Tuesday, August 7, 2012

'ಆರೋಗ್ಯ ಶಿಕ್ಷಣದಿಂದ ಸದೃಢ ಸಮಾಜ'

ಮಂಗಳೂರು,ಆಗಸ್ಟ್.07: ಸದೃಢ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಉತ್ತಮ ಲಸಿಕೆ ಆರೋಗ್ಯ ಶಿಕ್ಷಣ. ನಮ್ಮ ಮುಂದಿನ ಜನಾಂಗಕ್ಕೆ ಆರೋಗ್ಯ ಶಿಕ್ಷಣವನ್ನು ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗದ ಡಾ. ಅರುಣ್ ಹೇಳಿದರು.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯಇಲಾಖೆ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಕಚೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ವೆನ್ಲಾಕ್ ಆರ್ಎಪಿಸಿಸಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಮಲೇರಿಯಾ ಪ್ರಕರಣಗಳು ಹೆಚ್ಚು ಪತ್ತೆಯಾಗಿದ್ದು, 3,612 ಪ್ರಕರಣಗಳು ನಗರದಲ್ಲಿ ಪತ್ತೆಯಾದರೆ, 3272 ಪ್ರಕರಣಗಳು ಗ್ರಾಮಾಂತರ ಪ್ರದೇಶಗಳಲ್ಲಿ ಪತ್ತೆಯಾಗಿದೆ ಎಂದರು.
ರಾಜ್ಯದಲ್ಲಿ ವರದಿಯಾದ ಮಲೇರಿಯಾ ಪ್ರಕರಣಗಳಲ್ಲಿ ಶೇ.25ರಷ್ಟು ಪ್ರಕರಣಗಳು ಕರಾವಳಿಯಲ್ಲಿಯೇ ವರದಿಯಾಗಿದೆ. ಶೇ. 24 ರಷ್ಟು ಫಾಲ್ಸಿಫಾರ್ಮ ಮಲೇರಿಯಾ ಕರಾವಳಿಯಲ್ಲಿಯೇ ವರದಿಯಾಗಿರುವುದು. ರೋಗ ಹರಡುವಿಕೆ ಮತ್ತು ತಡೆಯ ಬಗ್ಗೆ ಜನಸಾಮಾನ್ಯರ ನಿರ್ಲಕ್ಷ್ಯ ಹಾಗೂ ಅರಿವಿನಿಂದ. ಈ ನಿಟ್ಟಿನಲ್ಲಿ ಎಲ್ಲಾ ಹಂತಗಳಲ್ಲಿಯೂ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ನೀಡಲಾಗುತ್ತಿದ್ದು, ಜನಸ್ಪಂದನೆ ಅಗತ್ಯವಿದೆ ಎಂದರು.
ಮಲೇರಿಯಾ ಹಾಗೂ ಡೆಂಗ್ಯುವಿಗೆ ಸೊಳ್ಳೆ ನಿಯಂತ್ರಣ ಹಾಗೂ ಸೊಳ್ಳೆ ಪರದೆ ಬಳಸುವುದು ಅತ್ಯಂತ ಪರಿಣಾಮಕಾರಿ ಎಂದರು.
ಮಂಗಳೂರಿನ ನಾಲ್ಕು ಮೆಡಿಕಲ್ ಕಾಲೇಜುಗಳು ಮಲೇರಿಯಾಕ್ಕೆ ಉಚಿತ ಚಿಕಿತ್ಸೆ ನೀಡುತ್ತಿದ್ದು, ರೋಗಿಗಳು ಶ್ರೀನಿವಾಸ ಆಸ್ಪತ್ರೆ ಮುಕ್ಕ, ಎ ಜೆ ಆಸ್ಪತ್ರೆ, ಫಾದರ್ ಮುಲ್ಲರ್ಸ್ ಆಸ್ಪತ್ರೆ, ಮತ್ತು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಇದಲ್ಲದೆ ನಗರದ ವೆನ್ ಲಾಕ್ ನಲ್ಲೂ ಮಲೇರಿಯಾಕ್ಕೆ ಚಿಕಿತ್ಸೆ ನೀಡಲಾಗುವುದು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಕೀಟಶಾಸ್ತ್ರಜ್ಞೆ ಶ್ರೀಮತಿ ಮುಕ್ತಾ ಅವರು ಮಾತನಾಡಿ, ರೋಗ ಹರಡುವ ಸೊಳ್ಳೆಗಳು, ಸೊಳ್ಳೆ ಉತ್ಪತ್ತಿಯಾಗಲು ಕಾರಣ, ಸೊಳ್ಳೆಯ ಪ್ರಭಾವ, ರೋಗಗಳನ್ನು ಹರಡುವ ರೀತಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದ ಸಭಾಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರು ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆಯ ಬಳಿಕ ಹತ್ತು ನಿಮಿಷಗಳಷ್ಟು ಕಾಲ ಶುಚಿತ್ವದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ದ.ಕ. ಜಿಲ್ಲೆಯಲ್ಲಿ 1454 ಪ್ರಾಥಮಿಕ ಹಾಗೂ 427 ಪ್ರೌಢ ಶಾಲೆಗಳಿದ್ದು 3.14ಲಕ್ಷ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳೇ ನಮ್ಮ ಆರೋಗ್ಯ ಶಿಕ್ಷಣದ ರಾಯಭಾರಿಗಳು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಓ.ಆರ್.ಶ್ರೀರಂಗಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ವಾರ್ತಾಅಧಿಕಾರಿ ರೋಹಿಣಿ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಮಲೇರಿಯಾ ಪರಿವೀಕ್ಷಕ ಜಯರಾಂ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ವಂದಿಸಿದರು.
ಇಸವಿ ಮಲೇರಿಯಾ ಡೆಂಗ್ಯೂ ಚಿಕೂನ್ ಗುನ್ಯಾ ಆನೆಕಾಲು
2009 5856 422 42 23
2010 7025 253 12 19
2011 6418 144 22
2012 3612 129 02

(ಜುಲೈವರೆಗೆ)