Thursday, October 28, 2010

'ಯೋಜನೆಗಳ ಯಶಸ್ಸಿಗೆ ಗ್ರಾಮಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ'

ಮಂಗಳೂರು,ಅಕ್ಟೋಬರ್ 28: ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿ ಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ; ಇದಕ್ಕೆಂದೇ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾದ ಎ. ಸಿ. ಭಂಡಾರಿ ಅವರು ಹೇಳಿದರು.
ಅವರಿಂದು ಕ್ಷೇತ್ರ ಪ್ರಚಾರ ನಿರ್ದೇಶ ನಾಲಯ, ವಾರ್ತಾ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕುರ್ನಾಡು, ಜನ ಶಿಕ್ಷಣ ಟ್ರಸ್ಟ್ ಮತ್ತು ನರಿಂಗಾನ ಗ್ರಾಮ ಪಂಚಾ ಯತ್ ಇವರ ಸಂಯುಕ್ತ ಆಶ್ರಯ ದಲ್ಲಿ ಏರ್ಪಡಿ ಸಲಾದ ಕುಟುಂಬ ಕಲ್ಯಾಣ ಪಾಕ್ಷಿಕ ಅಂಗವಾಗಿ ಏರ್ಪಡಿ ಸಲಾದ ವಿಚಾರ ಸಂಕಿರ ಣವನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು. ಪ್ರಸಕ್ತ ಸನ್ನಿ ವೇಶದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದಿಂದ ಸೌಲಭ್ಯಗಳು ಲಭ್ಯ ವಾಗುವಂತೆ ಯೋಜನೆಗಳು ರೂಪು ಗೊಂಡಿವೆ. ಅರ್ಹ ಫಲಾನು ಭವಿಗಳಿಗೆ ಸೌಲಭ್ಯಗಳು ತಲುಪಲು ಎಲ್ಲರು ಒಗ್ಗಟ್ಟಿನಿಂದ ಶ್ರಮ ಪಡಬೇಕು ಎಂದು ಅವರು ಹೇಳಿದರು.ನರಿಂಗಾನ ಗ್ರಾಮ ಪಂಚಾಯಿತಿ ಮತ್ತು ಜನರು ಸಕ್ರಿಯವಾಗಿ ಕಾರ್ಯ ಕ್ರಮಗಳಲ್ಲಿ ಪಾಲ್ಗೊಂಡು ಯೋಜನೆಗಳ ಯಶಸ್ಸಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಯೋಜನೆಗಳ ಯಶಸ್ವಿ ಯಾಗಲು ಸಾಧ್ಯ ಎಂದರು. ಸ್ವಚ್ಛತೆ ಮತ್ತು ಪರಿಸರ ಪರಸ್ಪರ ಪೂರಕವಾಗಿದ್ದು ಜನರು ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸಲು ಆದ್ಯತೆ ನೀಡಬೇಕೆಂದರು.ಆರೋಗ್ಯವೇ ಭಾಗ್ಯ ಆರೋಗ್ಯ ವನ್ನು ದಾನ ವಾಗಿ ಅಥವಾ ಖರೀದಿ ಮಾಡಲು ಸಾಧ್ಯವಿಲ್ಲ. ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ಯನ್ನು ಹೊಂದಿರ ಬೇಕಾದುದು ಹಾಗೂ ನಮ್ಮ ಭವಿಷ್ಯದ ಮಾನವ ಸಂಪನ್ಮೂ ಲವಾದ ಇಂದಿನ ಮಕ್ಕಳ ಪಾಲನೆ ಪೋಷಣೆ ಬಗ್ಗೆ ಕುರ್ನಾಡು ಆರೋಗ್ಯ ಕೇಂದ್ರದ ಆರೋಗ್ಯ ಸಹಾಯ ಕಿಯರಾದ ಸುಭಾಷಿಣಿ ವಿವರಿಸಿದರು. ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದ ನರಿಂ ಗಾನ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರಾದ ಇಸ್ಮಾಯಿಲ್ ಮೀನಂ ಕೋಡಿ ಅವರು, ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬ ಘೋಷ ವಾಕ್ಯ ಪ್ರತಿ ಹಳ್ಳಿಗೂ ತಲು ಪಿದ್ದು, ದೇಶದ ಉದ್ದಾರ ಹಳ್ಳಿಗ ಳಿಂದ ಹಳ್ಳಿಗಳ ಉದ್ದಾರ ಆರೋಗ್ಯ ವಂತ ಸಮಾಜ ದಿಂದ, ಆರೋಗ್ಯ ವಂತ ಮಕ್ಕಳಿಂದ ಆರೋ ಗ್ಯವಂತ ಸಮಾಜ ರೂಪು ಗೊಳ್ಳಲಿ ಎಂದು ಹಾರೈಸಿದರು.ನರಿಂಗಾನ ಗ್ರಾಮ ಪಂಚಾಯಿತಿ ಉಪಾಧ್ಯ ಕ್ಷರಾದ ಸುಮಿತ್ರ, ಸದಸ್ಯ ರಾದ ಜೋಸೆಫ್, ಗ್ರಾಮ ಪಂಚಾಯಿ ತಿಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿರುವ ನಳಿನಿ, ಅಂಗನ ವಾಡಿ ಕಾರ್ಯ ಕರ್ತರು, ಆಶಾ ಕಾರ್ಯ ಕರ್ತರು ಉಪಸ್ಥಿತರಿದ್ದರು.ಕಾರ್ಯ ಕ್ರಮಕ್ಕೆ ಸಂಬಂಧಿಸಿದಂತೆ ನಿನ್ನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗೋಪಿನಾಥ್ ಅವರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಇಂದು ಮಕ್ಕಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ವಿತರಿಸ ಲಾಯಿತಲ್ಲದೆ ಕಾರ್ಯ ಕ್ರಮದಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೂ ಬಹುಮಾನ ನೀಡಲಾಯಿತು.ಕ್ಷೇತ್ರ ಪ್ರಚಾರ ನಿರ್ದೇಶ ನಾಲಯದ ಕ್ಷೇತ್ರ ಪ್ರಚಾರಾ ಧಿಕಾರಿ ಟಿ. ಬಿ. ನಂಜುಂಡ ಸ್ವಾಮಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಗಳನ್ನಾಡಿದರು. ನರಿಂಗಾನ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರಾದ ಕೇಶವ ಅವರು ಕಾರ್ಯ ಕ್ರಮ ನಿರೂಪಿ ಸಿದರು. ರೋಶನಿ ಕಾಲೇಜಿನ ಎಂ. ಎಸ್. ಡಬ್ಲ್ಯೂ ವಿದ್ಯಾರ್ಥಿ ಯಾದ ಸಂತೋಷ್ ವಂದಿಸಿದರು.

Wednesday, October 27, 2010

ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಿ: ಚಂದ್ರಶೇಖರ್ ಕಾಮತ್

ಮಂಗಳೂರು, ಅಕ್ಟೋಬರ್ 27 : ಶೋಷಿತರು, ಆರ್ಥಿಕವಾಗಿ ದುರ್ಬಲ ವಾಗಿರುವವರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತಿಗೇರಿದರೆ ಸಾಮಾಜಿಕ ಸಮಾನತೆ ಸಾಧ್ಯ ಎಂದು ಬೆಳ್ಳಾರೆ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಕಾಮತ್ ಹೇಳಿದರು.
ಅವರು 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ವಾರ್ತಾ ಇಲಾಖೆ, ಗ್ರಾಮ ಪಂಚಾಯತ್ ಬೆಳ್ಳಾರೆ ಮತ್ತು ರೋಟರಿ ಟೌನ್ ಬೆಳ್ಳಾರೆ ಸಹ ಯೋಗದಲ್ಲಿ ಏರ್ಪಡಿಸಿದ್ದ ಸ್ತ್ರೀ ಶಕ್ತಿ ಮತ್ತು ಮಹಿಳಾ ಸಬಲೀಕರಣ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರದ ಸೌಲಭ್ಯ ಗಳನ್ನು ಪಡೆದು ಕೊಳ್ಳಲು ಮಾಹಿತಿಯ ಅಗತ್ಯವಿದೆ. ಮಾಹಿತಿ ಯಿಂದ ಶಕ್ತಿ ಮತ್ತು ಸೌಲಭ್ಯಗಳ ಬಳಕೆ ಸುಲಭ. ಜನರು ಸರ್ಕಾರ ದರದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಕೊಂಡು ಸದುಪ ಯೋಗ ಪಡಿಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮುಖ್ಯ ಅತಿಥಿ ಗಳಾಗಿದ್ದ ತಾಲೂಕು ಪಂಚಾ ಯತ್ ಸದಸ್ಯ ರಾದ ಅನಸೂಯ ಅವರು ಸ್ತ್ರೀಶಕ್ತಿ ಸಂಘಟನೆ ಗಳಿಂದ ಮಹಿಳೆ ಯರು ಅಭಿವೃದ್ಧಿ ಹೊಂದುತ್ತಿದ್ದು, ಮಹಿಳೆ ಕಲಿತು ಸಾಕ್ಷರ ಳಾದರೆ ಆಗುವ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಮೇಲ್ವಿಚಾ ರಕರಾದ ಪ್ರವೀಣ್ ಕುಮಾರ್ ಅವರು ಸ್ವ ಸಹಾಯ ಸಂಘಗಳು ಬೆಳೆದ ಬಗ್ಗೆ ಇದರಿಂದ ಸಾಮಾಜಿಕ ಅಭಿವೃದ್ಧಿ ಯಾಗುತ್ತಿರುವ ಬಗ್ಗೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಸಂಕಿರಣ ವನ್ನುದ್ದೇಶಿಸಿ ಮಾತನಾಡಿದ ವನಿತಾ ಅವರು, ಸ್ವ ಸಹಾಯ ಸಂಘದ ಉಗಮ, ಮಹಿಳೆಯರ ಪಾಲ್ಗೊ ಳ್ಳುವಿಕೆ ಹಾಗೂ ಇದರಿಂದಾದ ಅನುಕೂಲಗಳನ್ನು ವಿವರಿಸಿದರು.ಸಂಕಿರಣದ ಅಧ್ಯಕ್ತತೆ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಧವ ಗೌಡರು, ಮಾಹಿತಿ ಕಾರ್ಯ ಕ್ರಮ ಗಳಿಂದ ಜನರಿಗೆ ಉಪಕಾರ ವಾಗಲಿ. ಎಲ್ಲೆಡೆ ಜ್ಞಾನದ ಬೆಳಕು ಪಸರಿಸಲಿ ಎಂದು ಶುಭ ಹಾರೈಸಿದರು. ಜಿಲ್ಲಾ ವಾರ್ತಾ ಧಿಕಾರಿ ರೋಹಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಬಳಿಕ ನಡೆದ ಸಂವಾದದಲ್ಲಿ ಸ್ವ ಸಹಾಯ ಸಂಘ ಟನೆಗಳು, ಸ್ತ್ರೀ ಶಕ್ತಿ ಸಂಘಟ ನೆಗಳು ಎದುರಿಸು ತ್ತಿರುವ ಸಮಸ್ಯೆಗಳ ಬಗ್ಗೆ ಸವಿವರ ಚರ್ಚೆ ನಡೆಯಿತು. ಸ್ಥಳೀಯ ಕಲಾವಿ ದರಾದ ರಾಮ ಚಂದ್ರ ಬೆಳ್ಳಾರೆ ಗೊಂಬೆ ಕುಣಿತ, ಕೊಳಲು ವಾದನ ನಡೆಸಿ ಕೊಟ್ಟರು. ಕಲಾವಿದರಾದ ಗಣೇಶ ನಾವಡ ಸಂಕಿರಣ ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ವಂದಿಸಿದರು. ಲೂಯಿಸ್ ಕಾರ್ಯ ಕ್ರಮ ನಿರೂಪಿಸಿದರು. ಜಗನ್ ಪವಾರ್ ಬೇಕಲ್ ತಂಡದಿಂದ ಬೀದಿ ನಾಟಕ ಏರ್ಪಡಿ ಸಲಾಯಿತು.

Tuesday, October 26, 2010

'ನವೆಂಬರ್ 10ರೊಳಗೆ ರಸ್ತೆ ಹೊಂಡ ಮುಚ್ಚಲು ಗಡುವು'

ಮಂಗಳೂರು, ಅಕ್ಟೋಬರ್.26: ನವೆಂಬರ್ 10ರೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ರಸ್ತೆಗಳ ಹೊಂಡಗಳನ್ನು ಮುಚ್ಚಬೇಕೆಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ ಶೆಟ್ಟಿ ಅವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ, ಜಿಲ್ಲಾ ರಸ್ತೆಗಳ ತುರ್ತು ದುರಸ್ತಿಗೆ ಸಂಬಂಧಿಸಿ ದಂತೆ ಅಧಿಕಾರಿಗಳ ಸಭೆ ನಡೆಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ರಸ್ತೆಗೆ ಸಂಬಂಧಿಸಿದ ಎಲ್ಲ ಅಧಿಕಾರಿ ಗಳಿಂದ ಸಮಗ್ರ ಮಾಹಿತಿ ಯನ್ನು ಪಡೆದರ ಲ್ಲದೆ ಸ್ಥಳೀಯ, ರಾಜ್ಯ, ಅಂತರ ರಾಜ್ಯವಲ್ಲದೆ, ಹೊರ ದೇಶಗಳಲ್ಲೂ ದಕ್ಷಿಣ ಕನ್ನಡದ ರಸ್ತೆಯ ಬಗ್ಗೆಯೇ ಚರ್ಚೆಯಾಗುತ್ತಿದ್ದು, ರಸ್ತೆಗಳ ಬಗ್ಗೆಗಿನ ದೂರುಗಳಿಂದ ಜನತೆ ರೋಸಿ ಹೋಗಿರುವುದಾಗಿ ಹೇಳಿದರು.
ಅಧಿಕಾರಿಗಳು ಪರಸ್ಪರ ಸಮನ್ವ ಯತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯವೆಂದ ಅವರು, ತುರ್ತಾಗಿ ರಸ್ತೆಗಳ ಹೊಂಡ ಮುಚ್ಚದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು. ಇಂಜಿನಿಯರ್ ಗಳಿಗೆ ಜವಾಬ್ದಾರಿ ವಹಿಸುವ ಹಾಗೂ ಸ್ಥಳ ಪರಿಶೀಲನೆ ನಡೆಸಲು ಸೂಚನೆಯನ್ನೂ ನೀಡಿದರು. ಇಂದಿನ ಸಭೆಯ ಉದ್ದೇಶ ರಸ್ತೆ ಹೊಂಡ ಮುಚ್ಚು ಏಕೈಕ ಯೋಜನೆ ಯಾಗಿದ್ದು, ಜವಾಬ್ದಾರಿಯಲ್ಲಿ ಲೋಪವೆಸಗದಿರಲು ಆದೇಶಿಸಿ ದರಲ್ಲದೆ ರಸ್ತೆಯ ವ್ಯಾಪ್ತಿ, ಕಾಮಗಾರಿ, ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಜಿಲ್ಲೆಯಲ್ಲಿ ಕಾಮಗಾರಿ ನಿರ್ವಹಿಸಲು ಹಣದ ಅಡಚಣೆಯಿಲ್ಲ ಎಂದ ಅವರು, ಮುಖ್ಯ ಮಂತ್ರಿಗಳು ಮೊನ್ನೆ ಉಡುಪಿಯಲ್ಲಿ ಜಿಲ್ಲೆಗೆ ಇನ್ನೈದು ಕೋಟಿ ನೀಡಿರುವುದನ್ನು ಸ್ಮರಿಸಿದರು.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಬಗ್ಗೆಯೂ ಮಾಹಿತಿ ಪಡೆದರು. ಮಹಾನಗರಪಾಲಿಕೆ ಹಣ ಪಡೆಯುವುದರಲ್ಲಿ ಮತ್ತು ವಿನಿಯೋಗದಲ್ಲಿ ಇತರ ಇಲಾಖೆಗಳಿಗೆ ಮಾದರಿಯಾಗಿದ್ದು, ಮುಂದಿನ ವಿಶೇಷ ಅನುದಾನದಲ್ಲಿ ಫುಟ್ ಪಾತ್ ಮತ್ತು ಚರಂಡಿ ಯೋಜನೆ ರೂಪಿಸಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಆದರೆ ತ್ಯಾಜ್ಯ ನಿರ್ವಹಣೆಯಲ್ಲಿ ಪಾಲಿಕೆ ವಿನೂತನ ಸಾಧಿಸಬಹುದು ಎಂದು ಸಲಹೆ ಮಾಡಿದರು.
ಎಲ್ಲ ತಾಲೂಕುಗಳಿಂದ ಮಳೆ ಹಾನಿ ವರದಿ ಶಾಸಕರ ಅನುಮೋದನೆಯೊಂದಿಗೆ ಆದಷ್ಟು ಶೀಘ್ರ ಜಿಲ್ಲಾಧಿಕಾರಿ ಕಚೇರಿಗ ಕಳುಹಿಸುವ ಅಗತ್ಯವನ್ನು ಸಭೆಯಲ್ಲಿ ಪ್ರತಿಪಾದಿಸಿದ ಅವರು, 3 ದಿನದೊಳಗೆ ಸಮಗ್ರ ಮಾಹಿತಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಹೇಳಿದರು. ಶಿರಾಡಿಘಾಟಿ ಕಾರ್ಯವೈಖರಿ, ಟ್ಯಾಂಕರ್, ಟ್ರಕ್ ಗಳ ನಿಷೇಧದಿಂದ ಆದಾಯ ಕೊರತೆ ಉಂಟಾಗಿದೆ. ಆದರೆ ರಸ್ತೆಯ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ ಎಂಬುದರ ಬಗ್ಗೆಯೂ ಸಭೆಯ ಗಮನಸೆಳೆದರು.
ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸ್ವಾಗತಿಸಿದರು, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಪಾಲಿಕೆ ಆಯುಕ್ತರಾದ ಡಾ. ಕೆ.ಎನ್. ವಿಜಯಪ್ರಕಾಶ್, ಸಿಇಒ ಶಿವಶಂಕರ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಬಾಲಕೃಷ್ಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗೋಸ್ವಾಮಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಟೀಮ್ ಲೀಡರ್ ಜಾರ್ಜ, ಎಲ್ಲ ಸಹಾಯಕ ಕಾರ್ಯಕಾರಿ ಅಭಿಯಂತರರು, ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾಕರ ರಾವ್ ವಂದಿಸಿದರು.

