Thursday, August 30, 2012

ಕಾಲಬದ್ಧ ಸೇವೆಯೇ 'ಸಕಾಲ': ಅಪರ ಜಿಲ್ಲಾಧಿಕಾರಿ

ಮಂಗಳೂರು, ಆಗಸ್ಟ್. 30:-ಬದಲಾವಣೆಯ ಪರ್ವಕಾಲದಲ್ಲಿ ಸಮಾನ ಆಲೋಚನೆಯ ಸುಸಂಸ್ಕೃತಿಯನ್ನು ಬಿತ್ತುವ ಹಾಗೂ ಕಾಲಬದ್ಧ ಸೇವೆಯನ್ನು ನೀಡುವುದೇ 'ಸಕಾಲ' ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ 2011ರ ಉದ್ದೇಶವೆಂದು ಅಪರ ಜಿಲ್ಲಾಧಿಕಾರಿ ದಯಾನಂದ ಕೆ.ಎ. ಇವರು ತಿಳಿಸಿದರು.
ಅವರು ಇಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಾರ್ತಾ ಇಲಾಖೆ, ದಕ್ಷಿಣಕನ್ನಡ ಜಿಲ್ಲಾಡಳಿತ ಹಾಗೂ ತಾಲ್ಲೂಕು ಪಂಚಾಯತ್ ಪುತ್ತೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ, ಸಕಾಲ ಕುರಿತು ಸಂವಾದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಎಲ್ಲರೂ ಸಮಾನರು ಎಂಬ ತತ್ವದಡಿಯ ಜನಸಾಮಾನ್ಯರ ಕೆಲಸ ಆದ್ಯತೆಯಲ್ಲಿ ಸರಣಿ ಪ್ರಕಾರವೇ ನಡೆಯಬೇಕು; ಎಲ್ಲರಿಗೂ ಸಮಾನ ಪ್ರಾತಿನಿಧ್ಯ ಹಾಗೂ ಅವಕಾಶ ನೀಡಬೇಕೆಂಬುದು ಸಕಾಲದ ಉದ್ದೇಶ. ಪ್ರಸಕ್ತ ಸನ್ನಿವೇಶದಲ್ಲಿ ಆಲೋಚನಾ ಶಕ್ತಿಗಳ (ಅಧಿಕಾರಿಗಳ) ಮೇಲೆ ಒತ್ತಡಗಳು ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಆಡಳಿತವನ್ನು ಕಂಪ್ಯೂಟರೀಕೃತ ಗೊಳಿಸುವುದರಿಂದ ವ್ಯವಸ್ಥೆಯಿಂದ ಭೃಷ್ಟಾಚಾರ ನಿರ್ಮೂಲನೆ ಸಾಧ್ಯ ಎಂಬ ಸದುದ್ದೇಶದಿಂದ ಸಕಾಲ ಯೋಜನೆಯನ್ನು ಸರ್ಕಾರ ಆರಂಭಿಸಿದೆ.
ಮಾರ್ಚ್ 1, 2011 ರಲ್ಲಿ ಪುತ್ತೂರಿನಲ್ಲಿ ಪೈಲಟ್ ಯೋಜನೆಯಡಿ ಸಕಾಲ ಯೋಜನೆ ಜಾರಿಗೆ ತರಲಾಗಿತ್ತು. ಪುತ್ತೂರು ತಾಲೂಕಿನಲ್ಲಿ ಇದುವರೆಗೆ ಒಟ್ಟು 67,387 ಅರ್ಜಿಗಳು ಸ್ವೀಕೃತವಾಗಿದ್ದು, 64,417 ಅರ್ಜಿಗಳ ವಿಲೇ ಆಗಿದೆ. ಕೇವಲ 1.76 ಶೇಕಡಾ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆಡಳಿತವನ್ನು ಹಾಗೂ ಅಧಿಕಾರಿಗಳನ್ನು ಸಕಾರಾತ್ಮಕವಾಗಿ ಪರಿಚಯಿಸುವ ಯೋಜನೆಯೂ ಇದಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2,90,803 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದು, 2,70,242 ಅರ್ಜಿಗಳಿಗೆ ಉತ್ತರ ನೀಡಲಾಗಿದೆ. 4756 ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ. ಸಕಾಲದಿಂದ ಕ್ರಾಂತಿ ತಕ್ಷಣಕ್ಕೇ ಆರಂಭವಾಗದಿದ್ದರೂ ಈ ಯೋಜನೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸಲು ಇನ್ನು 2 ರಿಂದ 3 ವರ್ಷಗಳು ಬೇಕಾಗಬಹುದೆಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಈ ಯೋಜನೆಯಡಿ ಅನಕ್ಷರಸ್ಥರ ಪರವಾಗಿ ಅಧಿಕಾರಿಗಳು ಇರುತ್ತಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಹಿತಿ ಹಕ್ಕು ಕಾಯಿದೆಯಷ್ಟೆ ಸಬಲ, ಜನಪರ ಕಾಯಿದೆ ಇದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕಾಯಿದೆಯಡಿ ಬರುವ ಎಲ್ಲ ಇಲಾಖೆಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದೆ ಎಂದು ಸಕಾಲದ ಜಿಲ್ಲಾ ನೋಡಲ್ ಅಧಿಕಾರಿಯೂ ಆಗಿರುವ ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಸಂವಾದದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಭುಭಟ್, ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ 'ಸಕಾಲ'ದ ಪ್ರಯೋಜನವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕೆಂದು ಸಲಹೆ ಮಾಡಿದರು.
ಪುತ್ತೂರು ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪುಲಸ್ತ್ಯ ರೈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಕಾಲ ಸದಾಶಯದ ಯೋಜನೆಯಾಗಿದ್ದು, ಇದರಿಂದ ಜನಸಾಮಾನ್ಯರಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಜಯಾನಂದ ಪೂಜಾರಿ ಮಾತನಾಡಿ ಶುಭ ಹಾರೈಸಿದರು.
ವಾರ್ತಾಧಿಕಾರಿ ಶ್ರೀಮತಿ ರೋಹಿಣಿ.ಕೆ.ಇವರು ಸ್ವಾಗತಿಸಿ ವಂದಿಸಿದರು. ವಾರ್ತಾ ಇಲಾಖೆಯ ಫ್ರಾನ್ಸಿಸ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.