Friday, July 31, 2009

ಸ್ತನ್ಯಪಾನ ಮಾತೆಯ ಮಮತೆಯ ಪ್ರತೀಕ

ಮಂಗಳೂರು, ಜು.31:ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಮಾಡಿಸುವುದು ಬಹಳ ಉತ್ತಮ. ಮಗುವನ್ನು ತಾಯಿಯ ಅತಿ ಸಮೀಪದಲ್ಲಿ ಮಲಗಿಸಬೇಕು; ಇದರಿಂದ ಮಗುವಿನ ಸುರಕ್ಷತಾ ಭಾವವು ಬಲಗೊಳ್ಳುವುದಲ್ಲದೆ, ಮಗುವಿನ ಸ್ಪರ್ಶ ತಾಯಿಯ ಸ್ತನಗಳಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮಗುವಿಗೆ ಎದೆಹಾಲು ಉಣಿಸುವುದರಿಂದ ಮಗುವಿನ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಇದರಿಂದ ತಾಯಿಯ ಆರೋಗ್ಯಕ್ಕೂ ಹಿತ.
ಜಿಲ್ಲೆಯ ಎಲ್ಲ ತಾಯಿಯಂದಿರಿಗೆ ಸ್ತನ್ಯಪಾನ ಮಹತ್ವದ ಅರಿವನ್ನು ಮೂಡಿಸಲು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗ ಆಗಸ್ಟ್ 1ರಿಂದ 7 ತಾರೀಖಿನವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಮ್ಮಟಗಳನ್ನು ಹಮ್ಮಿಕೊಂಡಿದೆ.
ಈ ಕಮ್ಮಟದ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 1 ರಂದು ರೋಶನಿ ನಿಲಯದಲ್ಲಿ ಪೂರ್ವಾಹ್ನ 11 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, 'ಸ್ತನ್ಯಪಾನ: ಜೀವಸಂಬಂಧ ತುರ್ತು ಪ್ರತಿಕ್ರಿಯೆ - ನೀವು ತಯಾರಾಗಿದ್ದೀರಾ?'ಎಂಬ ವಿಷಯದ ಬಗ್ಗೆ ಪರಿಣತರು ಉಪನ್ಯಾಸ ನೀಡಲಿರುವರು. ಕಮ್ಮಟವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ಶಿವಶಂಕರ್ ಅವರು ಉದ್ಘಾಟಿಸಲಿರುವರು.
ಆ.3ರಂದು ಕುತ್ತಾರಿನ ಅಂಗನವಾಡಿ ಕೇಂದ್ರದಲ್ಲಿ 11 ಗಂಟೆಗೆ, 4 ರಂದು ಪಾವೂರಿನ ಅಕ್ಷರ ನಗರದ ಅಂಗನವಾಡಿ ಕೇಂದ್ರದಲ್ಲಿ, 5ರಂದು ಪುತ್ತೂರಿನ ನಗರದಲ್ಲಿರುವ ರಾಮಕೃಷ್ಣ ಹೆಣ್ಣುಮಕ್ಕಳ ಶಾಲೆಯಲ್ಲಿ, 6ರಂದು ಉಳ್ಳಾಲದಲ್ಲಿ, 7ರಂದು ಬೆಳ್ತಂಗಡಿಯ ಶಿರ್ಲಾಲುವಿನ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವಾಹ್ನ 11 ಗಂಟೆಗೆ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜನ್ಮದಿನದಿಂದ 6 ತಿಂಗಳವರೆಗೆ ತಾಯಿ ಎದೆ ಹಾಲು ಮಾತ್ರ ಉಣಿಸಬೇಕು; ನೀರು ಸೇರಿದಂತೆ ಬೇರೆ ಯಾವ ಆಹಾರವನ್ನೂ ಉಣಿಸಬಾರದು. 6-13 ತಿಂಗಳವರೆಗೆ ಎದೆ ಹಾಲಿನ ಜೊತೆ ಮೆತ್ತನೆ ಆಹಾರ ನೀಡುವುದನ್ನು ಆರಂಭಿಸಬೇಕು. ದಿನಕ್ಕೆ 3 ಬಾರಿಯಂತೆ ಎಣ್ಣೆ/ತುಪ್ಪದಲ್ಲಿ ಬೇಯಿಸಿದ ಬೇಳೆ ಮತ್ತು ಅನ್ನ ಜಜ್ಜಿರುವ ಧಾನ್ಯಗಳ ಜೊತೆ ಹಾಲನ್ನು ಕೊಡಬೇಕು. ಬೇಯಿಸಿದ ಆಲೂಗೆಡ್ಡೆ, ಬಾಳೇಹಣ್ಣು, ಸಪೋಟದಂತಹ ಹಣ್ಣುಗಳನ್ನು ತಿನ್ನಿಸಬೇಕು. ತಿನ್ನಿಸುವ ಕೈಗಳು ಶುಭ್ರವಾಗಿರಬೇಕು; 1-2 ವರ್ಷಗಳಲ್ಲಿ ಎದೆ ಹಾಲಿನ ಜೊತೆ ಮನೆ ಆಹಾರವನ್ನು ಕೊಡಬಹುದು.

ಪಿಳಿಕುಳ ಸಂಸ್ಕ್ರತಿ ಗ್ರಾಮದಲ್ಲಿ ಆಟಿಡೊಂಜಿ ದಿನ..

ಮಂಗಳೂರು,ಜುಲೈ31.ಆಷಾಡ ಮಾಸದಲ್ಲಿ ಬಹು ಸಂಸ್ಕೃತಿಯುಳ್ಳ ಕರಾವಳಿಯ ತುಳು ನಾಡಿನ ವಿಶಿಷ್ಟ ಆಚಾರಣೆಗಳಲ್ಲಿ 'ಆಟಿಡೊಂಜಿ ದಿನ 'ಕಾರ್ಯಕ್ರಮ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಸಂಸ್ಕೃತಿ ಗ್ರಾಮದಲ್ಲಿ ಇತ್ತೀಚೆಗೆ ನಡೆಯಿತು.ಪಿಲಿಕುಳ ನಿಸರ್ಗಧಾಮ ಸೊಸೈಟಿ ವಿವಿಧ ಸಂಘಸಂಸ್ಥಗಳ ಸಹಯೋಗದೊಂದಿಗೆ ಸಂಸ್ಕೃತಿ ಗ್ರಾಮದ ಗುತ್ತಿನ ಮನೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ ಜನ ಮೆಚ್ಚುಗೆಯನ್ನು ಪಡೆಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಾಲ್ತಾಡಿ ರಾಮಕ್ರಷ್ಣ ಆಚಾರ್ ಅವರು ಮಳೆ ಮತ್ತು ಬಿಸಿಲು ಅಧಿಕವಾಗಿರುವ ಈ ಆಶಾಡ ಮಾಸದಲ್ಲಿನ ಆಚರಣೆಗಳಿಗೆ ತನ್ನದೆ ಆದ ವೈಜ್ಙಾನಿಕ ತಳಹದಿ ಇದ್ದು, ಇದು ಸಂಶೋಧನೆಗಳಿಂದ ಕೂಡ ಧೃಡ ಪಟ್ಟಿದೆ ಎಂದರು.ಈ ಸಮಯದಲ್ಲಿ ಸೇವಿಸುವ ಗ್ರಾಮೀಣ ಸ್ವಾದದ ತಿಂಡಿಗಳು ಔಷಧಿಯ ಗುಣಗಳನ್ನು ಹೊಂದಿದೆ ಮತ್ತು ಮದುವೆಯಾಗಿರುವ ಹೆಣ್ಣು ಮಕ್ಕಳು ತವರು ಮನೆಗೆ ಹೋಗುವುದಕ್ಕೂ ವೈಜ್ಙಾನಿಕ ಹಿನ್ನೆಲೆ ಇರುವುದನ್ನು ಪ್ರತಿಪಾದಿಸಿದರು.
ಹೊರಗೆ ಬಿಡದೆ ಸುರಿಯುತ್ತಿದ್ದ ಮಳೆಯಾದರೆ,ಒಳಗೆ ಚೆನ್ನೆಮಣೆ ಆಟ, ಮಹಿಳಾ ಸಂಘಟನೆಗಳು ತಯಾರಿಸಿದ ಆಟಿ ತಿಂಗಳ ವಿಶೇಷ ತಿಂಡಿಗಳಾದ ಹಲಸಿನ ಗಟ್ಟಿ,ಹಪ್ಪಳ,ತಿಮರೆ ಚಟ್ನಿ,ಪುಂಡಿಗಸಿ,ಉಪ್ಪಡ್ ಪಚ್ಚಿರ್,ಮುಳ್ಳು ಸೌತೆ ಗಟ್ಟಿ ಸೇರಿದಂತೆ 20 ಕ್ಕೂ ಅಧಿಕ ತಿಂಡಿಗಳು ಕಾರ್ಯಕ್ರಮದ ವಿಶೇಷ ಅಕರ್ಷಣೆಯಾಗಿದ್ದುವು. ಮನೆಯ ಛಾವಡಿಯಲ್ಲಿ ಕರಾವಳಿಯ ಹಿಂದಿನ ಸಂಸ್ಕೃತಿಯನ್ನು ನೆನಪಿಸುವ ಕೃಷಿ ಉಪಕರಣ,ದೈವ ಸಾಮಗ್ರಿಗಳು,ಹಳೇ ತಾಮ್ರ ಮತ್ತು ಮಣ್ಣಿನ ಪಾತ್ರೆಗಳು,ಔಷಧಿಯ ಸಸ್ಯಗಳ ಪ್ರದರ್ಶನವನ್ನು ಸಮಗ್ರ ಮಾಹಿತಿಯೊಂದಿಗೆ ಏರ್ಪಡಿಸಲಾಗಿತ್ತು. ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ವಾಮನ ನಂದಾವರ,ನಿಸರ್ಗಧಾಮ ಸೊಸೈಟಿ ಕಾರ್ಯನಿರ್ವಾಹಕ ನಿರ್ದೇಶಕ ಜೆ.ಆರ್.ಲೋಬೋ,ನಗರ ಪಾಲಿಕೆ ಉಪಮೇಯರ್ ರಜನಿ ದುಗ್ಗಣ್ಣ,ಆಕಾಶವಾಣಿ ನಿಲಯ ನಿರ್ದೇಶಕ ಡಾ.ಶಿವಾನಂದ ಬೇಕಲ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹರ್ಷಾ,ವಿವಿಧ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Thursday, July 30, 2009

ಕೃಷ್ಣಾಷ್ಟಮಿ-ಗಣೇಶೋತ್ಸವಕ್ಕೆ ಬಲವಂತದ ಹಣವಸೂಲಿ ಸಲ್ಲದು: ಎಸ್ಪಿ

ಮಂಗಳೂರು, ಜುಲೈ29: ಸಾರ್ವಜನಿಕ ಹಬ್ಬಗಳಾದ ಕೃಷ್ಣಾಷ್ಟಮಿ, ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಬಲವಂತವಾಗಿ ಹಣ ವಸೂಲು ಮಾಡುವುದನ್ನು ಮತ್ತು ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್ ಆದೇಶ ಹೊರಡಿಸಿದ್ದಾರೆ.
ಜನನಿಬಿಡ ಹಾಗೂ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಕಾರ್ಯಕ್ರಮ ಸಂಘಟಿಸುವಾಗ ಸಂಬಂಧಿತ ಕಾನೂನುಗಳನ್ನು ಅನುಸರಿಸಬೇಕಲ್ಲದೆ, ಸಾರ್ವಜನಿಕ ಸಮಾರಂಭಗಳನ್ನು ಹಮ್ಮಿಕೊಳ್ಳುವ ಸಂದರ್ಭದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು;ಮೊಸರುಕುಡಿಕೆ ಸಂದರ್ಭದಲ್ಲಿ ಕಂಬ ಹಾಕುವ ಮೊದಲು ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಅವರಿಗೆ ಸಂಪೂರ್ಣ ಮಾಹಿತಿ ನೀಡಬೇಕು.ಮೆರವಣಿಗೆ ಸಾಗುವ ರಸ್ತೆ ಕುರಿತು ಪೊಲೀಸರಿಗೆ ಮೊದಲೇ ಮಾಹಿತಿ ನೀಡಬೇಕು. ರಾತ್ರಿ 10ರ ನಂತರ ಯಾವುದೇ ಧ್ವನಿವರ್ಧಕಗಳನ್ನು ಬಳಸಬಾರದೆಂದೂ,ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವಂತಹ ಯಾವುದೇ ವೇಷ ಭೂಷಣಗಳನ್ನು ಧರಿಸಬಾರದೆಂದು, ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಪಟ್ಟ ಸಂಘಟಕರನ್ನು ಹೊಣೆಯಾಗಿಸಲಾಗುವುದು ಎಸ್ಪಿಯವರು ಎಚ್ಚರಿಕೆ ನೀಡಿದ್ದಾರೆ.
.

