Tuesday, August 14, 2012

ಅನುಷ್ಠಾನಗೊಳಿಸಿ ಅನುಪಾಲನಾ ವರದಿ ನೀಡಿ: ಸಚಿವ ಸಿ ಟಿ ರವಿ

ಮಂಗಳೂರು, ಆಗಸ್ಟ್.14: ಅಧಿಕಾರಿಗಳು ಮುಂದಿನ ತ್ರೈಮಾಸಿಕ ಕೆಡಿಪಿ ಸಭೆಗೆ ಅನುಷ್ಠಾನಗೊಂಡ ಯೋಜನೆಗಳ ಅನುಪಾಲನಾ ವರದಿ ನೀಡಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪಾಲನಾ ವರದಿಯಲ್ಲಿ ಮುಗಿದ ಕಾಮಗಾರಿಗಳು ಹಾಗೂ ನಿಗದಿತ ಗುರಿ ಸಾಧನೆ ಬಗ್ಗೆ ಸಮಗ್ರ ಮಾಹಿತಿ ಇರಬೇಕು ಎಂಬುದನ್ನು ಸ್ಪಷ್ಟ ಪಡಿಸಿದ ಅವರು, ಸಮಯಮಿತಿಯೊಳಗೆ ಜನಪರ ಯೋಜನೆಗಳನ್ನು ಜಾರಿಗೆ ತನ್ನಿ ಎಂದು ಅವರು ನುಡಿದರು.
ಕಾರ್ಯಸೂಚಿಯ ಪ್ರಕಾರ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು, ದ.ಕ. ಜಿಲ್ಲೆಯಾದ್ಯಂತ ಒತ್ತುವರಿಗೆ ಒಳಗಾಗಿರುವ ಕೆರೆಗಳನ್ನು ತೆರವುಗೊಳಿಸಿ ಒಂದು ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಸಚಿವ ಸಿ.ಟಿ. ರವಿ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೆಲೆಯಲ್ಲಿ ಗಮನ ಹರಿಸುವಂತೆ ಸಲಹೆ ನೀಡಿದ ಅವರು, ಬಹುಗ್ರಾಮ ನೀರಿನ ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಯಾವುದೇ ರೀತಿಯಲ್ಲಿ ಕೆರೆಗಳಿಗೆ ಕಲುಷಿತ ನೀರು ಸೇರದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದ ಸಚಿವರು, ಯಾವುದೇ ಕಾರಣಕ್ಕೂ ಕೆರೆಗಳು ಒತ್ತುವರಿ ಆಗದಂತೆ ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಪ್ರಸ್ತುತ ಮಂಜೂರಾಗಿರುವ ನಾಲ್ಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಕಿನ್ನಿಗೋಳಿಯ 16.8 ಕೋಟಿರೂ.ಗಳ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಮರವೂರಿನ ಯೋಜನೆ 2013ರ ಮೇ ತಿಂಗಳೊಳಗೆ ಮುಗಿಸುವುದಾಗಿ ಜಿ.ಪಂ. ಕಾರ್ಯ ನಿರ್ವಾಹಕ ಇಂಜಿನಿಯರ್ ಸಭೆಗೆ ತಿಳಿಸಿದರು.
ರಸಗೊಬ್ಬರದ ಕುರಿತ ಚರ್ಚೆಯ ಸಂದರ್ಭ ಜಿಲ್ಲೆಯಲ್ಲಿ ರಸಗೊಬ್ಬರದ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದರಾದರೂ ಸುಫಲಾದ ಕೊರತೆ ಇದೆ. ಅದಕ್ಕೆ ಪೂರಕವಾದ ರಸಗೊಬ್ಬರದ ದಾಸ್ತಾನು ಇದೆ ಎಂದರು.
ಈ ಸಂದರ್ಭ ಶಾಸಕ ಅಭಯಚಂದ್ರ ಮಾತನಾಡಿ, ಕಳೆದ ವಾರ ಭಾರೀ ಮಳೆಯಿಂದಾಗಿ ಬೆಳೆ ಹಾಳಾಗಿದೆ. ಹಾಕಿದ ಗೊಬ್ಬರವೂ ನಷ್ಟವಾಗಿದೆ. ಈ ಬಗ್ಗೆ ಪರಿಹಾರ ಸೂಚಿಸಬೇಕೆಂದು ಆಗ್ರಹಿಸಿದರು.
ಗೊಬ್ಬರವನ್ನು ಸೂಕ್ತವಾಗಿ ರೈತರಿಗೆ ವಿಲೇವಾರಿ ಮಾಡುವ ಜೊತೆಗೆ ನಷ್ಟದ ಸರ್ವೇ ಮಾಡುವಂತೆ ತಿಳಿಸಿದ ಸಚಿವರು, ನಕಲಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಿ ಎಂದರು.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 11-12ನೆ ಸಾಲಿನಲ್ಲಿ 64 ಕಿಂಡಿ ಅಣೆಕಟ್ಟುಗಳಿಗೆ ಮಂಜೂರಾತಿ ದೊರಕಿದ್ದು, 26 ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಿದೆ. 12 ಕಾಮಗಾರಿಗಳ ಟೆಂಡರ್ ಬಾಕಿ ಇದೆ. 12-13ನೆ ಸಾಲಿನಲ್ಲಿ 32 ಕೋಟಿ ರೂ. ವೆಚ್ಚದಲ್ಲಿ 71 ಕಿಂಡಿ ಅಣೆಕಟ್ಟುಗಳಿಗೆ ಮಂಜೂರಾತಿ ದೊರಕಿದೆ. 2 ತಿಂಗಳಲ್ಲಿ ಏಜೆನ್ಸಿ ನಿರ್ಧರಿಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.ಕುಡಿಯುವ ನೀರು, ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ತಜ್ಞರನ್ನು ಸೇರಿಸಿ ಪ್ರತ್ಯೇಕ ಸಭೆಯ ಅಗತ್ಯವನ್ನು ಸಚಿವರು ವ್ಯಕ್ತಪಡಿಸಿದರು.
ಈ ಸಂದರ್ಭ ಶಾಸಕ ರಮಾನಾಥ ರೈ ಮಾತನಾಡಿ, ಪಶ್ಚಿಮವಾಹಿನಿ ಯೋಜನೆ ಬಂದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ವರದಾನ ಆಗಲಿದೆ ಎಂದು ಪ್ರತಿಕ್ರಿಯಿಸಿದರು.
ಮಲೆಕುಡಿಯರನ್ನು ಬಲಾತ್ಕಾರವಾಗಿ ಒಕ್ಕಲೆಬ್ಬಿಸುವ ಬದಲು, ಅವರ ಮನವೊಲಿಸಿ ಅವರಿಗೆ ಸೂಕ್ತ ಪುನರ್ವಸತಿ ಹಾಗೂ ಅರಣ್ಯದ ಅಂಚಿನಲ್ಲೇ ಭೂಮಿಯ ವ್ಯವಸ್ಥೆಯನ್ನು ಮಾಡುವ ಹಣ ಮತ್ತು ಮನೆ ರೂಪದ ವಿಶೇಷ ಪ್ಯಾಕೇಜ್ಗೆ ಒತ್ತು ನೀಡುವುದಾಗಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅರಣ್ಯ ಇಲಾಖೆಯ ಸಮಸ್ಯೆಗಳ ಚರ್ಚೆಯ ಸಂದರ್ಭ ದ.ಕ. ಜಿಲ್ಲೆಯಲ್ಲಿ ಗುರುತಿಸಲಾಗಿರುವ ಮಲೆಕುಡಿಯ ಕುಟುಂಬಗಳ ಬಗ್ಗೆ ವಿವರ ಕೇಳುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಗ್ಗೆ ಮುಖ್ಯಮಂತ್ರಿ ಜೊತೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮಲೆಕುಡಿಯ ಪ್ರತಿನಿಧಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆ ಕಾರಣದಿಂದ ಅವರಿಗೆ ಸೂಕ್ತ ಪರಿಹಾರದ ನೀಡಿ ಬದುಕಿಗೆ ಸಹಾಯಗವಾಗುವ ರೀತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ವರದಿ ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವೇದಿಕೆಯಲ್ಲಿ ವಿಧಾನಸಭೆಯ ಉಪಾಧ್ಯಕ್ಷ ಯೋಗೀಶ್ ಭಟ್, ಮೇಯರ್ ಗುಲ್ಜಾರ್ ಭಾನು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್, ಉಪಾಧ್ಯಕ್ಷೆ ಧನಲಕ್ಷಿ, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಪೊಲೀಸ್ ಆಯುಕ್ತ ಸೀಮಂತ್ ಕಮಾರ್ ಸಿಂಗ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.

