Thursday, April 30, 2009

ದ. ಕ. ಜಿಲ್ಲೆಯಲ್ಲಿ 74.28% ಮತದಾನ


ಮಂಗಳೂರು, ಏ. 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏ. 30ರಂದು ನಡೆದ ಮತದಾನ ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ನಡೆದಿದ್ದು, ಶೇ. 74.28ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.


ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಯಾವುದೇ ತಾಂತ್ರಿಕ ತೊಂದರೆಗಳಿಲ್ಲದೆ ಚುನಾವಣೆ ಯಶಸ್ವಿಯಾಗಿ ನಡೆದಿದ್ದು, ಮತದಾನದ ಪ್ರಮಾಣ ಹೆಚ್ಚಿದೆ ಎಂದು ವಿವರಿಸಿದರು. ಸುಳ್ಯದಲ್ಲಿ ಅತಿ ಹೆಚ್ಚು ಮತದಾನ ಶೇ. 79 ದಾಖಲಿಸಿದ್ದು, ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 68% ಮತದಾನವಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಮತದಾರರು ನಿರ್ಭೀತಿಯಿಂದ ಮತಚಲಾಯಿಸಿದ್ದು, 75% ಮತದಾನ ದಾಖಲಾಗಿದೆ. ಎಳನೀರಿನಂತಹ ಪ್ರದೇಶದಲ್ಲಿ % 50 ಮತದಾನವಾಗಿದೆ. ಪುತ್ತೂರಿನಲ್ಲಿ 78% ಮತದಾನವಾಗಿದೆ.


ಮತದಾನದ ಬಗ್ಗೆ ಮಾಹಿತಿಗಾಗಿ ಏರ್ಪಡಿಸಲಾಗಿದ್ದ ಆನ್ ಲೈನ್ ಅಪ್ ಲಿಂಕಿಂಗ್ ವ್ಯವಸ್ಥೆ ಸಂಪೂರ್ಣ ಯಶಸ್ವಿಯಾಗಿದ್ದು, ಸಂಪರ್ಕ ಜಾಲ ವ್ಯವಸ್ಥೆ ಯಶಸ್ಸಿನ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಚುನಾವಣೆಯ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಜಿಲ್ಲಾಧಿಕಾರಿಗಳು ಕೃತಜ್ಞತೆ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ನಗರಪಾಲಿಕೆ ಆಯುಕ್ತ ಸಮೀರ್ ಶುಕ್ಲಾ, ಐ ಎ ಎಸ್ (ಪ್ರೊಬೇಷನರ್ ಡಾ. ತ್ರಿಲೋಕ ಚಂದ್ರ ಉಪಸ್ಥಿತರಿದ್ದರು.

ಪೊಲೀಸ್ ಬಂದೋಬಸ್ತ್ ನಲ್ಲಿ ಮತದಾನ



ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮತದಾನ

ನಕ್ಸಲ್ ಪೀಡಿತ ಪ್ರದೇಶದಲ್ಲಿ ಶಾಂತಿಯುತ ಮತದಾನ


ಮಂಗಳೂರು, ಏ. 30: ನಕ್ಸಲ್ ಪೀಡಿತ ಪ್ರದೇಶಗಳಾದ ಬೆಳ್ತಂಗಡಿ ತಾಲೂಕಿನ ಕತ್ಲೂರು, ಸುಲ್ಕೇರಿ, ನಾರಾವಿಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

Wednesday, April 29, 2009

ಖಾಸಗಿ ಮತ್ತು ಕೆಎಸ್ ಆರ್ ಟಿಸಿಯವರ ಗಮನಕ್ಕೆ

ಮಂಗಳೂರು, ಏ.29: ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ಸುಗಳು ದಿ. 30ರಂದು ತಮ್ಮ ಕೊನೆಯ ಟ್ರಿಪ್ ನ್ನು ರಾತ್ರಿ 11.30ಕ್ಕೆ ಹೊರಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೂ ಆಗಿರುವ ಶ್ರಿ ವಿ. ಪೊನ್ನುರಾಜ್ ಆದೇಶಿಸಿದ್ದಾರೆ.

ಚುನಾವಣೆಗೆ ಸಜ್ಜು




ದ.ಕ. ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಸಜ್ಜುಗೊಂಡ ಸಿಬ್ಬಂದಿಗಳು

ಮತದಾರರ ಪಟ್ಟಿಗೆ 31,435 ಹೆಸರು ಸೇರ್ಪಡೆ

ಮಂಗಳೂರು, ಏ.29: ದಕ್ಷಿಣ ಕನ್ನಡ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 13,63,651 ಮತದಾರರಿದ್ದು, ಇವರಲ್ಲಿ 6,72,393 ಪುರುಷರು ಮತ್ತು 6,91,258 ಮಹಿಳೆಯರಿದ್ದಾರೆ.
ಬೆಳ್ತಂಗಡಿಯಲ್ಲಿ 1,78.202 ಒಟ್ಟು ಮತದಾರರಿದ್ದು, ಇವರಲ್ಲಿ 90,363 ಪುರುಷರು, 87,839 ಮಹಿಳೆಯರಿದ್ದಾರೆ. ಮೂಡಬಿದ್ರೆ ಕ್ಷೇತ್ರದಲ್ಲಿ ಒಟ್ಟು 1,53,842 ಒಟ್ಟು ಮತದಾರರಿದ್ದು, ಇವರಲ್ಲಿ 72,264 ಪುರುಷರು, 81,578 ಮಹಿಳಾ ಮತದಾರರಿದ್ದಾರೆ. ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಒಟ್ಟು 1,84,428 ಮತದಾರರಿದ್ದು, ಇವರಲ್ಲಿ ಪುರುಷ ಮತದಾರರು 89,449 ಮಹಿಳೆಯರು 94,979. ಮಂಗಳೂರು ದಕ್ಷಿಣದಲ್ಲಿ 1,90,952 ಅರ್ಹ ಮತದಾರರಿದ್ದು, ಇವರಲ್ಲಿ ಪುರುಷರು 91,148 , 99,804 ಮಹಿಳಾ ಮತದಾರರಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ಒಟ್ಟು 1,45,715 ಮತದಾರರಿದ್ದು, ಇವರಲ್ಲಿ 71,207 ಪುರುಷರು, 74,508 ಮಹಿಳೆಯರು. ಬಂಟ್ವಾಳ ಕ್ಷೇತ್ರದಲ್ಲಿ 1,79,057 ಮತದಾರರಿದ್ದು, 89,695 ಪುರುಷರು, 89,362 ಮಹಿಳೆಯರು. ಪುತ್ತೂರು ಕ್ಷೇತ್ರದಲ್ಲಿ 1,65,034 ಮತದಾರರು, 83,950 ಪುರುಷರು, 81,084 ಮಹಿಳಾ ಮತದಾರರಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಒಟ್ಟು 1,66, 421 ಮತದಾರರಿದ್ದು, ಇವರಲ್ಲಿ 84,317 ಪುರುಷರು, 82,104 ಮಹಿಳೆಯರು. ಒಟ್ಟು 13,63,651 ಅರ್ಹ ಮತದಾರರಿದ್ದು, ಇವರಲ್ಲಿ 6,72,393 ಪುರುಷ ಮತದಾರರು ಮತ್ತು 6,91,258 ಮಹಿಳಾ ಮತದಾರರು ಈ ಸಾಲಿನಲ್ಲಿ ಮತದಾನ ಮಾಡಲಿರುವರು. ಜಿಲ್ಲೆಯಲ್ಲಿ 18,865 ಮಹಿಳಾ ಮತದಾರರು ಪುರುಷರಿಗಿಂತ ಆಧಿಕ ಸಂಖ್ಯೆಯಲ್ಲಿದ್ದು, ನಾಳೆ ತಮ್ಮ ಹಕ್ಕನ್ನು ಚಲಾಯಿಸಲಿರುವರು.

Tuesday, April 28, 2009

ಚುನಾವಣಾ ಮಾಹಿತಿಗೆ 155212

ಮಂಗಳೂರು, ಏ. 28: ಚುನಾವಣಾ ಮಾಹಿತಿಗಾಗಿ ದ. ಕ. ಜಿಲ್ಲಾಡಳಿತ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಉಚಿತ ಕರೆ ನಂಬರ್ 155212ವನ್ನು ಸಾರ್ವಜನಿಕರು ಸಂಪರ್ಕಿಸಬಹುದು. ದೂರು ನೀಡಲು ಎಸ್ ಎಂ ಎಸ್ 9886666100 ಅಥವಾ 100 ಕ್ಕೆ ಕರೆ ಮಾಡಬಹುದು.

ನಕ್ಷಲ್ ಪೀಡಿತ ಪ್ರದೇಶಗಳಲ್ಲಿ ನಿರ್ಬೀತ ಮತದಾನಕ್ಕೆ ಪೊಲೀಸ್ ಇಲಾಖೆ ಸಜ್ಜು


ಮಂಗಳೂರು, ಏ. 28: ರಾಜ್ಯದ ಮೂರು ಜಿಲ್ಲೆಗಳ ನಕ್ಸಲ್ ಪೀಡಿತ 81 ಹಳ್ಳಿಗಳಲ್ಲಿ ನಿರ್ಬೀತ ಮತದಾನಕ್ಕೆ ಸೂಕ್ತ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಹಾಗೂ ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥ ಗೋಪಾಲ್ ಹೊಸೂರ್ ಹೇಳಿದ್ದಾರೆ.

ನಕ್ಸಲರ ಚಟುವಟಿಕೆ ಇರುವ ದ. ಕ. , ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನಕ್ಕೆ ಪೊಲೀಸರು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, ಎರಡು ಲೋಕಸಭಾ ಕ್ಷೇತ್ರಗಳ 8ತಾಲೂಕುಗಳ 81 ಹಳ್ಳಿಗಳಲ್ಲಿ 162 ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ ಕೈಗೊಳ್ಳಲಾಗಿದ್ದು, ಹೈಟೆಕ್ ಕ್ಯಾಮರಾಗಳನ್ನುಮತ್ತು ಥರ್ಮಲ್ ಇಮೇಜರಗಳನ್ನು ಅಳವಡಿಸಲಾಗಿದೆ.

ಕಳೆದ ಒಂದು ವಾರದಲ್ಲಿ 35 ನಕ್ಸಲ್ ಬೆಂಬಲಿಗರನ್ನು ಬಂಧಿಸಲಾಗಿದ್ದು, 2002ರಿಂದ ಇಂದಿನವರೆಗೆ 100 ಪ್ರಕರಣಗಳನ್ನು ದಾಖಲಿಸಲಾಗಿದ್ದು, ವೈದ್ಯಕೀಯ ತಂಡ ಮತ್ತು ಹೆಚ್ಚುವರಿ ಮತಗಟ್ಟೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಹೊಸೂರು ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಎಸ್ ಪಿ ಡಾ. ಸುಬ್ರಮಣ್ಯೇಶ್ವರ ರಾವ್, ಎಎಸ್ ಪಿ ಆರ್. ದಿಲೀಪ್, ಡಿವೈಎಸ್ ಪಿ ಹರೀಶ್ಚಂದ್ರ ಉಪಸ್ಥಿತರಿದ್ದರು.

ಎರಡೆರಡು ಗುರುತಿನ ಚೀಟಿ: ಕ್ರಿಮಿನಲ್ ಮೊಕದ್ದಮೆ ದಾಖಲು

ಮಂಗಳೂರು, ಏ. 28: ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಕೃಷ್ಣಪ್ಪ ಎಂಬವರ ಮಕ್ಕಳಾದ ಚೇತನ್ ಮತ್ತು ಜತಿನ್ ಎಂಬವರು ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ -23 ಮತ್ತು 55 ರಲ್ಲಿ ಎರಡೆರಡು ಗುರುತಿನ ಚೀಟಿಯನ್ನು ಪಡೆದುಕೊಂಡಿರುವುದು ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ಬಂದಿದ್ದು, ಇವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ.
ಮತದಾರರ ಪಟ್ಟಿಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ದಾಖಲಿಸಿದ್ದರೆ ಅಥವಾ ಎರಡೆರಡು ಕಡೆ ಮತದಾನ ಮಾಡಿದರೆ ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಚುನಾವಣಾ ಕರ್ತವ್ಯ ನಿರ್ಲಕ್ಷ್ಯ: ಅಮಾನತು

ಮಂಗಳೂರು, ಏ. 28: ಮಂಗಳೂರು ಗ್ರಾಮಾಂತರದ ಶಿಶು ಅಭಿವೃದ್ಧಿ ಅಧಿಕಾರಿ ಸಿ. ಪಿ. ರವೀಂದ್ರ ಅವರು ತಮ್ಮ ಅಧೀನ ಅಧಿಕಾರಿಯವರಿಗೆ ಚುನಾವಣಾ ಕರ್ತವ್ಯವನ್ನು ಆದ್ಯತಾ ನೆಲೆಯಲ್ಲಿ ನಿರ್ವಹಿಸದಿರುವಂತೆ ನಿರ್ದೇಶಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರ ಶಿಫಾರಸ್ಸಿನ ಮೇರೆಗೆ 24.4.09ರಿಂದ ಅವರ ಸೇವೆಯನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

Monday, April 27, 2009

ಚುನಾವಣಾ ಕರ್ತವ್ಯಕ್ಕೆ ವಾಹನ ಸೌಲಭ್ಯ

ಮಂಗಳೂರು, ಏ. 27: ಲೋಕಸಭಾ ಚುನಾವಣೆ -2009 ರ ಚುನಾವಣಾ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳ ಪ್ರಯಾಣಕ್ಕಾಗಿ ಮಂಗಳೂರು ನೆಹರೂ ಮೈದಾನದಿಂದ ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿಗಳಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಏ. 29ರ ಬೆ. 5.30ಕ್ಕೆ ಮಂಗಳೂರಿನ ನೆಹರೂ ಮೈದಾನದಿಂದ ಬಸ್ಸುಗಳು ಹೊರಡಲಿದ್ದು, ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಮಸ್ಟರಿಂಗ್ ಕೇಂದ್ರಗಳಿಗೆ ಪ್ರಯಾಣಿಸಲು ಈ ಸೌಲಭ್ಯ ಬಳಸಿಕೊಳ್ಳುವಂತೆ ಮೂಡಬಿದ್ರೆ ಸಹಾಯಕ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊರಗಿನವರು ಕ್ಷೇತ್ರ ಬಿಟ್ಟು ಹೋಗಲು ಜಲ್ಲಾಧಿಕಾರಿ ಸೂಚನೆ

ಮಂಗಳೂರು, ಏ. 27: ಏಪ್ರಿಲ್ 30ರಂದು ನಡೆಯಲಿರುವ ಚುನಾವಣೆಯ 48 ಗಂಟೆ ಮೊದಲು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಟ್ಟು ತೆರಳುವಂತೆ ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಅವರು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಏಪ್ರಿಲ್ 28ರ ಸಂಜೆ 5 ಗಂಟೆಯಿಂದ ಜಿಲ್ಲೆಯಲ್ಲಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಮನೆ ಮನೆ ಪ್ರಚಾರಕ್ಕೆ ಅವಕಾಶವಿದ್ದು, 4ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ. ಕ್ಷೇತ್ರದ ಹೊರಗಿನವರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸುವುದು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂಬಂಧ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಿರ್ಭೀತ ಮತದಾನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 11,500 ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಈಗಾಗಲೇ ಮೂರು ಹಂತದ ತರಬೇತಿಯನ್ನು ಪೂರ್ಣಗೊಳಿಸಲಾಗಿದೆ. ಮೈಕ್ರೊ ಅಬ್ಸರ್ವರ್ಸ್ ಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಏ. 29ರಂದು ಚುನಾವಣಾ ವೀಕ್ಷಕರು ಇವರಿಗೆ ಮತ್ತೊಮ್ಮೆ ಮಾರ್ಗದರ್ಶನ ನೀಡಲಿದ್ದಾರೆ.
ನಕ್ಸಲ್್ ಪೀಡಿತ ಪ್ರದೇಶದ 22 ಮತಗಟ್ಟೆಗಳಲ್ಲಿ ಚುನಾವಣಾ ಆಯೋಗದ ಅನುಮತಿಯೊಂದಿಗೆ ಪುರುಷ ಸಿಬ್ಬಂದಿಯನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 328 ವಿಡಿಯೋಕ್ಯಾಮರಾ ಅಳವಡಿಸಲಾಗಿದ್ದು, 486 ಮೈಕ್ರೋ ಅಬ್ಸರ್ವರ್ಸ್ ಜಾಗೃತರಾಗಿ ಕಾರ್ಯನಿರ್ವಹಿಸಲಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಹೆಚ್ಚುವರಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ಹೆಚ್ಚುವರಿ ಸಿಬ್ಬಂದಿ ಸನ್ನದ್ಧರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ದೂರು ಸಲ್ಲಿಸಲು ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 155212ಗೆ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್:
ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಲಾಗಿರುವ ಬೆಳ್ತಂಗಡಿಗೆ ಆಂಧ್ರದ ವಿಶೇಷ ಪೊಲೀಸ್ ತಂಡ ಮತ್ತು ಸಿಆರ್ ಪಿ ಎಫ್ ತಂಡವನ್ನು ನಿಯೋಜಿಸಲಾಗಿದೆ. ಉಳ್ಳಾಲ ಮತ್ತು ಬಂಟ್ವಾಳಕ್ಕೆ ಕೇರಳದ ವಿಶೇಷ ಪೊಲೀಸ್ ತಂಡ ನಿಯೋಜಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಸುಬ್ರಹ್ಮಣ್ಯ ರಾವ್ ತಿಳಿಸಿದ್ದಾರೆ.
ಸಂವಹನ ಯೋಜನೆಯಡಿ ಪ್ರತ್ಯೇಕ 8 ಸಂಪರ್ಕ ಜಾಲ ಮತ್ತು ಜಿಲ್ಲಾ ಕೇಂದ್ರದಲ್ಲಿ ಮುಖ್ಯ ಸಂಪರ್ಕ ಜಾಲವನ್ನು ಸ್ಥಾಪಿಸಲಾಗಿದ್ದು, 9886666100 ಎಸ್ ಎಂ ಎಸ್ ಸೇವೆಯನ್ನು ಕಲ್ಪಿಸಲಾಗಿದೆ.
ಚುನಾವಣಾ ಕರ್ತವ್ಯಕ್ಕೆ ವಾಹನಗಳನ್ನು ಉಪಯೋಗಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಖಾಸಗಿಯವರಿಂದ ವಾಹನಗಳನ್ನು ಒದಗಿಸುವಂತೆ ಕೋರಿದ್ದು, ನಿರಾಕರಿಸಿದರೆ ಆರ್ ಪಿ ಎ ಕಾಯ್ದೆಯನ್ವಯ ಕ್ರಮಕೈಗೊಳ್ಳಲಾಗುವುದೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮತದಾರರನ್ನು ವಾಹನಗಳಲ್ಲಿ ಕರೆದೊಯ್ಯುವುದು ಪತ್ತೆಯಾದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕುವ ಬಗ್ಗೆಯೂ ಎಚ್ಚರಿಕೆ ನೀಡಲಾಯಿತು.

