Sunday, July 5, 2009

ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ280 ಕೋಟಿ ರೂ.: ಕೃಷ್ಣ ಪಾಲೇಮಾರ್


ಮಂಗಳೂರು, ಜು. 5: ಸಮುದ್ರಕೊರೆತದಿಂದ ಉಳ್ಳಾಲ ಪ್ರದೇಶದಲ್ಲಿ ಸಂಭವಿಸುವ ಹಾನಿಯನ್ನು ಶಾಶ್ವತವಾಗಿ ತಡೆಯಲು 280 ಕೋಟಿ ರೂ.ಗಳ ನೀಲಿನಕ್ಷೆ ತಯಾರಿಸಿ ಯೋಜನೆ ಮಂಜೂರಾತಿಗೆ ಜುಲೈ 10ರಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್ ಅವರು ಹೇಳಿದರು.ಇಂದು ಉಳ್ಳಾಲದ ಮುಕ್ಕಾಚೇರಿ, ಕೈಕೋ, ಕೋಟೆಪುರ, ಹಿಲರಿಯ ನಗರ, ಸುಭಾಷ್ ನಗರಗಳಲ್ಲಿ ಕಡಲ್ಕೊರೆತದಿಂದ ಹಾನಿಗೀಡಾಗುವ ಪ್ರದೇಶಗಳನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಮುದ್ರ ತೀರಗಳನ್ನು ಹೊಂದಿರುವ ಎಲ್ಲಾ ಪ್ರದೇಶಗಳಿಗೂ ಸಂಬಂಧಿಸಿದಂತೆ ಈ ನೀಲಿನಕ್ಷೆ ಸಿದ್ಧವಾಗಿದ್ದು, ಇದರಲ್ಲಿ ಉಳ್ಳಾಲವನ್ನು ಆದ್ಯತೆಯ ಮೇರೆಗೆ ಪರಿಗಣಿಸಿ 116 ಕೋಟಿ ರೂ.ಗಳು ಉಳ್ಳಾಲದಲ್ಲಿ ಶಾಶ್ವತ ಪರಿಹಾರ ರೂಪಿಸಲು ಉಪಯೋಗಿಸಲಾಗುವುದು ಎಂದು ಅವರು ವಿವರಿಸಿದರು. ಇದೀಗ ತಕ್ಷಣದ ತಾತ್ಕಲಿಕ ಕಾಮಗಾರಿಗೆ ಪರಿಹಾರವಾಗಿ 1.70 ಕೋಟಿ ರೂಪಾಯಿಗಳ ಪ್ರಸ್ತಾಪವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ.
ಪ್ರಕೃತಿವಿಕೋಪವನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಸ್ಥಳೀಯರಿಗೆ ಅಗತ್ಯ ಸುರಕ್ಷೆಯ ಭರವಸೆಯನ್ನು ನೀಡಿದ ಸಚಿವರು, ಸಾಂಕ್ರಾಮಿಕ ರೋಗ ತಡೆಗೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಉಳ್ಳಾಲದಲ್ಲಿ ಶಾಶ್ವತ ತಡೆಗೋಡೆ, ಮೀನುಗಾರಿಕೆಗೆ ನೆರವಾಗಲು ಅಳಿವೆ ಬಂದರಿನಲ್ಲಿ ಹೂಳೆತ್ತುವಿಕೆ, ಪ್ರವಾಸೋದ್ಯಮ ಸೇರಿದಂತೆ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಕ್ಕೆ ಶಾಸಕ ಯು ಟಿ ಖಾದರ್ ಅವರ ಜೊತೆಯಲ್ಲಿ ಸರ್ಕಾರದೊಂದಿಗೆ ಚರ್ಚಿಸುವುದಾಗಿ ನುಡಿದರು. ಸಮುದ್ರ ಕೊರೆತದಿಂದ ಸಂತ್ರಸ್ತರಾದವರಿಗೆ ತುರ್ತು ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸಚಿವರು ಸೂಚನೆ ನೀಡಿದರು. ಉಸ್ತುವಾರಿ ಸಚಿವರ ಜೊತೆ ಸ್ಥಳಿಯ ಶಾಸಕ ಯು.ಟಿ. ಖಾದರ್, ಸಹಾಯಕ ಆಯುಕ್ತ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಬಂದರು ಅಧಿಕಾರಿ ಮೋಹನ್ ಕುದ್ರಿ, ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲ್ ನಾಯಕ್ ಮುಂತಾದವರಿದ್ದರು.