Wednesday, July 15, 2009

ಕುಡಿಯುವ ನೀರು: ಸಚಿವರ ಬಳಿಗೆ ನಿಯೋಗ


ಮಂಗಳೂರು, ಜು.15: ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಗ್ರ ಸಂಪರ್ಕಕ್ಕೆ ಸಂಬಂಧಿಸಿದಂತೆ ಸಮರ್ಪಕ ಯೋಜನೆಯನ್ನು ರೂಪಿಸಲು ಮತ್ತು ಈ ಸಂಬಂಧ ಟೆಂಡರ್ ಕರೆಯುವ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ವೆಂಕಟ್ ದಂಬೇಕೋಡಿ ಅವರ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಬಳಿಗೆ ನಿಯೋಗ ತೆರಳಿ ಚರ್ಚೆ ನಡೆಸಲು ನಿರ್ಧರಿಸಲಾಯಿತು.
ಇಂದು ಜಿಲ್ಲಾಪಂಚಾಯತ್ ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ದ. ಕ. ಜಿ. ಪಂ.ನ 18ನೇ ಸಾಮಾನ್ಯ ಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕುಡಿಯುವ ನೀರಿನ ಬಗ್ಗೆ ನಡೆದ ಸುದೀರ್ಘ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಕ್ಕಾರು, ನಾರಾವಿ, ಗುರುಪುರ, ಕುರ್ನಾಡು, ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಸದಸ್ಯರು ಕುಡಿಯುವ ನೀರಿನ ಕಾಮಗಾರಿಗಳ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಗೆಡವಿದರು.
ಈ ಸಂಬಂಧ ಉತ್ತರಿಸಿದ ಜಿಲ್ಲಾ ಪಂಚಾಯತ್ ಸಿ ಇ ಒ ಅವರು, ಜಲನಿಯಂತ್ರಣ ಕೊಠಡಿಯ ಮುಖಾಂತರ ಬಂದ ವರದಿ ಮತ್ತು ಆಕ್ಷನ್ ಪ್ಲಾನ್ ಬಗ್ಗೆ ವಿವರಿಸಿ, ಈ ವರ್ಷ ಏಳು ಕೋಟಿ ಎಪ್ಪತ್ತಾರು ಲಕ್ಷ ರೂ.ಗಳನ್ನು ಕುಡಿಯುವ ನೀರಿಗೆ ಮೀಸಲಿಟ್ಟಿದೆ ಎಂದರು.
ನಂತರ ನಡೆದ ಚರ್ಚೆಯಲ್ಲಿ ಅಂಗನವಾಡಿಗಳಲ್ಲಿ ಅವಧಿ ಮೀರಿದ ಆಹಾರ, ಬಿಸಿಎಂ ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ, ತುಂಬೆ ವೆಂಟೆಡ್ ಡ್ಯಾಂ ಬಳಿ 900 ಎಕರೆ ಕೃಷಿಕರ ಜಮೀನು ಸ್ವಾಧೀನ ಸಂಬಂಧ, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಸಂಬಂಧ ಚರ್ಚೆ ನಡೆದು ಜಿ. ಪಂ. ಕಾರ್ಯನಿರ್ವಹಣಾಧಿಕಾರಿ ಈ ವಿಷಯಗಳ ಬಗ್ಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಸಾಮಾನ್ಯ ಸಭೆಯಲ್ಲಿ ಶಾಸಕ ಯು ಟಿ ಖಾದರ್ ಪಾಲ್ಗೊಂಡಿದ್ದರು. ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸದಾನಂದ ಮಲ್ಲಿ, ರಾಜಶ್ರೀ ಹೆಗಡೆ ಉಪಸ್ಥಿತರಿದ್ದರು.