Wednesday, March 31, 2010

ಶ್ರೀನಿವಾಸರಿಗೆ ಆತ್ಮೀಯ ಬೀಳ್ಕೊಡುಗೆ

ಮಂಗಳೂರು,ಮಾರ್ಚ್ 31:ತಮ್ಮ ಆತ್ಮೀಯ ಹಾಗೂ ಸರಳ ನಡೆನುಡಿಗಳಿಂದ, ದಕ್ಷಿಣ ಕನ್ನಡ,ಮಡಿಕೇರಿ ಮತ್ತು ಉಡುಪಿಯಲ್ಲಿ ಕ್ಷೇತ್ರಪ್ರಚಾರ ನಿರ್ದೇಶನಾಲಯದ ಸಿನಿಮಾಗಳ ಪ್ರದರ್ಶನದಿಂದ ಎಲ್ಲರಿಗೂ ಪರಿಚಿತರಾದ ಗುಂಡಿಬೈಲು ಶ್ರೀನಿವಾಸ ಅವರಿಗೆ ಇಲಾಖಾ ವತಿಯಿಂದ ಇಂದು ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಅವರ ಅಧಿಕಾರಿಗಳು, ಸಹೋ ದ್ಯೋಗಿಗಳು, ಒಡ ನಾಡಿಗಳು ಹಾಗೂ ಮಂಗಳೂರು ವಾರ್ತಾ ಇಲಾಖೆಯ ಮಿತ್ರರು ಬೀಳ್ಕೊಡುಗೆ ಸಮಾರಂಭದಲ್ಲಿ ಉಪಸ್ಥಿತರಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ಶುಭ ಹಾರೈಸಿತು. ಕ್ಷೇತ್ರ ಪ್ರಚಾರ ಇಲಾಖಾ ಅಧಿಕಾರಿ ಟಿ.ಬಿ. ನಂಜುಂಡಸ್ವಾಮಿ ಅವರು ಶ್ರೀನಿವಾಸ ರೊಂದಿಗೆ ದುಡಿದ ಅವಧಿಗಳನ್ನು ಸ್ಮರಿಸಿಕೊಂಡರಲ್ಲದೆ, ಅವರ ಕರ್ತವ್ಯ ಪ್ರೀತಿ ಹಾಗೂ ಜನರಿಗೆ ಮಾಹಿತಿ ನೀಡುವ ಉತ್ಸಾಹವನ್ನು ಮೆಲುಕು ಹಾಕಿದರು. ಶ್ರೀನಿವಾಸರೊಂದಿಗೆ ದುಡಿಯುವ ಅನುಭವ ಅನನ್ಯವಾಗಿದ್ದು ಅವರಿಂದ ಬಹಳಷ್ಟು ವಿಷಯ ಅರಿತುಕೊಂಡ ಬಗೆಯನ್ನು ಅವರು ಹೇಳಿದರು. ಆರೋಗ್ಯ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿರುವ ಸಿದ್ಧರಾಜು ಅವರು ಬೆಳ್ತಂಗಡಿಯ ಪಟ್ರಮೆಯಂತಹ ಕುಗ್ರಾಮಗಳಲ್ಲಿ ಮಂಗನ ಕಾಯಿಲೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದ ಅನುಭವವನ್ನು ಹಂಚಿಕೊಂಡರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಅವರು, ತಾನು ತನ್ನ ಕರ್ತವ್ಯವನ್ನು ಪ್ರೀತಿಯಿಂದ ನಿರ್ವಹಿಸಿದ ಸಂತೃಪ್ತಿ ಇದೆ. ತನ್ನ ಸೇವಾವಧಿಯಲ್ಲಿ ತಾನು ಗಳಿಸಿದ್ದು ಜನರ ಹಾಗೂ ಇಲಾಖಾಧಿಕಾರಿಗಳ ಪ್ರೀತಿಯನ್ನು.ಅದು ಶಾಶ್ವತ ಎಂದರು.ಸಮಾರಂಭದಲ್ಲಿ ಅವರ ಪತ್ನಿ, ಮಕ್ಕಳು ಉಪಸ್ಥಿತರಿದ್ದರು.

Tuesday, March 30, 2010

ದಕ್ಷಿಣ ಕನ್ನಡ ಜಿಲ್ಲೆಗೆ 3581 ಕೋಟಿ ರೂ. ಸಾಲ ಯೋಜನೆ

ಮಂಗಳೂರು,ಮಾರ್ಚ್ 30:ದಕ್ಷಿಣ ಕನ್ನಡ ಜಿಲ್ಲೆಗೆ 2010-11ನೇ ಸಾಲಿಗೆ 3581 ಕೋಟಿ ರೂ. ಜಿಲ್ಲಾ ಸಾಲ ಯೋಜನೆ ರೂಪಿಸಲಾಗಿದೆ. ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ನಡೆದ ವಿಶೇಷ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು ಸಾಲ ಯೋಜನೆ ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಕಳೆದ ಸಾಲಿನಲ್ಲಿ 3007 ಕೋಟಿ ಸಾಲ ಯೋಜನೆ ಬಿಡುಗಡೆ ಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 3581 ಕೋಟಿ ರೂ.ಗಳಷ್ಟು ಹೆಚ್ಚು ಸಾಲ ಯೋಜನೆ ಸಿದ್ಧವಾಗಿದೆ. ಈ ಬಾರಿ ಆದ್ಯತಾ ವಲಯಕ್ಕೆ ಯೋಜನೆಯ ಶೇಕಡಾ 76 ರಷ್ಟು ಮೊತ್ತವನ್ನು ಮೀಸಲಿರಿಸಿದ್ದು, ಒಟ್ಟು 2726 ಕೋಟಿ ರೂ. ಕಾಯ್ದಿರಿಸಲಾಗಿದೆ. ಕೃಷಿ ವಲಯಕ್ಕೆ 1110 ಕೋ.ರೂ.,(ಶೇ.31) ನಿಗದಿಪಡಿಸಿದೆ. ಸಣ್ಣ ಕೈಗಾರಿಕೆಗೆ 431 ಕೋಟಿ ರೂ., ಇನ್ನಿತರ ಆದ್ಯತಾವಲಯಕ್ಕೆ 1185 ಕೋಟಿ ರೂ., ಹಾಗೂ ಆದ್ಯತೇತರ ವಲಯಕ್ಕೆ 855 ಕೋಟಿ ರೂ.,ಮೀಸಲಿರಿಸಿದೆ. ವಾಣಿಜ್ಯ ಬ್ಯಾಂಕುಗಳು ಒಟ್ಟು 2792ಕೋಟಿರೂ., ಸಾಲಯೋಜನೆ ನಿಗದಿಪಡಿಸಿದ್ದು ಇದು ಯೋಜನೆಯ ಶೇ.78 ರಷ್ಟಾಗಿದೆ. ಲೀಡ್ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ 80 ಕೋಟಿ ರೂ., ಹಾಗೂ ಎಸ್ ಸಿ ಡಿಸಿಸಿ ಬ್ಯಾಂಕ್ 700 ಕೋಟಿರೂ., ಮತ್ತು ಕೆನರಾ ಬ್ಯಾಂಕ್ 488 ಕೋಟಿ ಯೋಜನೆ ರೂಪಿಸಿದೆ. ಸರ್ಕಾರದ ಪ್ರಾಯೋಜಿತ ಯೋಜನೆಗಳ ಅನುಷ್ಠಾನಕ್ಕೆ ವಿವಿಧ ಬ್ಯಾಂಕುಗಳು ಸಮರ್ಪಕ ಯೋಜನೆ ರೂಪಿಸಿದ್ದು, ಒಟ್ಟು 75 ಕೋಟಿ ರೂ.,ಗಳನ್ನು ಮೀಸಲಿರಿಸಿದೆ.
ಜಿಲ್ಲೆಯಲ್ಲಿ 2009ರ ವೇಳೆಗೆ 21,379 ಕೋಟಿ ರೂ.,ಗಳ ವಹಿವಾಟನ್ನು ನಡೆಸಿದ್ದು,ಇಲ್ಲಿನ 407 ಬ್ಯಾಂಕ್ ಶಾಖೆಗಳಲ್ಲಿ 13,782ಕೋಟಿ ರೂ., ಠೇವಣಿ ಹಾಗೂ 7597 ಕೋಟಿ ರೂ.,ಮುಂಗಡ ಸೇರಿದೆ ಎಂದು ಲೀಡ್ ಬ್ಯಾಂಕಿನ ಉಪಮಹಾಪ್ರಬಂಧಕ ಸುಜೀರ್ ಪ್ರಭಾಕರ ಅವರು ಮಾಹಿತಿ ನೀಡಿದರು. ಜಿಲ್ಲಾ ಸಾಲ ಯೋಜನೆ 2009-10 ರಡಿ ಮೂರನೇ ತ್ರೈಮಾಸಿಕದಲ್ಲಿ 2340 ಕೋಟಿ ರೂ., ಸಾಧನೆಗೆ ಗುರಿ ನಿಗದಿಯಾಗಿದೆ. 2065 ಕೋಟಿ ರೂ., ಸಾಲ ಬಿಡುಗಡೆಯಾಗಿದೆ.2009ರ ಡಿಸೆಂಬರ್ ವರೆಗೆ ತ್ರೈಮಾಸಿಕ ಗುರಿಯ ಶೇ.88 ಸಾಧನೆಯಾಗಿದೆ. ಆದ್ಯತಾ ವಲಯದ ಸಾಲ ಯೋಜನೆಯಡಿ 1737 ಕೋ.ರೂ., ಗುರಿ ನಿಗದಿಯಾಗಿದ್ದು, ಇದರಲ್ಲಿ 1412 ಕೋಟಿ ರೂ., ವಿತರಿಸಿ ಶೇ.83 ಗುರಿ ಸಾಧಿಸಲಾಗಿದೆ. ಕೃಷಿಗೆ 775 ಕೋಟಿ ರೂ., ಸಣ್ಣ ಕೈಗಾರಿಕೆಗೆ 210 ಕೋಟಿ ರೂ., ಇತರ ಆದ್ಯತಾ ನಲಯಕ್ಕೆ 427 ಕೋಟಿ ರೂ., ಸಾಲ ನೀಡಲಾಗಿದೆ.
ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಉದಯ ಕುಮಾರ್ ಹೊಳ್ಳ ಸ್ವಾಗತಿಸಿದರು. ನಬಾರ್ಡ್ ನ ಎಜಿಎಂ ಕೆ.ಪಿ. ಉಡುಪ, ಜಿ.ಪಂ. ಯೋಜನಾ ನಿರ್ದೇಶಕರಿ ಸೀತಮ್ಮ ಅವರು ಉಪಸ್ಥಿತರಿದ್ದರು.

'ಮಾದಕ ದ್ರವ್ಯ ವ್ಯಸನದಿಂದ ಯುವಶಕ್ತಿ ಅಶಕ್ತ'

ಮಂಗಳೂರು,ಮಾರ್ಚ್ 30:ಮಾಧ್ಯಮಗಳು ಧನಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡಬೇಕು; ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಾದಕದ್ರವ್ಯ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಮಾಡಬೇಕು ಎಂದು ಹಿರಿಯ ಪತ್ರಕರ್ತರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಹೇಳಿದರು.
ಅವರಿಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ನವದೆಹಲಿಯ ಸಮಾಜಿಕ ಭದ್ರತೆಯ ರಾಷ್ಟ್ರೀಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಕರ್ತರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ, ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಾದಕದ್ರವ್ಯ ವ್ಯಸನದ ಬಗ್ಗೆ ಮಾಧ್ಯಮ ಜಾಗೃತಿ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿ ಯಿಂದ ಹಿಡಿದು ಕೌಟುಂಬಿಕ ಕಲಹ ದವರೆಗೆ ಮಾದಕ ದ್ರವ್ಯ ಕಾರಣ ವಾಗಿದ್ದು, ಒಟ್ಟು ಪರಿಣಾಮ ಮುಖ್ಯವಾಗಿ ಹೆಣ್ಮಕ್ಕಳು ಮತ್ತು ಸಮಾಜದ ಮೇಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಇನ್ನಷ್ಟು ಬೆಳಕು ಚೆಲ್ಲುವ ಅಗತ್ಯವಿದೆಯಲ್ಲದೆ, ಮಾನವೀಯ ವರದಿಗಳು ಪ್ರಕಟಗೊಳ್ಳಬೇಕು ಎಂದರು.ಮಾದಕ ದ್ರವ್ಯಗಳ ಪೂರೈಕೆ ತಡೆ ಬಗ್ಗೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳ ಬೇಕೆಂದು ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಯಶೀಲರಾವ್ ತಿಳಿಸಿದರು.ಸಮಾಜಕ್ಕಾಗಿ,ಸರ್ವರ ಹಿತಕ್ಕಾಗಿ ಮಾಡಬೇಕಾದ ಕೆಲಸವಿದಾಗಿದ್ದು, ಈ ಬಗ್ಗೆ ಹೆಚ್ಚು ಪ್ರಯತ್ನ ಶೀಲರಾಗ ಬೇಕೆಂದರು. ಪತ್ರಕರ್ತ ರೊನಾಲ್ಡ್ ಅನಿಲ್ ಫರ್ನಾಂಡೀಸ್ ಅವರು ವಿಷಯದ ಬಗ್ಗೆ ಪವರ್ ಪಾಯಿಂಟ್ ಪ್ರಸಂಟೇಷನ್ ನೀಡಿದರು. ಪತ್ರಕರ್ತ ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ ಸ್ವಾಗತಿಸಿದರು.ನಗರದ ಬೆಸೆಂಟ್,ಸಂತ ಅಲೋಶಿಯಸ್ ಹಾಗೂ ಸುರತ್ಕಲಿನ ಗೋವಿಂದದಾಸ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Monday, March 29, 2010

ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಪೂರ್ವಸಿದ್ಧತಾ ಸಭೆ: ಪರೀಕ್ಷೆಗೆ 33,236 ವಿದ್ಯಾರ್ಥಿಗಳು

