Tuesday, July 31, 2012

ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಿಗೆ ಬೀಳ್ಕೊಡುಗೆ

ಮಂಗಳೂರು.ಜುಲೈ.31:ದಕ್ಷಿಣ ಕನ್ನಡ ಜಿಲ್ಲಾ ಸಾಂಖ್ಯಿಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅಂಕಿ ಅಂಶ ವರದಿ ಸಲ್ಲಿಸುವಿಕೆಯಲ್ಲಿ 27ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಐದನೇ ಸ್ಥಾನಕ್ಕೆ ತಲುಪಿಸಿದ ತೃಪ್ತಿ ತನಗಿದೆ. ಇದಕ್ಕಾಗಿ ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ತಾನು ಕೃತಜ್ಞ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೆ. ರಮೇಶ್ ಉಪಾಧ್ಯ ಅವರು ಹೇಳಿದರು.
ಇಂದು ಮಂಗಳೂರಿನ ಅವರ ಕಚೇರಿಯಲ್ಲಿ ನಿವೃತ್ತರಾಗುವ ವೇಳೆ ಸಹೋದ್ಯೋಗಿಗಳು ನೀಡಿದ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. 37 ವರ್ಷಗಳ ಕಾಲ ವಿವಿಧ ಇಲಾಖೆಗಳಲ್ಲಿ ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಕರ್ತವ್ಯನಿರ್ವಹಿಸಿರುವ ಅವರು ಸಹೋದ್ಯೋಗಿಗಳೊಂದಿಗೆ ತಮ್ಮ ಸೇವಾವಧಿಯ ಅನುಭವವನ್ನು ಹಂಚಿಕೊಳ್ಳುತ್ತಾ ದಕ್ಷಿಣ ಕನ್ನಡದ ಸಹೋದ್ಯೋಗಿಗಳ ಸಹಕಾರವನ್ನು ಸ್ಮರಿಸಿದರು. ಸರ್ಕಾರಿ ಸೇವೆಯಲ್ಲಿ ವಿಧೇಯತೆಯಿಂದ ನಡೆದುಕೊಳ್ಳಬೇಕು; ಹಾಗೂ ಸೇವೆಯೇ ನಮ್ಮ ಧ್ಯೇಯವಾಗಿರ ಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್ ಅವರು, ವೃತ್ತಿ ಜೀವನದಲ್ಲಿ ನಿವೃತ್ತಿ ಅನಿವಾರ್ಯ ಎಂದರು. ಸಾಂಖ್ಯಿಕ ಅಧಿಕಾರಿಗಳು ನೇರ ನಡೆ ನುಡಿಯವರಾಗಿದ್ದು ತಮ್ಮ ಸಹೋದ್ಯೋಗಿಗಳೊಂದಿಗೆ ಅತ್ಯಂತ ಸೌಹಾರ್ದಯುತವಾಗಿ ನಡೆದುಕೊಂಡವರು. ಅವರ ನಿವೃತ್ತಿ ಜೀವನ ಶುಭಕರವಾಗಲಿ ಎಂದು ಹಾರೈಸಿದರು.
ಕೆ. ರಮೇಶ್ ಉಪಾಧ್ಯ ಅವರ ಪತ್ನಿ ಶ್ರೀಮತಿ ಲೀಲಾ ಆರ್ ಉಪಾಧ್ಯ ಸಮಾರಂಭಕ್ಕೆ ಸಾಕ್ಷಿಯಾದರು. ಸಹೋದ್ಯೋಗಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಸಾಂಖ್ಯಿಕ ಅಧಿಕಾರಿ ಶ್ರೀಮತಿ ಸಂಧ್ಯಾ ಉಪಸ್ಥಿತರಿದ್ದರು. ಡಾ. ಬಿ ಕೆ ವಿಶ್ವನಾಥ್ ಅವರು ಉಪಸ್ಥಿತರಿದ್ದರು. ಸಾಂಖ್ಯಿಕ ಅಧಿಕಾರಿ ಪ್ರದೀಪ್ ಡಿ ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಗಣಪತಿ ಭಟ್ ವಂದನಾರ್ಪಣೆ ಮಾಡಿದರು.

ಪುತ್ತೂರು ಪುರಸಭೆ ವ್ಯಾಪ್ತಿಯ ವಾಹನ ಸಂಚಾರ ವ್ಯವಸ್ಥೆ:ಜಿಲ್ಲಾಧಿಕಾರಿ ಆದೇಶ

ಮಂಗಳೂರು, ಜುಲೈ 31:ಪುತ್ತೂರು ಪುರಸಭೆ ವ್ಯಾಪ್ತಿಯ ಒಳಗಡೆ ವಾಹನ ಸಂಚಾರದ ವ್ಯವಸ್ಥೆ ,ಸಂಚಾರ ನಿಯಂತ್ರಣ,ವಾಹನ ನಿಲುಗಡೆ,ಅಟೋರಿಕ್ಷಾ ಪಾರ್ಕಿಂಗ್,ಏಕಮುಖ ಸಂಚಾರ ಇತ್ಯಾದಿ ವ್ಯವಸ್ಥೆ ಬಗ್ಗೆ ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣಕನ್ನಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತಾರೆ.
ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಶುಲ್ಕ ಪಾವತಿ ಮಾಡುವ ಅಟೋರಿಕ್ಷಾ ಪಾರ್ಕ್ ಗಳಿಗೆ ಮುರರಸ್ತೆಯ ಎಡಬದಿ,ನೆಹರುನಗರ ವಿವೇಕಾನಂದ ಕಾಲೇಜು ತಿರುಗುವ ಬದಿಯಲ್ಲಿ,ಸುಧಾನ ಶಾಲೆ ಬಸ್ ನಿಲ್ದಾಣದ ಬಳಿ,ಬೊಳುವಾರು ಮಾಕರ್ೆಟ್ ಬಳಿ,ಅಂಜನೇಯ ದೇವಸ್ಥಾನದ ಬಳಿ,ಪುತ್ತೂರು ಸಂಚಾರ ಪೋಲೀಸ್ ಠಾಣೆ ಬಳಿ,ಬಸ್ ನಿಲ್ದಾಣದ ಬಳಿ ಸೂಪರ್ ಟವರ್ ಮುಂಭಾಗ,ಜೆ.ಕೆ.ಸಂಕೀರ್ಣದ ಎದುರು,ಎಲ್.ಐ.ಸಿ ಕಚೇರಿ ಬಳಿ,ದಭರ್ೆಯ ಸುಳ್ಯ ರಸ್ತೆಯ ಎಡಭಾಗ ,ಸುಬ್ರಹಣ್ಯ ರಸ್ತೆ ಬಲಭಾಗ,ಫಿಲೋಮಿನಾ ಕಾಲೇಜಿನ ಗೇಟಿನ ಬಳಿ,ಮೊಟ್ಟೆತಡ್ಕ ಬಸ್ ನಿಲ್ದಾಣದ ಬಳಿ,ಕೆಮ್ಮಿಂಜೆ ಕಟ್ಟೆ ಹಸನ್ ಮನೆ ಪಕ್ಕ,ಕ್ಯಾಂಪ್ಕೊ ಚಾಕಲೇಟ್ ಫ್ಯಾಕ್ಟರಿ ಬಳಿ,ಆದರ್ಶ ಆಸ್ಪತ್ರೆಯ ಎದುರು,ಎಪಿಎಂಸಿ ಗೇಟಿನ ಎಡಭಾಗ,ಕೂಟೆಚಾ ಕ್ರಾಸ್ ರಸ್ತೆ ಎಡಭಾಗ,ಕೃಷ್ಣ ನಗರ ಬಸ್ ನಿಲ್ದಾಣ ಹತ್ತಿರ,ಕೆಮ್ಮಾಯಿ ಬಸ್ ನಿಲ್ದಾಣದ ಬಳಿ,ಪಡೀಲು ಬಸ್ ನಿಲ್ದಾಣದ ಬಳಿ, ಬನ್ನೂರು ಕಟ್ಟೆ ಹಾರಾಡಿ ದೇವಸ್ಥಾನದ ಪಕ್ಕ,ಖಾಸಗಿ ಬಸ್ ನಿಲ್ದಾಣದ ಬಳಿ,ಬಾಲವನ ಬಸ್ ನಿಲ್ದಾಣದ ಬಳಿಯಲ್ಲಿ ವ್ಯವಸ್ಥೆ ಮಾಡಲಾಗಿದೆಯೆಂದು ಆದೇಶದಲ್ಲಿ ತಿಳಿಸಿರುತ್ತಾರೆ.

ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ಪಾರ್ಕಿಂಗಿಗ್ಗೆ ದ್ರುವ ಕಾಂಪ್ಲೆಕ್ಸ್ ಎದುರು,ನ್ಯೂ ಹರಿಪ್ರಸಾದ್ ಬೊಳುವಾರ್ ಎದುರು,ಎಚ್ಡಿಎಫ್ಸಿ ಕಟ್ಟಡದ ಎದುರು,ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಎದುರು, ಮಾಣಿಲಾ ಕನ್ಸ್ಟ್ರಕ್ಷನ್ ಎದುರು,ಅಂಕಲ್ ಸ್ವೀಟ್ ವಿರುದ್ಧ ದಿಕ್ಕಿನಲ್ಲಿ, ಆರ್.ಎಚ್.ಸೆಂಟರ್ ಎದುರು,ದೇನಾ ಬ್ಯಾಂಕ್ ಎದುರು,ಎಕ್ಸಿಸ್ ಬ್ಯಾಂಕು ಎದುರು ,ನಾರಾಯಣ ನಾಯಕ್ & ಸನ್ಸ್ ವಿರುದ್ದ ದಿಕ್ಕಿನಲ್ಲಿ ,ಸೋಜಾ ಅಲ್ಯುಮಿನಿಯಂ ವಕ್ಸರ್್ ಎದುರು,ಮುತ್ತೂಟ್ ಸೆಕ್ಯುರಿಟಿ ಲಿ.ನ ಬಳಿ ಸಾರ್ವಜನಿಕ ಶೌಚಾಲಯದ ಮುಂಭಾಗ,ಶ್ರೀಧರ ಭಟ್ ರಸ್ತೆ ಬದಿ,ನ್ಯೂಟೈರ್ನಿಂದ ಪದ್ಮಾ ಅಟೋ ಗ್ಯಾಸ್ ವರೆಗೆ,ಹೆಗ್ಡೆ ಆರ್ಕೆಡ್ ಮುಂಭಾಗ, ಜೆ.ಎಂ ಕಟ್ಟಡ ಮುಂಭಾಗ,ಜಿ.ಎಲ್ ಕಾಂಪ್ಲೆಕ್ಸ್ ಮುಂಭಾಗ,ವೆಂಕಟರಮಣ ದೇವಸ್ಥಾನ ಮುಂಭಾಗ,ಧರ್ಮಸ್ಥಳ ಬಿಲ್ಡಿಂಗ್ ಎದುರು,ಮೋಹನ್ ಕೋಲ್ಡ್ ಹೌಸ್ ಎಡಬದಿ,ಎಳ್ತಿಮಾರ್ ಕಟ್ಟಡದ ಎದುರು,ರಾಮನಾಥ ಚೇಂಬರ್ಸ್ ಎದುರು,ಸುಜಾತ ಹೋಟೇಲ್ ಎದುರು,ಕೆನರಾ ಬ್ಯಾಂಕ್ ಎದುರು,ಯುನೈಟೆಡ್ ಹಾರ್ಡ್ ವೇರ್ ಶಾಪ್ ಕಟ್ಟಡ ಎದುರು,ಗಣೇಶ ರೇಡಿಯೋ ಹೌಸ್ ಮುಂಭಾಗ,ದನ್ವಂತರಿ ಆಸ್ಪತ್ರೆ ವಿರುದ್ಧ ದಿಕ್ಕಿನಲ್ಲಿ,ಹರ್ಷ ಬಿಲ್ಡಿಂಗ್ ವಿರುದ್ಧ ದಿಕ್ಕಿನಲ್ಲಿ,ಸಚಿನ್ ಟ್ರೇಡಿಂಗ್ ಕಂಪೆನಿ ವಿರುದ್ಧ ದಿಕ್ಕಿನಲ್ಲಿ,ಮರಿಕೆ ಕ್ಲಿನಿಕ್ ವಿರುದ್ಧ ದಿಕ್ಕಿನಲ್ಲಿ ದರ್ಬೆ ಪ್ರಶಾಂತ್ ವೈನ್ಸ್ ಎದುರು,ದರ್ಬೆ ಸಾರ್ವಜನಿಕ ಶೌಚಾಲಯದ ಮುಂಭಾಗದಿಂದ ಸರ್ವಿಸ್ ಸ್ಟೇಷನ್ ವರೆಗೆ, ಎಪಿಎಂಸಿ ರಸ್ತೆಯಲ್ಲಿ,ಸೂಪರ್ ಕಲೆಕ್ಷನ್ ಶಾಪಿನಿಂದ ಫಾರೆಸ್ಟ್ ಕಚೇರಿ ವರೆಗೆ, ನೆಲ್ಲಿಕಟ್ಟೆ ಅನಿತಾ ಮಿಲ್ ಬಳಿ ಶುಲ್ಕ ಪಾವತಿಮಾಡಿ ಪಾರ್ಕಿಂಗ್ ಮಾಡಬಹುದಾಗಿದೆ.
ಏಕಮುಖ ಸಂಚಾರ ವ್ಯವಸ್ಥೆಯಲ್ಲಿ ಭುವನೇಂದ್ರ ಕಲ್ಯಾಣ ಮಂಟಪ ರಸ್ತೆ,ಬೊಳುವಾರು ಏಕಮುಖ ರಸ್ತೆ ಅಂಜನೇಯ ಮಂತ್ರಾಲಯ ಬಳಿಯಿಂದ,ಎಂ.ಟಿ.ರಸ್ತೆ ಬಸ್ ನಿಲ್ದಾಣ ಕಡೆಯಿಂದ ಮಹಮ್ಮಾಯಿ ದೇವಸ್ಥಾನ ಕಡೆಗೆ, ಕೋರ್ಟ್ ರಸ್ತೆ, ಮಾರ್ಕೆಟ್ ಜಂಕ್ಷನ್ನಿಂದ ಹಳೇ ತಾಜ್ಮಹಲ್ ಜಂಕ್ಷನ್ ಕಡೆಗೆ,ಬಲ ತಿರುವು ಇಲ್ಲ ,ಹಾರಾಡಿ ಕೊಂಬೆಟ್ಟು ರಸ್ತೆ ಕಡೆಗೆ ಏಕಮುಖ ರಸ್ತೆಯಾಗಿ ಆದೇಶ ಹೊರಡಿಸಲಾಗಿದೆ.

Monday, July 30, 2012

ಸಾಂಕ್ರಾಮಿಕ ರೋಗ ಕುರಿತು ಸಕಾಲಿಕ ಮಾಹಿತಿ ನೀಡಿ: ಜಿಲ್ಲಾಧಿಕಾರಿ

ಮಂಗಳೂರು,ಜುಲೈ.30: ಜಿಲ್ಲೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳ ಹೊರತಾಗಿಯೂ ಸಾಂಕ್ರಾಮಿಕ ರೋಗಗಳ ಬಗ್ಗೆ ಸಕಾಲದಲ್ಲಿ ವರದಿ ಬಾರದಿರುವುದನ್ನು ತಾನು ಗಮನಿಸಿದ್ದು, ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಕಾಲದಲ್ಲಿ ವರದಿ ಒದಗಿಸುವುದು ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ವೈದ್ಯರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಡಾ. ಎನ್. ಎಸ್. ಚನ್ನಪ್ಪಗೌಡ ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಡೆಂಗ್ಯು ಪ್ರಕರಣ ನಿಯಂತ್ರಣ ಹಾಗೂ ಚಿಕಿತ್ಸಾ ಕ್ರಮದ ಬಗ್ಗೆ ಖಾಸಗಿ ವೈದ್ಯರಿಗಾಗಿ ಹಮ್ಮಿಕೊಳ್ಳಲಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಲವು ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗದಿಂದ ದಾಖಲಾದ ರೋಗಿಗಳ ಮಾಹಿತಿ ರೋಗ ಉಲ್ಭಣಗೊಂಡ ಬಳಿಕವಷ್ಟೇ ತಿಳಿಯುತ್ತದೆ. ವರದಿ ಮಾಡುವಿಕೆಯಲ್ಲಿ ವಿಳಂಬವಾಗುವುದರಿಂದ ಸಂಭವಿಸುವ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ತಿಳಿದಿರಬೇಕು ಎಂದು ಜಿಲ್ಲಾಧಿಕಾರಿಗಳು ವೈದ್ಯರಿಗೆ ಹೇಳಿದರು. ಹಲವು ರೋಗಗಳ ನಿರ್ಮೂಲನೆ ಅಸಾಧ್ಯವಾದರೂ ನಿಯಂತ್ರಣ ಸಾಧ್ಯ. ನಿಯಂತ್ರಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು, ದಕ್ಷಿಣ ಕನ್ನಡ ಜಿಲ್ಲೆ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಶುಚಿತ್ವ ಇಲ್ಲದಿರುವುದೇ ಹಲವು ಸಮಸ್ಯೆಗಳಿಗೆ, ರೋಗಗಳಿಗೆ ಕಾರಣವಾಗಿದ್ದು ನಮ್ಮ ಜಿಲ್ಲೆ ಸ್ವಚ್ಛ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಘನತ್ಯಾಜ್ಯ, ದ್ರವತ್ಯಾಜ್ಯ ವಿಲೇಯಲ್ಲೂ ಹಲವು ಮಾದರಿಗಳನ್ನು ರಾಜ್ಯಕ್ಕೆ ನೀಡಿದ ಜಿಲ್ಲೆ ಎಂದ ಅವರು, ಎಲ್ಲ ಯೋಜನೆಗಳ ಯಶಸ್ವಿಗೆ ಸಾಮೂಹಿಕ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆ ಇರಬೇಕೆಂದರು.
ಜಿಲ್ಲೆಯ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಅರಿವು ಮೂಡಿಸುವ ಕೆಲಸ ಇನ್ನಷ್ಟು ಆಗಬೇಕೆಂದರು. ಆರೋಗ್ಯ ಕ್ಷೇತ್ರಕ್ಕೆ ವಲಸಿಗರು ಸವಾಲಾಗಿ ಪರಿಣಮಿಸಿದ್ದು, ಈ ಸವಾಲನ್ನು ನಿಭಾಯಿಸಬೇಕಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಕೆ ಎಂ ಸಿಯ ವೈದ್ಯಕೀಯ ತಜ್ಞ ಡಾ ಚಕ್ರಪಾಣಿ ಎಂ ಅವರು, ಡೆಂಗ್ಯು ಜ್ವರ ವೈರಸ್ ನಿಂದ ಬರುವ ರೋಗವಾಗಿದ್ದು ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.
ಈಡಿಸ್ ಸೊಳ್ಳೆಯಿಂದ ಹರಡುವ ರೋಗವಿದಾಗಿದ್ದು, ಹರಡುವ ತೀವ್ರತೆ ಜಾಸ್ತಿ, ಡೆಂಗ್ಯು ಸಾಮಾನ್ಯ, ಡೆಂಗ್ಯು ರಕ್ತಸ್ರಾವ, ಡೆಂಗ್ಯು ಪ್ರಜ್ಞೆ ತಪ್ಪುವ ಜ್ವರ ಎಂದು ಗುರುತಿಸಲಾಗಿದ್ದು,ರೋಗ ಲಕ್ಷಣಗಳನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಇದ್ದಕ್ಕಿದ್ದ ಹಾಗೆ ತೀವ್ರ ಸ್ವರೂಪದ ಜ್ವರ, ತಲೆನೋವು (ಹಣೆಯ ಮುಂಭಾಗದಲ್ಲಿ ನೋವು) ವಿಪರೀತ ಮೈನೋವು, ಕಣ್ಣುಗುಡ್ಡೆ ನೋವು, ಮೈಮೇಲೆ ಕೆಂಪು ದಡಿಕೆ ಇದರ ಲಕ್ಷಣಗಳು. ಮಲೇರಿಯಾ ಹರಡುವ ಸೊಳ್ಳೆ ರಾತ್ರಿ ವೇಳೆ ಸಕ್ರಿಯವಾಗಿರುತ್ತದೆ. ಬಿಟ್ಟು ಬಿಟ್ಟು ಬರುವ ಚಳಿ, ಜ್ವರ, ಬೆವರುವಿಕೆ, ತಲೆನೋವು ಮಲೇರಿಯಾದ ಮುಖ್ಯ ಲಕ್ಷಣ ಎಂದು ತಮ್ಮ ಸಂಪನ್ಮೂಲ ನುಡಿಯಲ್ಲಿ ವಿವರಿಸಿದರು.
ಮಕ್ಕಳ ತಜ್ಞರಾದ ಡಾ ಬಾಲಕೃಷ್ಣ ರಾವ್, ಮೈಕ್ರೋ ಬಯಾಲಜಿಸ್ಟ್ ವೀಣಾ, ಕೀಟಶಾಸ್ತ್ರಜ್ಞರಾದ ಮುಕ್ತ ಮಾತನಾಡಿದರು. ಜಿಲ್ಲಾ ಮಲೇರಿಯಾ ಡಾಕ್ಟರ್ ಅರುಣ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ ರಾಜೇಶ್ ಸ್ವಾಗತಿಸಿದರು. ಜಯರಾಂ ಕಾರ್ಯಕ್ರಮ ನಿರೂಪಿಸಿದರು.

Sunday, July 29, 2012

ಶಾಂತಿ ಸುವ್ಯವಸ್ಥೆಗೆ ಆದ್ಯತೆ: ಸಚಿವ ಸಿ ಟಿ ರವಿ

ಮಂಗಳೂರು, ಜುಲೈ 29: ನಗರದ ಪಡೀಲಿನಲ್ಲಿ ನಿನ್ನೆ ನಡೆದ ಹೋಂ ಸ್ಟೇ ಘಟನೆ ಹೇಯವಾಗಿದ್ದು, ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಕಾನೂನು ಪ್ರಕಾರ ನೀಡಲು ಬದ್ಧ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಅವರು ಹೇಳಿದರು.
ಅವರಿಂದು ಮಂಗಳೂರಿಗೆ ಆಗಮಿಸಿ ಪರಿಸ್ಥಿತಿಗೆ ಸಂಬಂಧಿಸಿದಂತೆ ಉಪಸಭಾಪತಿಗಳು ಹಾಗೂ ಸಂಸದರು,ಎಡಿಜಿಪಿ ಬಿಪಿನ್ ಗೋಪಾಲ್ ಕೃಷ್ಣ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠರೊಂದಿಗೆ ಚರ್ಚೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಶಾಂತಿ ಸಹಬಾಳ್ವೆಗೆ ಆದ್ಯತೆ ನೀಡಲಾಗುವುದು. ಸಾಮಾಜಿಕ ಸುಸ್ಥಿತಿಯನ್ನು ಹಾಳುಗೆಡಹುವ, ಕಾನೂನನ್ನು ಕೈಗೆತ್ತಿಕೊಳ್ಳುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು; ರಾಜ್ಯದಲ್ಲಿ ತಾಲಿಬಾನಿ ಸಂಸ್ಕೃತಿಗೆ ಅವಕಾಶವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಮುಂಜಾಗೃತ ಕ್ರಮವಾಗಿ ಸಾಕಷ್ಟು ಪೋಲಿಸರನ್ನು ನಗರದಲ್ಲಿ ನಿಯೋಜಿಸಲಾಗಿದೆ. ಇನ್ನೂ ಹೆಚ್ಚಿನ ನೆರವು ಬೇಕಾದರೇ ನೀಡಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಪೋಲಿಸ್ ವರಿಷ್ಟರಿಗೆ ಸೂಚನೆ ನೀಡಲಾಗಿದೆ. ಇದೇ ರೀತಿ ಕಾನೂನು ಬಾಹಿರವಾಗಿ, ಯಾವುದೇ ಅನುಮತಿ ಇಲ್ಲದೇ ಹೋಂ ಸ್ಟೇ ಗಳನ್ನು ನಿರ್ಮಾಣ ಮಾಡುವವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ನುಡಿದರು.
ಪತ್ರಿಕಾಗೋಷ್ಠಿಯ ವೇಳೆ ಉಪಸಭಾಪತಿ ಎನ್ ಯೋಗೀಶ್ ಭಟ್, ಸಂಸದರಾದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.

Saturday, July 28, 2012

ರಸ್ತೆ ನಿಯಮ ಪಾಲಿಸದ ವಾಹನಗಳನ್ನು ಮುಟ್ಟುಗೋಲು ಹಾಕಿ: ಜಿಲ್ಲಾಧಿಕಾರಿ

ಮಂಗಳೂರು,ಜುಲೈ.28 : ರಾಷ್ಟ್ರೀಯ ಹೆದ್ದಾರಿ 66 ಬದಿಯಲ್ಲಿ ಅನಧಿಕೃತವಾಗಿ ನಿಲುಗಡೆ ಗೊಳಿಸಿ ಸುಗಮ ರಸ್ತೆ ಸಂಚಾರಕ್ಕೆ ಅಡಚಣೆಯೊಡ್ಡುವ ಟ್ರಕ್ಕುಗಳನ್ನು, ಬುಲೆಟ್ ಟ್ಯಾಂಕರ್ ಗಳನ್ನು ಮುಟ್ಟುಗೋಲು ಹಾಕಿ ಎಂದು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ರಸ್ತೆ ಸುರಕ್ಷತಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಪ್ರಯಾಣಿಕರು, ಚಾಲಕರು, ಕಾನೂನು ಪಾಲಕರು ತಮ್ಮ ಕರ್ತವ್ಯ ಮತ್ತು ಹಕ್ಕುಗಳನ್ನು ಪಾಲಿಸುವುದರಿಂದ ಎಲ್ಲರಿಗೂ ಅನುಕೂಲ. ಇಲ್ಲದಿದ್ದರೆ ಕಠಿಣ ಕಾನೂನು ಮತ್ತು ಶಿಕ್ಷೆಗಳ ಮೂಲಕವೇ ನಿಯಮ ಪಾಲನೆ ಮಾಡಬೇಕಾಗುತ್ತದೆ ಎಂದರು.
ಪ್ರಯಾಣಿಕರು ಎಲ್ಲೆಂದರಲ್ಲಿ ಕೈತೋರಿಸುವುದು, ಇವರು ಕೈತೋರಿಸಿದೆಡೆಯೆಲ್ಲ ಚಾಲಕರು ಬಸ್ ನಿಲ್ಲಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸುಗಮ ಸಂಚಾರಕ್ಕೆ ರಸ್ತೆ ನಿಯಮ ಪಾಲಿಸಿ ಎಂದ ಜಿಲ್ಲಾಧಿಕಾರಿಗಳು, ರಸ್ತೆ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಮಾಹಿತಿ ಫಲಕ ಹಾಗೂ ಮಾರ್ಗದರ್ಶನ ಫಲಕಗಳನ್ನು ಕಡ್ಡಾಯವಾಗಿ ಹಾಕಬೇಕೆಂದು ಎಂದು ಕಾಮಗಾರಿ ನಡೆಸುವ ಸಂಸ್ಥೆಗಳಿಗೆ ಸೂಚಿಸಿದರು.
ಪಾಣೆ ಮಂಗಳೂರು ಹಳೆ ಸೇತುವೆಯಲ್ಲಿ ಬಸ್ಸು ಸಂಚಾರ ನಿರ್ಬಂಧಿಸಲಾಗಿದ್ದು, ಈ ಬಗ್ಗೆ ಯವುದೇ ಗೊಂದಲವಿಲ್ಲ. ಇಲ್ಲಿ ಅನಾಹುತ ಸಂಭವಿಸಿದರೆ ಬಸ್ ಮಾಲೀಕರೆ ಹೊಣೆ ಎಂದೂ ಜಿಲ್ಲಾಧಿಕಾರಿಗಳು ನುಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಸೂಚಿಸಿದ ಸ್ಥಳಗಳಲ್ಲಿ ಸ್ಪೀಡ್ ಬ್ರೇಕರ್ ಗಳನ್ನು ವೈಜ್ಞಾನಿಕವಾಗಿ ಅಳವಡಿಸಲಾಗಿದೆ. ಇನ್ನೂ ಅಗತ್ಯವಿದ್ದಲ್ಲಿ ನಿರ್ಮಿಸಲಾಗುವುದು ಎಂಬ ಭರವಸೆ ನೀಡಿದ ಜಿಲ್ಲಾಧಿಕಾರಿಗಳು, ಆಟೋ ರಿಕ್ಷಾ ತಂಗುದಾಣ ಮತ್ತು ಬಸ್ ಬೇ ಗಳನ್ನು ನಿರ್ಮಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪಡೀಲ್ ಬಳಿ ಇರುವ ರೈಲ್ವೇ ಕ್ರಾಸಿಂಗ್ನಲ್ಲಿ ಓವರ್ ಬ್ರಿಡ್ಜ್ ನಿರ್ಮಿಸುವ ಕುರಿತು ಕಾಮಗಾರಿಯ ಶೇ. 50 ವೆಚ್ಚವನ್ನು ರಾಜ್ಯ ಸಕರ್ಾರದಿಂದ ಭರಿಸಲು ಸಕರ್ಾರದ ಅನುಮೋದನೆ ದೊರಕಿದ್ದು, ಶಿಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟೀಕರಣಗಳ ಸಮಸ್ಯೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಅವರು ಜಿಲ್ಲಾಧಿಕಾರಿಗಳ ಗಮನಸೆಳೆದರು. ಕಪಿತಾನಿಯೋ ವಿದ್ಯಾಸಂಸ್ಥೆಯ ಮಕ್ಕಳು ರಸ್ತೆ ದಾಟಲು ಅನುಕೂಲವಾಗುವಂತೆ ಝೀಬ್ರಾ ಕ್ರಾಸಿಂಗ್ ಹಾಕಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ನಗರದಲ್ಲಿ ಖಾಸಗಿ ಬಸ್ಸುಗಳು ನಿಯಮಪಾಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಇತ್ತೀಚೆಗೆ ಇವರ ಜೊತೆಗೆ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಚಾಲಕರು ನಿಗದಿತ ಸ್ಥಳಗಳಲ್ಲಿ ಬಸ್ ನಿಲ್ಲಿಸದೆ ಅಡ್ಡಾದಿಡ್ಡಿ ನಿಲ್ಲಿಸಿ ರಸ್ತೆ ಸಂಚಾರಕ್ಕೆ ತೊಡಕುಂಟು ಮಾಡುವ ಬಗ್ಗೆ ತಾನೆ ದೂರು ನೀಡಿರುವುದಾಗಿ ಹೇಳಿದರಲ್ಲದೆ, ಇಂತಹ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ನಿದರ್ಾಕ್ಷಿಣ್ಯವಾಗಿ ಚಾಲಕರ ಪರವಾನಿಗೆಯನ್ನು ಅಮಾನತ್ತಿನಲ್ಲಿಡಿ ಎಂದರು. ಪಂಪ್ವೆಲ್ ಬಲ್ಮಠಗಳಲ್ಲಿ ತಾವೆ ಇಂತಹ ಪ್ರಕರಣ ನೋಡಿರುವುದಾಗಿಯೂ ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕೆ.ಎಸ್.ಆರ್.ಟಿ.ಸಿ ಡಿಪ್ಪೋ ಮ್ಯಾನೇಜರ್ ಅವರಿಗೆ ಸಂಸ್ಥೆಯ ಚಾಲಕರಿಗೆ ತರಬೇತಿ ನೀಡಲು ಸೂಚಿಸಿದರು.
ರಾಷ್ಟ್ರೀಕೃತ ಹೆದ್ದಾರಿಗಳಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಬಸ್ಸು ತಂಗುದಾಣಗಳನ್ನು ತೆರವುಗೊಳಿಸಲಾಗುವುದು. ಕದ್ರಿ, ಕೆ ಪಿ ಟಿ ಬಳಿ ಮತ್ತು ನಂತೂರು ಬಿಕರ್ನಕಟ್ಟೆ ಕ್ರಾಸ್ ರೋಡ್ ನಲ್ಲಿ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸುವುದು ಹಾಗೂ ನಂತೂರು ಜಂಕ್ಷನ್ ನಲ್ಲಿನ ರಸ್ತೆ ಗುಂಡಿಯನ್ನು ಒಂದು ವಾರದೊಳಗೆ ಮುಚ್ಚಲು ಸೂಚನೆ ನೀಡಿದರು. ಸಭೆಯಲ್ಲಿ ಮೂಡಾ ಕಮಿಷನರ್ ಅಜಿತ್ ಹೆಗಡೆ, ಪಾಲಿಕೆ ಇಂಜಿನಿಯರ್ ರಾಜಶೇಖರ್,ಪೋಲಿಸ್ ಅಧಿಕಾರಿಗಳು, ಬಸ್ ಮಾಲಿಕರು, ಕೆನರಾ ಚೇಂಬರ್ಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಐದು ಕೊರಗ ಕುಟುಂಬಗಳಿಗೆ ಚೆಕ್ ವಿತರಣೆ

ಮಂಗಳೂರು,ಜುಲೈ.28 : ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಪಸಭಾಪತಿ ಎನ್ ಯೋಗೀಶ್ ಭಟ್ ಅವರು ತಲಾ 39,000 ರೂ.ಗಳ ಚೆಕ್ ನ್ನು ಐದು ಕೊರಗ ಕುಟುಂಬಗಳಿಗೆ ಪಾವತಿಸಿದರು.
ನಗರದ ನಂತೂರು ಜಂಕ್ಷನ್ ಬಳಿಯ ಎನ್ ಹೆಚ್ 169 ರಸ್ತೆ ಅಗಲೀಕರಣ ವೇಳೆ ಮನೆ ತೆರವು ಗೊಳಿಸಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ 6 ಕೊರಗ ಕುಟುಂಬಗಳಿಗೆ ಐಟಿಡಿಪಿ ಇಲಾಖೆ ವತಿಯಿಂದ ಬಾಡಿಗೆ ಹಣವನ್ನು ನೀಡಲಾಯಿತು.
ಇವರಿಗಾಗಿ ಕಣ್ಣ ಗುಡ್ಡೆಯಲ್ಲಿ ಐದು ಸೆನ್ಸ್ ಜಾಗ ಗುರುತಿಸಿದ್ದು, 1.15 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಬಗ್ಗೆಯೂ ಸಭೆ ನಿರ್ಧರಿಸಿತು. 270 ಚದರ ಅಡಿ ವಿಸ್ತೀರ್ಣದ ಹಾಲ್, ಬೆಡ್ ರೂಂ, ಅಡುಗೆಮನೆ, ಬಾತ್ ರೂಂ ಮತ್ತು ಶೌಚಾಲಯವನ್ನು ಒಳಗೊಂಡ ಮನೆಯನ್ನು ಗೋಕುಲ ನಿರ್ಮಾಣ ಸಂಸ್ಥೆಯವರ ಮೂಲಕ ನಿರ್ಮಿಸಲು ಉದ್ದೇಶಿಸಲಾಗಿದ್ದು, ಐಟಿಡಿಪಿ ಅಧಿಕಾರಿ ಸಾಬಿರ್ ಅಹ್ಮದ್ ಮುಲ್ಲಾ ಅವರು ಇಂದು ಕಾವಳಕಟ್ಟೆಯಲ್ಲಿ ಈಗಾಗಲೇ ಈ ಸಂಸ್ಥೆಯವರು ನಿರ್ಮಿಸಿರುವ ಮನೆಗಳನ್ನು ತೋರಿಸಲು ಕೊರಗ ಕುಟುಂಬದವರನ್ನು ಸ್ಥಳಕ್ಕೆ ಕರೆದೊಯ್ದರು. ಇದೇ ಮಾದರಿ ಮನೆ ಅವರಿಗಿಷ್ಟವಾದರೆ ತಕ್ಷಣವೇ ನಿರ್ಮಿಸಿಕೊಡಲಾಗುವುದೆಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ತಿಳಿಸಿದರು.
ಸುಮಾರು ನಾಲ್ಕೈದು ವರ್ಷಗಳಿಂದ ಬಾಕಿ ಉಳಿದ ಈ ಕುಟುಂಬಗಳ ಸಮಸ್ಯೆ ಮುಂದಿನ ಎರಡು ತಿಂಗಳಲ್ಲಿ ಬಗೆಹರಿಯಲಿದೆ. ಮನೆಗೆ ರಸ್ತೆ ಮತ್ತು ವಿದ್ಯುತ್ ನ್ನು ಬೇರೆ ಯೋಜನೆಗಳ ಮೂಲಕ ಒದಗಿಸಿಕೊಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು. ಶ್ರೀಮತಿ ಶಶಿಕಲಾ, ವಸಂತಿ, ವಸಂತಿ ಶೀನ, ಮೀನ, ಅಮ್ಮಣ್ಣಿ ಅವರು ಇಂದು ಚೆಕ್ ಪಡೆದರು. 19 ತಿಂಗಳ ಬಾಡಿಗೆ ಹಣವನ್ನು ಅವರಿಗೆ ಪಾವತಿಸಲಾಗಿದೆ. ಆರು ಕುಟುಂಬಗಳು ಐದು ಮನೆಗಳಲ್ಲಿ ವಾಸವಾಗಿವೆ.

