Tuesday, August 31, 2010

'ಮಕ್ಕಳ ಬಾಲ್ಯ ಶಾಲೆಯಲ್ಲೇ ಅರಳಲಿ' ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಕುರಿತ ಸಂವಾದ

ಮಂಗಳೂರು, ಆಗಸ್ಟ್ 31: ಎಲ್ಲ ಮಕ್ಕಳು ಶಾಲೆಗೆ ಬರಬೇಕು; ವಿದ್ಯೆಯಿಂದ ಯಾವುದೇ ಕಾರಣಕ್ಕೂ ಯಾರದೇ ಮಗುವು ವಂಚಿತವಾಗಬಾರದು ಎಂಬ ಘನ ಉದ್ದೇಶದಿಂದ ರೂಪಿತವಾದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಜಿಲ್ಲಾ ಮಟ್ಟದ ಸಮಾವೇಶವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಸಂತೋಷ್ ಕುಮಾರ್ ಭಂಡಾರಿ ಅವರು ಇಂದು ಕೊಡಿಯಾಲ್ ಬೈಲ್ ನ ಡಯಟ್ ಸಭಾಂಗಣದಲ್ಲಿ ಉದ್ಘಾಟಿಸಿದರು.
ಶಿಕ್ಷಣ ಕಾಯ್ದೆ ಕುರಿತ ಪರಿಣಾ ಮಕಾರಿ ಸಂವಾದ ಸಮಾ ವೇಶವನ್ನು ಉದ್ಘಾಟಿಸಿ ಮಾತ ನಾಡಿದ ಸಂತೋಷ್ ಕುಮಾರ್ ಭಂಡಾರಿ ಯವರು, ಶೈಕ್ಷಣಿಕ ನಗರಿ ಎಂದೇ ಪ್ರಸಿದ್ಧ ವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಸಾಕಷ್ಟು ಆದ್ಯತೆ ನೀಡ ಲಾಗಿದೆ. ಸರ್ವ ಶಿಕ್ಷಣ ಅಭಿಯಾ ನದಡಿ ಜಿಲ್ಲೆಯ ಶೈಕ್ಷಣಿಕ ವಲಯಕ್ಕೆ ಸಾಕಷ್ಟು ದುಡ್ಡು ಬಂದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಗುವಿಗೂ ಉತ್ತಮ ಗುಣ ಮಟ್ಟದ ಶಿಕ್ಷಣ ಲಭಿಸಿದಾಗ ಉತ್ತಮ ನಾಗರಿಕ ಸಮಾಜ ನಿರ್ಮಾಣ ದೊಂದಿಗೆ, ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯು ಟಿ ಖಾದರ್ ಅವರು ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣ ಕೈಗಾರಿಕೆ, ಉದ್ಯಮಗಳಿಂದ ಮಾತ್ರ ಸಾಧ್ಯವಿಲ್ಲ ಎಂಬುದನ್ನು ಅರಿತು ಕೊಂಡು ಕೇಂದ್ರ, ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಮ್ಮ ಯುವ ಜನಾಂಗಕ್ಕೆ ಅಗತ್ಯ ವಿರುವ ಶಿಕ್ಷಣ ಕೊಡುವ ನಿಟ್ಟಿನಲ್ಲಿ ರೂಪು ಗೊಂಡ ಕಾಯ್ದೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ನಿವೃತ್ತ ಸಹ ನಿರ್ದೇಶ ಕರಾದ ಹಾಗೂ ಕರಡು ಸಮಿತಿಯ ಸದಸ್ಯ ರಾದ ಜೋಸೆಫ್ ಅವರು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಕುರಿತ ಸಂವಾದದ ಉದ್ದೇಶವನ್ನು ವಿವರಿಸಿ, ಕೆಲಸದ ಆರಂಭ ಯಶ ಕಂಡಿದೆ; ಎಲ್ಲರ ದೃಷ್ಟಿ ಕೋನ ದಿಂದ ಕಾಯಿದೆ ರೂಪು ಗೊಳ್ಳಲಿ ಎಂಬ ಉದ್ದೇಶ ದೊಂದಿಗೆ ಈ ಕಾಯಿದೆ ಕುರಿತ ಸಂವಾದ ವನ್ನು ಎಲ್ಲ ಜಿಲ್ಲೆಗಳಲ್ಲಿ ಹಮ್ಮಿ ಕೊಂಡಿದ್ದು, ಅಧಿ ನಿಯಮವನ್ನು ಪರಿಣಾ ಮಕಾರಿ ಅನುಷ್ಠಾನಕ್ಕೆ ತರಲಾ ಗುವುದು. ಎಲ್ಲ ಮಕ್ಕಳನ್ನು ಮುಖ್ಯ ವಾಹಿನಿಗೆ ಸೇರಿಸಲು ಈ ಯೋಜನೆ ಸಹಕಾರಿ ಎಂದರು. ಜಿಲ್ಲಾ ಪಂಚಾಯತ್ ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಸದಸ್ಯೆ ರಾಜಶ್ರೀ ಹೆಗ್ಡೆ ಅವರು ಮಾತನಾಡಿ, ಉತ್ತಮ ಶಿಕ್ಷಣಕ್ಕೆ ಪೂರಕವಾದ ಎಲ್ಲ ಯೋಜನೆಗಳನ್ನು ಬೆಂಬಲಿಸುವುದಾಗಿ ನುಡಿದರು. ಕಡ್ಡಾಯ ಶಿಕ್ಷಣ ಕಾಯಿದೆ ಖಾಸಗೀಕರಣ, ಜಾಗತೀಕರಣಕ್ಕೆ ಪೂರಕವಾಗದೆ ಗ್ರಾಮ್ಯ ಪ್ರದೇಶದ ಮಕ್ಕಳ ಬೆಳವಣಿಗೆಗೆ ಪೂರಕವಾಗಿರಬೇಕೆಂಬ ಸಂಘಟಿತ ಅಭಿಪ್ರಾಯವನ್ನು ಸಭೆಯಲ್ಲಿರಿಸಿದವರು ರೆನ್ನಿ ಡಿಸೋಜಾ ಅವರು. ಈ ಕಾಯ್ದೆಯ ಬಗ್ಗೆ ಅಭ್ಯಸಿಸಿ, ತಾಲೂಕು ಮಟ್ಟದಲ್ಲಿ ಮಾಡಿದ ಸಭೆಗಳ ಫಲ ಶ್ರುತಿಯನ್ನು ಸಭೆಯ ಮುಂದಿ ಟ್ಟರು. ನೂತನ ಕಾಯಿದೆಯ ಅನುಷ್ಠಾನಕ್ಕೆ ಆಡಳಿತ ಯಂತ್ರದಲ್ಲಿ ಮಾಡಬೇಕಾದ ಬದಲಾವಣೆಯ ಬಗ್ಗೆಯೂ ಅವರು ಗಮನ ಸೆಳೆದರು. ಸಂವಾದದಲ್ಲಿ ಕೊರತೆಗಳು, ಲೋಪದೋಷಗಳ ಬಗ್ಗೆ, ಅಬ್ಜಕ್ಷನ್ಸ್ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಕ್ಯಾಥಲಿಕ್ ಬೋರ್ಡ್ ನ ಫಾದರ್ ವಿಲಿಯಂ, ಎಸ್ ಡಿ ಎಂಸಿ ಅಧ್ಯಕ್ಷರು, ಶಿಕ್ಷಕರು, ಶಿಕ್ಷಣ ತಜ್ಞರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಆಡಳಿತ ವರ್ಗದವರು ಸೇರಿದಂತೆ ಶೈಕ್ಷಣಿಕ ವಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಡಯಾಟ್ ನ ಉಪನಿರ್ದೇಶಕ (ಆಡಳಿತ) ಫಿಲೋಮಿನಾ ಲೋಬೋ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾಂಗ ಉಪನಿರ್ದೇಶಕ ಚಾಮೇಗೌಡ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

Saturday, August 28, 2010

ಸೆಪ್ಟೆಂಬರ್ 10ರಿಂದ ಆಟೋ ಪ್ರಯಾಣ ದರ ಏರಿಕೆ

ಮಂಗಳೂರು, ಆಗಸ್ಟ್ 28: ಸೆಪ್ಟೆಂಬರ್ 10,2010 ರಿಂದ ಮಂಗಳೂರಿನಲ್ಲಿ ಆಟೋರಿಕ್ಷಾಗಳ ಕನಿಷ್ಠದರ 13 ರಿಂದ 15 ರೂಪಾಯಿ ಹಾಗೂ ಕಿಲೋ ಮೀಟರ್ ಗೆ 9 ರಿಂದ 11 ರೂ.ಗಳಿಗೆ ಏರಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಆಟೋರಿಕ್ಷಾ ಚಾಲಕ/ಮಾಲಕರು ಪೆಟ್ರೋಲ್, ಆಯಿಲ್, ಆಟೋರಿಕ್ಷಾ ಮತ್ತು ಆಟೋರಿಕ್ಷಾ ಬಿಡಿ ಭಾಗಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಹೆಚ್ಷಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ವಿಸ್ತೃತ ಚರ್ಚೆ ನಡೆದ ಬಳಿಕ ಆಟೋರಿಕ್ಷಾ ದರ ಹೆಚ್ಚಳಕ್ಕೆ ಜಿಲ್ಲಾಧಿಕಾರಿಗಳು ಸಮ್ಮತಿಸಿದ್ದಾರೆ. ವೈಟಿಂಗ್ ಟೈಮ್ 15 ನಿಮಿಷ ಉಚಿತ ವಾಗಿದ್ದು, ಕನಿಷ್ಠ ದರ ನಿಗದಿ ಸಂದರ್ಭದಲ್ಲಿ ಇದಕ್ಕೆ ಅವಕಾಶ ನೀಡಲಾಗಿಲ್ಲ. 15 ರಿಂದ 45 ನಿಮಿಷ ವೈಟಿಂಗ್ ಟೈಮ್ ನಿಗದಿಪಡಿಸಿದ್ದು, ಈ ಸಂದರ್ಭದಲ್ಲಿ ಆಟೋ ದರದ ಶೇಕಡ 25 ರಷ್ಟು ಜಾಸ್ತಿ ದರವನ್ನು ಪಾವತಿಸಬೇಕು ಎಂದು ಸಭೆ ನಿರ್ಧರಿಸಿತು. ಅಕ್ಟೋಬರ್ ಮೊದಲ ವಾರದೊಳಗೆ ಆಟೋ ಮೀಟರ್ ಬದಲಿಸುವ ಕೆಲಸವನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಮಯ ಮಿತಿ ಹಾಕಿದ್ದಾರೆ ಮತ್ತು ಈ ಅವಧಿಯಲ್ಲಿ ಸಾರ್ವಜನಿಕರಲ್ಲಿ ಗೊಂದಲವಾಗದಂತೆ ಆರ್ ಟಿ ಒ ಅವರು ಒದಗಿಸಿದ ದರ ನಿಗದಿಯ ಕಾರ್ಡು ಪ್ರಯಾಣಿಕರಿಗೆ ತೋರಿಸಿ ದರ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. . ರೈಲ್ಷೇ ಸ್ಟೇಷನ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ನಲ್ಲಿ ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸ ಲಾಗಿದೆ.ರೈಲ್ವೇ ಸ್ಟೇಷನ್ ವ್ಯಾಪ್ತಿ ಕೆನರಾ ಚೇಂಬರ್ಸ್ ಮತ್ತು ಕೆ ಎಸ್ ಆರ್ ಟಿಸಿ ಯನ್ನು ಮಾಜಿ ಸೈನಿಕ ಸಂಘಕ್ಕೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿ ಕಾರಿಗಳು ತಿಳಿಸಿದರು. ಬೆಂಗಳೂರು ಮಾದರಿ ಯಲ್ಲೇ ಕಡ್ಡಾಯ ವಾಗಿ ಎಲ್ಲಾ ಆಟೋಗಳ ಮೇಲೂ ಆಟೋ ಪರ್ಮಿಟ್ ಹಾಗೂ ಚಾಲಕರ ಲೈಸನ್ಸ್ ನಿಂದ ಹಿಡಿದು ಎಲ್ಲ ಮಾಹಿತಿಯನ್ನು ಸಚಿತ್ರ ಸಹಿತ ಹಾಕಿಸಲು ಸಭೆಯಲ್ಲಿ ನಿರ್ಧರಿಸ ಲಾಯಿತು. 2008 ರಲ್ಲಿ ನಿಗದಿಯಾಗಿದ್ದ ದರವನ್ನು ಇಂದಿನ ಸಭೆಯಲ್ಲಿ ಪರಿಷ್ಕರಿ ಸಲಾಗಿದ್ದು, ದರ ಏರಿಕೆ ಬಗ್ಗೆ ಆಟೋ ರಿಕ್ಷಾ ಚಾಲಕರು ಸಂತಸ ವ್ಯಕ್ತ ಪಡಿಸಿದರು. ಸಭೆಯಲ್ಲಿ ಪ್ರಯಾಣಿಕ ರೊಂದಿಗೆ ಆಟೋ ಚಾಲಕರ ವರ್ತನೆ, ಆಟೋಗಳಿಗೆ ಎಲ್ ಪಿಜಿ ಗ್ಯಾಸ್ ಅಳವಡಿಕೆ ಕುರಿತ ಸಮಸ್ಯೆ, ಆಟೋ ಗಳಲ್ಲಿ ಸರಕು ಸಾಗಿಸು ತ್ತಿರುವ ಬಗ್ಗೆ, ಸರ್ಕಾರಿ ಹಾಗೂ ಬ್ಯಾಂಕ್ ನೌಕರರು ಆಟೋ ಹೊಂದಿರುವ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಆಟೋ ಚಾಲಕರು ಪ್ರಯಾಣಿಕ ರೊಂದಿಗೆ ಮತ್ತು ಸಾರ್ವ ಜನಿಕ ರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಭೆಯಲ್ಲಿ ಕೋರ ಲಾಯಿತು. ಪ್ರೀ ಪೇಯ್ಡ್ ಆಟೋ ವ್ಯವಸ್ಥೆಯನ್ನು ಜಾರಿಗೆ ತಂದ ಬಳಿಕ ಕಾನೂನು ಉಲ್ಲಂಘಿಸುವ ಆಟೋ ಚಾಲಕರ ಪರವಾನಿಗೆ ರದ್ದು ಗೊಳಿಸ ಲಾಗುವುದು ಎಂದೂ ಸಭೆಯಲ್ಲಿ ಜಿಲ್ಲಾಧಿ ಕಾರಿಗಳು ಎಚ್ಚರಿಸಿದರು. ಆರ್ ಟಿ ಒ ಸೇವಾ ನಾಯ್ಕ್, ಡಿಸಿಪಿ( ಅಪರಾಧ ಮತ್ತು ಸಂಚಾರ) ಮುತ್ತೂರಾಯ, ವಿವಿಧ ಆಟೋ ಚಾಲಕ ಮತ್ತು ಮಾಲಕ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು, ನಾಗರಿಕ ಹಿತರಕ್ಷಣ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಮತ್ತಿತರು ಸಭೆಯಲ್ಲಿ ಪಾಲ್ಗೊಂಡಿದ್ದರು.

