Sunday, March 21, 2010

ಕಂದಾಯ ಸೋರಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು, ಮಾರ್ಚ್21: ಮುಂದಿನ ಹಣಕಾಸು ವರ್ಷದಿಂದ ಕಂದಾಯ ಸೋರಿಕೆ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳೂವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಮಂಗಳೂರಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಂದಾಯ ಸೋರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ಬೇಕಾದ ಕ್ರಮಗಳನ್ನು ಆರಂಭಿಸಲು ಕಾರ್ಯಕ್ರಮ ರೂಪಿಸಲಾಗಿದ್ದು ,ತೆರಿಗೆ ಸಂಗ್ರಹವನ್ನು ಹೆಚ್ಚಿಸಲಾಗುವುದು.ಈ ಪ್ರಯತ್ನ ಏಪ್ರಿಲ್ 1 ರಿಂದ ಆರಂಭವಾಗಲಿದೆ, ಮುಂದಿನ ಬಜೆಟ್ 1 ಲಕ್ಷ ಕೋಟಿ ರೂಪಾಯಿದ್ದಾಗಿದೆ ಎಂದರು. ಖಾಲಿ ಬಿದ್ದಿರುವ ಉಪ ಲೋಕಾಯುಕ್ತರ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಮಂಗಳೂರಿನ ಜಿಲ್ಲಾ ಕಾರಾಗೃಹ ಸೇರಿದಂತೆ ರಾಜ್ಯದಲ್ಲಿ ನಗರ ಮಧ್ಯೆಯಲ್ಲಿರುವ ಎಲ್ಲಾ ಜೈಲುಗಳನ್ನು ನಗರದ ಹೊರ ಭಾಗಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ, ಈ ಪ್ರಯುಕ್ತ ಶಿವಮೊಗ್ಗ ಜೈಲು ಸ್ಥಳಾಂತರ ಮಾಡಲು ಬೇಕಾದ ಹಣವನ್ನು ಬಿಡುಗಡೆ ಮಾಡಲಾಗಿದೆ, ಸ್ಥಳಾಂತರ ಗೊಂಡ ಜೈಲು ಪ್ರದೇಶವನ್ನು ಪಿಪಿಪಿ ಆಧಾರದಲ್ಲಿ ಇತರ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು ಬೆಳೆಗಾರರಿಂದ ಅಡಿಕೆ ಖರೀದಿಸಲು 5 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮತ್ತೆ 3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಅಡಿಕೆ ಉತ್ಪಾದನಾ ವೆಚ್ಚದ ಬಗ್ಗೆ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಮೀನುಗಾರರಿಗೆ ಸಬ್ಷಿಡಿ, ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವು ಸೇರಿದಂತೆ ಜನಸಾಮಾನ್ಯರ ಅಭ್ಯುದಯಕ್ಕೆ ಪೂರಕವಾಗುವ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾ ಉಸ್ತುವರಿ ಸಚಿವ ಕೃಷ್ಣಾ ಜೆ. ಪಾಲೇಮಾರ್, ಶಾಸಕ ಯೋಗಿಶ್ ಭಟ್,ಎಂ ಎಲ್ ಸಿ ಭಾರತಿ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.