Sunday, July 29, 2012

ಶಾಂತಿ ಸುವ್ಯವಸ್ಥೆಗೆ ಆದ್ಯತೆ: ಸಚಿವ ಸಿ ಟಿ ರವಿ

ಮಂಗಳೂರು, ಜುಲೈ 29: ನಗರದ ಪಡೀಲಿನಲ್ಲಿ ನಿನ್ನೆ ನಡೆದ ಹೋಂ ಸ್ಟೇ ಘಟನೆ ಹೇಯವಾಗಿದ್ದು, ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಕಾನೂನು ಪ್ರಕಾರ ನೀಡಲು ಬದ್ಧ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಅವರು ಹೇಳಿದರು.
ಅವರಿಂದು ಮಂಗಳೂರಿಗೆ ಆಗಮಿಸಿ ಪರಿಸ್ಥಿತಿಗೆ ಸಂಬಂಧಿಸಿದಂತೆ ಉಪಸಭಾಪತಿಗಳು ಹಾಗೂ ಸಂಸದರು,ಎಡಿಜಿಪಿ ಬಿಪಿನ್ ಗೋಪಾಲ್ ಕೃಷ್ಣ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠರೊಂದಿಗೆ ಚರ್ಚೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಶಾಂತಿ ಸಹಬಾಳ್ವೆಗೆ ಆದ್ಯತೆ ನೀಡಲಾಗುವುದು. ಸಾಮಾಜಿಕ ಸುಸ್ಥಿತಿಯನ್ನು ಹಾಳುಗೆಡಹುವ, ಕಾನೂನನ್ನು ಕೈಗೆತ್ತಿಕೊಳ್ಳುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು; ರಾಜ್ಯದಲ್ಲಿ ತಾಲಿಬಾನಿ ಸಂಸ್ಕೃತಿಗೆ ಅವಕಾಶವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಮುಂಜಾಗೃತ ಕ್ರಮವಾಗಿ ಸಾಕಷ್ಟು ಪೋಲಿಸರನ್ನು ನಗರದಲ್ಲಿ ನಿಯೋಜಿಸಲಾಗಿದೆ. ಇನ್ನೂ ಹೆಚ್ಚಿನ ನೆರವು ಬೇಕಾದರೇ ನೀಡಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಪೋಲಿಸ್ ವರಿಷ್ಟರಿಗೆ ಸೂಚನೆ ನೀಡಲಾಗಿದೆ. ಇದೇ ರೀತಿ ಕಾನೂನು ಬಾಹಿರವಾಗಿ, ಯಾವುದೇ ಅನುಮತಿ ಇಲ್ಲದೇ ಹೋಂ ಸ್ಟೇ ಗಳನ್ನು ನಿರ್ಮಾಣ ಮಾಡುವವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ನುಡಿದರು.
ಪತ್ರಿಕಾಗೋಷ್ಠಿಯ ವೇಳೆ ಉಪಸಭಾಪತಿ ಎನ್ ಯೋಗೀಶ್ ಭಟ್, ಸಂಸದರಾದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.