Saturday, April 25, 2009

ಕೆಎಸ್ಆರ್ ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ


ಮಂಗಳೂರು, ಏ.25: ಕರಾರಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಏ. 30ರಂದು ನಡೆಯುವ ಚುನಾವಣಾ ಕಾರ್ಯಗಳಿಗೆ ಹಾಗೂ ಪೊಲೀಸ್ ಬಂದೋಬಸ್ತ್ ಗಾಗಿ ಬಸ್ಸುಗಳನ್ನು ನಿಯೋಜಿಸಲಾಗಿದ್ದು, ಏ. 28,29, 30 ಹಾಗೂ ಮೇ 1ರಂದು ಸಂಸ್ಥೆಯ ವಾಹನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಬಹುದಾಗಿದ್ದು, ಸಾರ್ವಜನಿಕರ ಸಹಕಾರ ಕೋರಲಾಗಿದೆ.

Friday, April 24, 2009

ವೇತನಸಹಿತ ರಜೆ

ಮಂಗಳೂರು,ಏ. 24: ಸಾರ್ವತ್ರಿಕ ಚುನಾವಣೆ ದಿನದಂದು (30.4.09) ಕಾರ್ಖಾನೆಗಳಲ್ಲಿ, ಕೈಗಾರಿಕಾ ಸಂಸ್ಥೆಗಳಲ್ಲಿ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕರ್ನಾಟಕ ಔದ್ಯಮಿಕ ಸಂಸ್ಥೆಗಳ ಕಾಯ್ದೆಯಡಿ ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.

ಸುಗಮ ಮತದಾನಕ್ಕೆ ಸಮಗ್ರ ಸಂಪರ್ಕ ಮಾಹಿತಿ ಕೇಂದ್ರ



ಮಂಗಳೂರು, ಏ.24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 30ರಂದು ನಡೆಯಲಿರುವ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಸುವ್ಯವಸ್ಥಿತವಾಗಿ ನಡೆಯಲು ಸಮಗ್ರ ಚುನಾವಣಾ ಪ್ರಕ್ರಿಯೆ ನಿರ್ವಹಣೆ ವ್ಯವಸ್ಥೆ ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಸಮಗ್ರ ಸಂಪರ್ಕ ಜಾಲವನ್ನು ರೂಪಿಸಲಾಗಿದ್ದು, ಚುನಾವಣಾ ಪ್ರಕ್ರಿಯೆ ನಿರ್ವಹಣೆ ಸಂಬಂಧ ಸಮಸ್ಯೆಗಳ ನಿವಾರಣೆಗೆ ಆದ್ಯತೆಯನ್ನು ನೀಡಲಾಗುವುದು ಎಂದ ಅವರು, 1,518 ಮತಗಟ್ಟೆಗಳೊಂದಿಗೆ ನೇರಸಂಪರ್ಕವನ್ನು ಇರಿಸಿಕೊಳ್ಳಲಾಗಿದ್ದು, ಸಮಸ್ಯೆಗಳ ತುರ್ತು ಪರಿಹಾರಕ್ಕೆ ಹಾಗೂ ಸಂವಹನಕ್ಕೆ ಕೊರತೆಯಾಗದಂತೆ ಸರ್ವ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಮಾಹಿತಿ ಸಂಪರ್ಕ ಕೇಂದ್ರದಲ್ಲಿ 8ಸ್ಥಿರ ದೂರವಾಣಿ ಲೈನ್, 4 ಮೊಬೈಲ್ ಲೈನ್, ಡಬ್ಲ್ಯು ಎಲ್ ಎಲ್ ಮತ್ತು 2 ಹೆಚ್ಚುವರಿ ಸಂಪರ್ಕಗಳನ್ನು ಹೊಂದಲಾಗಿದ್ದು, ಈ ಸಂಬಂಧ ಬಿ ಎಸ್ ಎನ್ ಎಲ್, ಟಾಟಾ ಇಂಡಿಕಾಮ್ ಮತ್ತು ರಿಲಯನ್ಸ್ ಜೊತೆ ಸಂಪರ್ಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಗಂಟೆಗೊಮ್ಮೆ ಚುನಾವಣಾ ಪ್ರಕ್ರಿಯೆ ಬಗ್ಗೆ ರಾಜ್ಯಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗಿರುವುದರಿಂದ ಎಸ್ ಎಂ ಎಸ್ ಮಾಹಿತಿ ಮತ್ತು ಫ್ಯಾಕ್ಸ್ ಗಳನ್ನು ಅಳವಡಿಸಲಾಗಿದೆ ಎಂದೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Wednesday, April 22, 2009