ಪ್ಲಾಸ್ಟಿಕ್ ಧ್ವಜ ಮಾರಾಟ ನಿಷೇಧ:ಜಿಲ್ಲಾಧಿಕಾರಿ

ಮಂಗಳೂರು,ಜುಲೈ. 28: 2012 ನೇ ಆಗಸ್ಟ್ 15 ರಂದು ಸ್ವಾತಂತ್ರ್ಯ ಸಂಭ್ರಮ ದಿನಾಚರಣೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜವನ್ನು ತಯಾರಿಸಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆಯೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಾದ ಡಾ.ಎನ್.ಎಸ್. ಚನ್ನಪ್ಪ ಗೌಡ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವೀ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ವೇಳೆ ರಾಷ್ಟ್ರಧ್ವಜಕ್ಕೆ ನಾವು ನೀಡಬೇಕಾಗಿರುವ ಗೌರವದ ಬಗ್ಗೆ ಅರಿತುಕೊಳ್ಳಬೇಕು. ಪ್ಲಾಸ್ಟಿಕ್ ಧ್ವಜಗಳನ್ನು ಬೀದಿಗಳಲ್ಲಿ ಮಾರಾಟ ಮಾಡುವುದು ಸಲ್ಲದು. ಪ್ರತೀ ವರ್ಷದಂತೆ ಈ ವರ್ಷವೂ ಆಗಸ್ಟ್ 15 ರಂದು ಪೂರ್ವಾಹ್ನ 8.50 ಕ್ಕೆ ನೆಹರೂ ಮೈದಾನದಲ್ಲಿ ಸಮಾವೇಶಗೊಂಡು, ಅತಿಥಿಗಳ ಆಗಮನ, ಗೌರವ ಸ್ವೀಕಾರ, ಸ್ವಾತಂತ್ರ್ಯೋತ್ಸವ ಸಂದೇಶ, ವಿಶಿಷ್ಟ ಮಕ್ಕಳ ಪ್ರಶಸ್ತಿ ಪ್ರದಾನ ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಂದು ಅಪರಾಹ್ನ 3.00 ಗಂಟೆಯಿಂದ ಪುರಭವನದಲ್ಲಿ ಪೋಲೀಸ್ ಬ್ಯಾಂಡ್ ಮತ್ತು ಕವಿಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸಲು ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಎಲ್ಲಾ ಸರಕಾರಿ ನೌಕರರು ತಮ್ಮತಮ್ಮ ಕಚೇರಿಯಲ್ಲಿ ರಾಷ್ಟ್ರ ಧ್ವಜಕ್ಕೆ ವಂದನೆ ಸಲ್ಲಿಸಿ ಮೈದಾನಕ್ಕೆ ಕಡ್ಡಾಯವಾಗಿ ಆಗಮಿಸಿ ಜಿಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Friday, July 27, 2012

ಕಿರು ಜಲ ವಿದ್ಯುತ್ ಯೋಜನೆಗೆ ಚಾಲನೆ

ಮಂಗಳೂರು.ಜುಲೈ.27: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮಪಂಚಾಯತ್ ನ ನಾವೂರು ಗ್ರಾಮದ ಪುಳಿತಡಿಯ 5 ಮನೆಗಳಿಗೆ ಕಿರು ಜಲವಿದ್ಯುತ್ ಯೋಜನೆಯಡಿ ವಿದ್ಯುತ್ ಸಂಪರ್ಕವನ್ನು ನೀಡಲಾಯಿತು.
ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಇದುವರೆಗೆ ದುರ್ಗಮ ಪ್ರದೇಶಗಳಲ್ಲಿ ನೆಲೆಸಿರುವ ನಿವಾಸಿಗಳಿಗಾಗಿ ಜನಸಂಪರ್ಕ ಸಭೆಯಲ್ಲಿ ನೀಡಿದ ಆಶ್ವಾಸನೆಯಂತೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದಿನ ವಿದ್ಯುತ್ ಸಂಪರ್ಕ ಯೋಜನೆ ತಮಗೆ ತೃಪ್ತಿ ತಂದಿದೆ ಎಂದರು.
ನಾಲ್ಕು ಲಕ್ಷ ರೂ.ಗಳ ವೆಚ್ಚದಲ್ಲಿ ಈ ಕಿರು ಜಲವಿದ್ಯುತ್ ಯೋಜನೆಯನ್ನು ಆರಂಭಿಸಲಾಗಿದ್ದು, ಕುತ್ಲೂರಿನ 25 ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕವನ್ನು ಶೀಘ್ರದಲ್ಲೇ ನೀಡಲಾಗುವುದು. ಎಳನೀರಿನಲ್ಲಿ ವಾಸಿಸುವವರಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.
ರಾಜೀವ್ ಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ ಈ ಪ್ರದೇಶಕ್ಕೆ ವಿಶೇಷ ನೋಡಲ್ ಅಧಿಕಾರಿಯನ್ನೂ ನೇಮಿಸಲಾಗಿದೆ. ಸ್ಥಳೀಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ನೀಡುವಲ್ಲೂ ಆದ್ಯತೆ ನೀಡಲಾಗಿದೆ. ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಲು ಆದ್ಯತೆ ನೀಡಲಾಗುವುದು. ಜನರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್.ವಿಜಯಪ್ರಕಾಶ್ ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಸಮಿತಿ ರಚನೆ

ಮಂಗಳೂರು, ಜುಲೈ. 27 :ನಕ್ಸಲ್ ಬಾಧಿತ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಹಮ್ಮಿಕೊಳ್ಳುವ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು 18 ಸದಸ್ಯರಿರುವ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯಲ್ಲಿ ಜಿಲ್ಲಾಧಿಕಾರಿಯವರನ್ನು ಅಧ್ಯಕ್ಷರನ್ನಾಗಿಯೂ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿಯೂ ಆಯ್ಕೆ ಮಾಡಲಾಗಿದೆ.
ಸದಸ್ಯರನ್ನಾಗಿ ಜಿಲ್ಲಾ ಪೋಲೀಸ್ ಅಧೀಕ್ಷಕರು, ರಾಜ್ಯ ಗುಪ್ತ ವಾರ್ತೆಯ ಅಧಿಕಾರಿಗಳು, ಜಿಲ್ಲಾ ಅರಣ್ಯಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಭಿಯಂತರರು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ನಿಯಂತ್ರಣಾಧಿಕಾರಿ, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಮೆಸ್ಕಾಂ ಅಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಪಶು ಸಂಗೋಪನೆ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು, ಸಹಾಯಕ ಕಾರ್ಮಿಕ ಆಯುಕ್ತರು,ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಆಯ್ಕೆಯಾಗಿರುತ್ತಾರೆಂದು ಸರ್ಕಾರದ ಆದೇಶದಲ್ಲಿ ತಿಳಿಸಿರುತ್ತಾರೆ.
ಈ ಸಮಿತಿಯು ಈಗಾಗಲೇ ಜನಸಂಪರ್ಕ ಸಭೆಯನ್ನು ನಡೆಸಲು ಸೂಚಿಸಿದ್ದು, ನಕ್ಸಲ್ ಬಾಧಿತ ಪ್ರದೇಶ ಹಾಗೂ ಶೋಷಣೆಗೊಳಗೊಂಡ ಸಮುದಾಯಗಳ ಬೇಡಿಕೆ ಈಡೇರಿಸಲು ಜಿಲ್ಲಾಧಿಕಾರಿಗಳು ಕೊಡುವ ಅನುದಾನವನ್ನು ಉಪಯೋಗಿಸಿಕೊಳ್ಳತಕ್ಕದೆಂದು ಆದೇಶದಲ್ಲಿ ತಿಳಿಸಲಾಗಿದೆ.

Thursday, July 26, 2012

ಅಭಿವೃದ್ಧಿ ಕ್ರಮಗಳಿಗೆ ಬದ್ಧ: ಜಿಲ್ಲಾಧಿಕಾರಿ

ಮಂಗಳೂರು.ಜುಲೈ.26:: ಬೆಳ್ತಂಗಡಿ ತಾಲೂಕಿನ ಬಹುದೂರದ ಮತ್ತು ಒಳನಾಡು ಪ್ರದೇಶಗಳ ಅಭಿವೃದ್ದಿ ಸಂಬಂಧ ಜನಸಂಪರ್ಕ ಸಭೆಯಲ್ಲಿ ಘೋಷಿಸಿದ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಲಾಗುವುದು ಎಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು, ಈಗಾಗಲೇ ಹೇಳಿದಂತೆ ಸ್ಥಳೀಯ 13 ಜನರಿಗೆ ಶಿಕ್ಷಕರ ಕೆಲಸವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಆಯೋಜಿಸಲಾಗಿದ್ದ ಇಲಾಖಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಇತ್ತೀಚೆಗೆ ಜನಸಂಪರ್ಕ ಸಭೆಯಲ್ಲಿ ನೀಡಲಾಗಿದ್ದ ಆಶ್ವಾಸನೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.ಸರ್ಕಾರ ಐದು ಕೋಟಿ ರೂ.ಗಳನ್ನು ದುರ್ಗಮ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ನೀಡಿದ್ದು ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಅರಣ್ಯ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ, ಸಮನ್ವಯ ಸಾಧಿಸಿ ಹಂತ ಹಂತವಾಗಿ ಶೀಘ್ರವೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿರದ ಅಧಿಕಾರಿಗಳಿಗೆ ನೋಟೀಸ್ ನೀಡಲು ಸೂಚಿಸಿದ ಅವರು, ಈ ಪ್ರದೇಶಗಳ ಅಭಿವೃದ್ಧಿ ಸಂಬಂಧ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದರು.ಕುತ್ಲೂರು ಎಳನೀರು ರಸ್ತೆಗೆ ಅಂದಾಜುಪಟ್ಟಿ ಸಲ್ಲಿಸುವಂತೆ ಸೂಚಿಸಿದ್ದನ್ನು ಕಾಲಮಿತಿಯೊಳಗೆ ಕೈಗೊಳ್ಳದ ಅಧಿಕಾರಿಗೆ ಈಗಾಗಲೇ ಕಾರಣ ಕೇಳಿ ನೋಟೀಸು ನೀಡಲಾಗಿದ್ದು, ಇಲ್ಲಿನ ಕೆಲಸದ ಬಗ್ಗೆ ಹೆಚ್ಚಿನ ಅಸ್ಥೆ ವಹಿಸುವಲ್ಲಿ ನಿರಾಸಕ್ತಿ ವಹಿಸದಿರಿ ಎಂದರು.
ಅಧಿಕಾರಿಗಳು ಆದ್ಯತೆಯ ಮೇರೆಗೆ, ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದ ಅವರು, ಈಗಾಗಲೇ ಇಲ್ಲಿನ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಎಂಟು ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು ಬೆಳ್ತಂಗಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಇಂದಿನಿಂದ ಒಂದು ವಾರದೊಳಗೆ ಕ್ರಿಯಾಯೋಜನೆ ಸಲ್ಲಿಸಬೇಕೆಂದು ಸೂಚನೆ ನೀಡಿದರು.
ಈ ಕಾಮಗಾರಿಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರ ಸಮಿತಿಯಡಿ ಅನುಮೋದನೆ ನೀಡಲಾಗಿದ್ದು, ನೂಜೋಡಿ ಕುಳಂತಾಜೆ ರಸ್ತೆ, ಕುತ್ಲೂರು ಗ್ರಾಮದ ಪಿಲಿಯಾಡಿ-ನೆಲ್ಲಿತಡ್ಕ ರಸ್ತೆ ದುರಸ್ತಿ, ಸುಲ್ಕೇರಿಮೊಗ್ರುವಿನ ಒಕ್ಕ-ಕುದ್ಕೋಳಿ ರಸ್ತೆ, ಸುಲ್ಕೇರಿಮೊಗ್ರು ಶಾಲೆಯಿಂದ ನಾವರ ಕೇಡೇಲು ರಸ್ತೆ ದುರಸ್ತಿ, ಶಿರ್ಲಾಲು ಗ್ರಾಮದ ಶಾಲೆಯಿಂದ ಹಂಡೇಲು ಬೈಲು ರಸ್ತೆ, ಮಂಜೋಟ್ಟಿ ಮಂಜಿಲ ರಸ್ತೆಯಲ್ಲಿ ಎರಡು ಮೋರಿ ಮತ್ತು ರಸ್ತೆ ದುರಸ್ತಿ, ನಾವೂರು ಗ್ರಾಮದ ಪಿಲಗೂಡುನಿಮದ ಎರ್ಮಲೆ ರಸ್ತೆ ದುರಸ್ತಿ, ಪಂಚಾರ್ ನಿಂದ ಮಂಜಿಲ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇದೇ ಮಾದರಿಯಲ್ಲಿ 10-11ನೇ ಸಾಲಿನ ಗಿರಿಜನ ಉಪಯೋಜನೆಯಡಿ ಚಾರ್ಮಡಿಯ ಅನ್ನಾರು ಕಾಲನಿಗೆ ಸೇತುವೆ, ನಾರಾವಿಯ ಕುತ್ಲೂರಿನ ಅಲಂಬ ವ್ಯಾಪ್ತಿಯ ರಸ್ತೆ ಅಭಿವೃದ್ದಿಗೆ, ಶಿರ್ಲಾಲು, ಇಂದಬೆಟ್ಟು, ನಾರಾವಿ, ನಾವರ, ಸುಲ್ಕೇರಿ ಮೊಗ್ರುವಿನಲ್ಲಿ ಸೋಲಾರ್ ದೀಪ ಅಳವಡಿಸಲು ಐಟಿಡಿಪಿ ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಇನ್ನು ಇಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರ ಯೋಜನೆಗಳ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಭಿಷೇಕ್ ಗೋಯಲ್ ಅವರು ಸಭೆಯಲ್ಲಿ ಮಾಹಿತಿ ಮಂಡಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಬೆಳ್ತಂಗಡಿ ತಹಸೀಲ್ದಾರ್ ಶ್ರೀಮತಿ ಕುಸುಮಾ ಅವರಿಂದ ಸ್ಥಳೀಯ ಮಾಹಿತಿಯನ್ನು ಪಡೆದರು. ಈ ಪ್ರದೇಶಗಳ 237 ಸೋಲಾರ್ ಲ್ಯಾಂಪ್ ಗಳು ರಿಪೇರಿಯಾಗಬೇಕಿದ್ದು, ಕ್ರಮದ ಬಗ್ಗೆ ಸೂಚಿಸಿದರು. ಉಕ್ಕಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ಬಗ್ಗೆ, ನುಜೋಡಿಯಲ್ಲಿ ಅಂಗನವಾಡಿ ಸ್ಥಾಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸೂಚಿಸಿದರು. ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಮತ್ತು ಪಶುವೈದ್ಯಕೀಯ ಇಲಾಖೆಯವರು ಇಲ್ಲಿನ ಸ್ಥಳೀಯರಿಗೆ ತರಬೇತಿ ನೀಡುವ ಬಗ್ಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು ಫಲಾನುಭವಿಗಳನ್ನು ಗುರುತಿಸಲು ಅವರಿರುವ ಸ್ಥಳಕ್ಕೇ ತೆರಳಿ ಗುರುತಿಸಿ ಅವರಿಗೆ ತರಬೇತಿ ನೀಡಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಪುತ್ತೂರು ಸಹಾಯಕ ಆಯುಕ್ತರಾದ ಪ್ರಸನ್ನ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

' ಮಾನವಸಂಪನ್ಮೂಲ ಸದ್ಬಳಕೆ ಅಗತ್ಯ'

ಮಂಗಳೂರು, ಜುಲೈ. 26 : ಜನಸಂಖ್ಯಾ ಸ್ಫೋಟಕ್ಕೆ ದಕ್ಷಿಣ ಕನ್ನಡ ಹೊರತಾಗಿದ್ದು, ನಮ್ಮ ಜಿಲ್ಲೆಯಲ್ಲಿ ಮಾನವಸಂಪನ್ಮೂಲ ಸದ್ಬಳಕೆಯಾಗಿದೆ. ನಮ್ಮದು ಯುವರಾಷ್ಟ್ರ ಎಂದು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಇಂದು ನಗರದ ವಿಶ್ವ ವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ವಿಶ್ವವಿದ್ಯಾನಿಲಯ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು
ನಮ್ಮ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿರುವುದರಿಂದ ಜನನ ಪ್ರಮಾಣದಲ್ಲಿ ಸಾಕಷ್ಟು ಹಿಡಿತವನ್ನು ಸಾಧಿಸಿದೆ. ಒಂದು ಮನೆಯಲಿ ಎರಡೇ ಮಕ್ಕಳಿರುವರು. ಯುವಶಕ್ತಿಯ ಸದ್ಬಳಕೆಯಾಗಬೇಕೆಂದರು.
ಮಾನವ ಸಂಪನ್ಮೂಲದ ಸದ್ಬಳಕೆಯಿಂದ ಹಲವು ಸಮಸ್ಯೆಗಳು ಪರಿಹಾರವಾಗಲಿದ್ದು, ಸುಸ್ಥಿರ ಅಭಿವೃದ್ಧಿ ಸಾಧ್ಯ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ನೀರಿನ ಸಮಸ್ಯೆ, ವಸತಿ, ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮುಂದಾಗೋಣ. ರಾಷ್ಟ್ರ,ರಾಜ್ಯ,ಜಿಲ್ಲೆ ಎಲ್ಲಾ ಕಡೆಗಳಲ್ಲೂ 1951 ನೇ ಇಸವಿಗೆ ಹೋಲಿಸಿದರೆ ಜನಸಂಖ್ಯೆ 4 ರಿಂದ ನಾಲ್ಕುವರೆ ಪಟ್ಟು ಹೆಚ್ಚಳವಾಗಿರುವುದು ಕಂಡು ಬಂದಿದೆಯೆಂದು ಜಿಲ್ಲಾಧಿಕಾರಿಗಳಾದ ಡಾ.ಎನ್.ಎಸ್ .ಚನ್ನಪ್ಪ ಗೌಡ ಹೇಳಿದರು
ಕರ್ನಾಟಕದ ಜನಸಂಖ್ಯೆಯು 1951 ರಲ್ಲಿ ಕೇವಲ 1 ಕೋಟಿ 94 ಲಕ್ಷ ಇತ್ತು. 2011 ರ ಜನಗಣತಿಯ ಪ್ರಕಾರ 6 ಕೋಟಿ 11 ಲಕ್ಷ ಆಗಿರುತ್ತದೆ. ಮಂಗಳೂರು ನಗರದಲ್ಲಿ 1 ಲಕ್ಷ ಇದ್ದ ಜನಸಂಖ್ಯೆ ಇದೀಗ 5 ಲಕ್ಷ ಮೀರಿದೆ. ನಮ್ಮ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವುದು ಆವಶ್ಯವೆಂದು ಜಿಲ್ಲಾಧಿಕಾರಿ ಅವರು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ ಧನಲಕ್ಷ್ಮಿಜನಾರ್ಧನ್ ಮಾತನಾಡಿ ಜನಸಂಖ್ಯೆ ಹೆಚ್ಚಳವು ದೇಶದ ಸಮಸ್ಯೆ ಮಾತ್ರವಲ್ಲದೆ ಸಮಾಜದ ಸಮಸ್ಯೆಯು,ಒಂದು ಸಂಸಾರದ ಸಮಸ್ಯೆಯು ಹೌದು.ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ,ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣವೆಂದು ತಿಳಿಸಿದರು. ಇಂದು ಕಾರ್ಗಿಲ್ ಹುತಾತ್ಮರ ದಿನಾಚರಣೆಯೂ ಆಗಿದ್ದು,ಹಲವಾರು ಸೈನಿಕರು ಈ ಕಾರ್ಗಿಲ್ ಯುದ್ಧದಲ್ಲಿ ಮಡಿದಿದ್ದಾರೆ. ಜನರನ್ನು ಕಾಪಾಡುವುದು ಸೈನಿಕರ ಕರ್ತವ್ಯವಾಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಲಕ್ಷ್ಮಿನಾರಾಯಣ ಭಟ್ ಇವರು ಮಾತನಾಡಿದರು.ವಿಶ್ವ ಜನಸಂಖ್ಯಾ ದಿನಾಚರಣೆಯಂಗವಾಗಿ ಏರ್ಪಡಿಸಿರುವ ಭಾಷಣ ಸ್ಫರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಆರ್.ಸಿ.ಎಚ್ ಡಾ.ರುಕ್ಷಿಣಿ ಪ್ರಸ್ತಾವಿಕ ಭಾಷಣವನ್ನು ಮಾಡಿ, ವಿಶ್ವ ಜನಸಂಖ್ಯೆಯು 500 ಕೋಟಿಯನ್ನು 11-7-1987 ರಂದು ತಲುಪಿದ ಬಳಿಕ ಆ ದಿನವನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲು ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯು ತೀರ್ಮಾನಿಸಿತು.ಅಂದಿನಿಂದ ಪ್ರತೀ ವರ್ಷವೂ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆಯೆಂದು ತಿಳಿಸಿದರು. ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕರಾದ ಡಾ.ಜಯವಂತ ನಾಯಕ್ ಈ ಸಂದರ್ಭದಲ್ಲಿ ಜನಸಂಖ್ಯಾ ಸ್ಥಿರತೆ ಮತ್ತು ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಿದರು.