ಎಂಡೋಸಲ್ಫಾನ್ ಪೀಡಿತರನ್ನು ನಿರ್ಲಕ್ಷಿಸಿಲ್ಲ: ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲಾಗಿಲ್ಲ. ಅವರಿಗೆ ಆದ್ಯತೆ ಆಧಾರದಲ್ಲಿ ಪರಿಹಾರ, ಸೌಲಭ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಬಿಪಿಎಲ್ ಕಾರ್ಡಿಗಾಗಿ ಸರ್ವೇ ಮಾಡಿ, ಸ್ಥಳದಲ್ಲೇ ವೈದ್ಯಕೀಯ ತಪಾಸಣೆ ನಡೆಸಿ, ವಿಕಲಚೇತನ ಸರ್ಟಿಫಿಕೇಟ್ ನೀಡುವ ವ್ಯವಸ್ಥೆ ಮಾಡಲಾಗುವುದು. ಮಾನವೀಯ ನೆಲೆಯಲ್ಲಿ ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.
ಖಾಸಗಿ ವಿವಿಗಳ ಪುನರ್ರೂಪಿತ ಮಸೂದೆ ಮಂಡನೆ: ಸಾಮಾಜಿಕ ನ್ಯಾಯದ ನೆಲೆಯಲ್ಲಿ ಖಾಸಗಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಯ ಕುರಿತಂತೆ ಈಗಾಗಲೇ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಪುನರ್ರೂಪಿತ ಮಸೂದೆಯನ್ನು ಮಂಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾಗಿರುವ ಸಿ.ಟಿ. ರವಿ ತಿಳಿಸಿದ್ದಾರೆ.
ಈ ಮಸೂದೆಯು ಖಾಸಗಿ ವಿವಿಗಳ ಸ್ಥಾಪನೆಗೆ ಅವಕಾಶ ನೀಡಲಿದ್ದು, ಖಾಸಗಿ ವಿವಿಗಳಲ್ಲಿ ಶುಲ್ಕ ನಿಗದಿಯ ಬಗ್ಗೆ ನಿವೃತ್ತ ನ್ಯಾಯಾಧೀಶರ ಮೂಲಕ ಕ್ರಮ ಕೈಗೊಳ್ಳಲಾಗುವುದು. ನೂತನ ಖಾಸಗಿ ವಿವಿಗಳಲ್ಲಿ ಶೇ. 50ರಷ್ಟು ಸೀಟುಗಳನ್ನು ಸರಕಾರಕ್ಕೆ ಮೀಸಲಿಡಬೇಕು. ಬೆಂಗಳೂರು ಬಿಬಿಎಂಪಿ ಒಳಗಡೆ ವಿವಿಗಾಗಿ ಕನಿಷ್ಠ 25 ಎಕರೆ, ಬಿಬಿಎಂಪಿ ಹೊರಗಡೆ 50 ಎಕರೆ ಹಾಗೂ ಇತರ ಪ್ರದೇಶಗಳಲ್ಲಿ ವಿವಿಗಳ ಸ್ಥಾಪನೆಗೆ 60 ಎಕರೆ ಭೂಮಿಯನ್ನು ನೀಡಬೇಕು. ಉಪಕುಲಪತಿ ಯುಜಿಸಿ ನಿರ್ದೇಶನದಡಿ ಅರ್ಹತೆಗಳನ್ನು ಹೊಂದಿರಬೇಕು ಎಂಬ ಷರತ್ತಿನೊಂದಿಗೆ ಖಾಸಗಿ ವಿವಿಗಳ ಸ್ಥಾಪನೆಗೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.