ಚುನಾವಣೆಯಂದು ಸಾರ್ವತ್ರಿಕ ರಜೆ

ಮಂಗಳೂರು, ಏ. 22: ಚುನಾವಣಾ ಆಯೋಗ ಲೋಕಸಭಾ ಚುನಾವಣೆ ದಿನದಂದು ಸಾರ್ವತ್ರಿಕ ರಜೆ ಘೋಷಿಸಿದ್ದು, ದ. ಕ. ಜಿಲ್ಲೆಯಲ್ಲಿ ಏ. 30ರಂದು ರಜೆ ಸಾರಲಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಖಾನೆ, ಕೈಗಾರಿಕಾ ಸಂಸ್ಥೆ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಅನುಕೂಲವಾಗುವಂತೆ ರಾಜ್ಯ ಔದ್ಯಮಿಕ ಸಂಸ್ಥೆಗಳ ಕಾಯಿದೆಯಂತೆ ವೇತನ ಸಹಿತ ರಜೆ ನೀಡಲು ಆದೇಶಿಸಲಾಗಿದೆ ಎಂದು ಕಾರ್ಖಾನೆ ಮತ್ತು ಬಾಯ್ಲರ್ಗಳ ಉಪನಿರ್ದೇಶಕರು ತಿಳಿಸಿದ್ದಾರೆ.

Tuesday, April 21, 2009

ಸುವ್ಯವಸ್ಥಿತ ಚುನಾವಣೆಗೆ ದ. ಕ. ಜಿಲ್ಲೆ ಸಜ್ಜು: ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ

ಮಂಗಳೂರು, ಏ. 21: 15ನೇ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಸಜ್ಜಾಗಿದ್ದು, ಪೂರ್ವಸಿದ್ಧತೆಗಳು ಸಮಾಧಾನಕರವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಂ. ಎನ್. ವಿದ್ಯಾಶಂಕರ್ ಹೇಳಿದರು.
ಅವರು ಇಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಮಂಗಳೂರು, ಉಡುಪಿ ಜಿಲ್ಲಾಧಿಕಾರಿ ಮತ್ತು ಮೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವಿದ್ಯುನ್ಮಾನ ಮತಯಂತ್ರ ಬಳಸಿ, ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಸಂಭವಿಸದಂತೆ ಮತ್ತು ಮರುಚುನಾವಣೆಗೆ ಆಸ್ಪದ ನೀಡದಂತೆ ಚುನಾವಣೆಯನ್ನು ಯಶಸ್ವಿಯಾಗಿ ನೆರವೇರಿಸಲು ಅಧಿಕಾರಿಗಳು ತೆಗೆದುಕೊಳ್ಳಬೇಕಾದ ಕ್ರಮ ಮತ್ತು ಪೂರ್ವ ಸಿದ್ಧತೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರಲ್ಲದೆ, ಅಧಿಕಾರಿಗಳ ಹಲವು ಸಂಶಯಗಳಿಗೆ ಪರಿಹಾರವನ್ನು ಸೂಚಿಸಿದರು.
ಚುನಾವಣಾ ಕರ್ತವ್ಯಕ್ಕೆ ಪೂರಕವಾಗಿ ಎಲ್ಲಾ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆ ಒದಗಿಸಿರುವ ಮಾದರಿ ಬಗ್ಗೆ ಜಿಲ್ಲಾಡಳಿತವನ್ನು ಪ್ರಶಂಸಿಸಿದ ಅವರು, ಎಪಿಕ್ ಕಾರ್ಡ್ ವಿತರಣೆ ಮತ್ತು ಚುನಾವಣಾ ತರಬೇತಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿದ್ದು, ಜಿಲ್ಲಾಧಿಕಾರಿಗಳು ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದ ಅವರು, ತರಬೇತಿ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಹೆಚ್ಚುವರಿಯಾಗಿ ಒದಗಿಸುವ ಭರವಸೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಶೇಷ ಅಧಿಕಾರಿ ಶ್ರೀ ಮನೋಜ್ ಅವರು, ಸೆಕ್ಟರ್ ಅಧಿಕಾರಿಗಳಿಂದ ಹಿಡಿದು, ಕೈಗೆ ಶಾಯಿ ಹಾಕುವ ವ್ಯಕ್ತಿಯವರೆಗೆ ಪ್ರತಿಯೊಬ್ಬರು ಪ್ರೀತಿ ಮತ್ತು ಶ್ರದ್ಧೆಯಿಂದ ಕೆಲಸ ನಿರ್ವಹಿಸಿದರೆ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪದೋಷಗಳು ಸಂಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಮತದಾರರ ಪಟ್ಟಿ ಸೇರಿದಂತೆ ಕರ್ತವ್ಯದಲ್ಲಿ ಪಾರದರ್ಶಕತೆ ಪಾಲಿಸುವುದರಿಂದ ಚುನಾವಣಾ ಪ್ರಕ್ರಿಯೆ ಸುಗಮವಾಗಲಿದೆ ಎಂದ ಅವರು, ತರಬೇತಿ ಮತ್ತು ಮಾಕ್ ಪೋಲ್ ನ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಮತದಾನಕ್ಕೆ 21 ಪರ್ಯಾಯ ದಾಖಲೆಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಬಗ್ಗೆ ಮತದಾನದ ಸಂದರ್ಭ ದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅವರು, ಉಭಯ ಜಿಲ್ಲೆಗಳಲ್ಲಿ ಅಬಕಾರಿ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ಕರ್ತವ್ಯ ನಿರತ ಪೋಲಿಸರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ ವಿದ್ಯಾಶಂಕರ್, ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿಕೊಳ್ಳಲು ಸೂಚಿಸಿದರು.
ದ. ಕ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಸುಬ್ರಮಣ್ಯೇಶ್ವರ ರಾವ್, ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರವೀಣ್ ಪವಾರ್, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಲ್ಲಿ ಕೈಗೊಂಡಿರುವ ಬಂದೋಬಸ್ತ ಬಗ್ಗೆ ಮತ್ತು ರಕ್ಷಣೆಗೆ ಅಗತ್ಯ ವಿರುವ ಪ್ಯಾರಾ ಮಿಲಿಟರಿ ಪಡೆಯ ಬಗ್ಗೆ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಪೊನ್ನುರಾಜ್ ಸ್ವಾಗತಿಸಿದರು. ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಹೇಮಲತಾ, ಚುನಾವಣಾ ವೀಕ್ಷಕರಾದ ಟಿ. ಆರ್. ಮೀನಾ, ಎಸ್. ಎಚ್. ಡಾಂಗೆ, ಜೆ. ಎಂ. ಬಾಲಮುರುಗನ್ ಉಪಸ್ಥಿತರಿದ್ದರು.

ಚುನಾವಣಾ ಪೂರ್ವಸಿದ್ಧತೆ: ದ. ಕ. ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ


ದಿ. 21. 04.2009ರಂದು ಚುನಾವಣಾ ಪೂರ್ವಭಾವಿಯಾಗಿ ಮುಖ್ಯ ಚುನಾವಣಾಧಿಕಾರಿ ಶ್ರೀ ಎಂ. ಎನ್. ವಿದ್ಯಾಶಂಕರ್ ಮತ್ತು ವಿಶೇಷಾಧಿಕಾರಿ ಶ್ರೀ ಮನೋಜ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ದ.ಕ. ಜಿಲ್ಲೆ: ಸೂಕ್ಷ್ಮ ಮತ್ತು ಅತಿ ಸೂಕ್ಸ್ಮಪ್ರದೇಶ

ಮಂಗಳೂರು. ಏ. 21: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 273 ಅತಿ ಸೂಕ್ಷ್ಮ ಮತ್ತು 542 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಬೆಳ್ತಂಗಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 26 ಅತಿ ಸೂಕ್ಷ್ಮ, 62 ಸೂಕ್ಷ್ಮ ಮತಗಟ್ಟೆಗಳು, ಮೂಡಬಿದ್ರೆಯಲ್ಲಿ 47 ಅತಿ ಸೂಕ್ಷ್ಮ ಮತ್ತು 21 ಸೂಕ್ಷ್ಮ, ಮಂಗಳೂರು ಉತ್ತರದಲ್ಲಿ 33 ಅತಿ ಸೂಕ್ಷ್ಮ, 96 ಸೂಕ್ಷ್ಮ, ಮಂಗಳೂರು ದಕ್ಷಿಣದಲ್ಲಿ 28 ಅತಿ ಸೂಕ್ಷ್ಮ, 81 ಸೂಕ್ಷ್ಮ, ಮಂಗಳೂರು ಕ್ಷೇತ್ರದಲ್ಲಿ 62 ಅತಿ ಸೂಕ್ಷ್ಮ, 74 ಸೂಕ್ಷ್ಮ, ಬಂಟ್ವಾಳದಲ್ಲಿ 14 ಅತಿ ಸೂಕ್ಷ್ಮ, 62 ಸೂಕ್ಷ್ಮ, ಪುತ್ತೂರಿನಲ್ಲಿ 83 ಸೂಕ್ಷ್ಮ, 32 ಅತಿ ಸೂಕ್ಷ್ಮ, ಸುಳ್ಯ31 ಅತಿ ಸೂಕ್ಷ್ಮ 63 ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.

Monday, April 20, 2009

ಅಂಧ ಮತದಾರರಿಗೆ ತರಬೇತಿ

ಮಂಗಳೂರು, ಏ. ೨೦: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅಂಧ ಮತದಾರರಿಗೆ ಮತದಾನದ ಬಗ್ಗೆ ತಿಳುವಳಿಕೆ ನೀಡಲು ೨೨.೪.09ರಂದು ಪೂರ್ವಾಹ್ನ ೧೧ ಗಂಟೆಗೆ ಮಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿ ಕಟ್ಟಡದ ಪರಿಷತ್ ಸಭಾಂಗಣದಲ್ಲಿ ತರಬೇತಿ ಸಭೆಯನ್ನು ಆಯೋಜಿಸಲಾಗಿದೆ.
ಚುನಾವಣಾ ಆಯೋಗ ಅಂಧ ಮತದಾರರಿಗೆ ಬ್ರೈಲ್ ಲಿಪಿಯನ್ನು ಬಳಸಿ ಮತದಾನ ಮಾಡುವ ಸೌಲಭ್ಯವನ್ನು ಒದಗಿಸಿದ್ದು, ಬ್ರೈಲ್ ಲಿಪಿ ಸ್ಟಿಕರ್ ಗಳನ್ನು ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅಂಟಿಸಲು ನಿರ್ಧರಿಸಲಾಗಿದೆ. ಅರ್ಹರು ತರಬೇತಿಯ ಸೌಲಭ್ಯವನ್ನು ಪಡೆಯಬಹುದು ಎಂದು ಸಹಾಯಕ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂ ಪಿ ಎಡ್ (ಬೇಸಿಗೆ) ಪದವಿ ಕೋರ್ಸಿಗೆ ಅರ್ಜಿ ಆಹ್ವಾನ
ಮಂಗಳೂರು, ಏ. ೨೦: ಶೈಕ್ಷಣಿಕ ವರ್ಷ ೨೦೦೯-10ನೇ ಸಾಲಿನಲ್ಲಿ ಆರಂಭಿಸುವ ಎಂ ಪಿ ಎಡ್ (ಬೇಸಿಗೆ) ಪದವಿ ಕೋರ್ಸಿಗೆ ಪ್ರವೇಶ ಬಯಸುವವರು ಮಂಗಳೂರು ವಿ. ವಿ. ಯ ವೆಬ್ ಸೈಟ್ www.mangaloreuniversity.ac.in ನಿಂದ ಮಾಹಿತಿ ಪಡೆಯಬಹುದು. 30.4.09 ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದ್ದು, ಪ್ರವೇಶ ಪರೀಕ್ಷೆ ಮಂಗಳಗಂಗೋತ್ರಿಯಲ್ಲಿ ಮೇ. 4ರಂದು ಬೆ. 10 ಗಂಟೆಗೆ ಫಿಸಿಕಲ್ ಎಜುಕೇಶನ್ ವಿಭಾಗದಲ್ಲಿ ನಡೆಯಲಿದೆ ಎಂದು ಕುಲಸಚಿವ ಪ್ರಕಟಣೆ ತಿಳಿಸಿದೆ.