Friday, August 27, 2010

ನಾಗರಿಕ ಸ್ನೇಹಿ ಪೊಲೀಸ್ ವ್ಯವಸ್ಥೆ: ಐಜಿಪಿ ಅಲೋಕ್ ಎಂ.

ಮಂಗಳೂರು,ಆಗಸ್ಟ್ 27:ಕರಾವಳಿ ಪಶ್ಚಿಮವಲಯ ವೈವಿಧ್ಯಮಯ ಪ್ರದೇಶವಾಗಿದ್ದು, ಬಹುಭಾಷೆ, ಬಹುಧರ್ಮಗಳ ಜನರಿದ್ದು ಜನಜೀವನ ಸುಗಮವಾಗಿ ಸಾಗುವಂತೆ ಕಾನೂನಿನ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಿಸುತ್ತದೆ ಎಂದು ಪಶ್ಚಿಮ ವಲಯದ ನೂತನ ಪೊಲೀಸ್ ಮಹಾ ನಿರೀಕ್ಷಕ ಅಲೋಕ್ ಮೋಹನ್ ಹೇಳಿದರು.ಪಶ್ಚಿಮ ವಲಯದ ನೂತನ ಮಹಾ ನಿರೀಕ್ಷಕರಾಗಿ ಮಂಗಳೂ ರಿನಲ್ಲಿ ಅಧಿಕಾರ ಸ್ವೀಕರಿದ ಅವರು ತನ್ನ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿಯನ್ನು ದ್ದೇಶಿಸಿ ಮಾತನಾ ಡುತ್ತಿದ್ದರು. ಪೊಲೀಸರು ಜನತೆಯೊಂದಿಗೆ ಸೌಹಾರ್ದ ಯುತವಾಗಿ ವರ್ತಿಸಲು ಮತ್ತು ಯಾವುದೇ ಜನಪರ ಸಮಸ್ಯೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಲಾಖೆಯನ್ನು ಮುಕ್ತವಾಗಿಸಲು ವ್ಯವಸ್ಥೆ ರೂಪಿಸಲಾಗುವುದು ಎಂದು ಅವರು ಹೇಳಿದರು. ದೂರ ದೃಷ್ಟಿಯನ್ನಿ ರಿಸಿಕೊಂಡು ಕರ್ತವ್ಯ ನಿರ್ವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ಹಾಗೂ ಇಲಾಖೆಯ ಬೆಳವಣಿಗೆ ಮಾಧ್ಯಮಗಳ ಮೂಲಕ ಜನರಿಗೆ ವಿಳಂಬ ವಾಗದಂತೆ ಮಾಹಿತಿ ಒದಗಿಸುವ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಐಜಿಪಿಯವರು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಉತ್ತಮ ವಾಗಿದ್ದು, ಕಾನೂನು ಉಲ್ಲಂಘನೆ ಅಥವಾ ಇನ್ನಿತರ ಯಾವುದೇ ಸಮಾಜ ವಿರೋಧಿ ಚಟುವಟಿ ಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಎ. ಸುಬ್ರಹ್ಮಣ್ಯೇಶ್ವರ ರಾವ್ ಉಪಸ್ಥಿತರಿದ್ದರು.
ಅಲೋಕ್ ಮೋಹನ್IPS: ಅಲೋಕ್ ಮೋಹನ್ 1987ರ ಭಾರತೀಯ ಪೊಲೀಸ್ ಸೇವೆ ಅಧಿಕಾರಿ. 23ವರ್ಷ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಿದ ಅನುಭವ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಮತ್ತು ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಪೊಲೀಸ್ ಪ್ರಧಾನ ಕಾರ್ಯಾಲಯದಲ್ಲಿ ಮತ್ತು ದೆಹಲಿಯ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಪ್ರಧಾನ ಕಾರ್ಯಾಲಯದಲ್ಲಿ ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾಗಿ ಸೇವೆ. ಉಪ ಪೊಲೀಸ್ ಮಹಾ ನಿರೀಕ್ಷಕ ಸಿಐಡಿ ಬೆಂಗಳೂರು. ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಬೆಂಗಳೂರು ನಗರ. ಪೊಲೀಸ್ ಮಹಾನಿರೀಕ್ಷಕ ಬೆಂಗಳೂರು ಮಹಾನಗರ ಕಾರ್ಯಪಡೆ. ಮಹಾನಿರೀಕ್ಷಕ ಅನುಷ್ಠಾನ ಮತ್ತು ಜಾಗೃತ ದಳ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಲ್ಲಾ ಎಸ್ಕಾಂ ಬೆಂಗಳೂರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಮಾಂಡರ್ ಅಂತಾರಾಷ್ಟ್ರೀಯ ಪೊಲೀಸ್ ಕಾರ್ಯಪಡೆ, ಯುನೈಟೆಡ್ ನೇಷನ್ಸ್ ಶಾಂತಿಪಾಲಾ ಕಾರ್ಯಪಡೆ ಬೋಸ್ನಿಯಾ. ಬ್ರಿಟಿಷ್ ಪೊಲೀಸ್ ಜೊತೆ ಕಮಾಂಡೋ ತರಬೇತಿ. ಪ್ರಶಸ್ತಿ: ಎರಡು ಬಾರಿ ಮಹಾನಿರ್ದೇಶಕರ ಪ್ರಶಂಸಾ ಪತ್ರ. ಯುನೈಟೆಡ್ ನೇಷನ್ಸ್ ಶಾಂತಿಪದಕ. ರಾಷ್ಟ್ರಪತಿಯವರ ಪೊಲೀಸ್ ಪದಕ.

Wednesday, August 25, 2010

ಪ್ಲಾಸ್ಟಿಕ್ ಮುಕ್ತ ಪರಿಸರದಿಂದ ಆರೋಗ್ಯವಂತ ಸಮಾಜ

ಮಂಗಳೂರು,ಆಗಸ್ಟ್ 25: ಆರೋಗ್ಯ ಪೂರ್ಣ ಸಮಾಜಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ ಅತ್ಯಗತ್ಯ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಎ ಸಿ ಭಂಡಾರಿ ಹೇಳಿದರು.ಅವರಿಂದು ಇರಾ ಗ್ರಾಮಪಂಚಾಯತ್ ಪರಪ್ಪುವಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಜನಶಿಕ್ಷಣ ಟ್ರಸ್ಟ್ ಹಾಗೂ ಇರಾ ಗ್ರಾಮಪಂಚಾಯತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ 'ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್ ನಿರ್ಮೂಲನೆ' ವಿಷಯದ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸ್ವಚ್ಛತೆ ಎಂಬುದು ನಿರಂತರ ವ್ಯವಸ್ಥೆ ಯಾಗಿದ್ದು, ಇದಕ್ಕೆ ಜನರ ಸಹಕಾರ ಅಗತ್ಯ. ಇರಾ ಗ್ರಾಮ ಪಂಚಾಯತ್ ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ತನ್ನ ವಿಶಿಷ್ಟ ಮಾದರಿ ಗಳಿಂದ ರಾಷ್ಟ್ರದಾ ದ್ಯಂತ ಹೆಸರು ಮಾಡಿದ್ದು, ಈ ಹೆಸರು ಶಾಶ್ವತ ವಾಗಿರ ಬೇಕಾದರೆ ಜಾಗೃತ ಜನರ ಅಗತ್ಯವಿದೆ; ಇಂತಹ ಕಾರ್ಯ ಕ್ರಮಗಳಿಂದ ಅಗತ್ಯ ಸಂದೇಶ ರವಾನೆಯಾಗಿ ಜಾಗೃತಿ ನಿರಂತರ ವಾಗಿರುತ್ತದೆ. ಪ್ಲಾಸ್ಟಿಕ್ ಜನರ ಬದುಕಿಗೆ ಮಾರಕವಾಗಿದ್ದು, ಜನರು ಈ ಬಗ್ಗೆ ತಿಳಿದುಕೊಂಡು ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸಬೇಕೆಂದರು. ಮುಖ್ಯ ಅತಿಥಿಗಳಾಗಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಕೆ.ಚಂದ್ರಹಾಸ ಕರ್ಕೇರಾ ಅವರು, ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಇರಾದ ಇಚ್ಛಾ ಶಕ್ತಿ ನಿರಂತರವಾಗಿ ಮುಂದುವರಿಯಲಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಡಿ ಶೆಟ್ಟಿ ಅವರು, ಸುಜ್ಞಾನದಿಂದ ಮಾತ್ರ ನಮ್ಮ ಉಳಿವು; ದೇವರು ನಿರ್ಮಿಸಿದ ರಾಜ್ಯವನ್ನು ಪ್ಲಾಸ್ಟಿಕ್ ನಂತಹ ಮಾರಕಾಸುರನ ಕೈಯ್ಯಿಂದ ಮುಕ್ತ ಗೊಳಿಸುವ ಅಗತ್ಯದ ಬಗ್ಗೆ ಬೆಳಕು ಚೆಲ್ಲಿದರು. ವಾರ್ತಾ ಧಿಕಾರಿ ರೋಹಿಣಿ ಪ್ರಾಸ್ತಾವಿಕ ನುಡಿಗಳ ನ್ನಾಡಿದರು.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೇಮು ಪೂಜಾರಿ ಮಾತ ನಾಡಿದರು. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಅಬ್ದುಲ್ ರಝಾಕ್ ಅಧ್ಯಕ್ಷೀಯ ಭಾಷಣ ಗೈದರು. ಶ್ರೀ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಸಂಯೋಜಕ ವರದರಾಜ್, ಶಾಲಾ ಭಿವೃದ್ಧಿ ಸಮಿತಿ ಅಧ್ಯಕ್ಷ ಮೊಯ್ದಿನ್ ಕುಂಞ, ಶಾಲಾ ಮುಖ್ಯೋಪಾಧ್ಯಾಯರಾದ ರೋಹಿಣಿ ಎನ್ ಉಪಸ್ಥಿತರಿದ್ದರು. ಜನಶಿಕ್ಷಣ ಟ್ರಸ್ಟ್ ನ ಸಂತೋಷ್ ಉಪನ್ಯಾಸ ನೀಡಿದರು. ಇಲಾಖೆಯ ಸಿನಿ ಚಾಲಕ ಫ್ರಾನ್ಸಿಸ್ ಲೂಯಿಸ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ವಂದಿಸಿದರು. ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಗಣೇಶಪುರ ಗಿರೀಶ್ ನಾವಡ ತಂಡದಿಂದ ನಾಟಕ ಪ್ರದರ್ಶನ ನಡೆಯಿತು.

Tuesday, August 24, 2010

ಮಂಗಳೂರಿನಲ್ಲಿ ಮುಖ್ಯಮಂತ್ರಿಗೆ ರಕ್ಷಾ ಬಂಧನ

ಮಂಗಳೂರು,ಆಗಸ್ಟ್ 24: ಇಂದು ಮುಂಜಾನೆ ನಗರದ ಸಂಘನಿಕೇತನದಲ್ಲಿ ನಡೆದ ರಕ್ಷಾಬಂಧನ ಸಮಾ ರಂಭದಲ್ಲಿ ಪಾಲ್ಗೊಂಡರು.


ನಗ ರದ ರೋಮನ್ ಅಂಡ್ ಕ್ಯಾಥ ರೀನ್ ಶಾಲೆಯ ಅಂಧ ಮಕ್ಕಳು ಸೇರಿ ದಂತೆ ಅನೇಕರು ಮುಖ್ಯ ಮಂತ್ರಿ ಗಳಿಗೆ ರಕ್ಷೆ ಯನ್ನು ಕಟ್ಟಿದರು. ಜಿಲ್ಲಾ ಉಸ್ತು ವರಿ ಸಚಿವ ರಾದ ಕೃಷ್ಣ ಜೆ. ಪಾಲೇ ಮಾರ್, ಶಾಸಕ ಯೋಗೀಶ್ ಭಟ್, ಕ್ಯಾ. ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ರಜನಿ ದುಗ್ಗಣ್ಣ ಕಾರ್ಯ ಕ್ರಮ ದಲ್ಲಿ ಪಾಲ್ಗೊಂ ಡಿದ್ದರು. ನಿನ್ನೆ ರಾತ್ರಿ ಪೊಳಲಿ ಶ್ರೀ ರಾಜ ರಾಜೇಶ್ವರಿ ದೇವಾ ಲಯಕ್ಕೆ ಭೇಟಿ ನೀಡಿದ ಮುಖ್ಯ ಮಂತ್ರಿ ಬಿ.ಎಸ್. ಯಡಿ ಯೂರಪ್ಪ ನವರು ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ದ. ಕ ಅಭಿವೃದ್ಧಿಗೆ ಸಾವಿರ ಕೋಟಿ ರೂ.: ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಆಗಸ್ಟ್ 24: ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಲು ಜಿಲ್ಲೆಯ ಅಭಿವೃದ್ಧಿಗೆ ಸಾವಿರ ಕೋಟಿ ರೂ.ಗಳನ್ನು ನೀಡಲಾಗುವುದು. ಮುಂದಿನ ಮೂರು ವರ್ಷ ಅಭಿವೃದ್ಧಿ ಕಾರ್ಯಕ್ಕೆ ಹಣದ ತೊಡಕಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.

ಅವರಿಂದು ಜಿಲ್ಲೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಂಟ್ವಾಳ ಸಭಾಭವನದಲ್ಲಿ ಏರ್ಪಡಿಸಿದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾ ಡುತ್ತಿದ್ದರು. ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರಲ್ಲದೆ ಸ್ಥಳೀಯ ಶಾಸಕರ ಬೇಡಿಕೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಅಗತ್ಯಕ್ಕನುಸಾರ ಹಣ ಹಾಗೂ ನೆರವು ಯೋಜನೆಗಳನ್ನು ಪ್ರಕಟಿಸಿದರು.
ಜಿಲ್ಲೆಯ ಕಾಲು ಸಂಕ ನಿರ್ಮಾಣಕ್ಕೆ ಐದು ಕೋಟಿ ನೆರವು ಪ್ರಕಟಿಸಿದ ಮುಖ್ಯಮಂತ್ರಿಗಳು, ಬಂಟ್ವಾಳ-ಬೆಳ್ತಂಗಡಿಗೆ ಕುಡಿಯುವ ನೀರಿಗಾಗಿ ಚೆಕ್ ಡ್ಯಾಮ್ ನಿರ್ಮಾಣ ಯೋಜನೆ ರೂಪಿಸಲು ಹೇಳಿದರು. ಮುಂದಿನ ವರ್ಷ ಕಾಲ ರಾಜ್ಯದಲ್ಲಿ ವಿದ್ಯುತ್ ಅಭಾವ ನೀಗಿಸಲು ನಿರಂತರ 1,000 ಮೆಗಾವ್ಯಾಟ್ ವಿದ್ಯುತ್ ಖರೀದಿಸುವುದಾಗಿ ಹೇಳಿದ ಅವರು, ದೂರಾಲೋಚನೆ ಇಲ್ಲದ ಯೋಜನೆಗಳಿಂದ ರಾಜ್ಯ ಇಂದು ವಿದ್ಯುತ್ ಅಭಾವ ಎದುರಿಸುತ್ತಿದೆ ಎಂದರು. ಈಗಾಗಲೇ ರಾಜ್ಯದಲ್ಲಿ 13,000 ಮೆವ್ಯಾ ವಿದ್ಯುತ್ ಉತ್ಪಾದನೆಗೆ ರಾಜ್ಯ ಸನ್ನದ್ಧವಾಗಿದೆ. ಮುಂದಿನ ಮೂರು ವರ್ಷದಲ್ಲ 5,000 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುವುದು ಎಂದರು. ಬಂಟ್ವಾಳ ತಾಲೂಕೊಂದರಲ್ಲೇ 37,211 ಫಲಾನುಭವಿಗಳು ರಾಜ್ಯ ಸರ್ಕಾರ ರೂಪಿಸಿದ ವಿವಿಧ ಯೋಜನೆಗಳ ನೆರವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ 9ಲಕ್ಷ ಹೆಣ್ಣು ಮಕ್ಕಳು ಸೇರ್ಪಡೆಗೊಳಿಸಲಾಗಿದೆ. ಈ ಯೋಜನೆ ವ್ಯಾಪ್ತಿಗೆ ಬರುವ ಅಮ್ಮ ಮಗುವಿಗೆ ಆರೋಗ್ಯ ಕಾರ್ಡ್ ನೀಡುವ ಬಗ್ಗೆಯೂ ಯೋಜನೆ ರೂಪಿಸಿದೆ ಎಂದರು.ತಾಲೂಕು ಆಸ್ಪತ್ರೆಯ ಟ್ರೌಮಾ ಕೇಂದ್ರ, ಅಗ್ನಿ ಶಾಮಕ ಠಾಣೆ, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ, ಮಂಗಳೂರು ವಿದ್ಯುತ್ ಕಂಪೆನಿ ನಿಯಮಿತ ಇದರ ವಿಭಾಗೀಯ ಕಾರ್ಯಾಲಯ, ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ವಾಮದ ಪದವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಯ ಬಳಿಕ ಶಿಕಾರಿ ಪುರವನ್ನು ಸ್ಮರಿಸಿದ ಮುಖ್ಯ ಮಂತ್ರಿಗಳು, ವಾಮದಪದವು ಅಂತಹ ಆತ್ಮೀಯ ತೆಯನ್ನು, ಇಲ್ಲಿನ ಆಸ್ಪತ್ರೆ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ ಯಾಗಿರುವು ದಾಗಿಯೂ ತುಂಬು ಹೃದಯದಿಂದ ನುಡಿದರು. ಆಸ್ಪತ್ರೆಯ ಪೀಠೋ ಪಕರಣಕ್ಕೆ ತಕ್ಷಣವೇ 10 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ಇನ್ನೂ ನನಸಾಗದ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು ಕುಗ್ರಾಮಗಳ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವುದಾಗಿ ನುಡಿದರು. ಹೈನು ಗಾರಿಕೆಯಲ್ಲಿ ಗುಜರಾತ್ ನಂತರ ನಮ್ಮ ರಾಜ್ಯವಿದ್ದು, ರಾಜ್ಯವನ್ನು ಪ್ರಥಮ ಸ್ಥಾನಕ್ಕೊಯ್ಯಲು ಪೂರಕ ನೆರವು ಹಾಗೂ ಪ್ರೋತ್ಸಾಹ ಹೈನುಗಾರಿಕೆಗೆ ನೀಡುವು ದಾಗಿ ಹೇಳಿದರು. ಅಧ್ಯಕ್ಷತೆ ಸ್ಥಳೀಯ ಶಾಸಕ ರಮಾನಾಥ ರೈ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ,ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯೋಗೀಶ್ ಭಟ್, ಯು ಟಿ ಖಾದರ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ, ತಾ.ಪಂ. ಅಧ್ಯಕ್ಷ ಬಾಬು ಎಂ, ಉಪಾಧ್ಯಕ್ಷ ಚಂದ್ರಹಾಸ ಕರ್ಕೆರಾ, ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗೋವಿಂದ ಪ್ರಭು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Monday, August 23, 2010

ಮಂಗಳೂರು ನಗರದಲ್ಲಿ 54 ಕೋಟಿ ರೂ.ಗಳ 10 ಯೋಜನೆಗಳಿಗೆ ಚಾಲನೆ

ಮಂಗಳೂರು,ಆಗಸ್ಟ್ 23:ಮಂಗಳೂರಿನಲ್ಲಿ ಸುಮಾರು 54 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು,
ಕದ್ರಿ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ರೂ., ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ದುರಸ್ತಿಗೆ 50 ಲಕ್ಷ ರೂ., ಮಂಗಳಾ ಕ್ರೀಡಾಂ ಗಣಕ್ಕೆ ಸಿಂಥೆಟಿಕ್ ಟ್ರಾಕ್ ರಚನೆಗೆ 2 ಕೋಟಿ ರೂ., ಮಂಜೂರು ಮಾಡಲಾಗಿದೆ. ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ 6 ಕೋಟಿ ರೂ., ಕಮಿಷ ನರೇಟ್ ಕಚೇರಿ ಕಟ್ಟಡಕ್ಕೆ 3 ಕೋಟಿ ರೂ.ಬಿಡುಗಡೆ ಮಾಡುವುದಾಗಿ ಮುಖ್ಯ ಮಂತ್ರಿಗಳು ಪ್ರಕಟಿ ಸಿದರು. ನಗರದ ಕಾರ್ಯ ಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿರಾದ ಕೃಷ್ಣ ಪಾಲೆಮಾರ್, ಶಾಸಕರಾದ ಎನ್.ಯೋಗೀಶ್ ಭಟ್, ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್, ಮಲ್ಲಿಕಾ ಪ್ರಸಾದ್,ಮೇಯರ್ ರಜನಿ ದುಗ್ಗಣ್ಣ, ಕ್ಯಾ. ಗಣೇಶ್ ಕಾರ್ಣಿಕ್, ಕೋಟಾ ಶ್ರೀನಿ ವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ನಾಗ ರಾಜ್ ಶೆಟ್ಟಿ,ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಡಿಜಿಪಿ ಅಜಯ್ ಕುಮಾರ್ ಸಿಂಗ್,ಐಜಿಪಿ ಗೋಪಾಲ್ ಬಿ.ಹೊಸೂರು,ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಎಸ್ ಪಿ ಡಿಕೆ ಡಾ. ಸುಬ್ರಹ್ಮ ಣ್ಯೇಶ್ವರ ರಾವ್, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಪಾಲಿಕೆ ಆಯುಕ್ತ ಡಾ. ವಿಜಯಪ್ರಕಾಶ್, ಸಿಇಒ ಪಿ.ಶಿವಶಂಕರ್ ಮತ್ತಿತರ ಗಣ್ಯರು ಪಾಲ್ಗೊಂ ಡಿದ್ದರು.

ರಾಜ್ಯಕ್ಕೆ ಮಾದರಿ ಮಂಗಳೂರಿನ ಮನೆಗಳು: ಸಿ ಎಂ

ಮಂಗಳೂರು,ಆಗಸ್ಟ್ 23:ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ದಿಗೆ ಸರ್ಕಾರ ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದು,ಇದಕ್ಕಾಗಿ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನತೆ ಇದರ ಲಾಭ ಪಡೆಯಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಹೇಳಿದ್ದಾರೆ.
ವಿವಿಧ ಅಭಿವೃದ್ದಿ ಕಾರ್ಯ ಕ್ರಮಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮುಖ್ಯ ಮಂತ್ರಿಗಳು ನಗರದ ಉರ್ವ ಮಾರುಕಟ್ಟೆ ಬಳಿ ಪಾಲಿಕೆ ವತಿಯಿಂದ ಪರಿಶಿಷ್ಟ ಪಂಗಡದ ಶೇಕಡ 22.75 ರ ಅನುದಾನದಲ್ಲಿ ನಿರ್ಮಿಸಿರುವ 21 ನೂತನ ಮನೆಗಳ ಹಸ್ತಾಂತರ ಮತ್ತು ಮಲೆನಾಡು ಪ್ರದೇಶಾ ಭಿವೃದ್ದಿ ಅನುದಾನದಲ್ಲಿ ನಿರ್ಮಾಣ ಗೊಂಡಿರುವ ನೂತನ ಸಭಾ ಭವನವನ್ನು ಉದ್ಘಾಟಿಸಿ ಮಾತ ನಾಡಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ದಿಗಾಗಿ ನಗರಾಭಿವೃದ್ಧಿಗೆ ನೀಡಿದ 100 ಕೋಟಿ ರೂಪಾಯಿಗಳಲ್ಲಿ 5ಕೋಟಿ ರೂಪಾಯಿಯನ್ನು ಮುಂದಿನ ಸಾಲಿನಲ್ಲಿ ಮೀಸಲಿಡಬೇಕೆಂದು ಸಿ ಎಂ ನುಡಿದರು.ಸಮಾ ರಂಭದಲ್ಲಿ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ,ಜಿಲ್ಲಾ ಉಸ್ತುವರಿ ಸಚಿವ ಕೃಷ್ಣಾ ಜೆ.ಪಾಲೇಮಾರ್,ಮಂಗಳೂರು ಮೇಯರ್ ರಜನಿ ದುಗ್ಗಣ್ಣ,ಶಾಸಕ ಎನ್ ಯೋಗಿಶ್ ಭಟ್,ಸಂಸದ ನಳೀನ್ ಕುಮಾರ್ ಕಟೀಲ್,ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್,ಪಾಲಿಕೆ ಸದಸ್ಯರುಗಳು,ಅಧಿಕಾರಿಗಳು ಮತ್ತಿರರ ಗಣ್ಯರು ಸಮಾ ರಂಭದಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಗಳು ರಾಜ್ಯದ ಕೈಗಾರಿಕೆ ಮತ್ತು ರೈತರಿಗೆ ಅಗತ್ಯವಾಗಿ ಬೇಕಾಗಿರುವ ವಿದ್ಯುತ್ತನ್ನು ನೀಡಲು ಸರ್ಕಾರ ಬದ್ದವಾಗಿದೆ.ಇತರ ವಿವಿಧ ಮೂಲಗಳಿಂದ ವಿದ್ಯುತ್ತನ್ನು ಖರೀದಿಸಿ ನೀಡಲು ಕ್ರಮ ಕೈ ಗೊಳ್ಳಲಾಗಿದೆ ಎಂದರು.ಕುಡುಪು ದೇವಾಲಯದ ಅಭಿವೃದ್ದಿಗೆ ಒಂದು ಕೋಟಿಯನ್ನು ಬಿಡುಗಡೆ ಆದೇಶವನ್ನು ತಂದಿದ್ದು, ತಕ್ಷಣ ಕಾಮಾಗಾರಿಯನ್ನು ಆರಂಭಿಸಲು ಸೂಚಿಸ ಲಾಗಿದೆ.ಜನತೆಯ ಹಿತಕ್ಕಾಗಿ ಅಧಿಕಾರದ ಸದ್ಬಳಕೆ ಮಾಡುತ್ತಿದ್ದು,ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ ಎಂದರು.

Friday, August 20, 2010

ಬಡವರಿಗೆ ನೆರವಾಗಿ: ಅಧಿಕಾರಿಗಳಿಗೆ ಜಿ.ಪಂ ಅಧ್ಯಕ್ಷರ ಕರೆ

ಮಂಗಳೂರು, ಆಗಸ್ಟ್ 20: ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗದವರಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ನೆರವಾಗಲು ಕಾನೂನು ಮೀರಿ ಅಧಿಕಾರಿಗಳು ಸ್ಪಂದಿಸಿ ಪ್ರೋತ್ಸಾಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು ಹೇಳಿದರು.
ಅವರಿಂದು ತಾಲೂಕು ಪಂಚಾಯತ್ ಮಂಗಳೂರು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ್ ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸ್ ಅವರ 95 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ರಾಜಕೀಯ ಜೀವನವಿರುವುದು ಸಮಾಜ ಸೇವೆ ಮಾಡಲು ಎಂಬುದನ್ನು ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸ್ ಅವರು ತೋರಿಸಿ ಕೊಟ್ಟಿದ್ದಾರೆ. ತಮ್ಮ 30 ವರ್ಷದ ರಾಜಕೀಯ ಜೀವನಕ್ಕೆ ಸ್ಫೂರ್ತಿ ಅವರು ಎಂದ ಅಧ್ಯಕ್ಷರು, ಭೂ ಸುಧಾರಣೆ ಕಾಯಿದೆ ಜಾರಿಗೆ ತಂದು ಉಳುವ ವನನ್ನು ಭೂಮಿಗೆ ಒಡೆಯನಾಗಿ ಮಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದರು. ನಮ್ಮ ರಾಜ್ಯ ಈ ನಿಟ್ಟಿನಲ್ಲಿ ದೇಶಕ್ಕೆ ಮಾದರಿ ಯಾಗಿದೆ ಎಂದ ಅವರು, ಜನಪರ, ಹಿಂದುಳಿದ ವರ್ಗದ ಅಭಿವೃದ್ಧಿಗೆ ಅರಸ್ ಅವರು ಹಾಕಿದ ಯೋಜನೆಗಳೇ ಇಂದಿನ ಮುಖ್ಯ ಮಂತ್ರಿಗಳಿಗೂ ಮಾದರಿ. ವೃದ್ಧಾಪ್ಯ ವೇತನ, ವಿಧವಾ ವೇತನದಂತಹ ಕಾರ್ಯಕ್ರಮಗಳನ್ನು ನೀಡಿದ ಅರಸ್ ಅವರು, ಬಿಸಿಎಂ ಹಾಸ್ಟೆಲ್ ಗಳ ಮುಖಾಂತರ ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸಲು ನೀಡಿದ ಕೊಡುಗೆ ಅನನ್ಯ ಎಂದರು. ಇಂದು ರಾಜ್ಯ ಸರ್ಕಾರ ಇದೇ ಮಾದರಿಯನ್ನು ಮುಂದಿಟ್ಟು ಹಲವು ಯೋಜನೆಗಳನ್ನು ರೂಪಿಸಿದೆ. ಸರ್ವ ಶಿಕ್ಷಣ ಅಭಿಯಾನದಡಿ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 30 ಕೋಟಿ ರೂ. ಬಿಡುಗಡೆಯಾಗಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ನಿಗಮದಲ್ಲೂ ಸಾಕಷ್ಟು ಅನುದಾನವಿದ್ದು, ಮಕ್ಕಳಿಗೆ ಸೌಲಭ್ಯ ದೊರಕಿಸಲು ಶಿಕ್ಷಕರು ಆಸಕ್ತಿ ವಹಿಸಬೇಕು ಎಂದರು. ಇಂದು ನಡೆದ ಸಮಾರಂಭದಲ್ಲಿ ಬಿಸಿಎಂ ಹಾಸ್ಟೆಲ್ ನಲ್ಲಿ 32 ವರ್ಷ ಅಡುಗೆ ಮಾಡಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜಯಂತಿ ಅವರನ್ನು ಸನ್ಮಾನಿಸಲಾಯಿತು. ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ದೇವರಾಜ್ ಸಿ ಪಿ ಮತ್ತು ನಾರಾಯಣ ಎಂ ಎಸ್ ಅವರು ಪರೀಕ್ಷೆ ಕಾರಣ ಗೈರು ಹಾಜರಾಗಿದ್ದು, ಡಿ ಎಡ್ ನಲ್ಲಿ ಶೇ. 86.5 ಅಂಕಗಳಿಸಿದ್ದ ಸಂದೇಶ್ ಎಚ್ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ, ನಿಗಮದಿಂದ ಮೂವರು ಫಲಾನು ಭವಿಗಳಿಗೆ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಮಂಗಳೂರು ತಾಲೂಕಿನ ವಿದ್ಯಾರ್ಥಿಗಳಿಗೆ 8 ಲಕ್ಷ ರೂ., ಅನುದಾನ ದೊರಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 56 ವಿದ್ಯಾರ್ಥಿ ನಿಲಯಗಳಿದ್ದು, 5,015 ವಿದ್ಯಾರ್ಥಿಗಳಿದ್ದಾರೆ. 7 ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 1,450 ವಿದ್ಯಾರ್ಥಿ ಗಳಿದ್ದಾರೆ. ಕಳೆದ ಸಾಲಿನಲ್ಲಿ 20,000 ವಿದ್ಯಾರ್ಥಿಗಳಿಗೆ 69 ಲಕ್ಷ ರೂ. ವಿದ್ಯಾರ್ಥಿ ವೇತನ ಹಾಗೂ 23,303 ವಿದ್ಯಾರ್ಥಿಗಳಿಗೆ ಒಂದು ಕೋಟಿ 38ಲಕ್ಷ ರೂ. ಶುಲ್ಕ ವಿನಾಯಿತಿಯನ್ನು ನೀಡಲಾಗಿದೆ ಎಂದು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿಸ್ತರಣಾಧಿಕಾರಿ ಸಿ.ಎಚ್. ರಾಮು ಅವರು ಮಾಹಿತಿ ನೀಡಿದರು.
ಸಮಾರಂಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಮಚಂದ್ರಕುಂಪಲ, ಉಪಾಧ್ಯಕ್ಷರಾದ ಶ್ರೀಯಾಳ ಜೆ. ಹೆಗ್ಡೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ, ಮಾಜಿ ಅಧ್ಯಕ್ಷ ಗೋಕುಲ್ ದಾಸ್ ಶೆಟ್ಟಿ, ಸದಸ್ಯ ಮಹಮದ್ ಸಿರಾಜ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಎಸ್. ಎಸ್. ಕಾಳೆ, ಉಪಸ್ಥಿತರಿದ್ದರು.ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ್ ಪೂಜಾರಿ ಸ್ವಾಗತಿಸಿದರು. ಹೇಮಂತ ಕಾರ್ಯಕ್ರಮ ನಿರ್ವಹಿಸಿದರು.

Thursday, August 19, 2010

ವಿದ್ಯಾರ್ಥಿ ಕುಂದುಕೊರತೆ ನಿವಾರಣಾ ಘಟಕ: ಕುಲಪತಿ ಪ್ರೊ.ಟಿ.ಸಿ.ಶಿವಶಂಕರ್ ಮೂರ್ತಿ

ಮಂಗಳೂರು, ಆಗಸ್ಟ್ 19:ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಕುಂದುಕೊರತೆ ನಿವಾರಣಾ ಘಟಕವನ್ನು ಸ್ಥಾಪಿಸುವುದಾಗಿ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ್ ಮೂರ್ತಿ ಹೇಳಿದ್ದಾರೆ.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಗುರುವಾರ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಈಗ ಇರುವ ಘಟಕವನ್ನು ಪುನರ್ ರಚಿಸಿ ಅದಕ್ಕೆ ಖಚಿತ ಅಧಿಕಾರಗಳನ್ನು ನೀಡ ಲಾಗುವುದು. ಪ್ರಸ್ತಾವಿತ ಘಟಕವನ್ನು ಮುಂದಿನ ಮೂರು ತಿಂಗಳೊಳಗೆ ಸ್ಥಾಪಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳು ಘಟಕದಲ್ಲಿ ವಿಶ್ವಾಸ ವ್ಯಕ್ತಪಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸ ಲಾಗುವುದು ಎಂದು ಕುಲಪತಿಗಳು ತಿಳಿಸಿದರು.ತಾನು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉಪನ್ಯಾಸಕರಿಂದ ಲೈಂಗಿಕ ಕಿರುಕುಳ ಕುರಿತಂತೆ ಒಂದು ಲಿಖಿತ ದೂರು ಬಂದಿರುತ್ತದೆ. ಅದರ ಕುರಿತು ತನಿಖೆ ನಡೆಯುತ್ತಿದೆ. ಪ್ರಾಧ್ಯಾಪಕರನ್ನು ಈಗಾಗಲೇ ಅಮಾನತು ಗೊಳಿಸಲಾಗಿರುತ್ತದೆ ಎಂದು ಪ್ರೊ. ಮೂರ್ತಿ ನುಡಿದರು.
ಪರೀಕ್ಷಾ ಪ್ರಕ್ರಿಯೆಗಳ ಗಣಕೀಕರಣ: ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಶೀಘ್ರ ಮತ್ತು ದೋಷ ರಹಿತವಾಗಿ ಪ್ರಕಟಿಸಲು ಗಣಕೀಕರಣ ಮಾಡಲಾಗಿದೆ. ಇದರಿಂದ ವೃಥಾ ವಿಳಂಬವನ್ನು ತಪ್ಪಿಸಿ ಸುಮಾರು ಎರಡು ತಿಂಗಳು ಮುಂಚಿತವಾಗಿ ಫಲಿತಾಂಶ ಗಳನ್ನು ಪ್ರಕಟಿಸ ಲಾಗಿರುತ್ತದೆ ಮತ್ತು ಸ್ನಾತಕೋತ್ತರ ಪದವೀಧರರಿಗೆ ಟ್ಯಾಂಪರ್ ಪ್ರೂಫ್ ಪದವಿ ಪ್ರಮಾಣ ಪತ್ರಗಳನ್ನು ನೀಡಲು ಆರಂಭಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಸ್ನಾತಕ ಪದವೀಧರರಿಗೂ ವಿಸ್ತರಿಸ ಲಾಗುವುದು ಎಂದು ಹೇಳಿದರು.
ಅವ್ಯವಹಾರ ಕುರಿತ ತನಿಖೆ: ಅ.2008ರ ಬಿಬಿಎಂ ಪರೀಕ್ಷೆಯ ಟ್ಯಾಬುಲೇಶನ್ನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣಾ ಅಧಿಕಾರಿಗಳನ್ನು ನೇಮಕ ಮಾಡಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಅವ್ಯವಹಾರ ನಡೆದಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಗೊಳಿಸಿ ಹಾಗೂ ಅವರಿಗೆ ಈಗಾಗಲೇ ನೀಡಲ್ಪಟ್ಟಿರುವ ಅಂಕಪಟ್ಟಿಯನ್ನು ಹಿಂದಕ್ಕೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಕುಲಪತಿಗಳು ವಿವರಿಸಿದರು.
2008ರ ಅಕ್ಟೋಬರ್ - ನವೆಂಬರ್ ನಲ್ಲಿ ಎಲ್ಎಲ್ಬಿ ಪರೀಕ್ಷಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು, ಆರೋಪಿ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ. ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದಾವೆ ಕೂಡಾ ಹೂಡಲಾಗಿದೆ ಎಂದು ಪ್ರೊ.ಟಿ.ಸಿ. ಶಿವಶಂಕರಮೂರ್ತಿ ತಿಳಿಸಿದರು.ವಿಶ್ವ ವಿದ್ಯಾ ಲಯದ ಗುಣಮಟ್ಟ ವೃದ್ಧಿಸುವ ದಿಸೆಯಲ್ಲಿ ಮತ್ತು ನಿರ್ಧಾರ ಗಳನ್ನು ಎಲ್ಲಾ ಇಲಾಖೆಗಳ ಮುಖ್ಯಸ್ಥರಲ್ಲಿ ಹಂಚಿ ಕೊಳ್ಳುವ ಸಲುವಾಗಿ ಮೈಸೂರು ಮಾದರಿ ಯಂತೆ ಸ್ನಾತಕೋತ್ತರ ಮಂಡಳಿ ಯನ್ನು ರಚಿಸ ಲಾಗಿರುತ್ತದೆ. ಎಲ್ಲಾ ವಿಭಾಗಗಳ ಹಿರಿಯ ಪ್ರಾಧ್ಯಾಪಕರು ಅಧ್ಯಯನ ಮತ್ತು ಪರೀಕ್ಷಾ ಮಂಡಳಿಗಳ ಅಧ್ಯಕ್ಷರು ಹಾಗೂ ವಿವಿಯ ಶಾಸನ ಬದ್ಧ ಅಧಿಕಾರಿಗಳು ಮಂಡಳಿ ಯಲ್ಲಿರುತ್ತಾರೆ ಎಂದು ಅವರು ತಿಳಿಸಿದರು.
ಅನುದಾನ ಅಗತ್ಯ: ರಾಜ್ಯದ ಇತರ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ಮಂಗಳೂರು ವಿಶ್ವವಿದ್ಯಾನಿಲಯದ ಬೆಳವಣಿಗೆ ಏನೇನೂ ಸಾಲದು. ಹಿಂದುಳಿಯಲು ಅನುದಾನದ ಕೊರತೆಯೇ ಕಾರಣ. 1980 ರಲ್ಲಿ ಸ್ಥಾಪನೆಗೊಂಡ ಗುಲ್ಬರ್ಗಾ ಮತ್ತು ಮಂಗಳೂರು ವಿವಿಗಳು ಬೆಳ್ಳಿಹಬ್ಬ ದಾಟಿ ಮುನ್ನಡೆದಿವೆ. ಈ ಮಧ್ಯೆ ಗುಲ್ಬರ್ಗ ವಿವಿಗೆ ವಿಶೇಷ ಅನುದಾನ ಲಭಿಸಿದ್ದು, ಅದರಿಂದ ಒಂದಷ್ಟು ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಸರಕಾರ, ಜನಪ್ರತಿನಿಧಿಗಳು ಈ ದಿಸೆಯಲ್ಲಿ ಸಹಕರಿಸ ಬೇಕಾಗಿದೆ ಎಂದು ಮನವಿ ಮಾಡಿದ ಅವರು, ಮುಖ್ಯಮಂತ್ರಿಗಳು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುವುದಾಗಿ ತಿಳಿಸಿರುವರೆಂದರು.
ನ್ಯಾಕ್ ಮಾನ್ಯತೆ: ವಿಶ್ವವಿದ್ಯಾನಿಲಯವನ್ನು ನ್ಯಾಕ್ ಮರು ಮೌಲ್ಯಮಾಪನಕ್ಕೆ ಒಳಪಡಿಸುವ ಪ್ರಕ್ರಿಯೆಯನ್ನು ಶೀಘ್ರವೇ ಕೈಗೆತ್ತಿ ಕೊಳ್ಳಲಾಗುವುದು. ಅದಕ್ಕಾಗಿ ವಿವಿ ಮತ್ತು ಘಟಕ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ- ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡ ಬೇಕಾಗಿದೆ. ಅನುಮತಿ ಕೋರಿ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ವಿಶ್ವವಿದ್ಯಾನಿಲಯವನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ಪರಿವರ್ತಿಸ ಬೇಕಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನುಡಿದ ಕುಲಪತಿಗಳು ಮಂಗಳೂರು ಮತ್ತು ಮಡಿಕೇರಿಯ ಘಟಕ ಕಾಲೇಜುಗಳನ್ನು ತಲಾ ರೂ. 2 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗುವುದು. ಕೊಡಗಿನ ಚಿಕ್ಕಳುವಾರು ಎಂಬಲ್ಲಿ ವಿವಿಯ ಸ್ನಾತಕೋತ್ತರ ಕೇಂದ್ರವನ್ನು ತೆರೆಯುತ್ತಿರುವುದಾಗಿ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್.ಟಿ. ಬಾಳೇಪುಣಿ ಉಪಸ್ಥಿತರಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಪಿ.ಬಿ.ಹರಿಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿದರು.

ಛಾಯಾಚಿತ್ರ ಪ್ರದರ್ಶನ

ಮಂಗಳೂರು,ಆಗಸ್ಟ್ 19:ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ದಾಯ್ಜಿ ವಲ್ಡ್ ದಶಮನೋತ್ಸವ ಅಂಗವಾಗಿ ಛಾಯಾ ಚಿತ್ರಗ್ರಾಹಕ ದಯಾನಂದ ಕುಕ್ಕಾಜೆಯವರ ಎರಡು ದಿನಗಳ ಛಾಯಾ ಚಿತ್ರ ಪ್ರದರ್ಶನ ವನ್ನು ಸಂತ ಅಲೋಷಿ ಯಸ್ ಕಾಲೇಜು ಸಭಾಂಗಣದಲ್ಲಿ ಇಂದು ಯುಎಇ ಎಕ್ಸ್ಚೇಂಜ್ ಸಿಇಒ ಸುಧೀರ್ ಶೆಟ್ಟಿ ಉದ್ಘಾಟಿ ಸಿದರು.ದಾಯ್ಜಿ ವರ್ಲ್ಡ್ ಮತ್ತು ಸಂತ ಅಲೋಷಿ ಯಸ್ ಪತ್ರಿ ಕೋದ್ಯಮ ವಿಭಾಗ ಜಂಟಿಯಾಗಿ ಆಯೋಜಿಸಿದ ಈ ಅಪ ರೂಪದ ಛಾಯಾ ಚಿತ್ರ ಪ್ರದರ್ಶನ ಮತ್ತು ವಿಚಾರ ಸಂಕಿರಣ ದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಪರಿಷತ್ ಅಕಾಡೆಮಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹಿಮಾನ್,ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ. ಸ್ವೀಬರ್ಟ್ ಡಿಸಿಲ್ವಾ, ದಾಯ್ಜಿ ವಲ್ಡ್ ನ ವಾಲ್ಟರ್ ನಂದಳಿಕೆ ಮತ್ತಿತರ ಗಣ್ಯರು ಉಪಸ್ಥಿತ ರಿದ್ದರು. ಇಂದು ಮತ್ತೆ ನಾಳೆ ಬೆ.10.30 ರಿಂದ ಸಂಜೆ 6 ಗಂಟೆ ವರೆಗೆ ಛಾಯಾಚಿತ್ರ ಪ್ರದರ್ಶನ ಸಾರ್ವಜನಿಕ ವೀಕ್ಷಣೆಗೆ ಮುಕ್ತ ವಾಗಿರುತ್ತದೆ.

Wednesday, August 18, 2010

ಕಾರ್ಯಾಗಾರಗಳು ಪರಿಣಾಮಕಾರಿಯಾಗಿರಲಿ: ಪ್ರಭಾಕರ ಶರ್ಮಾ

ಮಂಗಳೂರು ಆಗಸ್ಟ್ 18:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 22ರಂದು ನಡೆದ ವೈಮಾನಿಕ ದುರಂತ ಸ್ಮೃತಿಪಟಲದಿಂದ ಮರೆಯಾಗದಿರುವ ಮುನ್ನವೇ ಜಿಲ್ಲಾಡಳಿತ ವಿಕೋಪ ನಿರ್ವಹಣೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ವಿಕೋಪ ನಿರ್ವಹಣೆ ಕಾರ್ಯಾಗಾರ ನಡೆಯಲಿ ಎಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಹೇಳಿದರು.
ಅವರಿಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಮತ್ತು ಕ್ಯಾಟಲಿಸ್ಟ್ ಮ್ಯಾನೇಜ್ ಮೆಂಟ್ ಏಜೆನ್ಸಿ ಬೆಂಗಳೂರು, ಜಂಟಿಯಾಗಿ ಆಯೋಜಿಸಿದ್ದ 'ಪ್ರಾಕೃತಿಕ ವಿಕೋಪಗಳ ನೀತಿ,ಯೋಜನೆ ಮತ್ತು ವ್ಯವಸ್ಥಿತ ನಿರ್ವಹಣೆ' ಕುರಿತ ಕಾರ್ಯಾಗಾರ ವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜಿಲ್ಲೆ ವಿಕೋಪ ನಿರ್ವಹಣೆಯಡಿ ಸಾಕಷ್ಟು ಅನುಭವಗಳನ್ನು ಪಡೆದಿದ್ದು ಅವಘಡಗಳ ಸಂದರ್ಭದಲ್ಲಿ ಪರಿಣಾಮಕಾರಿಯಾಗಿಯೇ ಕರ್ತವ್ಯ ನಿರ್ವಹಿಸಿದೆ. ಆದರೂ ಕಾರ್ಯಾಗಾರ ಗಳಿಂದ ಕರ್ತವ್ಯ ನಿರ್ವಹಣೆ ಇನ್ನಷ್ಟು ಸುಲಲಿತ ವಾಗಬೇಕು; ಲೋಪದೋಷಗಳನ್ನು ತಿದ್ದಿಕೊಳ್ಳಲು ಚರ್ಚಿಸಲು ಅನುಕೂಲವಾಗಬೇಕು. ಸ್ಥಳೀಯ ಅಗತ್ಯಗಳಿಗೆ ಸ್ಪಂದಿಸಬೇಕು ಎಂದ ಅವರು, ಕಾರ್ಯಾ ಗಾರದಲ್ಲಿ ನೀಡಿದ ಪ್ರಶ್ನಾವಳಿ ಮಾದರಿ ಸಮಾಧಾನ ಕರವಾಗಿಲ್ಲ ಎಂದರು. ಜಿಲ್ಲೆಯಲ್ಲಿ ನೆರೆಹಾವಳಿ, ಭೂಕುಸಿತ ಮಳೆಗಾಲದ ಸಂಭವಗಳಾಗಿವೆ. ಆದರೆ ಹಲವು ಕೈಗಾರಿಕೆಗಳಿಗೆ ತವರೂರಾಗಿರುವ ಜಿಲ್ಲೆ ನಮ್ಮದಾಗಿದ್ದು, ರೈಲ್ವೇ, ವಿಮಾನ, ಸಮುದ್ರ ಮಾರ್ಗವನ್ನು ಹೊಂದಿದೆ. ಭಯೋತ್ಪಾದನಾ ಚಟುವಟಿಕೆ ನಡೆದರೆ ಈ ಸಂದರ್ಭದಲ್ಲಿ ಸ್ಪಂದಿಸುವ ಬಗ್ಗೆಯೂ ಅಗತ್ಯ ಪೂರ್ವ ತಯಾರಿ ಅಗತ್ಯವಿದೆ. ವಿಕೋಪಗಳ ಸಂದರ್ಭದಲ್ಲಿ ಜಿಲ್ಲಾಡಳಿತ ಸಜ್ಜಾಗಿರುವ ಬಗ್ಗೆ ಸಿದ್ಧತೆಯ ಬಗ್ಗೆ ಇಂತಹ ಕಾರ್ಯಾಗಾರಗಳು ಪೂರಕ ಬೆಂಬಲ ನೀಡುವಂತಿರಬೇಕು ಎಂದರು.
ಕಾರ್ಯಾ ಗಾರದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಶ್ರೀ ಎನ್ ರಾಜಶೇಖರ್, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ದ.ಕ ಜಿಲ್ಲಾ ಮುಖ್ಯ ಯೋಜನಾ ಧಿಕಾರಿ ತಾಕತ್ ರಾವ್, ಲೋಕೋ ಪಯೋಗಿ ಇಲಾಖೆ ಗೋಪಾಲಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀರಂಗಪ್ಪ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಹಲಗಪ್ಪ, ಎಎಸ್ ಪಿ ದ.ಕ ಮತ್ತು ಉಡುಪಿ, ಗೃಹ ರಕ್ಷಕ ದಳದ ಕಮಾಂಡೆಂಟ್ ನಿದರ್ಶ ಹೆಗಡೆ, ಬಿ ಎ ಎಸ್ ಎಫ್, ಎಚ್ ಪಿ ಸಿ ಎಲ್, ಕೆ ಐ ಒ ಸಿ ಎಲ್, ಎಂ ಸಿ ಎಫ್, ಎಂ ಆರ್ ಪಿ ಎಲ್, ಬಿ ಎಸ್ ಎನ್ ಎಲ್, ಭಾರತ್ ಪೆಟ್ರೋಲಿಯಂ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಏಜೆನ್ಸಿಯಿಂದ ಡಾ. ಜೋಷಿ ತಂಡ ಪಾಲ್ಗೊಂಡಿತ್ತು.

Tuesday, August 17, 2010

ಪಶುಸಂಗೋಪನ ಇಲಾಖೆಗೆ ಜಿಲ್ಲೆಯಲ್ಲಿ 407 ಹುದ್ದೆ ಮಂಜೂರು: ಸಚಿವ ಬೆಳಮಗಿ

ಮಂಗಳೂರು,ಆಗಸ್ಟ್ 17:ಪಶುಪಾಲನಾ ಇಲಾಖೆ 114 ಸಂಸ್ಥೆಗಳಿಗೆ ವಿವಿಧ ವೃಂದದ 407 ಹುದ್ದೆ ಮಂಜೂರಾಗಿದ್ದು ಇದರಲ್ಲಿ 189 ಭರ್ತಿಯಾಗಿದೆ ಉಳಿದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಪಶುಸಂಗೋಪನ ಸಚಿವ ರೇವು ನಾಯಕ್ ಬೆಳಮಗಿ ಹೇಳಿದ್ದಾರೆ.

ಇಂದು ನಗರದಲ್ಲಿ ಪಶು ಸಂಗೋಪನ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 218 ಹುದ್ದೆಗಳು ಖಾಲಿಯಿ ರುತ್ತದೆ.ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಮಟ್ಟದಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳ ಲಾಗುವುದು ಎಂದರು. ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆಯಡಿ 13 ಪಶು ಆಸ್ಪತ್ರೆ, 35 ಪಶು ಚಿಕಿತ್ಸಾಲಯಗಳು, 5 ಸಂಚಾರಿ ಪಶು ಚಿಕಿತ್ಸಾಲಯಗಳು, 55 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, ಇತರೆ 5, ಸೇರಿದಂತೆ ಒಟ್ಟು 114 ವಿವಿಧ ಪಶುವೈದ್ಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ವಿವರಿಸಿದರು.
ಈ ಪೈಕಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ದೊಡ್ಡ ರೋಗ ನಿವಾರಣಾ ಯೋಜನೆ, ಜಿಲ್ಲಾ ಕೋಳಿ ಸಾಕಾನಿಕೆ ಮತ್ತು ತರಬೇತಿ ಕೇಂದ್ರ, ಪುಲ್ಲೋರಂ ನಿಯಂತ್ರಣ ಘಟಕ ಹಾಗೂ ಹುಚ್ಚು ನಾಯಿ ನಿಯಂತ್ರಣ ಘಟಕವಿದ್ದು, ಪ್ರಾದೇಶಿಕ ಪ್ರಾಣಿ ರೋಗ ತಪಾಸಣಾ ಪ್ರಯೋಗಾಲಯ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಸ್ತರಣಾ ವಿಭಾಗಗಳಿದ್ದು, ಪಶುಸಂಗೋಪನೆಗೆ ಪೂರಕ ಸೌಲಭ್ಯಗಳನ್ನು ನೀಡಲಾಗಿದೆ. ಅಭಿವೃದ್ಧಿ ಪ್ರಸ್ತಾವನೆಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಅಖಿಲ ಭಾರತ 18ನೇ ಜಾನುವಾರು ಗಣತಿ (2007)ರ ಮೇರೆಗೆ ಜಿಲ್ಲೆಯಲ್ಲಿ 3,97,601 ದನಗಳು, 15,127 ಎಮ್ಮೆಗಳು, 316 ಕುರಿಗಳು, 25,694 ಮೇಕೆಗಳು, 5,332 ಹಂದಿಗಳು, 2,22,057 ನಾಯಿಗಳು, 992 ಇತರೆ ಸೇರಿದಂತೆ 6,67,124 ಜಾನುವಾರು ಗಳಿದ್ದು, 7,74,882 ಕುಕ್ಕುಟಗಳಿರುತ್ತವೆ. ಹೈನುವೃದ್ಧಿ, ಸಾಂಕ್ರಾಮಿಕ ರೋಗತಡೆ, ಮೇವು ಅಭಿವೃದ್ಧಿ, ಪ್ರಾಣಿ ಸಾಕಾಣಿಕೆಗೆ ಸಂಬಂಧಿ ಸಿದಂತೆ ತಾಂತ್ರಿಕ ಸಲಹೆ ನೀಡುವುದು, ಜಾನುವಾರು ರೋಗ ನಿಯಂತ್ರಣಕ್ಕೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಕಟ್ಟೆಚ್ಚರ ವಹಿಸುವಿಕೆ ಸೇರಿದಂತೆ ಜಿಲ್ಲೆಯಲ್ಲಿ ಪಶು ಸಂಗೋಪನೆಗೆ 2010-1 ನೇ ಸಾಲಿನಲ್ಲಿ ಒಟ್ಟು 186.97 ಲಕ್ಷ ರೂ., ಅನುದಾನ ಕಲ್ಪಿಸಲಾಗಿದೆ ಎಂದು ಸಚಿವರು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.ಅಮೃತ ಯೋಜನೆಯಡಿ ಕಳೆದ ಎರಡೂವರೆ ವರ್ಷಗಳಲ್ಲಿ 777 ಅಬಲ ಮಹಿಳೆಯರಿಗೆ ತಲಾ ರೂ. 0.20 ಲಕ್ಷ ಘಟಕ ವೆಚ್ಚದಂತೆ ಒಟ್ಟು 80.69 ಲಕ್ಷ ಸಹಾಯನುದಾನ ಹೈನುಗಾರಿಕೆಗೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು 1,432 ಪಶುವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, 972 ವೈದ್ಯರಕೊರತೆ ಇದೆ ಎಂದರು. 480 ವೈದ್ಯರ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು. 642 ಪಶು ವೈದ್ಯ ಸಹಾಯಕರನ್ನು ನೇಮಕ ಮಾಡಲಾಗಿದೆ ಎಂದು ಸಚಿವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪನಿರ್ದೇಶಕ ಡಾ. ಕೆ.ವಿ. ಹಲಗಪ್ಪ, ಕೊಯ್ಲಾ ಫಾರಂ ನ ಡಾ. ಕೆ. ವೆಂಕಟೇಶ್, ಸಚಿವರ ವಿಶೇಷಾಧಿಕಾರಿ ಡಾ. ಜಯಪ್ರಕಾಶ್ ಉಪಸ್ಥಿತರಿದ್ದರು.

Monday, August 16, 2010

ಕ್ವೀನ್ಸ್ ಬ್ಯಾಟನ್ ರಿಲೇ ತಂಡ ಸ್ವಾಗತಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಮಂಗಳೂರು,ಆಗಸ್ಟ್ 16:ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟ -2010 ನವದೆಹಲಿಯಲ್ಲಿ ಅಕ್ಟೋಬರ್ 3ರಿಂದ 14 ರವರೆಗೆ ನಡೆಯಲಿದ್ದು, ಈ ಸಂಬಂಧ ದೇಶದ ವಿವಿಧ ರಾಜ್ಯಗಳಲ್ಲಿ ಕ್ರೀಡಾಕೂಟದ ಬಗ್ಗೆ ಜಾಗೃತಿ ಮೂಡಿಸಲು ಕ್ವೀನ್ಸ್ ಬ್ಯಾಟನ್ ರಿಲೇ ತಂಡ ವಿವಿಧ ರಾಜ್ಯಗಳಲ್ಲಿ ಸಂಚರಿಸಲಿದೆ.

ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಸೆಪ್ಟೆಂಬರ್ 5 ರಂದು ಹಾಸನದಿಂದ ಆಗಮಿ ಸಲಿದ್ದು, ಶಿರಾಡಿ ಘಾಟಿಯಲ್ಲಿ ರಿಲೇ ತಂಡವನ್ನು ಎದುರು ಗೊಳ್ಳಲಾ ಗುವುದು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ತಂಡವನ್ನು ಸ್ವಾಗತಿಸುವರು. ನಗರದ ಮಹಾವೀರ ಸರ್ಕಲ್ ನಲ್ಲಿ ಮಂಗಳೂರು ಮೇಯರ್ ಅವರು ರಿಲೇ ತಂಡವನ್ನು ಸ್ವಾಗತಿ ಸುವರು ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು ಸಭೆಗೆ ತಿಳಿಸದರು.
ಜಿಲ್ಲಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿ ಗಳನ್ನು ಸಕ್ರಿಯ ಪಾಲ್ಗೊಳಿ ಸುವಿಕೆ ಬಗ್ಗೆ ಆ ಮೂಲಕ ಶಿಕ್ಷಣೇತರ ಅದರಲ್ಲೂ ಮುಖ್ಯವಾಗಿ ಕ್ರೀಡೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಈ ಅವಕಾಶವನ್ನು ಬಳಸಿ ಕೊಳ್ಳ ಲಾಗುವುದು ಎಂದರು. ಕ್ವೀನ್ಸ್ ಬ್ಯಾಟನ್ ರಿಲೇ ತಂಡ ಹಾದು ಹೋಗುವ ರಸ್ತೆಯಲ್ಲಿ ಎಲ್ಲ ಗ್ರಾಮ ಪಂಚಾಯಿ ತಿಗಳಿಗೆ ಹಾಗೂ ನಗರ ಪಂಚಾಯಿತಿಗಳಿಗೆ ಮಾಹಿತಿ ನೀಡಿ ರಸ್ತೆ ಸಿಂಗರಿಸಿ ಸ್ವಾಗತ ಕೋರಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಯವರಿಗೆ ಸೂಚಿಸಿದರು. ಮಂಗಳೂರಿನಲ್ಲಿ ಮಹಾವೀರ ಸರ್ಕಲ್ ನಿಂದ ಕದ್ರಿ, ಲಾಲ್ ಬಾಗ್, ಎಂಜಿ ರಸ್ತೆ, ಪಿ ವಿ ಎಸ್, ಜ್ಯೋತಿ ಮುಖಾಂತರ ಪುರಭವನ ದವರೆಗೆ ರಿಲೇ ಓಟದ ಬಳಿಕ ನಗರದ ಪುರಭವನದಲ್ಲಿ 125 ನಿಮಿಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಿಲೇ ತಂಡದಲ್ಲಿ 26 ವಾಹನಗಳಲ್ಲಿ 98 ಅಧಿಕಾರಿಗಳು ಆಗಮಿಸುವರು.
ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪಾಂಡುರಂಗ ಗೌಡ, ಸಹಾಯಕ ಆಯುಕ್ತರಾದ ಡಾ. ಹರೀಶ್ ಕುಮಾರ್, ಪ್ರಭುಲಿಂಗ ಕವಳಿಕಟ್ಟಿ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಉಪನಿರ್ದೇಶಕರಾದ ವೃಷಭರಾಜೇಂದ್ರ ಮೂತರ್ಿ, ಮಹಾ ನಗರ ಪಾಲಿಕೆ ಕಂದಾಯಧಿಕಾರಿ ಮೇಘನಾ, ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ, ಸ್ವಾಗತ ಸಮಿತಿಯ ಸದಸ್ಯರಾದ ಸೀತಾರಾಂ ಕುಲಾಲ್, ಕೆ.ತೇಜೋಮಯ, ಸುನೀಲ್ ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಕ್ರೀಡಾ ವಲಯದ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜನಮನ ಸೆಳೆದ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು,ಆಗಸ್ಟ್16:ಜಮ್ಮು ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ದೇಶದ ವೈವಿಧ್ಯತೆಯನ್ನು ಡೊಂಗರಕೇರಿ ಕೆನರಾ ಹೆಮ್ಮಕ್ಕಳ ಪ್ರೌಢಶಾಲೆ 141 ಮಕ್ಕಳು ತಮ್ಮ 30 ನಿಮಿಷದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನೋಜ್ಞವಾಗಿ ಪ್ರದರ್ಶಿಸಿದರು.
ಜಿಲ್ಲಾ ಮಟ್ಟದ ಸ್ವಾತಂತ್ರ್ಯೋ ತ್ಸವ ದಿನಾಚರಣೆ ಸಂದರ್ಭ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಪೊಲೀಸ್ ಇಲಾಖೆಯ ಪೊಲೀಸ್ ಬ್ಯಾಂಡ್ ನೊಂದಿಗೆ ಅಪರಾಹ್ನ 3 ಗಂಟೆಗೆ ನಗರದ ಪುರಭವನದಲ್ಲಿ ಆರಂಭವಾಯಿತು. ನಂತರ ನಡೆದ ಕವಿ ಗೋಷ್ಠಿ ಆಕಾಶ ವಾಣಿಯ ಶಕುಂತಳಾ ಕಿಣಿಯವರ ಅಧ್ಯಕ್ಷತೆಯಲ್ಲಿ ಅರ್ಥ ಪೂರ್ಣವಾಗಿ ನಡೆಯಿತು. ಕವಿ ಗೋಷ್ಠಿಯಲ್ಲಿ ಸ್ವಾತಂತ್ರ್ಯ, ಮಹಿಳಾ ಸ್ವಾತಂತ್ರ್ಯದ ಕುರಿತ ಅರ್ಥಪೂರ್ಣ ಕವಿತೆಗಳು ಮೂಡಿ ಬಂದವು. ವಿದ್ಯಾಂಗ ಉಪ ನಿರ್ದೇಶಕ ಚಾಮೇಗೌಡ, ಬಿಇಒ ದಯಾವತಿ ವೇದಿಕೆಯಲ್ಲಿದ್ದರು. ಕೆನರಾ ಹೆಮ್ಮಕ್ಕಳ ಪ್ರೌಢಶಾಲೆ, ಡೊಂಗರ ಕೇರಿ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಜೋಡಿ ಗೊಂಬೆ ಕಾರ್ಯಕ್ರಮ ಜನಮನ ರಂಜಿಸಿದವು.141 ಮಕ್ಕಳು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪುರಭವನ ಜನರಿಂದ ಕಿಕ್ಕಿರಿದಿತ್ತು.

Sunday, August 15, 2010

ಪರಿಸರ ನಾಶ ತಡೆಗೆ ಗ್ರೀನ್ ಪೊಲೀಸ್ ವ್ಯವಸ್ಥೆ:ಸಚಿವ ಪಾಲೆಮಾರ್

ಮಂಗಳೂರು,ಆ.15:ಕಡಲತೀರದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ಪರಿಸರದ ಮೇಲಾಗುತ್ತಿರುವ ನಾಶವನ್ನು ತಡೆಗಟ್ಟುವ ಉದ್ದೇಶದಿಂದ ಪರಿಸರ ಇಲಾಖೆಯು ಗ್ರೀನ್ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಂದರು ಮತ್ತು ಪರಿಸರ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಹೇಳಿದರು.


ಇಂದು ನಗರದ ನೆಹರು ಮೈದಾನ ದಲ್ಲಿ ರಾಷ್ಟ್ರ ಧ್ವಜಾ ರೋಹಣ ಮಾಡಿ ಪರೇಡ್ ವೀಕ್ಷಣೆ ನಡೆಸಿ ಸ್ವಾತಂತ್ರ್ಯೋ ತ್ಸವ ಸಂದೇಶ ನೀಡಿದ ಸಚಿವರು, ಪರಿಸರ ಮಾಲಿನ್ಯ ನಿಯಂತ್ರಣ ವನ್ನು ಪರಿಣಾಮ ಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಕೈ ಜೋಡಿಸುವಂತೆ ನಿಯಮ ಗಳನ್ನು ಸರಳೀಕ ರಣಗೊ ಳಿಸಿದೆ ಎಂದರು. ರಾಜ್ಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಸುಬ್ರಹ್ಮಣ್ಯ ಮೀಸಲು ಅರಣ್ಯದ ದೇವರ ಗದ್ದೆ ಎಂಬಲ್ಲಿ 200 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದೇ ರೀತಿ ಶ್ರೀಗಂಧದ ಅಭಿವೃದ್ಧಿಯ ಮತ್ತು ಕಳ್ಳ ಸಾಗಾಣಿಕೆ ಹಾಗೂ ಅಕ್ರಮ ಕಡಿತವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಶ್ರೀಗಂಧದ ಎಸ್ಟೇಟ್ ರಚಿಸುವ ಯೋಜನೆ ಹಮ್ಮಿ ಕೊಳ್ಳಲಾಗಿದೆ ಎಂದರು.ಕರಾವಳಿಯ ಸಮಗ್ರ ಅಭಿವೃದ್ಧಿಗೆ ಮತ್ತು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಅನೇಕ ಜನಕಲ್ಯಾಣ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
64ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಬಲಿದಾನಗೈದ ಎಲ್ಲ ಮಹಾನ್ ಚೇತನಗಳನ್ನು ನೆನೆದು ಗೌರವ ಸಮರ್ಪಿಸಿದ ಸಚಿವರು, ಅಮೂಲ್ಯ ಸ್ವಾತಂತ್ರ್ಯವನ್ನು ನಿರಂತರ ಕಾಪಾಡುವ ಹೊಣೆ ಎಲ್ಲರದ್ದು ಎಂಬುದನ್ನು ಜ್ಞಾಪಿಸಿದರು.
ಜಿಲ್ಲೆಯ ವಸತಿ ಸಮಸ್ಯೆಯನ್ನು ನಿವಾರಿಸಲು ವಿವಿಧ ಯೋಜನೆಯಡಿ ರೂ.25.66 ಕೋಟಿ ವೆಚ್ಚದಲ್ಲಿ 7,276 ಫಲಾನುಭವಿಗಳಿಗೆ ವಸತಿ ಹಾಗೂ 5,255 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. ವಾಜಪೇಯಿ ನಗರಾಶ್ರಯ ಯೋಜನೆಯಡಿ ಮಹಾನಗರಪಾಲಿಕೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ಜಿಲ್ಲೆಗೆ ಈ ವರ್ಷ 2,650 ನಿವೇಶನಗಳು ಹಾಗೂ 1325 ವಸತಿಗಳನ್ನು ಒದಗಿಸಲು ನಿರ್ಧರಿಸಿದೆ. ಬಸವ ಇಂದಿರಾ ವಸತಿ ಯೋಜನೆಯಡಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 1000 ಮನೆ ನಿರ್ಮಾಣ ಗುರಿ ಹೊಂದಿದೆ. ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿ ಪರಿವರ್ತಿಸುವತ್ತ ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ ಎಂದರು.
ಸಮಾ ರಂಭದಲ್ಲಿ ಗ್ರಾಹಕ ಕೈ ಗನ್ನಡಿ ಪುಸ್ತಕ ಬಿಡುಗಡೆ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪತ್ರ ವಿತರಣೆ ನಡೆಯಿತು. ಸಮಾ ರಂಭದಲ್ಲಿ ಮಂಗಳೂರು ಮೇಯರ್ ರಜನಿ ದುಗ್ಗಣ್ಣ,ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಎನ್. ಯೋಗಿಶ್ ಭಟ್,ಯು.ಟಿ.ಖಾದರ್,ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ಪೊನ್ನುರಾಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಮಂಗಳೂರು ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್,ಎಸ್ಪಿ ಡಾ.ಸುಬ್ರಹಣ್ಯೇಶ್ವರ ರಾವ್,ಜಿಲ್ಲಾ ಪಂಚಾಯತ್ ಸಿಇಒ ಶಿವಶಂಕರ್,ಪಾಲಿಕೆ ಕಮೀಷನರ್ ಡಾ.ವಿಜಯ ಪ್ರಕಾಶ್, ಸೇರಿದಂತೆ ಅನೇಕ ಗಣ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Saturday, August 14, 2010

ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಗೆ ಶೀಘ್ರ ಕ್ರಮ:ಮುಖ್ಯಮಂತ್ರಿ

ಮಂಗಳೂರು,ಆಗಸ್ಟ್ 14:ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಗೆ ಅಗತ್ಯವಿರುವ ಕ್ರಮಗಳನ್ನು ಶೀಘ್ರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆ ಯಾಗಿರು ವುದರಿಂದ ಜಲಾಶಯ ಗಳಲ್ಲಿ ಕಳೆದ ವರ್ಷಕ್ಕಿಂತ ಶೇ. 30ರಷ್ಟು ನೀರು ಕಡಿಮೆ ಯಾಗಿದೆ. ಈಗಾಗಲೇ 700 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಆಗಸ್ಟ್ 16 ರಂದು ಬೆಂಗಳೂರಿನಲ್ಲಿ ವಿಶೇಷ ಸಭೆ ಕರೆಯ ಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ:ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆ ಪ್ರವಾ ಸೋದ್ಯಮ ಅಭಿವೃದ್ದಿಗೆ ವಿವಿಧ ಯೋಜನೆ ಹಮ್ಮಿ ಕೊಳ್ಳ ಲಾಗಿದೆ. ಮಂಗ ಳೂರಿನಲ್ಲಿ 250 ಕೋಟಿ ರೂ. ವೆಚ್ಚದ ಮೆರೈನ್ ಅಕ್ವಾ ಪಾರ್ಕ್, 100 ಕೋಟಿ ರೂ. ವೆಚ್ಚದಲ್ಲಿ ಬಂದರು ಅಭಿವೃದ್ಧಿ ಯೋಜನೆ, ನಂದಿಬೆಟ್ಟ, ಕೆಮ್ಮಣ್ಣು ಗುಂಡಿ ಅಭಿವೃದ್ಧಿ ಯೋಜನೆ, ಮಂಗಳ ಕಾರ್ನಿಶ್ ಯೋಜನೆ, ಜೋಗ್ ಜಲಪಾತ, ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ಮೂಡಬಿದ್ರೆ ಸಾವಿರ ಕಂಬದ ಬಸದಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸರಕಾರ ಯೋಜನೆ ಹಮ್ಮಿ ಕೊಂಡಿದೆ. ಈ ನಿಟ್ಟಿನಲ್ಲಿ ಖಾಸಗಿ ಸಹ ಭಾಗಿತ್ವ ದೊಂದಿಗೆ ಯೋಜನೆ ರೂಪಿಸ ಲಾಗುವುದು.
ಅಕ್ರಮ ಗಣಿಗಾರಿಕೆಗೆ ಕೇಂದ್ರದ ನೀತಿಗೆ ಸ್ವಾಗತ: ಅಕ್ರಮ ಗಣಿಗಾರಿಕೆಗೆ ಸಂಬಂಧಿ ಸಿದಂತೆ ಕೇಂದ್ರ ಸರಕಾರ ರಾಷ್ಟ್ರೀಯ ನೀತಿ ರೂಪಿಸುವ ಬಗ್ಗೆ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿಕೆ ನೀಡಿರುವುದನ್ನು ತಾನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟವರು ಕಾಂಗ್ರೆಸ್ಸಿಗರು. ಆದರೆ ಈಗ ದೂರು ಮಾತ್ರ ಯಡಿಯೂರಪ್ಪರ ಮೇಲೆ ಮಾಡುತ್ತಾರೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಗಣಿಗಾರಿಕೆಗೆ ಏಕೆ ಅವಕಾಶ ನೀಡಿಲ್ಲ. ಹಾಗೆ ಒಂದು ವೇಳೆ ಅವಕಾಶ ನೀಡಿದ್ದರೆ ಕಬ್ಬಿಣ, ಉಕ್ಕಿನ ಬೆಲೆ ಒಂದು ತಿಂಗಳಲ್ಲೇ ಇಳಿಯುತ್ತಿತ್ತು.ಕೇಂದ್ರ ಸರಕಾರ ಗಣಿಗಾರಿಕೆಯ ಬಗ್ಗೆ ರಾಷ್ಟ್ರೀಯ ನೀತಿ ರೂಪಿಸಿಲ್ಲ.ದೇಶದ ಎಲ್ಲಾ ಕಡೆ ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ಯಡಿಯೂರಪ್ಪ ತಿಳಿಸಿದರು.
ಶಿರಾಡಿ ಘಾಟ್ ರಸ್ತೆ ಕಾಂಕ್ರಿಟೀಕರಣಕ್ಕೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವುದು. ಘಟ್ಟ ಪ್ರದೇಶದ ರಸ್ತೆ ಅಭಿವೃದ್ಧಿ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು. ಮಡಿಕೇರಿ- ಬಂಟ್ವಾಳ ರಸ್ತೆ ಅಭಿವೃದ್ದಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ ವರ್ಷದೊಳಗೆ ಪೂರ್ಣಗೊಳ್ಳಲಿದೆ. ಜಿಲ್ಲಾ ನ್ಯಾಯಾಲಯದ ಕಟ್ಟಡ ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲಾ ರಂಗ ಮಂದಿರಕ್ಕೆ ಚಾಲನೆ ನೀಡಲಾಗುವುದು. ಮಂಗಳೂರಿಗೆ ಸಿಂಥೆಟಿಕ್ ಟ್ರಾಕ್ ರಚನೆಗೆ ವಾರದೊಳಗೆ ಎರಡು ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಡಿಬಿ ವತಿಯಿಂದ ಮತ್ತೆ 100 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 40 ಕೋಟಿ ರೂ. ಕಾಮಗಾರಿಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಂಸದ ಡಿ.ವಿ. ಸದಾನಂದ ಗೌಡ, ನಳಿನ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಶಾಸಕ ಯೋಗೀಶ್ ಭಟ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೇಯರ್ ರಜನಿ ದುಗ್ಗಣ್ಣ, ಜಿಲ್ಲಾಧಿಕಾರಿ ಪೊನ್ನುರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ನಂತರ ಮುಖ್ಯ ಮಂತ್ರಿಗಳು ಕುಡುಪು ಅನಂತ ಪದ್ಮನಾಭ ದೇವ ಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.ದೇವ ಸ್ಥಾನದ ಸಮಗ್ರ ಅಭಿವೃದ್ದಿಗೆ 2 ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿದ ಮುಖ್ಯ ಮಂತ್ರಿಗಳು, ಪ್ರಸಕ್ತ ವರ್ಷದಲ್ಲಿ ರೂಪಾಯಿ ಒಂದು ಕೋಟಿಯನ್ನು ಬಿಡುಗಡೆ ಗೊಳಿಸುವುದಾಗಿ ಹೇಳಿದರು.
ದೇವರ ದರ್ಶನ ಮಾಡಿದ ಮುಖ್ಯಮಂತ್ರಿಗಳು ಮಾಧ್ಯಮದೊಂದಿಗೆ ಮಾತನಾಡಿ, ದೇಶ ಹಾಗೂ ರಾಜ್ಯದ ಸುಭಿಕ್ಷೆಗೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