ಜಿಲ್ಲಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಮಂಗಳೂರು,ಅ 26: ಜಿಲ್ಲೆಯಲ್ಲಿ ಸಾಧಿಸಿದ ಜನಪರ ಕೆಲಸಗಳು ತಂಡದ ಪ್ರಯತ್ನ ಎಂದು ದಕ್ಷಿಣ ಕನ್ನಡ ಜಿಲ್ಲಾ ನಿರ್ಗಮನ ಜಿಲ್ಲಾಧಿಕಾರಿ ವೇಲುಸ್ವಾಮಿ ಪೊನ್ನುರಾಜ್ ಹೇಳಿದ್ದಾರೆ. ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವರ್ಗಾವಣೆಗೊಂಡು ಶಿವಮೊಗ್ಗಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.ಮಂಗಳೂರಿನ ರಸ್ತೆಗಳ ಅಭಿವೃದ್ಧಿ ಯಲ್ಲಿ ಮಹಾ ನಗರ ಪಾಲಿಕೆಯ ಅಧಿಕಾ ರಿಗಳ, ಜನ ಪ್ರತಿ ನಿಧಿಗಳ ಪಾಲು ಹೆಚ್ಚಿದೆ. ಆದರೆ ಕ್ರೆಡಿಟ್ ನನಗೆ ಲಭಿಸಿದೆ. ಹೆಚ್ಚಿನ ಕೆಲಸ ಕಾರ್ಯ ಗಳಲ್ಲಿ ನಾನು ನೆಪ ಮಾತ್ರ. ಅಧಿಕಾರಿಗಳ, ಜನಪ್ರತಿನಿಧಿಗಳ, ಜನತೆಯ ಸಹಕಾರದ ಹೊರತಾಗಿ ಯಾರೂ ಏನೂ ಮಾಡಲು ಸಾಧ್ಯವಾಗದು ಎಂದು ಪೊನ್ನುರಾಜ್ ನುಡಿದರು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನನ್ನೊಂದಿಗೆ ಕೈ ಜೋಡಿಸಿದ ನಿಕಟಪೂರ್ವ ಐಜಿಪಿ ಗೋಪಾಲ ಹೊಸೂರು ಹಾಗೂ ಹಾಗೂ ಎಸ್ಪಿ ಡಾ| ಎ.ಎಸ್. ರಾವ್ ಅವರ ಸಹಕಾರವನ್ನು ಮರೆಯಲಾಗದು. ಜಿಲ್ಲೆ ಇನ್ನಷ್ಟು ಬೆಳೆಯಬೇಕಾಗಿದೆ. ಅದಕ್ಕೆ ತಕ್ಕುದಾದ ವಾತಾವರಣವಿದೆ ಎಂದು ಅವರು ಹೇಳಿದರು.ಇದೇ ವೇಳೆ ನೂತನ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರನ್ನು ಸ್ವಾಗತಿಸಲಾಯಿತು. ಈ ಸಮಾರಂಭದಲ್ಲಿ ಪಾಲ್ಗೊಂಡು ಎಲ್ಲರ ಮಾತು ಕೇಳಿಸಿದ ಬಳಿಕ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾದೀತೆ ಎಂಬ ಶಂಕೆ ವ್ಯಕ್ತವಾಗತೊಡಗಿದೆ ಎಂದು ಸುಬೋಧ್ ಯಾದವ್ ಅಭಿಪ್ರಾಯಿಸಿದರು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜಿಲ್ಲೆ ಪ್ರಗತಿಪಥದಲ್ಲಿ ಸಾಗುವುದು ಖಚಿತ ಎಂದು ಸುಬೋಧ್ ಯಾದವ್ ನುಡಿದರು.
ಉಪ ಪೊಲೀಸ್ ಆಯುಕ್ತ ಆರ್. ರಮೇಶ್ ಮಾತನಾಡಿದರು. ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ಲೋಕೋಪಯೋಗಿ ಇಲಾಖೆಯ ಸುಪರಿಂಟೆಂಡಿಂಗ್ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣ , ಮನಪಾ ಆಯುಕ್ತ ಡಾ.ವಿಜಯಪ್ರಕಾಶ್ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಪಂಚಾಯತ್ ಸಿಇಒ ಅಧಿಕಾರಿ ಪಿ.ಶಿವಶಂಕರ್, ಹೊಸದರಲ್ಲಿ ಅಧಿಕಾರಿಗಳಿಗೆ ಅನೇಕರು ಸ್ನೇಹಿತರಾಗುತ್ತಾರೆ. ಅವರು ವರ್ಗಗೊಳ್ಳುವ ಸಂದರ್ಭ ವೈರಿಗಳು ಜಾಸ್ತಿಯಾಗುತ್ತಾರೆ. ಆದರೆ ಪೊನ್ನುರಾಜ್ ಮಟ್ಟಿಗೆ ಇದು ಸುಳ್ಳಾಗಿದೆ. ಜಿಲ್ಲೆಯ ಜನತೆಯ ಪಾಲಿಗೆ ಅವರೊಬ್ಬ ಅಜಾತಶತ್ರುವಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಪೊನ್ನುರಾಜ್ ಅವರಿಗೆ ಪುಷ್ಪಗುಚ್ಚ ನೀಡಿ ಶುಭಕೋರಿದರು. ಪತ್ನಿ, ಉಡುಪಿ ಜಿಲ್ಲಾಧಿಕಾರಿ ಪಿ.ಹೇಮಲತಾ ಜತೆಗಿದ್ದರು. ಹೆಚ್ಚುವರಿ ಎಸ್ಪಿ ಎಂ.ಪ್ರಭಾಕರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್, ಐಎಎಸ್ ಪ್ರೊಬೆಶನರಿ ರೋಹಿಣಿ ಸಿಂಧೂರಿ ದಾಸರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ ಸ್ವಾಗತಿಸಿದರು. ಪುತ್ತೂರು ವಿಭಾಗ ಸಹಾಯಕ ಕಮಿಷನರ್ ಡಾ.ಹರೀಶ್ ಕುಮಾರ್ ವಂದಿಸಿದರು.

Sunday, October 24, 2010

ರಾಜ್ಯಮಟ್ಟದ ಪುಸ್ತಕ ಮೇಳಕ್ಕೆ ಚಾಲನೆ

ಮಂಗಳೂರು,ಅ 24:ಮಂಗಳೂರು ನಗರದ ನೆಹರು ಮೈದಾನಿನಲ್ಲಿ ಡಾ. ಕೆ.ಶಿವರಾಂ ಕಾರಂತ ಕಲಾಮಂಟಪದಲ್ಲಿ 8 ದಿನಗಳ ಕಾಲ ನಡೆಯಲಿರುವ ಬೃಹತ್ತ್ ಪುಸ್ತಕ ಮೇಳಕ್ಕೆ ಚಾಲನೆ ದೊರೆತಿದೆ.ಕನ್ನಡ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ನಡೆಯ ಲಿರುವ ಈ ಪುಸ್ತಕ ಮೇಳಕ್ಕೆ ರಾಜ್ಯ ಬಂದರು, ಮುಜ ರಾಯಿ,ಪರಿಸರ ಮತ್ತು ಜೀವಿ ಶಾಸ್ತ್ರ,ಹಾಗೂ ಜಿಲ್ಲಾ ಉಸ್ತುವರಿ ಸಚಿವ ರಾದ ಕೃಷ್ಣ ಜೆ.ಪಾಲೆಮಾರ್ ಅವರು ಚಾಲನೆ ನೀಡಿದರು.ಕನ್ನಡ ಪುಸ್ತಕ ಪ್ರಾಧಿ ಕಾರದ ಅಧ್ಯಕ್ಷರಾದ ಡಾ.ಸಿದ್ದ ಲಿಂಗಯ್ಯ,ಶಾಸಕ ರುಗಳಾದ ಎನ್.ಯೋಗಿಶ್ ಭಟ್,ಯು.ಟಿ.ಖಾದರ್,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಮೇಯರ್ ರಜನಿ ದುಗ್ಗಣ್ಣ,ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಧಿಕಾರಿ ಅಶೋಕ್ ಎನ್.ಚಲವಾದಿ,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಹಿರಿಯ ಸಾಹಿತಿ ಏರ್ಯಾ ಲಕ್ಷ್ಮೀನಾರಾಯಣ ಆಳ್ವಾ ಮತ್ತಿತರ ಗಣ್ಯರು ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಪುಸ್ತಕ ಮೇಳದ ಜೊತೆ ಪ್ರತಿ ದಿನ ಲೇಖಕರು,ಪ್ರಕಾಶಕರು,ಮಾರಾಟಗಾರರು ಮತ್ತು ಓದುಗರ ಮಧ್ಯೆ ಸಂವಾದ,ಚಿಂತನ ಕಮ್ಮಟಗಳು,ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Saturday, October 23, 2010

ದ.ಕ ಜಿಲ್ಲಾಧಿಕಾರಿಯಾಗಿ ಸುಬೋದ್ ಯಾದವ್ ಅಧಿಕಾರ ಸ್ವೀಕಾರ

ಮಂಗಳೂರು,ಅಕ್ಟೋಬರ್ 23:ದಕ್ಷಿಣ ಕನ್ನಡ ಜಿಲ್ಲೆಯ 121ನೇ ಜಿಲ್ಲಾಧಿಕಾರಿಯಾಗಿ ಸುಬೋದ್ ಯಾದವ್ ಅವರು ಇಂದು ಅಧಿಕಾರ ಸ್ವೀಕರಿಸಿದರು. 1999ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಇವರು ಮೂಲತ: ಉತ್ತರಪ್ರದೇಶದವರು. ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಅವರ ಆಪ್ತಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಳಗಾಂವ್ ನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ತವ್ಯ ಆರಂಭಿಸಿದ ಇವರು, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸಹಾಯಕ ಆಯುಕ್ತರಾಗಿ ನೇಮಕಗೊಂಡರು.ದಕ್ಷಿಣ ಕನ್ನಡ ಜಿಲ್ಲೆ ಇವರಿಗೆ ಅಪರಿಚಿತವಲ್ಲ. 2004 ಆಗಸ್ಟ್ 29ರಿಂದ 2005 ಮೇ 31ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಇವರು ಕರ್ತವ್ಯ ನಿರ್ವಹಿಸಿದ್ದಾರೆ.ಬಳಿಕ ಬೆಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತರಾಗಿದ್ದರು. ಗುಲ್ಬರ್ಗಾ ಸಿಇಒ ಆದ ಬಳಿಕ ಮಡಿಕೇರಿ ಜಿಲ್ಲಾಧಿಕಾರಿಗಳಾಗಿದ್ದರು.ಚಿಕ್ಕಬಳ್ಳಾಪುರದ ಪ್ರಥಮ ಜಿಲ್ಲಾಧಿಕಾರಿಯಾಗಿದ್ದರು ಗದಗ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಯಾಗಿದ್ದರು.ಕಳೆದ ವರ್ಷ ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಹಳಷ್ಟು ಬದ ಲಾಗಿದ್ದು, ಪ್ರಮುಖ ಜಿಲ್ಲೆ ಗಳಲ್ಲಿ ಒಂದೆಂಬ ಸ್ಥಾನಮಾನ ಪಡೆದಿ ರುವ ದಕ್ಷಿಣ ಕನ್ನಡದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿ ಕವಾಗಿ ಪ್ರಯತ್ನಿ ಸುವೆ ಎಂದರು. ವಿಮಾನ ನಿಲ್ದಾಣ ದಿಂದ ನಗರಕ್ಕೆ ಬರುವಾಗ ಕಾಂಕ್ರಿಟ್ ರಸ್ತೆಗಳು ಮತ್ತು ನಗರೀಕರಣ ಗಮನ ಸೆಳೆಯಿತು ಎಂದು ಹೇಳಿದರು.ಜಿಲ್ಲಾಧಿಕಾರಿ ಪೊನ್ನುರಾಜ್ ಅವರು ಹಮ್ಮಿಕೊಂಡ ಅಭಿವೃದ್ಧಿ ಕೆಲಸಗಳನ್ನು ಮುಂದು ವರಿಸು ವುದಾಗಿ ಹೇಳಿದ ಅವರು,ಎಲ್ಲರ ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ತಮ್ಮ ಯೋಜನೆಗಳು, ವಿಷನ್ ಬಗ್ಗೆ ಈಗಲೇ ಹೇಳುವುದರಲ್ಲಿ ಅರ್ಥವಿರುವುದಿಲ್ಲ ಎಂದ ಅವರು, ವಿಷಯ ಗಳನ್ನು ತಿಳಿದು ಕೊಂಡು ಆಡಳಿತ ನಡೆಸು ವುದಾಗಿ ಪತ್ರ ಕರ್ತರಿಗೆ ಉತ್ತರಿಸಿದರು. ದಕ್ಷಿಣ ಕನ್ನಡದ 120 ನೇ ಜಿಲ್ಲಾಧಿಕಾರಿ ಯಾಗಿದ್ದ ಪೊನ್ನುರಾಜ್ ಅವರು ಮುಖ್ಯಮಂತ್ರಿಗಳ ಜಿಲ್ಲೆ ಶಿವಮೊಗ್ಗಕ್ಕೆ ವರ್ಗಾವಣೆ ಗೊಂಡಿದ್ದಾರೆ. ಅವರು ಜಿಲ್ಲಾಡಳಿತದಲ್ಲಿ ತಂದಿದ್ದ ಮಾರ್ಪಾಡುಗಳ ಬಗ್ಗೆ ಮಾಹಿತಿಯಿದ್ದು,ಜಿಲ್ಲೆ ಕಂಪ್ಯೂಟರೀಕರಣ ಸೇರಿದಂತೆ ಹಲವು ಪ್ರಥಮಗಳನ್ನು ಸಾಧಿಸಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ ಹೇಳಿದರು.

Friday, October 22, 2010

ಮಂಗಳೂರಿನಲ್ಲಿ ಸತತ ಮಳೆ:ವಿಕೋಪ ಎದುರಿಸಲು ತುರ್ತು ಸಭೆ

ಮಂಗಳೂರು,ಅ.22:ಜಿಲ್ಲೆಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ತುರ್ತು ಕಾರ್ಯಾಚರಣೆ ನಡೆಸಲು ಇಂದು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯೋಗೀಶ್ ಭಟ್ ಹಾಗೂ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ನೇತೃತ್ವದಲ್ಲಿ ಸಭೆ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ವಿಜಯ ಪ್ರಕಾಶ್ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ನೀರು ನುಗ್ಗಿ ಅಪಾಯದ ಸ್ಥಿತಿಯಲ್ಲಿರುವ ಪ್ರದೇಶಗಳು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಸಭೆಗೆ ವಿವರಣೆ ನೀಡಿದರು.

ಸತತ ಸುರಿಯು ತ್ತಿರುವ ಮಳೆಯಿಂದ ಮಂಗಳೂರು ನಗರ ಸೇರಿದಂತೆ ಹಲವು ಕಡೆ ಕೃತಕ ನೆರೆ ಭೀತಿ ಸೃಷ್ಟಿ ಯಾಗಿದೆ. ಇದು ವರೆಗೆ 59 ಕಡೆಗಳಲ್ಲಿ ಮಳೆ ಹಾನಿ ಹಾಗೂ ನೀರು ನುಗ್ಗಿದ ಬಗ್ಗೆ ಸಾರ್ವಜನಿ ಕರಿಂದ ದೂರು ಬಂದಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದರು. ನಗರದ ಕೋಡಿಕಲ್, ಕೊಟ್ಟಾರ ಚೌಕಿ, ಭಗವತಿ ನಗರ, ಕಟ್ಟೆಪುಣಿ, ಬಂದರು ಒಣಮೀನು ಗೋದಾಮು ಇರುವ ಕಡೆ ನೀರು ನುಗ್ಗಿ ಹಾನಿಯಾಗಿದೆ. ನದಿ, ಸಮುದ್ರ ಸೇರುವ ಅಳಿವೆ ಬಾಗಿಲಿನ ಬಳಿ ಹೂಳು ತುಂಬಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಿಲ್ಲ. ಕೋಡಿಕಲ್ ಭಗವತಿ ನಗರದ ಬಳಿ 4ರಿಂದ 5 ಅಡಿ ನೀರು ನಿಂತಿದೆ. ಇಲ್ಲಿ ಮನಪಾ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ಹಲವು ಕಡೆ ಚರಂಡಿ ಒತ್ತುವರಿಯಾಗಿರುವುದು ಕೃತಕ ನೆರೆಗೆ ಕಾರಣವಾಗಿದೆ.ಒತ್ತುವರಿ ತೆರವಿಗೆ ಶಾಸಕರು ನಿರ್ದೇಶನ ನೀಡಿದ್ದಾರೆ. ಜಪ್ಪಿನಮೊಗರು, ಕೂಳೂರು, ಕಣ್ಣೂರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಕೃತಕ ನೆರೆ ಉಂಟಾಗಿದೆ ಎಂದು ಮನಪಾ ಆಯುಕ್ತರು ಸಭೆಗೆ ವಿವರಿಸಿದರು.
ಮಂಗಳೂರಿನಲ್ಲಿ 1000 ಮಿ.ಮೀ. ಹೆಚ್ಚುವರಿ ಮಳೆ :
ಮಂಗಳೂರು ತಾಲೂಕಿನಲ್ಲಿ ಕಳೆದ ಬಾರಿಗೆ ಹೋಲಿಸಿ ದಾಗ ಈ ಬಾರಿ ಒಂದು ಸಾವಿರ ಮಿಲಿ ಮೀಟರ್ ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯ ಉಳಿದ ಕಡೆಗಿಂತ ಮಂಗಳೂರು ತಾಲೂಕಿನಲ್ಲಿ ಈ ತಿಂಗಳು ಹೆಚ್ಚು ಮಳೆ ಸುರಿದಿದೆ ಎಂದು ಅಪರ ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ 24 ಗಂಟೆಯೂ ಲಭ್ಯ ಹೆಲ್ಪ್ ಲೈನ್ ಕಾರ್ಯನಿರ್ವಹಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಸೂಚಿಸಿದರು. ಅಡ್ಯಾರ್ ಕಣ್ಣೂರಿನ ಕನ್ನಗುಡ್ಡೆ ಎಂಬಲ್ಲಿ ಕೃಷ್ಣ ನಗರದ ಬಳಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ. ಕದ್ರಿ ಹಾಗೂ ಬೋಳೂರು ಬಳಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಗತ್ಯ ಬಿದ್ದರೆ ಗಂಜಿ ಕೇಂದ್ರ ಹಾಗೂ ಪುನರ್ವಸತಿ ಕೇಂದ್ರ ಆರಂಭಿಸಲು ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಹಾಯವಾಣಿ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ 2220306, 2220344, ಬಂಟ್ವಾಳ 08255- 232120, ಬೆಳ್ತಂಗಡಿ 08256- 232047, ಮಂಗಳೂರು ತಾಲೂಕು 2220587, ಪುತ್ತೂರು 08251 230349, ಸುಳ್ಯ 08257 230330 ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ 1077 ಎಂದು ಪ್ರಭಾಕರ ಶರ್ಮಾ ತಿಳಿಸಿದರು.