Saturday, April 18, 2009

ಸುಸೂತ್ರ ಚುನಾವಣೆಗೆ ಸಿದ್ಧತೆ


ಏ. 30ರಂದು ನಡೆಯಲಿರುವ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗಳಿಗೆ ನಗರದ ಸೈಂಟ್ ಆನ್ಸ್ ಕಾಲೇಜಿನಲ್ಲಿ ತರಬೇತಿಯನ್ನು ನೀಡಲಾಯಿತು.

15ನೇ ಲೋಕಸಭಾ ಚುನಾವಣೆ: 1548 ಮತಯಂತ್ರಗಳ ಬಳಕೆ


ಮಂಗಳೂರು, ಏ. 18: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 30ರಂದು ನಡೆಯಲಿರುವ ಚುನಾವಣೆಗೆ ಒಟ್ಟು 1518 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1548 ಮತಯಂತ್ರಗಳನ್ನು ಬಳಸಲಾಗುವುದು. 1412 ಮುಖ್ಯ ಮತಗಟ್ಟೆಗಳಿದ್ದು, 106 ಹೆಚ್ಚುವರಿ ಮತಗಟ್ಟೆಗಳಿವೆ. ಮತದಾರರಿಗೆ ಮತದಾನದ ಸಂದರ್ಭದಲ್ಲಿ ಯಾವುದೇ ಅನಾನೂಕೂಲವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕಂಟ್ರೋಲ್ ಯುನಿಟ್ ನಲ್ಲಿ ಶೇ. 4 ಮತ್ತು ಬ್ಯಾಲೆಟ್ ಯುನಿಟ್ ನಲ್ಲಿ ಶೇ. 2ರಷ್ಟು ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ ಎಂದು ಇವಿಎಮ್ ನೋಡಲ್ ಅಧಿಕಾರಿ ಶ್ರೀ ಕುಸುಮಾಧರ ಅವರು ತಿಳಿಸಿದ್ದಾರೆ.
ಬೆಳ್ತಂಗಡಿ ಕ್ಷೇತ್ರಕ್ಕೆ 201 ಮತಯಂತ್ರ, ಮೊಡಬಿದ್ರೆಗೆ 167, ಮಂಗಳೂರು ನಗರ ಉತ್ತರ 204, ದಕ್ಷಿಣಕ್ಕೆ 200, ಮಂಗಳೂರಿಗೆ 165, ಬಂಟ್ವಾಳಕ್ಕೆ 204, ಪುತ್ತೂರಿಗೆ 188, ಸುಳ್ಯಕ್ಕೆ 189 ಮತಯಂತ್ರಗಳನ್ನು ಪೂರೈಸಲಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಸಕಲ ಏರ್ಪಾಡುಗಳನ್ನು ಮಾಡಲಾಗಿದ್ದು, 1548 ಮತಯಂತ್ರಗಳನ್ನು ಮತದಾನಕ್ಕೆ ಸಜ್ಜುಗೊಳಿಸಲಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13,32,216 ಮತದಾರರಿದ್ದು, ಇವರಲ್ಲಿ 6,57,463 ಪುರುಷ ಮತದಾರರು ಮತ್ತು 6,74,753 ಮಹಿಳಾ ಮತದಾರರಿದ್ದಾರೆ.

