನಿಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ, ಉಲ್ಲಾಸ ಹಾಗೂ ಸಡಗರದಿಂದ ಆಚರಿಸಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ.
ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ನಡೆದ ಸುದೀರ್ಘ ಹೋರಾಟ, ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರ ಸ್ಮರಣೆ ಮತ್ತು ಸ್ವತಂತ್ರ ಭಾರತದ ಆರು ದಶಕಗಳಿಗಿಂತ ಹೆಚ್ಚಿನ ಅವಧಿಯ ಸಾಧನೆಗಳ ಪುನರವಲೋಕನ, ಭವಿಷ್ಯತ್ತಿನಲ್ಲಿ ಪ್ರತೀ ಭಾರತೀಯನ ಜವಾಬ್ದಾರಿಯನ್ನು ನೆನಪಿಸುವ ಮಹತ್ತರ ಉದ್ದೇಶಗಳು ಈ ಸ್ವಾತಂತ್ರ್ಯೋತ್ಸವದ್ದು.
ಈ ದೇಶವು ವಿಭಿನ್ನ ಸಂಸ್ಕೃತಿ, ಧರ್ಮ, ಜಾತಿ, ಪ್ರಾದೇಶಿಕ ಭಿನ್ನತೆಯಿಂದ ಕೂಡಿದ್ದರೂ ನಾವೆಲ್ಲರೂ ಭಾರತೀಯರು. ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ ಸ್ವಾತಂತ್ರ್ಯದೊಡನೆ ಸಾಮಾಜಿಕ ಸ್ಥಾನಮಾನಗಳು, ಆರ್ಥಿಕ ಸ್ವಾತಂತ್ರ್ಯ, ಸ್ವಾವಲಂಬಿಯಾಗಿ ಬದುಕಲು ಅನುಕೂಲಕರವಾದ ವಾತಾವರಣ ದೊರೆಯುವಂತಾದರೆ ಸ್ವಾತಂತ್ರ್ಯವೆಂಬ ಪರಿಕಲ್ಪನೆ ಅರ್ಥಪೂರ್ಣವಾದೀತು. ಸಂಪದ್ಭರಿತವಾಗಿದ್ದ ನಮ್ಮ ದೇಶ ಪರಕೀಯರ ದಾಳಿಗೆ ತುತ್ತಾಗಿದ್ದರೂ ತನ್ನ ಅಂತ:ಸತ್ವವನ್ನು ಕಳೆದುಕೊಳ್ಳಲಿಲ್ಲ, ಆಧ್ಯಾತ್ಮಿಕ ತಳಹದಿಯ ಮೇಲೆ ಸುಭದ್ರವಾಗಿ ನಿಂತಿರುವ ಭವ್ಯ ಭಾರತದತ್ತ ಇಂದಿಗೂ ಜಗತ್ತು ಅಪಾರ ನಿರೀಕ್ಷೆಯಿಂದ ನೋಡುತ್ತಿದೆ. ಇದು ಹುಸಿಯಾಗದಿರಲೆಂಬ ಹಾರೈಕೆ ನಮ್ಮದು.
ಮಹಾತ್ಮ ಗಾಂಧಿಯವರ ಮಾತಿನಲ್ಲಿ - 'ತ್ಯಾಗದ ನಿಯಮ ಜಾಗತಿ ಕವಾಗಿ ಒಂದೇ ಆಗಿದ್ದರೂ ವೀರರು, ಶೂರರು ಕಳಂಕರಹಿತರ ತ್ಯಾಗ ಪರಿಣಾ ಮಕಾರಿ ಯಾದುದು'
ಕರ್ನಾಟಕದಲ್ಲಿ, ಜನಾದೇಶ ಪಡೆದ ಭಾರತೀಯ ಜನತಾ ಪಾರ್ಟಿ, ಇಂದಿಗೆ 4 ವರ್ಷ 2 ತಿಂಗಳ ಯಶಸ್ವಿ ಆಡಳಿತ ನಡೆಸಿದೆ. ತನ್ಮದ್ಯೆ ಉಂಟಾದ ರಾಜಕೀಯ ಸವಾಲುಗಳನ್ನು ಎಲ್ಲರಿಗೂ ಮಾದರಿಯಾಗುವಂತೆ ಪ್ರಜಾಪ್ರಭುತ್ವದ ಹಾದಿಯಲ್ಲೇ ಪರಿಹರಿಸಿಕೊಂಡು ರಾಜ್ಯದ ಮಹಾಜನತೆ ಕಂಡ ಕರ್ನಾಟಕ ರಾಜ್ಯದ ಪ್ರಗತಿಯ ಕನಸನ್ನು ನನಸಾಗಿಸಲು ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ್ರವರ ಸಾರಥ್ಯದಲ್ಲಿ ನಾವೀಗ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದೇವೆ.