ಕಾರ್ಮಿಕ ಇಲಾಖೆಯಿಂದ ಅಪಘಾತ ಪರಿಹಾರ ಯೋಜನೆ

ಮಂಗಳೂರು,ಜುಲೈ.26: ರಾಜ್ಯ ಸರ್ಕಾರ 'ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ' ಯನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಜಾರಿಗೊಳಿಸಿದೆ.
ಜಿಲ್ಲೆಯಲ್ಲಿ ವಾಣಿಜ್ಯ ಚಾಲನಾ ಪರವಾನಗಿ ಪಡೆದ ಖಾಸಗಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಖಾಸಗಿ ಬಸ್ ವಾಹನ ಚಾಲಕರಿಗೆ ಯೋಜನೆ ಅನ್ವಯವಾಗಲಿದ್ದು, ಫಲಾನುಭವಿಯು ಪ್ರೀಮಿಯಂ ಮೊತ್ತ ಪಾವತಿಸಬೇಕಾಗಿರುವುದಿಲ್ಲ. ಯೋಜನೆಯು ಸಂಪೂರ್ಣ ಉಚಿತವಾಗಿದ್ದು, ಸರ್ಕಾರವೇ ಪೂರ್ಣವಾಗಿ ಪ್ರೀಮಿಯಂ ಮೊತ್ತವನ್ನು ಪಾವತಿಸಲಿದೆ.
ಅಪಘಾತದಿಂದ ಚಾಲಕನು ಪ್ರಾಣಾಪಾಯಕ್ಕೆ ತುತ್ತಾದಾಗ, ಚಾಲಕರು ಶಾಶ್ವತ ದುರ್ಬಲತೆ ಹೊಂದಿದಾಗ, ಅಪಘಾತದಿಂದ ತಾತ್ಕಾಲಿಕ ದುರ್ಬಲತೆ ಹೊಂದಿದಾಗ, ಅಂಗಗಳು ಹಾನಿಯಾದಗ, ಚಾಲಕರು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಅಪಘಾತಕ್ಕೀಡಾಗಿ ಮರಣ ಹೊಂದಿದಲ್ಲಿ ಅಥವಾ ಶಾಶ್ವತ, ತಾತ್ಕಾಲಿಕ ದುರ್ಬಲತೆ ಹೊಂದಿದಾಗ ಯೋಜನೆಯ ಸೌಲಭ್ಯ ಲಭ್ಯವಾಗುತ್ತದೆ.
ಅಪಘಾತ ವಿಮೆ ಪಡೆಯಲು- ಚಾಲಕರು ಚಾಲ್ತಿಯಲ್ಲಿರುವ ವಾಣಿಜ್ಯ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು. ಸದರಿ ಯೋಜನೆಯಡಿ ನೋಂದಣಿಯಾದ ಚಾಲಕರು ಒಂದು ಬಾರಿ 25/- ನೋಂದಣಿ ಶುಲ್ಕವನ್ನು ಪಾವತಿಸಬೇಕು. 20ರಿಂದ 70 ವರ್ಷಗಳೊಳಗಿನವರು. ವಿಮಾ ಮೊತ್ತ ಗರಿಷ್ಠ 2 ಲಕ್ಷ ರೂ., ಈ ಯೋಜನೆಯಡಿ ನೋಂದಾಯಿತರಾದ ಚಾಲಕರು ಮರಣ ಹೊಂದಿದಲ್ಲಿ ಮೃತರ ನಾಮ ನಿರ್ದೇಶಿತರು ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ಅರ್ಜಿಯೊಂದಿಗೆ ಫಲಾನುಭವಿಗಳು ಚಾಲನಾ ಪರವಾನಿಗೆ ಪ್ರತಿ, ವಾಸಸ್ಥಳದ ದೃಢೀಕರಣದ ಪ್ರತಿ ಮತ್ತು ಒಂದು ಕಲರ್ ಭಾವಚಿತ್ರ ನೀಡಬೇಕು. ಅರ್ಜಿಗಳು ಜಿಲ್ಲೆಯ ಎಲ್ಲ ನೆಮ್ಮದಿ ಕೇಂದ್ರಗಳಲ್ಲಿ ದೊರೆಯುತ್ತದೆ. ಅರ್ಜಿ ಭರ್ತಿ ಮಾಡಿ ನೆಮ್ಮದಿ ಕೇಂದ್ರಗಳಲ್ಲಿ ನೀಡಬಹುದು. ಚಾಲಕರು ಚಾಲಕ ಸಂಘದ ಪ್ರತಿನಿಧಿಗಳು ಅಥವಾ ಜಿಲ್ಲಾ ವ್ಯವಸ್ಥಾಪಕರು ನೆಮ್ಮದಿ ಕೇಂದ್ರ ಮಂಗಳೂರು ಮೊಬೈಲ್ 8861308842. ಅಥವಾ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಕಾರ್ಮಿಕ ಅಧಿಕಾರಿ ಡಿ ಜಿ ನಾಗೇಶ್ ಅವರು ತಿಳಿಸಿದ್ದಾರೆ.

Tuesday, July 24, 2012

'ನೀರು ನಿರ್ವಹಣೆಗೆ ಸಮಗ್ರ ಕ್ರಿಯಾಯೋಜನೆ ರೂಪಿಸಿ' ಮಾಸಿಕ ಕೆಡಿಪಿ

ಮಂಗಳೂರು.ಜುಲೈ.24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕಡಿಮೆ ಮಳೆಯಾಗಿದ್ದು, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಮತ್ತು ನೀರು ನಿರ್ವಹಣೆಗೆ ಆದ್ಯತೆ ನೀಡಬೇಕೆಂದು ಇಂಜಿನಿಯರಿಂಗ್ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ ಕಿಂಡಿ ಅಣೆಕಟ್ಟುಗಳು, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಭೆಗೆ ನೀಡಲು ಸೂಚಿಸಿದರು.
ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಭಿಯಂತರ ಸತ್ಯ ನಾರಾಯಣ ಅವರು, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಸುಮಾರು 42 ಪ್ರಸ್ತಾವನೆಗಳನ್ನು ಅಂದಾಜು ಮೊತ್ತ ರೂ. 575.00 ಕೋಟಿಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮೊದಲನೇ ಹಂತದಲ್ಲಿ ಯೋಜನೆಗಳನ್ನು 254 ಕೋಟಿ ರೂ.ಗೆ ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು. ಬಂಟ್ವಾಳಕ್ಕೆ 6 ಬಹುಗ್ರಾಮ ಕುಡಿಯುವ ಯೋಜನೆ ಮಂಜೂರಾಗಿದೆ ಎಂದ ಅವರು, ಈ ಯೋಜನೆಯ ಪ್ರಗತಿ ಪರಿಶೀಲನೆ ಸಂಬಂಧ 45 ದಿನಗಳಿಗೊಮ್ಮೆ ಸಭೆ ಕರೆಯಲಾಗಿದ್ದು, ಹಂತಹಂತವಾಗಿ ಯೋಜನೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ನೈಸರ್ಗಿಕವಾದ ಝರಿ ನೀರು ಆಧಾರಿತ ನೀರು ಸರಬರಾಜು ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು, ಅಧಿಕಾರಿಗಳು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಿಂದ ಸ್ಥಳೀಯ ಜನರ ಮನವೊಲಿಕೆ ಸುಲಭ ಸಾಧ್ಯ ಎಂದರಲ್ಲದೆ, ಆ ಪ್ರದೇಶದವರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಳ್ಳಬಹುದು ಎಂದರು.
ಝರಿ ನೀರು ಆಧಾರಿತ ನೀರು ಸರಬರಾಜು ಯೋಜನೆಗಳಡಿ ಶೀಘ್ರವೇ ನಾಲ್ಕು ಯೋಜನೆಗಳನ್ನು ಸಂಪೂರ್ಣಗೊಳಿಸಲಾಗುವುದು ಎಂದು ಸತ್ಯ ನಾರಾಯಣ ಅವರು ಹೇಳಿದರು.
ಈಗಾಗಲೇ ಮಳವೂರಿನಲ್ಲಾದ ಅವಘಡಗಳು ಮರುಕಳಿಸದಂತೆ ಹಾಗೂ ಯೋಜನೆ ಸಮಗ್ರ ಸಾಧಕ, ಬಾಧಕಗಳನ್ನು ಅರಿತು, ಎನ್ ಐ ಟಿಕೆ ಯಂತಹ ಸಂಸ್ಥೆಗಳ ನೆರವಿನೊಂದಿಗೆ ಯೋಜನೆ ರೂಪಿಸಿ ಎಂದು ಸಿ ಇಒ ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಜಿಲ್ಲೆಯಲ್ಲಿ 44 ಸ್ಥಳಗಳಲ್ಲಿ ಫ್ಲೋರೈಡ್ ಅಂಶ ನೀರಿನಲ್ಲಿದೆ ಎಂಬ ಹೇಳಿಕೆ ಮತ್ತು ಈ ಬಗ್ಗೆ ತಾವು ಖುದ್ದಾಗಿ ಸಂಪರ್ಕಿಸಿದಾಗ ನೀಡಿದ ವಿರೋಧಾಭಾಸದ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು, ಮಾಹಿತಿಯು ಸ್ಪಷ್ಟ ಹಾಗೂ ಸತ್ಯವಾಗಿರಲಿ ಎಂದರು.
ಮಳೆ ನೀರು ಸಂರಕ್ಷಣೆ ಮತ್ತು ನೀರು ನಿರ್ವಹಣೆ ಹಾಗೂ ಎಲ್ಲ ಕಚೇರಿಗಳಲ್ಲಿ ಮಳೆ ಕೊಯ್ಲಿಗೆ ಆದ್ಯತೆ ನೀಡಬೇಕೆಂದ ಅವರು, ದೂರದೃಷ್ಟಿಯ ಯೋಜನೆ ರೂಪಿಸಿ ನೀರಿನ ಕೊರತೆ ನಿವಾರಿಸಬಹುದೆಂದರು. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012 ರಡಿ ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಅಂತರ್ಜಲ ನಿಯಂತ್ರಣ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾದಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸಹ ಅಧ್ಯಕ್ಷರಾಗಿರುತ್ತಾರೆ.
ಕಿಂಡಿ ಅಣೆಕಟ್ಟುಗಳ ನಿರ್ವಹಣೆಯ ಅಗತ್ಯವನ್ನು ಪ್ರತಿಪಾದಿಸಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್ ಹಾಗೂ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಅವರು, ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಸಮರ್ಪಕ ರೀತಿಯಲ್ಲಾಗುತ್ತಿಲ್ಲ ಎಂದರು. ಉತ್ತರಿಸಿದ ಅಧಿಕಾರಿಗಳು ಪ್ರಸಕ್ತ ಸಾಲಿನಲ್ಲಿ 219 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದ್ದು, 82 ಸಂಪೂರ್ಣಗೊಂಡಿದೆ. 72 ಕಾಮಗಾರಿ ಪ್ರಗತಿಯಲ್ಲಿದೆ. 28 ಆರಂಭವಾಗಿದೆ ಎಂದರು.
ಎಸ್ ಎಸ್ ಎಲ್ ಸಿಯಲ್ಲಿ ಮರು ಪರೀಕ್ಷೆಗೆ ಹಾಜರಾಗಿದ್ದ 4,069 ವಿದ್ಯಾರ್ಥಿಗಳಲ್ಲಿ 1459 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಉತ್ತೀರ್ಣಗೊಂಡ ಬಳಿಕ ಅವರಿಗೆ ಕಾಲೇಜುಗಳಲ್ಲಿ ಸೀಟು ಸಿಗುವಂತೆ ಕ್ರಮ ವಹಿಸುವಂತೆ ಉಪನಿರ್ದೇಶಕರು ಪದವಿಪೂರ್ವಶಿಕ್ಷಣ ಇವರ ಜೊತೆ ಸಂಪರ್ಕ ಸಾಧಿಸಲಾಗಿದೆ ಎಂದು ಶಿಕ್ಷಣಾಧಿಕಾರಿಗಳು ಉತ್ತರಿಸಿದರು.
ದೈಹಿಕ ವಿಕಲ ಚೇತನ ಮಕ್ಕಳನ್ನು ಸಂಘಸಂಸ್ಥೆಗಳು ದತ್ತು ಪಡೆದು ಅವರಿಗೆ ವಿಶೇಷ ರೀತಿಯ ಸವಲತ್ತನ್ನು ನೀಡಿದ ಬಗ್ಗೆ ಸಹಕಾರ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸಿದ ಅವರು, ಬಸವ ವಸತಿ ಯೋಜನೆ ಫಲಾನುಭವಿಗಳ ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ತೆರೆಯುವ ಕುರಿತು ಮತ್ತು ವಸತಿ ಯೋಜನೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಬಗೆಹರಿದಿದೆ ಎಂದು ಸಿಇಒ ಅವರು ಮಾಹಿತಿ ನೀಡಿದರು. ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಈ ಸಂಬಂಧದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.
ಶಾಲೆಗಳಲ್ಲಿ ಹಸುರೀಕರಣ ಮತ್ತು ಮಳೆಕೊಯ್ಲು ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಯಿತು.
ಎಲ್ಲ 203 ಗ್ರಾಮಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇಗೆ ಸಂಬಂಧಿಸಿದಂತೆ ಜಾಗಗಳನ್ನು ಗುರುತಿಸಲಾಗಿದ್ದು, ಯೋಜನೆ ಯಶಸ್ಸಿಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ಸಿಇಒ ಹೇಳಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ನಿಗಮ ಮತ್ತು ಮಂಡಳಿಗಳು ಬಹುದೂರ ಮತ್ತು ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಸ್ವಯಂ ಉದ್ಯೋಗ ಆರಂಭಿಸಲು ಅಗತ್ಯ ವೃತ್ತಿಕೌಶಲ್ಯ ತರಬೇತಿಗೆ ಯೋಜನೆ ರೂಪಿಸಿ ಎಂದು ಸಿಇಒ ಅವರು ಹೇಳಿದರು.
ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕ ಕಾರ್ಯಾರಂಭಿಸಿದ್ದು, ಬಾಲಕಾರ್ಮಿಕರು ಅನಾಥ ಮಕ್ಕಳು ಪತ್ತೆಯಾದರೆ ಅವರನ್ನು ಬೆಳ್ತಂಗಡಿಯಲ್ಲಿ ಸರ್ವಶಿಕ್ಷಣ ಅಭಿಯಾನದಡಿ ಆರಂಭಿಸಲಾದ ವಸತಿ ಶಾಲೆ ಮತ್ತು ಮಂಗಳೂರಿನ ಕಾಪಿಕಾಡಿನಲ್ಲಿರುವ ತಂಗುದಾಣದಲ್ಲಿ ಅವಕಾಶ ಕಲ್ಪಿಸಬಹುದಾಗಿದೆ.ಇದಲ್ಲದೆ ಮ್ಕಕಳ ಹಕ್ಕು ಸಂರಕ್ಷಣೆಗೆ 41 ಸಂಘಸಂಸ್ಥೆಗಳು ಜಿಲ್ಲೆಯಲ್ಲಿದೆ ಎಂದು ಸಿಇಒ ಅವರು ಹೇಳಿದರು. ಜಿಲ್ಲೆಯ ಅಪೌಷ್ಠಿಕ ಮಕ್ಕಳ ಬಗ್ಗೆ, ಈ ಸಂಬಂಧ ವಿಶೇಷ ಗ್ರಾಮಸಭೆ ಕರೆಯುವ ಬಗ್ಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಮಾರ್ಗದರ್ಶನ ನೀಡಲು ಸಿಇಒ ಸೂಚಿಸಿದರು. ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಆದ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಸಲಾಯಿತು.
ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿಗಳು, ಬಿಪಿಎಲ್ ಕಾರ್ಡ್ ಹೊಂದಿರುವ ಒಂದು ಕುಟುಂಬ ಗಂಭೀರ ಕಾಯಿಲೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ 7 ಆಸ್ಪತ್ರೆಗಳಲ್ಲಿ ಉಚಿತ ಶುಶ್ರೂಷೆ ಪಡೆಯಬಹುದು ಎಂಬ ಮಾಹಿತಿ ನೀಡಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮೀ ಜನಾರ್ಧನ, ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್, ಮುಖ್ಯ ಲೆಕ್ಕಾಧಿಕಾರಿ ಶೇಖ್ ಲತೀಫ್, ಯೋಜನಾನಿರ್ದೇಶಕರಾದ ಶ್ರೀಮತಿ ಎನ್ ಸಿ ಸೀತಮ್ಮ ಅವರು ಉಪಸ್ಥಿತರಿದ್ದರು.

ಕೊಂಕಣ್ ರೈಲ್ವೆಯ ರೋ ರೋ ಸಾಧನೆ

ಮಂಗಳೂರು,ಜುಲೈ. 24 :ಕೊಂಕಣ್ ರೈಲ್ವೆಯ ರೋ ರೋ ಸಾರಿಗೆ ಸೇವೆ ಜನವರಿ 1999 ರಲ್ಲಿ ಪ್ರಾರಂಭವಾಗಿ 2012 ನೇ ಸಾಲಿನ ವರೆಗೆ ಒಟ್ಟು 254731 ಸರಕು ಸಾಗಾಟದ ಲಾರಿಗಳನ್ನು ರೋ ರೋ ಸೇವೆ ಮುಖಾಂತರ ದೇಶದ ವಿವಿಧ ನಗರಗಳಿಗೆ ಲಾರಿ ಸಾಗಿಸಲಾಗಿದ್ದು ಇದುವರೆಗೆ 205.60 ಕೋಟಿ ರೂ.ಲಾಭವಾಗಿದೆ ಎಂದು ಕೊಂಕಣ್ ರೈಲ್ವೆಯ ಡಿ.ಸಿ.ಎಂ. ಶ್ರೀ ನಂದು ಸೆಲಂಗಿ ತಿಳಿಸಿದರು.
ಇವರು ಇಂದು ಕೊಂಕಣ್ ರೈಲ್ವೆ ಸಿಬ್ಬಂದಿ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ಸರಕು ಸಾಗಾಟ ಲಾರಿಗಳೊಂದಿಗೆ ಅದರ ಡ್ರೈವರ್,ಕ್ಲೀನರ್ ಗಳು ತೆರಳಬಹುದಾಗಿದೆ. ಇದರಿಂದ ಲಾರಿಗಳ ಇಂಧನ,ಟಯರ್ ಉಳಿತಾಯವಾಗುವುದಲ್ಲದೆ ಸಮಯ, ಅಪಘಾತ ,ಬಿಡಿಭಾಗಗಳ ಕೊರತೆ ನೀಗುತ್ತದೆ. ಇದೀಗ 3 ಹಂತಗಳಲ್ಲಿ ಕೊಲಾಡ್, ಪೆನರ್ಾ 417 ಕಿಮೀ. 8-10 ಗಂಟೆಗಳಲ್ಲಿ ,ಕೊಲಾಡ್ ಸುರತ್ಕಲ್ 721 ಕಿಮೀ.21,14 ಗಂಟೆಗಳಲ್ಲಿ ಹಾಗೂ ಅಂಕೋಲ ಸುರತ್ಕಲ್ 205 ಕಿಮೀ 3-4 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಒಂದು ರೋ ರೋ ರೈಲು 40 ಟ್ರಕ್ಕುಗಳನ್ನು ಕಡಿಮೆ ಖರ್ಚಿನಲ್ಲಿ ಸಾಗಿಸ ಬಹುದಾಗಿದೆ ಹಾಗೂ ಇದಕ್ಕೆ 1 ಕಿಮೀ.ಕ್ರಮಿಸಲು 10 ಲೀ ಇಂಧನ ವ್ಯಯವಾಗುತ್ತದೆ. ಇದರಿಂದ ಪರಿಸರ ಮಾಲಿನ್ಯವನ್ನು ತಡೆ ಗಟ್ಟಿದಂತಾ ಗುತ್ತದೆ. ವಾಹನ ಅಪ ಘಾತ ಭಯವಿಲ್ಲ. ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ರೋ ರೋ ಸಾರಿಗೆ ಸೇವೆಗೆ ಪ್ರತಿಕೂಲ ವಾತಾವರಣ ವಿದ್ದು, 2 ಗಂಟೆ ಗಳೊಳಗೆ ಲಾರಿ ಗಳನ್ನು ರೋ ರೋ ರೈಲಿಗೆ ಸಾಗಿಸ ಬಹುದಾಗಿದೆ. ಇಂತಹ ವಾತಾವರಣ ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಿಗುವುದು ಅಸಾಧ್ಯ.ಇನ್ನು ಮುಂದಿನ ಹಂತದಲ್ಲಿ ಹೊಸ ನ್ಯಾನೋ ಕಾರುಗಳನ್ನು ರೋ ರೋ ಸೇವೆಯಲ್ಲಿ ಅಳವಡಿಸುವ ಸಾಧ್ಯತೆ ಇದೆಯೆಂದು ನಂದು ಸೆಲಂಗಿ ತಿಳಿಸಿದರು. ಕೊಂಕಣ್ ರೈಲ್ವೆ ಸಾರ್ವಜನಿಕ ಸಂಪರ್ಕಧಿಕಾರಿ ಬೆಳ್ಗಾನ್ ಪಾಟ್ಕರ್ ಹಾಗೂ ರೈಲ್ವೆ ಕಮರಿರ್ಷಿಯಲ್ ಮ್ಯಾನೇಜರ್ ಸುನಿಲ್ ನಾರ್ಕರ್ ,ಸಹಾಯಕ ಟ್ರಾಫಿಕ್ ಮ್ಯಾನೇಜರ್ ಎಸ್. ವಿನಯಕುಮಾರ್ ಉಪಸ್ಥಿತರಿದ್ದರು.

