Tuesday, July 3, 2012

ಜಿಲ್ಲೆಯ ಶಾಲೆಗಳಲ್ಲಿ `ಶಾಲೆಗಾಗಿ ನಾವು ನೀವು'

ಮಂಗಳೂರು, ಜು.3: ಎಲ್ಲ ಮಕ್ಕಳಿಗೂ ಕಡ್ಡಾಯ ಶಿಕ್ಷಣ ಹಾಗೂ ಸರ್ಕಾರಿ ಶಾಲೆಗಳ ಕಾರ್ಯವೈಖರಿಯ ಬಗ್ಗೆ ಅರಿಯಲು ಎಲ್ಲರೂ ನಮ್ಮ ಶಾಲೆ ಎಂದು ಪಾಲ್ಗೊಳ್ಳಲು ಜುಲೈ5ರಂದು ಸರಕಾರಿ ಶಾಲೆಗಳಲ್ಲಿ ನಡೆಯಲಿರುವ ಶಾಲೆಗಾಗಿ ನಾವು ನೀವು ಕಾರ್ಯಕ್ರಮವು ದ.ಕ. ಜಿಲ್ಲೆಯ 932 ಪ್ರಾಥಮಿಕ ಹಾಗೂ 160 ಪ್ರೌಢಶಾಲೆಗಳಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಶೈಲಜಾ ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಎಲ್ಲಾ ಶಾಲೆಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಬಲ್ಮಠದ ಸರಕಾರಿ ಪ್ರೌಢಶಾಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಅತ್ತಾವರ ಸ.ಹಿ.ಪ್ರಾ. ಶಾಲೆಯಲ್ಲಿ ಶಾಸಕ ಯೋಗೀಶ್ ಭಟ್, ಕೃಷ್ಣಾಪುರ -5 ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶಾಸಕ ಕೃಷ್ಣ ಜೆ. ಪಾಲೆಮಾರ್, ಕೊಣಾಜೆ ಪದವು ಸ.ಹಿ.ಪ್ರಾ. ಶಾಲೆಯಲ್ಲಿ ಶಾಸಕ ಯು.ಟಿ.ಖಾದರ್, ಮುಲ್ಲಕಾಡು ಸ.ಹಿ.ಪ್ರಾ. ಶಾಲೆಯಲ್ಲಿ ಜಿಲ್ಲಾಧಿಕಾರಿ ಚನ್ನಪ್ಪ ಗೌಡ, ಗಾಂಧಿನಗರ ಸ.ಹಿ.ಪ್ರಾ. ಶಾಲೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್. ವಿಜಯಪ್ರಕಾಶ್ ಸೇರಿದಂತೆ ವಿವಿಧ ಶಾಲೆಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಜು.6ರಿಂದ 31ರವರೆಗೆ ಎಲ್ಲಾ ಹಂತದ ಅಧಿಕಾರಿಗಳ ತಂಡದಿಂದ ಶಾಲೆಗಳ ಸಂಕ್ಷಿಪ್ತ ಮೌಲ್ಯಮಾಪನ ನಡೆಯಲಿದೆ. ಪ್ರಾಥಮಿಕ ಶಾಲೆಗಳ ಮೌಲ್ಯಮಾಪನದಲ್ಲಿ ಬ್ಲಾಕ್ನ 47 ತಂಡಗಳು ಹಾಗೂ ಪ್ರೌಢಶಾಲೆಗಳ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 8 ಜಿಲ್ಲಾ ತಂಡಗಳು ಭಾಗವಹಿಸಲಿವೆ ಎಂದು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯ ಪ್ರಕಾಶ್ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಸಮುದಾಯ ಹಾಗೂ ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ನಿಟ್ಟಿನಲ್ಲಿ ಜಾಥಾ, ಮಕ್ಕಳ ಶಿಕ್ಷಣ ಕಾಯಿದೆಯ ಮುಖ್ಯ ಅಂಶಗಳಿಗೆ ಬಗ್ಗೆ ಶಾಲೆಗಳಲ್ಲಿ ವಸ್ತು ಸ್ಥಿತಿಯನ್ನು ತಿಳಿಸುವಂತಹ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗ್ರಾಮ ಪಂಚಾಯತ್ಗಳು ಶ್ವೇತ ಪತ್ರ ಮಂಡಿಸುವುದು, ಕೈಪಿಡಿ ಪ್ರಕಟಣೆ, ಶಿಕ್ಷಣ ಹಕ್ಕು ಮಾಹಿತಿ ಗೋಡೆ, ಪ್ರತಿಜ್ಞೆ ಸ್ವೀಕಾರ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ರೈ ಮೇನಾಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಸೆಸ್ ಜಯಶೇಖರ್, ಡಯಟ್ ಉಪನಿರ್ದೇಶಕ ಪಾಲಾಕ್ಷಪ್ಪ, ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಶಿವಪ್ರಕಾಶ್, ಜಿಲ್ಲಾ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಗೀತಾ ಕೆ., ಅಕ್ಷರ ದಾಸೋಹ ಅಧಿಕಾರಿ ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.