Monday, March 8, 2010

ಮಹಿಳೆಯರ ಅಭಿವೃದ್ದಿಗೆ ಹಲವು ಯೋಜನೆಗಳು : ಶಾಸಕ ಯೋಗೀಶ್ ಭಟ್

ಮಂಗಳೂರು,ಮಾರ್ಚ್ 8: ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ಮತ್ತು ಸಹಾಯಕಿಯರಿಗೆ ಜಾರಿಗೆ ತಂದಿರುವ ಪಿಂಚಣಿ ಯೋಜನೆಯಡಿ ಉದ್ದೇಶಿತ ಮೊತ್ತವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಯವರಲ್ಲಿ ಆಗ್ರಹಿಸುವುದಾಗಿ ಶಾಸಕ ಹಾಗೂ ರಾಜ್ಯ ಕೈಗಾರಿಕಾ ಹಾಗೂ ಬಂಡವಾಳ ಹೂಡಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಯೋಗೀಶ್ ಭಟ್ ಅವರು ಹೇಳಿದರು.
ಅವರಿಂದು ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಮಹಿಳಾ ಆಯೋಗದ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಏರ್ಪಡಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರಕಾರದ ಸವಲತ್ತುಗಳು ತಳಮಟ್ಟದ ಮಹಿಳೆಯರಿಗೆ ತಲುಪಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದ ಅವರು, ಮಹಿಳಾ ಮಂಡಲಗಳ ಒಕ್ಕೂಟಕ್ಕೆ ಕಟ್ಟಡ ನಿರ್ಮಿಸಲು ನಿವೇಶನ ಸರ್ಕಾರ ನೀಡಿದ್ದು, ಇದಕ್ಕೆ ಕ್ಷೇತ್ರಾಭಿವೃದ್ಧಿಯಿಂದ 5 ಲಕ್ಷ ರೂ. ಅನುದಾನ ನೀಡುವುದಾಗಿ ಹೇಳಿದರು. ಸುಮಾರು 6 ಜಿಲ್ಲೆಗಳ ಬಡಜನರು ಚಿಕಿತ್ಸೆ ಪಡೆಯುತ್ತಿರುವ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ಸೌಲಭ್ಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಆಸ್ಪತ್ರೆಯ ಬಳಿ ಇರುವ ಖಾಲಿ ನಿವೇಶನದಲ್ಲಿ ದಾನಿಗಳ ನೆರವು ಪಡೆದುಕೊಂಡು ಕಟ್ಟಡ ನಿರ್ಮಿಸುವ ಉದ್ಧೇಶವೂ ಇದೆ ಎಂದು ನುಡಿದರು.
ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ ಅವರು, ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಸೂದೆ ಮಂಜೂರಾತಿ ಹಂತಕ್ಕೆ ತಲುಪಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮಹಿಳೆಯರು ಸ್ವ ಉದ್ಯೋಗದಡಿ ತಯಾರಿಸಿದ ಉತ್ಪನ್ನಗಳ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ದ.ಕ.ಜಿ.ಪಂ.ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ ಅವರು ಡಾ.ರತಿದೇವಿ ಬರೆದ ಗರ್ಭಕೋಶ ದ್ವಾರದ ಕ್ಯಾನ್ಸರ್ ಮತ್ತು ತಡೆಹಿಡಿಯುವ ಹೊಸ ವಿಧಾನಗಳು ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಲೋಕೇಶ್ವರಿ ವಿನಯಚಂದ್ರ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಬಿ. ಆರ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಪ್ರೇಮಲತಾ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗ್ರೇಸಿ ಗೋನ್ಸಾಲಿಸ್ ಮುಖ್ಯ ಅತಿಥಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಶಕುಂತಳಾ ಸ್ವಾಗತಿಸಿದರು.ಮಹಿಳಾ ದಿನಾಚರಣೆ ಅಂಗವಾಗಿ ರಂಗೋಲಿ, ಹೂ ಜೋಡಣೆ ಸ್ಪರ್ಧೆ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.