Saturday, July 21, 2012

ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ:ಸಚಿವ ಸಿ. ಟಿ. ರವಿ

ಮಂಗಳೂರು, ಜುಲೈ. 21: ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆಗಳು ಜನಪರ ಕಾರ್ಯಕ್ರಮಗಳನ್ನು ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಬೇಕೆಂದು ರಾಜ್ಯ ಉನ್ನತ ಶಿಕ್ಷಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ ಮಾದರಿ ಕಾರ್ಯಕ್ರಮಗಳು ಮತ್ತು ಸಮಸ್ಯೆಗಳನ್ನು ಆಲಿಸಿದರು. ಜಿಲ್ಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳ ಕುರಿತ ಸಮಗ್ರ ಚಿತ್ರಣ ನೀಡಿದ ಜಿಲ್ಲಾಧಿಕಾರಿ ಡಾ. ಎನ್ ಎಸ್ ಚನ್ನಪ್ಪಗೌಡ ಅವರು, ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಸರಕಾರಕ್ಕೆ 15 ಕೋಟಿ ರೂ. ಪ್ರಸ್ತಾವನೆ ಕಳುಹಿಸಲಾಗಿದೆ. 10 ಕೋಟಿ ರೂ. ಸರಕಾರದಿಂದ ಬಿಡುಗಡೆಯಾಗಬೇಕಿದೆ. ಟೆಂಡರ್ ಕರೆಯಲು ಕ್ರಮಕೈಗೊಳ್ಳಲಾಗಿದೆ ಎಂದರು.
ನಗರದ ಪಡೀಲ್ ಬಜಾಲ್ ರೈಲ್ವೇ ಕೆಳಸೇತುವೆಗೆ ಸರಕಾರದಿಂದ ಶೇ. 50 ಅನುದಾನದ ಮಂಜೂರಾತಿಗೆ ಬೇಡಿಕೆ ಸಲ್ಲಿಸಲಾಗಿದೆ. ಬಂಟ್ವಾಳ, ಮೂಡಬಿದ್ರೆ ಮತ್ತು ಕಡಬಕ್ಕೆ ಮಿನಿ ವಿಧಾನಸೌಧ ಮಂಜೂರಾತಿ ಬೇಡಿಕೆ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ 466 ಖಾಲಿ ಹುದ್ದೆಗಳನ್ನು ತುಂಬುವ ಅನಿವಾರ್ಯತೆ, ಇನ್ನಿತರ ಇಲಾಖೆಗಳ ಬೇಡಿಕೆಗಳು, ಪ್ರವಾಸೋದ್ಯ ಮ ಅಭಿವೃದ್ಧಿಗೆ ಅಗತ್ಯ ಕ್ರಮ, ಪುತ್ತೂರು ತಾಲೂಕಿನ ಕೊಯಿಲಾದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಗೆ ರೂ. 75 ಕೋಟಿ ಬಿಡುಗಡೆ ಮಾಡಬೇಕಿದೆ ಎಂಬುದನ್ನೊಳಗೊಂಡಂತೆ ಜಿಲ್ಲೆಯ ಬೇಡಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಈವರಗೆ ಕಳೆದ ಸಾಲಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಮಳೆಯಾಗಿದ್ದು, ಆಗಸ್ಟ್ ವರೆಗೆ ಕಾದುನೋಡಲು ನಿರ್ಧರಿಸಲಾಗಿದೆ. ರಸಗೊಬ್ಬರ ದಾಸ್ತಾನಿದೆ. ಕೆರೆಗಳ ಪುನರುಜ್ಜೀವನಕ್ಕೆ ಹಣ ದುರುಪಯೋಗವಾಗದಂತೆ ಸ್ಥಳೀಯ ಅಗತ್ಯಗಳನ್ನು ಪರಿಶೀಲಿಸಿ ಗುಣಮಟ್ಟ ಕಾಪಾಡಿಕೊಂಡು ಕಾಮಗಾರಿ ನಡೆಸಿ ಎಂದು ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತ್ಯನಾರಾಯಣ್ ಅವರಿಗೆ ಸಚಿವರು ಸೂಚಿಸಿದರು.
ಮಳೆಗಾಲದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮತ್ತು ಮಿನಿವಿಧಾನಸೌಧಗಳ ಪ್ರಗತಿ ಕಾಲಮಿತಿಯೊಳಗೆ ಆಗಬೇಕೆಂದು ಸೂಚಿಸಿದ ಸಚಿವರು, ಪ್ರಾಕೃತಿಕ ವಿಕೋಪದ ಕಾಮಗಾರಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸಿದ ಬಗ್ಗೆ ಹಾಗೂ ಕೆ ಆರ್ ಡಿ ಸಿಎಲ್ ಕಾಮಗಾರಿ ಬಗ್ಗೆ ಸಭೆಯಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಪ್ರತ್ಯೇಕ ಸಭೆಯನ್ನು ಬೆಂಗಳೂರಿನಲ್ಲಿ ಕರೆಯುವ ನಿರ್ಧಾರ ಪ್ರಕಟಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಒಟ್ಟು 18,192 ಫಲಾನುಭವಿಗಳನ್ನು ಅನರ್ಹರೆಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ 2012ರಿಂದ ಜೂನ್ 2012ರವರೆಗೆ ವೃದ್ದಾಪ್ಯ ವೇತನ-188, ವಿಧವಾ ವೇತನ-2664, ಅಂಗವಿಕಲ ವೇತನ-3295 ಒಟ್ಟು 7822 ಫಲಾನುಭವಿಗಳಿಗೆ ಮಂಜೂರಾತಿ ಮಾಡಲಾಗಿದೆ. ಒಟ್ಟು 67473 ಫಲಾನುಭವಿಗಳಿಗೆ ಪಿಂಚಣಿ ಪಾವತಿಸಲಾಗಿದೆ.
ಮಂಗಳೂರಿಗೆ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೇತ್ರಾವತಿ ನದಿಗೆ ತುಂಬೆ ಬಳಿ ಕಿಂಡಿ ಅಣಿಕಟ್ಟು ನಿರ್ಮಾಣಕ್ಕೆ ಅನುಮೋದಿತ ಅಂದಾಜು ರೂ. 40 ಕೋಟಿ ಆಗಿದ್ದು, ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಆರ್ಥಿಕ ಮಾದರಿಯ 1/3 ಭಾಗದಲ್ಲಿ 11 ಕೋಟಿ ಬಿಡುಗಡೆಯಾಗಿದೆ. ಒಟ್ಟು 10 ಕೋಟಿ ಖರ್ಚಾಗಿರುತ್ತದೆ. ಸಿವಿಲ್ ಕಾಮಗಾರಿ 40 ಶೇಕಡ ಮುಗಿದಿರುತ್ತದೆ. ಪರಿಷ್ಕೃತ ಅಂದಾಜುಪಟ್ಟಿ ಪ್ರಕಾರ 75.50 ಕೋಟಿ ಅಗತ್ಯವಿದೆ.
64 ಚೆಕ್ ಡ್ಯಾಂಗಳಿಗೆ ಅನುಮೋದನೆ ದೊರೆತಿದ್ದು, 32 ಕಾಮಗಾರಿ ಪ್ರಗತಿಯಲ್ಲಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿರುತ್ತದೆ. ಅಂದಾಜು 2618.50 ಲಕ್ಷಗಳಲ್ಲಿ 361.60 ಲಕ್ಷ ಮೊತ್ತ ವೆಚ್ಚ ಮಾಡಲಾಗಿದೆ.
ಪಿಎಂಜಿಎಸ್ವೈ ಯಡಿ ಜಿಲ್ಲೆಯಲ್ಲಿ 2011-12ನೇ ಸಾಲಿನಲ್ಲಿ 2 ಕಾಮಗಾರಿಗಳಿಗೆ 263.45 ಲಕ್ಷ ರೂ. ಮಂಜೂರಾಗಿದ್ದು, 5.4 ಕಿ.ಮೀ ಉದ್ದ ಕಾಮಗಾರಿ ಪೂರ್ಣಗೊಂಡಿದೆ. 12-13ನೇ ಸಾಲಿಗೆ 9 ರಸ್ತೆಗಳಿಗೆ 5242.46 ಲಕ್ಷಗಳಿಗೆ 82.57 ಕಿ.ಮೀ ಪ್ರಸ್ತಾವನೆ ಸಲ್ಲಿಸಿದ್ದು ಮಂಜೂರಾತಿ ಹಂತದಲ್ಲಿದೆ. ಜಿಲ್ಲೆಯಲ್ಲಿ 11-12ನೇ ಸಾಲಿನಲ್ಲಿ ಮುಖ್ಯಮಂತ್ರಿಯವರ ಗ್ರಾಮೀಣ ರಸ್ತೆ ನಿಧಿ ಯೋಜನೆಯಡಿ 10 ಪ್ಯಾಕೇಜುಗಳು ಇದ್ದು, 61 ಕಾಮಗಾರಿಗಳ 138.27 ಕಿ.ಮೀ. ಉದ್ದದ ರಸ್ತೆಗಳು ಮಂಜೂರಾಗಿದೆ. ಮಂಜೂರಾದ 4544.80 ಲಕ್ಷ ಮೊತ್ತದಲ್ಲಿ 2548.8 ಲಕ್ಷ ಖರ್ಚಾಗಿರುತ್ತದೆ. ಇದರಲ್ಲಿ 51.25 ಕಿ.ಮೀ ಡಾಮರೀಕರಣವಾಗಿದ್ದು ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದ್ದು ಜನವರಿ 2013ರೊಳಗೆ ಮುಕ್ತಾಯ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಮೀಣ ವಸತಿಯಡಿ ವಿವಿಧ ಯೋಜನೆಗಳನ್ನು ತಹಸೀಲ್ದಾರ್ ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಸಮನ್ವಯ ಸಾಧಿಸಿ ಗ್ರಾಮಪಂಚಾಯತ್ ಮಟ್ಟದಲ್ಲಿ ನಿವೇಶನ ಗುರುತಿಸಬೇಕೆಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೂಚಿಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 12-13ನೇ ಸಾಲಿನಲ್ಲಿ 2919.43 ಲಕ್ಷ ಅಯವ್ಯಯ ನಿಗದಿಯಾಗಿದೆ. 77753 ಕುಟುಂಬಗಳ ನೋಂದಣಿಯಾಗಿದೆ. ಒಟ್ಟು 77,523 ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ. 56.58 ಲಕ್ಷ ವೆಚ್ಚ ಮಾಡಲಾಗಿದೆ. 4494 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 72 ಕಾಮಗಾರಿಗಳು ಪೂರ್ಣಗೊಂಡಿವೆ. 4422 ಕಾಮಗಾರಿಗಳು ಪ್ರಗತಿಯಲ್ಲಿವೆ. 23478 ಮಾನವ ದಿನಗಳನ್ನು ಉತ್ಪಾದಿಸಲಾಗಿದೆ. 1337 ಕುಟುಂಬಗಳಿಗೆ ಕೆಲಸ ನೀಡಲಾಗಿದೆ. ನಗರಪಾಲಿಕೆಯ ಸಾಧನೆ ಉತ್ತಮವಾಗಿದ್ದು, %90 ಅನುದಾನ ಖರ್ಚಾಗಿದೆ. ಆದರೆ ಘನ,ದ್ರವ್ಯತ್ಯಾಜ್ಯ ಸಂಗ್ರಹ ಸವಾಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದಾಗ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಸಾಧನೆ ದಾಖಲಿಸುವಂತೆ ಉಸ್ತುವಾರಿ ಸಚಿವರು ಸೂಚಿಸಿದರು.
ಸಭೆಯಲ್ಲಿ ಉಪಸಭಾಧ್ಯಕ್ಷರಾದ ಎನ್.ಯೋಗೀಶ್ ಭಟ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಮುಜರಾಯಿ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್, ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್, ಮೇಯರ್ ಗುಲ್ಜಾರ್ ಭಾನು, ಪೊಲೀಸ್ ಕಮಿಷನರ್ ಸಿಮಂತ್ ಕುಮಾರ್ ಸಿಂಗ್, ಎಸ್ ಪಿ ಅಭಿಷೇಕ್ ಗೊಯಲ್ ಉಪಸ್ಥಿತರಿದ್ದರು. ಎಲ್ಲ ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ಸಾರಿಗೆ ಅದಾಲತ್

ಮಂಗಳೂರು, ಜುಲೈ.21: ಡಿಸೆಂಬರ್ ನಿಂದ ಲಾರಿ ಮತ್ತು ಬಸ್ಸುಗಳಿಗೆ (ಭಾರೀ ವಾಹನಗಳಿಗೆ ) ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯವಾಗಲಿದೆ. ಅಂತಹ ವಾಹನಗಳು ವೇಗ ನಿಯಂತ್ರಕ ಅಳವಡಿಸಿಕೊಳ್ಳದ ಹೊರತು ರಸ್ತೆಗಿಳಿಯುವಂತಿಲ್ಲ. ಆಗ ಅತಿವೇಗದಿಂದ ವಾಹನ ಚಲಿಸುವ ಅಥವಾ ವಾಹನ ಚಲಾಯಿಸುವ ಸಮಸ್ಯೆ ಕೊನೆಗೊಳ್ಳಲಿದೆ.ಇದರಿಂದ ಅಪಘಾತದ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಲಿದೆ. ಅಲ್ಲಿವರೆಗೆ ಇಲಾಖೆಯ ಸಿಬ್ಬಂದಿಗಳು ಆಗಾಗ ತಪಾಸಣೆ ಮಾಡುವ ಮೂಲಕ ಸಾರ್ವಜನಿಕರ ದೂರಿಗೆ ಸ್ಪಂದಿಸುವರೆಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಸಿ.ಮಲ್ಲಿಕಾರ್ಜುನ ಅವರು ತಿಳಿಸಿದರು.
ಅವರು ಶುಕ್ರವಾರ (20-7-12) ರಂದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದ ನಡೆದ ಸಾರಿಗೆ ಅದಾಲತ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕರ್ಕಶ ಹಾರ್ನ್ ಅಳವಡಿಸಿರುವ ಹಲವು ಬಸ್ ಗಳ ಮೇಲೆ ಕೇಸು ದಾಖಲಿಸಲಾಗಿದೆ. 100ಕ್ಕೂ ಅಧಿಕ ಕರ್ಕಶ ಹಾರ್ನ್ಗಳನ್ನು ಕಿತ್ತು ಹಾಕಲಾಗಿದೆ. ನಮ್ಮಲ್ಲಿ ಕಾನೂನು ಅನುಷ್ಠಾನಕ್ಕೆ ಸಿಬ್ಬಂದಿಗಳ ಕೊರತೆ ಇದೆ. ಕೆಲವು ಬ್ರೇಕ್ ಇನ್ಸ್ಪೆಕ್ಟರ್ ಗಳನ್ನು ಒದಗಿಸಲು ಕೋರಿಕೆ ಸಲ್ಲಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಈ ಸಂದರ್ಭದಲ್ಲಿ ವಿವರಿಸಿದರು.ಬಸ್ ಗಳ ಕರ್ಕಶ ಹಾರ್ನ್ ಗಳ ಕಿರಿಕಿರಿಯನ್ನು ತಪ್ಪಿಸಲು ಇದೀಗ ಇನ್ನೊಂದು ಪ್ರಯತ್ನ ನಡೆದಿದೆ. ಹಾರ್ನ್ ಉತ್ಪಾದಕರೊಬ್ಬರನ್ನು ಕರೆಸಿ ಶಬ್ದ ಮಾಲಿನ್ಯ ರಹಿತ ಉತ್ತಮ ಗುಣಮಟ್ಟದ ಒಂದೇ ಮಾದರಿಯ ಸಾಧನಗಳನ್ನು ಅಳವಡಿಸುವ ಮಾತುಕತೆ ನಡೆದಿದೆ. ಅದು ಸಾಧ್ಯವಾಗುವುದೆಂಬ ಆಶಯ ನಮ್ಮದು ಎಂದು ಆರ್ ಟಿ ಒ ನುಡಿದರು.ಬೆಳ್ತಂಗಡಿಯ ಬಹುಭಾಗ ರಾಷ್ಟ್ರೀಕೃತ ಮಾರ್ಗಗಳ ವ್ಯಾಪ್ತಿಯಲ್ಲಿದೆ. ಹಾಗಾಗಿ ಸರಕಾರಿ ಬಸ್ಸುಗಳ ಸೇವೆ ಜಾರಿಯಾಗಬೇಕಾಗಿದೆ. ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ಘಟಕದ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಸಾರಿಗೆ ಅಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ದೂರು ಯಾವುದೇ ಇರಲಿ; ನಿರ್ಧಿಷ್ಟ ಪ್ರಕರಣಗಳನ್ನು ಸಾರಿಗೆ ಅಧಿಕಾರಿಯವರ ಗಮನಕ್ಕೆ ತರಲಿ. ಆಗ ಕ್ರಮ ತೆಗೆದು ಕೊಳ್ಳುವುದು ಸುಲಭ ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಅಭಿಪ್ರಾಯ ಪಟ್ಟರು.