ಏಶಿಯನ್ ಫಾರೆಸ್ಟ್: ಮುಂಜಾಗ್ರತಾ ಕ್ರಮ

ಮಂಗಳೂರು, ಜು.29:ಜುಲೈ 18ರಂದು ಪಣಂಬೂರು ಬಳಿ ಮುಳುಗಡೆಯಾದ ಎಂ.ವಿ. ಏಶಿಯನ್ ಫಾರೆಸ್ಟ್ ಹಡಗಿನ ಕುರಿತ ತನಿಖೆಗೆ ಭಾರತದ ಶಿಪ್ಪಿಂಗ್ ವಿಭಾಗದ ಮಹಾ ನಿರ್ದೇಶಕರು ತನಿಖಾಧಿಕಾರಿಯನ್ನು ನೇಮಿಸಿದ್ದು, ಮುಳುಗಿದ ಹಡಗಿನಿಂದ ತೈಲ ಸೋರಿ ಸಮುದ್ರ ಕಲುಷಿತಗೊಳ್ಳದಂತೆ ತೈಲ ಹೊರತೆಗೆಯಲು ಜಪಾನಿನ ಪಿ ಅಂಡ್ ಐ ಸಂಸ್ಥೆಯ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಸೂಚನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಮುಳುಗಡೆಯಾದ ಹಡಗಿನಲ್ಲಿ 400 ಮೆಟ್ರಿಕ್ ಟನ್ ತೈಲವಿದ್ದು ಸೋರಿಕೆ ತಡೆಗೆ ಭಾರತ ಶಿಪ್ಪಿಂಗ್ ವಿಭಾಗದ ನಿರ್ದೇಶಕ ಹಾಗೂ ಹಡಗಿನ ಮಾಲಕರಾದ ಶೈನಿಂಗ್ ಓಶಿಯನ್ ಲಿಮಿಟೆಡ್ ಹಾಂಕಾಂಗ್ ಹಾಗೂ ಕಾರ್ಯಾಚರಣೆ ನಡೆಸಲು ಆಸಕ್ತರಾಗಿರುವ ಪಿ ಆಂಡ್ ಐ ಸಂಸ್ಥೆಯ ಪ್ರತಿನಿಧಿಗಳು ಮುಂಬೈನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಕರಾವಳಿ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಇರುವುದರಿಂದ ತುರ್ತು ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು, ಮಳೆಯ ಅಬ್ಬರ ಕಡಿಮೆಯಾದ ಬಳಿಕ ಮುಳುಗಡೆಯಾದ ಹಡಗಿನಿಂದ ತೈಲವನ್ನು ಹೊರತೆಗೆಯುವ ಬಗ್ಗೆ ಕಾರ್ಯಾಚರಣೆ ಆರಂಭವಾಗಲಿದೆ.ಎರಡು ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ಮುಳುಗಡೆಯಾದ ದಕ್ಷಿಣ ಆಫ್ರಿಕದ ಡೆನ್ ಡೆನ್ ಹಡಗಿನ ಅವಶೇಷಗಳನ್ನು ಮೇಲೆತ್ತುವ ಕುರಿತು ಹಡಗಿನ ಮಾಲಕರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಮಂಗಳೂರು ಕಡಲ ತೀರದಿಂದ 5.8 ನಾಟೆಕಲ್ ಮೈಲು ದೂರದಲ್ಲಿ ಮುಳುಗಡೆಯಾದ ಹಡಗು 20 ಮೀಟರ್ ಆಳದಲ್ಲಿ ಸಾಗರ ತಳ ಸೇರಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದು, ಈ ಪ್ರದೇಶ ವ್ಯಾಪ್ತಿಯಲ್ಲಿ ಸಂಚರಿಸುವ ಹಡಗುಗಳಿಗೆ ತೊಂದರೆಯಾಗದಂತೆ ಹಡಗು ಮುಳುಗಡೆಯಾದ ಪ್ರದೇಶದಲ್ಲಿ ನಿಯೋಜಿತ ನೌಕೆಯೊಂದಿಗೆ ನಾಲ್ಕು ದಿಕ್ಕುಗಳಲ್ಲಿ ಗುರುತುಗಳನ್ನು ಅಳವಡಿಸಲಾಗುವುದು ಎಂದು ಕೋಸ್ಟ ಗಾರ್ಡ್ ಕಮಾಂಡರ್ ಪಿ ಎಸ್ ಝಾ ತಿಳಿಸಿದರು. ಗೋಷ್ಠಿಯಲ್ಲಿ ಮೀನುಗಾರಿಕಾ ಇಲಾಖಾ ಉಪನಿರ್ದೇಶಕ ಸುರೇಶ್ ಕುಮಾರ್, ಏಶಿಯನ್ ಫಾರೆಸ್ಟ್ ಹಡಗಿನ ಮಾಲಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tuesday, July 28, 2009

ತೋಟಗಾರಿಕಾ ಮಿಷನ್: ರೈತರಿಗೆ ಸಹಾಯಧನ

ಮಂಗಳೂರು, ಜು.28: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ರಾಷ್ಟ್ರೀಯ ಔಷಧೀಯ ಬೆಳೆಗಳ ಮಿಷನ್ ಯೋಜನೆಯಡಿ ರೈತರಿಗೆ ಸಹಾಯಧನ ಸೌಲಭ್ಯಗಳು ಲಭ್ಯವಿದ್ದು, ರೈತರು ಈ ಸಂಬಂಧ ತೋಟಗಾರಿಕೆ ಉಪನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ.
ನರ್ಸರಿ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ %50ರ ಸಹಾಯಧನ, ಪ್ರದೇಶ ವಿಸ್ತರಣೆಗೆ ಸಹಾಯಧನ, ಸುರಕ್ಷಿತ ಬೇಸಾಯ ಕ್ರಮದಡಿ ಹಸಿರು ಮನೆ ನಿರ್ಮಾಣಕ್ಕೆ %33ರಿಂದ 50ರ ಸಹಾಯಧನ, ನೀರಿನ ಸಂರಕ್ಷಣೆಗೆ ಸಮುದಾಯ ಕೆರೆಗಳ ಸ್ಥಾಪನೆಗೆ ರೂ. 10 ಲಕ್ಷ ಸಹಾಯಧನ, ನೀರಿನ ಸಂರಕ್ಷಣೆಗೆ ಸಮುದಾಯ ಕೆರೆಗಳ ಸ್ಥಾಪನೆಗೆ ರೂ. 10 ಲಕ್ಷ ಸಹಾಯಧನ, ತೋಟಗಾರಿಕೆ ಬೆಳೆಗಳ ಬಗ್ಗೆ ಮೇಳ,ಪ್ರದರ್ಶನ ಏರ್ಪಡಿಸಲು ಸಹಾಯಧನ, ರೈತರಿಗೆ ರಾಜ್ಯ ಹಾಗೂ ಹೊರ ರಾಜ್ಯ ಪ್ರವಾಸ, ಸಾವಯವ ಬೇಸಾಯ ಪರಿವರ್ತನೆಗೆ ಹಾಗೂ ದೃಢೀಕರಣಕ್ಕೆ ಸಹಾಯಧನ, ಹಳೆ ಗೇರು ತೋಟದ ಪುನಶ್ಚೇತನಕ್ಕೆ 15,000ಹೆ. ಸಹಾಯಧನ ಒದಗಿಸಲಾಗುವುದು.
ತೋಟಗಾರಿಕೆ ಉತ್ಪನ್ನಗಳ ಕೊಯ್ಲೋತ್ತರ ನಿರ್ವಹಣೆಗೆ ಪ್ಯಾಕ್ ಹೌಸ್, ಶೀಥಲ ಗೃಹ ಸ್ಥಾಪನೆ, ಶೀತಲ ವಾಹನಗಳಿಗೆ ಹಾಗೂ ಪ್ರಾಥಮಿಕ ಸಂಸ್ಕರಣ ಘಟಕ ಸ್ಥಾಪನೆ, ಮೌಲ್ಯ ವರ್ಧನೆ ಮಾಡುವ ಘಟಕ ಸ್ಥಾಪನೆಗೆ %25ರ ಸಹಾಯಧನ ಒದಗಿಸಲು ಅವಕಾಶವಿರುತ್ತದೆ. ತೋಟಗಾರಿಕೆ ಸಂಸ್ಕರಣ ಯೋಜನೆಯಡಿ %25ರ ಸಹಾಯಧನ ಒದಗಿಸಲು ಅವಕಾಶವಿದೆ.
ಗ್ರಾಮೀಣ ಮಾರುಕಟ್ಟೆ, ಸಗಟು ಮಾರುಕಟ್ಟೆ, ಮಾರುಕಟ್ಟೆ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ % 25 ಸಹಾಯಧನ ಒದಗಿಸಲಾಗುವುದು. ಈ ಸಂಬಂಧ ಆಸಕ್ತರು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ. ದೂ.ಸಂ. 0824 2423628

Saturday, July 25, 2009

ಘನವಾಹನಗಳ ಸಂಚಾರ ನಿಷೇಧ

ಮಂಗಳೂರು,ಜು.25:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿರುವುದರಿಂದ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಾದ 48,13ಮತ್ತು 17ರ ರಸ್ತೆ ಮತ್ತು ಸೇತುವೆಗಳು ಹದಗೆಟ್ಟಿವೆ.ಕಾರವಾರ ಮತ್ತು ಬೆಲೇಕೇರಿ ಬಂದರುಗಳು ಮಳೆಗಾಲದಲ್ಲಿ ಚಟುವಟಿಕೆ ಇಲ್ಲದ ಕಾರಣ ಅಲ್ಲಿಗೆ ಬರುತ್ತಿದ್ದ ಅದಿರು ಲಾರಿಗಳು ನವಮಂಗಳೂರು ಬಂದರು ಕಡೆಗೆ ಆಗಮಿಸುತ್ತಿವೆ.ಪ್ರತಿದಿನ 1400ಕ್ಕೂ ಅಧಿಕ ಲಾರಿಗಳು ನವಮಂಗಳೂರು ಬಂದರನ್ನು ಪ್ರವೇಶಿಸುತ್ತಿರುವುದರಿಂದ ಹೆದ್ದಾರಿಗಳು ಹಾನಿಗೀಡಾಗುತ್ತಿವೆ.ಇದರಿಂದ ಜನಜೀವನ ಅಸ್ತವ್ಯಸ್ತಗೊಳ್ಳುವ ಹಿನ್ನಲೆಯಲ್ಲಿ ಈ ಹೆದ್ದಾರಿಗಳಲ್ಲಿ ಜಿಲ್ಲಾಡಳಿತ ಘನವಾಹನ ನಿಷೇಧಿಸಿದೆ.
27.7.09ರ ಮಧ್ಯರಾತ್ರಿಯಿಂದ 31.08. 09ರವರೆಗೆ ದ.ಕ. ಜಿಲ್ಲೆಯ ಈ ಪ್ರಮುಖ 3 ರಾ. ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಅಧಿಕ ಭಾರ ಹೊತ್ತು ಸಂಚರಿಸುವ ಸರಕು ವಾಹನಗಳ ಮತ್ತು ಅದಿರು ಲಾರಿಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್. ಎ. ಪ್ರಭಾಕರ ಶರ್ಮಾ ಅವರು ಆದೇಶ ಹೊರಡಿಸಿದ್ದಾರೆ.
ಆದರೆ ಈ ನಿಷೇಧ ದಿನಬಳಕೆಯ ಮತ್ತು ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಅನ್ವಯಿಸುವುದಿಲ್ಲ.

Friday, July 24, 2009

ಸಾಮರ್ಥ್ಯ ಮೀರಿ ಶಾಲಾ ಮಕ್ಕಳ ಕೊಂಡೊಯ್ಯುವ ವಾಹನಗಳಿಗೆ ಎಚ್ಚರಿಕೆ

ಮಂಗಳೂರು,ಜು.24: ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿ ತಮ್ಮ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿರುವುದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ತಡೆಯಲು ಕಾರ್ಯೋನ್ಮುಖರಾಗಿದ್ದಾರೆ; ಈ ನಿಟ್ಟಿನಲ್ಲಿ ನಿಯಮ ಅನುಷ್ಠಾನಕ್ಕೆ ವಿಶೇಷ ತನಿಖಾ ತಂಡಗಳನ್ನು ನೇಮಿಸಲಾಗಿದೆ.
ಆಟೋರಿಕ್ಷಾ, ಟ್ಯಾಕ್ಷಿ, ಮ್ಯಾಕ್ಷಿಕ್ಯಾಬ್ ಮುಂತಾದ ವಾಹನಗಳಲ್ಲಿ ಪರವಾನಿಗೆಯಲ್ಲಿ ನಮೂದಿಸಿದ ಆಸನ ಸಾಮರ್ಥ್ಯಕ್ಕೆ ಅನುಗುಣವಾಗಿ ಮಕ್ಕಳನ್ನು ಕೊಂಡೊಯ್ಯಲು ಸೂಚಿಸಲಾಗಿದ್ದು, ವಾಹನಗಳಲ್ಲಿ ವಾಹನದ ಮೂಲ ದಾಖಲೆಗಳಾದ ನೋಂದಣಿ ಪತ್ರ, ಅರ್ಹತ ಪತ್ರ, ವಿಮೆ, ಪರವಾನಿಗೆ ಹಾಗೂ ಚಾಲಕರ ಲೈಸನ್ಸ್ ನ್ನು ಇಟ್ಟುಕೊಂಡು ತಪಾಸಣೆ ಕೋರಿದಾಗ ಹಾಜರು ಪಡಿಸಬೇಕು. ತಪ್ಪಿದಲ್ಲಿ ಅಂತಹ ವಾಹನಗಳ ನೋಂದಣಿ ಅಮಾನತು ಗೊಳಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ ಹಾಗೂ ಗರಿಷ್ಠ ದಂಡ ವಿಧಿಸುವುದು, ವಾಹನ ಮತ್ತು ಚಾಲಕನ ಪರವಾನಿಗೆ ರದ್ಧತಿಯಂತಹ ಕ್ರಮಕೈಗೊಳ್ಳ ಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತಮ ಜೆ ಅವರು ಎಚ್ಚರಿಸಿದ್ದಾರೆ.
ಶಾಲಾ ಮಕ್ಕಳ ಪೋಷಕರು ಕೂಡಾ ಸಾರಿಗೆ ಕಚೇರಿಯಿಂದ ಅಧಿಕೃತ ಪರವಾನಿಗೆ ಪಡೆದಿರುವ ವಾಹನಗಳಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಲಹೆ ಮಾಡಿದ್ದಾರೆ.