Friday, August 13, 2010

ಗಣಿಗಾರಿಕೆ ನಿಷೇಧದಿಂದ ರಾಜ್ಯದ ಕಾರ್ಖಾನೆಗಳಿಗೆ ಅನುಕೂಲ:ಸಿ ಎಂ ಯಡಿಯೂರಪ್ಪ

ಮಂಗಳೂರು,ಆ. 13:ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯ ಸರ್ಕಾರ ತಳೆದಿರುವ ನಿಲುವಿನಿಂದ ದೂರಗಾಮಿ ಪರಿಣಾಮಗಳು ಹಾಗೂ ಪ್ರಯೋಜನಗಳು ದೇಶಕ್ಕೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಅವರಿಂದು ಕುದುರೆಮುಖ ಸಂಸ್ಥೆಯಲ್ಲಿ ಕಚ್ಚಾ ಸಾಮಗ್ರಿ ಸಂಗ್ರಹಣಾ ಮತ್ತು ವಿಸ್ತರಣಾ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. 8000ಟನ್ ಸಾಮರ್ಥ್ಯದ ಅದಿರು ಸಂಗ್ರಹಣಾ ಸಾಮರ್ಥ್ಯದ ಕಣಜವೊಂದನ್ನು ಸ್ಥಾಪಿಸಲು ಕೈಗೊಂಡ ಕ್ರಮ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಸಬಲೀಕರಣಕ್ಕೆ ಸರ್ಕಾರ ಆದ್ಯತೆ ನೀಡಿರುವುದು ಸಾಕ್ಷಿ ಎಂದ ಅವರು, ಕಂಪೆನಿಯವರು ಸಲ್ಲಿಸಿದ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು. ಅದಿರು ಸಮೃದ್ಧ ದೇಶಗಳು ತಮ್ಮ ದೇಶದ ಬಹುಮೂಲ್ಯ ಸೊತ್ತನ್ನು ಸಂರಕ್ಷಿಸುತ್ತಿದ್ದು, ಭಾರತ ಮಾತ್ರ ಇದಕ್ಕೆ ಹೊರತಾಗಿದೆ. ಇಲ್ಲಿ ವೈಯಕ್ತಿಕ ನೆಲೆಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿರುವುದರಿಂದ ರಾಜ್ಯ ಬೊಕ್ಕಸಕ್ಕೆ ನಷ್ಟವಾಗುತ್ತಿರುವುದಲ್ಲದೆ ನಮ್ಮ ಮುಂದಿನ ಜನಾಂಗ ತೊಂದರೆಯನ್ನು ಅನುಭವಿಸಲಿದೆ.ಹಾಗಾಗಿ ಇಂದು ಈ ಸಂಬಂಧ ನಡೆಯುತ್ತಿರುವ ಚರ್ಚೆಗಳು ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಥಮಗಳು ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲು ಪ್ರೇರಣೆ ನೀಡಲಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ರಾಜ್ಯ ಸ್ವಾಮ್ಯದಲ್ಲಿರುವ 10 ಬಂದರಿನಿಂದ ಗಣಿ ರಫ್ತನ್ನು ನಿಷೇಧಿಸಲಾಗಿದೆ. ಗಣಿ ನೀತಿಯನ್ನು ರೂಪಿಸಿ ಅನುಷ್ಠಾನಕ್ಕೆ ತರಲು ತಮ್ಮ ಸರ್ಕಾರ ಬದ್ಧವಾಗಿದ್ದು, ತಮ್ಮ ಆಡಳಿತದಲ್ಲಿ ಯಾರಿಗೂ ಗಣಿಗಾರಿಕೆಗೆ ಅವಕಾಶ ನೀಡಿಲ್ಲ; ಮೌಲ್ಯ ವರ್ಧಿತ ಉತ್ಪಾದನೆಗೆ ಮಾತ್ರ ಅವಕಾಶ ನೀಡಿದೆ ಎಂದು ಸ್ಪಷ್ಟ ಪಡಿಸಿದರು. ನಮ್ಮ ರಾಜ್ಯದ ಕಾರ್ಖಾನೆಗಳಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡದೆ ವ್ಯಕ್ತಿಗಳಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದ ಮುಖ್ಯಮಂತ್ರಿಗಳು, ಕಂಪೆನಿಗಳಿಗೆ ಅವಕಾಶ ನೀಡುವ ಬಗ್ಗೆ ದೃಢ ನಿರ್ಧಾರ ತಳೆಯುವುದಾಗಿ ಪ್ರಕಟಿಸಿದರು. ಪ್ರಧಾನಮಂತ್ರಿ ಈ ಸಂಬಂಧ ಸೂಕ್ತ ಮಾರ್ಗದರ್ಶನ ನೀಡಿ ಗಣಿಗಾರಿಕೆಯಲ್ಲಾಗಿರುವ ಲೋಪಗಳನ್ನು ಸರಿಪಡಿಸುವ ಭರವಸೆ ಇದೆ ಎಂದು ಅವರು ಹೇಳಿದರು. ಭಾರತ ಸರ್ಕಾರದ ಉಕ್ಕು ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಆರ್ಥಿಕ ಸಲಹೆಗಾರರಾದ ಮಚ್ಛ್ಯೇಂದ್ರನಾಥ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕಾರ್ಖಾನೆಗಳಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡಬೇಕು.ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿಲುವಿಗೆ ಸಂತಸವ್ಯಕ್ತಪಡಿಸಿದರು. ಸರ್ಕಾರ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳ ಅಭಿವೃದ್ಧಿಗೆ ಸಾಕಷ್ಟು ಬಂಡವಾಳ ಹೂಡಿದ್ದು, ಗಣಿಗಾರಿಕೆ ಅಧಿಕಾರ ಕಂಪೆನಿಗೆ ನೀಡುವುದರಿಂದ ಅನುಕೂಲವಾಗಲಿದೆ ಎಂದರು. ಕೆಐಒಸಿಲ್ ನ ಕಾರ್ಯನಿರ್ವಾಹಕ ನಿರ್ದೇಶಕ ಎನ್. ಕೃಷ್ನ ಭಟ್ ಸ್ವಾಗತಿಸಿದರು. ಎಂ ಬಿ ಪಡಿಯಾಲ್ ವಂದಿಸಿದರು. ವ್ಯವಸ್ಥಾಪಕ ನಿರ್ದೇಶಕ ರಂಗನಾಥ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಲಾನ್ಯಾಸ ಸಮಾರಂಭದಲ್ಲಿ ಗೃಹಸಚಿವ ಡಾ. ವಿ.ಎಸ್. ಆಚಾರ್ಯ, ಸಣ್ಣ ಮತ್ತು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಶಾಸಕ ಯೋಗೀಶ್ ಭಟ್, ಸಂಸದರಾದ ಡಿ.ವಿ ಸದಾನಂದ ಗೌಡ, ಗಣೇಶ್ ಕಾರ್ಣಿಕ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಮೇಯರ್ ರಜನಿದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್, ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಉಪಸ್ಥಿತರಿದ್ದರು.

ಹೊಸ ತಂತ್ರಜ್ಞಾನ ಆವಿಷ್ಕರಿಸಿ ರೈತರಿಗೆ ನೆರವಾಗಿ; ಮುಖ್ಯಮಂತ್ರಿ ಕರೆ

ಮಂಗಳೂರು,ಆ.13: ದೇಶದ ಕೃಷಿ, ಆರ್ಥಿಕ ಅಭಿವೃದ್ಧಿಯಲ್ಲಿ ಇಂಜಿನಿಯರ್ ಗಳು ಪ್ರಮುಖ ಪಾತ್ರ ವಹಿಸಬೇಕಿದ್ದು,ತಮ್ಮ ನೂತನ ಆವಿಷ್ಕಾರಗಳಿಂದ ಕೃಷಿ ಅಭಿವೃದ್ಧಿ,ಇಂಧನ ಮತ್ತು ನೀರು ನಿರ್ವಹಣೆಗೆ ನೆರವಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ಅವರಿಂದು ಎನ್ ಐ ಟಿ ಕೆಯಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರೋಪ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾ ಡುತ್ತಿದ್ದರು. 1960 ರಿಂದಲೂ ಸುರತ್ಕಲ್ ನ ರಾಷ್ಟ್ರೀಯ ತಾಂತ್ರಿಕ ಕಾಲೇಜು ಉತ್ತಮ ಹೆಸರನ್ನು ಗಳಿಸಿದ್ದು ಸಮಾಜಕ್ಕೆ ತನ್ನದೇ ರೀತಿಯ ಕೊಡುಗೆ ನೀಡುತ್ತಿದೆ. ಆದರೆ ಪ್ರಸಕ್ತ ಸಂದರ್ಭದಲ್ಲಿ ಇಂಜಿನಿಯರ್ ಗಳು ತಮ್ಮ ಸಂಶೋಧನೆ ಗಳಿಂದ ಕೃಷಿ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ಗಳನ್ನು ನೀಡಬೇಕು. ಕೈಗಾರಿಕೆಗಳು ಪರಿಸರ ಸ್ನೇಹಿಯಾಗಿ ಬೆಳೆಯಲು ನೂತನ ಆವಿಷ್ಕಾರಗಳನ್ನು ಕಂಡು ಹಿಡಿಯ ಬೇಕೆಂದು ಅವರು ವಿಜ್ಞಾನಿಗಳಿಗೆ ಸಲಹೆ ಮಾಡಿದರು. ಜಗತ್ತು ಬಹು ನಿರೀಕ್ಷೆಯಿಂದ ಭಾರತದತ್ತ ಯುವಶಕ್ತಿಯನ್ನು ಗಮನಿಸಿದ್ದು, ನಿರೀಕ್ಷೆ ಹೆಚ್ಚಿದೆ; ಇದಕ್ಕೆ ಪೂರಕವಾಗಿ ನಮ್ಮ ಯುವಜನಾಂಗ ಸ್ಪಂದಿಸಬೇಕಿದೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶದಿಂದಾಗಿ ರಾಜ್ಯದಲ್ಲಿ 5ಲಕ್ಷ ಕೋಟಿ ರೂ.ಗಳ ಹೂಡಿಕೆ ನಿರೀಕ್ಷಿಸಲಾಗಿದೆ. 10ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ನಮ್ಮ ಐಟಿ ಬಿಟಿ ಕ್ಷೇತ್ರದ ಬಗ್ಗೆ ಅಮೇರಿಕದ ಅಧ್ಯಕ್ಷರಿಂದ ಶ್ಲಾಘನೆ ವ್ಯಕ್ತವಾಗಿದೆ ಎಂದು ಅವರು ನುಡಿದರು. ಎನ್ ಐ ಟಿ ಕೆ ದೇಶದ ಅಭಿವೃದ್ಧಿಗೆ ಪರಿಣಾಮಕಾರಿ ಕೊಡುಗೆ ನೀಡಬೇಕೆಂದರು.ಇದಕ್ಕೂ ಮೊದಲು ಕ್ಯಾಂಪಸ್ ನೊಳಗೆ ವಿದ್ಯಾರ್ಥಿ ಗಳಿಗಾ ಗಿರುವ ಮೆಗಾ ಹಾಸ್ಟೆಲ್ ಕಾಂಪ್ಲೆಕ್ಸ ನ್ನು ಉದ್ಘಾಟಿ ಸಿದರು. ತಮ್ಮ ಭಾಷಣ ದುದ್ದಕ್ಕೂ ದಿವಂಗತ ಸಂಸದ ಶ್ರೀನಿವಾಸ ಮಲ್ಯರ ದೂರ ದೃಷ್ಟಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಡಾ. ವಿ. ಎಸ್. ಆಚಾರ್ಯ ಅವರು ಇಂಡಿಯನ್ ಪೋಸ್ಟಲ್ ಸ್ಪೆಷಲ್ ಕವರ್ ನ್ನು ಬಿಡುಗಡೆ ಮಾಡಿ,ಎನ್ ಐ ಟಿ ಕೆ ಸೇರಿದಂತೆ ಉಳಿದ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಬೇಕಿದೆ ಎಂದರು. ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟೂರು ಮುದ್ದೇನಹಳ್ಳಿ ಯಲ್ಲಿ ರಾಜ್ಯ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯೊಂದನ್ನು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರು, ಶಿಕ್ಷಣ ವ್ಯಾಪಾರೀಕರಣ ವಾಗುತ್ತಿ ರುವುದಕ್ಕೆ ವಿಷಾದ ವ್ಯಕ್ತ ಪಡಿಸಿ ದರಲ್ಲದೆ ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಗಳನ್ನು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲೆಗೆ ದಿವಂಗತ ಸಂಸದ ಶ್ರೀನಿವಾಸ ಮಲ್ಯ ಅವರ ಕೊಡುಗೆ ಅಪಾರ ವಾಗಿದ್ದು, ಅಭಿವೃದ್ಧಿ ಕ್ಷೇತ್ರದಲ್ಲಿ ಇಂದಿಗೂ ಅವರನ್ನು ಮೀರಿಸಿದ ರಾಜ ಕಾರಣಿಗಳಿಲ್ಲ. ನಮಗೆಲ್ಲ ಅವರೇ ಮಾದರಿ ಎಂದರು. ಎನ್ ಐ ಟಿ ಕೆಯ ಬೋರ್ಡ್ ಆಫ್ ಗವರ್ನರ್ಸ್ ಅಧ್ಯಕ್ಷ ಪ್ರೊ. ಗೋವರ್ಧನ ಮೆಹ್ತಾ ಅಧ್ಯಕ್ಷತೆ ವಹಿಸಿದ್ದರು. ಡೈರೆಕ್ಟರ್ ಪ್ರೊ. ಸಂದೀಪ್ ಸಂಚೈತಿ ಸ್ವಾಗತಿಸಿದರು.