Friday, July 20, 2012

ನಗರದ ಜನ/ವಾಹನ ದಟ್ಟಣೆ ಪ್ರದೇಶಗಳ ರಸ್ತೆ ಅಗಲೀಕರಣಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು.ಜುಲೈ.20 : ಮಂಗಳೂರು ನಗರದ ಜನದಟ್ಟಣೆ ಮತ್ತು ವಾಹನದಟ್ಟಣೆ ಇರುವ ಪ್ರದೇಶವಾದ ಪಿಎಂ ರಾವ್ ರಸ್ತೆ ಮತ್ತು ಶರವು ಮಹಾಗಣಪತಿ ದೇವಾಲಯ ಅಡ್ಡರಸ್ತೆಯ ಅಗಲೀಕರಣಕ್ಕೆ ತುರ್ತಾಗಿ ಕ್ರಮಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮಂಗಳೂರು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಇಂದು ಬೆಳಗ್ಗೆ ಪಾಲಿಕೆ ವ್ಯಾಪ್ತಿಯಲ್ಲಿರುವ ನಗರದ ಗಣಪತಿ ಹೈಸ್ಕೂಲ್ ರಸ್ತೆ, ಯುಪಿ ಮಲ್ಯ ರಸ್ತೆ ಬಳಿಯಿಂದ ಹೊಟೇಲ್ ವಿಮಲೇಶ್ ಜಂಕ್ಷನ್, ವೆಂಕಟರಮಣ ದೇವಸ್ಥಾನದವರೆಗೆ ಹಾಗೂ ಪಿ ಎಂ ರಾವ್ ರಸ್ತೆ ಮತ್ತು ಶರವು ಮಹಾಗಣಪತಿ ದೇವಸ್ಥಾನದ ಅಡ್ಡ ರಸ್ತೆ, ಕೆ ಎಸ್ ರಾವ್ ರಸ್ತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಭೇಟಿ ನೀಡಿದ ಪ್ರದೇಶಗಳಲ್ಲಿ ರಸ್ತೆ ವಿಸ್ತರಣೆ ಅಗತ್ಯವಾಗಿದ್ದು, ತಕ್ಷಣವೇ ರಸ್ತೆಗಳ ಅಗಲೀಕರಣವಾಗಬೇಕು ಹಾಗೂ ಅಭಿವೃದ್ಧಿ ಪರ ಕೆಲಸಗಳಿಗೆ ಸ್ಥಳಿಯ ಜನರ ಸಹಕಾರ ಮುಖ್ಯ ಎಂದರು. ನಾಗರೀಕರು ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ ಜಿಲ್ಲಾಧಿಕಾರಿಗಳು, ಪ್ರಸಕ್ತ ಇರುವ ಟಿ ಡಿ ಆರ್/ ಡಿ ಆರ್ ಅವಕಾಶದಡಿ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದರು.
ಗಣಪತಿ ಹೈಸ್ಕೂಲ್ ರಸ್ತೆ ಒಟ್ಟು ಉದ್ದ ಪ್ರಸಕ್ತ 573 ಮೀಟರ್ ಗಳಿದ್ದು, 20ರಿಂದ 25 ಅಡಿ ಅಗಲವಿದೆ. ರಸ್ತೆಯ ಪ್ರಸಾವಿತ ಅಗಲ 50 ಅಡಿ, ಪಿ ಎಂ ರಾವ್ ರಸ್ತೆ ಮತ್ತು ಶರವು ಮಹಾಗಣಪತಿ ದೇವಸ್ಥಾನ ಅಡ್ಡ ರಸ್ತೆ 40 ಅಡಿ. ಈ ಸಂದರ್ಭದಲ್ಲಿ 31 ಸೊತ್ತುಗಳಲ್ಲಿನ ಖಾಸಗಿ ಕಟ್ಟಡಗಳ ಆವರಣಗೋಡೆ ಹಾಗೂ 10 ಕಟ್ಟಡಗಳನ್ನು ನೆಲಸಮಗೊಳಿಸಬೇಕಾಗಬಹುದು. ಮುಂದಿನ ವಾರದೊಳಗಾಗಿ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ತಿಳಿಸಿದ್ದಾರೆ.
ನಗರದ ಇನ್ನೊಂದು ಪ್ರಮುಖ ರಸ್ತೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್-ನಾಗೂರಿ ಬಳಿಯಿಂದ ಕಂಕನಾಡಿ ರೈಲ್ವೇ ಸ್ಟೇಷನ್(ಮಂಗಳೂರು ಜಂಕ್ಷನ್) ರಸ್ತೆ ಅಗಲೀಕರಣ- ಈ ರಸ್ತೆ 360 ಮೀಟರ್ ಉದ್ದವಿದ್ದು, ಪ್ರಸ್ತುತ ಅಗಲ 12ರಿಂದ 15 ಅಡಿ. ರಸ್ತೆಯ ಪ್ರಸ್ತಾವಿತ ಅಗಲ 50ಮೀಟರ್ ವರೆಗೆ 60 ಅಡಿ. 51 ಮೀಟರ್ ನಿಂದ 360 ಮೀಟರ್ ವರೆಗೆ 40 ಅಡಿ. ರಸ್ತೆ ಅಗಲೀಕರಣ ವೇಳೆ 11 ಖಾಸಗಿ ಕಟ್ಟಡ/ ಆವರಣ ಗೋಡೆ ನೆಲಸಮವಾಗಲಿದ್ದು, ಈಗಾಗಲೇ ಈ ಸಂಬಂಧ ಸಮೀಕ್ಷೆ ನಡೆಸಿ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ರಸ್ತೆ ಪರಿಶೀಲನಾ ವೇಳೆ ಮಹಾನಗರಪಾಲಿಕೆ ಆಯುಕ್ತರಾದ ಡಾ. ಕೆ ಹರೀಶ್ ಕುಮಾರ್, ಕಾರ್ಯಪಾಲಕ ಅಭಿಯಂತರ ರಾಜಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತ ಕೆ ಎಸ್ ಲಿಂಗೇಗೌಡ, ತಾಂತ್ರಿಕ ಸಲಹೆಗಾರರು ಹಾಗೂ ಮನಾಪ ಇಂಜಿನಿಯರ್ ಗಳು ಉಪಸ್ಥಿತರಿದ್ದರು.

ಬದುಕುವ ಹಕ್ಕು ಪ್ರತಿಪಾದಿಸಿದ ಮಾನವ ಹಕ್ಕು ಆಯೋಗ: ನಾಡೋಜ ಎಸ್. ಆರ್. ನಾಯಕ್

ಮಂಗಳೂರು, ಜುಲೈ 20: ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗವು ಜನಸಾಮಾನ್ಯರ ಬದುಕುವ ಹಕ್ಕಿಗಾಗಿ ಸಾಕಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ ಇದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಹೇಳಿದ್ದಾರೆ.
ಜುಲೈ 25ರಂದು ಆಯೋಗದ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಲಿರುವ ನ್ಯಾಯಮೂರ್ತಿ ಡಾ. ನಾಯಕ್ ಅವರಿಂದು ಮಂಗಳೂರಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಶ್ಚಿಮ ವಲಯ ಐಜಿಪಿ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ದೇಶದಲ್ಲಿ ಮಾನವ ಹಕ್ಕುಗಳನ್ನು ಹೊಂದಿರುವ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮ ಎಂದ ಅವರು, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಸರ್ವಧರ್ಮ, ಭಾಷೆಗಳನ್ನೊಳಗೊಂಡ ಉತ್ತಮ ಜಿಲ್ಲೆ ಎಂದರು. ತಮ್ಮ ಕಾರ್ಯಾವಧಿಯಲ್ಲಿ ರಾಜ್ಯದಲ್ಲಿ 36,000 ದಷ್ಟು ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಅದರಲ್ಲಿ 24,000 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಉಳಿದವು ವಿಚಾರಣೆಯ ವಿವಿಧ ಹಂತದಲ್ಲಿವೆ. ದ.ಕ. ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 1643 ಪ್ರಕರಣಗಳು ದಾಖಲಾಗಿದ್ದು, 974 ಪ್ರಕರಣಗಳು ಇತ್ಯಥವಾಗಿವೆ. 669 ಪ್ರಕರಣಗಳು ಬಾಕಿ ಉಳಿದಿವೆ.ಲ 6500ಕ್ಕೂ ಅಧಿಕ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವುದಾಗಿ ಅವರು ಹೇಳಿದರು. ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಎಸ್ ಪಿ ಅಭಿಷೇಕ್ ಗೋಯಲ್, ಡಿಸಿಪಿ ಮುತ್ತೂರಾಯರು ಉಪಸ್ಥಿತರಿದ್ದರು.

ಳಿಕ ಜಿಲ್ಲಾಡಳಿತದ ವತಿಯಿಂದ ನೀಡಲಾದ ಆತ್ಮೀಯ ಬೀಳ್ಕೊಡುಗೆಯನ್ನು ಸ್ವೀಕರಿಸಿದ ಮಾತನಾಡಿದ ನ್ಯಾಯಮೂರ್ತಿ ಎಸ್ ಆರ್ ನಾಯಕ್ ಅವರು, ಸಾಮಾಜಿಕ ಹಾಗೂ ಸಾರ್ವಜನಿಕ ಜೀವನದಿಂದ ನಿವೃತ್ತಿ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಅಧಿಕಾರಿಗಳು ಸಾರ್ವಜನಿಕ ಸೇವೆ ನೀಡುವ ಸಂದರ್ಭದಲ್ಲಿ ಜನಪರವಾಗಿ ಕರ್ತವ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿರುವ ಸಮಯದಲ್ಲಿ ಸಾಮಾನ್ಯ ಜನರ ಪರವಾಗಿದ್ದ ನಿಲುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.

Thursday, July 19, 2012

5,24,828 ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ

ಮಂಗಳೂರು.ಜುಲೈ.19: ನೆಹರು ಯುವ ಕೇಂದ್ರದ 2012-13ನೇ ಸಾಲಿನ 5,24,828.00 ರೂ.ಗಳ ಕ್ರಿಯಾ ಯೋಜನೆಗೆ ಇಂದು ಅಪರ ಜಿಲ್ಲಾಧಿಕಾರಿ ಕೆ. ದಯಾನಂದ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಅನು ಮೋದನೆ ನೀಡಲಾಯಿತು.
ಪ್ರತೀ ಸಾಲಿನಂತೆ ಈ ಸಾಲಿನಲ್ಲಿಯೂ ಅವರ ನಿಗದಿತ ಕಾರ್ಯ ಕ್ರಮಗಳ ಪಟ್ಟಿಯನ್ನು ಸಭೆಗೆ ವಿವರಿಸಿದ ನೆಹರು ಯುವಕೇಂದ್ರದ ಅಧಿಕಾರಿ ಸಿ ಜೆ ಎಫ್ ಡಿ ಸೋಜಾ ಅವರು, ಯಶಸ್ವಿಯಾಗಿ ಯುವಕ ಮತ್ತು ಯುವತಿ ಮಂಡಲಗಳ ಸಹಕಾರದಿಂದ ಕಾರ್ಯಕ್ರಮ ಆಯೋಜಿ ಸುವುದಾಗಿ ನುಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಉಳಿದ ಕಾರ್ಯಕ್ರಮಗಳಿಗಿಂತ ಎಲ್ಲ ಯುವಕ ಮಂಡಲಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು.
ಯುವಕ ಸಂಘಟನೆಗಳು ಮಾದರಿ ಕಾರ್ಯಕ್ರಮಗಳನ್ನು ನೀಡುವಂತಾಗಬೇಕು. ಸಾಮಾಜಿಕ ಅರಿವು ಕಾರ್ಯಕ್ರಮಗಳನ್ನು ಇತರ ಇಲಾಖೆಗಳು ಮಾಡುವುದರಿಂದ, ಸಾಮಾಜಿಕ ಚಟುವಟಿಕೆಗಳಲ್ಲಿ ಎನ್ ವೈ ಕೆ ತಂಡಗಳು ಖುದ್ದು ಪಾತ್ರಧಾರಿಗಳಾಗಬೇಕೆಂದರು. ಯುವಕ, ಯುವತಿ ಮಂಡಲಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ತ್ರೀ ಶಕ್ತಿ ಸಂಘಟನೆಗಳಲ್ಲೂ ರೆಡ್ ರಿಬ್ಬನ್ ಕ್ಲಬ್

ಮಂಗಳೂರು, ಜುಲೈ. 19: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಎಚ್ಐವಿ ಬಾಧಿತರಿಗೆ ನೆರವಾಗಲು ವಿಶೇಷ ನೆರವು ಯೋಜನೆ ಕಾರ್ಯಕ್ರಮ ರೂಪಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಎನ್ ವಿಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಇಂದು ಜಿಲ್ಲಾ ಪಂಚಾಯತ್ ನ ಮಿನಿ ಹಾಲ್ ನಲ್ಲಿ ಆಯೋಜಿಸಲಾಗಿತ್ತು.
ಈ ನಿಟ್ಟಿನಲ್ಲಿ ಈಗಾಗಲೇ ನಗರದ ಹೊಂಗಿರಣ ನೆಟ್ ವರ್ಕ್ ಸಹಕಾರದಿಂದ ಫಲಾನುಭವಿಗಳನ್ನು ಗುರುತಿಸಿ ಆರು ಜನರಿಗೆ ನೆರವು ಹಾಗೂ ಮೂವರು ಫಲಾನುಭವಿಗಳಿಗೆ ವಸತಿ ಯೋಜನೆಯನ್ನು ಒದಗಿಸಲಾಗಿದೆ. ಎಲ್ಲಾ ಇಲಾಖೆಗಳು ತಮ್ಮ ಇಲಾಖೆಗಳಿಂದ ಫಲಾನುಭವಿಗಳನ್ನು ಗುರುತಿಸುವಾಗ ಎಚ್ಐವಿ ಪೀಡಿತರಿಗೆ ಕನಿಷ್ಠ 10 ಸೌಲಭ್ಯಗಳನ್ನು ಒದಗಿಸಬೇಕೆಂದು ಸಿಇಒ ಅವರು ಹೇಳಿದರು.
ಎಲ್ಲ ಇಲಾಖೆಗಳಿಗೂ ಇದಕ್ಕಾಗಿ ಕಾಲಮಿತಿಯನ್ನು ನಿಗದಿಪಡಿಸಿದ ಸಿಇಒ ಅವರು, ಈಗಾಗಲೇ ಕಾಲೇಜುಗಳಲ್ಲಿ ಅಸ್ತಿತ್ವದಲ್ಲಿರುವ ಮಾದರಿಯಲ್ಲೇ ಸ್ತ್ರೀ ಶಕ್ತಿ ಸಂಘಟನೆಗಳ ಮೂಲಕವೂ ರೆಡ್ ರಿಬ್ಬನ್ ಸಂಘಟನೆಗಳನ್ನು ಸ್ಥಾಪಿಸುವಂತೆ ನುಡಿದರು. ಈ ಸಂಬಂದ ನಡೆಯುವ ಮಾಹಿತಿ ಶಿಕ್ಷಣ ಕಾರ್ಯಕ್ರಮಗಳು ನಿರಂತರವಾಗಿರಬೇಕೆಂದು ಹೇಳಿದ ಅವರು, ಸಂಬಂಧಪಟ್ಟವರಿಗೆ ಲಿಖಿತವಾಗಿ ಸೂಚನೆಗಳನ್ನು ನೀಡುವ ಭರವಸೆಯನ್ನು ಸಭೆಗೆ ನೀಡಿದರು.
ಇದರ ಜೊತೆಗೆ ಅಪೌಷ್ಠಿಕ ಮತ್ತು ವಿಧವೆ, ಅನಾಥ ಮಕ್ಕಳ ಆಸ್ತಿ ರಕ್ಷಣೆಯ ಬಗ್ಗೆಯೂ ಗ್ರಾಮಪಂಚಾಯತ್ ಅಧಿಕಾರಿಗಳು ಆಸಕ್ತಿ ವಹಿಸುವಂತೆ ಆಗಬೇಕು ಎಂದರು. ಯುವಕ ಮಂಡಲಗಳು, ಯುವತಿ ಮಂಡಲಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಈ ನಿಟ್ಟಿನಲ್ಲಿ ಖಾತರಿಪಡಿಸಿಕೊಳ್ಳಬೇಕೆಂದ ಅವರು, ನಗರದಲ್ಲಿ ಕಾರ್ಮಿಕ ಇಲಾಖೆಯ ಸಹಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಏಡ್ಸ್ ಘಟಕದೊಂದಿಗೆ ಅನಿವಾರ್ಯ ಎಂದರು. ಈಗಾಗಲೇ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಮಾಜಮುಖಿ ಕಾರ್ಯಕ್ರಮಗಳಿಗೆ (ಮುಖ್ಯವಾಗಿ ಎಂಡೋಸಲ್ಫಾನ್) ಉತ್ತಮ ಸಹಕಾರ ನೀಡಿದ್ದು, ಎಚ್ ಐ ವಿ ಪೀಡಿತರಿಗೆ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆಯೂ ಚರ್ಚೆ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ ಶ್ರೀರಂಗಪ್ಪ ಮಾತನಾಡಿ, ಮುಂದಿನ ತಿಂಗಳಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬರಲಿದ್ದು, ಆರೋಗ್ಯ ವಲಯದಲ್ಲಿ ಈ ಯೋಜನೆಯಿಂದ ಬಡವರಿಗೆ ಹೆಚ್ಚಿನ ನೆರವಾಗಲಿದೆ ಎಂದರು.
ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಮತ್ತು ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಹಾಸ್ಟೆಲ್ ಗಳಲ್ಲಿ ಇಂತಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಕ್ರಮಗಳಾಗಬೇಕು ಎಂದರು.
ಹೊಂಗಿರಣ ನೆಟ್ ವರ್ಕ್ ಗೆ ಪೀಡಿತರನ್ನು ಗುರುತಿಸುವ ಹೊಣೆ ವಹಿಸಲಾಗಿದ್ದು, ಅವರಿಗೆ ಸರ್ಕಾರದ ಸವಲತ್ತುಗಳನ್ನು ನೀಡುವ ಹೊಣೆ ಜಿಲ್ಲಾ ಪಂಚಾಯತ್ನದ್ದು ಎಂದು ಸಿಇಒ ಅವರು ಸ್ಪಷ್ಟ ಪಡಿಸಿದರು.
ಸಭೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು, ಡಾ ಕಿಶೋರ್ ಮತ್ತು ಡ್ಯಾಪ್ಕೊ (ಡಿಸ್ಟ್ರಿಕ್ಟ್ ಏಡ್ಸ್ ಪ್ರಿವೆಂನ್ಷನ್ ಕಂಟ್ರೋಲ್ ಯುನಿಟ್) ಡಾ ತರುಣ್ ಚೆಂಗಪ್ಪ ಉಪಸ್ಥಿತರಿದ್ದರು.

ಎಚ್ ಐ ವಿ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ವಿಶೇಷ ಅಭಿಯಾನ: ಡಾ ಕಿಶೋರ್

ಮಂಗಳೂರು, ಜುಲೈ.19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ ಐ ವಿ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪ್ರದೇಶಗಳಲ್ಲಿ ಹೆಚ್ ಐ ವಿ ಸೋಂಕು ವರದಿಯಾಗುತ್ತಿದ್ದು, ಬಹುತೇಕ ವಲಸಿಗರು ವಾಸಿಸುವ ಪ್ರದೇಶದಲ್ಲಿ ಪತ್ತೆಯಾಗುತ್ತಿದೆ ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ಘಟಕದ ಡಾ. ಕಿಶೋರ್ ಅವರು ಹೇಳಿದರು.
ಮಂಗಳೂರಿನಲ್ಲಿ ಜನವರಿ 12ರಿಂದ ಜೂನ್ 12ರವರೆಗೆ ಮಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ 156 ಪ್ರಕರಣಗಳು ಪತ್ತೆಯಾಗಿದೆ ಎಂದ ಅವರು, ಬಂಟ್ವಾಳದಲ್ಲಿ 38, ಬೆಳ್ತಂಗಡಿಯಲ್ಲಿ 27, ಪುತ್ತೂರಿನಲ್ಲಿ 22, ಸುಳ್ಯದಲ್ಲಿ 14, ಉಡುಪಿಯಲ್ಲಿ 27, ಕಾಸರಗೋಡಿನಲ್ಲಿ 24 ಇತರ ಜಿಲ್ಲೆಗಳು 96, ಇತರ ರಾಜ್ಯದವರು 48 ಒಟ್ಟು 452 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ಇವರಲ್ಲಿ ಪುರುಷರು 279, ಮಹಿಳೆಯರು 173 ಎಂದು ಡಾಕ್ಟರ್ ಕಿಶೋರ್ ಮಾಹಿತಿ ನೀಡಿದರು.
ಜನರಲ್ಲಿ ಅದರಲ್ಲೂ ಮುಖ್ಯವಾಗಿ ಯುವಜನಾಂಗದಲ್ಲಿ ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಂಬಂಧ ನ್ಯಾಕೋ ಮತ್ತು ಡ್ಯಾಪ್ಕೊದ ಸಹಕಾರದಿಂದ ವಿಶೇಷ ಅಭಿಯಾನ ಆಯೋಜಿಸುತ್ತಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೆ ಎ ಆರ್ ಟಿ ಚಿಕಿತ್ಸೆ ಪಡೆಯುತ್ತಿರುವರು 2006 ರಿಂದ ಜೂನ್ 2012ರವರೆಗೆ ಪುರುಷರು 2116, ಮಹಿಳೆಯರು 1299, ಮಕ್ಕಳು 278 ಒಟ್ಟು 3693. ಈ ಸಂಬಂಧ ಚಿಕಿತ್ಸೆ ಹಾಗೂ ಫಲಾನುಭವಿಗಳ ಗುರುತಿಸುವಿಕೆಯಲ್ಲಿ ಬಹಳ ದೊಡ್ಡ ಸವಾಲು ಗೌಪ್ಯತೆಯನ್ನು ಕಾಪಾಡುವುದು. ಹೀಗಾಗಿ ಹಲವು ಸಂದರ್ಭಗಳಲ್ಲಿ ಇಲಾಖೆಗಳು ಮುಂದೆ ಬಂದರೂ ಫಲಾನುಭವಿಗಳು ದೊರೆಯುವುದು ಕಷ್ಟ ಎಂದ ಡಾ ಕಿಶೋರ್, ಆದರೂ ಜಿಲ್ಲೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿನೂತನ ಪ್ರಯತ್ನ ಸಾಗಿದ್ದು, ವಸತಿ ಯೋಜನೆ, ಬಿಪಿಎಲ್ ಕಾಡರ್್ ವಿತರಣೆ ಮತ್ತು ಸ್ವಉದ್ಯೋಗ ನೆರವು ನೀಡುವಲ್ಲಿ ಮುಂದಡಿ ಇಡಲಾಗಿದ್ದು, ಎಲ್ಲ ಇಲಾಖೆಗಳಿಂದ ನೆರವು ನೀಡಲು ಶ್ರಮಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೇವಲ ಹೆಚ್ ಐ ವಿ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ ಮಾತ್ರವಲ್ಲದೆ, ಹೆಚ್ ಐ ವಿ ಸೋಂಕಿತರಿಗೆ/ಬಾಧಿತರಿಗೆ ಮತ್ತು ಲೈಂಗಿಕ ಕಾರ್ಯಕರ್ತರಿಗೆ ಸಾಮಾಜಿಕ ಸವಲತ್ತುಗಳನ್ನು ನೀಡುವಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 4 ಮಂದಿ ಹೆಚ್ ಐ ವಿ ಸೋಂಕಿತರಿಗೆ ಮತ್ತು 2 ಮಂದಿ ಬಾಧಿತರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಮಂಜೂರಾತಿಯಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಹಚ್ ಐ ವಿ ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ಲಭ್ಯವಿರುವ ವಿಶೇಷ ಪಾಲನಾ ಯೋಜನೆಯಡಿಯಲ್ಲಿ 297 ಮಕ್ಕಳಿಗೆ ಆರ್ಥಿಕ ಸಹಾಯ ನೀಡಲಾಗಿದೆ. ವಸತಿ ಯೋಜನೆ ಯಡಿಯಲ್ಲಿ ಗ್ರಾಮೀಣ ಭಾಗದಲ್ಲಿ 2 ಮಂದಿ ಮತ್ತು ನಗರ ಪ್ರದೇಶದಲ್ಲ ಒಬ್ಬ ಸೋಂಕಿತರಿಗೆ ಸೌಲಭ್ಯ ಮಂಜೂರಾಗಿರುತ್ತದೆ. ಉಚಿತ ಕೈಗಾರಿಕಾ ತರಬೇತಿ ಯೋಜನೆಯಡಿ ಓರ್ವ ಲೈಂಗಿಕ ಕಾರ್ಯಕರ್ತರ ಮಗನಿಗೆ ತರಬೇತಿ ನೀಡಿ ಉದ್ಯೋಗ ನೇಮಕಾತಿಯಾಗಿರುತ್ತದೆ.
ಜಿಲ್ಲೆಯಲ್ಲಿ ಪ್ರಸ್ತುತ 49 ಐಸಿಟಿಸಿ (ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು) ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಎಲ್ಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಖಾಸಗಿ ಸಹಭಾಗಿತ್ವದ ಆಸ್ಪತ್ರೆಗಳಲ್ಲಿ ಕಾರ್ಯಾಚರಿಸುತ್ತದೆ. ಜಿಲ್ಲೆಯಲ್ಲಿ ಒಂದು ಸಂಚಾರಿ ಐಸಿಟಿಸಿ ವಾಹನದಲ್ಲಿ ಸಿಬ್ಬಂದಿಗಳು ಸೇವೆಗಳನ್ನು ನೀಡುತ್ತಿದ್ದಾರೆ. ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯಲ್ಲಿ 2006ರಿಂದ ಕಾರ್ಯಾಚರಿಸುತ್ತಿದೆ. ನಗರದ ಕೆ ಎಂ ಸಿ ಆಸ್ಪತ್ರೆ ಅತ್ತಾವರದಲ್ಲೂ 2011ರಿಂದ ಎ ಆರ್ ಟಿ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಬಂಟ್ವಾಳ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕು ಕೇಂದ್ರ ಆಸ್ಪತ್ರೆಗಳಲ್ಲಿ ಲಿಂಕ್ ಏ ಆರ್ ಟಿ ಚಿಕಿತ್ಸಾ ಕೆಂದ್ರವನ್ನು 2009ರಿಂದ ಆರಂಭಿಸಲಾಗಿದೆ. ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲೂ ಗರ್ಭಿಣಿ ತಪಾಸಣಾ ದಿನಗಳಂದು ಪಿಪಿಟಿಸಿಟಿ ಶಿಬಿರ ( ಗರ್ಭಿಣಿಯರ ಹೆಚ್ ಐ ವಿ ರಕ್ತ ಪರೀಕ್ಷೆ) ಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.
2007ರಿಂದ ಜೂನ್ 2012ರವರೆಗೆ 11431 ಗರ್ಭಿಣಿಯರು ಎಚ್ ಐ ವಿ ಪರೀಕ್ಷೆಗೊಳಪಟ್ಟಿದ್ದು ಇವರಲ್ಲಿ 14 ಪಾಸಿಟಿವ್ ಪತ್ತೆಯಾಗಿದೆ. ಗರ್ಭಿಣಿಯರ ಹೊರತಾಗಿ 17504 ಜನರು ಪರೀಕ್ಷೆಗೊಳಪಟ್ಟವರಲ್ಲಿ 452 ಪಾಸಿಟಿವ್ ಪತ್ತೆಯಾಗಿದೆ. ಎಚ್ ಐ ವಿ ಬಗ್ಗೆ ಅರಿವು ಮೂಡಿಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದು ಡಾಕ್ಟರ್ ಕಿಶೋರ್ ಹೇಳಿದರು.

Wednesday, July 18, 2012

ದ.ಕ.ಜಿ.ಪಂ ಗೆ 15062.47 ಲಕ್ಷ ಅನುದಾನ: ಡಾ.ವಿಜಯ ಪ್ರಕಾಶ್

ಮಂಗಳೂರು, ಜುಲೈ.18 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ 2012-13ನೇ ಸಾಲಿನ ಯೋಜನೆಯಡಿ ರಾಜ್ಯ ಮತ್ತು ಕೇಂದ್ರದಿಂದ ಒಟ್ಟು 15062.47 ಲಕ್ಷ ರೂ. ಅನುದಾನ ಲಭ್ಯವಾಗಿದ್ದು, ಇದರಲ್ಲಿ ಕೇಂದ್ರದ 6598.40 ಲಕ್ಷ ರೂ., ಹಾಗೂ ರಾಜ್ಯದ 8464.07 ಲಕ್ಷ ರೂ. ಅನುದಾನ ಲಭ್ಯವಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ ಎನ್ ವಿಜಯಪ್ರಕಾಶ್ ತಿಳಿಸಿದ್ದಾರೆ.
ಜುಲೈ 16ರಂದು ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರಗತಿ ವಿವರಗಳ ಮಾಹಿತಿ ನೀಡಿದ ಸಿಇಒ ಅವರು, ಪ್ರಮುಖ ಇಲಾಖೆಗಳಿಗೆ ಸಾಕಷ್ಟು ಅನುದಾನ ಲಭ್ಯವಿದ್ದು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸಕ್ತ ಸಾಲಿನ ವಾಷರ್ಿಕ ಕ್ರಿಯಾ ಯೋಜನೆಯಡಿ ಶಿಕ್ಷಣ ಇಲಾಖೆಗೆ ಒಟ್ಟು 3438.37 ಲಕ್ಷ ರೂ. ಮೀಸಲಿರಿಸಿದ್ದು, ಇದರೊಳಗೆ ಅಂಗವಿಕಲ ಮಕ್ಕಳಿಗೆ ಸಮಗ್ರ ಶಿಕ್ಷಣಕ್ಕೆ 7 ಲಕ್ಷ, ಪ್ರೌಢಶಾಲಾ ಮಕ್ಕಳಿಗೆ ವಿದ್ಯಾ ವಿಕಾಸ ಯೋಜನೆಗೆ 50 ಲಕ್ಷ, ಖಾಸಗಿ ಪ್ರೌಢಶಾಲೆಗಳಿಗೆ ಸಹಾಯಧನ 58 ಲಕ್ಷ, ಗುತ್ತಿಗೆ ಶಿಕ್ಷಕರಿಗೆ ಸಂಭಾವನೆಗೆ 1.50ಲಕ್ಷ ರೂ., ಸರ್ವಶಿಕ್ಷಣ ಅಭಿಯಾನದಡಿ ವೇತನ, ಪೀಠೋಪಕರಣಕ್ಕೆ, ನಿರ್ವಹಣೆಗೆ 1064 ಲಕ್ಷ ರೂ.ಗಳನ್ನು ಮೀಸಲಿರಿಸಿದೆ. ಶಿಕ್ಷಕರ ವೇತನಕ್ಕಾಗಿ 1552 ಲಕ್ಷ ವೇತನಕ್ಕೆ ಮೀಸಲಿರಿಸಿದ್ದು, ಇದಕ್ಕೆ ಕೇಂದ್ರದ ಪಾಲು 224.00 ರಾಜ್ಯದ ಪಾಲು 3214.37 ಲಕ್ಷ ರೂ. ಮೀಸಲಿರಿಸಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಕ್ರೀಡೆಗಳು ಮತ್ತು ಯುವಜನಸೇವೆಯಡಿ 56.62 ಲಕ್ಷ ರೂ.ಗಳನ್ನು ಮೀಸಲಿಡಲಾಗಿದ್ದು, ಕ್ರೀಡಾಂಗಣ ನಿರ್ವಹಣೆಗೆ 2 ಲಕ್ಷ ರೂ., ಕ್ರೀಡಾ ಶಾಲೆಗೆ 3.50 ಲಕ್ಷ ರೂ., ಕುಸ್ತಿದಾರರಿಗೆ ಆರ್ಥಿಕ ಸಹಾಯಧನಕ್ಕೆ 30,000ರೂ., ತಾಲೂಕು ಪಂಚಾಯತ್ ಮಟ್ಟದಲ್ಲಿ ಯುವಜನಕ್ರೀಡಾ ಖೇಲ್ ಅಭಿಯಾನಕ್ಕೆ ಒಟ್ಟು 30 ಲಕ್ಷ ರೂ. ಮೀಸಲಿಡಲಾಗಿದೆ. ಇದರಲ್ಲಿ ರಾಜ್ಯ ಯೋಜನೆ 6 ಲಕ್ಷ,ಕೇಂದ್ರದ್ದು 24 ಲಕ್ಷ ರೂ. ಮೀಸಲಿರಿಸಿದೆ.
ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳು, ಗ್ರಾಮೀಣ ಆರೋಗ್ಯಕ್ಕೆ 159.50 ಲಕ್ಷ ರೂ.ಗಳಿವೆ. ಇದನ್ನು ಆರೋಗ್ಯ ಇಲಾಖೆ ಕಟ್ಟಡ ರಿಪೇರಿ, ಸಲಕರಣೆ ದುರಸ್ತಿ, ಕಾಮಗಾರಿಗೆ, ತಾಲೂಕು ಮಟ್ಟದ ಆಸ್ಪತ್ರೆಗಳ ನಿರ್ವಹಣೆಗೆ 6 ಲಕ್ಷ ರೂ., ಗಳಿವೆ. 78 ಲಕ್ಷ ರೂ.ಗಳನ್ನು ವೇತನಕ್ಕೆ ಬಳಸಲಾಗುವುದು. ಭಾರತೀಯ ವೈದ್ಯ ಪದ್ದತಿ ಹೋಮಿಯೋ ಮತ್ತು ಆಯುರ್ವೇದಕ್ಕೆ 35 ಲಕ್ಷ ರೂ.ಗಳನ್ನು ಮೀಸಲಿರಿಸಿದೆ. ಕುಟುಂಬ ಕಲ್ಯಾಣಕ್ಕೆ 1584.80 ರೂ.ಗಳು, ಗ್ರಾಮೀಣಾಭಿವೃದ್ಧಿಯಡಿ ಕುಡಿಯುವ ನೀರಿಗಾಗಿ 47ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಸಮಾಜ ಕಲ್ಯಾಣಕ್ಕೆ 588.65 ಲಕ್ಷ ರೂ. ಮೀಸಲಿರಿಸಿದ್ದು, ಸ್ಕಾಲರ್ ಷಿಪ್, ವಿದ್ಯಾರ್ಥಿನಿಲಯಗಳ ನಿರ್ವಹಣೆ, ಊಟ, ವಸತಿ ಯೋಜನೆಗಳಿಗೆ ಈ ಹಣ ಬಳಕೆಯಾಗಲಿದೆ. ಅಂತರ್ ಜಾತಿ ವಿವಾಹ, ಅಸ್ಪೃಶ್ಯತಾ ನಿವಾರಣೆಗೆ 9ಲಕ್ಷ ರೂ.ಗಳು ಮೀಸಲಿರಿಸಿದೆ. ಈ ಇಲಾಖೆಗೆ ರಾಜ್ಯದಿಂದ 305.90 ಮತ್ತು ಕೇಂದ್ರದಿಂದ 282.75 ಲಕ್ಷ ರೂ.ಗಳಿವೆ.
ಪರಿಶಿಷ್ಟ ಪಂಗಡದ ಕಾಲನಿ ಅಭಿವೃದ್ಧಿಗೆ, ಮೂಲಸೌಕರ್ಯ ಒದಗಿಸಲು 85 ಲಕ್ಷ ರೂ.ಗಳನ್ನು ಮೀಸಲಿರಿಸಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಗೆ 290.86 ಲಕ್ಷ ರೂ., ಗಳಲ್ಲಿ ಹಾಸ್ಟೆಲ್ ಮತ್ತು ವಿದ್ಯಾರ್ಥಿ ವೇತನಕ್ಕೆ ಬಳಕೆಯಾಗಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 2609.08 ಲಕ್ಷ ಗಳನ್ನು ಮೀಸಲಿರಿಸಿದ್ದು, ಕೇಂದ್ರದ 1974.32 ಮತ್ತು ರಾಜ್ಯದ 634.76 ರೂ.ಗಳಿವೆ. ಅಂಗನವಾಡಿಗಳ ನಿರ್ವಹಣೆಗೆ 65 ಲಕ್ಷ ರೂ., ನಿರ್ಗತಿಕ ಕುಟೀರಕ್ಕೆ 7.30 ಲಕ್ಷರೂ. ಶಿಶು ಕಲ್ಯಾಣಕ್ಕೆ, ಗೌರವಧನಕ್ಕೆ 562.20 ಲಕ್ಷ ರೂ. ಮೀಸಲಿಟ್ಟಿದೆ.
ಪೌಷ್ಠಿಕ ಆಹಾರ ಯೋಜನೆಯಡಿ 1607.00 ಲಕ್ಷ ರೂ., ಗಳಲ್ಲಿ ಕೇಂದ್ರದಿಂದ 699ಲಕ್ಷ, ರಾಜ್ಯದ್ದು 908 ಲಕ್ಷ ರೂ. ಬಿಡುಗಡೆಯಾಗಿದೆ. ಕೃಷಿಗೆ 65.19 ಲಕ್ಷ ರೂ. ಮೀಸಲಿರಿಸಿದ್ದು, ಕೇಂದ್ರದ ಪಾಲು 3.60 ಲಕ್ಷ, ರಾಜ್ಯದ್ದು 61.45 ಲಕ್ಷ ರೂ., ಗಳಲ್ಲಿ ರೈತರಿಗೆ ಸಹಾಯಧನ, ಕೃಷಿ ಮೇಳ, ಸಾವಯವ ಕೃಷಿ, ಹನಿನೀರಾವರಿ, ಕೃಷಿ ಅಭಿವೃದ್ಧಿಗೆ ಬಳಕೆಯಾಗಲಿದೆ.
ತೋಟಗಾರಿಕೆ ವಲಯಕ್ಕೆ 42.11 ಲಕ್ಷ ರೂ. ಮೀಸಲಿರಿಸಿದ್ದು, ನರ್ಸರಿ ನಿರ್ವಹಣೆ ಮತ್ತು ಕಟ್ಟಡಕ್ಕೆ, ಶೈತ್ಯಾಗಾರಕ್ಕೆ ಧನಸಹಾಯ, ರೈತರಿಗೆ ತರಬೇತಿ, ಜೇನುಸಾಕಾಣಿಕೆಗೆ 3 ಲಕ್ಷ ರೂ.ಗಳನ್ನು ಮೀಸಲಿರಿಸಿದೆ.
ಪಶುಸಂಗೋಪನೆಗೆ ಒಟ್ಟು 267.57 ಲಕ್ಷ, ಕೇಂದ್ರದಿಂದ 5.48 ಲಕ್ಷ, ರಾಜ್ಯದ 262.9 ಲಕ್ಷ ರೂ., ಜಾನುವಾರು ರೋಗ ನಿಯಂತ್ರಣಕ್ಕೆ 12 ಲಕ್ಷ ರೂ., ಪಶುವೈದ್ಯ ಶಾಲೆ ಅಭಿವೃದ್ಧಿಗೆ 188.17 ಲಕ್ಷ ರೂ., ಮೀನುಗಾರಿಕೆಗೆ 33 ಲಕ್ಷ ರೂ. ಮೀಸಲಿರಿಸಿದ್ದು ಮೀನು ಮಾರಾಟಕ್ಕೆ ಸಹಾಯಧನ 8.20 ಲಕ್ಷ ರೂ., ಮೀಸಲಿರಿಸಿದೆ.