ಒಂದು ರಾಜ್ಯದ ಸಮಗ್ರ ಅಭಿವೃದ್ಧಿ ಎಂದರೆ ಮೂಲಸೌಲಭ್ಯಗಳ ಅಭಿವೃದ್ದಿ. ಮೂಲಸೌಲಭ್ಯಗಳ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ. ಉತ್ತಮ ರಸ್ತೆಗಳು, ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಅತಿವೇಗದ ಇಂಟರ್ ನೆಟ್ ಸಂಪರ್ಕ ಸೌಲಭ್ಯ, ಸುಸ್ಥಿರ ಇಂಧನ ಪೂರೈಕೆ, ಗುಣಮಟ್ಟದ ಕುಡಿಯುವ ನೀರಿನ ಲಭ್ಯತೆ, ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೌಲಭ್ಯ, ಸ್ಥಳೀಯವಾಗಿ ಉದ್ಯೋಗ, ರೈತಪರ ಬಲಿಷ್ಠ ಮಾರುಕಟ್ಟೆ ವ್ಯವಸ್ಥೆ ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ದೃಢವಾದ ಹೆಜ್ಜೆಯನ್ನು ಇರಿಸಿದೆ.
ನೀಲಿ ಹಸಿರಿನ ಬಂದರು ನಗರಿ, ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆಯನ್ನು ಹೊಂದಿರುವ ಮಂಗಳೂರು ರಾಜ್ಯದ ಹೆಮ್ಮೆ. ನೇತ್ರಾವತಿ, ಫಲ್ಗುಣಿ ನದಿಗಳು ಹರಿಯುತ್ತಿರುವ ಪಶ್ಚಿಮ ಕರಾವಳಿಯ ತಪ್ಪಲಿನಲ್ಲಿರುವ ನಮ್ಮ ಜಿಲ್ಲೆ ದೇಶದಲ್ಲೇ ಗುರುತಿಸಲ್ಪಟ್ಟ ಶೈಕ್ಷಣಿಕ ಕೇಂದ್ರ. ಬ್ಯಾಂಕಿಂಗ್ ನ ತವರೂರು. ಜಾತ್ಯತೀತ ಭಾರತದ ವೈವಿಧ್ಯತೆಯನ್ನು ನಾವಿಲ್ಲಿ ಕಾಣಬಹುದು. ತುಳು, ಕೊಂಕಣಿ, ಬ್ಯಾರಿ ಭಾಷೆಯನ್ನಾಡುವ ಭಾಷಾ ವೈವಿಧ್ಯದ ತವರೂರು ಮಂಗಳೂರು. ಹಲವು ಜಾತಿ, ಧರ್ಮಗಳ, ಭಾಷೆಗಳನ್ನಾಡುವ ಜನರು ಇಲ್ಲಿ ಮಂಗಳೂರಿನ ಅಭಿವೃದ್ಧಿಗೆ ಗಮನೀಯ ಕೊಡುಗೆಗಳನ್ನು ನೀಡಿದ್ದಾರೆ. ಸಾಮರಸ್ಯದ ಬದುಕಿಗೆ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗಿದೆ.
16ನೇ ಶತಮಾನದಲ್ಲೇ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಸ್ವಾತಂತ್ರ್ಯದ ಕಿಚ್ಚನ್ನು ಪ್ರಥಮವಾಗಿ ಹಚ್ಚಿದ ಪ್ರದೇಶವಿದು. ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯಕ್ಕಾಗಿ ಆಕೆ ಮಾಡಿದ ಹೋರಾಟ ಇಂದಿಗೂ ಮಾದರಿ. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಒಡನಾಡಿಯಾಗಿ ಅವರ ಮಂತ್ರಿಮಂಡಲದಲ್ಲಿ ಆರ್ಥಿಕ ಸಚಿವರಂತೆ ಕರ್ತವ್ಯ ನಿರ್ವಹಿಸಿದ ಹೋರಾಟಗಾರ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ದಕ್ಷಿಣ ಕನ್ನಡದವರೆ. ಬ್ರಿಟಿಷ್ ಪ್ರಭುತ್ವಕ್ಕೆ ಪ್ರತಿರೋಧ ತೋರಿದ ಕಾನರ್ಾಡು ಸದಾಶಿವರಾಯರಂಥವರು ಗಾಂಧೀವಾದದ ಹಿನ್ನಲೆಯಲ್ಲಿ ದೇಶಕ್ಕಾಗಿ ತಮ್ಮನ್ನು ತಾವು ಸಮರ್ಥಿಸಿಕೊಂಡು ಶ್ರೀಗಂಧದಂತೆ ತೀಡಿಕೊಂಡು ನಾಡಿಗೆ ಸ್ವಾತಂತ್ರ್ಯದ ಸುಗಂಧವನ್ನು ನೀಡಿದರು. ಕಮಲಾದೇವಿ ಚಟ್ಟೋಪಾಧ್ಯಾಯರ ಮೂಲವು ಇಲ್ಲಿನದ್ದೆ. ಕೊಡಗು ಮೂಲದ ಕಲ್ಯಾಣಪ್ಪನ ಚಾರಿತ್ರಿಕ ಹೋರಾಟಕ್ಕೆ ಸಾಕ್ಷಿಯಾದದ್ದು ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆ ಸ್ವಾತಂತ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆ ಅನನ್ಯ. ಇಂತಹ ಮಹಾನ್ ಚೇತನಗಳ ನಿಸ್ವಾರ್ಥ, ತ್ಯಾಗಮಯ ಬಲಿದಾನಗಳನ್ನು ನಾವಿಂದು ಸ್ಮರಿಸಿಕೊಳ್ಳಲೇ ಬೇಕು. ಅವರ ಆದರ್ಶಗಳನ್ನು ಕಣ್ಣ ಮುಂದೆ ಮಾರ್ಗದರ್ಶಿ ಯನ್ನಾಗಿಟ್ಟುಕೊಂಡು ಅವರ ನೆನಪಿನಲ್ಲೇ ನಮ್ಮನ್ನು ನಾವು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಮರ್ಪಿಸಿಕೊಳ್ಳೋಣ.
ನಮ್ಮ ಹಿರಿಯರು ಬಹಳಷ್ಟು ಶ್ರಮವಹಿಸಿ ಗಳಿಸಿ ನಮಗೆ ತಂದಿತ್ತ ಈ ಸ್ವಾತಂತ್ರ್ಯ ದೀಪವನ್ನು ಅಷ್ಟೇ ಜೋಪಾನವಾಗಿ ರಕ್ಷಿಸಿ ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದನ್ನು ನಾವು ಪ್ರತಿ ಕ್ಷಣವೂ ನೆನಪಿಡಬೇಕು.
ನಾಡಿನ ಬೆನ್ನೆಲುಬಾದ ರೈತರ ನೆರವಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ. ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾತ್ರವಲ್ಲ ರೈತರಿಗೆ ನೇರ ಸಹಾಯಧನ ನೀಡಿರುವ ತೃಪ್ತಿ ನಮಗಿದೆ. ಕುಡಿಯವ ನೀರು, ಸುಸ್ಥಿರ ಅಭಿವೃದ್ದಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಬರ ಪರಿಸ್ಥಿತಿ, ನೆರೆ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ನಮ್ಮ ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಗಳು, ಬಡವರು, ದೀನದಲಿತರು, ಅಶಕ್ತರು ಸಮಾಜದಲ್ಲಿ ತಲೆ ಎತ್ತಿ ಬದುಕಲು ಅವಕಾಶ ಕಲ್ಪಿಸಿದೆ. ಮುಜರಾಯಿ, ಕಾನೂನು ಮತ್ತು ಸುವ್ಯವಸ್ಥೆ, ಕಡಲ್ಕೊರೆತ, ಉದ್ಯೋಗ ತರಬೇತಿ, ಕಾರ್ಮಿಕ ಇಲಾಖೆ, ಕೈಗಾರಿಕೆ, ಸಹಕಾರ, ಮೀನುಗಾರಿಕೆ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ಧಿ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಉತ್ತಮ ಸಾಧನೆ ಮಾಡಿವೆ. ಎಲ್ಲಾ ಇಲಾಖೆಗಳು ತಮ್ಮ ಜನಪರ ಕಾಳಜಿಯನ್ನು ಕರ್ತವ್ಯದಲ್ಲಿ ತೋರಿವೆ.
ಹಲವು ಉತ್ತಮ ಮಾದರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯಕ್ಕೆ ನೀಡಿದೆ. ನಮಗೆಲ್ಲ ಹೆಮ್ಮ ತಂದಿದೆ.ನಮ್ಮ ಅಧಿಕಾರಾವಧಿಯಲ್ಲಿ, ನಮ್ಮ ಸರಕಾರ ರಾಜ್ಯದ ರೈತರ ರೂ.25,000/- ವರೆಗಿನ ಸಾಲ ಮನ್ನಾ, ಮೀನುಗಾರರಿಗೆ ಮತ್ತು ನೇಕಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಕೃಷಿ ಉದ್ದೇಶಕ್ಕೆ ಉಚಿತ ವಿದ್ಯುತ್, ಸಣ್ಣ ರೈತರ ಪ್ರತಿ ಕುಟುಂಬಗಳಿಗೆ ಒಣಭೂಮಿ ಅಭಿವೃದ್ಧಿಗೆ ರೂ.1000 ಸಹಾಯಧನ, 10 ಲಕ್ಷ ರೈತ ಕುಟುಂಬಗಳಿಗೆ ಸುವರ್ಣ ಭೂಮಿ ಯೋಜನೆಯಡಿ ಪ್ರೋತ್ಸಾಹ ಧನವಾಗಿ ತಲಾ ಗರಿಷ್ಟ ರೂಪಾಯಿ 10 ಸಾವಿರ, ಹಾಲು ಉತ್ಪಾದಕರಿಗೆ ಲೀಟರ್ ಒಂದರ ರೂಪಾಯಿ 2/- ರಂತೆ ಪ್ರೋತ್ಸಾಹ ಧನ, ಮೀನುಗಾರಿಕೆಗೆ ನೀಡುವ ತೆರಿಗೆ ರಹಿತ ಡಿಸೇಲ್ ಪ್ರಮಾಣ 1 ಲಕ್ಷ ಲೀಟರಿಗೆ ಹೆಚ್ಚಳ, ಮತ್ಸ್ಯಾಶ್ರಯ ಯೋಜನೆಯಡಿ ರೂ.60 ಸಾವಿರ ವೆಚ್ಚದ 2000 ಮನೆಗಳು, ರಾಜ್ಯದಲ್ಲಿ ತಲಾ ರೂ.10 ಲಕ್ಷದಲ್ಲಿ 50 ನೂತನ ಮೀನು ಮಾರುಕಟ್ಟೆ ನಿರ್ಮಾಣ, ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್, ಅಂಗವಿಕಲರಿಗೆ ಮಾಸಿಕ ವೇತನ ಹೆಚ್ಚಳ, ವಾಜಪೇಯಿ ನಗರಾಶ್ರಯ ಯೋಜನೆಯಡಿ ನಿವೇಶನ, ಗ್ರಾಮೀಣ ಮಟ್ಟದಲ್ಲಿ ಬಸವ ವಸತಿ ಯೋಜನೆಯಡಿ ವಸತಿ ಹಂಚಿಕೆ, ರಾಜ್ಯದ ಕರಾವಳಿಯ ಬಂದರುಗಳ ಅಭಿವೃದ್ಧಿಗೆ ``ಕರ್ನಾಟಕ ಮೆರಿಟೈಮ್ ಬೋರ್ಡ್ ಸ್ಥಾಪನೆ ಬೀಡಿ ಮತ್ತು ಟೈಲರ್ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ, ಜನ ಸಾಮಾನ್ಯರ ಆಕಾಂಕ್ಷೆಗಳಿಗೆ ಅನುಗುಣವಾಗಿ ಕಾಲಬದ್ಧ ಸೇವೆ ನೀಡುವ `ಸಕಾಲ' ಯೋಜನೆ ಇಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆರೋಗ್ಯ ಕವಚ - ತುತರ್ು ಸೇವೆಗೆ ಅಂಬ್ಯುಲೆನ್ಸ್ ನೆರವು, ಗ್ರಾಮ ಪಂಚಾಯತ್ ವಾರ್ಷಿಕ ಅನುದಾನ ರೂ.6 ಲಕ್ಷ ದಿಂದ ರೂ.8.00 ಲಕ್ಷಕ್ಕೆ ಏರಿಕೆ, ಪ್ರತಿ ತಾಲೂಕು ಪಂಚಾಯತ್ಗೆ ವಾರ್ಷಿಕ ರೂ.1 ಕೋಟಿ ಹೆಚ್ಚುವರಿ ಅನುದಾನ, ಹಾಗೂ ಪ್ರತಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಜಿಲ್ಲೆಯ ಅಭಿವೃದ್ಧಿಗಾಗಿ ರೂ. 2 ಕೋಟಿ ವಿಶೇಷ ಅನುದಾನ, ಪ್ರತೀ ತಾಲೂಕು ಪಂಚಾಯತ್ ಗಳಿಗೆ ವಾರ್ಷಿಕ ತಲಾ ರೂ. 1 ಕೋಟಿ ಅನುದಾನ, ವಿಧಾನ ಸಭಾ ಕ್ಷೇತ್ರದಲ್ಲಿ 20 ಕಿ.ಮೀ. ರಸ್ತೆ ಅಭಿವೃದ್ಧಿ ಹೀಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಿದ ಕೀರ್ತಿ ನಮ್ಮ ಸರಕಾರದ್ದು. ನಾವು ಇಷ್ಟರಲ್ಲೇ ತೃಪ್ತರಲ್ಲ. ನಿಮ್ಮೆಲ್ಲರ ಸಹಕಾರದಿಂದ ಸರಕಾರದ ಮುಂದಿನ ಉಳಿದ ಅವಧಿಯಲ್ಲಿ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ದೇಶದ ನಂಬರ್ 1 ಪಟ್ಟಕ್ಕೆ ಒಯ್ಯುವುದು ನಮ್ಮೆಲ್ಲರ ಹಂಬಲ. ಇದಕ್ಕಾಗಿ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂಬ ಭರವಸೆಯನ್ನು ಈ ಶುಭಸಂದರ್ಭದಲ್ಲಿ ಜನತೆಗೆ ನೀಡಬಯಸುತ್ತೇನೆ.
ನಮ್ಮೆಲ್ಲರ ಹೆಮ್ಮೆಯ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ನಾಲ್ಕು ಸಾಲು ಹೇಳುವುದಾದರೆ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳ ಕಡಿಮೆ ಅವಧಿಯಲ್ಲಿ ವಿವಿಧ ಯೋಜನೆಗಳ ಮುಖಾಂತರ ಕೋಟ್ಯಂತರ ರೂಪಾಯಿಗಳ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ.
