Saturday, August 18, 2012

ದ.ಕ. ಜಿಲ್ಲೆಗೆ 'ನಿರ್ಮಲ ಗ್ರಾಮ' ಪುರಸ್ಕಾರ ಪ್ರದಾನ

ಮಂಗಳೂರು,ಆಗಸ್ಟ್.18: ನಿರ್ಮಲ ಭಾರತ ಅಭಿಯಾನದಡಿ ಶೇಕಡ 100 ರಷ್ಟು ಗುರಿಯನ್ನು ಸಾಧಿಸಿರುವ ದೇಶದ ಮೂರು ಜಿಲ್ಲೆಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯೂ ಒಂದಾಗಿದ್ದು, ಇಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ಎಚ್.ಆರ್.ಭಾರದ್ವಾಜ್ ಅವರು 'ನಿರ್ಮಲ ಗ್ರಾಮ' ಪುರಸ್ಕಾರವನ್ನು ಪ್ರದಾನ ಮಾಡಿದರು.
ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ. ಕೆ.ಟಿ.ಶೈಲಜಾ ಭಟ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭವ್ಯ ಗಂಗಾಧರ್, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರಾದ ಕೇಶವ ಭಟ್ ಅವರು ಘನತೆವೆತ್ತ ರಾಜ್ಯಪಾಲರಿಂದ ನಿರ್ಮಲ ಗ್ರಾಮ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭಲ್ಲಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಸ್ಥಳಿಯ ಶಾಸಕರಾದ ರೋಷನ್ ಬೇಗ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ್ ಅವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ ಅವರು ದ.ಕ.ಜಿಲ್ಲೆಯ ಮಂಗಳೂರು ಮತ್ತು ಸುಳ್ಯ ತಾಲೂಕು ಪಂಚಾಯತ್ ಹಾಗೂ ದ.ಕ.ಜಿಲ್ಲೆ ರಾಷ್ಟ್ರಮಟ್ಟದ ನಿರ್ಮಲ ಗ್ರಾಮ ಪುರಸ್ಕಾರ ಪಡೆಯುವುದರ ಮೂಲಕ ಕರ್ನಾಟಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಅಭಿನಂದಿಸಿದರು. ಪ್ರಸ್ಥಾವಿಕವಾಗಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ್ ಅವರು 2011 ನೇ ಸಾಲಿನ ರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲಾ ನಿರ್ಮಲ ಗ್ರಾಮ ಪುರಸ್ಕಾರ ಪಡೆದ 3 ಜಿಲ್ಲೆಗಳಲ್ಲಿ ದ.ಕ. ಜಿಲ್ಲೆಯು ಒಂದಾಗಿರುತ್ತದೆ ಮತ್ತು ರಾಜ್ಯದಲ್ಲಿ ಪ್ರಥಮ ಜಿಲ್ಲೆಯಾಗಿರುತ್ತದೆ ಹಾಗೂ ರಾಷ್ಟ್ರದಲ್ಲಿ 11 ನೇ ಜಿಲ್ಲೆಯಾಗಿರುತ್ತದೆ ಎಂದರು.
ಸಮಾರಂಭದಲ್ಲಿ ಮಾನ್ಯ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರು ದ.ಕ.ಜಿಲ್ಲೆಯ ಸಂಪೂರ್ಣ ಸ್ವಚ್ಛತಾ ಆಂದೋಲನ ಪ್ರಗತಿ, ಯಶೋಗಾಥೆಯನ್ನು ಮತ್ತು ವಿನೂತನ ಮಾದರಿ ಯೋಜನೆಗಳ ಅನುಷ್ಠಾನದ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದರು. ಮಾನ್ಯ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರು ತಾಲೂಕಿನಲ್ಲಿ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಸಹಕರಿಸಿದ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಸ್ವಯಂ ಸೇವಾ ಸಂಘಟನೆಗಳು, ಸಮುದಾಯ, ಎಲ್ಲಾ ಮಾಧ್ಯಮ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದರು.