Wednesday, July 1, 2009

ಮಂಗಳೂರು ತಾಲೂಕಿನಲ್ಲಿ ಡೆಂಗ್ಯು ತಡೆಗೆ ಸಮಿತಿ ರಚನೆ

ಮಂಗಳೂರು, ಜು. 1: ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಹತ್ತು ಡೆಂಗ್ಯು ಪ್ರಕರಣಗಳು ದಾಖಲಾಗಿದ್ದು, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ ತಡೆಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಇಂದು ಸಾರ್ವ ಜನಿಕರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಸಹಾಯಕ ಆಯುಕ್ತ ಶ್ರೀ ಪ್ರಭುಲಿಂಗ ಕವಳಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿತ್ತು.
ಸಾರ್ವಜನಿಕ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಸ್ವಚ್ಛ ಮತ್ತು ಸೊಳ್ಳೆ ಮುಕ್ತ ಪರಿಸರದಿಂದ ಮಾತ್ರ ರೋಗ ನಿರ್ಮೂಲನೆ ಸಾಧ್ಯವಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದಕ್ಕೆಂದೇ ಪ್ರತೀ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ರಚಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸುವರಲ್ಲದೆ, ಸೋಮವಾರದಿಂದ ಶುಕ್ರವಾರದವರೆಗೆ ನಡೆಸಿದ ಸಮೀಕ್ಷೆ ಬಗ್ಗೆ ಶನಿವಾರದಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವರು.
ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು, ನಗರ ಪಂಚಾಯಿತಿ ಕಾರ್ಯದರ್ಶಿಗಳಿಗೆ ತಮ್ಮ ವ್ಯಾಪ್ತಿಯ ಹೊಟೆಲು, ಅಂಗಡಿಗಳವರು ನೀರುನಿಲ್ಲುವಂತಹ ವಾತಾವರಣ ನಿರ್ಮಿಸಿದರೆ ಅಂತಹವರಿಗೆ ನೋಟೀಸು ನೀಡಲು ಸಹಾಯಕ ಆಯುಕ್ತರು ಸಭೆಯಲ್ಲಿ ಸೂಚಿಸಿದರು.
ಮೂಡಬಿದ್ರೆಯಲ್ಲಿ -2, ಅಂಬ್ಲಮೊಗರುವಿನಲ್ಲಿ -2, ಸುರತ್ಕಲ್ ನಲ್ಲಿ-1, ಕುಡುಪುವಿನಲ್ಲಿ-1, ಕಾವೂರು-1, ಮಂಗಳೂರಿನ ಶಕ್ತಿನಗರದಲ್ಲಿ -1, ಉಳ್ಳಾಲ-1 ಡೆಂಗ್ಯು ಪ್ರಕರಣ ದಾಖಲಿಸಲಾಗಿದೆಯಲ್ಲದೆ, ಮೂಡಬಿದ್ರೆಯಲ್ಲಿ ಒಂದು ಇಲಿಜ್ವರ ಪ್ರಕರಣವೂ ದಾಖಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರತ್ನಾಕರ್ ಸಭೆಗೆ ತಿಳಿಸಿದರು. ಆರೋಗ್ಯ ಪಾಲನೆ ಬಗ್ಗೆ ನಗರ ವ್ಯಾಪ್ತಿಯಲ್ಲಿ ಕೆ ಎಂ ಸಿ ಯವರ ನೆರವನ್ನು ಪಡೆಯಲು ಸೂಚಿಸಲಾಯಿತು.