ಸಾರ್ವಕಾಲಿಕ ಸತ್ಯ ಸಂದೇಶ ನೀಡಿದ ವಾಲ್ಮೀಕಿಗೆ ಸರ್ಕಾರದ ಗೌರವ: ಸಚಿವ ಕೃಷ್ಣ ಜೆ. ಪಾಲೆಮಾರ್

ಮಂಗಳೂರು,ಅಕ್ಟೋಬರ್ 22: ಸಾರ್ವಕಾಲಿಕವಾಗಿ ಜನಜೀವನದ ಮೇಲೆ ಪರಿಣಾಮ ಬೀರುವ ಮೌಲ್ವಿಕ ಸಂದೇಶ ನೀಡಿದ ಮಹರ್ಷಿ ವಾಲ್ಮೀಕಿಯ ಸ್ಮರಣೆಯನ್ನು ಮನಗಂಡ ಸರ್ಕಾರ ವಾಲ್ಮೀಕಿ ಜಯಂತಿ ಆಚರಿಸಿ ಗೌರವ ಸಮರ್ಪಿಸಲು ಸರ್ಕಾರಿ ರಜೆಯನ್ನು ಘೋಷಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳೂರಿನ ಕುದ್ಮುಲ್ ರಂಗ ರಾವ್ ಸ್ಮಾರಕ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ದಲ್ಲಿ ಆಯೋಜಿ ಸಲಾಗಿದ್ದ ಮಹರ್ಷಿ ವಾಲ್ಮೀಕಿ ಜನ್ಮ ದಿನಾಚರಣೆ ಯನ್ನುದ್ದೇಶಿಸಿ ಮಾತನಾ ಡುತ್ತಿದ್ದರು. ವಾಲ್ಮೀಕಿ ಯವರ ಜೀವನ ಮತ್ತು ರಾಮಾ ಯಣ ಜಗತ್ತಿಗೆ ಮಾದರಿ ಯಾಗಿದ್ದು, ಇಂತಹವರ ಸ್ಮರಣೆ ಉತ್ತಮ ಸಮಾಜದ ಅಭಿವೃದ್ಧಿಗೆ ಪೂರಕ ವಾಗಿರುತ್ತದೆ ಎಂದು ಅವರು ನುಡಿದರು.ಕಾರ್ಯ ಕ್ರಮ ಉದ್ಘಾಟಿಸಿ ಮಾತ ನಾಡಿದ ಶಾಸಕ ರಾದ ಎನ್. ಯೋಗೀಶ್ ಭಟ್ ಅವರು, ಬೇಡನೊಬ್ಬ ಋಷಿಯಾಗಿ, ಕವಿಯಾಗಿ ಮಾರ್ಪಾಡು ಗೊಂಡ ಬಗ್ಗೆ, ರಾಮಾಯಣ ಹಾಗೂ ರಾಮ ಭಾರತವನ್ನು ಮೀರಿ ವ್ಯಾಪಿಸಿರುವ ಬಗ್ಗೆ, ರಾಮ ರಾಜ್ಯದ ಕಲ್ಪನೆ ಬಗ್ಗೆ ಮಾತ ನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ಮಾತನಾಡಿದರು. ವಿಶೇಷ ಆಹ್ವಾನಿತರಾದ ಶಾಸಕರಾದ ಯು. ಟಿ. ಖಾದರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಶಾಂತಾ ಆರ್, ವಾಲ್ಮೀಕಿ ಸಂಘದ ಅಧ್ಯಕ್ಷರಾದ ಹಾಲೇಶಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಭಾಷಣಗಾರರಾದ ಪ್ರೊ. ಕೆ. ಅಭಯ್ ಕುಮಾರ್, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದ, ಮಾನವೀಯ ಸಂದೇಶಗಳನ್ನು ನೀಡಿದ ವಾಲ್ಮೀಕಿಯ ಬಗ್ಗೆ ಪ್ರತಿಯೊಬ್ಬರು ತಿಳಿದಿರಬೇಕು. ಹಿಂಸೆಯಿಂದ ಅಹಿಂಸೆಗೆ ತಿರುಗಿದ ವಾಲ್ಮೀಕಿಯ ಜೀವನ, ತಪಸ್ಸು ಮತ್ತು ಏಕಾಗ್ರತೆಯಿಂದ ನಡೆಸಿದ ಸಾಧನೆ, ಶೋಕದಿಂದ ಶ್ಲೋಕ ನಿರ್ಮಾಣವಾದ ರೀತಿ, ರಾಮ ನಾಮವನ್ನು ತಾರಕಕ್ಕೇರಿಸಿದ ಕೀರ್ತಿ ವಾಲ್ಮೀಕಿಯದ್ದು ಎಂದರು.
ಸಮಾರಂಭದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ. ಕೆ. ಎನ್. ವಿಜಯಪ್ರಕಾಶ್, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ತಹಸೀಲ್ದಾರ್ ಮಂಜುನಾಥ್ ಉಪಸ್ಥಿತರಿದ್ದರು. ಬಿಸಿಎಂ ಅಧಿಕಾರಿ ಎಸ್. ಎಸ್. ಕಾಳೆ ಸ್ವಾಗತಿಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ರೆಡ್ಡಿ ನಾಯಕ್ ವಂದಿಸಿದರು.

Wednesday, October 20, 2010

ಅ. 24ರಿಂದ 31ರವರೆಗೆ ರಾಜ್ಯ ಮಟ್ಟದ ಕನ್ನಡ ಪುಸ್ತಕ ಮೇಳ

ಮಂಗಳೂರು, ಅಕ್ಟೋಬರ್.20 : ಸಾಹಿತಿಗಳು, ಲೇಖಕರು, ಪ್ರಕಾಶಕರನ್ನು ಬೆಸೆಯುವ ಹಾಗೂ ಕನ್ನಡ ಪುಸ್ತಕಗಳಲ್ಲಿರುವ ಚಿಂತನೆಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರ ಮಂಗಳೂರಿನ ನೆಹರು ಮೈದಾನದಲ್ಲಿ ಅಕ್ಟೋಬರ್ 24 ರಿಂದ 31ರವರೆಗೆ ರಾಜ್ಯ ಮಟ್ಟದ ಕನ್ನಡ ಪುಸ್ತಕ ಮೇಳವನ್ನು ಆಯೋಜಿಸಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಅಶೋಕ್ ಎನ್. ಚಲವಾದಿ ಹೇಳಿದರು.
ಈ ಸಂಬಂಧ ಜಿಲ್ಲಾಧಿ ಕಾರಿಗಳ ಸಭಾಂಗ ಣದಲ್ಲಿ ಆಯೋಜಿ ಸಿದ್ದ ಪತ್ರಿಕಾ ಗೋಷ್ಠಿಯ ನ್ನುದ್ದೇಶಿಸಿ ಮಾತನಾಡಿದ ಅವರು, ಅ.24 ಭಾನುವಾರ ಬೆಳಗ್ಗೆ 10 ಗಂಟೆ ಯಿಂದ ಅ.31 ರಂದು ರಾತ್ರಿ 9 ಗಂಟೆಯ ವರೆಗೆ ಪುಸ್ತಕ ಮಾರಾಟ ಹಾಗೂ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸುವ ಉದ್ದೇಶ ದಿಂದ ಕನ್ನಡ ಪುಸ್ತಕ ಮೇಳವನ್ನು ಹಮ್ಮಿ ಕೊಂಡಿದೆ ಎಂದು ವಿವರಿ ಸಿದರು.25,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಸೌಲಭ್ಯ ಸಹಿತ ಹಾಗೂ ಧೂಳು ರಹಿತ ಪೆಂಡಾಲ್, ಸುಸಜ್ಜಿತ ಬುಕ್ ಸ್ಟಾಲ್ ಗಳು, 110 ಕ್ಕೂ ಮಿಕ್ಕಿದ ಸಂಖ್ಯೆಯ ಪುಸ್ತಕ ಮಳಿಗೆಗಳೂ, ಪ್ರಸಿದ್ಧ ಪ್ರಕಾಶನ ಸಂಸ್ಥೆಗಳ ಪುಸ್ತಕಗಳು, ರಾಜ್ಯದ ವಿಶ್ವ ವಿದ್ಯಾನಿಲಯಗಳ ಪ್ರಸಾ ರಾಂಗದ ಮಹತ್ವ ಪೂರ್ಣ ಪ್ರಕಟಣೆ ಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಿತ ಕೃತಿಗಳು, ಕನ್ನಡ, ತುಳು, ಕೊಂಕಣಿ, ಬ್ಯಾರಿ,ಕೊಡವ ಇತ್ಯಾದಿ ಅಕಾಡೆಮಿ ಗಳಿಂದ ಪ್ರಕಾಶ ನಗೊಂಡ ಪುಸ್ತಕಗಳು, ಶೇ. 30 ರಿಯಾಯಿತಿ ದರದಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳು. ಶೇ. 10 ರಿಂದ ಮೇಲ್ಪಟ್ಟು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಅವರು ನುಡಿದರು. ಮೇಳದ ಜೊತೆಗೆ ಸಾಂಸ್ಕೃತಿಕ ಮತ್ತು ಸಂವಾದ ಕಾರ್ಯಕ್ರಮಗಳು ನಡೆಯಲಿದೆ ಎಂಬುದನ್ನು ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸದಸ್ಯ ಸಂಚಾ ಲಕರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು, ಪ್ರಾಧಿಕಾರದ ಆಶಯ ಗಳನ್ನು ವಿವರಿಸಿ ದರಲ್ಲದೆ,ಜಿಲ್ಲಾ ಕಸಾಪದ ವತಿಯಿಂದ ಲೇಖಕರಿಗೆ ನೇರ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಪ್ರಕಾಶಕರು, ಓದುಗರು,ಲೇಖಕರು, ಎಲ್ಲ ಸಾರ್ವಜನಿಕರು ಈ ಮೇಳದಲ್ಲಿ ಭಾಗವಹಿಸಿ ಪುಸ್ತಕ ಮೇಳವನ್ನು ಯಶಸ್ವಿಗೊಳಿಸಲು ಸಹಕಾರ ಕೋರಿದರು. ಕಳೆದ ಫೆಬ್ರವರಿಯಲ್ಲಿ ಮೈಸೂರು ನಗರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪುಸ್ತಕ ಮೇಳ ಅಭೂತ ಪೂರ್ವ ಯಶಸ್ಸು ಕಂಡಿದ್ದು, ಎಲ್ಲ ಪುಸ್ತಕ ಪ್ರೇಮಿಗಳು ಸಹಕರಿಸಲು ಮನವಿ ಮಾಡಿದರು. ಮತ್ತೊಬ್ಬ ಸದಸ್ಯರಾದ ಮುಕುಂದ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪುಸ್ತಕ ಮೇಳ ಯಶಸ್ಸಿಗೆ ಸಿಇಒ ಅಧ್ಯಕ್ಷತೆಯಲ್ಲಿ ಸಭೆ:ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ಪುಸ್ತಕ ಮೇಳವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿ ಕೊಳ್ಳುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪಿ. ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 20 ರಂದು ಬೆಳಗ್ಗೆ ಅಧಿಕಾರಿಗಳ ಸಭೆ ನಡೆಯಿತು.ಜಿಲ್ಲೆಯ ವಿವಿಧ ಪ್ರಾಥಮಿಕ ಮತ್ತು ಪ್ರೌಢ ಶಾಲೆಗ ಳನ್ನೊಳ ಗೊಂಡಂತೆ ಎಲ್ಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪುಸ್ತಕ ಮೇಳದಲ್ಲಿ ಪಾಲ್ಗೊಳ್ಳಲು ಅನುಕೂ ಲವಾಗು ವಂತೆ ಸಂಬಂಧಪಟ್ಟ ಶಾಲೆಗಳಿಗೆ ಸುತ್ತೋಲೆ ಹೊರಡಿಸಲು ವಿದ್ಯಾಂಗ ಇಲಾಖೆ ಉಪ ನಿರ್ದೇಶಕರಾದ ಚಾಮೇ ಗೌಡ ಅವರಿಗೆ ಸಿ ಇ ಒ ಅವರು ಸೂಚಿಸಿದರು. ಪೂರ್ವಹ್ನ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಅಪರಾಹ್ನ ಪ್ರೌಢಶಾಲಾ ಮಕ್ಕಳು ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲು ನಿರ್ಧರಿಸಲಾಯಿತು. ಓದಿನ ಅಭಿರುಚಿಯನ್ನು ಬೆಳೆಸಲು ಪುಸ್ತಕ ಮಳಿಗೆ ಭೇಟಿ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಕಾಲೇಜು ಶಿಕ್ಷಣಾಧಿಕಾರಿಗಳು, ಕಾರ್ಪೋರೇಷನ್ ಅಧಿಕಾರಿಗಳು ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಅಶೋಕ್ ಎನ್. ಚಲವಾದಿ ಸದಸ್ಯರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಪುಸ್ತಕ ಮೇಳ ಸುವ್ಯವಸ್ಥಿತವಾಗಿ ನಡೆಸಲು ಅನುಕೂಲವಾಗುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಸಿ ಇ ಒ ಅವರು ಹೇಳಿದರು.

Wednesday, October 13, 2010

'ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಮೀನುಗಾರಿಕೆ ಕೊಡುಗೆ ಗಮನೀಯ'