ಏಶಿಯನ್ ಫಾರೆಸ್ಟ್ : ನಿಗಾ ವಹಿಸಲು ವಿಶೇಷ ನೌಕೆ

ಮಂಗಳೂರು, ಜು.24: ಇತ್ತೀಚೆಗ ಮಂಗಳೂರಿನ ತಣ್ಣೀರು ಬಾವಿ ಸಮೀಪ ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾದ ಏಶಿಯನ್ ಫಾರೆಸ್ಟ್ ಸರಕು ಸಾಗಾಣೆ ಹಡಗು ಮುಳುಗಡೆಯಾಗಿದ್ದು, ಈ ಹಡಗಿನಿಂದ ತೈಲ ಸೋರಿಕೆಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶ ವ್ಯಾಪ್ತಿಯಲ್ಲಿ ನಿಗಾ ವಹಿಸಲು ಯೋಜಕಾ ಪ್ರವೈಟ್ ಲಿಮಿಟೆಡ್ ನೌಕೆಯನ್ನು ನಿಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಹೇಳಿದ್ದಾರೆ.
ಈ ಪ್ರದೇಶ ವ್ಯಾಪ್ತಿಯಲ್ಲಿ ಇತರ ನೌಕೆಗಳು ಸಂಚರಿಸದಂತೆ ಮತ್ತು ಇತರ ಯಾವುದೇ ಅವಘಡಗಳನ್ನು ತಪ್ಪಿಸಲು ಸಿಗ್ನಲ್ ನೀಡುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಶಾಜಿ ಎನ್ ಕೌಂಟರ್: ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ

ಮಂಗಳೂರು, ಜು. 24: ಜನವರಿ 19,2006ರಲ್ಲಿ ನಡೆದ ಶಾಜಿ ಎನ್ ಕೌಂಟರ್ ಪ್ರಕರಣದ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆ ನಡೆಸಲು ಜಿಲ್ಲಾ ದಂಡಾಧಿಕಾರಿಗಳಾದ ಶ್ರೀ ಎಸ್ ಎ.ಪ್ರಭಾಕರ ಶರ್ಮಾ ಅವರು ಆದೇಶಿಸಿದ್ದಾರೆ.
19.1.2006ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಶಾಜಿ ಯಾನೆ ಡೇವಿಡ್ ಯಾನೆ ಆಸಿಫ್ ನ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ಕಾರ್ಯಾಚರಣೆ ನ್ಯಾಯಸಮ್ಮತವೇ ಹಾಗೂ ಅಗತ್ಯವಿತ್ತೇ ಎಂಬ ಬಗ್ಗೆ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಬಲದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಉಪವಿಭಾಗ ದಂಡಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಆದೇಶ ನೀಡಲಾಗಿದ್ದು, 3 ತಿಂಗಳೊಳಗೆ ತನಿಖೆ ಪೂರ್ಣ ಗೊಳಿಸಲು ಆದೇಶದಲ್ಲಿ ನಿರ್ದೇಶಿಸಲಾಗಿದೆ.

Thursday, July 23, 2009

ಜ. ಸೋಮಶೇಖರ್ ಆಯೋಗದಿಂದ ಮುಂದುವರೆದ ವಿಚಾರಣೆ

ಮಂಗಳೂರು. ಜುಲೈ 23. ಜಿಲ್ಲೆಯಲ್ಲಿ ನಡೆದ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಗೆ ಸಂಬಂಧಪಟ್ಟಂತೆ ಜಸ್ಟೀಸ್ ಬಿ. ಕೆ. ಸೋಮಶೇಖರ ಆಯೋಗದ 5 ಹಂತದ ಕಲಾಪ ಇಂದು ಸಹ ಮುಂದುವರೆದಿದೆ.ನಗರದ ಸರ್ಕೀಟ್ ಹೌಸ್ ನಲ್ಲಿ ಬುಧವಾರ ಆರಂಭಗೊಂಡ ಈ 3 ದಿನಗಳ ಕಲಾಪ ಶುಕ್ರವಾರದ ವರೆಗೂ ನಡೆಯಲಿದೆ.

ಜಿಲ್ಲೆಯ ರೈತರಿಗೆ ರಾಷ್ಟ್ರೀಯ ಕೃಷಿ ವಿಮೆ ಯೋಜನೆ

ಮಂಗಳೂರು, ಜು.23: ಜಿಲ್ಲೆಯ ರೈತಾಪಿ ವರ್ಗ ಪ್ರಕೃತಿ ವಿಕೋಪ, ರೋಗ ಮತ್ತು ಪೀಡೆ ಬಾಧೆಯಿಂದ ತಾವು ಬೆಳೆದ ಭತ್ತ ನಷ್ಟ ಹೊಂದಿದರೆ ಅವರಿಗೆ ಬೆಳೆ ವಿಮಾ ರಕ್ಷೆ ಹಾಗೂ ಆರ್ಥಿಕ ನೆರವನ್ನು ನೀಡಲಾಗುವುದು. 2000 ಇಸವಿಯಲ್ಲಿ ಜಾರಿಗೆ ಬಂದ ವಿಮಾ ಯೋಜನೆಯನ್ನು 2009ರವರೆಗೆ ವಿಸ್ತರಿಸಲಾಗಿದ್ದು, ರೈತರಿಗೆ ಆಧುನಿಕ ಕೃಷಿ ಪದ್ಧತಿಗಳನ್ನು ಹೆಚ್ಚಿನ ಮೌಲ್ಯದ ಪರಿಕರಗಳನ್ನು ಮತ್ತು ಉನ್ನತ ತಾಂತ್ರಿಕತೆಯನ್ನು ಅನುಸರಿಸಲು ಪ್ರೇರೇಪಿಸುವುದು ಹಾಗೂ ಪ್ರೋತ್ಸಾಹಿಸಲು, ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂದರ್ಭದಲ್ಲಿ ರೈತರ ವರಮಾನದ ಸ್ಥಿರತೆ ಸಾಧಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ.
ಪ್ರಸಕ್ತ ಮುಂಗಾರು ಹಂಗಾಮಿಗೆ ಮಂಗಳೂರು ತಾಲೂಕಿನ ಮಂಗಳೂರು- ಎ ಹೋಬಳಿಯನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಹೋಬಳಿಗಳು (16) ಈ ಯೋಜನೆಗೆ ಒಳಪಟ್ಟಿರುತ್ತವೆ. ಭತ್ತ ಬೆಳೆಯುವ ಎಲ್ಲಾ ರೈತರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ. ಬೆಳೆ ಸಾಲ ಪಡೆಯದ ಭತ್ತ ಬೆಳೆಯುವ ರೈತರಿಗೆ ಕೃಷಿ ವಿಮಾ ಯೋಜನೆ ಅಥವಾ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಐಚ್ಛಿಕವಾಗಿರುತ್ತದೆ.
ರಾಷ್ಟ್ರೀಯ ಕೃಷಿ ವಿಮಾನ ಯೋಜನೆಯಡಿ ಪ್ರಕೃತಿ ವಿಕೋಪಕ್ಕೆ ತುತ್ತಾದರೆ ನಷ್ಟದ ನಿರ್ಧಾರವನ್ನು ವೈಯಕ್ತಿಕವಾಗಿ ನಿರ್ಧರಿಸಿ ಪರಿಹಾರ ನೀಡಲಾಗುವುದು. ಈ ರೀತಿ ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ 48 ಗಂಟೆಯೊಳಗೆ ರೈತರು ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅಗ್ರಿಕಲ್ಚರಲ್ ಇನ್ಷೂರೆನ್ಸ್ ಕಂಪೆನಿ ಆಫ್ ಇಂಡಿಯಾ 080- 25322860 ಸಂಪರ್ಕಿಸಿ ತಕ್ಷಣ ಮಾಹಿತಿ ನೀಡಬಹುದಾಗಿದೆ.
ಬೆಳೆ ವಿಮಾ ಮೊತ್ತವನ್ನು ವಿಮೆ ಮಾಡಿಸಿದ ಬೆಳೆಯ ಪ್ರಾರಂಭಿಕ ಇಳುವರಿ ಮೊತ್ತಕ್ಕೆ ಮಾಡಿಸಬಹುದು. ಬೆಳೆ ಸಾಲ ಪಡೆಯದ ರೈತರಿಗೆ ಮುಂಗಾರು ಹಂಗಾಮಿಗೆ ಕಡೆಯ ದಿನಾಂಕವನ್ನು ಬಿತ್ತಿದ/ ನಾಟಿ ಮಾಡಿದ ನಂತರ 30 ದಿನಗಳೊಳಗೆ ಅಥವಾ 31-7-09 ಯಾವುದು ಮೊದಲೋ ಅದನ್ನು ಪರಿಗಣಿಸಲಾಗುವುದು. ಬೆಳೆ ಸಾಲ ಪಡೆದ ರೈತರ ಬೆಳೆ ವಿಮೆ ಮೊತ್ತ ಕನಿಷ್ಠ ಬೆಳೆ ಸಾಲದ ಮೊತ್ತಕ್ಕೆ ಸರಿಸಮಾನವಾಗಿರಬೇಕು. ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ಸಂಬಂಧ ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ ಗ್ರಾಮೀಣ ಸಹಕಾರಿ ಬ್ಯಾಂಕ್ ಹಾಗೂ ಆಯಾ ರೈತ ಸಂಪರ್ಕ ಕೇಂದ್ರಗಳ ಕೃಷಿ ಸಹಾಯಕರನ್ನು, ಕೃಷಿ ಅಧಿಕಾರಿಗಳು ಅಥವಾ ಜಂಟಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ತೈಲ ಸೋರಿಕೆ ತಡೆ ವಿಳಂಬ ನೀತಿಗೆ ಜಿಲ್ಲಾಧಿಕಾರಿ ಅಸಮಾಧಾನ

ಮಂಗಳೂರು,ಜು.23:ಇತ್ತೀಚೆಗೆ ಪಣಂಬೂರು ಬಳಿ ಸಮುದ್ರದಲ್ಲಿ ಮುಳುಗಿದ ಹಾಂಗ್ ಕಾಂಗ್ ಮೂಲದ ಹಡಗು ಎಂ ವಿ ಏಷಿಯನ್ ಫಾರೆಸ್ಟ್ ಹಡಗಿನೊಳಗೆ ಇರುವ ಕಚ್ಚಾತೈಲ (ಇಂಧನ) ಹೊರತೆಗೆಯದಿದ್ದರೆ ಸಮುದ್ರ ಕಲುಷಿತಗೊಳ್ಳುವುದರಿಂದ ಹಡಗಿನ ಮಾಲೀಕರು ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಹೇಳಿದರು.
ಈ ಸಂಬಂಧ 22ರಂದು ಸಂಜೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಹಡಗು ಮುಳುಗಿ ಸಂಭವಿಸಲಿರುವ ಅಪಾಯದ ಬಗ್ಗೆ ಚರ್ಚಿ ಸಲಾಯಿತು. ಹಡಗು ಮುಳುಗಿ 5 ದಿನಗಳಾಗಿದ್ದು, ಮುಂದಿನ ಕ್ರಮದ ಬಗ್ಗೆ, ಪರಿಸರ ಮಾಲಿನ್ಯ ತಡೆಗಟ್ಟಲು ಹಡಗಿನ ಮಾಲೀಕರು ಕೈಗೊಳ್ಳುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿಯನ್ನು ಪಡೆದರಲ್ಲದೆ; ಈ ನಿಟ್ಟಿನಲ್ಲಿ ಸೂಕ್ತವಾಗಿ ಸ್ಪಂದಿಸದಿದ್ದರೆ ಹಡಗು ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.ಮುಳುಗಡೆ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ತೈಲ ಸೋರಿಕೆ ತಡೆಯಲು ಮತ್ತು ಹೊರತೆಗೆಯಲು ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ. ಈ ಬಗ್ಗೆ ಮೀನುಗಾರರು ಭಯ ಪಡುವ ಅಗತ್ಯವಿಲ್ಲ ಎಂದು ಶರ್ಮಾ ಅವರು ಹೇಳಿದರು.ಹಡಗಿಗೆ ಜಪಾನಿನ ಪಿ ಆಂಡ್ ಐ ವಿಮಾ ಸಂಸ್ಥೆಯಿಂದ ವಿಮೆ ಮಾಡಿಸಲಾಗಿದ್ದು, ಒಂದು ಬಿಲಿಯನ್ ಡಾಲರ್ ನಷ್ಟು ಪರಿಹಾರನ್ನು ಕೋರಬಹುದಾಗಿದೆ. ಸಮುದ್ರದಲ್ಲಿರುವ ಜಲಚರಗಳನ್ನು ರಕ್ಷಿಸುವ ಕೆಲಸ ಅತ್ಯಗತ್ಯವಾಗಿದ್ದು, ಇದರಿಂದ ಮೀನುಗಾರರಿಗೆ, ಪ್ರವಾಸೋದ್ಯಮಕ್ಕೆ ಆಗುವ ನಷ್ಟವನ್ನು ಪಡೆಯಬಹುದಾಗಿದೆ ಎಂದು ನೌಕಾ ಯಾನ ನಿರ್ದೇಶನಾಲಯದ ಮುಖ್ಯಸ್ಥ ಜಾನ್ ಹೇಳಿದರು. ಕೋಸ್ಟ್ ಗಾರ್ಡ್, ಹಡಗಿನ ಮಾಲೀಕರು, ಮತ್ತು ಸಂಬಂಧಪಟ್ಟ ಇಲಾಖೆಯ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Tuesday, July 21, 2009

ಆರೋಗ್ಯವಂತ ಸಮಾಜಕ್ಕೆ ಮಾಲಿನ್ಯರಹಿತ ಪರಿಸರ


ಮಂಗಳೂರು, ಜು.21: ಪರಿಸರ ಮತ್ತು ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಕು.ಭಾಗೀರಥಿ ಹೇಳಿದರು.
ಸೋಮವಾರ ಸುಳ್ಯದ ಐವರ್ನಾಡಿನ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ವಾರ್ತಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಾಂಕ್ರಾಮಿಕ ರೋಗ ಮತ್ತು ಸ್ವಚ್ಛತೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪರಿಸರ ಮಾಲಿನ್ಯದಿಂದ ಪ್ರಸಕ್ತ ಸಂದರ್ಭದಲ್ಲಿ ಬಹಳಷ್ಟು ಮಾರಕವಾದ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.ಎಲ್ಲರ ಮನೆಯಲ್ಲೂ ಶೌಚಾಲಯ ನಿರ್ಮಿಸಲು ಸಲಹೆ ಮಾಡಿದ ಅವರು,ಆರೋಗ್ಯವಂತ ಸಮಾಜಕ್ಕೆ ಮಾಲಿನ್ಯ ರಹಿತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕೆಂದರು.ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜಿ. ಪಂ. ಯೋಜನಾಧಿಕಾರಿ ಶ್ರೀ ತಾಕತ್ ರಾವ್ ಅವರು, ಕಳೆದ 25 ವರ್ಷಗಳಿಂದ ಶೌಚಾಲಯದ ಅಗತ್ಯದ ಬಗ್ಗೆ ಹೇಳುತ್ತಾ ಬಂದಿದ್ದರೂ ಗ್ರಾಮೀಣ ಪರಿಸರದಲ್ಲಿ ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಯಾಗಿಲ್ಲ ಎಂದು ವಿಷಾದಿಸಿದರು. 2005 ಅಕ್ಟೋಬರ್ 2ರ ಗಾಂಧೀಜಯಂತಿಯಂದು ಆರಂಭಿಸಿದ ಸ್ವಚ್ಚತಾ ಆಂದೋಲನ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಸಂಬಂಧ ಒಂದು ನೂತನ ಅಧ್ಯಾಯವನ್ನೇ ಆರಂಭಿಸಿದ್ದು, ಜನರ ಸಹಭಾಗಿತ್ವದಿಂದ ಸ್ವಚ್ಛತಾ ಆಂದೋಲನ ಯಶಸ್ವಿಯಾಯಿತು ಎಂದು ಅಭಿಪ್ರಾಯಪಟ್ಟರು. ದ.ಕ.ಜಿಲ್ಲೆಯಲ್ಲಿ 3 ವರ್ಷದೊಳಗೆ 95,000 ಶೌಚಾಲಯ ನಿರ್ಮಾಣಗೊಂಡಿದ್ದು, ಜಿಲ್ಲೆಯು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯಾಗಿ ಘೋಷಿಸಲ್ಪಡಲು ಸುಳ್ಯ ತಾಲೂಕಿನ ಜನರ ಸಹಕಾರ ಅಗತ್ಯ ಎಂದರು. ಸುಳ್ಯದ 12 ಗ್ರಾಮಪಂಚಾಯಿತಿಗಳಲ್ಲಿ ಸ್ವಚ್ಛತಾ ಆಂದೋಲನ ನಿಗದಿತ ಗುರಿ ಸಾಧಿಸಿಲ್ಲ ಎಂದ ಅವರು, ಗ್ರಾಮ ಪಂಚಾಯಿತಿ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರು.
ವಿಷಯದ ಬಗ್ಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಉಪನ್ಯಾಸ ನೀಡಿದರು.ಐವರ್ನಾಡು ಗ್ರಾಮಪಂಚಾಯಿತಿ ಉಪಾಧ್ಯಕ್ಷ ಶ್ರೀ ಕೃಷ್ಣಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು.ಸಹಕಾರಿ ಬ್ಯಾಂಕಿನ ಅಧ್ಯಕ್ಷ ಚಂದ್ರ ಕೊಳ್ಚಾರ್, ವೈದ್ಯಾಧಿಕಾರಿ ಜಯಪ್ರಕಾಶ್, ತಾ. ಪಂ.ಸದಸ್ಯರಾದ ವೀಣಾ ಮೋಂಟಡ್ಕ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು.ಪಂಚಾಯಿತಿ ಕಾರ್ಯದರ್ಶಿ ನಾರಾಯಣಗೌಡ ವಂದಿಸಿದರು.

Sunday, July 19, 2009

ಅತಿವೃಷ್ಠಿ ಹಾನಿ: 3334.00 ಲಕ್ಷ ಅನುದಾನ ಕೋರಿಕೆ

ಮಂಗಳೂರು, ಜು.19: ಕಳೆದ 39 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಳೆಯಾಗಿದ್ದು, ಜಿಲ್ಲೆಯಲ್ಲಿ 3918.33 ಲಕ್ಷ ರೂ.ಹಾನಿಯಾಗಿದ್ದು, 584 ಲಕ್ಷ ರೂ. ಸಿ ಆರ್ ಎಫ್ ನಿಧಿಯಲ್ಲಿದ್ದು, 3334.00 ಲಕ್ಷ ರೂ.ಗಳ ಅನುದಾನವನ್ನು ಸರ್ಕಾರದಿಂದ ಕೋರಲಾಗಿದ್ದು, ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡುವುದಾಗಿ ರಾಜ್ಯ ಗೃಹ ಸಚಿವ ಡಾ. ವಿ. ಎಸ್. ಆಚಾರ್ಯ ಅವರು ತಿಳಿಸಿದರು.
ಇಂದು ಈ ಸಂಬಂಧ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ, ಮೆಸ್ಕಾಂ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ನಾಶ, ನಷ್ಟದ ಮಾಹಿತಿಯನ್ನು ಪಡೆದುಕೊಂಡರು. 23,816 ಹೆಕ್ಟೇರ್ ನಾಟಿಯಾಗಿದ್ದು, 99.55 ಹೆಕ್ಟೇರ್ ಪ್ರದೇಶ ನೆರೆ ಪೀಡಿತವಾಗಿದೆ. 41 ಗ್ರಾಮಗಳ 193 ರೈತರ ಕೃಷಿ ಭೂಮಿ ಹಾನಿಗೊಳಗಾಗಿದ್ದು, ನೆರೆ ಇಳಿದ ಬಳಿಕವಷ್ಟೇ ಸಮಗ್ರ ವರದಿ ನೀಡಲು ಸಾಧ್ಯ ಎಂದು ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು 23 ಲಕ್ಷ ರೂ. ಹಾನಿಯಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಮೆಸ್ಕಾಂನ ನಷ್ಟ 143.21 ಲಕ್ಷ ರೂ. ಮಳೆಯಿಂದಾಗಿ 179 ಟ್ರಾನ್ಸ್ ಫಾರ್ಮರ್ ಗೆ ಹಾನಿಯಾಗಿದ್ದು, 1,160 ಕಂಬ ಹಾನಿಗೊಳಗಾಗಿದೆ. 393 ಗ್ರಾಮ (ದ.ಕ. ಮತ್ತು ಉಡುಪಿ) ಗಳಲ್ಲಿ ಹೆಚ್ಚಿನ ನಷ್ಟ ಸಂಭವಿಸಿದೆ ಎಂದರು. ಮನಾಪ ವ್ಯಾಪ್ತಿಯಲ್ಲಿ 5.48 ಕೋಟಿ ಹಾನಿಯಾಗಿದೆ ಎಂದು ಮನಾಪ ಆಯುಕ್ತ ರಮೇಶ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆಯ ಹೆಚ್ಚಿನ ರಸ್ತೆಗಳು ಹಾಳಾಗಿದ್ದು, ಮಳೆಗಾಲ ಮುಗಿಯಲು ಕಾಯಬೇಕಿಲ್ಲ ತುರ್ತಾಗಿ ಆಗಬೇಕಾಗಿರುವ ರಸ್ತೆ ರಿಪೇರಿ ಕೆಲಸವನ್ನು ಶೀಘ್ರದಲ್ಲಿ ಮಾಡಿ ಎಂದು ಸೂಚಿಸಿದ ಸಚಿವರು, ಅದಿರಿನ ಲಾರಿಗಳಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸಲು ಮಳೆಗಾಲ ಮುಗಿಯುವವರೆಗೆ ಅದಿರು ಲಾರಿಗಳ ಸಂಚಾರ ನಿಷೇಧಕ್ಕೆ ಜಿಲ್ಲಾಡಳಿತಕ್ಕೆ ಸಭೆಯಲ್ಲಿ ನಿರ್ದೇಶನ ನೀಡಿದರು.
ಪರಿಹಾರ ನೀಡುವಾಗ ವಾಸ್ತವ ಪರಿಸ್ಥಿತಿಯನ್ನು ಗಮನಿಸಿ ಉದಾರತೆಯನ್ನು ತೋರಲು ಅಧಿಕಾರಿಗಳಿಗೆ ಸಲಹೆ ಮಾಡಿದ ಸಚಿವರು, ಶಾಸಕರಾದ ಶ್ರೀ ಅಭಯಚಂದ್ರ ಜೈನ್, ಶ್ರೀ ಯೋಗೀಶ್ ಭಟ್, ಶ್ರೀ ರಮಾನಾಥ ರೈ, ಶ್ರೀಯು. ಟಿ. ಖಾದರ್ ಅವರುಗಳ ಮನವಿಯನ್ನು ಪರಿಶೀಲಿಸುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಉಳ್ಳಾಲದಲ್ಲಿ ನೆರೆ ನೀರಿನಲ್ಲಿ ಕೊಚ್ಚಿ ಹೋದ ಬಾಲಕ ಅಶ್ರಫ್ ನ ಹೆತ್ತವರಿಗೆ ಮತ್ತು ಬಂಟ್ವಾಳದ ರಿಜ್ವಾನ್ ಅವರಿಗೆ ಪರಿಹಾರವನ್ನು ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಜೆ. ಪಾಲೇಮಾರ್, 3ನೇ ಹಣಕಾಸು ಆಯೋಗದ ಅಧ್ಯಕ್ಷ ಎ. ಜಿ.ಕೂಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ್ ಶೆಟ್ಟಿ, ಪ್ರಭಾರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮೈಸೂರು ಪ್ರಾದೇಶಿಕ ವಿಭಾಗದ ಆಯುಕ್ತರಾದ ಶ್ರೀಮತಿ ಜಯಂತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಪಶ್ಚಿಮ ವಲಯ ಐ ಜಿ ಪಿ ಗೋಪಾಲಕೃಷ್ಣ ಹೊಸೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಾಕೃತಿಕ ವಿಕೋಪ ಸಿ ಎಂಗೆ ವರದಿ: ಗೃಹಸಚಿವ

ಮಂಗಳೂರು, ಜು.19: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿಯಲ್ಲಿ ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಗಳ ವೀಕ್ಷಣೆಗೆ ಪೂರ್ವಾಹ್ನ 8.30ಕ್ಕೆ ಬಜಪೆಗೆ ಆಗಮಿಸಬೇಕಿದ್ದ ಮುಖ್ಯಮಂತ್ರಿ ಶ್ರಿ ಬಿ. ಎಸ್. ಯಡಿಯೂರಪ್ಪ ಅವರು ಭಾರೀ ಮಳೆಯಿಂದ ವಿಮಾನ ಇಳಿಯದ ಕಾರಣ ಬೆಂಗಳೂರಿಗೆ ಹಿಂದಿರುಗಿದರು. ಮುಖ್ಯಮಂತ್ರಿಯನ್ನು ಸ್ವಾಗತಿಸಲು ಬಂದಿದ್ದ ಗೃಹಸಚಿವ ವಿ. ಎಸ್ .ಆಚಾರ್ಯ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಅವಿಭಜಿತ ಜಿಲ್ಲೆಗಳ ಪ್ರಾಕೃತಿಕ ವಿಕೋಪ ಪ್ರದೇಶಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗೆ ಸಮಗ್ರ ವರದಿ ನೀಡುವುದಾಗಿ ಹೇಳಿದರು.

Saturday, July 18, 2009

ಪ್ರಾಕೃತಿಕ ವಿಕೋಪ:ಪರಿಹಾರಹೆಚ್ಚಿಸಲು ಕೆಡಿಪಿಯಲ್ಲಿ ಒತ್ತಾಯ

ಮಂಗಳೂರು, ಜು.18: ಅತಿವೃಷ್ಠಿ ಸಂದರ್ಭದಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರದ ಮೊತ್ತ ಕನಿಷ್ಠವಾಗಿದ್ದು, ಕಡಿಮೆ ಮೊತ್ತದ ಪರಿಹಾರ ನೀಡುವುದು ಮಾನವೀಯವಲ್ಲ ಎಂದು ಜನಪ್ರತಿನಿಧಿಗಳು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ ಶಾಸಕರು,ಮನೆ ಹಾನಿ, ಕೃಷಿ ನಾಶದ ಸಂದರ್ಭಗಳಲ್ಲಿ ನಿಕೃಷ್ಟ ಪರಿಹಾರ ನೀಡದೆ ಸೂಕ್ತ ಪರಿಹಾರ ಧನ ನೀಡುವಂತೆ ಶಾಸಕರಾದ ಎನ್. ಯೋಗೀಶ್ ಭಟ್, ಅಭಯಚಂದ್ರ ಜೈನ್, ರಮಾನಾಥ ರೈ ಅವರು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ಅವರು ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಅಗತ್ಯ ಕಾನೂನು ತಿದ್ದುಪಡಿಯ ಭರವಸೆಯನ್ನೂ ನೀಡಿದರು. ಮಳೆಗಾಲದಲ್ಲಿ ಮೆಸ್ಕಾಂ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ದೂರಿಗೆ ಮೆಸ್ಕಾಂ ಅಧಿಕಾರಿಗಳ ವಿವರಣೆಯನ್ನು ಕೋರಲಾಯಿತಲ್ಲದೆ, 24 ಗಂಟೆ ಸೇವೆಯ ಬಗ್ಗೆ 1917 ತುರ್ತು ಸೇವೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಬಡವರಿಗೆ ಮನೆ ನೀಡುವ ಬಗ್ಗೆ ನಡೆದ ಚರ್ಚೆಯಲ್ಲಿ ಇಂದಿರಾ ಆವಾಸ್ ಯೋಜನೆಯಡಿ441 ಫಲಾನುಭವಿಗಳನ್ನು ಗುರುತಿಸಿ ಮನೆ ನೀಡಲು ಸಚಿವರು ಅಧಿಕಾರಿಗೆ ಸೂಚನೆ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರುಅಂಗವಿಕಲ ಫಲಾನುಭವಿಗಳನ್ನು ಗುರುತಿಸಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸೈಕ್ರಿಯಾಟ್ರಿಸ್ಟ್ ಮತ್ತು ಸೈಕಾಲಜಿಸ್ಟ್ ಅವರನ್ನು ನೇಮಕ ಮಾಡುವ ಅಧಿಕಾರವನ್ನು ಸಚಿವರು ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ. ಪ್ರಭುದೇವ್ ಅವರಿಗೆ ನೀಡಿದರಲ್ಲದೆ ಅಂಗವಿಕಲರಿಗೆ ಸರ್ಕಾರ ನೀಡಿರುವ ಸವಲತ್ತು ತಲುಪಿಸಲು ಮೊಬೈಲ್ ಸ್ಕ್ವಾಡ್ ರಚಿಸುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಯಾವುದೇ ಅಧಿಕಾರಿಗಳು ಫಲಾನುಭವಿಗಳಿಗೆ ಸವಲತ್ತು ನೀಡುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಲಂಚ ತೆಗೆದುಕೊಳ್ಳುವ ಪ್ರಕರಣಗಳು ಬಂದರೆ ಸಚಿವರಿಗೆ ನೇರ ದೂರು ನೀಡುವಂತೆ ತಿಳಿಸಿದ ಸಚಿವರು ಅಂತಹವರ ವಿರುದ್ಧ ಸೂಕ್ತ ಕ್ರಮದ ಎಚ್ಚರಿಕೆಯನ್ನು ನೀಡಿದರು. ನಿಗದಿತ ಪ್ರದೇಶಗಳಿಗೆ ಪರವಾನಿಗೆ ಪಡೆದ ಬಸ್ಸುಗಳು ಆ ಪ್ರದೇಶಗಳಲ್ಲಿ ಸಂಚರಿಸದಿದ್ದರೆ ಅಂತಹ ಬಸ್ಸುಗಳ ಪರವಾನಿಗೆ ರದ್ದು ಪಡಿಸಿ ಕರ್ನಾಟಕ ರಾಜ್ಯ ಸಾರಿಗೆ ರಸ್ತೆ ಬಸ್ಸುಗಳಿಗೆ ಪರವಾನಿಗೆ ನೀಡಲು ಸಚಿವರು ಸೂಚಿಸಿದರು. ಬಂಟ್ವಾಳ ಚತುಷ್ಪತ ಕಾಮಗಾರಿ ನಡೆಯುತ್ತಿರುವ ಪ್ರದೇಶ ವ್ಯಾಪ್ತಿಯಲ್ಲಿ ಬೆಳಗ್ಗೆ 8ರಿಂದ ಸಂಜೆ 8ರವರೆಗೆ ಕಡ್ಡಾಯವಾಗಿ ಅದಿರು ಲಾರಿ ಸಂಚಾರ ನಿಷೇಧದ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಯಿತು.
ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ವೆಂಕಟ್ ದಂಬೇಕೋಡಿ, ಮಹಾಪೌರ ಎಂ. ಶಂಕರ್ ಭಟ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.

ನೆರೆಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರ ಭೇಟಿ


ಮಂಗಳೂರು, ಜು.18:ಕಳೆದ ಎಂಟು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರಿ ಜೆ. ಕೃಷ್ಣ ಪಾಲೇಮಾರ್ ಅವರು ಇಂದು ಮಂಗಳೂರಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೀವಹಾನಿ ಮತ್ತು ಆಸ್ತಿ ಹಾನಿ ಸಂಬಂಧ ಈಗಾಗಲೇ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಅಂದಾಜು 25ರಿಂದ 30 ಕೋಟಿ ರೂ.ಗಳ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು, ಸುಮಾರು 385 ಮನೆ, ಮತ್ತು ಕೃಷಿ ಭೂಮಿ ನಾಶವಾಗಿದೆ ಹಾಗೂ ಜೀವಹಾನಿ ಸಂಭವಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನೆರೆ ಪೀಡಿತ ಪ್ರದೇಶಗಳಾದ ಬಂಗ್ರ ಕೂಳೂರು, ಮಾಲಾಡಿ, ಉಳ್ಳಾಲ ವ್ಯಾಪ್ತಿಯ ಪಟ್ಲಾ ಮುಂತಾದೆಡೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರಲ್ಲದೆ 42 ಕಡೆ ಗಂಜಿಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು,ಜನರು ಪ್ರಾಕೃತಿಕ ವಿಕೋಪದ ಮುನ್ಸೂಚನೆ ದೊರೆತ ಸಂದರ್ಭದಲ್ಲಿ ನಿಗದಿತ ಪ್ರದೇಶದಿಂದ ಹೊರಬಂದು ಜಿಲ್ಲಾಡಳಿತ ಕೈಗೊಂಡಿರುವ ಪರ್ಯಾಯ ವ್ಯವಸ್ಥೆಗಳ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು. ಮನಾಪ ಮೇಯರ್ ಶಂಕರ್ ಭಟ್, ಆಯುಕ್ತ ರಮೇಶ್, ತಹಸೀಲ್ದಾರ್ ರವಿಚಂದ್ರ ನಾಯಕ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Friday, July 17, 2009

ಜಿಲ್ಲಾಡಳಿತದಿಂದ ಎನ್ ಡಿ ಆರ್ ಎಫ್ ಪಡೆಗೆ ಆತ್ಮೀಯ ಬೀಳ್ಕೊಡುಗೆ


ಮಂಗಳೂರು ವಿ.ವಿ: ಫಲಿತಾಂಶ ಪ್ರಕಟ

ಮಂಗಳೂರು, ಜು.17:ಮಂಗಳೂರು ವಿಶ್ವವಿದ್ಯಾನಿಲಯ ಮೇ, ಜೂನ್ 2009ರಲ್ಲಿ ನಡೆಸಿದ ಕ್ರೆಡಿಟ್ ಬೇಸ್ಡ್ ಆರನೇ ಸೆಮಿಸ್ಟರ್ ಬಿ ಎ, ಬಿ. ಎಸ್ಸಿ, ಬಿ.ಕಾಂ, ಬಿ.ಬಿ. ಎಂ., ಬಿ.ಸಿ.ಎ ಪದವಿ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳ ಫಲಿತಾಂಶದ ವಿವರ:ದಕ್ಷಿಣ ಕನ್ನಡ ಜಿಲ್ಲೆ: ಬಿ.ಎಪರೀಕ್ಷೆಗೆ ಹಾಜರಾದವರು- 2303,ಪಾಸಾದವರು-1838, 79.80% ಇವರಲ್ಲಿ ಹುಡುಗಿಯರು-1630,ಪಾಸಾದವರು-1368 ಹುಡುಗರು- 673ಪಾಸಾದವರು-466
ಬಿ ಎಸ್ಸಿ: ಒಟ್ಟು 923 ಪಾಸಾದವರು-792, 85.80% ಇವರಲ್ಲಿ ಹುಡುಗಿಯರು-682,ಪಾಸಾದವರು-602 ಹುಡುಗರು- 238 ಪಾಸಾದವರು- 189.
ಬಿ.ಕಾಂ: ಒಟ್ಟು ಹಾಜರಾದವರು: 2266, ಪಾಸಾದವರು- 1362, 60.10% ಹುಡುಗಿಯರು-1187, ಪಾಸಾದವರು-825, ಹುಡುಗರು- 1079 ಪಾಸಾದವರು-537
ಬಿ.ಬಿ.ಎಂ- ಪರೀಕ್ಷೆಗೆ ಹಾಜರಾದವರು 1392 ಪಾಸಾದವರು-720, 51.72% ಒಟ್ಟು ಹುಡುಗರು- 891, ಪಾಸಾದವರು- 362,ಒಟ್ಟು ಹುಡುಗಿಯರು-501, ಪಾಸಾದವರು- 358

ಬಿ.ಸಿ.ಎ : ದಕ್ಷಿಣ ಕನ್ನಡದಲ್ಲಿ ಪರೀಕ್ಷೆಗೆ ಹಾಜರಾದವರು 769 ,ಪಾಸಾದವರು - 691, ಒಟ್ಟು ಹುಡುಗರು-393,ಪಾಸಾದವರು- 333,ಒಟ್ಟು ಹುಡುಗಿಯರು-376 ,ಪಾಸಾದವರು -358.

ಉಡುಪಿಯಲ್ಲಿ ಪರೀಕ್ಷೆಗೆ ಹಾಜರಾದವರು -336, ಪಾಸಾದವರು -297,ಒಟ್ಟು ಹುಡುಗರು- 149 ,ಪಾಸಾದವರು -123, ಒಟ್ಟು ಹುಡುಗಿಯರು- 187, ಪಾಸಾದವರು -174.

ಕೊಡಗು ಪರೀಕ್ಷೆಗೆ ಹಾಜರಾದವರು - 44, ಪಾಸಾದವರು - 43, ಒಟ್ಟು ಹುಡುಗರು-24, ಪಾಸಾದವರು -23. ಹುಡುಗಿಯರು- 20, ಪಾಸಾದವರು -20.

Thursday, July 16, 2009

ರಾಷ್ಟ್ರೀಯ ವಿಪತ್ತು ನಿರ್ವಹಣ ದಳದಿಂದ ಅಣಕು ಪ್ರದರ್ಶನ


ಮಂಗಳೂರು, ಜು.16: ಕರಾವಳಿ ಪ್ರದೇಶಗಳಲ್ಲಿ ನೆರೆ ಹಾವಳಿ ಸಂದರ್ಭದಲ್ಲಿ ಸ್ಥಳೀಯರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಹಯೋಗದೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸದಸ್ಯರು ಮಂಗಳೂರಿನ ಕಲ್ಲಾಪು ನೇತ್ರಾವತಿ ನದಿಯಲ್ಲಿ ಅಣಕು ವಿಪತ್ತು ನಿರ್ವಹಣಾ ಪ್ರದರ್ಶನ ನಡೆಸಿತು.ಜಿಲ್ಲಾ ಗೃಹರಕ್ಷಕ ದಳದ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು ಸಂಯುಕ್ತವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಸೇರಿದಂತೆ ವಿಪತ್ತು ನಿರ್ವಹಣೆ ಸಿಇಒ ಹಾಗೂ ಮಂಗಳೂರು ಎಸಿಯವರಾದ ಪ್ರಭುಲಿಂಗ ಕವಳಿಕಟ್ಟೆ, ಎನ್ ಡಿ ಆರ್ ಎಫ್ ನ ಅಸಿಸ್ಟೆಂಟ್ ಕಮಾಂಡರ್ ಆರ್ ಎ ರಣ್ ಮುಂಗ್ ಮತ್ತಿತರರು ಪಾಲ್ಗೊಂಡಿದ್ದರು.

Wednesday, July 15, 2009

ಕುಡಿಯುವ ನೀರು: ಸಚಿವರ ಬಳಿಗೆ ನಿಯೋಗ


ಮಂಗಳೂರು, ಜು.15: ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಗ್ರ ಸಂಪರ್ಕಕ್ಕೆ ಸಂಬಂಧಿಸಿದಂತೆ ಸಮರ್ಪಕ ಯೋಜನೆಯನ್ನು ರೂಪಿಸಲು ಮತ್ತು ಈ ಸಂಬಂಧ ಟೆಂಡರ್ ಕರೆಯುವ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ವೆಂಕಟ್ ದಂಬೇಕೋಡಿ ಅವರ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಬಳಿಗೆ ನಿಯೋಗ ತೆರಳಿ ಚರ್ಚೆ ನಡೆಸಲು ನಿರ್ಧರಿಸಲಾಯಿತು.
ಇಂದು ಜಿಲ್ಲಾಪಂಚಾಯತ್ ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ದ. ಕ. ಜಿ. ಪಂ.ನ 18ನೇ ಸಾಮಾನ್ಯ ಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕುಡಿಯುವ ನೀರಿನ ಬಗ್ಗೆ ನಡೆದ ಸುದೀರ್ಘ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಕ್ಕಾರು, ನಾರಾವಿ, ಗುರುಪುರ, ಕುರ್ನಾಡು, ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಸದಸ್ಯರು ಕುಡಿಯುವ ನೀರಿನ ಕಾಮಗಾರಿಗಳ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಗೆಡವಿದರು.
ಈ ಸಂಬಂಧ ಉತ್ತರಿಸಿದ ಜಿಲ್ಲಾ ಪಂಚಾಯತ್ ಸಿ ಇ ಒ ಅವರು, ಜಲನಿಯಂತ್ರಣ ಕೊಠಡಿಯ ಮುಖಾಂತರ ಬಂದ ವರದಿ ಮತ್ತು ಆಕ್ಷನ್ ಪ್ಲಾನ್ ಬಗ್ಗೆ ವಿವರಿಸಿ, ಈ ವರ್ಷ ಏಳು ಕೋಟಿ ಎಪ್ಪತ್ತಾರು ಲಕ್ಷ ರೂ.ಗಳನ್ನು ಕುಡಿಯುವ ನೀರಿಗೆ ಮೀಸಲಿಟ್ಟಿದೆ ಎಂದರು.
ನಂತರ ನಡೆದ ಚರ್ಚೆಯಲ್ಲಿ ಅಂಗನವಾಡಿಗಳಲ್ಲಿ ಅವಧಿ ಮೀರಿದ ಆಹಾರ, ಬಿಸಿಎಂ ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ, ತುಂಬೆ ವೆಂಟೆಡ್ ಡ್ಯಾಂ ಬಳಿ 900 ಎಕರೆ ಕೃಷಿಕರ ಜಮೀನು ಸ್ವಾಧೀನ ಸಂಬಂಧ, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಸಂಬಂಧ ಚರ್ಚೆ ನಡೆದು ಜಿ. ಪಂ. ಕಾರ್ಯನಿರ್ವಹಣಾಧಿಕಾರಿ ಈ ವಿಷಯಗಳ ಬಗ್ಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಸಾಮಾನ್ಯ ಸಭೆಯಲ್ಲಿ ಶಾಸಕ ಯು ಟಿ ಖಾದರ್ ಪಾಲ್ಗೊಂಡಿದ್ದರು. ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸದಾನಂದ ಮಲ್ಲಿ, ರಾಜಶ್ರೀ ಹೆಗಡೆ ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಎನ್ ಡಿ ಆರ್ ಎಫ್


ಮಂಗಳೂರು, ಜು. 15: ಪ್ರವಾಹದಿಂದ ಸಂಭವಿಸುವ ಅನಾಹುತಗಳನ್ನು ತಡೆಯಲು ಮಂಗಳೂರಿಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆ ಆಗಮಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಈ ಸಂಬಂಧ ಸಭೆಯನ್ನು ಏರ್ಪಡಿಸಲಾಗಿತ್ತು. ನಿನ್ನೆ ಬರ ನಿರ್ವಹಣಾ ಕೋಶದ ಮಾಹಿತಿಯಂತೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ 7 ಪ್ರದೇಶಗಳನ್ನು ಮುಳುಗಡೆ ಪ್ರದೇಶಗಳೆಂದು ಗುರುತಿಸಲಾಗಿದ್ದು, ಪಡೆ ಶುಕ್ರವಾರ (17.7.09)ರಂದು ಈ ಪ್ರದೇಶಗಳಲ್ಲಿ ಡಮ್ಮಿ ಅಭ್ಯಾಸ ನಡೆಸಲಿರುವರು ಎಂದು ಅಸಿಸ್ಟೆಂಟ್ ಕಮಾಂಡರ್ ಆರ್. ಎನ್. ರನ್ ಮುಂಗ ಸಭೆಯಲ್ಲಿ ತಿಳಿಸಿದರು.ಇವರ ತುಕಡಿಯಲ್ಲಿ 36 ಮಂದಿಯಿದ್ದು, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವ ಪರಿಣತಿಯನ್ನು ಈ ಪಡೆ ಹೊಂದಿದೆ. ಪ್ರವಾಹ ಪೀಡಿತ ಪ್ರದೇಶಗಳ ನಕ್ಷೆ, ಜನಸಂಖ್ಯಾ ಮಾಹಿತಿ, ವಿಕೋಪ ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಮೂಲಸೌಕರ್ಯ, ಆಧುನಿಕ ಉಪಕರಣಗಳು, ವೈದ್ಯಕೀಯ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ವಿನಿಮಯಮಾಡಿಕೊಳ್ಳಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಮಾತನಾಡಿ, ಜಿಲ್ಲಾಡಳಿತ ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದು, ಯಾವುದೇ ಆತಂಕ ಬೇಡ ಎಂದರು. ಎನ್ ಡಿ ಆರ್ ಎಫ್ ತಮ್ಮ ಡಮ್ಮಿ ಅಭ್ಯಾಸದ ಸಂದರ್ಭದಲ್ಲಿ ಸ್ಕೌಟ್, ಗೈಡ್, ಮೀನುಗಾರರು ಮತ್ತು ವಿದ್ಯಾರ್ಥಿಗಳನ್ನು ತಮ್ಮೊಂದಿಗೆ ಸೇರಿಸಿಕೊಂಡು ಪ್ರದರ್ಶನ ನೀಡಲಿದೆ. ಸಭೆಯಲ್ಲಿ ಅಡಿಷನಲ್ ಎಸ್ ಪಿ ರಮೇಶ್, ಹೋಮ್ ಗಾರ್ಡ್ ಕಮಾಂಡೆಂಟ್ ನಿದರ್ಶನ ಹೆಗಡೆ, ಎ ಸಿ ಪ್ರಭುಲಿಂಗ ಕವಳಿಕಟ್ಟಿ,ಎನ್ ಡಿ ಆರ್ ಎಫ್ ನಿರೀಕ್ಷಕ ಎನ್. ಮೋಹನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Tuesday, July 14, 2009

ಸುಳ್ಯ: ಸುಬ್ರಮಣ್ಯ, ಬೆಳ್ಳಾರೆಯಲ್ಲಿ ಗ್ರಾಮಸಂಪರ್ಕ, ಗ್ರಾಮವಾಹಿನಿ

ಮಂಗಳೂರು, ಜುಲೈ, 14: ವಾರ್ತಾ ಇಲಾಖೆ ವತಿಯಿಂದ ಸುಳ್ಯ ತಾಲೂಕಿನ ಬೆಳ್ಳಾರೆ, ಸುಬ್ರಮಣ್ಯ ಪರಿಸರದಲ್ಲಿ ಗ್ರಾಮಸಂಪರ್ಕ ಮತ್ತು ಗ್ರಾಮವಾಹಿನಿ ಕಾರ್ಯಕ್ರಮಗಳನ್ನು ದಿ. 13.7.09ರಿಂದ ಹಮ್ಮಿಕೊಳ್ಳಲಾಗಿದ್ದು, ಗಣೇಶ್ ನಾವಡ ಅವರ ನೇತೃತ್ವದಲ್ಲಿ ನಾಟಕ ತಂಡ ಮತ್ತು ಇಲಾಖೆಯ ಸಿನಿ ಚಾಲಕರಾದ ಫ್ರಾನ್ಸಿಸ್ ಲೂಯಿಸ್, ಚಾಲಕ ವೇಣುಗೋಪಾಲ್, ವಿಶ್ವನಾಥ ಜೋಗಿ ಅವರು ಸ್ಥಳೀಯರಿಗೆ ಸ್ವಚ್ಛತೆ, ಆರೋಗ್ಯ ಮತ್ತು ಸರ್ಕಾರದ ಸಾಧನೆಗಳ ಕುರಿತ ಮಾಹಿತಿಯನ್ನು ಚಲನಚಿತ್ರಗಳ ಮೂಲಕ ನೀಡುತ್ತಿದ್ದಾರೆ. ಐವರ್ನಾಡು ಗ್ರಾಮಪಂಚಾಯಿತಿಯ ಸಹಕಾರಿ ಬ್ಯಾಂಕ್ ಆವರಣದಲ್ಲಿ ಜು. 20ರಂದು ಸಾಂಕ್ರಾಮಿಕ ರೋಗ ಮತ್ತು ಸ್ವಚ್ಛತೆಯ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ಆರ್ ಟಿ ಸಿ ಟ್ಯಾಂಪರ್: ನಾಲ್ವರ ಅಮಾನತು

ಮಂಗಲೂರು, ಜು. 14: ಮಂಗಳೂರು ತಾಲೂಕು ಕಚೇರಿಯ ಸಿಬ್ಬಂದಿಗಳಾದ ಗ್ರೆಟ್ಟಾ, ರವಿ, ಕೇಶವ, ನಾರಾಯಣ ಎಂಬವರನ್ನು ಆರ್ ಟಿ ಸಿ ಟ್ಯಾಂಪರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಂಗಳೂರು ತಾಲೂಕಿನ ಅತ್ತಾವರ ಗ್ರಾಮದ ಸ.ನಂ. 111/1 ರಲ್ಲಿ 1-39 ಎಕರೆ ಜಮೀನಿನ ಮೂಲ ಆರ್ ಟಿ ಸಿ ಯನ್ನು ಟ್ಯಾಂಪರ್ ಮಾಡಿ ಕಲಂ ನಂ. 11ರಲ್ಲಿ ಚಾ.ಗೇ.ಕೂಸ/ಕೋಂ ತುಕ್ರ ಪೂಜಾರಿ ಎಂದು ಅಕ್ರಮ ಸೇರ್ಪಡೆ ಮಾಡಿ ಪೋರ್ಜರಿ ದಾಖಲೆ ಸೃಷ್ಟಿಸಿ ಸದ್ರಿ ಜಮೀನು ಶ್ರೀಮತಿ ಸುಗಂಧಿ ಎಂಬವರ ಹೆಸರಲ್ಲಿ ಎಲ್ಆರ್ ಟಿ ಪ್ರಕರಣ ಸಂ. 2416/2000 ದಂತೆ ಮಂಜೂರು ಮಾಡಿಸಿಕೊಳ್ಳಲು ಕಾರಣರಾದವರನ್ನು ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಗಳೆಂದು ಗುರುತಿಸಲಾದ ಗ್ರಾಮ ಸಹಾಯಕರಾದ ಶೈಲೇಶ್, ಭಾಸ್ಕರ ವಿರುದ್ಧ ನೇಮಕಾತಿ ಪ್ರಾಧಿಕಾರಿಯಾದ ತಹಸೀಲ್ದಾರರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ. ಹಾಗೂ ಅರ್ಜಿದಾರರಾದ ಸುಗಂಧಿ ಹಾಗೂ ಆಕೆಯ ಜಿಪಿಎ ಹೋಲ್ಡರ್ ಪ್ರಾಣೇಶ್ ಸಹಿತ ಎಲ್ಲಾ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಆದೇಶಿಸಲಾಗಿದೆ.

Thursday, July 9, 2009

ನಾಳೆಯಿಂದ ಶಾಲೆ ಪುನರಾರಂಭ

ಮಂಗಳೂರು,ಜು.9: ಮಳೆಯ ಕಾರಣ ಜಿಲ್ಲಾಡಳಿತ ಮುಂಜಾಗರೂಕತಾ ಕ್ರಮವಾಗಿ ಸೋಮವಾರದಿಂದ ಶಾಲಾ ಮಕ್ಕಳಿಗೆ ರಜೆ ಘೋಷಿಸಿದ್ದು,ನಾಳೆಯಿಂದ ಎಂದಿನಂತೆ ಶಾಲೆಗಳು ಆರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಿ ಅಪಾಯಕಾರಿ ಸಂದರ್ಭಗಳಲ್ಲಿ ರಜೆಯನ್ನು ಘೋಷಿಸುವ ಅಧಿಕಾರವವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದ್ದು, ಮುಂಜಾಗರೂಕತಾ ಕ್ರಮವಾಗಿ ಬಿಇಒ ಗಳು ರಜೆ ಸಾರಬಹುದು ಎಂದು ಅವರು ತಿಳಿಸಿದ್ದಾರೆ.

Wednesday, July 8, 2009

ಸಚಿವ ಪಾಲೇಮಾರ್ ಅವರಿಂದ ವೆನ್ಲಾಕ್ ಭೇಟಿಮಂಗಳೂರು.ಜೂನ್ 8 : ಜಿಲ್ಲಾ ಉಸ್ತುವರಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅವರು ಇಂದು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ಅಡುಗೆ ಕೋಣೆ ಮತ್ತು ಔಷಧ ಉಗ್ರಣದ ಪರಿಶೀಲನೆ ನಡೆಸಿದರು.ಶಾಸಕ ಯೋಗಿಶ್ ಭಟ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಗನ್ನಾಥ್,ಆಸ್ಪತ್ರೆಯ ಡಿ.ಎಂ.ಓ. ಡಾ. ಪ್ರಭುದೇವ್ ಮತ್ತಿತರರು ಉಪಸ್ಥಿತರಿದ್ದರು.

ಅತಿವೃಷ್ಠಿ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳ ತುರ್ತು ಸಭೆ

ಮಂಗಳೂರು,ಜು.8: ಜಿಲ್ಲೆಯಲ್ಲಿ ಇಂದು 67.2 ಮಿ.ಮೀ ಮಳೆ ದಾಖಲಾಗಿದ್ದು, ವಿವಿಧೆಡೆ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ನೇತ್ರಾವತಿಯಲ್ಲಿ ನೀರಿನ ಮಟ್ಟ 5.2 ಮೀಟರ್ ಏರಿಕೆ ಆಗಿದೆ.ನಾಳೆಯೂ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದ್ದು, ಜನರು ಯಾವುದೇ ಸಂದರ್ಭದಲ್ಲಿ ದೃತಿಗೆಡದೆ ಅಪಾಯಕಾರಿ ಸನ್ನಿವೇಶದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು. ಜಿಲ್ಲಾಡಳಿತ ಅಪಾಯಕಾರಿ ಪರಿಸ್ಥಿತಿಯನ್ನು ಎದರಿಸಲು ಸನ್ನದ್ದವಾಗಿದ್ದು, ಈಗಾಗಲೇ ಕೆಮ್ರಾಲ್ ಪರಿಸರದವರ ಕೋರಿಕೆಯನ್ವಯ ಅಲ್ಲಿಗೆ ಪಿಲಿಕುಳದಿಂದ ದೋಣಿಯನ್ನು ಕಳುಹಿಸಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ತಿಳಿಸಿದರು.
ಇಂದು ಈ ಸಂಬಂಧ ಕರೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿ ವಿಕೋಪದ ಪರಿಸ್ಥಿತಿಯನ್ನು ಎದುರಿಸಲು ಪರಿಣತರ ತಂಡವನ್ನು ಸಜ್ಜುಗೊಳಿಸಲಾಗಿದ್ದು, ಅಗ್ನಿಶಾಮಕ ದಳ, ಹೋಮ್ ಗಾರ್ಡ್ಸ್, ಮಹಾನಗರಪಾಲಿಕೆ, ಪೊಲೀಸ್, ಬಂದರು, ಮೀನುಗಾರಿಕೆ ಇಲಾಖೆಯವರು ತಂತಮ್ಮ ಇಲಾಖಾ ವತಿಯಿಂದ ಕೈಗೊಂಡಿರುವ ಕ್ರಮಗಳನ್ನು ಸಭೆಯಲ್ಲಿ ವಿವರಿಸಿದರು.ಮೀನುಗಾರಿಕೆ ಇಲಾಖೆ ನದಿ ತೀರದಲ್ಲಿ ಸಂಭವಿಸುವ ದುರಂತವನ್ನು ತಡೆಯಲು ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ಹೋಮ್ ಗಾರ್ಡ್ಸ ಮತ್ತು ಅಗ್ನಿಶಾಮಕದಳ ಸಮನ್ವಯದಿಂದ ಕ್ರಮಕೈಗೊಂಡು ಸಂತ್ರಸ್ತರಿಗೆ ನೆರವು ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಹೋಮ್ ಗಾರ್ಡ್ಸ್ ನಿಂದ 24 ಗಂಟೆ 50 ಜನರನ್ನು ಸಮಸ್ಯೆಗೆ ಸ್ಪಂದಿಸಲು ನೇಮಿಸಲಾಗಿದ್ದು, ಕಡಬ,ಸುಬ್ರಮಣ್ಯ,ಬಂಟ್ವಾಳಕ್ಕೆ 25 ಜನರನ್ನು ನೇಮಿಸಲಾಗಿದೆ. ತಹಸೀಲ್ದಾರರು ತಗ್ಗು ಪ್ರದೇಶಗಳನ್ನು ಗುರುತಿಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮನಾಪ 20 ವಾರ್ಡ್ ಗೆ ಒಂದು ಜೆಸಿಬಿ ಮತ್ತು ಟಿಪ್ಪರನ್ನು ಕಾಯ್ದಿರಿಸಿದ್ದು, ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಂಪರ್ಕ ಜಾಲವನ್ನು ಸುವ್ಯವಸ್ಥಿತವಾಗಿಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಹವಾಮಾನ ಇಲಾಖೆ ಉಡುಪಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ, ದ. ಕ. ಜಿಲ್ಲೆಯಲ್ಲೂ ಮುಂಜಾಗ್ರತಾ ಸಭೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿ ಕಟ್ಟೆ,ತಹಸೀಲ್ದಾರ್ ರವೀಂದ್ರ ನಾಯಕ್,ಮನಾಪ ಆಯುಕ್ತ ರಮೇಶ್,ಜಿಲ್ಲಾ ಹೋಂ ಗಾರ್ಡ್ ಕಮಾಡೆಂಟ್ ಡಾ.ನಿದರ್ಶನ್ ಹೆಗ್ಡೆ,ಮೀನುಗಾರಿಕಾ ಇಲಾಖ ಉಪ ನಿರ್ದೇಶಕ ಸುರೇಶ್ ಕುಮಾರ್,ಡಿವೈಎಸ್ಪಿ ಬಿ.ಜೆ.ಭಂಡಾರಿ, ಅಗ್ನಿ ಶಾಮಕ ದಳದ ಹಿರಿಯ ಅಧಿಕಾರಿ ಸಿ.ಬಸವಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಶೌಚಾಲಯ ನಿರ್ಮಾಣ ಕಾಮಗಾರಿ ಹೊಣೆ ಗ್ರಾ.ಪಂ. ಕಾರ್ಯದರ್ಶಿಗಳಿಗೆ


ಮಂಗಳೂರು, ಜು.8: ಸ್ವಚ್ಛತೆ ಮತ್ತು ಗ್ರಾಮ ನೈರ್ಮಲ್ಯ ಕೆಲಸಗಳು ಕೇವಲ ಪ್ರಶಸ್ತಿ ಸ್ವೀಕರಿಸುವುದಕ್ಕಷ್ಟೇ ಸೀಮಿತವಾಗಿರದೆ ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸಗಳಾಗುತ್ತಿರಬೇಕು; ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ಶಿವಶಂಕರ್ ಅವರು ಹೇಳಿದರು.
ಇಂದು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯ ಬಗ್ಗೆ ಜಿಲ್ಲಾ ಮಟ್ಟದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನಷ್ಟು ಸಕ್ರಿಯವಾಗಿ ತಮ್ಮನ್ನು ಸ್ವಚ್ಛತಾ ಆಂದೋಲನದಲ್ಲಿ ತೊಡಗಿಕೊಳ್ಳಬೇಕು; ಈ ಕುರಿತ ಮಾಹಿತಿ ಅವರ ಬಳಿಯೇ ಅಲಭ್ಯವಾದರೆ ಅಮಾನತಿನಂತಹ ಕಠಿಣ ಕ್ರಮಕ್ಕೂ ಹಿಂಜರಿಯಲಾರೆ ಎಂದು ಎಚ್ಚರಿಕೆ ನೀಡಿದರು.
ಸ್ವಚ್ಚತಾ ಆಂದೋಲನ ಪ್ರಾಥಮಿಕ ಹಂತದ ಕಾವನ್ನು ಕಳೆದುಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಆಂದೋಲನ ನಿರಂತರವಾಗಿರಬೇಕು ಎಂದು ಸೂಚಿಸಿದ ಅವರು, ಎಲ್ಲಾ ಅಧಿಕಾರಿಗಳ ಸಹಕಾರದ ಅಗತ್ಯವನ್ನು ಪ್ರತಿಪಾದಿಸಿದರು.
ಕಳೆದ ಬಾರಿ ಪ್ರಶಸ್ತಿ ಪಡೆಯುವಲ್ಲಿ ಸೋತ ಕಾರಣದ ಬಗ್ಗೆ ಗ್ರಾಮಪಂಚಾಯಿತಿ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ ಅವರು, ನಿರ್ಮಲ ಗ್ರಾಮ ಪುರಸ್ಕಾರವನ್ನು ಇದುವರೆಗೆ 182 ಗ್ರಾಮ ಪಂಚಾಯಿತಿಗಳು ಪಡೆದಿದ್ದು, ಉಳಿದ 21 ಗ್ರಾಮಪಂಚಾಯಿತಿಗಳು ಪ್ರಸಕ್ತ ಸಾಲಿನ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಿವೆ. ಈ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಅದರಲ್ಲೂ ಮುಖ್ಯವಾಗಿ ಧರೆಗುಡ್ಡೆ ಗ್ರಾಮಪಂಚಾಯಿತಿ ಕಾರ್ಯದರ್ಶಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿ ಇ ಒ ಅವರು ಕನಿಷ್ಠ ಮಾಹಿತಿ ನೀಡುವಲ್ಲೂ ಸುಳ್ಳು ಹೇಳಿದರೆ ಅಮಾನತಿನಂತಹ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಸ್ವಚ್ಚತೆಯ ಬಗ್ಗೆ ಸಮಗ್ರ ಮಾಹಿತಿಗಾಗಿ ಗೋಡೆಬರಹಗಳಿಗೆ 5,000 ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದ ಅವರು, ಶಿಕ್ಷಣ ಇಲಾಖೆ ಪಾತ್ರ ಈ ಆಂದೋಲನದಲ್ಲಿ ಪ್ರಮುಖವಾಗಿದ್ದು, ಇಲಾಖೆ ಪಾತ್ರ ನಗಣ್ಯವಾಗಿದೆ ಎಂದ ಅವರು, ಶೌಚಾಲಯ ಬಳಕೆಯ ವಿಷಯದಲ್ಲಿ ಶಿಕ್ಷಕರು ಮಕ್ಕಳಿಗೆ ಸಾಕಷ್ಟು ಮಾಹಿತಿಯನ್ನು ನೀಡಬೇಕಾದ ಅಗತ್ಯವಿದ್ದು, ಸಕ್ರಿಯವಾಗಿ ಇಲಾಖೆಯ ಪಾಲ್ಗೊಳ್ಳುವಿಕೆ ಅಗತ್ಯವನ್ನು ಒತ್ತಿಹೇಳಿದರು. ವಾರ್ಡ್ ಸಮಿತಿಗಳನ್ನು ಬಲಪಡಿಸುವಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ನೀರು ಮತ್ತು ನೈರ್ಮಲ್ಯ ಸಮಿತಿಯ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯರು ಮಾತನಾಡಿ, ಸ್ವಚ್ಛತಾ ಆಂದೋಲನದ ಅಗತ್ಯವನ್ನು ವಿವರಿಸಿದರು. ಸಭೆಯಲ್ಲಿ 21 ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ತಮ್ಮ ಗ್ರಾಮಗಳಿಗೆ ಸಂಬಂಧಿಸಿದ ಶೌಚಾಲಯ ಮತ್ತು ಸ್ವಚ್ಛತೆಯ ಮಾಹಿತಿಯನ್ನು ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಅವರು ಉಪಸ್ಥಿತರಿದ್ದರು. ಇಲಾಖೆಯ ಅಧಿಕಾರಿಗಳು, ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Tuesday, July 7, 2009

ಅತಿವೃಷ್ಠಿ ಜಿಲ್ಲೆಗೆ 2 ಕೋಟಿ ರೂ. ಬಿಡುಗಡೆ: ಜೆ.ಕೃಷ್ಣ ಪಾಲೆಮಾರ್


ಮಂಗಳೂರು. ಜು.7: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ 8 ಜೀವಹಾನಿ ಹಾಗೂ ವ್ಯಾಪಕ ಪ್ರಮಾಣದ ಸೊತ್ತು ನಾಶ ಸಂಭವಿಸಿದ್ದು, ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಹಾಗೂ ಆಸ್ತಿ ಪಾಸ್ತಿ ನಷ್ಟಕ್ಕೆ ಪ್ರಕೃತಿ ವಿಕೋಪ ಪರಿಹಾರದಡಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ, ಬಂದರು ಇಲಾಖೆ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ತಿಳಿಸಿದ್ದಾರೆ.
ಇಂದು ಸಚಿವರು ನೀರುಮಾರ್ಗ, ಬೊಂಡತಿಲ,ಬಂಟಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಮಳೆ ಹಾನಿಯನ್ನು ಪರಿಶೀಲನೆ ನಡೆಸಿದರು. ಕೃಷಿಕರ ಅಡಿಕೆ, ತೆಂಗು ಬೆಳೆಗಳಿಗೆ ಹಾನಿಯಾಗಿರುವುದಲ್ಲದೆ,8 ಮನೆಗಳು ಹಾನಿಗೊಳಗಾಗಿದ್ದು ಇವರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದರು. ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸಂಭವನೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವನ್ನು ಸಜ್ಜುಗೊಳಿಸಲಾಗಿದ್ದು, ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದಿರುವ ಸಚಿವರು, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ದೋಣಿ ವ್ಯವಸ್ಥೆ, ಗಂಜಿಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಜನರ ಸುರಕ್ಷತೆಗೋಸ್ಕರ ಮೊಬೈಲ್ ಸ್ಕ್ವಾಡ್ ನ್ನು ರಚಿಸಲಾಗಿದ್ದು, ಸೂಕ್ತ ಬಂದೋಬಸ್ತುಗಳನ್ನು ಮಾಡಲಾಗಿದೆ.
ಕಠಿಣ ಕ್ರಮದ ಎಚ್ಚರಿಕೆ:

ಸಾರ್ವಜನಿಕವಾಗಿ ಕೆಲವರು ರಸ್ತೆಯ ಬದಿಗಳ ತೋಡುಗಳಿಗೆ ಅಕ್ರಮವಾಗಿ ತಡೆ ಹಾಕಿ ಕೃತಕ ನೆರೆ ಸೃಷ್ಟಿಸಿ ಸಾರ್ವಜನಿಕ ಜೀವನಕ್ಕೆ ತೊಂದರೆಯುಂಟು ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ಮಳೆಯ ಪರಿಸ್ಥಿತಿಯನ್ನ್ನು ಅವಲೋಕಿಸಿ ಶಾಲಾ ಮಕ್ಕಳಿಗೆ ರಜೆ ನೀಡುವ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮುನ್ಸೂಚನೆ ನೀಡಿರುವುದಾಗಿ ಹೇಳಿದರು.

ಅತಿವೃಷ್ಠಿ: ಸಂಭವನೀಯ ತುರ್ತು ಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜು

ಮಂಗಳೂರು,ಜು.7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ನೆರೆ ಹಾವಳಿ ತಡೆಗೆ ತಾಲೂಕು ಮಟ್ಟದಲ್ಲಿ ಮುಂಜಾಗ್ರತಾ ಸಮಿತಿ ರಚಿಸಿದ್ದು, ಯಾವುದೇ ರೀತಿಯ ಸಂಭವನೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಪರಿಹಾರ ಕಾರ್ಯಗಳ ಸಮನ್ವಯಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳ ತಾಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಗಳನ್ನು ತೆರೆಯಲಾಗಿದೆ. 24 ಗಂಟೆಯೂ ಇವುಗಳೂ ಕಾರ್ಯನಿರ್ವಹಿಸಲಿದ್ದು, ಕಂಟ್ರೋಲ್ ರೂಂಗಳ ದೂರವಾಣಿ ಸಂಖ್ಯೆಗಳು:
ಜಿಲ್ಲಾಧಿಕಾರಿ ಕಚೇರಿ- 2220584, ಕಂಟ್ರೋಲ್ ರೂಂ - 2220590, ಉಚಿತ ಕರೆ- 1077.
ಮಂಗಳೂರು ತಾಲೂಕು ಕಚೇರಿ- 2220587, ತಹಸೀಲ್ದಾರ್- 9916821123,
ಬಂಟ್ವಾಳ- 08255- 232120, ತಹಸೀಲ್ದಾರ್- 9448734714
ಪುತ್ತೂರು- 08251- 230349, ತಹಸೀಲ್ದಾರ್- 9448421965
ಸುಳ್ಯ- 08257- 230330, ತಹಸೀಲ್ದಾರ್ - 9341276225
ಬೆಳ್ತಂಗಡಿ- 08256- 232047 ತಹಸೀಲ್ದಾರ್ - 9449969408
ವಿಶೇಷ ತಹಸೀಲ್ದಾರ್ ಕಚೇರಿ ಮೂಡಬಿದ್ರೆ 08258- 238100, 9448254054
ವಿಶೇಷ ತಹಸೀಲ್ದಾರ್ ಕಚೇರಿ ಕಡಬ 08251 260435
ಗೃಹರಕ್ಷಕ ದಳ ಮಂಗಳೂರು- 2220562
ಅಗ್ನಿ ಶಾಮಕದಳ ಮಂಗಳೂರು- 2423333, 101
ಪೊಲೀಸ್ ಕಂಟ್ರೋಲ್ ರೂಂ- 2220500
ಮಂಗಳೂರು ನಗರ 100,
ಪಾಲಿಕೆ ಮಂಗಳೂರು- 2220310, 155313, 2220314,
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2201010 ಬಸವರಾಜಪ್ಪ- 9448127995
ಸುರೇಶ್ ಕುಮಾರ್ - 9945525261
ರಾಷ್ಟ್ರೀಯ ಹೆದ್ದಾರಿ ಇಲಾಖೆ- 2450415
ಉಮೇಶ್ ಕಾಮತ್ - 9880209004
ಬಂದರು ಇಲಾಖೆ ಮೋಹನ್ ಕುದ್ರಿ- 9448302441, 2420374
ಲೋಕೋಪಯೋಗಿ ಇಲಾಖೆ- 2443169, ಎ ಇ: 9448005501
ಮೆಸ್ಕಾಂ ಅತ್ತಾವರ - 2424149, ಮೆಸ್ಕಾಂ ಪುತ್ತೂರು- 08251 232412,

ಜಿಲ್ಲೆಯ ಮಕ್ಕಳಿಗೆ ನಾಳೆಯೂ ರಜೆ

ಮಂಗಳೂರು, ಜು.7: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಳ್ಯವೂ ಸೇರಿದಂತೆ ಎಲ್ಲಾ ಶಾಲೆಯ ಮಕ್ಕಳಿಗೆ ಮಳೆಯ ಪ್ರಯುಕ್ತ ನಾಳೆಯೂ(8.7.09)ರಜೆಯನ್ನು ಘೋಷಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Monday, July 6, 2009

ಧಾರಾಕಾರ ಮಳೆ: ಶಾಲೆಗಳಿಗೆ ರಜೆ


ಮಂಗಳೂರು,ಜು. 6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ 2009ರ ಸಾಲಿನ ಮುಂಗಾರು ಮಳೆ ಮತ್ತು ಪ್ರಾಕೃತಿಕ ವಿಕೋಪ ಮುಂಜಾಗ್ರತ ಕ್ರಮವಾಗಿ ಮಂಗಳೂರು ನಗರ, ತಾಲೂಕು, ಬಂಟ್ವಾಳ, ಪುತ್ತೂರು, ಮೂಡಬಿದ್ರೆಗಳಲ್ಲಿ ಜು. 6 ಮತ್ತು 7ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣಾಧಿಕಾರಿ ಶ್ರೀ ಚಾಮೇಗೌಡ ತಿಳಿಸಿದ್ದಾರೆ.
ಜು. 7ಮತ್ತು 8ರಂದು ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ರಜೆಯನ್ನು ಘೋಷಿಸಲಾಗಿದ್ದು, ಸುಳ್ಯ ತಾಲೂಕಿನ ಮಕ್ಕಳಿಗೆ ರಜೆ ಇಲ್ಲ.

Sunday, July 5, 2009

ವಾರ್ತಾ ಇಲಾಖೆಯ ವಾಹನದಲ್ಲಿ ಸಚಿವರ ಪತ್ರಿಕಾಗೋಷ್ಠಿ

ಉಳ್ಳಾಲದಲ್ಲಿ ಸಮುದ್ರಕೊರೆತದಿಂದ ಸಂಭವಿಸಿರುವ ಹಾನಿಯ ಕುರಿತು ಪರಿಶೀಲನೆ ನಡೆಸಿದ ಬಳಿಕ ಸಮುದ್ರ ಕಿನಾರೆಯಲ್ಲಿ ವಾರ್ತಾ ಇಲಾಖೆಯ ವಾಹನದಲ್ಲಿ ಪತ್ರಕರ್ತರಿಗೆ ಯೋಜನೆಗಳ ಬಗ್ಗೆ ಮಾಹಿತಿ.

ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ280 ಕೋಟಿ ರೂ.: ಕೃಷ್ಣ ಪಾಲೇಮಾರ್


ಮಂಗಳೂರು, ಜು. 5: ಸಮುದ್ರಕೊರೆತದಿಂದ ಉಳ್ಳಾಲ ಪ್ರದೇಶದಲ್ಲಿ ಸಂಭವಿಸುವ ಹಾನಿಯನ್ನು ಶಾಶ್ವತವಾಗಿ ತಡೆಯಲು 280 ಕೋಟಿ ರೂ.ಗಳ ನೀಲಿನಕ್ಷೆ ತಯಾರಿಸಿ ಯೋಜನೆ ಮಂಜೂರಾತಿಗೆ ಜುಲೈ 10ರಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ಅವರು ಹೇಳಿದರು.ಇಂದು ಉಳ್ಳಾಲದ ಮುಕ್ಕಾಚೇರಿ, ಕೈಕೋ, ಕೋಟೆಪುರ, ಹಿಲರಿಯ ನಗರ, ಸುಭಾಷ್ ನಗರಗಳಲ್ಲಿ ಕಡಲ್ಕೊರೆತದಿಂದ ಹಾನಿಗೀಡಾಗುವ ಪ್ರದೇಶಗಳನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಮುದ್ರ ತೀರಗಳನ್ನು ಹೊಂದಿರುವ ಎಲ್ಲಾ ಪ್ರದೇಶಗಳಿಗೂ ಸಂಬಂಧಿಸಿದಂತೆ ಈ ನೀಲಿನಕ್ಷೆ ಸಿದ್ಧವಾಗಿದ್ದು, ಇದರಲ್ಲಿ ಉಳ್ಳಾಲವನ್ನು ಆದ್ಯತೆಯ ಮೇರೆಗೆ ಪರಿಗಣಿಸಿ 116 ಕೋಟಿ ರೂ.ಗಳು ಉಳ್ಳಾಲದಲ್ಲಿ ಶಾಶ್ವತ ಪರಿಹಾರ ರೂಪಿಸಲು ಉಪಯೋಗಿಸಲಾಗುವುದು ಎಂದು ಅವರು ವಿವರಿಸಿದರು. ಇದೀಗ ತಕ್ಷಣದ ತಾತ್ಕಲಿಕ ಕಾಮಗಾರಿಗೆ ಪರಿಹಾರವಾಗಿ 1.70 ಕೋಟಿ ರೂಪಾಯಿಗಳ ಪ್ರಸ್ತಾಪವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ.
ಪ್ರಕೃತಿವಿಕೋಪವನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಸ್ಥಳೀಯರಿಗೆ ಅಗತ್ಯ ಸುರಕ್ಷೆಯ ಭರವಸೆಯನ್ನು ನೀಡಿದ ಸಚಿವರು, ಸಾಂಕ್ರಾಮಿಕ ರೋಗ ತಡೆಗೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಉಳ್ಳಾಲದಲ್ಲಿ ಶಾಶ್ವತ ತಡೆಗೋಡೆ, ಮೀನುಗಾರಿಕೆಗೆ ನೆರವಾಗಲು ಅಳಿವೆ ಬಂದರಿನಲ್ಲಿ ಹೂಳೆತ್ತುವಿಕೆ, ಪ್ರವಾಸೋದ್ಯಮ ಸೇರಿದಂತೆ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಕ್ಕೆ ಶಾಸಕ ಯು ಟಿ ಖಾದರ್ ಅವರ ಜೊತೆಯಲ್ಲಿ ಸರ್ಕಾರದೊಂದಿಗೆ ಚರ್ಚಿಸುವುದಾಗಿ ನುಡಿದರು. ಸಮುದ್ರ ಕೊರೆತದಿಂದ ಸಂತ್ರಸ್ತರಾದವರಿಗೆ ತುರ್ತು ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸಚಿವರು ಸೂಚನೆ ನೀಡಿದರು. ಉಸ್ತುವಾರಿ ಸಚಿವರ ಜೊತೆ ಸ್ಥಳಿಯ ಶಾಸಕ ಯು.ಟಿ. ಖಾದರ್, ಸಹಾಯಕ ಆಯುಕ್ತ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಬಂದರು ಅಧಿಕಾರಿ ಮೋಹನ್ ಕುದ್ರಿ, ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲ್ ನಾಯಕ್ ಮುಂತಾದವರಿದ್ದರು.

Saturday, July 4, 2009

ಜನಸ್ಪಂದನ


ಮಂಗಳೂರು, ಜು. 4: ಹಕ್ಕು ಪತ್ರ ಇಲ್ಲದ ಬವಣೆ, ನೆಮ್ಮದಿ ಕೇಂದ್ರದಲ್ಲಿ ಎದುರಿಸಿದ ಸಮಸ್ಯೆ, ರಸ್ತೆಗಳಿಲ್ಲದೆ ಒದ್ದಾಡುವ ತೊಂದರೆ, ವಿಧವೆಯರು, ವಯಸ್ಕರಿಗೆ ಸರ್ಕಾರದ ಯೋಜನೆಗಳು ತಲುಪುವಲ್ಲಿ ಆಗುತ್ತಿರುವ ವಿಳಂಬ ಮತ್ತು ಮೋಸ, ಮೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ ಇಂದಿನ ಜನಸ್ಪಂದನ ಸಭೆಯಲ್ಲಿ ವ್ಯಕ್ತವಾದವು.
ಶಾಸಕ ಯೋಗೀಶ್ ಭಟ್ ಅವರ ನೇತೃತ್ವದಲ್ಲಿ ಇಂದು ಪುರಭವನದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀ ನಾಗರಾಜ ಶೆಟ್ಟಿ ಅವರ ಉಪಸ್ಥಿತಿಯಲ್ಲಿ, ಮೇಯರ್ ಶಂಕರ ಭಟ್, ಮೂಡಾ ಅಧ್ಯಕ್ಷ ಮಾಧವ ಭಂಡಾರಿ ಸೇರಿದಂತೆ ಜಿಲ್ಲಾಡಳಿತದ ಹಲವು ಅಧಿಕಾರಿಗಳು ಉಪಸ್ಥಿತರಿದ್ದು, ಜನರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಿದರು.
ರಸ್ತೆ ಕಾಮಗಾರಿಗಳ ಬಗ್ಗೆ, ಅತ್ಯಗತ್ಯ ಸಂದರ್ಭದಲ್ಲಿ ಮೆಸ್ಕಾಂನ್ನು ಸಂಪರ್ಕಿಸಬೇಕಾದ ಅಧಿಕಾರಿಗಳ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಮಾಹಿತಿ ನೀಡಿದರು. ಮಹಾನಗರಪಾಲಿಕೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮನಾಪ
ಆಯುಕ್ತ ಶ್ರೀ ರಮೇಶ್ ಅವರು ಉತ್ತರಿಸಿದರು. ನೆಮ್ಮದಿ ಕೇಂದ್ರದಲ್ಲಿ ಪ್ರಮಾಣ ಪತ್ರ ವಿತರಿಸಲು ಕೈಗೊಂಡ ಕ್ರಮಗಳ ಬಗ್ಗೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಕಾರ್ಯಕ್ರಮದ ಬಗ್ಗೆ ತಹಸೀಲ್ದಾರ್ ರವಿಚಂದ್ರ ನಾಯಕ್ ಸಭೆಯಲ್ಲಿ ವಿವರಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀ ಕಾಂತಪ್ಪ, ಉಪಮೇಯರ್ ರಜನಿ ದುಗ್ಗಣ್ಣ, ಆರ್ ಟಿ ಒ ಪುರುಷೋತ್ತಮ್, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದು, ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹರಿಸುವ ಭರವಸೆಯನ್ನು ಜನತೆಗೆ ನೀಡಿದರು.
ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ ಪೊಲೀಸ್ ಇಲಾಖೆ ಶಾಂತಿ ಸಭೆ ಕರೆಯುವ ಸಂಬಂಧ, ಮಳೆಗಾಲದಲ್ಲಿ ಹಾನಿತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಸಕರು ಸೂಚನೆಯನ್ನು ನೀಡಿದರು.

Wednesday, July 1, 2009

ಮಂಗಳೂರು ತಾಲೂಕಿನಲ್ಲಿ ಡೆಂಗ್ಯು ತಡೆಗೆ ಸಮಿತಿ ರಚನೆ

ಮಂಗಳೂರು, ಜು. 1: ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಹತ್ತು ಡೆಂಗ್ಯು ಪ್ರಕರಣಗಳು ದಾಖಲಾಗಿದ್ದು, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ ತಡೆಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಇಂದು ಸಾರ್ವ ಜನಿಕರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಸಹಾಯಕ ಆಯುಕ್ತ ಶ್ರೀ ಪ್ರಭುಲಿಂಗ ಕವಳಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿತ್ತು.
ಸಾರ್ವಜನಿಕ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಸ್ವಚ್ಛ ಮತ್ತು ಸೊಳ್ಳೆ ಮುಕ್ತ ಪರಿಸರದಿಂದ ಮಾತ್ರ ರೋಗ ನಿರ್ಮೂಲನೆ ಸಾಧ್ಯವಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದಕ್ಕೆಂದೇ ಪ್ರತೀ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ರಚಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸುವರಲ್ಲದೆ, ಸೋಮವಾರದಿಂದ ಶುಕ್ರವಾರದವರೆಗೆ ನಡೆಸಿದ ಸಮೀಕ್ಷೆ ಬಗ್ಗೆ ಶನಿವಾರದಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವರು.
ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು, ನಗರ ಪಂಚಾಯಿತಿ ಕಾರ್ಯದರ್ಶಿಗಳಿಗೆ ತಮ್ಮ ವ್ಯಾಪ್ತಿಯ ಹೊಟೆಲು, ಅಂಗಡಿಗಳವರು ನೀರುನಿಲ್ಲುವಂತಹ ವಾತಾವರಣ ನಿರ್ಮಿಸಿದರೆ ಅಂತಹವರಿಗೆ ನೋಟೀಸು ನೀಡಲು ಸಹಾಯಕ ಆಯುಕ್ತರು ಸಭೆಯಲ್ಲಿ ಸೂಚಿಸಿದರು.
ಮೂಡಬಿದ್ರೆಯಲ್ಲಿ -2, ಅಂಬ್ಲಮೊಗರುವಿನಲ್ಲಿ -2, ಸುರತ್ಕಲ್ ನಲ್ಲಿ-1, ಕುಡುಪುವಿನಲ್ಲಿ-1, ಕಾವೂರು-1, ಮಂಗಳೂರಿನ ಶಕ್ತಿನಗರದಲ್ಲಿ -1, ಉಳ್ಳಾಲ-1 ಡೆಂಗ್ಯು ಪ್ರಕರಣ ದಾಖಲಿಸಲಾಗಿದೆಯಲ್ಲದೆ, ಮೂಡಬಿದ್ರೆಯಲ್ಲಿ ಒಂದು ಇಲಿಜ್ವರ ಪ್ರಕರಣವೂ ದಾಖಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರತ್ನಾಕರ್ ಸಭೆಗೆ ತಿಳಿಸಿದರು. ಆರೋಗ್ಯ ಪಾಲನೆ ಬಗ್ಗೆ ನಗರ ವ್ಯಾಪ್ತಿಯಲ್ಲಿ ಕೆ ಎಂ ಸಿ ಯವರ ನೆರವನ್ನು ಪಡೆಯಲು ಸೂಚಿಸಲಾಯಿತು.

ಡಾಕ್ಟರ್ಸ್ ಡೇ

ಮಂಗಳೂರು, ಜು.1: ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಡಾಕ್ಟರ್ಸ್ ಡೇ (ಜು.1)ಯಂದು ಎಂ ಎಸ್ ಇ ಝಡ್ ವತಿಯಿಂದ 60,000 ಮೊತ್ತದ ಔಷಧಿಗಳನ್ನು ಆಸ್ಪತ್ರೆಯ ಬಡರೋಗಿಗಳ ಉಪಯೋಗಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ವೆನ್ಲಾಕ್ ನ ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ಅಧೀಕ್ಷಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಉಪಸ್ಥಿತರಿದ್ದರು.