ಸಂಧ್ಯಾ ಸುರಕ್ಷಾ ಯೋಜನೆಯಡಿ 22693 ಫಲಾನುಭವಿಗಳು ಮಾಸಿಕ 500 ರೂ. ಪಡೆಯುತ್ತಿದ್ದು, ತಮ್ಮ ಇಳಿ ವಯಸ್ಸಿನಲ್ಲಿ ಇದು ಅವರಿಗೆ ಆಸರೆಯಾಗಿದೆ. ಜಿಲ್ಲೆಯ ಲಕ್ಷಾಂತರ ಜನರಿಗೆ ವಿವಿಧ ಯೋಜನೆಗಳಡಿ ನೇರವಾಗಿ ನೆರವು ಒದಗಿಸುತ್ತಿರುವುದು ಸರ್ಕಾರದ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.
ನಮ್ಮ ಜಿಲ್ಲೆಗೆ ಉತ್ತಮ ಪ್ರವಾಸೋದ್ಯಮ ಅವಕಾಶವಿದ್ದು, ಈ ನಿಟ್ಟಿನಲ್ಲಿ ಹಲವು ಯೋಜನೆಗಳು ಅನುಷ್ಟಾನಕ್ಕೆ ಬರಬೇಕಿದೆ.
_ ಪಿಲಿಕುಳದಲ್ಲಿ 24.5 ಕೋಟಿ ವೆಚ್ಚದಲ್ಲಿ ವಿನೂತನ 3ಡಿ ತಾರಾಲಯ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ದೊರೆತಿದೆ.
_ ಪರಿಶಿಷ್ಟ ಜಾತಿಯ ಹಾಗೂ ಪಂಗಡದ ನಿರುದ್ಯೋಗಿಗಳಿಗೆ ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಇದುವರೆಗೆ ಜಿಲ್ಲೆಯಲ್ಲಿ 62 ಪ್ರವಾಸಿ ವಾಹನ ಸೌಲಭ್ಯ ನೀಡಲಾಗಿದೆ.
_ ಸುಲ್ತಾನ ಬತ್ತೇರಿಯಿಂದ ತಣ್ಣೀರು ಬಾವಿಯವರೆಗೆ 12.00 ಕೋಟಿ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಅನುಮೋದನೆ ಆಗಿದ್ದು ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆಯಲಾಗಿದೆ. .
_ ಕೆರೆಗಳ ಪುನಶ್ಷೇತನಕ್ಕಾಗಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು 5.00 ಕೋಟಿಯಂತೆ ಅನುಮೋದನೆಯಾಗಿದ್ದು 145 ಕೆರೆಗಳ ಪುನಶ್ಚೇತನ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ.
_ ಪುತ್ತೂರು ತಾಲೂಕಿನ ಕೊಯಿಲದಲ್ಲಿ ಪಶು ಸಂಗೋಪನಾ ಕಾಲೇಜು ತೆರೆಯಲು ಸರಕಾರದ ಅನುಮೋದನೆ ದೊರೆತ್ತಿದ್ದು, 2013-14ನೇ ಸಾಲಿನಲ್ಲಿ ಪ್ರಾರಂಭಿಸಲಾಗುವುದು.
_ ಮಂಗಳಾ ಕ್ರೀಡಾಂಗಣದಲ್ಲಿ 400 ಮೀ ಸಿಂಥೆಟಿಕ್ ಟ್ರಾಕ್ ನಿರ್ಮಾಣ ಮಾಡಲು ಸರಕಾರದಿಂದ ರೂ.3.60 ಕೋಟಿ ಅನುದಾನ ಮಂಜೂರಾಗಿದ್ದು, ಸಿವಿಲ್ ಕಾಮಗಾರಿ ಕೆಲಸ ಮುಗಿದಿರುತ್ತದೆ. ಮಳೆ ನಿಂತ ನಂತರ ಸಿಂಥೆಟಿಕ್ ಟ್ರಾಕ್ ಅಳವಡಿಸುವ ಕಾರ್ಯವನ್ನು ಪ್ರಾರಂಭಿಸಲಾಗುವುದು.
_ 15.00 ಕೋಟಿ ವೆಚ್ಚದಲ್ಲಿ ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
_ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನ (1ನೇ ಹಂತ) ಕಾರ್ಯಕ್ರಮದಡಿ 100.00 ಕೋಟಿ ರೂ ಮಂಜೂರಿಯಾಗಿದ್ದು 96.00 ಕೋಟಿ ರೂ ಬಿಡುಗಡೆಯಾಗಿರುತ್ತದೆ. ಒಟ್ಟು 265 ಕಾಮಗಾರಿಗಳಲ್ಲಿ 217 ಕಾಮಗಾರಿಗಳು ಪೂರ್ಣಗೊಂಡಿವೆ. 2ನೇ ಹಂತದಲ್ಲಿ 100.00 ಕೋಟಿ ಮಂಜೂರಾಗಿರುತ್ತದೆ.
_ ಮಾನ್ಯ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ ಒಟ್ಟು 103 ಕಾಮಗಾರಿಗಳ ಪೈಕಿ 88 ಕಾಮಗಾರಿಗಳು ಪೂರ್ಣಗೊಂಡಿವೆ. ಶೇ 95 ಪ್ರಗತಿ ಸಾಧಿಸಲಾಗಿದ್ದು, 22.99 ಕೋಟಿ ವೆಚ್ಚವಾಗಿದೆ. ಉಳಿದ ಕಾಮಗಾರಿಗಳು ಡಿಸೆಂಬರ್ 2012 ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
_ ಮಂಗಳೂರಿನ ಬಂಗ್ರಕೂಳೂರಿನಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣ ಮಾಡಲು ಕ್ರಮ ವಹಿಸಲಾಗುತ್ತಿದೆ.
_ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 50.00ಕೋಟಿ ವೆಚ್ಚದ ಅತಿಥಿ ಗೃಹ ನಿರ್ಮಾಣ ಪೂರ್ಣಗೊಂಡಿರುತ್ತದೆ.
_ ಸುಳ್ಯ ತಾಲೂಕಿನಲ್ಲಿ ರೂ. 2.30 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ. ಕೂಡಲೇ ಕಛೇರಿಯನ್ನು ಸಹ ಪ್ರಾರಂಭಿಸಲಾಗುವುದು.

ಈ ರೀತಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 991.57 ಕೋಟಿ ರೂ.ಗಳನ್ನು ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಲು ಮುಂಬೈಯ ಬಾಬಾ ಆಟೋಮಿಕ್ ರಿಸರ್ಚ ಸೆಂಟರ್ ತಂತ್ರಜ್ಞಾನದ ಬಯೋಗ್ಯಾಸ್ ಸ್ಥಾವರವನ್ನು ಕಮಿಶನಿಂಗ್ ಮಾಡಲಾಗಿದೆ. ನಗರ ನೈರ್ಮಲೀಕರಣ ಯೋಜನೆಯ ಕುರಿತಾಗಿ 14 ಸದಸ್ಯರನ್ನು ಒಳಗೊಂಡ ಸಿಟಿ ಸಾನಿಟೇಶನ್ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ.
ವಿವಿಧ ಸರಕಾರಿ, ಖಾಸಗಿ ಕಂಪೆನಿಗಳ ಸೇವೆಗಳು ಒಂದೇ ಸೂರಿನಡಿ ಲಭ್ಯವಿರುವ ಮಂಗಳೂರು ಒನ್ ಯೋಜನೆಯನ್ನು ಸರಕಾರಿ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಟಾನ ಗೊಳಿಸಲಾಗಿದೆ.
ನಮ್ಮ ಸರಕಾರ ಕಳೆದ 4 ವರ್ಷಗಳ ಅವಧಿಯಲ್ಲಿ ನೀಡಿರುವ ಎಲ್ಲಾ ಜನಪರ ಯೋಜನೆಗಳಿಂದ ರಾಜ್ಯದ ಜನಸಾಮಾನ್ಯರು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆದಿದ್ದಾರೆ ಹಾಗೂ ಪಡೆಯುತ್ತಿದ್ದಾರೆ.
ನಮ್ಮ ಜಿಲ್ಲೆ ಮತ್ತು ನೆರೆಯ ಉಡುಪಿ ಜಿಲ್ಲೆಯ ಪ್ರಮುಖ ಸಮಸ್ಯೆಯಾಗಿದ್ದ ಮೂಲಗೇಣಿ ಪದ್ದತಿಯನ್ನು ರದ್ದುಗೊಳಿಸುವುದಾಗಿ ನಮ್ಮ ಸರ್ಕಾರವು ಜನತೆಯ ಆಶ್ವಾಸನೆಯನ್ನು ನೀಡಿತ್ತು. ಅದರಂತೆ ಕಳೆದ ವರ್ಷ ಇದಕ್ಕಾಗಿ ಕಾಯಿದೆಯನ್ನು ರಚಿಸಿ ವಿಧಾನ ಮಂಡಲದಲ್ಲಿ ಅನುಮೋದನೆ ಪಡೆಯಲಾಗಿತ್ತು. ಈಗ ಈ ಕಾಯಿದೆಯು ಗೆಜೆಟ್ ನೋಟಿಫಿಕೇಶನ್ ಮೂಲಕ ಜಾರಿಗೆ ಬಂದಿದೆ. ಇದರಿಂದಾಗಿ ಸಾವಿರಾರು ಜನ ಮೂಲ ಗೇಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಮೂಲಗೇಣಿದಾರರ ಅನೇಕ ವರ್ಷಗಳ ಸಮಸ್ಯೆಗಳನ್ನು ಪರಿಹಾರ ಮಾಡಿರುವುದು ನಮ್ಮ ಸರ್ಕಾರದ ಇಚ್ಛಾಶಕ್ತಿಗೆ ಉತ್ತಮ ಉದಾಹರಣೆಯಾಗಿದೆ.
ಈ ನಾಲ್ಕು ವರ್ಷಗಳಲ್ಲಿ ಕೊಟ್ಟ ಮಾತಿಗೆ ತಪ್ಪದೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ತೃಪ್ತಿ, ಸಮಾಧಾನ ನಮ್ಮ ಸರಕಾರಕ್ಕೆ ಇದೆ. ಇದೇ ವೇಳೆ ಮಾಡಬೇಕಾದುದು ಇನ್ನೂ ಬೇಕಾದಷ್ಟಿದೆ ಎಂಬ ಅರಿವೂ ನಮಗಿದೆ.
ಸ್ವಾತಂತ್ರ್ಯೋತ್ಸವದ ಈ ವಿಶೇಷ ಸಮಾರಂಭದಲ್ಲಿ ವಿಶಿಷ್ಟ ಸಾಧನೆಗಾಗಿ ಸನ್ಮಾನಿಸಲ್ಪಟ್ಟ ಸಾಧಕರಿಗೆ ನನ್ನ ಅಭಿನಂದನೆಗಳು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಹೋರಾಟಗಾರರನ್ನು ಸ್ಮರಿಸುತ್ತಾ ಭಾರತವು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.
ಸ್ವಾತಂತ್ರ್ಯದ ಅನುಭವ ಮತ್ತು ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಗಬೇಕು. ನಮ್ಮ ಸಂವಿಧಾನದ ಪ್ರಮುಖ ಆಶಯ ಸಮಾನತೆ, ಪ್ರತಿಯೊಬ್ಬರೂ ನೆಮ್ಮದಿಯ ಮತ್ತು ಸಹ ಬಾಳ್ವೆಯ ಜೀವನ ನಡೆಸುವಂತಾಗಬೇಕು. ಅತ್ಯಮೂಲ್ಯವಾದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬೆಳೆಯುವ ಸಂಕಲ್ಪ ತೊಡಲು ಸ್ವಾತಂತ್ರ್ಯೋತ್ಸವ ಆಚರಣೆ ಸರ್ವರಿಗೂ ಸ್ಫೂರ್ತಿ ನೀಡಲಿ ಎಂಬ ಆಶಯದೊಂದಿಗೆ ರಾಜ್ಯದ ಸಮಸ್ತ ಜನತೆಗೆ ಮತ್ತೊಮ್ಮೆ ಶುಭಾಶಯ ಸಲ್ಲಿಸಿ ಮಾತುಗಳನ್ನು ಮುಗಿಸುತ್ತೇನೆ.

ಪಿರಿದೆಲ್ಲ ಮತನೀತಿಗಳಿಗಿಂ ಜೀವಿತವು
ನೆರೆ ಬಂದ ನದಿದಡಕೆ ಬಾಗಿ ಪರಿಯುವುದೆಂ
ಧರ್ಮ ಸೂಕ್ಷ್ಮವ ತಿಳಿವೆ ಲೋಕಸೂತ್ರದ ಸುಳಿವು
ಅರಸು ಜೀವಿತ ಹಿತವ ಮಂಕುತಿಮ್ಮ


ಜೈಹಿಂದ್ - ಜೈ ಕರ್ನಾಟಕ

ಪಥಸಂಚಲನ ಮಾಹಿತಿ:
ಸ್ವಾತಂತ್ರ್ಯೋತ್ಸವದ ಪಥಸಂಚಲನದಲ್ಲಿ 18 ತುಕಡಿಗಳು ಇಂದು ಪಾಲ್ಗೊಂಡಿತ್ತು. ದಂಡನಾಯಕ ಆರ್ ಪಿ ಐ ಶ್ರೀ ಆರ್ . ರಾಘವೇಂದ್ರ ನೇತೃತ್ವ ವಹಿಸಿದ್ದರು.
ಕೆ ಎಸ್ ಆರ್ ಪಿ ತುಕಡಿ ಎಮ್ ನಾಗರಾಜಯ್ಯ ಆರ್ ಎಸ್ ಐ ನೇತೃತ್ವದಲ್ಲಿ, ಸಿ ಎ ಆರ್ ಅಂಡ್ ಡಿ ಎ ಆರ್ ತುಕಡಿ ಎಸ್ ಮೂರ್ತಿ ಆರ್ ಎಸ್ ಯ, ಸಿ ವಿ ಲ್ ತುಕಡಿ ಸುನಿಲ್ ಪಿ ಎಸ್ ಐ, ಟ್ರಾಫಿಕ್ ತುಕಡಿ ಜಿ ಕೆ ಭಟ್ ಪಿ ಎಸ್, ಗೃಹರಕ್ಷಕ ದಳ ತುಕಡಿ ಕೆ ದೇವದಾಸ್ ಶೆಟ್ಟಿ, ಅಗ್ನಿಶಾಮಕ ದಳ ತುಕಡಿ ವಸಂತಕುಮಾರ್ ಹೆಚ್ ಎಮ್, ಆರ್ಮಿ ಎನ್ ಸಿಸಿ ಜ್ಯೂನಿಯರ್ ತುಕಡಿ ನಿರಂಜನ್ ಮೂರ್ತಿ ಸಿ ಎಸ್ ಯು ಒ, ನೇವಿ ಎನ್ ಸಿಸಿ ಸೀನಿಯರ್ ತುಕಡಿ ಶಿಸಿರ್ ಕೋಟ್ಯಾನ್, ಏರ್ ವಿಂಗ್ ಎನ್ ಸಿಸಿ ಜ್ಯೂನಿಯರ್ ತುಕಡಿ ಸಾಯಿಶ್ರೀ, ಆಮರ್ಿ ಎನ್ ಸಿಸಿ ಜ್ಯೂನಿಯರ್ ತುಕಡಿ ಕೆ ವೈಷ್ಣವಿ ಭಟ್, ನೇವಿ ಎನ್ ಸಿಸಿ ಜ್ಯೂನಿಯರ್ ತುಕಡಿ ಸಲ್ಮಾನ್, ಏರ್ ವಿಂಗ್ ಎನ್ ಸಿ ಸಿ ಜ್ಯೂನಿಯರ್ ತುಕಡಿ ಚರನ್ ರಾಜ್, ಆರ್ ಎಸ್ ಪಿ ಬಾಲಕಿಯರ ತುಕಡಿ ಲೇಜಿನ್ ಡಿ ಸೋಜ, ಭಾರತ್ ಸೇವಾದಳ ಬಾಲಕಿಯರ ತುಕಡಿ ಅಫ್ರಿನಾ, ತುಕಡಿ ಸ್ಕೌಟ್ಸ್ ಬಾಲಕರ ತುಕಡಿ ಆಶಯ್ ಕುಮಾರ್, ಆರ್ ಎಸ್ ಪಿ ಬಾಲಕರ ತುಕಡಿ ಸಂತೋಷ್ ಯು ಶೇಟ್, ಭಾರತ್ ಸೇವಾದಳ ಅಭ್ಯಾಸಿ ಪ್ರೌಢಶಾಲೆ ಪ್ರಕಾಶ್, ಗೈಡ್ಸ್ ಸರಕಾರಿ ಸಂಯುಕ್ತ ಪ್ರೌಢಶಾಲೆ ತುಕಡಿ ಕೆ ವಿನಯ್ ಪಾಲ್ಗೊಂಡಿತ್ತು.
ಏರ್ ವಿಂಗ್ ಎನ್ ಸಿ ಸಿ ಜ್ಯೂನಿಯರ್ ತುಕಡಿ ಚರನ್ ರಾಜ್, ಆರ್ ಎಸ್ ಪಿ ಬಾಲಕಿಯರ ತುಕಡಿ ಲೇಜಿನ್ ಡಿ ಸೋಜ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿತು. ನೇವಿ ಎನ್ ಸಿಸಿ ಜ್ಯೂನಿಯರ್ ತುಕಡಿ ಸಲ್ಮಾನ್ ದ್ವಿತೀಯ ಸ್ಥಾನ ಪಡೆಯಿತು.
ಜೊತೆಗೆ ಇಂಡಿಯನ್ ಏರೋ ಮಾಡೆಲಿಂಗ್ ಸೊಸೈಟಿ ಕಾರ್ಕಳದ ರತ್ನಾಕರ್ ನಾಯಕ್ ಅವರಿಂದ ಹೆಲಿಕಾಪ್ಟರ್ ಹಾರಾಟ ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಜಿಲ್ಲಾಧಿಕಾರಿ ಡಾ. ಚನ್ನಪ್ಪ ಗೌಡ, ಪಶ್ಚಿಮ ವಲಯ ಐಜಿಪಿ ಡಾ. ಪ್ರತಾಪ್ ರೆಡ್ಡಿ,ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಕೆ.ಟಿ. ಶೈಲಜಾ ಭಟ್, ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಪೋಲಿಸ್ ಅಧೀಕ್ಷಕ ಅಭೀಷೇಕ್ ಗೋಯಲ್, ಜಿ.ಪಂ. ಸಿಇಒ ಡಾ. ಕೆ.ಎನ್. ವಿಜಯ ಪ್ರಕಾಶ್, ತಾಲೂಕ್ ಪಂಚಾಯತ್ ಅಧ್ಯಕ್ಷೆ ಭವ್ಯ ಗಂಗಾಧರ ರೈ, ಉಪ ಮೇಯರ್ ಅಮಿತ ಕಲಾ, ಅಲ್ಪ ಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷ ಅಬೂಬಕ್ಕರ್, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೂಡ ದ ಅಧ್ಯಕ್ಷ ರಮೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.