ಮಂಗಳೂರು,ಅಕ್ಟೋಬರ್ 13: ಕರಾವಳಿ ನಗರಿ ದಕ್ಷಿಣ ಕನ್ನಡ ಜಿಲ್ಲೆ ಮೀನುಗಾರಿಕೆಗೆ ಹೆಸರು ವಾಸಿ. ಮೀನು ಉತ್ತಮ ಪೌಷ್ಠಿಕ ಆಹಾರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಜಿಲ್ಲೆಯಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ ವಾಗಿದ್ದು, ಸುಮಾರು 42 ಕಿ.ಮೀ ಉದ್ದವಿರುವ ಕರಾವಳಿಯ ಈ ಜಿಲ್ಲೆ ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ಕಲ್ಪಿಸಿದೆ. ವಿದೇಶಿ ವಿನಿಮಯದ ಒಂದು ಪ್ರಮುಖ ಸಂಪನ್ಮೂಲವಾಗಿದೆಯಲ್ಲದೆ ಜಿಲ್ಲೆಯ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಜಿಲ್ಲೆಯಲ್ಲಿ ಸುಮಾರು 21 ಮೀನು ಗಾರಿಕಾ ಗ್ರಾಮ ಗಳಿದ್ದು, ಅದರಲ್ಲಿ 52,218 ಮೀನುಗಾರರು ವಾಸಿಸು ತ್ತಿದ್ದಾರೆ. ಸುಮಾರು 27,597 ಮೀನು ಗಾರರು ವೃತ್ತಿ ನಿರತ ರಾಗಿದ್ದಾರೆ. ಜಿಲ್ಲೆಯಲ್ಲಿ 60 ಪರ್ಸಿನ್ ದೋಣಿಗಳೂ, 950 ಟ್ರಾಲರ್ ದೋ ಣಿಗಳೂ, 1021 ಯಾಂತ್ರೀಕೃತ ನಾಡ ದೋಣಿಗಳು ಹಾಗೂ 242 ಯಾಂತ್ರೀ ಕೃತವಲ್ಲದ ನಾಡ ದೋಣಿಗಳು ಮೀನು ಗಾರಿಕೆಯಲ್ಲಿ ನಿರತವಾಗಿದೆ. ವಾರ್ಷಿಕ ಸುಮಾರು ಒಂದು ಲಕ್ಷ ಮೆಟ್ರಿಕ್ ಟನ್ ನಷ್ಟು ಪ್ರಮಾಣದ ಮೀನು ಹಿಡಿಯುವ ಅವಕಾಶವಿದ್ದು, 09 - 10ನೇ ಸಾಲಿನಲ್ಲಿ 408 ಕೋಟಿ ರೂ. ಮೌಲ್ಯದ 90345 ಮೆ. ಟನ್ ಮೀನು ಉತ್ಪಾದನೆ ಯಾಗಿದೆ. ಇವುಗಳಲ್ಲಿ ವಿದೇಶಿ ವಿನಿಮಯ ತರುವ ರಫ್ತಿಗೆ ಯೋಗ್ಯ ಸಿಗಡಿ,ಬೊಂಡಾಸ್, ಪಾಂಪ್ರೆಟ್, ಅಂಜಲ್, ಪಿಂಕ್ ಪರ್ಚ್, ರಿಬ್ಬನ್ ಫಿಶ್ ಮೊದಲಾದ ಮೀನುಗಳು ಸೇರಿವೆ. ಮೀನುಗಾರಿಕೆ ಉದ್ಯಮಕ್ಕೆ ಪೂರಕವಾಗಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ 1025 ಮೆ.ಟನ್ ಸಾಮರ್ಥ್ಯದ 61 ಮಂಜುಗೆಡ್ಡೆ ಕಾರ್ಖಾನೆಗಳು, 12 ಶೀತಲೀಕರಣ ಸ್ಥಾವರಗಳೂ,5 ಘನೀಕರಣ ಘಟಕಗಳು, 14 ಫಿಶ್ ಮೀಲ್ ಘಟಕಗಳು, 9 ಬೋಟ್ ಬಿಲ್ಡಿಂಗ್ ಘಟಕಗಳು ಹಾಗೂ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ರಫ್ತು ಮಾಡುವ 8 ಸಂಸ್ಕರಣ ಘಟಕಗಳನ್ನು ಒಳಗೊಂಡಿದೆ.ಮೀನುಗಾರಿಕೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ಮೀನುಗಾರರ ಸಹಕಾರಿ ಸಂಘಗಳಿದ್ದು, 4 ಮೀನುಗಾರರ ಮಹಿಳೆಯರ ಸಂಘವೂ ಇದೆ. 23 ಮೀನುಗಾರರ ಸಹಕಾರಿ ಸಂಘದಲ್ಲಿ ಒಟ್ಟು 26,228 ಸದಸ್ಯರಿರುತ್ತಾರೆ. ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರ ನೇತೃತ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 3 ಸಹಾಯಕ ನಿರ್ದೇಶ ಕರಿದ್ದಾರೆ.ಜಿಲ್ಲೆಯಲ್ಲಿ ಒಳನಾಡು ಮೀನು ಗಾರಿಕೆಯನ್ನು ಪ್ರೋತ್ಸಾಹಿಸಲು ಇಲಾಖಾ ವತಿಯಿಂದ ಪಿಲಿಕುಳ ದಲ್ಲಿ ಮೀನು ಪಾಲನಾ ಕೇಂದ್ರ ನಿರ್ಮಿಸ ಲಾಗಿದೆ. ಇಲ್ಲಿ ಉತ್ತಮ ತಳಿಯ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಮುಂತಾದ ಮೀನು ಮರಿಗಳನ್ನು ಖಾಸಗಿ ಕೃಷಿಕರಿಗೆ ವಿತರಿಸ ಲಾಗುತ್ತಿದೆ.ಮೀನು ಮರಿ ಉತ್ಪಾದನೆ ಮತ್ತು ಸಾಕಣೆ, ಹಂಚಿಕೆ, ವಾಹನ ನಿರ್ವಹಣೆಗೆ 1,53,000 ಅನುದಾನ ನಿಗದಿ ಯಾಗಿದೆ. ಈ ಕಾರ್ಯ ಕ್ರಮ ದಡಿ ಜಿಲ್ಲೆಯಾ ದ್ಯಂತ ಸುಮಾರು 75,000 ಮೀನು ಮರಿಗಳನ್ನು ಸಣ್ಣ ಕೆರೆ, ಬಾವಿಗಳಲ್ಲಿ ಬಿತ್ತುವ ಗುರಿಯನ್ನು ಇಲಾಖೆ ಹೊಂದಿದೆ. ಮೀನುಗಾರಿಕ ದೋಣಿಗಳಲ್ಲಿ ಜೀವ ರಕ್ಷಣಾ ಸಾಧನಗಳನ್ನು ಅಳವಡಿಸಲು ಸಹಾಯಧನ ನೀಡಲಾಗುವುದು. ಸಮುದ್ರದ ಹಿನ್ನೀರಿನಲ್ಲಿ ಮೀನುಮರಿ ಬಿತ್ತನೆಗೆ ಅದರಲ್ಲೂ ಮುಖ್ಯವಾಗಿ ಸಿಗಡಿ ಸಾಕಾಣಿಕೆಗೆ ಅನುದಾನ ನಿಗದಿ ಪಡಿಸಲಾಗಿದೆ. ತಾಜಾ ಮೀನುಗಳನ್ನು ದೂರದ ಸ್ಥಳಗಳಿಗೆ ಮಾರಾಟಕ್ಕಾಗಿ ಉತ್ತಮ ಸ್ಥಿತಿಯಲ್ಲಿ ಸಾಗಿಸಲು ಅನುಕೂಲವಾಗುವಂತೆ ಶಾಖ ನಿರೋಧಕ ಪೆಟ್ಟಿಗೆಗಳನ್ನು ಹೊಂದಲು ಮಹಿಳಾ ಮೀನುಗಾರರಿಗೆ ಸಹಾಯಧನ ಒದಗಿಸಲಾಗುವುದು. ಸೈಕಲ್, ಮೊಪೆಡ್, ದ್ವಿಚಕ್ರ ವಾಹನ ಖರೀದಿಸಲು ಸಹಾಯಧನ ನೀಡಲು ಇಲಾಖೆಯಲ್ಲಿ ಸೌಲಭ್ಯವಿದೆ. ಮೀನುಗಾರಿಕೆ ವಸ್ತುಗಳ ಖರೀದಿಗೆ ಸಹಕಾರಿ ಸಂಘಗಳಿಗೆ ಸಾಲಗಳಿದ್ದು, ಸಾಂಪ್ರಾದಾಯಿಕ ಮೀನುಗಾರರಿಗೆ ಬೇಕಾದ ಬಲೆ, ಪ್ಲೋಟ್ಸ್, ನೈಲಾನ್ ರೋಪ್ ಇತ್ಯಾದಿ ಸಲಕರಣೆ ಖರೀದಿಗೆ ಮೀನುಗಾರಿಕಾ ಸಹಕಾರಿ ಸಂಘದ ಅರ್ಹ ಸದಸ್ಯರಿಗೆ ಸಹಕಾರ ಸಂಘದ ಮೂಲಕ ಗರಿಷ್ಠ 6,000 ರೂ. ಸಾಲ ಸೌಲಭ್ಯ ನೀಡಲಾಗುವುದು. ಸಾಲವನ್ನು ನಿಗದಿತ ಅವಧಿಯೊಳಗೆ ಪಾವತಿಸಿದರೆ ಅದರಲ್ಲೂ ಗರಿಷ್ಠ 2000 ರೂ. ಮೊತ್ತವನ್ನು ಸಹಾಯ ಧನವನ್ನಾಗಿ ಪರಿವರ್ತಿಸ ಲಾಗುವುದು. ಪ್ರಸ್ತುತ ಸಾಲಿನಲ್ಲಿ 30 ಮಂದಿಗೆ 6,000 ದಂತೆ ಸಾಲ ನೀಡಲು 1,80,000 ರೂ. ಅನುದಾನ ಕಾಯ್ದಿರಿಸಿದೆ. ಈ ಯೋಜನೆ ಗಳಲ್ಲದೆ ಸಾಂಪ್ರಾ ದಾಯಿಕ ದೋಣಿ ಗಳನ್ನು ಯಾಂತ್ರೀ ಕರಿಸುವ ಕೇಂದ್ರ ಪುರಸ್ಕೃತ ಯೋಜನೆ, ರಾಜ್ಯ ವಲಯ ಯೋಜನೆ ಗಳು ಹಲವಾರಿವೆ. ಈ ಸಂಬಂಧ ಹೆಚ್ಚಿನ ಮಾಹಿತಿಗೆ ಮೀನುಗಾರಿಕ ಉಪ ನಿರ್ದೇಶಕರು, ಮೀನುಗಾರಿಕಾ ಮಾಹಿತಿ ಕೇಂದ್ರ ಕಟ್ಟಡ ಒಂದನೇ ಮಹಡಿ, ಬಂದರು ಮಂಗಳೂರು, ದೂ.ಸಂ. 2425680, ಮೀನುಗಾರಿಕ ಹಿರಿಯ ಸಹನಿರ್ದೇಶಕರು, ಎರಡನೇ ಮಹಡಿ,ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ದೂ.ಸಂ.2451292.ಮೀನುಗಾರಿಕ ಸಹಾಯಕ ನಿರ್ದೇಶಕರು, ಮೀನುಗಾರಿಕಾ ಬಂದರು ಕಚೇರಿ ಕಟ್ಟಡ ಮಂಗಳೂರು, ದೂ.ಸಂ. 2429317. ಮೀನುಗಾರಿಕ ಸಹಾಯಕ ನಿರ್ದೇಶಕರು, ಮೀನುಗಾರಿಕಾ ಮಾಹಿತಿ ಕೇಂದ್ರ ಕಟ್ಟಡ, ಬಂದರು ಮಂಗಳೂರು, ದೂ.ಸಂ. 2421680 ಇವರನ್ನು ಸಂಪರ್ಕಿಸಬಹುದು.