ಮಂಗಳೂರು, ಮಾರ್ಚ್29:ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 95 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 33,236 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿರುವರು. ಪರೀಕ್ಷೆ ಸುಸೂತ್ರವಾಗಿ ನಡೆಯಲು ಸಿದ್ಧತೆ ನಡೆಸಲಾಗಿದ್ದು, ಮಂಗಳೂರು ಪಟ್ಟಣ ಪ್ರದೇಶದಲ್ಲಿ ಆರು ಪರೀಕ್ಷಾ ಕೇಂದ್ರಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪಿ. ಶಿವಶಂಕರ್ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಪರೀಕ್ಷೆ ಬರೆಯಲು ಕೈಗೊಂಡ ಕ್ರಮಗಳ ಬಗ್ಗೆ ಸವಿವರವಾದ ಚರ್ಚೆ ನಡೆಯಿತು.ಮಂಗಳೂರಿನ ಕುಲಶೇಕರದ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ, ಗಣಪತಿ ಪ.ಪೂ. ಕಾಲೇಜು ಹಂಪನಕಟ್ಟೆ, ಸರ್ಕಾರಿ ಪ.ಪೂ. ಕಾಲೇಜು ರಥಬೀದಿ, ಸಂತ ಜೆರೋಸಾ ಪ್ರೌಢಶಾಲೆ ಜಪ್ಪು, ಕಪಿತಾನಿಯೋ ಪ್ರೌಢಶಾಲೆ ಕಂಕನಾಡಿ, ಪಾಂಪೈ ಪ್ರೌಢಶಾಲೆ ಊರ್ವದಲ್ಲಿರುವ ಪರೀಕ್ಷಾ ಕೇಂದ್ರಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. 33,236 ವಿದ್ಯಾರ್ಥಿಗಳಲ್ಲಿ 29,498 ವಿದ್ಯಾರ್ಥಿಗಳು ರೆಗ್ಯುಲರ್ ವಿದ್ಯಾರ್ಥಿ ಗಳಾಗಿರುವರು. ಇವರಲ್ಲಿ 17,156 ಗಂಡು ಮಕ್ಕಳು ಮತ್ತು 16080 ಹೆಣ್ಣು ಮಕ್ಕಳು. ಇವರಲ್ಲಿ 877 ಪುನರಾವರ್ತಿತ ಶಾಲಾ ಮಕ್ಕಳು ಸೇರಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಗಳಿಗೆ ಮಂಗಳೂರಿನಲ್ಲಿ ವ್ಯವಸ್ಥೆ ಮಾಡಲಾಗಿದ್ದು, 2232 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿರುವರು. ಖಾಸಗಿ ಅಭ್ಯರ್ಥಿಗಳಲ್ಲಿ ಪುನರಾವರ್ತಿತ ಪರೀಕ್ಷೆ ಬರೆಯುವವರ ಸಂಖ್ಯೆ 629. ವಿದ್ಯಾರ್ಥಿಗಳು ಪುನರಾವರ್ತಿತ ಪರೀಕ್ಷೆ ಬರೆಯಲಿರುವರು. ಪರೀಕ್ಷಾ ಕೇಂದ್ರಗಳ ಪರಿಶೀಲನೆಗೆ ತಾಲೂಕು ಮಟ್ಟದ ತಪಾಸಣಾ ತಂಡಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ವಹಿಸಲು ಸ್ಥಾನಿಕ ದಳವನ್ನೂ ರಚಿಸಲಾಗಿದೆ. ಸಭೆಯಲ್ಲಿ ಬಿಇಒಗಳು, ಸಂಬಂಧ ಪಟ್ಟ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಶ್ನೆ ಪತ್ರಿಕೆ ಅವಲೋಕನೆಗೆ 15 ನಿಮಿಷ: ಪರೀಕ್ಷೆಯು ಬೆಳಗ್ಗೆ 10.30ಕ್ಕೆ ಆರಂಭವಾಗಲಿದ್ದು, 10.30ರಿಂದ 10.45ರವರೆಗೆ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ಅವಲೋಕಿಸಲು ಅವಕಾಶ ಮಾಡಿಕೊಡಲಾಗಿದೆ. ಸರ್ಕಾರ ಈ ಸಂಬಂಧ ಆದೇಶವನ್ನು ಹೊರಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಆದೇಶ ಪಾಲನೆ ಕುರಿತು ಮಾಹಿತಿ ನೀಡುವಂತೆ ಸಭೆಯಲ್ಲಿ ಸೂಚನೆಯನ್ನು ನೀಡಲಾಯಿತು. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಸೆಕ್ಷನ್ 144ರ ಪ್ರಕಾರ ಘೋಷಿಸಿ ಅಗತ್ಯ ರಕ್ಷಣೆಯ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ. 1.4.10 ರಿಂದ 9.4.10ರ ತನಕ ಜಿಲ್ಲೆಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಡೆಸಲಾಗುವ ಆಯಾ ಕೇಂದ್ರಗಳ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

Saturday, March 27, 2010

ಆರೋಗ್ಯ ಸೇವೆಗೆ ಜಿಲ್ಲೆಗೆ ಮತ್ತೆ ಏಳು 108 ವಾಹನ ಸೇರ್ಪಡೆ

ಮಂಗಳೂರು,ಮಾರ್ಚ್27: ಯಾವುದೇ ವ್ಯಕ್ತಿಯು ತುರ್ತು ಪರಿಸ್ಥಿತಿಯಲ್ಲಿದ್ದಾಗ ಅವರಿಗೆ ಉಚಿವಾಗಿ ತುರ್ತು ಆರೋಗ್ಯ ಸೇವೆ ದೊರಕಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ ಏಳು 108 ಆಂಬುಲೆನ್ಸ್ ಗಳು ಸೇರ್ಪಡೆಗೊಂಡಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆಯ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ಕರೆ ನೀಡಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಏಳು 108 ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಸಚಿವರು,ಗ್ರಾಮಾಂತರ ಜನರ ಆರೋಗ್ಯ ಸೇವೆಯನ್ನು ಗಮನದಲ್ಲಿರಿಸಿ ಇಂದಿನಿಂದ ಜಿಲ್ಲೆಯಲ್ಲಿ ಒಟ್ಟು 19 ಆಂಬುಲೆನ್ಸ್ ಗಳು ಕಾರ್ಯಾಚರಿಸಲಿವೆ ಎಂದು ತಿಳಿಸಿದರು. ಮಂಗಳೂರು ವೆನ್ಲಾಕ್, ಜಪೆ, ಮೂಡುಬಿದರೆ, ಉಳ್ಳಾಲ, ಸುರತ್ಕಲ್, ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು, ಉಪ್ಪಿನಂಗಡಿ, ಬಿ.ಸಿರೋಡು, ವಿಟ್ಲ,ಉಜಿರೆಯಲ್ಲಿ 108 ಕಾರ್ಯತತ್ಪರವಾಗಿದ್ದು,ಇಂದು ಚಾಲನೆ ದೊರೆತ ಆಂಬುಲೆನ್ಸ್ ಗಳು ಮುಲ್ಕಿ, ಕಡಬ, ಕಾಣಿಯೂರು, ನಾರಾವಿ, ವೇಣೂರು, ಪುಂಜಾಲಕಟ್ಟೆಯಲ್ಲಿ ಸೇವೆ ನೀಡಲಿದ್ದು, ಇನ್ನೊಂದಕ್ಕೆ ಸ್ಥಳ ನಿಗದಿಯಾಗಬೇಕಿದೆ. ಗ್ರಾಮೀಣರ ಆರೋಗ್ಯವನ್ನು ಗಮನದಲ್ಲಿರಿಸಿ ಆದಷ್ಟು ಶೀಘ್ರವಾಗಿ 104 ಆಂಬುಲೆನ್ಸ್ ಸೇವೆ ಕಾರ್ಯೋನ್ಮುಖವಾಗಲಿದ್ದು, ಈ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಯಲ್ಲಿ ದೊರೆಯುವ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ ಎಂದು ಹೇಳಿದರು.
108 ಸೇವೆ ಯಾವುದೇ ಗಂಭೀರ ತುರ್ತು ಸ್ಥಿತಿಯಲ್ಲಿರುವ ಜನರಿಗಾಗಿ 24X7 ಸಿಗುವ ಉಚಿತ ಸೇವೆಯಾಗಿದ್ದು, ಯಾವುದೇ ಮೊಬೈಲ್ ಅಥವಾ ಲ್ಯಾಂಡ್ ಲೈನ್ ನಿಂದ ನೇರವಾಗಿ ಸಂಪರ್ಕಿಸಬಹುದು. ತಕ್ಷಣವೇ ಅಗತ್ಯ ಸ್ಥಳಕ್ಕೆ ಆಗಮಿಸುವ ಆಂಬುಲೆನ್ಸ್ ಸೇವೆಯ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಮಹಾನಗರಪಾಲಿಕೆಯ 24X7 ನೀರು ಪೂರೈಕೆ ಬಗ್ಗೆ, ಪರಿಸರಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿವರಿಸಿದರು. ತುಂಬೆಯಲ್ಲಿ ವೆಂಟೆಡ್ ಡ್ಯಾಂ ನ್ನು ಎತ್ತರಿಸುವ ಬಗ್ಗೆ ಸುತ್ತಮುತ್ತಲ ಜನರಿಗೆ ಯಾವುದೇ ಭಯ ಬೇಡ; ಸಮಗ್ರ ಸಮೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೆ ತರುವಾಗ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುಷ್ಠಾನಕ್ಕೆ ತರಲಾಗುವುದು ಎಂದರು. ಜಿಲ್ಲಾಧಿಕಾರಿ ವಿ.ಪೊನ್ನುರಾಜ್,ಜಿಲ್ಲಾ ಪಂಚಾಯತ್ ಸಿಇಒ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗನ್ನಾಥ್ ಉಪಸ್ಥಿತರಿದ್ದರು.

ಸಾರ್ವಜನಿಕರ ಅನುಕೂಲಕ್ಕೆ ವೋಲ್ವೋ ಬಸ್:ಪಾಲೆಮಾರ್

ಮಂಗಳೂರು, ಮಾರ್ಚ್27:ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಲ್ದಾಣದಿಂದ ಮುಲ್ಕಿ,ಪಡುಬಿದ್ರಿ,ಉಡುಪಿ ಮಾರ್ಗದಲ್ಲಿ ಮಣಿಪಾಲಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಆರಂಭಿಸಲಾಗಿರುವ 6 ಅತ್ಯಾಧುನಿಕ ತಾಂತ್ರಿಕತೆಯ ಲೋಫ್ಲೋರ್ ಹವಾನಿಯಂತ್ರಿತ ವೋಲ್ವೋ ಬಸ್ಸುಗಳಿಗೆ ಜೀವಿಶಾಸ್ತ್ರ,ಪರಿಸರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಇಂದು ಬೆಳಗ್ಗೆ 10.30 ಕ್ಕೆ ಚಾಲನೆ ನೀಡಿದರು.
ಜನರ ಬೇಡಿಕೆಯನ್ನು ಗಮನದಲ್ಲಿರಿಸಿ ಬಸ್ಸು ಸೇವೆ ಆರಂಭಿ ಸಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ವಿರುವಲ್ಲಿ ಹಂತ ಹಂತವಾಗಿ ಈ ಸೇವೆಯನ್ನು ವಿಸ್ತರಿಸ ಲಾಗುವುದು, ಶೀಘ್ರದಲ್ಲೇ ನೆರೆಯ ಕಾಸರ ಗೋಡಿಗೂ ಇದೇ ಮಾದರಿಯ ವೋಲ್ವೋ ಬಸ್ಸುಗಳ ಸೇವೆಯನ್ನು ನೀಡಲಾಗುವುದು; ಜನರು ಸೌಲಭ್ಯದ ಸದ್ಬಳಕೆಯನ್ನು ಮಾಡಬೇಕೆಂದ ಸಚಿವರು, ಮಧ್ಯಮದ ವರ್ಗದ ಜನತೆಯ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಮಂಗಳೂರಿನಿಂದ ಮಣಿಪಾಲಕ್ಕೆ 60 ರೂ., ಉಡುಪಿಗೆ 55 ರೂ., ಪಡುಬಿದ್ರೆಗೆ 40 ರೂ.,ಮುಲ್ಕಿಗೆ 35 ರೂ.,ಸುರತ್ಕಲ್ ಗೆ 20 ರೂ., ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ ಎಂದರು. ಮಣಿಪಾಲದಿಂದ ಉಡುಪಿಗೆ 10 ರೂ.,ಪಡುಬಿದ್ರೆಗೆ 30 ರೂ.,ಮುಲ್ಕಿಗೆ 40 ರೂ.,ಸುರತ್ಕಲ್ ಗೆ 50 ರೂ. ನಿಗದಿಯಾಗಿದೆ ಎಂದರು.
ವೋಲ್ವೋ ಸಾರಿಗೆಗಳು ನಗರದ ಸ್ಟೇಟ್ ಬ್ಯಾಂಕ್ ನಿಂದ ಮಣಿಪಾಲದ ನಡುವೆ ಬೆಳಗ್ಗೆ 7.30 ರಿಂದ ಸಂಜೆ 6 ಗಂಟೆಯವರೆಗೆ ಪ್ರತಿ ಗಂಟೆಗೊಂದಾವರ್ತಿ ಓಡಾಟ ನಡೆಸಲಿವೆ. ಸುರತ್ಕಲ್, ಮುಲ್ಕಿ, ಪಡುಬಿದ್ರೆ ಹಾಗೂ ಉಡುಪಿಗಳಲ್ಲಿ ನಿಲುಗಡೆ ಇರುತ್ತದೆ. ಸುಖಾಸೀನ ಹಾಗೂ ಪರಿಸರಸ್ನೇಹಿ ಸೇವೆಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಗುಣಮಟ್ಟ ಹಾಗೂ ಮಿತವ್ಯಯಕಾರಿ ಸಾರಿಗೆ ಸೌಲಭ್ಯವನ್ನು ಒದಗಿಸುವ ಆಶಯದಿಂದ ಆರಂಭಿಸಲಾಗಿದೆ ಎಂದರು.
ಈ ವಾಹನದಲ್ಲಿ ಅಂಗವಿಕಲರು, ವೃದ್ಧರು ಹಾಗೂ ಮಕ್ಕಳಿಗೆ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಹತ್ತಿ ಇಳಿಯಲು ಸಾಧ್ಯ ವಾಗುವಂತೆ ರಚಿಸ ಲಾಗಿದ್ದು, ಅಂಗವಿಕಲರು ತಮ್ಮ ಗಾಲಿ ಕುರ್ಚಿಯಲ್ಲಿ ನೇರವಾಗಿ ಬಸ್ಸಿನೊಳಗೆ ಹತ್ತುವ ಹಾಗೂ ಇಳಿಯುವ ಸೌಲಭ್ಯ ಒದಗಿಸಲಾಗಿದೆ. ಈ ಸಂದರ್ಭದಲ್ಲಿ ಮೇಯರ್ ರಜನಿದುಗ್ಗಣ್ಣ, ಉಪಮೇಯರ್ ರಾಜೇಂದ್ರ , ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ಕರುಂಬಯ್ಯ,ಇತರ ಜನಪ್ರತಿನಿಧಿಗಳು,ಪಾಲಿಕೆ ಸದಸ್ಯರು,ಅಧಿಕಾರಿಗಳು ಉಪಸ್ಥಿತರಿದ್ದರು.

Friday, March 26, 2010

ಮುಗಿಯದ ನೆನಪಿನ ರೀಲು...ಗುಂಡಿಬೈಲು ಶ್ರೀನಿವಾಸ್..!

ಸಿನೆಮಾ ರೀಲುಗಳೊಂದಿಗೆ ಗುಂಡಿಬೈಲು ಶ್ರೀನಿವಾಸ್ ಅವರ ಒಡನಾಟ ಆರಂಭವಾದುದು 1971ರಲ್ಲಿ. ಪಿಯುಸಿ ಬಳಿಕ ಉಡುಪಿಯ ಕಲ್ಪಾನಾ ಟಾಕೀಸ್ನಲ್ಲಿ ಅವರ ಉದ್ಯೋಗ ಶುರು. ನಂತರ ಅವರು ಸೇರಿದ್ದು ಕ್ಷೇತ್ರ ಪ್ರಚಾರ ನಿರ್ದೇಶನಾಲಯವನ್ನು. ಅಲ್ಲಿ ಪ್ರೊಜೆಕ್ಟರನ್ನು ಬೆನ್ನಿಗಂಟಿಸಿಕೊಂಡೆ ಅವರು ಹಳ್ಳಿಹಳ್ಳಿ ಸುತ್ತಿದರು; ಜನತೆಗೆ ಮಾಹಿತಿ, ಮನರಂಜನೆಯ ರಸಪಾಕ ಉಣಬಡಿಸಿದರು.
ಬೇಸಿಗೆಯ ಧಗೆಯಿರಲಿ, ಧೋ ಮಳೆಯಿರಲಿ, ಥರಗುಟ್ಟುವ ಚಳಿಯಿರಲಿ ಶ್ರೀನಿವಾಸ್ ಅವರ ಶ್ರದ್ಧೆ, ಕಾಳಜಿ, ಉತ್ಸಾಹ ಎಂದಿಗೂ ಏರುಗತಿಯಲ್ಲೆ. ಹೃದಯ ಶಸ್ತ್ರಚಿಕಿತ್ಸೆಯ ಬಳಿಕವೂ ಅವರಲ್ಲಿ ಅದೇ ಕಾಯಕ ಪ್ರೇಮ. ಅವರ ಪಾಲಿಗೆ ಒಂದೊಂದು ಕಾರ್ಯಕ್ರಮವೂ ಮುಖ್ಯ; ಪ್ರತಿಯೊಂದು ರೀಲು ಕೂಡ ಅತ್ಯಮೂಲ್ಯ. ರೀಲುಗಳ ಮೂಲಕ ಸರಕಾರದ ವಿಚಾರಗಳನ್ನು ಜನತೆಗೆ ತಿಳಿಸಬೇಕು; ಜನರ ಆಸಕ್ತಿಗೂ ಸ್ಪಂದಿಸಬೇಕು. ಮಕ್ಕಳಿಗಾದರೆ ಮನರಂಜನೆ ಬೇಕೇ ಬೇಕು. ಕಂಬಾರರ `ಮಳೆರಾಯ ಅಚ್ಚುಮೆಚ್ಚು. ಹಳ್ಳಿ ಮಂದಿಗೆ ಸಣ್ಣ ಚಿತ್ರಗಳಿಗಿಂತ ಎರಡು ತಾಸಿನ ತುಕ್ರನ ಕಥೆ, ಮೊದಲ ಹೆಜ್ಜೆ ಮುಂತಾದ ಪಿಚ್ಚರೇ ಇಷ್ಟ. ಪೇಟೆ ಜನಕ್ಕೆ ತುಸು ಮಸಾಲೆ ಇದ್ದರೆ ಚೆನ್ನ. ಹೀಗೆ ಥರಾವರಿ ಸಮುದಾಯ, ಸನ್ನಿವೇಶಕ್ಕೆ ತಕ್ಕಂತೆ ಶ್ರೀನಿವಾಸ್ ರೀಲುಗಳ ಪ್ಯಾಕೇಜ್ ರೂಪಿಸುತ್ತಿದ್ದರು. ಅವರು ಜೀಪು ಹತ್ತಿದರೆಂದರೆ ಅವರೊಂದಿಗೆ ಎರಡು ಟರ್ಪಲಿನ ಬ್ಯಾಗುಗಳ ತುಂಬ ನೂರಾರು ರೀಲುಗಳೂ ಪ್ರವಾಸ ಹೊರಡುತ್ತಿದ್ದವು. ಸಣ್ಣ ಡಬ್ಬಿಯಲ್ಲಿ ಸಣ್ಣ ಚಿತ್ರ, ದೊಡ್ಡ ಡಬ್ಬದಲ್ಲಿ ದೊಡ್ಡ ಚಿತ್ರ. ಶ್ರೀನಿವಾಸ್ ದೊಡ್ಡದೊಡ್ಡ ಡಬ್ಬಗಳನ್ನು ಹಿಡಿದು ಜೀಪಿನಿಂದ ಇಳಿದರೆ ಮಕ್ಕಳಿಗೆ ಖುಷಿಯೋ ಖುಷಿ. ರೀಲು ತುಂಡಾದರೆ, ಅದರ ಅಂಚು ಹರಿದರೆ ಅದಕ್ಕೆ ಅಂಟು ಹಚ್ಚಿ ಸ್ಪ್ಲೈಸರ್ಗೆ ಅಳವಡಿಸಿ ಮತ್ತೆ ರೀಲಿಗೆ ಜೀವ ತುಂಬುವುದು ಶ್ರೀನಿವಾಸ್ ಅವರ ನಿತ್ಯದ ಕೆಲಸ. ಒಮ್ಮೆ ತೋರಿಸಿದ ರೀಲನ್ನು ಮತ್ತೆ ಪ್ರದರ್ಶಿಸಬೇಕಿದ್ದರೆ ಅದನ್ನು ಚರಕದಂತಿರುವ ರಿವೈಂಡರ್ ಗೆ ಹಾಕಿ ಹಿಂದಕ್ಕೆ ಸುತ್ತಿ ಅಣಿಗೊಳಿಸಬೇಕು. ಆಗಲೇ ಅದರ ಅಂಚು ಹರಿದಿದೆಯೋ ಎಂಬುದನ್ನೂ ಪರೀಕ್ಷಿಸಬೇಕು. ಬೆಳ್ಳಂಬೆಳಗ್ಗೆ ಪ್ರವಾಸಿ ಬಂಗಲೆಯ ವರಾಂಡದಲ್ಲಿ ಕುಳಿತು ಶ್ರೀನಿವಾಸ್ ಹಿಂದಿನ ರಾತ್ರಿ ತೋರಿಸಿದ್ದ ರೀಲುಗಳನ್ನೆಲ್ಲ ಒಂದೊಂದಾಗಿ ತೆಗೆದು ರಿವೈಂಡರ್ಗೆ ಹಾಕಿ ಒಂದು ಕೈಯಲ್ಲಿ ಅದರ ಹಿಡಿಯನ್ನು ಗಿರಗಿರನೆ ತಿರುಗಿಸುತ್ತ ಇನ್ನೊಂದು ಕೈಯಲ್ಲಿ ರೀಲುಗಳ ಆರೋಗ್ಯ ಪರೀಕ್ಷಿಸುತ್ತ ತಾದಾತ್ಮ್ಯದಲ್ಲಿ ಅದನ್ನು ಸುತ್ತಿಡುತ್ತಿದ್ದ ದೃಶ್ಯದ ನೆನಪು ಸದಾ ಹಸಿರು.
ಶ್ರೀನಿವಾಸ್ ಎಂದೊಡನೆ ಅವರನ್ನು ಬಲ್ಲ ಎಲ್ಲರ ಮನಸ್ಸಿನಲ್ಲೂ ನೆನಪಿನ ರೀಲುಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ನಡುರಾತ್ರಿಯಲ್ಲಿ ಜೀಪು ತಳ್ಳಿದ್ದು, ಕಾರ್ಯಕ್ರಮ ಸಿದ್ಧತೆಗೆ ಅವರು ಎಲ್ಲರಿಗಿಂತ ಮೊದಲೇ ಬಂದು ಕಸ ಗುಡಿಸುತ್ತಿದ್ದುದು, ಹಾಡಿಯ ಹಾದಿಯಲ್ಲಿ ಕಾಡಾನೆಗಳ ಹಿಂಡು ಎದುರಾದದ್ದು, ಕೇವಲ ಐದುನೂರು ರೂಪಾಯಿಯಲ್ಲಿ ನೂರಾರು ಮಂದಿಗೆ ಶಿರಾ-ಉಪ್ಪಿಟ್ಟು ವ್ಯವಸ್ಥೆಮಾಡಿದ್ದು... ಹೀಗೆ ಶ್ರೀನಿವಾಸ್ ಒಡನಾಟದ ನೆನಪು ಎಂದಿಗೂ ಮುಗಿಯದ ರೀಲು. ಶ್ರೀನಿವಾಸ್ ಅವರಿಗೂ ರೀಲುಗಳ ನೆನಪು ಎಂದೆಂದಿಗೂ ಮರೆಯಲಾಗದ್ದು. ಮೂರು ದಶಕಗಳಿಗೂ ಹೆಚ್ಚು ಕಾಲ ಅವರು ರೀಲುಗಳೊಂದಿಗೆ ಬದುಕಿದವರು; ಅವುಗಳನ್ನು ಅತೀವವಾಗಿ ಪ್ರೀತಿಸಿದವರು; ಧ್ಯಾನಿಸಿದವರು. ರೀಲುಗಳ ಮೂಲಕವೇ ಸಮಾಜದ ಜತೆ ಮಾತನಾಡಿದವರು. ಆ ಕೆಲಸಕ್ಕಾಗಿಯೇ ಜನಮೆಚ್ಚುಗೆ ಗಳಿಸಿದವರು.
ಶುಭ ಹಾರೈಕೆಗಳೊಂದಿಗೆ, ವಾರ್ತಾ ಇಲಾಖೆ ಮಂಗಳೂರು
(ಸಂಗ್ರಹ: ಶಿವರಾಂಪೈಲೂರು ಅವರ ಪುಸ್ತಕದಿಂದ)

'ಹೆಚ್ ಐ ವಿ ಪೀಡಿತರಿಗೂ ಬದುಕಲು ಸಮಾನ ಹಕ್ಕು'

ಮಂಗಳೂರು,ಮಾರ್ಚ್,26 :ಎಚ್ ಐ ವಿ/ ಏಡ್ಸ್ ರೋಗ ಮೊತ್ತ ಮೊದಲ ಬಾರಿಗೆ ಅಮೆರಿಕಾದಲ್ಲಿ ವರದಿಯಾದಾಗ ಈ ಮಾರಕ ರೋಗ ಭಾರತದಲ್ಲಿ ಕಂಡುಬರಲು ಸಾಧ್ಯವಿಲ್ಲ ಎಂದೇ ಬಿಂಬಿಸಲಾಯಿತು. ಆದರೆ 1986ರಲ್ಲಿ ಚೆನ್ನೈನ ವೆಲ್ಲೂರಿನಲ್ಲಿ ಎಚ್ ಐ ವಿ ಪಾಸಿಟಿವ್ ಪ್ರಕರಣ ಪತ್ತೆಯಾಯಿತು. ಅದೇ ವರ್ಷ ಮುಂಬಯಿಯಲ್ಲಿ ಏಡ್ಸ್ ಪತ್ತೆಯಾಯಿತು. 1987ರಲ್ಲಿ ಬೆಳಗಾಂವ್ ನಲ್ಲಿ ಏಡ್ಸ್ ಪತ್ತೆಯಾಯಿತು. ನಂತರ ಏಡ್ಸ್ ರೋಗ ನಮ್ಮ ಸುತ್ತಮುತ್ತಲೇ ವರದಿಯಾಗತೊಡಗಿದಾಗ ರೋಗದ ಬಗ್ಗೆ ಅರಿವು ಮೂಡಿಸುವ ಹಾಗೂ ರೋಗ ನಿಯಂತ್ರಣಕ್ಕೆ ದೇಶದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳ ಲಾಯಿತು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಡಾ. ಕಿಶೋರ್ ಕುಮಾರ್ ಅವರು ಮಾಹಿತಿ ನೀಡಿದರು.
ಇಂದು ಏಡ್ಸ್ ಬಗ್ಗೆ ನಗರ ಪ್ರದೇಶಗಳಲ್ಲಿ ಸಾಕಷ್ಟು ಮಾಹಿತಿ ಯಿದ್ದರೂ, ಗ್ರಾಮೀಣರಲ್ಲಿ ಅದರಲ್ಲೂ ಪ್ರಮುಖವಾಗಿ ಬುಡಕಟ್ಟು ಜನಾಂಗದ ಆದಿವಾಸಿಗಳಿಗೆ (ಟ್ರೈಬಲ್ಸ್) ಈ ಸಂಬಂಧ ಹೆಚ್ಚಿನ ಮಾಹಿತಿ ನೀಡುವ ಬಗ್ಗೆ ಕಾರ್ಯಯೋಜನೆ ರೂಪಿಸಲು ಇಂದು ರಾಜ್ಯ ಏಡ್ಸ್ ನಿಯಂತ್ರಣ ಘಟಕ ವೆನ್ ಲಾಕ್ ನ ಮಕ್ಕಳ ಚಿಕಿತ್ಸಾ ಘಟಕದಲ್ಲಿ ಸೆಮಿನಾರ್ ಹಾಲ್ ನಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಎನ್ ಜಿ ಒ ಗಳಿಗೆ ಕಾರ್ಯಗಾರ ಹಮ್ಮಿಕೊಂಡಿತ್ತು. ಕಾರ್ಯಗಾರದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಡಾ. ಕಿಶೋರ್ ಅವರು, ಆರಿಸಿದ ಟಾರ್ಗೆಟ್ ಗ್ರೂಪ್ ಮತ್ತು ಕ್ರಿಯಾಯೋಜನೆ ಪೂರ್ವ ತಯಾರಿ ಬಗ್ಗೆ ಹಾಗೂ ಮೈಸೂರಿನಲ್ಲಿ ಮಾರ್ಚ್ 30 ರಂದು ಏರ್ಪಡಿಸಿರುವ ರಾಜ್ಯ ಮಟ್ಟದ ಕಾರ್ಯಗಾರದ ಬಗ್ಗೆ ಮಾಹಿತಿ ಯನ್ನು ನೀಡಿದರು.
ರೋಗ ಹರಡುವಿಕೆಯ ಬಗ್ಗೆ, ಮನುಷ್ಯರಿಗೆ ಮಾತ್ರ ಬರುವ ಈ ಕಾಯಿಲೆ ಬಗ್ಗೆ, ಎ ಆರ್ ಟಿ ಮಾತ್ರೆಗಳ ಬಗ್ಗೆ, ಮಹಿಳೆಯರು ಈ ರೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗುವ ಬಗ್ಗೆ ಡಾ. ಕಿಶೋರ್ ಅವರು ವಿವರಿಸಿದರು. ಇಂದು ಬುಡಕಟ್ಟು ಜನಾಂಗದವರಿಗೆ ಈ ಸಂಬಂಧ ಮಾಹಿತಿ ನೀಡಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಮಾತನಾಡಿದ ಜನಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಅವರು 1990 ರವರೆಗೆ ಬುಡಕಟ್ಟು ಜನಾಂಗದಲ್ಲಿದ್ದವರು ಕೇವಲ 19.16 ಲಕ್ಷ ಜನರು. 2001ರ ಪ್ರಕಾರ 34.64 ಲಕ್ಷ ಜನರು ಈ ಜನಾಂಗದಲ್ಲಿದ್ದು, ರಾಯಚೂರಿನಲ್ಲಿ ಅತೀ ಹೆಚ್ಚು ಬುಡಕಟ್ಟು ವರ್ಗದ ಜನಸಂಖ್ಯೆಯಿದೆ; ಇವರಿಗೆ ಆರೋಗ್ಯಕರವಾಗಿ ಬದುಕಲು ಸಮಾನ ಅವಕಾಶವಿದ್ದು, ಆರೋಗ್ಯ ಕಾರ್ಯಕ್ರಮಗಳಡಿ ಸೇರ್ಪಡೆಗೊಳಿಸಿ ಮಾಹಿತಿ ನೀಡುವ ಬಗ್ಗೆ ಚರ್ಚಿಸಲಾಯಿತು. ಬಳಿಕ ಹೊಂಗಿರಣ ಪಾಸಿಟಿವ್ ನೆಟ್ ವರ್ಕನ ಶ್ರೀಮತಿ ಸೀಮಾ, ಅವರೊಂದಿಗೆ ಅನುಭವ ಹಂಚಿಕೆ, ಐಸಿಟಿಸಿಯ ಆಶಾ ಕುಮಾರಿ ಅವರು ಏಡ್ಸ್ ಸಂಬಂಧ ಜಿಲ್ಲೆಯಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಎಚ್ ಐ ವಿ ಪ್ರಿವೆನ್ಷನ್ ಮತ್ತು ನಿಯಂತ್ರಣದ ಬಗ್ಗೆ, ಕ್ರಿಯಾಯೋಜನೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

Thursday, March 25, 2010

ಮಾರ್ಚ್ 27ರಂದು ಮಂಗಳೂರು-ಉಡುಪಿ ವೊಲ್ವೊ ಬಸ್ಸು ಆರಂಭ: ಸಚಿವ ಪಾಲೆಮಾರ್

ಮಂಗಳೂರು, ಮಾರ್ಚ್ 25 :(ಕರ್ನಾಟಕ ವಾರ್ತೆ)- ಮಂಗಳೂರು- ಉಡುಪಿ- ಮಣಿಪಾಲ ನಡುವೆ ಕೆ ಎಸ್ ಆರ್ ಟಿ ಸಿ ವೋಲ್ವೊ ಬಸ್ಸುಗಳು ಮಾರ್ಚ್ 27 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಮತ್ತು ಮಣಿಪಾಲದಿಂದ ಏಕ ಕಾಲದಲ್ಲಿ ಸಂಚಾರ ಆರಂಭಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಕೃಷ್ಣ ಪಾಲೆಮಾರ್ ಅವರು ತಿಳಿಸಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಕೃಷ್ಣ ಪಾಲೆಮಾರ್ ಮತ್ತು ಮಣಿಪಾಲದಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ವಿ.ಎಸ್. ಆಚಾರ್ಯ ಅವರು ಸರ್ಕಾರಿ ವೋಲ್ವೋ ಬಸ್ ಸಂಚಾರಕ್ಕೆ ಹಸಿರುವ ನಿಶಾನೆ ತೋರಿಸಲಿದ್ದಾರೆ.

Monday, March 22, 2010

2008/09 ರ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

ಮಂಗಳೂರು,ಮಾರ್ಚ್22: ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಆಶ್ರಯದಲ್ಲಿ ಯಕ್ಷಗಾನ ಕಲಾವಿದರಿಗೆ 2008 ಮತ್ತು 2009 ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು. ಶಾಸಕ ವಸಂತ ಬಂಗೇರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಕಲಾವಿದರಿಗೆ ಆರೋಗ್ಯ ವಿಮೆ, ನಿವೃತ್ತಿ ವಿಮೆ,ಮತ್ತು ನಿವೃತ್ತಿ ವೇತನ ದೊರಕಿಸಿ ಕೊಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಹೇಳಿದರು.
ಸಮಾರಂಭ ವನ್ನುದ್ದೇಶಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖಾ ಕಾರ್ಯದರ್ಶಿ ಬಿ. ಆರ್. ಜಯರಾಮರಾಜೇ ಅರಸ್ ಅವರು, 400 ಯಕ್ಷಗಾನ ಕಲಾವಿದರಿಗೆ ಸರ್ಕಾರದ ವತಿಯಿಂದ ಮಾಶಾಸನ ನೀಡಲು ಚಿಂತನೆ ನಡೆಸಲಾಗಿದ್ದು ಇದಕ್ಕೆ ಮುಖ್ಯ ಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ,ಮಾಶಾಸನವನ್ನು 3 ಸಾವಿರ ರೂಪಾಯಿಗಳಿಂದ 12 ಸಾವಿರಕ್ಕೆ ಏರಿಸಲು ಶಿಫಾರಸ್ಸು ಮಾಡಲಾಗಿದೆ. ಮುಂದಿನ ವರ್ಷದಿಂದ ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿಯನ್ನು 1 ಲಕ್ಷ ರೂ. ಮೊತ್ತದೊಂದಿಗೆ ಪ್ರದಾನ ಮಾಡಲಾಗುವುದು.ಯಕ್ಷಗಾನಕ್ಕೆ ಸಾಂಸ್ಕೃತಿಕ ಪರಂಪರೆ ಇರುವ ಹಿನ್ನಲೆಯಲ್ಲಿ ಯುನೆಸ್ಕೋ ಮನ್ನಣೆ ಸಿಗುವಂತಾಗಲು ಪ್ರಯತ್ನಗಳು ಮುಂದುವರೆದಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರು ಪ್ರಶಸ್ತಿಯ ಕಿರು ಹೊತ್ತಿಗೆಯನ್ನು ಬಿಡುಗಡೆ ಗೊಳಿಸಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಎಚ್.ಸುಬ್ಬಣ್ಣ ಭಟ್, ಎಂ. ಕೆ. ರಮೇಶ್ ಆಚಾರ್ಯ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.ಅಕಾಡೆಮಿ ರಿಜಿಸ್ಟ್ರಾರ್ ನಾರಾಯಣ ಸ್ವಾಮಿ ಸ್ವಾಗತಿಸಿದರು.ಅಕಾಡಮಿ ಸದಸ್ಯ ಮುರಳಿ ಕಡೆಕಾರ್ ಅವರು ವಂದಿಸಿದರು.ಪ್ರೊ.ಸುಗ್ಗನಬಳ್ಳಿ ಕಾರ್ಯಕ್ರಮ ನಿರೂಪಣೆ ಮಾಡಿದರು.

Sunday, March 21, 2010

ಕಂದಾಯ ಸೋರಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು, ಮಾರ್ಚ್21: ಮುಂದಿನ ಹಣಕಾಸು ವರ್ಷದಿಂದ ಕಂದಾಯ ಸೋರಿಕೆ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳೂವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಮಂಗಳೂರಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಂದಾಯ ಸೋರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ಬೇಕಾದ ಕ್ರಮಗಳನ್ನು ಆರಂಭಿಸಲು ಕಾರ್ಯಕ್ರಮ ರೂಪಿಸಲಾಗಿದ್ದು ,ತೆರಿಗೆ ಸಂಗ್ರಹವನ್ನು ಹೆಚ್ಚಿಸಲಾಗುವುದು.ಈ ಪ್ರಯತ್ನ ಏಪ್ರಿಲ್ 1 ರಿಂದ ಆರಂಭವಾಗಲಿದೆ, ಮುಂದಿನ ಬಜೆಟ್ 1 ಲಕ್ಷ ಕೋಟಿ ರೂಪಾಯಿದ್ದಾಗಿದೆ ಎಂದರು. ಖಾಲಿ ಬಿದ್ದಿರುವ ಉಪ ಲೋಕಾಯುಕ್ತರ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಮಂಗಳೂರಿನ ಜಿಲ್ಲಾ ಕಾರಾಗೃಹ ಸೇರಿದಂತೆ ರಾಜ್ಯದಲ್ಲಿ ನಗರ ಮಧ್ಯೆಯಲ್ಲಿರುವ ಎಲ್ಲಾ ಜೈಲುಗಳನ್ನು ನಗರದ ಹೊರ ಭಾಗಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ, ಈ ಪ್ರಯುಕ್ತ ಶಿವಮೊಗ್ಗ ಜೈಲು ಸ್ಥಳಾಂತರ ಮಾಡಲು ಬೇಕಾದ ಹಣವನ್ನು ಬಿಡುಗಡೆ ಮಾಡಲಾಗಿದೆ, ಸ್ಥಳಾಂತರ ಗೊಂಡ ಜೈಲು ಪ್ರದೇಶವನ್ನು ಪಿಪಿಪಿ ಆಧಾರದಲ್ಲಿ ಇತರ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು ಬೆಳೆಗಾರರಿಂದ ಅಡಿಕೆ ಖರೀದಿಸಲು 5 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮತ್ತೆ 3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಅಡಿಕೆ ಉತ್ಪಾದನಾ ವೆಚ್ಚದ ಬಗ್ಗೆ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಮೀನುಗಾರರಿಗೆ ಸಬ್ಷಿಡಿ, ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವು ಸೇರಿದಂತೆ ಜನಸಾಮಾನ್ಯರ ಅಭ್ಯುದಯಕ್ಕೆ ಪೂರಕವಾಗುವ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾ ಉಸ್ತುವರಿ ಸಚಿವ ಕೃಷ್ಣಾ ಜೆ. ಪಾಲೇಮಾರ್, ಶಾಸಕ ಯೋಗಿಶ್ ಭಟ್,ಎಂ ಎಲ್ ಸಿ ಭಾರತಿ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಗ್ರಾಮೀಣ ವರದಿಗಾರಿಕೆಗೆ ಪ.ಗೋ ಪ್ರಶಸ್ತಿ ಪ್ರದಾನ

ಮಂಗಳೂರು,ಮಾರ್ಚ್21:ವಸ್ತುನಿಷ್ಠ,ಸತ್ಯ,ಸಮರ್ಪಕ,ಸಮಾಜಮುಖಿ ವರದಿಗಳಿಂದ ಪತ್ರಿಕೆ ಮತ್ತು ಪತ್ರಕರ್ತರ ಮೌಲ್ಯ ಹೆಚ್ಚುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿಗಳಾದ ಜಯರಾಮರಾಜೇ ಅರಸ್ ಅವರು ಹೇಳಿದರು.ನಮ್ಮಲ್ಲಿ ಇಂದು ಸಿನಿಸಿಸಂ ಬೆಳೆದಿದ್ದು,ನಿರಾಶೆ,ಎಲ್ಲದರಲ್ಲೂ ಲೋಪಗಳನ್ನು ಹುಡುಕುವುದು ಅಭ್ಯಾಸವಾಗಿದೆ;ಸಕರಾತ್ಮಕ ಚಿಂತನೆ ಮತ್ತು ಸಮಾಜಮುಖಿ ಬರವಣಿಗೆಗಳಿಂದ ನಮಗೂ ನಮ್ಮ ಸುತ್ತಲಿನವರ ಬದುಕಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಅವರಿಂದು ಪ್ರೆಸ್ ಕ್ಲಬ್ ನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 2009 ರ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದರು.ಎಲ್ಲ ರಂಗದಲ್ಲೂ ಒಳ್ಳೆ ಕೆಲಸಗಳಾಗುತ್ತಿರುವ ಬಗ್ಗೆ, ಸಕರಾತ್ಮಕ ಚಿಂತನೆಗಳನ್ನು ಮೂಡಿಸಲು ಮಾಧ್ಯಮಗಳು ಆದ್ಯತೆ ನೀಡಬೇಕು. ಸಮಾಜದಲ್ಲಿರುವ ಅಗತ್ಯದ ಬಗ್ಗೆ ಕ್ಷಕಿರಣ ಬೀರುವ ಕೆಲಸಗಳನ್ನು ಮಾದ್ಯಮ ಮಾಡಬೇಕು ಎಂದ ಅವರು,ಪ್ರಜಾಪ್ರಭುತ್ವದ ಪ್ರಖರತೆಗೆ ಪತ್ರಿಕೆಗಳ ಅಗತ್ಯವನ್ನು ಒತ್ತಿಹೇಳಿದರು.ಸರ್ಕಾರ ರಾಜ್ಯ ಮಟ್ಟದಲ್ಲಿ ಉತ್ತಮ ವರದಿಗಾರಿಕೆಗೆ ಟಿ ಎಸ್ಸಾರ್ ಪ್ರಶಸ್ತಿಯನ್ನು ನೀಡುತ್ತಿದ್ದು,ಈ ವರ್ಷದಿಂದ ಮೊಹರೆ ಹನುಮಂತರಾಯ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದೆ. ಪ್ರಶಸ್ತಿಗಳು ಉತ್ತಮ ವರದಿಗಾರಿಕೆಗೆ ಹಾಗೂ ವರದಿಗಾರರಿಗೆ ಪ್ರೇರಣೆ ನೀಡುತ್ತದೆ ಎಂದ ಅವರು, ಪೇಯ್ಡ್ ನ್ಯೂಸ್ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಪತ್ರಿಕೋದ್ಯಮ ಸಂಪೂರ್ಣವಾಗಿ ವಾಣೀಜ್ಯೀಕರಣವಾಗುವುದರಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರೀಶ್ ಕೆ. ಅದೂರ್ ಅವರು ಪತ್ರಿಕೋ ದ್ಯಮದಲ್ಲಿ ತಮ್ಮ 13 ವರ್ಷಗಳ ಅನುಭವವನ್ನು ಹಂಚಿ ಕೊಂಡರಲ್ಲದೆ ಪೈಪೋಟಿ ಯುಗದಲ್ಲಿ ಮೌಲ್ಯಗಳನ್ನು ಉಳಿಸಲು ಆದ್ಯತೆ ನೀಡಬೇಕೆಂದು ಹೇಳಿದರು. ವರದಿ ಗಾರಿಕೆಯಲ್ಲಿ ಧನಾತ್ಮಕ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗುರುವಪ್ಪ ಬಾಳೆಪುಣಿ ಸ್ವಾಗತಿಸಿದರು.ಪುಷ್ಪರಾಜ್ ವಂದಿಸಿದರು.ಸಂಘದ ಅಧ್ಯಕ್ಷ ಹರ್ಷ ಅಧ್ಯಕ್ಷತೆ ವಹಿಸಿದ್ದರು.

Saturday, March 20, 2010

ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ

ಮಂಗಳೂರು, ಮಾರ್ಚ್ 20: ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯ ಮಂತ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್, ಮೇಯರ್ ರಜನಿ ದುಗ್ದಣ್ಣ ಅವರು ಸ್ವಾಗತಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜಶೆಟ್ಟಿ, ಉಪಮೇಯರ್ ರಾಜೇಂದ್ರ ,ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್, ನಗರ ಪಾಲಿಕೆ ಆಯುಕ್ತ ಡಾ.ವಿಜಯಪ್ರಕಾಶ್,ಶಾಸಕ ಯೋಗಿಶ್ ಭಟ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಎಸ್ ಪಿ ಡಾ.ಸುಬ್ರಮ ಣ್ಯೇಶ್ವರ ರಾವ್ ಉಪಸ್ಥಿತರಿದ್ದರು.

