Wednesday, March 17, 2010

ಮಲೆನಾಡಿನಲ್ಲಿ 16 ಮತ್ಸ್ಯಧಾಮ ಅಭಿವೃದ್ಧಿ: ಅಶೀಸರ

ಮಂಗಳೂರು,ಮಾರ್ಚ್17:ಜೀವವೈವಿಧ್ಯ ಮಂಡಳಿ ಮಲೆನಾಡಿನಲ್ಲಿ 16 ಮತ್ಸ್ಯಧಾಮಗಳನ್ನು ಗುರುತಿಸಿದ್ದು, ಅವುಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾದ ಅನಂತಹೆಗಡೆ ಅಶೀಸರ ಹೇಳಿದರು.ಅವರಿಂದು ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆ ಸಹಯೋಗದಲ್ಲಿ ಕರಾವಳಿ ಮತ್ತು ಮಲೆನಾಡಿನ ಸುಸ್ಥಿರ ಮೀನುಗಾರಿಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಪರೂಪದ ಜೀವಸಂಕುಲವನ್ನು ಹೊಂದಿರುವ ಕರಾವಳಿ ಜಿಲ್ಲೆಗಳಲ್ಲಿ ಜೀವಸಂಕುಲದ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಜನಾಭಿಪ್ರಾಯದೊಂದಿಗೆ ವೈಜ್ಞಾನಿಕ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ನದಿ ಸಮುದ್ರ ಸೇರುವ ಕಡೆ ಉಪ್ಪು ನೀರು ಜಾಸ್ತಿಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಬಗ್ಗೆಯೂ ವರದಿಗಳು ಲಭಿಸಿದೆ. ನದಿಗಳ ಮೂಲಸ್ಥಾನಗಳು ಅತಿಕ್ರಮಣವು ಇದಕ್ಕೆ ಕಾರಣವಾಗಿರಬಹುದು ಎಂದ ಅವರು, ನೇತ್ರಾವತಿ ನದಿ ತಿರುವು ಯೋಜನೆ ಬೇಡ ಎಂಬುದಕ್ಕೆ ಒತ್ತು ನೀಡಲಾಗುವುದು. ಮೀನುಗಾರಿಕೆ, ಒಳನಾಡು ಮೀನುಗಾರಿಕೆ ಹಾಗೂ ಬಂದರುಗಳಲ್ಲಿ ಹೂಳೆತ್ತುವಿಕೆ ಸೇರಿದಂತೆ ಪಶ್ಚಿಮ ಘಟ್ಟ ಹಾಗೂ ಅದನ್ನು ಆಧರಿಸಿ ಬದುಕುತ್ತಿರುವವರನ್ನು ಗಮನದಲ್ಲಿರಿಸಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ವಿಧಾನಸಭಾ ಅಧಿವೇಶನದ ನಂತರ ಅಪರೂಪದ ಅಳಿವೆಗಳ ಸಂರಕ್ಷಣೆ ಹಾಗು ಸಿ ಆರ್ ಝಡ್ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು. ಕಾರ್ಯಪಡೆ ತಳಮಟ್ಟದಿಂದ ಅಂದರೆ ಗ್ರಾಮಪಂಚಾಯತಿ ಮಟ್ಟದಿಂದ ಜನರೊಡಗೂಡಿ ಪರಿಸರ ಸಂರಕ್ಷಣೆಗೆ ರೂಪಿಸಿರುವ ಸ್ಪಷ್ಟ ಯೋಜನೆಗಳನ್ನು ಸರ್ಕಾರದ ಮುಂದೆ ಮಂಡಿಸಲಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಸುಂದರ ನಾಯ್ಕ ಅವರು, ಕಡಲ್ಕೊರೆತ ಸೇರಿದಂತೆ ಕರಾವಳಿ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ 2010-11ನೇ ಸಾಲಿನಲ್ಲಿ ಪರಿಹಾರ ಲಭ್ಯವಾಗಲಿದೆ ಎಂದರು. ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಮೀನುಗಾರರಿಗೆ ಅನುಕೂಲವಾಗುವ ವಿಶೇಷ ಯೋಜನೆಗಳ ಬಗ್ಗೆ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದರು.ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಶಾಂತಪ್ಪ ಅವರು, ನೈಸರ್ಗಿಕ ಸಂಪತ್ತಿನ ಸುಸ್ಥಿರ ನಿರ್ವಹಣೆ ಬಗ್ಗೆ, ವಾಯು ಮಾಲಿನ್ಯ ಹಾಗೂ ಜಲ ಮಾಲಿನ್ಯದಿಂದಾಗಿರುವ ಹಾನಿಗಳನ್ನು ಪ್ರಸ್ತಾಪಿಸಿದರಲ್ಲದೆ ಕರಾವಳಿಯ ಅಸ್ಥಿರ ಮೀನುಗಾರಿಕೆಯ ಬಗ್ಗೆ ಮಾತನಾಡಿದರು. ಕಾರ್ಯಪಡೆಯ ಕೇಶವ ಕೊರ್ಸೆ ಅವರು, ಪಶ್ವಿಮ ಘಟ್ಟ ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಬಿ.ಕೇಶವ ಕುಂದರ್ ಅವರು,ಮೀನುಗಾರಿಕೆ ಮತ್ತು ಮೀನುಗಾರರ ಸಮಸ್ಯೆಗಳ ಬಗ್ಗೆ ಗಮನಸೆಳೆದರಲ್ಲದೆ ಮೀನು ಉತ್ಪತ್ತಿ ಸಂರಕ್ಷಣೆ, ಸರ್ಕಾರ ಮೀನುಗಾರರಿಗೆ ಸಬ್ಸಿಡಿ ನೀಡಲು ವಾರ್ಷಿಕ ಅನುದಾನ ಮೀಸಲಿಡಬೇಕೆಂದು ಹೇಳಿದರು. ಮೀನುಗಾರಿಕೆ ಮಹಾವಿದ್ಯಾಲಯದ ಪ್ರೊಫೆಸರ್ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಸ್ವಾಗತಿಸಿದರು. ಎಟಿಆರ್ ಇಇನ ಡಾ.ಜಗದೀಶ್ ಕೃಷ್ಣ ಸ್ವಾಮಿ ಅವರು ಪಶ್ಚಿಮ ಘಟ್ಟಗಳಲ್ಲಿ ಭೂ ಬಳಕೆಯ ಮಾರ್ಪಾಡಿನಿಂದ ಜಲ ಸಂಪನ್ಮೂಲಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು.