Friday, July 20, 2012

ಬದುಕುವ ಹಕ್ಕು ಪ್ರತಿಪಾದಿಸಿದ ಮಾನವ ಹಕ್ಕು ಆಯೋಗ: ನಾಡೋಜ ಎಸ್. ಆರ್. ನಾಯಕ್

ಮಂಗಳೂರು, ಜುಲೈ 20: ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗವು ಜನಸಾಮಾನ್ಯರ ಬದುಕುವ ಹಕ್ಕಿಗಾಗಿ ಸಾಕಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ ಇದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಹೇಳಿದ್ದಾರೆ.
ಜುಲೈ 25ರಂದು ಆಯೋಗದ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಲಿರುವ ನ್ಯಾಯಮೂರ್ತಿ ಡಾ. ನಾಯಕ್ ಅವರಿಂದು ಮಂಗಳೂರಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಶ್ಚಿಮ ವಲಯ ಐಜಿಪಿ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ದೇಶದಲ್ಲಿ ಮಾನವ ಹಕ್ಕುಗಳನ್ನು ಹೊಂದಿರುವ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮ ಎಂದ ಅವರು, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಸರ್ವಧರ್ಮ, ಭಾಷೆಗಳನ್ನೊಳಗೊಂಡ ಉತ್ತಮ ಜಿಲ್ಲೆ ಎಂದರು. ತಮ್ಮ ಕಾರ್ಯಾವಧಿಯಲ್ಲಿ ರಾಜ್ಯದಲ್ಲಿ 36,000 ದಷ್ಟು ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಅದರಲ್ಲಿ 24,000 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಉಳಿದವು ವಿಚಾರಣೆಯ ವಿವಿಧ ಹಂತದಲ್ಲಿವೆ. ದ.ಕ. ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 1643 ಪ್ರಕರಣಗಳು ದಾಖಲಾಗಿದ್ದು, 974 ಪ್ರಕರಣಗಳು ಇತ್ಯಥವಾಗಿವೆ. 669 ಪ್ರಕರಣಗಳು ಬಾಕಿ ಉಳಿದಿವೆ.ಲ 6500ಕ್ಕೂ ಅಧಿಕ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವುದಾಗಿ ಅವರು ಹೇಳಿದರು. ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಎಸ್ ಪಿ ಅಭಿಷೇಕ್ ಗೋಯಲ್, ಡಿಸಿಪಿ ಮುತ್ತೂರಾಯರು ಉಪಸ್ಥಿತರಿದ್ದರು.

ಳಿಕ ಜಿಲ್ಲಾಡಳಿತದ ವತಿಯಿಂದ ನೀಡಲಾದ ಆತ್ಮೀಯ ಬೀಳ್ಕೊಡುಗೆಯನ್ನು ಸ್ವೀಕರಿಸಿದ ಮಾತನಾಡಿದ ನ್ಯಾಯಮೂರ್ತಿ ಎಸ್ ಆರ್ ನಾಯಕ್ ಅವರು, ಸಾಮಾಜಿಕ ಹಾಗೂ ಸಾರ್ವಜನಿಕ ಜೀವನದಿಂದ ನಿವೃತ್ತಿ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಅಧಿಕಾರಿಗಳು ಸಾರ್ವಜನಿಕ ಸೇವೆ ನೀಡುವ ಸಂದರ್ಭದಲ್ಲಿ ಜನಪರವಾಗಿ ಕರ್ತವ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿರುವ ಸಮಯದಲ್ಲಿ ಸಾಮಾನ್ಯ ಜನರ ಪರವಾಗಿದ್ದ ನಿಲುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.