Wednesday, March 17, 2010

ಕರಾವಳಿಯಲ್ಲಿ ಸುಸ್ಥಿರ ಮೀನುಗಾರಿಕೆ:ನಿರ್ಣಯಗಳು

ಮಂಗಳೂರು ಮಾರ್ಚ್17: ಕರಾವಳಿಯ ನದಿ ಹಾಗೂ ಮೀನುಗಾರಿಕೆ ಇಲ್ಲಿನ ಸೂಕ್ಷ್ಮ ಪರಿಸರವನ್ನು ಅವಲಂಬಿಸಿದ್ದು,ಈ ದೃಷ್ಟಿಯಿಂದ ಪಾರಂಪರಿಕ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಮತ್ತು ಸಹನಶೀಲ ಮೀನುಗಾರಿಕೆಯ ಉದ್ದೇಶ ಈಡೇರಿಸಲು ಸಮಗ್ರ ಸಹನಶೀಲ ಮೀನುಗಾರಿಕೆ ನೀತಿ ಜಾರಿಗೆ ತರಲು ಕಾರ್ಯಾಗಾರದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಇಂದು ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ರಾಜ್ಯ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಒಂದು ದಿನದ ಕಾರ್ಯಾ ಗಾರದಲ್ಲಿ ಜಿಲ್ಲೆಯ ನದಿ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದಂತೆ ನಡೆದ ಸಮಗ್ರ ಚರ್ಚೆಯ ಬಳಿಕ ಸರ್ಕಾರಕ್ಕೆ ಇಲ್ಲಿನ ಜನಪರ ಹಾಗೂ ವೈಜ್ಞಾನಿಕ ಅಭಿಪ್ರಾಯಗಳನ್ನು ತಿಳಿಸುವುದಾಗಿ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.
ಕೈಗಾರಿಕೆ ಹಾಗೂ ನಗರ ತ್ಯಾಜ್ಯವನ್ನು ಸಮುದ್ರಕ್ಕೆ ಸಂಸ್ಕರಿಸಿ ಬಿಡುವ ಬಗ್ಗೆ ಹಾಗೂ ಜೂನ್ –ಆಗಸ್ಟ ತಿಂಗಳವರೆಗೆ ಮೀನುಗಾರಿಕೆಗೆ ವಿರಾಮ ನೀಡಲು ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಪರಿಣಾಮಕಾರಿ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು.
ಆಮೆ, ಡಾಲ್ಫಿನ್ ಸೇರಿದಂತೆ ಅತ್ಯಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಜಲಚರಗಳ ಸಂರಕ್ಷಣೆಗೆ ಸಂಬಂಧಪಟ್ಟ ಇಲಾಖೆಗಳು ಸಹಯೋಗದಿಂದ ಕರ್ತವ್ಯ ನಿರ್ವಹಿಸುವಂತೆ ಹಾಗೂ ಬೃಹತ್ ಮೀನುಗಾರಿಕೆ ದೋಣಿಗಳು ಟೆಡ್ ಉಪಕರಣ ಅಳವಡಿಸಬೇಕೆಂದು ಹೇಳಲಾಯಿತು.
ಮರಿಮೀನುಗಳ ಅನಾವಶ್ಯಕ ನಾಶ ತಪ್ಪಿಸಲು ಮೀನಿನ ಬಲೆಯ ಕಣ್ಣಿನ ಕನಿಷ್ಠ ಅಳತೆಯನ್ನು ಕರ್ನಾಟಕ ಸಮುದ್ರ ಮೀನುಗಾರಿಕೆ ಕಾಯ್ದೆಯನ್ವಯ ಜಾರಿಗೊಳಿಸಲು ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಪಶ್ಚಿಮ ಘಟ್ಟದಿಂದ ಹರಿದುಬರುವ ನದಿ ನೀರು ಸಮುದ್ರ ಸೇರುವ ಪ್ರಕ್ರಿಯೆ ಸುಸ್ಥಿರ ಮೀನುಗಾರಿಕೆಯ ಅಗತ್ಯವಾಗಿದ್ದು, ನೇತ್ರಾವತಿ ನದಿ ತಿರುವು ಯೋಜನೆ ಹಾಗೂ ಬೃಹತ್ ಯೋಜನೆಗಳು ಮೀನುಗಾರಿಕೆಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಇಂತಹ ಯೋಜನೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಲಾಯಿತು.
ಕರಾವಳಿ ಪ್ರದೇಶದುದ್ದಕ್ಕೂ ಇರುವ ಸೂಕ್ಷ್ಮ ಪ್ರದೇಶಗಳನ್ನು ಮೀನುಗಾರಿಕೆ ವೈವಿಧ್ಯದ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಸಂರಕ್ಷಿಸಬೇಕಲ್ಲದೆ, ಸರ್ಕಾರ ಜಾರಿಗೆ ತರುತ್ತಿರುವ ಕರಾವಳಿ ಹಸಿರು ಕವಚ ಕರಾವಳಿಯಾದ್ಯಂತ ವಿಸ್ತರಿಸಬೇಕು. ಮೀನುಗಾರರನ್ನು ಈ ಸಂಬಂಧ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಿವಿಧ ಸಂಶೋಧನಾ ಸಂಸ್ಥೆಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಅಳಿವೆ, ಕಾಂಡ್ಲಾ ಹಾಗೂ ನದಿಮುಖಗಳನ್ನು ಮೀನುಗಾರಿಕೆಜ ಹಿತದೃಷ್ಟಿಯಿಂದ ಸಂರಕ್ಷಿಸಬೇಕೆಂಬ ನಿರ್ಣಯಗಳನ್ನು ಕಾರ್ಯಾಗಾರದಲ್ಲಿ ತೆಗೆದುಕೊಳ್ಳಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇದಾಜ್ಞೆ

ಮಂಗಳೂರು, ಮಾರ್ಚ್17:(ಕರ್ನಾಟಕ ವಾರ್ತೆ)- ಮಾರ್ಚ್ 18 ರಿಂದ 31 ರವರೆಗೆ ದ್ವಿತೀಯ ಪಿಯುಸಿ ಮಕ್ಕಳಿಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಸುಲಲಿತವಾಗಿ ನಡೆಯುಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪವಿಭಾಗ ಮಟ್ಟದ ಜಾಗೃತದಳ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಹಾಯಕ ಕಮಿಷನರ್ ನೇತೃತ್ವದಲ್ಲಿ ಜಾಗೃತದಳ ರಚಿಸಲಾಗಿದೆ. ತಲಾ ಮೂರು-ನಾಲ್ಕು ಪರೀಕ್ಷಾ ಕೇಂದ್ರಗಳಿಗೆ ಓರ್ವ ಗ್ರೂಪ್-ಎ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷ ಸಂಬಂಧ ಯಾವುದೇ ರೀತಿ ಸಮಸ್ಯೆಗಳಿದ್ದರೆ ಉಪನಿರ್ದೇಶಕರು ಪ.ಪೂ. ಶಿಕ್ಷಣ ಇಲಾಖೆ- 9845097753, ವಿಶೇಷ ಜಾಗೃತ ದಳ ಅಧ್ಯಕ್ಷರು -9448215402, ಜಿಲ್ಲಾಧಿಕಾರಿ ಕಚೇರಿ - 0824- 2220590. 2220584, 1077 (ಉಚಿತ ಕರೆ) ಮಾಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 45 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 29,168 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ರೆಗ್ಯುಲರ್ 23,439, ಪುನರಾವರ್ತಿತ 2301, ಖಾಸಗಿ 3428 ಅಭ್ಯರ್ಥಿಗಳಿರುತ್ತಾರೆ. ಪರೀಕ್ಷಾ ಕೇಂದ್ರದ ಪೂರ್ಣ ಸಿದ್ಧತೆಯನ್ನು ಮಾರ್ಚ್ 17 ರಂದೇ ಮಾಡಲಾಗಿದೆ.

ಮಲೆನಾಡಿನಲ್ಲಿ 16 ಮತ್ಸ್ಯಧಾಮ ಅಭಿವೃದ್ಧಿ: ಅಶೀಸರ

ಮಂಗಳೂರು,ಮಾರ್ಚ್17:ಜೀವವೈವಿಧ್ಯ ಮಂಡಳಿ ಮಲೆನಾಡಿನಲ್ಲಿ 16 ಮತ್ಸ್ಯಧಾಮಗಳನ್ನು ಗುರುತಿಸಿದ್ದು, ಅವುಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾದ ಅನಂತಹೆಗಡೆ ಅಶೀಸರ ಹೇಳಿದರು.ಅವರಿಂದು ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆ ಸಹಯೋಗದಲ್ಲಿ ಕರಾವಳಿ ಮತ್ತು ಮಲೆನಾಡಿನ ಸುಸ್ಥಿರ ಮೀನುಗಾರಿಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಪರೂಪದ ಜೀವಸಂಕುಲವನ್ನು ಹೊಂದಿರುವ ಕರಾವಳಿ ಜಿಲ್ಲೆಗಳಲ್ಲಿ ಜೀವಸಂಕುಲದ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಜನಾಭಿಪ್ರಾಯದೊಂದಿಗೆ ವೈಜ್ಞಾನಿಕ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ನದಿ ಸಮುದ್ರ ಸೇರುವ ಕಡೆ ಉಪ್ಪು ನೀರು ಜಾಸ್ತಿಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಬಗ್ಗೆಯೂ ವರದಿಗಳು ಲಭಿಸಿದೆ. ನದಿಗಳ ಮೂಲಸ್ಥಾನಗಳು ಅತಿಕ್ರಮಣವು ಇದಕ್ಕೆ ಕಾರಣವಾಗಿರಬಹುದು ಎಂದ ಅವರು, ನೇತ್ರಾವತಿ ನದಿ ತಿರುವು ಯೋಜನೆ ಬೇಡ ಎಂಬುದಕ್ಕೆ ಒತ್ತು ನೀಡಲಾಗುವುದು. ಮೀನುಗಾರಿಕೆ, ಒಳನಾಡು ಮೀನುಗಾರಿಕೆ ಹಾಗೂ ಬಂದರುಗಳಲ್ಲಿ ಹೂಳೆತ್ತುವಿಕೆ ಸೇರಿದಂತೆ ಪಶ್ಚಿಮ ಘಟ್ಟ ಹಾಗೂ ಅದನ್ನು ಆಧರಿಸಿ ಬದುಕುತ್ತಿರುವವರನ್ನು ಗಮನದಲ್ಲಿರಿಸಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ವಿಧಾನಸಭಾ ಅಧಿವೇಶನದ ನಂತರ ಅಪರೂಪದ ಅಳಿವೆಗಳ ಸಂರಕ್ಷಣೆ ಹಾಗು ಸಿ ಆರ್ ಝಡ್ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು. ಕಾರ್ಯಪಡೆ ತಳಮಟ್ಟದಿಂದ ಅಂದರೆ ಗ್ರಾಮಪಂಚಾಯತಿ ಮಟ್ಟದಿಂದ ಜನರೊಡಗೂಡಿ ಪರಿಸರ ಸಂರಕ್ಷಣೆಗೆ ರೂಪಿಸಿರುವ ಸ್ಪಷ್ಟ ಯೋಜನೆಗಳನ್ನು ಸರ್ಕಾರದ ಮುಂದೆ ಮಂಡಿಸಲಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಸುಂದರ ನಾಯ್ಕ ಅವರು, ಕಡಲ್ಕೊರೆತ ಸೇರಿದಂತೆ ಕರಾವಳಿ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ 2010-11ನೇ ಸಾಲಿನಲ್ಲಿ ಪರಿಹಾರ ಲಭ್ಯವಾಗಲಿದೆ ಎಂದರು. ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಮೀನುಗಾರರಿಗೆ ಅನುಕೂಲವಾಗುವ ವಿಶೇಷ ಯೋಜನೆಗಳ ಬಗ್ಗೆ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದರು.ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಶಾಂತಪ್ಪ ಅವರು, ನೈಸರ್ಗಿಕ ಸಂಪತ್ತಿನ ಸುಸ್ಥಿರ ನಿರ್ವಹಣೆ ಬಗ್ಗೆ, ವಾಯು ಮಾಲಿನ್ಯ ಹಾಗೂ ಜಲ ಮಾಲಿನ್ಯದಿಂದಾಗಿರುವ ಹಾನಿಗಳನ್ನು ಪ್ರಸ್ತಾಪಿಸಿದರಲ್ಲದೆ ಕರಾವಳಿಯ ಅಸ್ಥಿರ ಮೀನುಗಾರಿಕೆಯ ಬಗ್ಗೆ ಮಾತನಾಡಿದರು. ಕಾರ್ಯಪಡೆಯ ಕೇಶವ ಕೊರ್ಸೆ ಅವರು, ಪಶ್ವಿಮ ಘಟ್ಟ ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಬಿ.ಕೇಶವ ಕುಂದರ್ ಅವರು,ಮೀನುಗಾರಿಕೆ ಮತ್ತು ಮೀನುಗಾರರ ಸಮಸ್ಯೆಗಳ ಬಗ್ಗೆ ಗಮನಸೆಳೆದರಲ್ಲದೆ ಮೀನು ಉತ್ಪತ್ತಿ ಸಂರಕ್ಷಣೆ, ಸರ್ಕಾರ ಮೀನುಗಾರರಿಗೆ ಸಬ್ಸಿಡಿ ನೀಡಲು ವಾರ್ಷಿಕ ಅನುದಾನ ಮೀಸಲಿಡಬೇಕೆಂದು ಹೇಳಿದರು. ಮೀನುಗಾರಿಕೆ ಮಹಾವಿದ್ಯಾಲಯದ ಪ್ರೊಫೆಸರ್ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಸ್ವಾಗತಿಸಿದರು. ಎಟಿಆರ್ ಇಇನ ಡಾ.ಜಗದೀಶ್ ಕೃಷ್ಣ ಸ್ವಾಮಿ ಅವರು ಪಶ್ಚಿಮ ಘಟ್ಟಗಳಲ್ಲಿ ಭೂ ಬಳಕೆಯ ಮಾರ್ಪಾಡಿನಿಂದ ಜಲ ಸಂಪನ್ಮೂಲಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು.

Tuesday, March 16, 2010

ಕನ್ನಡದ ಮುಕ್ತಮನಸ್ಕತೆ,ಉದಾರತನ ಐತಿಹಾಸಿಕ ಸತ್ಯ:ಪಾದೆಕಲ್ಲು ನರಸಿಂಹ ಭಟ್

ಮಂಗಳೂರು,ಮಾರ್ಚ್ 15:ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವುದು ಇತ್ತೀಚೆಗಾದರೂ ಶಾಸ್ರ್ತೀಯ ಸ್ಥಾನವನ್ನು ಬಹಳ ಹಿಂದಿನಿಂದಲೇ ಕನ್ನಡ ಗಳಿಸಿದ್ದು ಕನ್ನಡದ ಕವಿರಾಜಮಾರ್ಗವೇ ಇದಕ್ಕೆ ಉತ್ತಮ ಉದಾಹರಣೆ ಎಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷ ಪಾದೆಕಲ್ಲು ನರಸಿಂಹ ಭಟ್ ಹೇಳಿದರು.
ಇಂದು ನಗರದ ಪುರಭವನದ ರತ್ನಮ್ಮ ಹೆಗ್ಗಡೆ ವೇದಿಕೆಯಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಬಹುಭಾಷಾ ವಿದ್ವಾಂಸರಾದ ಪಾದೆಕಲ್ಲು ನರಸಿಂಹ ಭಟ್ಟರು, ಕನ್ನಡದ ಮುಕ್ತ ಮನಸ್ಕತೆ, ಉದಾರತನ ಕೊಡು-ಕೊಳ್ಳುವಿಕೆಯ ಬಗ್ಗೆ ಸವಿವರವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಸಾಮರಸ್ಯದಿಂದ ಕೂಡಿದ ಸಾಮಾಜಿಕ ಜೀವನವನ್ನು ತನ್ನ ಗುಣಲಕ್ಷಣಗಳಲ್ಲಿ ಸೇರಿಸಿಕೊಂಡಿರುವುದು ಗಮನೀಯ ಎಂದರು. ಕವಿ -ಋಷಿಗಳ ಸಮೀಕರಣ, ಕಾಳಿದಾಸನ ಶಾಕುಂತಲ ನಾಟಕದ ಅನುವಾದದ ಬಗ್ಗೆ ಸಂಸ್ಕೃತ -ಕನ್ನಡದೊಳಗಿನ ಸಂಬಂಧದ ಭಾಷಾ ಶಾಸ್ತ್ರಜ್ಞರ ವಿಶ್ಲೇಷಣೆಯ ಬಗ್ಗೆ,. ಕನ್ನಡವು ಇತರ ಭಾಷೆಗಳೊಂದಿಗೆ ಕೊಡುಕೊಳ್ಳುವಿಕೆಯ ಮೂಲಕ ಆರೋಗ್ಯಕರ ಬೆಳವಣಿಗೆ ನಡೆಸಿರುವುದನ್ನು ವಿಮರ್ಶಕರು ಒಪ್ಪಿಕೊಂಡ ಬಗ್ಗೆ ವಿವರಿಸಿದರು. ಇಂಗ್ಲಿಷ್ ಕಾರ್ಯದ ಸತ್ವವನ್ನು ಹೀರಿಕೊಂಡು ಕನ್ನಡ ಜಡಗೊಳ್ಳದಂತೆ ಮಾಡಿರುವುದು ಕನ್ನಡ ಕವಿಗಳ ಹಿರಿಮೆ ಎಂಬುದು ಸಮೀಕ್ಷೆಗಳಿಂದ ಸಾಬೀತಾಗಿದ್ದು, ಕನ್ನಡದವರು ಇತರ ಸೋದರ ಭಾಷೆಗಳವರೊಂದಿಗೆ ಆರೋಗ್ಯಕರವಾಗಿ ಬರೆಯುವುದರಲ್ಲಿಯೂ ಉತ್ತಮ ಹೆಸರು ಗಳಿಸಿರುತ್ತಾರೆ .ಪ್ರಸ್ತುತ ಯುಗವು ಗದ್ಯ,ಕಾದಂಬರಿ,ನಾಟಕ,ಸಣ್ಣಕತೆ ಇತ್ಯಾದಿ ಹೊಸ ಪ್ರಾಕಾರದ ಸಾಹಿತ್ಯ ಸೃಷ್ಟಿಯಿಂದ ಶ್ರೀಮಂತವಾಗಿದ್ದು, ದಕ್ಷಿಣ ಕನ್ನಡವನ್ನೇ ಲಕ್ಷಿಸುವುದಿದ್ದರೆ ಪಂಜೆ, ಶಿವರಾಮ ಕಾರಂತ,ಗೋವಿಂದಪೈ ಯಂತಹ ಕವಿಗಳು ಪ್ರಯೋಗಶೀಲತೆಯ ಮೂಲಕ ಸಾಹಿತ್ಯಕ್ಕೆ ಹೊಸ ಆಯಾಮವನ್ನೇ ನೀಡಿದ್ದಾರೆ ಎಂದರು.ಆಹೋರಾತ್ರಿ ನಡೆಯುವ ವಿಚಾರ ಗೋಷ್ಠಿಗಳಲ್ಲಿ ಪಂಡಿತ ಪರಂಪರೆಯ ಪುನರ್ ವ್ಯಾಖ್ಯಾನ ವಾಗಬೇಕಿದೆ ಎಂದ ಅವರು ಕನ್ನಡ ಕಾರ್ಯಕ್ಷೇತ್ರ ವಿಸ್ತಾರ ಗೊಳ್ಳಬೇಕಾದ ಅವಶ್ಯಕತೆಯ ಅರಿವು ಹೊಸ ತಲೆ ಮಾರಿನಲ್ಲಿ ಮೂಡಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾ ಧ್ಯಕ್ಷರಾದ ಜೆ.ಕೃಷ್ಣ ಪಾಲೆಮಾರ್ ಅವರು, ರಾಜ್ಯ ಸರ್ಕಾರ ಸಾಹಿತ್ಯ,ಸಾಹಿತಿಗಳಿಗೆ ಹೆಚ್ಷಿನ ಪ್ರೋತ್ಸಾಹ ನೀಡುವ ಮೂಲಕ ಮನೆಮನೆಗಳಲ್ಲಿ ಕನ್ನಡ ಕಂಪನ್ನು ಹರಡಲು ನೆರವಾಗುತ್ತಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿದ್ದು, ಸರ್ಕಾರ 5 ಲಕ್ಷ ರೂ.ಗಳನ್ನು ನೀಡಿದೆ. ಮಂಗಳೂರು ಮಹಾನಗರಪಾಲಿಕೆ 2ಲಕ್ಷ ರೂ. ನೀಡಿದೆ ಎಂದರು. ಆಹೋರಾತ್ರಿ ಸಾಹಿತ್ಯ ಸಮ್ಮೇಳನದ ಮುಖೇನ ಕನ್ನಡವನ್ನು ಬೆಳೆಸುವ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ಶುಭ ಹಾರೈಸಿದ ಅವರು,ಕನ್ನಡದ ಮೇಲೆ ಇತರ ಭಾಷೆಗಳ ದಾಳಿ ಜಾಸ್ತಿಯಾಗುತ್ತಿರುವ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕನ್ನಡದ ಅಭಿವೃದ್ಧಿಗೆ, ಬೆಂಬಲಕ್ಕೆ ಸರ್ಕಾರ ನಿಂತಿದೆ ಎಂದರು.ಆಡಳಿತದಲ್ಲಿ ಕನ್ನಡ,ಎಲ್ಲೆಡೆ ಕನ್ನಡ ರಾರಾಜಿಸಲಿ, ಎಲ್ಲರಲ್ಲಿ ಈ ನಿಟ್ಟಿನಲ್ಲಿ ಜಾಗೃತಿ ಮೂಡಲಿ ಎಂದರು.ಹಿರಿಯ ಸಾಹಿತಿ ಪ್ರೊ.ಎಚ್.ಎಸ್.ವೆಂಕಟೇಶ ಮೂರ್ತಿ ಉದ್ಗಾಟನಾ ಭಾಷಣ ಮಾಡಿದರು.ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ದಿವ್ಯ ಸಾನಿಧ್ಯ ವಹಿಸಿದ್ದರು.15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಧ್ಜಜ ಹಸ್ಥಾಂತರಿಸಿ ಮಾತನಾಡಿದರು.ಶಾಸಕರಾದ ಯು ಟಿ ಖಾದರ್, ಎನ್.ಯೋಗೀಶ್ ಭಟ್ , ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪಾಲ್ಗೊಂ ಡಿದ್ದರು. ಮುಖ್ಯ ಅತಿಥಿಗಳಾಗಿ ಅಂಬಾತನಯ ಮುದ್ರಾಡಿ,ಎಸ್ ವಿ ಭಟ್ ,ಪ್ರೊ.ರಾಧಾಕೃಷ್ಣ ,ಮೇಯರ್ ರಜನಿ ದುಗ್ಗಣ್ಣ ಉಪಸ್ಥಿತರಿದ್ದರು.ಹರಿಕೃಷ್ನ ಪುನರೂರು ಪುಸ್ತಕಮಾಲೆ ಬಿಡುಗಡೆ ಮಾಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಸ್ವಾಗತಿಸಿ,ಆಶಯ ನುಡಿಗಳನ್ನಾಡಿದರು.ನಾಡಗೀತೆ ಮತ್ತು ರೈತಗೀತೆಯನ್ನು ಕೆನರಾ ಹೆಮ್ಮಕ್ಕಳ ಪ್ರೌಢಶಾಲಾ ವಿದ್ಯಾರ್ಥಿನಿಯರು ಹಾಡಿದರು.ಗಣೇಶ್ ಅಮೀನ್ ಸಂಕಮಾರ್ ವಂದಿಸಿದರು.ಉದ್ಘಾಟನ ಸಮಾರಂಭಕ್ಕೂ ಮುನ್ನ ನಗರದ ಬಂಟ್ಸ್ ಹಾಸ್ಟೆಲ್ ವ್ರತ್ತದಿಂದ ಸಮ್ಮೇಳನದ ನಡೆಯುವ ಪುರಭವನದ ವರೆಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಿತು.ಚೆಂಡೆ, ಕೊಂಬು- ಕಹಳೆಗಳಿದ್ದ ವಾದ್ಯ ಗೋಷ್ಟಿಗಳು ಮೆರವಣಿಗೆಯ ಉದ್ದಕ್ಕೂ ಕನ್ನಡ ಸಂಸ್ಕೃತಿಯ ಲೋಕವನ್ನು ಅನಾವರಣ ಗೊಳಿಸಿದವು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Monday, March 15, 2010

16ನೇ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ

ಮಂಗಳೂರು,ಮಾರ್ಚ್ 15:ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೋಮವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಜೆ.ಕೃಷ್ಣ ಪಾಲೆಮಾರ್ ಅವರು ರಾಷ್ಟ್ರ ಧ್ವಜಾ ರೋಹಣ ಮಾಡುವ ಮೂಲಕ ಹಾಗೂ ಕನ್ನಡ ಧ್ವಜಾ ರೋಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ಹಾಗೂ ಸಮ್ಮೇಳನ ಧ್ವಜಾರೋಹಣವನ್ನು ಮಂಗಳೂರು ಮಹಾನಗರಪಾಲಿಕೆ ಮೇಯರ್ ಶ್ರೀಮತಿ ರಜನಿ ದುಗ್ಗಣ್ಣ ಅವರು ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ಜೆ.ಕೃಷ್ಣ ಪಾಲೆಮಾರ್, ಮಂಗಳೂರಿನಲ್ಲಿ 25 ವರ್ಷಗಳ ಬಳಿಕ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅದ್ದೂರಿಯಾಗಿ ಮತ್ತು ಫಲಪ್ರದವಾಗಿ ಜರುಗಿಸುವ ನಿಟ್ಟಿನಲ್ಲಿ ಸರ್ವ ಸಿದ್ದತೆಗಳಾಗಿದ್ದು, ಜಿಲ್ಲಾಡಳಿತ ಸಂಪೂರ್ಣವಾಗಿ ತೊಡಗಿಕೊಂಡಿದೆ ಎಂದರು. ಜಿಲ್ಲೆಯ ಜನತೆ ಸಕ್ರಿಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದರು.
ಶಾಸಕರಾದ ಎನ್. ಯೋಗೀಶ್ ಭಟ್, ಯು ಟಿ ಖಾದರ್, ಮನಾಪ ಆಯುಕ್ತ ಡಾ. ವಿಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರನ್ನೊಳಗೊಂಡಂತೆ ಅನೇಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಗರದ ಕೆನರಾ ಹೆಣ್ಮಕ್ಕಳ ಪ್ರೌಢಶಾಲೆ ವಿದ್ಯಾರ್ಥಿನಿಯರು ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆಗಳನ್ನು ಹಾಡಿದರು. ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ ವಂದಿಸಿದರು.

Saturday, March 13, 2010

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ದತೆ : ಉಸ್ತುವರಿ ಸಚಿವರಿಂದ ಪರಿಶೀಲನೆ


ಮಂಗಳೂರು, ಮಾರ್ಚ್13: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 15 ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಮೂರು ದಿನಗಳ ಕಾಲ ನಡೆಯಲಿರುನ ಸಮ್ಮೇಳನದ ಸಿದ್ದತೆಗಳನ್ನು ಜಿಲ್ಲಾ ಉಸ್ತುವರಿ ಸಚಿವ ಕೃಷ್ಣಾ ಜೆ. ಪಾಲೇಮಾರ್ ಅವರು ಪುರಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಶ್ರೀಮತಿ ರಜನಿ ದುಗ್ಗಣ್ಣ ಅವರು ಉಪಸ್ಥಿತರಿದ್ದರು.

ಪಿಲಿಕುಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಕೋಟಿ, ಜಂಗಲ್ ರಿಸಾರ್ಟ್ ಗೆ ಪ್ರವಾಸೋದ್ಯಮ ಸಚಿವರಿಂದ ಚಾಲನೆ

ಮಂಗಳೂರು, ಮಾ.13 (ಕರ್ನಾಟಕ ವಾರ್ತೆ)- ಪಿಲಿಕುಳ ನಿಸರ್ಗಧಾಮದಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ 9 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಎಂಟು ಕೊಠಡಿಗಳ ಪ್ರವಾಸಿ ಮಂದಿರಗಳನ್ನು ಪ್ರವಾಸೋದ್ಯಮ ಸಚಿವರಾದ ಜನಾರ್ಧನ ರೆಡ್ಡಿ ಅವರು ಉದ್ಘಾಟಿಸಿದರು.
ಇಂದು ಮಂಗಳೂರಿನ ಪಿಲಿಕುಳ ನಿಸರ್ಗ ಧಾಮದಲ್ಲಿ ಹಲವು ಅಭಿವೃಧ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಚಿವರು, 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 2 ಸೂಟ್ ಕೊಠಡಿಗಳನ್ನು ಹೊಂದಿದ ಒಟ್ಟು 8 ಕೊಠಡಿಗಳಿಗೆ ಚಾಲನೆ ನೀಡಿದರು.ಪ್ರವಾಸೋದ್ಯಮಕ್ಕ ಪೂರಕವಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 4.23 ರೂ.ಗಳ ಹೊಸ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಜಂಗಲ್ ರಿಸಾರ್ಟ್ ನಲ್ಲಿ ಪ್ಯಾಕೇಜ್ ಟೂರ್ ಗೆ ವ್ಯವಸ್ಥೆ ಮಾಡಲಾಗಿದ್ದು, ಇದರಡಿ ಮೂಡುಬಿದರೆ ಅರಣ್ಯಕ್ಕೆ ಭೇಟಿ,ಪಕ್ಷಿ ವೀಕ್ಷಣೆ ಮತ್ತು ಅಧ್ಯಯನ ಹಾಗೂ ಪರಿಸರ ವೀಕ್ಷಣೆ, ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ,ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ,ಸಮುದ್ರ ತೀರಕ್ಕೆ ಭೇಟಿ,ಆಯುರ್ವೇದ ಆರೋಗ್ಯ ಚಿಕಿತ್ಸೆ, ಶಿವರಾಮ ಕಾರಂತ ಮೃಗಾಲಯ ವೀಕ್ಷಣೆ, ಬಟಾನಿಕಲ್ ಗಾರ್ಡನ್, ದೋಣಿ ವಿಹಾರ, ವಾಟರ್ ಪಾರ್ಕ, ಪುರಾತನ ವಸತಿಗೃಹ ವೀಕ್ಷಣೆ, ಸಮೀಪದ ದೇವಸ್ಥಾನ, ಸೈಂಟ್ ಅಲೋಷಿಯಸ್ ಮತ್ತು ಮ್ಯೂಸಿಯಂ ಭೇಟಿ ಒಳಗೊಂಡಿದೆ ಎಂದು ಸಚಿವರು ವಿವರಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವರು, ಪಿಲಿಕುಳದ ಸಂಸ್ಕೃತಿ ಗ್ರಾಮ, ವನ್ಯಜೀವಿ ಸಂರಕ್ಷಣೆ ಮತ್ತು ಕ್ರೀಡೆಯ ಅಭಿವೃದ್ಧಿಗೆ 3 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದರು. ಕಾಳಿಂಗ ಸರ್ಪಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹಮ್ಮಿಕೊಂಡ ಬಗ್ಗೆ ಹಾಗೂ ಈ ಸಂಬಂಧ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ದೊರಕಿದ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಹೆಲಿಟೂರಿಸಂ ಅಭಿವೃದ್ಧಿ ಬಗ್ಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು. ಹಂಪಿ,ಮೈಸೂರು ಮತ್ತು ಮಂಗಳೂರಿನಿಂದ ಹೆಲಿಕಾಪ್ಟರ್ ಸೇವೆಗೆ ಸೌಕರ್ಯ ಒದಗಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಯಡಿ ಎಸ್ ಸಿ ಎಸ್ ಟಿ ಯುವಕರಿಗೆ ಟ್ಯಾಕ್ಸಿ ಖರೀದಿಸಲು ಶೇಕಡ 50 ರಷ್ಟು ಸಬ್ಸಿಡಿ ನೀಡಲಾಗುವುದು. ಬಳ್ಳಾರಿ ಮತ್ತು ಮಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಹೊಟೆಲ್ ಮ್ಯಾನೇಜ್ ಮೆಂಟ್ ಸಂಸ್ಥೆಗಳನ್ನು ತೆರೆಯಲಾಗುವುದು. ಖಾಸಗಿ ಮತ್ತು ಸರಕಾರದ ಸಹಯೋಗದಲ್ಲೇ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು; ಇದಕ್ಕೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯೋಜನೆಗಳೆಲ್ಲವೂ ಶೀಘ್ರವೇ ಅನುಷ್ಠಾನಕ್ಕೆ ಬರಲಿದೆ ಎಂದರು.
ಬೆಂಗಳೂರಿನ ಬನ್ನೇರುಘಟ್ಟ ಪಾರ್ಕ್ ನಲ್ಲಿ ರಾತ್ರಿ ಸಫಾರಿಯನ್ನು ಸಿಂಗಾಪೂರ ಮಾದರಿಯಲ್ಲೇ ಅಭಿವೃದ್ಧಿ ಪಡಿಸುವುದಾಗಿ ಹೇಳಿದರು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್, ಶಾಸಕರಾದ ಯೊಗೀಶ್ ಭಟ್,ಅಭಯ ಚಂದ್ರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಮೇಯರ್ ರಜನಿದುಗ್ಗಣ್ಣ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Friday, March 12, 2010

ಜನಗಣತಿಗೆ ದಕ್ಷಿಣ ಕನ್ನಡ ಜಿಲ್ಲೆ ಸಜ್ಜು


ಮಂಗಳೂರು, ಮಾರ್ಚ್ 12: ಏಪ್ರಿಲ್ 15 ರಿಂದ 30 ರವರೆಗೆ ನಡೆಯ ಲಿರುವ ಜನಗಣತಿ ಸಂಬಂಧ ಪ್ರಥಮ ಸುತ್ತಿನ ತರಬೇತಿ ಶಿಬಿರ ವನ್ನುದ್ದೇಶಿಸಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಮತ್ತು ಬೆಂಗಳೂರಿನ ಜನಗಣತಿ ನಿರ್ದೇಶಕರ ಪರವಾಗಿ ಶಿವ ಸುಬ್ರಮಣ್ಯಂ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಜನಗಣತಿ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಉಸ್ತುವಾರಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಸಂಗ್ರಹಿಸಿದರು.

ಸ್ತ್ರೀ ಶಕ್ತಿ ಸಂಘಟನೆಗಳಿಂದ ರಚನಾತ್ಮಕ ಸಾಮಾಜಿಕ ಬದಲಾವಣೆ: ಮಥಾಯಸ್ ಪಿರೇರಾ

ಮಂಗಳೂರು, ಮಾರ್ಚ್, 12: (ಕರ್ನಾಟಕ ವಾರ್ತೆ)- ಸ್ತ್ರೀ ಶಕ್ತಿಯು ಸಂಘಟಿತ ಶಕ್ತಿಯಾಗಿ ರೂಪು ಗೊಂಡಿದ್ದು, ಈ ಸಂಘಟನೆ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಲಾ ಸಂಚಾಲಕರಾದ ರೆ.ಫಾದರ್ ಮಥಾಯಿಸ್ ಪಿರೇರಾ ಹೇಳಿದರು.
ಇಂದು ವಾರ್ತಾ ಇಲಾಖೆ, ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ, ಮತ್ತು ಮಂಗಳೂರಿನ ಶ್ರೀದೇವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಬಜಪೆ ಹಿರಿಯ ಪ್ರಾಥಮಿಕ ಶಾಲೆ ಪೆರೋಕಿಯಲ್ ನಲ್ಲಿ ಏರ್ಪಡಿಸಲಾದ ಮಹಿಳೆ ಮತ್ತು ಕಾನೂನು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಮಹಿಳಾ ಸಂಘಟನೆಗಳು ಸಾಮಾಜಿಕವಾಗಿ ಇನ್ನಷ್ಟು ಪ್ರಭಾವ ಬೀರಲು ಎಲ್ಲ ರೀತಿಯ ಮಾಹಿತಿಗಳನ್ನು ಕಲೆ ಹಾಕಿ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಈಗಾಗಲೇ ಆಡಳಿತದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲು ರಾಜ್ಯಸಭೆಯಲ್ಲಿ ಬಿಲ್ಲು ಪಾಸಾಗಿದ್ದು ಶ್ಲಾಘನೀಯ; ಜಾಗೃತ ಮಹಿಳೆಯಿಂದ ಜಾಗೃತ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.ಸಂಕಿರಣದಲ್ಲಿ ಉಪನ್ಯಾಸ ನೀಡಿದ ಕ್ಷೇತ್ರ ಪ್ರಚಾರಾ ಧಿಕಾರಿ ಶ್ರೀನಿವಾಸ್ ಅವರು ಮಹಿಳಾ ಸಬಲೀಕರಣಕ್ಕೆ ದೇಶದಲ್ಲಿ ಬಹಳಷ್ಟು ಕಾನೂನುಗಳು ಜಾರಿಯಾಗಿದ್ದು, ಈ ಬಗ್ಗೆ ಶೇಕಡ 80ರಷ್ಟು ಮಹಿಳೆಯರಿಗೆ ಮಾಹಿತಿ ಇಲ್ಲ. ಸಂವಿಧಾನ ಬದ್ಧ ಹಕ್ಕುಗಳ ಜಾರಿ ನಾವು ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾತ್ರ ಸಾಧ್ಯ. ಹಲವು ಒತ್ತಡಗಳ ನಡುವೆ ಬಾಳಬೇಕಾದ ಮಹಿಳೆಯರು ಅಭಿವೃದ್ಧಿಯತ್ತ ಸಾಗಲು ಕಾನೂನಿನ ಬಗ್ಗೆ ತಮ್ಮ ಸುತ್ತಮುತ್ತಲಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳುವುದರಿಂದ ಮಾತ್ರ ಸಾಧ್ಯ ಎಂದರು. ಲಿಂಗ ತಾರತಮ್ಯವನ್ನು ನಿವಾರಣೆಯಲ್ಲಿ ಮಹಿಳೆಯರ ಹೊಣೆಯ ಬಗ್ಗೆ ವಿವರಿಸಿದ ಅವರು, ತಳಮಟ್ಟದಿಂದ ಅಂದರೆ ಪಂಚಾಯತ್ ವ್ಯವಸ್ಥೆಯ ಮೂಲಕ ಮಹಿಳೆಯರು ಸಕ್ರಿಯವಾಗಿ ಸಾಮಾಜಿಕ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ಬಗೆಯನ್ನು ವಿವರಿಸಿದರು. ಮಹಿಳಾ ಧ್ವನಿಯ ಶಕ್ತಿಯ ಬಗ್ಗೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀದೇವಿ ಕಾಲೇಜಿನ ಪ್ರಾಂಶುಪಾಲರಾದ ಯೂನಿಸ್ ರೇಗೊ, ಮುಖ್ಯೋಪಾಧ್ಯಾಯ ರಾದ ಕೋಸೆಸ್ ಡಿಸೋಜ, ಗ್ರಾಮಪಂಚಾಯಿತಿ ಸದಸ್ಯರಾದ ಸುಮಾ ಅವರು ಪಾಲ್ಗೊಂಡಿದ್ದರು. ಬಜಪೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀದೇವಿ ಕಾಲೇಜಿನ ಎಂಎಸ್ ಡಬ್ಲ್ಯೂವಿನ ವಿದ್ಯಾರ್ಥಿನಿ ಪುಷ್ಪಲತ ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ್ ವಂದಿಸಿದರು. ಕ್ಷೇತ್ರ ಪ್ರಚಾರ ಇಲಾಖೆ ವತಿಯಿಂದ ಮಹಿಳೆ ಮತ್ತು ಕಾನೂನು ಕುರಿತು ಚಿತ್ರಪ್ರದರ್ಶನ ಏರ್ಪಡಿಸಲಾಗಿತ್ತು.

Thursday, March 11, 2010

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24x7 ಆರೋಗ್ಯ ಸೇವೆ

ಮಂಗಳೂರು,ಮಾರ್ಚ್ 11:'ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ' ಎಂಬ ಧ್ಯೇಯವಾಕ್ಯದಡಿ ಆರಂಭವಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣರಿಗೆ ಆರೋಗ್ಯ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯ ಆಯ್ದ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆ ಪ್ರಸೂತಿ ಸೇವೆ ನೀಡುವಂತೆ ವ್ಯವಸ್ಥೆಯನ್ನು ಉನ್ನತೀಕರಿಸಿದೆ.
ಮೂಲಭೂತ ಸೌಲಭ್ಯಗಳು ಸೇರಿದಂತೆ ಒಟ್ಟು 3 ಜನ ಶುಶ್ರೂಷಕಿಯರನ್ನು ಈ ಯೋಜನೆಯಡಿ ನೇಮಿಸಲಾಗಿದ್ದು, ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಮುಖ್ಯ ಕೇಂದ್ರದಲ್ಲಿ ಸದಾ ಲಭ್ಯರಿರುತ್ತಾರೆ. ಗರ್ಭಿಣಿಯರಿಗೆ(ಬಿಪಿಎಲ್ ಗೆ ಸೀಮಿತವಲ್ಲ) ಅಗತ್ಯ ಮಾಡಬೇಕಿರುವ ಎಲ್ಲ ಪರೀಕ್ಷೆಗಳನ್ನು ಈ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಮುಖ್ಯವಾಗಿ ದೇಶದಲ್ಲಿ ತಾಯಿ ಮರಣ ಮತ್ತು ಶಿಶುಮರಣ ತಡೆಗೆ ಆದ್ಯತೆ ನೀಡಲಾಗಿದ್ದು, ಈ ವ್ಯವಸ್ಥೆ ಜಾರಿಗೆ ಬಂದಂದಿನಿಂದ ಶೇಕಡ 47ರಿಂದ 44ರಷ್ಟು ಇಳಿಮುಖವಾಗಿದೆ. ಅತಿ ದುರ್ಗಮ ಪ್ರದೇಶಗಳಲ್ಲೂ ಇಂತಹ ಕೇಂದ್ರಗಳಿದ್ದು, ಜನರ ಅನುಕೂಲಕ್ಕಾಗಿ ಹಾಗೂ ಅಂತಹ ಪ್ರದೇಶಗಳಲ್ಲಿ ವೈದ್ಯರು ತಂಗುವಂತೆ ಪ್ರೋತ್ಸಾಹಿಸಲು ಹೆಚ್ಚಿನ ಸವಲತ್ತನ್ನು ಎನ್ ಆರ್ ಎಚ್ ಎಮ್ (ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ)ನಡಿ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಳ್ಯದ ಕೊಲ್ಲಮೊಗರು,ಬೆಳ್ತಂಗಡಿಯ ಕಣಿಯೂರು, ಹತ್ಯಡ್ಕ, ನೆರಿಯಾ,ಮಂಗಳೂರಿನ ನೆಲ್ಲಿಕಾರಿನಲ್ಲಿದೆ. ದುರ್ಗಮವೆಂದು ಗುರುತಿಸಲ್ಪಟ್ಟ 6 ಆರೋಗ್ಯ ಕೇಂದ್ರಗಳು ಬಂಟ್ವಾಳದ ಪೆರುವಾಯಿ, ಕಲ್ಲಡ್ಕ, ದೈವಸ್ಥಳ, ಪುತ್ತೂರಿನ ಶಿರಾಡಿ,ಕೊಳ್ತಿಗೆ, ಮಂಗಳೂರಿನ ಕೊಂಪದವಿನಲ್ಲಿ
ಆರೋಗ್ಯ ಕೇಂದ್ರಗಳು ನಿರಂತರವಾಗಿ ಕಾರ್ಯಾಚರಿಸುತ್ತಿದ್ದು ಸೆಪ್ಟೆಂಬರ್ 2008ರಿಂದ ಈ ಯೋಜನೆ ಜಾರಿಗೆ ಬಂದಿದೆ. ಆರೋಗ್ಯ ರಕ್ಷಾ ಸಮಿತಿಯ ಪಾತ್ರ ಇಲ್ಲಿ ಹಿರಿದಾಗಿದ್ದು,ಜನರಿಗೆ ಸೌಲಭ್ಯ ತಲುಪಿಸಲು ಈ ಸಮಿತಿಗಳೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯರು ಅಧ್ಯಕ್ಷರಾಗಿದ್ದು, ಸ್ಥಳೀಯ ವೈದ್ಯಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರಲ್ಲದೆ ಇತರ 8 ಜನರು ಈ ಸಮಿತಿಯಲ್ಲಿರುತ್ತಾರೆ. ಎನ್ ಆರ್ ಎಚ್ ಎಮ್ ನಡಿ ವೈದ್ಯಕೀಯ ಸೌಲಭ್ಯಕ್ಕೆ ಯಾವುದೇ ಕೊರತೆ ಇರುವುದಿಲ್ಲವಾದ್ದರಿಂದ ಜನರಿಗೆ ವೈದ್ಯಕೀಯ ನೆರವು ಖಚಿತಪಡಿಸಿಕೊಳ್ಳಬಹುದು. ಇದಲ್ಲದೆ ಜಿಲ್ಲೆಯ 13 ಆರೋಗ್ಯಕೇಂದ್ರಗಳಿಗೆ 108 ಸೌಲಭ್ಯವಿದ್ದು, ಇನ್ನು ಆರು 108 ಆಂಬುಲೆನ್ಸ್ ಗಳಿಗೆ ಬೇಡಿಕೆ ಇರಿಸಲಾಗಿದೆ.
ಇಂದು ಶಿರ್ತಾಡಿ ಮತ್ತು ಸುರತ್ಕಲ್ ನ 24x7 ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಲ್ಲಿನ ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್ ಮತ್ತು ಡಾ. ಹೇಮಲತಾ ಅವರು ನೂತನ ವ್ಯವಸ್ಥೆಗಳು ಬಂದ ಬಳಿಕ ಆಸ್ಪತ್ರೆಗೆ ಬರುವ ಗರ್ಭಿಣಿಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.ಇದಲ್ಲದೆ ರೋಗಿಗಳ ಅನುಕೂಲಕ್ಕೆ ಹಣದ ಸಮಸ್ಯೆ ಇರುವುದಿಲ್ಲ ಎಂಬುದನ್ನು ವಿವರಿಸಿದರು. ಇದಲ್ಲದೆ ಗರ್ಭಿಣಿಯರಿಗೆ ರಾಜ್ಯ ಸರ್ಕಾರ ಪ್ರಸೂತಿ ಆರೈಕೆಯಡಿ ಆರ್ಥಿಕ ನೆರವು ನೀಡುತ್ತಿದ್ದು, 2008-09ರ ಸಾಲಿನಲ್ಲಿ 625 ಸುರಕ್ಷಿತ ಪ್ರಸವಗಳಾಗಿದೆ ಎಂದರು. ಉಜಿರೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಿಂಗಳಲ್ಲಿ 40 ಕ್ಕೂ ಹೆಚ್ಚು ಹೆರಿಗೆಗಳಾಗಿದ್ದು, ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯಾಧಿಕಾರಿಗಳನ್ನು ನೇಮಿಸಲು ಸೂಚಿಸಿದ್ದಾರೆ ಎಂದು ಜಿಲ್ಲ ಯೋಜನಾ ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ್ ಕೆ.ಎಸ್ ವಿವರಿಸಿದರು. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಷಿನ ಸಂಖ್ಯೆಯಲ್ಲಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಒದಗಿಸಿರುವ ಸೌಲಭ್ಯಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬಹುದು.

Wednesday, March 10, 2010

ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ:ಜಿಲ್ಲಾಧಿಕಾರಿ ಪೊನ್ನುರಾಜ್

ಮಂಗಳೂರು,ಮಾರ್ಚ್ 10: ದಕ್ಷಿಣ ಕನ್ನಡ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಕಳೆದ ಒಂದು ವರ್ಷಗಳಲ್ಲಿ ಬಾಕಿ ಉಳದಿದ್ದ 500 ಹೊಸ ಬಸ್ ರೂಟ್ ಗಳು ಸೇರಿದಂತೆ 141 ಅರ್ಜಿಗಳ ವಿಚಾರಣೆ ನಡೆಯಿತು. ಆದರೆ ಹೈಕೋರ್ಟ್ ತಡೆಯಾಜ್ಞೆ ಕಾರಣ ಸಮಸ್ಯೆ ಪರಿಹಾರಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದರು.

ದಿನಪೂರ್ತಿ ಈ ಸಂಬಂಧ ಇಂದು ನಡೆದ ಕಲಾಪದ ಬಳಿಕ ಪತ್ರಿಕಾ ಗೋಷ್ಥಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇರಿದಂತೆ ಖಾಸಗಿ ಬಸ್ ಮಾಲಕರು ಕೋರಿದ್ದ ಹಳೆ ರೂಟ್ ಬದಲಾವಣೆ ಹಾಗೂ ಹೊಸ ರೂಟ್ ಗಳಿಗೆ ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರು.
ಪಂಪ್ ವೆಲ್ ಬಳಿ ಆದಷ್ಟು ಶೀಘ್ರವಾಗಿ ನೂತನ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ಏಳೂವರೆ ಎಕರೆ ಭೂಮಿ ವಶಪಡಿಸಿ ಕೊಳ್ಳಲಾಗಿದ್ದು, ಬಸ್ ನಿಲ್ದಾಣ ಸ್ಥಳಾಂತರದಿಂದ ಈ ಎಲ್ಲ ಸಮಸ್ಯೆಗಳಿಗೊಂದು ಪರಿಹಾರ ಕಾಣಲು ಸಾಧ್ಯ ಎಂದ ಜಿಲ್ಲಾಧಿಕಾರಿಗಳು, ಮುಂದಿನ ಹಂತವಾಗಿ 11 ಎಕರೆಯಷ್ಟು ಜಮೀನು ವಶಪಡಿಸಿಕೊಂಡು ಸಾರಿಗೆ ಸಮುಚ್ಛಯ (transportation hub)ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು. ಈ ಎಲ್ಲ ಪ್ರಕ್ರಿಯೆಗಳಿಗೆ ಜಿಲ್ಲಾಡಳಿತಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರ ನೆರವಿನ ಅಗತ್ಯವನ್ನು ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎಸ್ ರಾವ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತ ಮ ಉಪಸ್ಥಿತರಿದ್ದರು.

Monday, March 8, 2010

ಮಹಿಳೆಯರ ಅಭಿವೃದ್ದಿಗೆ ಹಲವು ಯೋಜನೆಗಳು : ಶಾಸಕ ಯೋಗೀಶ್ ಭಟ್

ಮಂಗಳೂರು,ಮಾರ್ಚ್ 8: ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ಮತ್ತು ಸಹಾಯಕಿಯರಿಗೆ ಜಾರಿಗೆ ತಂದಿರುವ ಪಿಂಚಣಿ ಯೋಜನೆಯಡಿ ಉದ್ದೇಶಿತ ಮೊತ್ತವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಯವರಲ್ಲಿ ಆಗ್ರಹಿಸುವುದಾಗಿ ಶಾಸಕ ಹಾಗೂ ರಾಜ್ಯ ಕೈಗಾರಿಕಾ ಹಾಗೂ ಬಂಡವಾಳ ಹೂಡಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಯೋಗೀಶ್ ಭಟ್ ಅವರು ಹೇಳಿದರು.
ಅವರಿಂದು ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಮಹಿಳಾ ಆಯೋಗದ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಏರ್ಪಡಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರಕಾರದ ಸವಲತ್ತುಗಳು ತಳಮಟ್ಟದ ಮಹಿಳೆಯರಿಗೆ ತಲುಪಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದ ಅವರು, ಮಹಿಳಾ ಮಂಡಲಗಳ ಒಕ್ಕೂಟಕ್ಕೆ ಕಟ್ಟಡ ನಿರ್ಮಿಸಲು ನಿವೇಶನ ಸರ್ಕಾರ ನೀಡಿದ್ದು, ಇದಕ್ಕೆ ಕ್ಷೇತ್ರಾಭಿವೃದ್ಧಿಯಿಂದ 5 ಲಕ್ಷ ರೂ. ಅನುದಾನ ನೀಡುವುದಾಗಿ ಹೇಳಿದರು. ಸುಮಾರು 6 ಜಿಲ್ಲೆಗಳ ಬಡಜನರು ಚಿಕಿತ್ಸೆ ಪಡೆಯುತ್ತಿರುವ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ಸೌಲಭ್ಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಆಸ್ಪತ್ರೆಯ ಬಳಿ ಇರುವ ಖಾಲಿ ನಿವೇಶನದಲ್ಲಿ ದಾನಿಗಳ ನೆರವು ಪಡೆದುಕೊಂಡು ಕಟ್ಟಡ ನಿರ್ಮಿಸುವ ಉದ್ಧೇಶವೂ ಇದೆ ಎಂದು ನುಡಿದರು.
ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ ಅವರು, ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಸೂದೆ ಮಂಜೂರಾತಿ ಹಂತಕ್ಕೆ ತಲುಪಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮಹಿಳೆಯರು ಸ್ವ ಉದ್ಯೋಗದಡಿ ತಯಾರಿಸಿದ ಉತ್ಪನ್ನಗಳ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ದ.ಕ.ಜಿ.ಪಂ.ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ ಅವರು ಡಾ.ರತಿದೇವಿ ಬರೆದ ಗರ್ಭಕೋಶ ದ್ವಾರದ ಕ್ಯಾನ್ಸರ್ ಮತ್ತು ತಡೆಹಿಡಿಯುವ ಹೊಸ ವಿಧಾನಗಳು ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಲೋಕೇಶ್ವರಿ ವಿನಯಚಂದ್ರ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಬಿ. ಆರ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಪ್ರೇಮಲತಾ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗ್ರೇಸಿ ಗೋನ್ಸಾಲಿಸ್ ಮುಖ್ಯ ಅತಿಥಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಶಕುಂತಳಾ ಸ್ವಾಗತಿಸಿದರು.ಮಹಿಳಾ ದಿನಾಚರಣೆ ಅಂಗವಾಗಿ ರಂಗೋಲಿ, ಹೂ ಜೋಡಣೆ ಸ್ಪರ್ಧೆ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಮಾನತೆಯ ಪಾಠ ಮನೆಯಿಂದಲೇ ಆರಂಭಿಸಿ: ಕೆ.ಬಿ.ಎಂ ಪಟೇಲ್

ಮಂಗಳೂರು,ಮಾರ್ಚ್ 8:ಸಮಾನತೆ ಹಾಗೂ ಲಿಂಗತಾರತಮ್ಯದ ಬಗ್ಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು;ಹೆತ್ತವರು ಮಕ್ಕಳನ್ನು ಬೆಳೆಸುವಾಗ ಹೆಣ್ಣು ಗಂಡೆಂದು ತಾರತಮ್ಯ ಮಾಡದೆ ಬೆಳೆಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಎಂ ಪಟೇಲ್ ಅವರು ಹೇಳಿದರು.
ಅವರಿಂದು ಎದುರು ಪದವಿನ ಗ್ರಾಮಾ ಭಿವೃದ್ಧಿ ಸಂಘದಲ್ಲಿ ದಕ್ಷಿಣ ಕನ್ನಡ ಕಾನೂನು ಸೇವೆಗಳ ಪ್ರಾಧಿಕಾರ, ಜನಶಿಕ್ಷಣ ಟ್ರಸ್ಟ್, ವಾರ್ತಾ ಇಲಾಖೆ, ಅಪ್ನಾದೇಶ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನ, ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೂಡುಶೆಡ್ಡೆ ಗ್ರಾಮ ಪಂಚಾಯತ್, ನವಸಾಕ್ಷರರ ಸಂಘ, ಗ್ರಾಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆಯೋಜಿಸ ಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳೆ ಮತ್ತು ಕಾನೂನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಕ್ಕೂ ಪ್ರತ್ಯೇಕ ವೈಶಿಷ್ಟ್ಯವಿದೆ;ಶಕ್ತಿಯಿದೆ ಈ ಶಕ್ತಿಯ ಸದ್ಬಳಕೆ ಆಗಬೇಕು.ಸಮಾನತೆ ನಮಗೆ ಸಂವಿಧಾನಬದ್ಧವಾಗಿ ದೊರೆತಿರುವ ಹಕ್ಕು ಇದರ ಸದ್ಬಳಕೆಯಾಗಬೇಕು ಎಂದ ಅವರು, ಸ್ತ್ರೀಧನ,ಜೀವನ ನಿರ್ವಹಣೆ ಭತ್ಯೆಯ ಬಗ್ಗೆ ಸವಿವರ ಮಾಹಿತಿ ನೀಡಿದರು. ಅನ್ಯಾಯವಾದಾಗ ಕಾನೂನಿನ ಕದತಟ್ಟಲು ಹಿಂಜರಿಕೆ ಬೇಡ ಎಂದರು.
ಸಮಾ ರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಂ ಮಲ್ಲಿ ಅವರು ಮಾತನಾಡಿ, ವ್ಯಾಜ್ಯ ಮುಕ್ತ, ಕಸಮುಕ್ತ ಸ್ವಚ್ಛ ಗ್ರಾಮ ಹಾಗೂ ನೈರ್ಮಲ್ಯ ಗ್ರಾಮ ನಿರ್ಮಾಣ ನಮ್ಮ ಸಂಕಲ್ಪವಾಗಬೇಕು ಎಂದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 230 ಮನೆಗಳಿಂದ ಯಾವುದೇ ಸಮಸ್ಯೆ ಬರಬಾರದು ಎಂದ ಅವರು, ಪ್ರತಿಯೊಬ್ಬರಲ್ಲೂ ಇದು ನಮ್ಮ ಮನೆ, ನಮ್ಮ ರಸ್ತೆ, ನಮ್ಮ ಗ್ರಾಮವೆಂಬ ಭಾವನೆ ಇರಬೇಕು ಹಾಗಾದಾಗ ಮಾತ್ರ ನಮ್ಮದು ಮಾದರಿ ಗ್ರಾಮಪಂಚಾಯಿತಿಯಾಗಲು ಸಾಧ್ಯ ಎಂದರು. ಎದುರುಪದವು ಸ್ವಸಹಾಯ ಸಂಘದ ಸದಸ್ಯರಿಂದ ಜಾನಪದ ನೃತ್ಯ, ಗ್ರಾಮದ ವೆಂಕಟಾಚಾರ್ಯರಿಂದ ದೀಪ ನೃತ್ಯ ಪ್ರದರ್ಶನ ನಡೆಯಿತು. ಸಂವಾದ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಕವಿತ, ಉಪಾಧ್ಯಕ್ಷ ಹರೀಶ್ ಕೋಟ್ಯಾನ್, ಸುರೇಶ್, ಬಿ.ಫಾತುಮ್ಮ,ಫಾತುಞಿ, ಮಹಮ್ಮದ್ ಸೇರಿದಂತೆ ನವಸಾಕ್ಷರರು ಪಾಲ್ಗೊಂಡರು. ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳಲ್ಲಿ ಮಹಿಳಾ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು.ಕೃಷ್ಣ ಮೂಲ್ಯ ಅವರು ಕಾರ್ಯಕ್ರಮ ನಿರೂಪಿಸಿದರು.