ಇಂಗುಗುಂಡಿ, ತೆರೆದ ಬಾವಿ ಎಚ್ಚರ ವಹಿಸಿ: ಸಿಇಒ

ಮಂಗಳೂರು, ಜುಲೈ. 18 : ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಇಂಗುಗುಂಡಿ, ತೆರೆದ ಬಾವಿ, ಅನುಪಯುಕ್ತ ಕೊಳವೆಬಾವಿ ಗಳಲ್ಲಿ ಮಕ್ಕಳು ಬೀಳದಂತೆ ಮತ್ತು ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಾಧ್ಯವಿದ್ದಲ್ಲಿ ಬೇಲಿ ಹಾಕುವಂತಹ ಕ್ರಮಗಳು, ಮುನ್ನೆಚ್ಚರಿಕೆ ಫಲಕಗಳನ್ನು ಹಾಕಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಸಂಬಂಧ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳು ಮತ್ತು ಇಒಗಳ ನೇತೃತ್ವದಲ್ಲಿ ಪಿಡಿಒ ಗಳು ಮತ್ತು ಸ್ಥಳೀಯ ಇಂಜಿನಿಯರ್ ಗಳು ಕ್ರಮವಹಿಸಬೇಕೆಂದು ಸಿಇಒ ಹೇಳಿದರು.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಇಲಾಖೆಗಳ ಸಮನ್ವಯದೊಂದಿಗೆ ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಸ್ಥಳೀಯರ ಸಹಕಾರದೊಂದಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಿಇಒ ಅವರು ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಿಗೆ ಪೂರಕವಾಗಿ ಸಾಮಾಜಿಕ ಅರಣ್ಯ, ತೋಟಗಾರಿಕೆ, ಸಣ್ಣ ನೀರಾವರಿ, ಕೃಷಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯೋಜನೆಗಳನ್ನು ರೂಪಿಸಿ ಜನರಿಗೆ ಸೌಲಭ್ಯ ನೀಡಿಕೆಗಳಾಗಬೇಕೆಂದು ಸಿಇಒ ಅವರು ಹೇಳಿದರು.

ಗ್ರಾಮೀಣ ರಸ್ತೆಗೆ 496.91 ಲಕ್ಷ ರೂ. ಪ್ರಥಮ ಬಾರಿಗೆ

ಮಂಗಳೂರು, ಜುಲೈ. 18 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ಗೆ ಪ್ರಥಮ ಬಾರಿಗೆ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 496.91 ಲಕ್ಷ ರೂ. ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಅವರು ಹೇಳಿದರು.
ಮುಖ್ಯಮಂತ್ರಿಗಳು ಜಿಲ್ಲಾ ಪಂಚಾಯತ್ ಗೆ ವಿಶೇಷ ಅನುದಾನ ನೀಡಿದ್ದು ಪ್ರತೀ ತಾಲೂಕಿಗೊಂದರಂತೆ ಐದು ತಾಲೂಕಿಗೆ 500 ಲಕ್ಷದಂತೆ ಐದು ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಈ ಹಣದಿಂದ ಮೂಲಭೂತ ಸೌಕರ್ಯ, ಅಂಗನವಾಡಿ ಕಟ್ಟಡ ನಿರ್ವಹಣೆಗೆ, ಕಾಲು ಸಂಕಕ್ಕೆ ಬಳಸಬಹುದಾಗಿದೆ.
ಬೇಸಿಗೆಯಲ್ಲಿ ತುರ್ತು ಕುಡಿಯುವ ನೀರಿಗೆ 98.91 ಲಕ್ಷ ವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದು, ಇದರಿಂದ ಪರಿಣಾಮಕಾರಿ ಕಾರ್ಯನಿರ್ವಹಣೆಯಾಗಿದೆ. ಕುಡಿಯುವ ನೀರೊದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

Tuesday, July 17, 2012

ಸಮಸ್ಯೆ ಪರಿಹರಿಸಲು ಕಾನೂನು ಪ್ರಕಾರ ಕ್ರಮ: ಸಿಇಒ

ಮಂಗಳೂರು,ಜುಲೈ.17: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಪಿಡಿಒಗಳ ವಿರುದ್ಧ ಸದಸ್ಯರ ಅಸಮಾಧಾನ, ನಕ್ಸಲ್ ಪೀಡಿತ ಪ್ರದೇಶಾಭಿವೃದ್ದಿ ವೇಳೆ ಜನಪ್ರತಿನಿಧಿಗಳನ್ನಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಸರ್ವಶಿಕ್ಷಣ ಅಭಿಯಾನದಡಿ ಕಟ್ಟಡ ನಿರ್ಮಾಣ ಇವೇ ಮುಂತಾದ ವಿಷಯಗಳ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು.
ಸೋಮವಾರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ವಿಷಯಗಳು ಸುದೀರ್ಘ ಚರ್ಚೆಗೊಳಪಟ್ಟವು.
ಸಭೆಯಲ್ಲಿ ಇದಕ್ಕೆ ಉತ್ತರಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯಡಿ ಬರುವ ಕಾರ್ಯಕ್ರಮಗಳನ್ನು ಕಾನೂನು ಪ್ರಕಾರವೇ ಅನುಷ್ಠಾನಕ್ಕೆ ತರುತ್ತಿರುವುದಾಗಿ ಸಮಜಾಯಿಷಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ. ಶೈಲಜಾ ಭಟ್ ಅವರು, ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆಯಾಗಬೇಕೇ ಹೊರತು ವೈಯಕ್ತಿಕ ಆರೋಪ, ಪ್ರತ್ಯಾರೋಪ ಸಲ್ಲ ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಉತ್ತರ ನೀಡಬೇಕೆಂದ ಅವರು, ಉತ್ತರ ಸಮರ್ಪಕವಾಗಿಲ್ಲದಿದ್ದರೆ ಗೊಂದಲಗಳು ಉದ್ಭವವಾಗುವವು ಎಂದರು.
ಸಭೆಯಲ್ಲಿ ಹೆಚ್ಚಿನ ಸದಸ್ಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ(ಪಿಡಿಒ) ವಿರುದ್ಧ ಕ್ರಮಕ್ಕೆ ಒತ್ತಾಯಿಸಿದಾಗ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಮಾತನಾಡಿ, ಪಿಡಿಒಗಳ ವಿರುದ್ಧ ಕ್ರಮಕೈಗೊಳ್ಳುವಾಗ ಎಚ್ಚರಿಕೆ ಹಾಗೂ ಸಹಾನೂಭೂತಿಯಿಂದ ವರ್ತಿಸುವಂತೆ ಸರಕಾರದ ಸ್ಪಷ್ಟ ನಿರ್ದೇಶನ ಇದೆ. ರಾಜ್ಯದ ಮೂವರು ಪಿಡಿಒಗಳು ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಸರಕಾರ ಈ ಎಚ್ಚರಿಕೆಯನ್ನು ನೀಡಿದೆ ಎಂದರು.
ಅಧಿಕಾರಿಯೊಬ್ಬರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾದರೂ ತನಿಖೆ ಮತ್ತು ತನಿಖಾ ವರದಿ ಅತ್ಯಗತ್ಯ. ಆಡಳಿತಾತ್ಮಕ ವಿಷಯಗಳಲ್ಲಿ ಪ್ರಕ್ರಿಯೆ ಮುಗಿಯದೆ ಸ್ಥಳದಲ್ಲಿಯೇ ನಿರ್ಧಾರ ಪ್ರಕಟಿಸಲು ಸಾಧ್ಯವಾಗದು ಎಂದು ಸ್ಪಷ್ಟ ಪಡಿಸಿದರು.
ಶಾಲೆಗಳು ಆರಂಭಗೊಂಡು ಒಂದೂವರೆ ತಿಂಗಳಾದರೂ ಗ್ರಾಮೀಣ ಭಾಗವಾದ ಪೆರಿಂಜೆಯ ಖಾಸಗಿ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯ ಪುಸ್ತಕಗಳು ಪೂರೈಕೆಯಾಗದೆ ತೊಂದರೆಯಾಗಿದೆ ಎಂದು ಸ್ಥಳೀಯ ಜಿಲ್ಲಾಪಂಚಾಯತ್ ಸದಸ್ಯೆ ಸಭೆಯ ಗಮನ ಸೆಳೆದಾಗ, ಉತ್ತರಿಸಿದ ಶಿಕ್ಷಣಾಧಿಕಾರಿಗಳು ಅದು ಇತ್ತೀಚೆಗೆ ಅನುದಾನಕ್ಕೊಳಪಟ್ಟ ಶಾಲೆಯಾಗಿದೆ. ಹಾಗಾಗಿ ಬೇಡಿಕೆ ಸಲ್ಲಿಸುವಾಗ ವಿಳಂಬವಾಗಿದೆ. ಬೇಡಿಕೆ ಪಟ್ಟಿಗೆ ಅನುಸಾರವಾಗಿ ಪಠ್ಯ ಪುಸ್ತಕಗಳು ಪೂರೈಕೆಯಾಗುತ್ತಿವೆ. ಕೆಲವೇ ದಿನಗಳಲ್ಲಿ ಪೆರಿಂಜೆಗೂ ಪುಸ್ತಕಗಳು ಲಭಿಸಲಿವೆ ಎಂದರು.
ಶಿಕ್ಷಕರ ಕೊರತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ನಗರಗಳ ಶಾಲೆಗಳಲ್ಲಿ ಶಿಕ್ಷಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳವಿದೆ ಎಂದು ಅಭಿಪ್ರಾಯ ಪಟ್ಟ ಕೆಲವು ಸದಸ್ಯರು ಈ ಕುರಿತು ಅಧ್ಯಯನ ನಡೆಸಿ ವರದಿ ಮಂಡಿಸ ಬೇಕೆಂದರು.
ಗ್ರಾಮ ಪಂಚಾಯತುಗಳ 85 ಸಿಬ್ಬಂದಿಗಳಿಗೆ ಬಡ್ತಿಗೆ ಸಂಬಂಧಿಸಿದಂತೆ, ರೋಸ್ಟರ್ ಪದ್ದತಿ ಅನುಸರಿಸದ ಪಂಚಾಯತುಗಳ ಸಿಬ್ಬಂದಿಯನ್ನು ಪರಿಗಣನೆಗೆ ತೆಗೆದು ಕೊಂಡಿಲ್ಲ. ಮೀಸಲಾತಿ ನಿಯಮದಂತೆ ಮೊದಲ ಹುದ್ದೆಯನ್ನು ಪರಿಶಿಷ್ಟ ಜಾತಿ ಹಾಗೂ ಎರಡನೆಯ ಹುದ್ದೆಯನ್ನು ಪರಿಶಿಷ್ಟ ಪಂಗಡಕ್ಕೆ ನೀಡ ಬೇಕಿದೆ. ಬಳಿಕ ಉಳಿದ ಪಂಗಡಗಳಿಗೆ ಅವಕಾಶ ಕಲ್ಪಿಸ ಬೇಕು. ಈ ಸಂಬಂಧ ಕಾನೂನು ಹಿಂದಿನಿಂದಲೇ ಇದ್ದು, ಅದನ್ನು ಉಲ್ಲಂಘಿಸಲಾಗಿದೆ ಎಂದು ಉಪ ಕಾರ್ಯದರ್ಶಿ ಕೆ.ಶಿವರಾಮೇ ಗೌಡ ಸಭೆಗೆ ವಿವರಿಸಿದರು.
ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ ಮಾರ್ಗದರ್ಶಿ ಅಧಿಕಾರಿಯಾಗಿದ್ದಾರೆ. ಈ ವಿಷಯವನ್ನು ಅವರ ಗಮನಕ್ಕೆ ತರಲಾಗುವುದು ಎಂದು ಸಿಇಒ ನುಡಿದರು. ನಕ್ಸಲ್ ಭಾಧಿತ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ರೂ.5 ಕೋಟಿ ವಿಶೇಷ ಅನುದಾನ ನೀಡಲು ಒಪ್ಪಿರುವುದಾಗಿ ಎಂದು ಡಾ. ವಿಜಯಪ್ರಕಾಶ್ ತಿಳಿಸಿದರು.
2011-12ನೇ ಸಾಲಿನಲ್ಲಿ 30-54 ವಿಶೇಷ ಅನುದಾನದಡಿ ಕೈಗೆತ್ತಿಕೊಂಡಿರುವ 284 ಕೆಲಸಗಳ ಪೈಕಿ ಬಾಕಿ ಇರುವ ಕಾಮಗಾರಿಗಳನ್ನು ಮುಂದುವರಿಸ ಬಹುದಾಗಿದೆ. ಸರಕಾರ ಅನುದಾನ ಒದಗಿಸಲು ಒಪ್ಪಿದೆ ಎಂದು ಪ್ರಶ್ನೆಯೊದಕ್ಕೆ ಉತ್ತರಿಸಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾಯಕಾರಿ ಅಭಿಯಂತರರು ತಿಳಿಸಿದರು.
ಕಳೆದ ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕು.ನವ್ಯಾ ಶೆಟ್ಟಿ, ಕು.ಪಲ್ಲವಿ ಸುರತ್ಕಲ್, ಕು.ಸುಪ್ರೀತಾ ಮತ್ತು ಕನ್ನಡ ಮಾಧ್ಯಮದಿಂದ ಪ್ರಜ್ವಲ್ ಸನ್ಮಾನಿತರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಧನಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಈಶ್ವರ ಕಟೀಲ್, ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್, ಮುಖ್ಯ ಲೆಕ್ಕಾಧಿಕಾರಿ ಶೇಖ್ ಲತೀಫ್ ಸಭೆಯಲ್ಲಿ ಉಪಸ್ಥಿತರಿದ್ದರು.

Saturday, July 14, 2012

ಸಮಚಿತ್ತದಿಂದ ಸುದ್ದಿಯನ್ನು ಸ್ವೀಕರಿಸಿ: ಜಿಲ್ಲಾಧಿಕಾರಿ ಡಾ. ಎನ್. ಎಸ್. ಚನ್ನಪ್ಪಗೌಡ

ಮಂಗಳೂರು. ಜುಲೈ 14 : ಸಾರ್ವಜಿನಿಕ ಜೀವನದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅಧಿಕಾರಿಗಳಿಗೆ ಸಲಹೆ ಮಾಡಿದರು.
ವಾರ್ತಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಸಹಕಾರದಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ದೈನಂದಿನ ಚಟುವಟಿಕೆಗಳಿಗೆ ಮಾಧ್ಯಮಗಳು ಎಷ್ಟರಮಟ್ಟಿಗೆ ಸರ್ಕಾರವನ್ನು ಅವಲಂಬಿಸಿರುತ್ತವೆಯೋ ಅಷ್ಟರ ಮಟ್ಟಿಗೆ ಸರ್ಕಾರಗಳು ತಮ್ಮ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಲು ಮಾಧ್ಯಮಗಳನ್ನು ಅವಲಂಬಿಸಿರುತ್ತದೆ. ಮಾಧ್ಯಮ ಮತ್ತು ಇಲಾಖಾಧಿಕಾರಿಗಳು ಸಂವಹನ ಕೊರತೆ ನಿವಾರಿಸಿ ಕರ್ತವ್ಯ ನಿರ್ವಹಿಸುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮುದ್ರಣ ಮಾಧ್ಯಮದ ಕುರಿತು ಮಾತನಾಡಿದ ಅಜೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ಎ.ನಾರಾಯಣ ಅವರು, ಮಾಧ್ಯಮ ಒಂದು ಸಂಸ್ಥೆಯಲ್ಲ; ಅದೊಂದು ರಂಗ. ಹಾಗಾಗಿ ಅದು ಇಂತಹದೇ ರೀತಿಯಲ್ಲಿ ಇರಬೇಕು ಎಂದು ನಿರೀಕ್ಷಿಸಲಾಗದು. ಖಾಸಗಿಯಾಗಿದ್ದುಕೊಂಡು ಸಾರ್ವಜನಿಕ ಕೆಲಸ ಮಾಡುವ ರಂಗವದು ಎಂದರು.
ಪತ್ರಕರ್ತರಾಗಲು ಬೇಕಿರುವ ಅರ್ಹತೆಗಳು, ಅವರ ಕಾರ್ಯಶೈಲಿ, ಸಮಯಮಿತಿಯೊಳಗೆ ಕರ್ತವ್ಯ ನಿರ್ವಹಿಸಬೇಕಾದ ರೀತಿಗಳ ಬಗ್ಗೆ ಮಾಹಿತಿ ನೀಡಿದರು.
ಇಂದು ಪತ್ರಿಕೆಗಳ ಸಂಪಾದಕೀಯ ಪುಟಗಳು ಮತ್ತು ಇತರ ಪುಟಗಳಿಗೂ ವ್ಯತ್ಯಾಸ ಕಡಿಮೆಯಾಗುತ್ತಿರುವುದಾಗಿ ಅಭಿಪ್ರಾಯ ಪಟ್ಟ ನಾರಾಯಣ್, ಜವಾಬ್ದಾರಿಯರಿತು ಕರ್ತವ್ಯ ನಿರ್ವಹಿಸುವುದರಿಂದ ಆಗಬಹುದಾದ ಅನುಕೂಲಗಳನ್ನು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಅನಿವಾರ್ಯತೆ ಹಾಗೂ ಕಾಲದೊಂದಿಗೆ ಓಡುವ ಓಟದಿಂದಾಗಿ ಹಲವು ವೇಳೆ ತಪ್ಪುಗಳಾದರೂ, ಸಮಾಜಕ್ಕೆ ಒಳಿತಾದ, ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಘಟನೆಗಳನ್ನು ಟಿವಿ9 ಹಿರಿಯ ನಿರ್ಮಾಪಕ ಶಿವಪ್ರಸಾದ್ ಟಿ.ಆರ್ ಅವರು ಹೇಳಿದರು.
ದೃಶ್ಯ ಮಾಧ್ಯಮಗಳು ಇನ್ನೂಶೈಶಾವವಸ್ಥೆಯಲ್ಲಿರುವುದರಂದ ಸುದ್ದಿ ಕುರಿತಾದ ಒಂದಷ್ಟು ಗೊಂದಲಗಳು ಇನ್ನೂ ಮುಂದುವರಿದಿವೆ. ಮುಂದಿನ ದಿನಗಳಲ್ಲಿ ಅವು ಸರಿಹೋಗಲಿದೆ. ಜತೆಗೆ ದೃಶ್ಯ ಮಾಧ್ಯಮಗಳು ಋಣಾತ್ಮಕ ವಿಷಯಗಳನ್ನೇ ವರದಿ ಮಾಡುತ್ತವೆ ಎಂಬ ಅಭಿಪ್ರಾಯ ಜನರಲ್ಲಿದೆ; ಅದು ತಪ್ಪು. ಇಂತಹ ಅನೇಕ ವರದಿಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಉದಾಹರಣೆಗಳೊಂದಿಗೆ ಶಿವಪ್ರಸಾದ್ ವಿವರಿಸಿದರು.
ಡೆಕ್ಕನ್ ಹೆರಾಲ್ಡ್ ಮಂಗಳೂರು ಆವೃತ್ತಿಯ ಮುಖ್ಯಸ್ಥ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರು ಪ್ರತಿಕ್ರಿಯೆ ನುಡಿಯಲ್ಲಿ, ಜಿಲ್ಲಾ ಮಟ್ಟದಲ್ಲಿ ಪತ್ರಿಕೆ ಕಾರ್ಯನಿರ್ವಹಿಸುತ್ತಿರುವಾಗಿನ ಅನುಭವಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್.ವಿಜಯ ಪ್ರಕಾಶ್ ಮಾತನಾಡಿ, ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಕೆಲವೊಂದು ವರದಿಗಳು ಅಧಿಕಾರಿಗಳಿಗೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡುತ್ತವೆ ಎಂದರು. ದಕ್ಷಿಣ ಕನ್ನಡದಲ್ಲಿ ಅಂತಹ ಉತ್ತಮ ವಾತಾವರಣವಿದೆ ಎಂದರು.
ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಂವಾದದಲ್ಲಿ ಪಾಲ್ಗೊಂಡರು. ಜಿಲ್ಲಾ ವಾರ್ತಾಧಿಕಾರಿ ಕೆ.ರೋಹಿಣಿ ಸ್ವಾಗತಿಸಿ, ವಂದಿಸಿದರು.