Tuesday, October 12, 2010

ಮಂಗಳೂರು -ಡೆಲ್ಟಾ ನಗರ ಪಾಲಿಕೆ ನಡುವೆ ಭಾಂದವ್ಯ & ಅಭಿವೃದ್ಧಿ ಒಪ್ಪಂದ

ಮಂಗಳೂರು,ಅಕ್ಟೋಬರ್12:ಪ್ರಾಕೃತಿಕವಾಗಿ ಹಲವು ಸಾಮ್ಯತೆಗಳನ್ನು ಹೊಂದಿರುವ ಕರಾವಳೀ ತೀರದ ನಗರ ಗಳಾದ ಮಂಗಳೂರು ಮತ್ತು ಕೆನಡಾ ಬ್ರೀಟಿಷ್ ಕೊಲಂಬಿ ಯಾದ ಡೆಲ್ಟಾ ನಗರ ಪಾಲಿಕೆ ನಡುವೆ ಭಾಂದವ್ಯ ಸೇರಿದಂತೆ ಸಮಗ್ರ ಅಭಿವೃದ್ಧಿ ಕುರಿತ ಒಪ್ಪಂದಕ್ಕೆ ಇಂದು ಮಹಾ ನಗರ ಪಾಲಿಕೆಯಲ್ಲಿ ನಡೆದ ಸಮಾ ರಂಭದಲ್ಲಿ ಎರಡು ನಗರಗಳ ಮೇಯರ್ ಗಳಾದ ರಜನಿ ದುಗ್ಗಣ್ಣ ಮತ್ತು ಲೂಯಿ ಜಾಕ್ಸನ್ ಅವರು ಸಹಿ ಹಾಕಿದರು.ನಗರಗಳ ಆರ್ಥಿಕ ಅಭಿವೃದ್ಧಿ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅದರಲ್ಲೂ ಮುಖ್ಯವಾಗಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಎರಡು ನಗರಗಳು ಒಪ್ಪಂದಕ್ಕೆ ಸಹಿಹಾಕಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಾದ ಡಾ.ಕೆ.ಎನ್. ವಿಜಯಪ್ರಕಾಶ್, ಡೆಲ್ಟಾ ಪಾಲಿಕೆಯ ಅಭಿವೃದ್ಧಿ ಅಧಿಕಾರಿ ಗಳಾದ ಜಾರ್ಜ್ ವಿ. ಹಾರ್ವಿ ಅವರು ಪರಸ್ಪರ ಎರಡು ನಗರಗಳ ಅಭಿವೃದ್ಧಿ ನಕಾಶೆ ಹಾಗೂ ಚರಿತ್ರೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿ ಕೊಂಡರು.ವ್ಯವಸ್ಥಾಪಕ ಅಧಿಕಾರಿ ಮನ್ಜೀತ್ ಕೈಲ್,ಪಾಲಿಕೆ ಉಪ ಮೇಯರ್ ರಾಜೇಂದ್ರ ಕುಮಾರ್, ವಿಪಕ್ಷ ನಾಯಕ ಅಶೋಕ್, ಪಾಲಿಕೆ ಯ ಸದಸ್ಯರು ಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಮಂಗಳೂರು ಪಾಲಿಕೆಯ ಈ ಐತಿಹಾಸಿಕ ಆರಂಭಿಕ ಹೆಜ್ಜೆಗೆ ಸಾಕ್ಷಿ ಯಾದರು.

Monday, October 11, 2010

ಡಾ.ಕೆ. ಶಿವರಾಂ ಕಾರಂತರ ಹುಟ್ಟುಹಬ್ಬ

ಮಂಗಳೂರು,ಅ.10: ಪುರಭವನದಲ್ಲಿ ಭಾನುವಾರ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಸಾಹಿತ್ಯಪರಿಷತ್ ಆಶ್ರಯದಲ್ಲಿ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣ ವಾಗಿ ಆಚರಿಸ ಲಾಯಿತು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಮಕ್ಕಳ ಮೇಳದಿಂದ ತೆಂಕು ತಿಟ್ಟು ಯಕ್ಷಗಾನ ಬಯಲಾಟ ಪಾಂ ಚಜನ್ಯ ಮತ್ತು ಕೃಷ್ಣ ಯಾಜಿ ಬಳಗದಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಏರ್ಪಡಿಸ ಲಾಯಿತ ಲ್ಲದೆ, ಕಾರಂತರ ಕುರಿತು ಕಾರ್ಡಿನಲ್ಲಿ ಚಿತ್ರ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗ ವಹಿಸಿ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಕಾರ್ಯಕ್ರಮ ಅರ್ಥ ಪೂರ್ಣ ವಾಗಿ ಮೂಡಿಬಂತು. ಇದೇ ಸಂದರ್ಭದಲ್ಲಿ ಹಿರಿಯ ವಿದ್ವಾಂಸ, ಜಾನಪದ ಸಂಶೋಧಕ ಡಾ.ಅಮೃತ ಸೋಮೇಶ್ವರ ಅವರಿಗೆ ಕಾರಂತ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು.ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ,ಹಿರಿಯ ಸಾಹಿತಿ ಏರ್ಯಾ ಲಕ್ಷ್ಮೀ ನಾರಾಯಣ ಆಳ್ವ,ಮಂಗಳೂರು ವಿವಿ ಕುಲಸಚಿವರಾದ ಡಾ.ಚಿನ್ನಪ್ಪ ಗೌಡ ಮತ್ತಿತರ ಗಣ್ಯರು ಸಮಾ ರಂಭದಲ್ಲಿ ಪಾಲ್ಗೊಂಡಿದ್ದರು.

Saturday, October 9, 2010

ಡೆಲ್ಟಾ ಮೇಯರ್ ಅ 12 ರಂದು ಮಂಗಳೂರಿಗೆ

ಮಂಗಳೂರು,ಅ 09: ಮಂಗಳೂರು ಮಹಾ ನಗರ ಪಾಲಿಕೆ ಯೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಲು ಕೆನಡಾದ ಡೆಲ್ಟಾ ಮಹಾ ನಗರ ಪಾಲಿಕೆಯ ಮೇಯರ್ ಲೂಯಿಸ್ ಇ. ಜಾಕ್ಸನ್ ತನ್ನ ನಿಯೋಗ ದೊಂದಿಗೆ ಅಕ್ಟೋಬರ್ 12 ರಂದು ನಗರಕ್ಕೆ ಭೇಟಿ ನೀಡಲಿ ದ್ದಾರೆ.ನಿಯೋಗ ದಲ್ಲಿ ಮೇಯರ್ ಸಹಿತ ಅಲ್ಲಿನ ಸಿಇಒ ಜಾರ್ಜ್ ವಿ. ಹಾರ್ವೆ, ಆಡಳಿತ ವ್ಯವ ಸ್ಥಾಪಕಿ ಮಂಜತ್ ಕೈಲಾ ಮತ್ತಿ ತರರು ಇದ್ದು ನಗರಕ್ಕೆ ಭೇಟಿ ನೀಡಿ ಸೋದರ ತೆಯ ಬಾಂಧವ್ಯ ಸಹಿತ ಆರೊಗ್ಯ ರಕ್ಷಣೆ,ಶಿಕ್ಷಣ,ಕಲೆ-ಸಂಸ್ಕೃತಿ,ಪ್ರವಾ ಸೋದ್ಯಮ,ವ್ಯಾಪಾರ ಸೇರಿದಂತೆ ಅನೇಕ ಕಾರ್ಯ ಕ್ರಮಗಳ ಅನುಷ್ಟಾನ ಕುರಿತು ಒಡಂಬ ಡಿಕೆಗೆ ಪರಸ್ಪರ ಸಹಿ ಹಾಕ ಲಿದ್ದಾರೆ.ಇದೇ ಸಂದರ್ಭದಲ್ಲಿ ಪಾಲಿಕೆಯಲ್ಲಿ ಆಯೋಜಿ ಸಲಾದ ಚರ್ಚೆಯಲ್ಲಿ ನಿಯೋಗ ಪಾಲ್ಗೊ ಳ್ಳಲಿದೆ ಮತ್ತು ಪರಸ್ಪರ ಮಾಹಿತಿ ವಿನಿಮಯ ಮಾಡಲಿದೆ.ನವ ಮಂಗಳೂರು ಬಂದರು, ಇನ್ಫೊಸಿಸ್ ಸಂಸ್ಥೆ ಮತ್ತು ಕೆನರಾ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿಗೂ ನಿಯೋಗ ಭೇಟಿ ನೀಡಲಿದೆ.
ಡೆಲ್ಟಾ ಪಾಲಿಕೆ ಕುರಿತು ಒಂದಿಷ್ಟು ಮಾಹಿತಿ:ಡೆಲ್ಟಾ ಮಹಾ ನಗರ ಕೆನಡದ ಬ್ರಿಟೀಷ್ ಕೊಲಂಬಿಯ ರಾಜ್ಯ ದಲ್ಲಿದೆ.ಮಂಗಳೂರು ನಂತೆಯೇ ಬಂದರು ನಗರ ವಾಗಿರುವ ಡೆಲ್ಟಾ ನಗರ 364 ಚರದ ಕಿಲೋ ಮೀಟರ್ ವ್ಯಾಪ್ತಿ ಹೊಂದಿದೆ.ಆದರೆ ಇಲ್ಲಿನ ಜನ ಸಂಖ್ಯೆ ಮಾತ್ರ ಕೇವಲ 1 ಲಕ್ಷ. ಪ್ರವಾ ಸೋದ್ಯಮ,ಶಿಕ್ಷಣ,ಕೃಷಿ ಮತ್ತು ಪರಿಸರ ಕಾಳಜಿಯಲ್ಲಿ ಡೆಲ್ಟಾ ನಗರ ಮುