Tuesday, April 21, 2009

ಸುವ್ಯವಸ್ಥಿತ ಚುನಾವಣೆಗೆ ದ. ಕ. ಜಿಲ್ಲೆ ಸಜ್ಜು: ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ

ಮಂಗಳೂರು, ಏ. 21: 15ನೇ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಸಜ್ಜಾಗಿದ್ದು, ಪೂರ್ವಸಿದ್ಧತೆಗಳು ಸಮಾಧಾನಕರವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಂ. ಎನ್. ವಿದ್ಯಾಶಂಕರ್ ಹೇಳಿದರು.
ಅವರು ಇಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಮಂಗಳೂರು, ಉಡುಪಿ ಜಿಲ್ಲಾಧಿಕಾರಿ ಮತ್ತು ಮೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವಿದ್ಯುನ್ಮಾನ ಮತಯಂತ್ರ ಬಳಸಿ, ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಸಂಭವಿಸದಂತೆ ಮತ್ತು ಮರುಚುನಾವಣೆಗೆ ಆಸ್ಪದ ನೀಡದಂತೆ ಚುನಾವಣೆಯನ್ನು ಯಶಸ್ವಿಯಾಗಿ ನೆರವೇರಿಸಲು ಅಧಿಕಾರಿಗಳು ತೆಗೆದುಕೊಳ್ಳಬೇಕಾದ ಕ್ರಮ ಮತ್ತು ಪೂರ್ವ ಸಿದ್ಧತೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರಲ್ಲದೆ, ಅಧಿಕಾರಿಗಳ ಹಲವು ಸಂಶಯಗಳಿಗೆ ಪರಿಹಾರವನ್ನು ಸೂಚಿಸಿದರು.
ಚುನಾವಣಾ ಕರ್ತವ್ಯಕ್ಕೆ ಪೂರಕವಾಗಿ ಎಲ್ಲಾ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆ ಒದಗಿಸಿರುವ ಮಾದರಿ ಬಗ್ಗೆ ಜಿಲ್ಲಾಡಳಿತವನ್ನು ಪ್ರಶಂಸಿಸಿದ ಅವರು, ಎಪಿಕ್ ಕಾರ್ಡ್ ವಿತರಣೆ ಮತ್ತು ಚುನಾವಣಾ ತರಬೇತಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿದ್ದು, ಜಿಲ್ಲಾಧಿಕಾರಿಗಳು ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದ ಅವರು, ತರಬೇತಿ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಹೆಚ್ಚುವರಿಯಾಗಿ ಒದಗಿಸುವ ಭರವಸೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಶೇಷ ಅಧಿಕಾರಿ ಶ್ರೀ ಮನೋಜ್ ಅವರು, ಸೆಕ್ಟರ್ ಅಧಿಕಾರಿಗಳಿಂದ ಹಿಡಿದು, ಕೈಗೆ ಶಾಯಿ ಹಾಕುವ ವ್ಯಕ್ತಿಯವರೆಗೆ ಪ್ರತಿಯೊಬ್ಬರು ಪ್ರೀತಿ ಮತ್ತು ಶ್ರದ್ಧೆಯಿಂದ ಕೆಲಸ ನಿರ್ವಹಿಸಿದರೆ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪದೋಷಗಳು ಸಂಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಮತದಾರರ ಪಟ್ಟಿ ಸೇರಿದಂತೆ ಕರ್ತವ್ಯದಲ್ಲಿ ಪಾರದರ್ಶಕತೆ ಪಾಲಿಸುವುದರಿಂದ ಚುನಾವಣಾ ಪ್ರಕ್ರಿಯೆ ಸುಗಮವಾಗಲಿದೆ ಎಂದ ಅವರು, ತರಬೇತಿ ಮತ್ತು ಮಾಕ್ ಪೋಲ್ ನ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಮತದಾನಕ್ಕೆ 21 ಪರ್ಯಾಯ ದಾಖಲೆಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಬಗ್ಗೆ ಮತದಾನದ ಸಂದರ್ಭ ದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅವರು, ಉಭಯ ಜಿಲ್ಲೆಗಳಲ್ಲಿ ಅಬಕಾರಿ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ಕರ್ತವ್ಯ ನಿರತ ಪೋಲಿಸರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ ವಿದ್ಯಾಶಂಕರ್, ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿಕೊಳ್ಳಲು ಸೂಚಿಸಿದರು.
ದ. ಕ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಸುಬ್ರಮಣ್ಯೇಶ್ವರ ರಾವ್, ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರವೀಣ್ ಪವಾರ್, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಲ್ಲಿ ಕೈಗೊಂಡಿರುವ ಬಂದೋಬಸ್ತ ಬಗ್ಗೆ ಮತ್ತು ರಕ್ಷಣೆಗೆ ಅಗತ್ಯ ವಿರುವ ಪ್ಯಾರಾ ಮಿಲಿಟರಿ ಪಡೆಯ ಬಗ್ಗೆ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಪೊನ್ನುರಾಜ್ ಸ್ವಾಗತಿಸಿದರು. ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಹೇಮಲತಾ, ಚುನಾವಣಾ ವೀಕ್ಷಕರಾದ ಟಿ. ಆರ್. ಮೀನಾ, ಎಸ್. ಎಚ್. ಡಾಂಗೆ, ಜೆ. ಎಂ. ಬಾಲಮುರುಗನ್ ಉಪಸ್ಥಿತರಿದ್ದರು.