ಮತದಾನಕ್ಕೆ 21 ಪರ್ಯಾಯ ದಾಖಲೆಗಳು

ಮಂಗಳೂರು, ಏ.18: ಲೋಕಸಭಾ ಚುನಾವಣೆಯಲ್ಲಿ ಮತದಾರರು ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರು ಪಡಿಸಿ ಮತದಾನ ಮಾಡಲು ಚುನಾವಣಾ ಆಯೋಗ ಸೂಚಿಸಿತ್ತು. ಆದರೆ ಎಲ್ಲಾ ಅರ್ಹ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಭಾವಚಿತ್ರವುಳ್ಳ ಗುರುತಿನ ಚೀಟಿ ಹೊಂದಿಲ್ಲದ ಮತದಾರರು ಈ ಕೆಳಗೆ ಕಾಣಿಸಿರುವ 21 ದಾಖಲೆಗಳ ಪೈಕಿ ಯಾವುದಾದರೂ ಒಂದು ಪರ್ಯಾಯ ದಾಖಲೆಯನ್ನು ಹಾಜರು ಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.
ಪಾಸ್ ಪೋರ್ಟ್, ಡ್ರೈವಿಂಗ್ ಲ್ಸೆಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ, ಸಾರ್ವಜನಿಕ, ಸ್ಥಳೀಯ ಉದ್ಯಮ, ಸ್ಥಳೀಯ ಸಂಸ್ಥೆಗಳು ನೌಕರರಿಗೆ ನೀಡಿರುವ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿ ಭಾವಚಿತ್ರವಿರುವ ಪಾಸ್ ಪುಸ್ತಕಗಳು, ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಪಟ್ಟಾಗಳು, ನೋಂದಾಯಿತ ದಸ್ತಾವೇಜು, ಸಕ್ಷಮ ಪ್ರಾಧಿಕಾರದಿಂದ 2009ನೇ ಫೆ. 28ರವರೆಗೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗದವರಿಗೆ ನೀಡಿರುವ ಧೃಢಪತ್ರ, 2009ನೇ ಫೆ. 28ರವರೆಗೆ ನೀಡಿದ ಪಿಂಚಣಿ ಪುಸ್ತಕ, ಪಿಂಚಣಿ ಪಾವತಿ ಆದೇಶ, ಮಾಜಿ ಸೈನಿಕರ ವಿಧವೆಯರಿಗೆ ಇಲಾಖಾ ವತಿಯಿಂದ ನೀಡಲಾದ ದೃಢಪತ್ರ ವೃದ್ದಾಪ್ಯ, ವಿಧವಾ ವೇತನ ಮಂಜೂರಾತಿ ಆದೇಶ, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾದ ಭಾವಚಿತ್ರವಿರುವ ಗುರುತಿನ ಚೀಟಿ, ಆಯುಧ ಪರವಾನಿಗೆ, ಅಂಗವಿಕಲತೆಯ ಬಗ್ಗೆ ನೀಡಲಾದ ಭಾವಚಿತ್ರವಿರುವ ದೃಢಪತ್ರ, ಎನ್ಆರ್ಇಜಿಎ ನೀಡಲಾದ ಭಾವಚಿತ್ರವಿರುವ ದೃಢಪತ್ರ, ಮಾಜಿ ಸೈನಿಕರಿಗೆ ನೀಡಲಾದ ಭಾವಚಿತ್ರವಿರುವ ಸಿ ಎಸ್ ಡಿ ಕ್ಯಾಂಟೀನ್ ಕಾರ್ಡ್, ಫೆ. 28ರವೆರೆಗೆ ಸಂಧ್ಯಾ ಸುರಕ್ಷಾ, ಯಶಸ್ವಿನಿ ಯೋಜನೆಯನ್ವಯ ನೀಡಲಾದ ಗುರುತಿನ ಕಾರ್ಡ್, ಮಹಾನಗರಪಾಲಿಕೆ, ಪುರಸಭೆ ಮತ್ತು ಗ್ರಾಮ ಪಂಚಾಯತಿಗಳು ತಮ್ಮ ಸಿಬ್ಬಂದಿಯವರಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತಿನ ಕಾರ್ಡ್ ಗಳು, ಸರ್ಕಾರ ಹಿರಿಯ ನಾಗರೀಕರಿಗೆ ನೀಡಿರುವ ಭಾವಚಿತ್ರವಿರುವ ಗುರುತಿನ ಕಾರ್ಡ್, ಗಣಕೀಕೃತ ಪಡಿತರ ಚೀಟಿ ಉಪಯೋಗಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶ್ರೀ ಪೊನ್ನುರಾಜ್ ತಿಳಿಸಿದ್ದಾರೆ.

Friday, April 17, 2009

ಚುನಾವಣಾ ವೀಕ್ಷಕರು


ದ. ಕ. ಜಿಲ್ಲಾ ಚುನಾವಣಾ ಪ್ರಕ್ರಿಯೆ ವೀಕ್ಷಣೆಗೆ ಆಗಮಿಸಿರುವ ಚುನಾವಣಾ ವೀಕ್ಷಕರು.

ಮದ್ಯಮುಕ್ತ ದಿನ ಘೋಷಣೆ

ಮಂಗಳೂರು, ಏಪ್ರಿಲ್ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 30ರಂದು ಲೋಕಸಭಾ ಅಭ್ಯರ್ಥಿಆಯ್ಕೆಗೆ ಮತದಾನ ನಡೆಯಲಿದ್ದು, ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತ, ಶಾಂತಿಯುತವಾಗಿ ನಡೆಯಲು ಮದ್ಯ ಮತ್ತು ಅಮಲು ಪದಾರ್ಥ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಆದೇಶಿಸಿದ್ದಾರೆ.
ಏಪ್ರಿಲ್ 28ರ ಸಂಜೆ 5 ರಿಂದ 30ರ ಸಂಜೆ 5 ಗಂಟೆಯವರೆಗೆ ಅವಧಿಯನ್ನು ಮದ್ಯ ಮುಕ್ತ ದಿನಗಳೆಂದು (ಡ್ರೈಡೇಸ್) ಘೋಷಿಸಿ ಈ ದಿನಗಳಲ್ಲಿ ಎಲ್ಲಿಯೂ ಮದ್ಯ ಮಾರಾಟ ಸಲ್ಲದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

Wednesday, April 15, 2009

ಸರ್ಕಾರಕ್ಕೆ ಯಾವುದೇ ಪಾವತಿ ಬಾಕಿ ಇಲ್ಲ: ಜಿಲ್ಲಾಧಿಕಾರಿ


ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ಸರ್ಕಾರಕ್ಕೆ ಯಾವುದೇ ಪಾವತಿ ಬಾಕಿ ಇರಿಸಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಸಲ್ಲಿಸಿರುವ ಅಫಿದಾವಿತ್ ನ್ನು ಪರಿಶೀಲಿಸಲಾಗಿ ಸರ್ಕಾರಿ ವಸತಿ, ಜಲ ಮಂಡಳಿ, ವಿದ್ಯುಚ್ಛಕ್ತಿ ಮಂಡಳಿ, ದೂರವಾಣಿ ಇಲಾಖೆ, ಸರ್ಕಾರಿ ಸಾರಿಗೆ(ವಿಮಾನ, ಹೆಲಿಕಾಪ್ಟರ್ ), ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಇತರ ಬಾಕಿಗಳನ್ನು ಅಭ್ಯರ್ಥಿಗಳು ಇರಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.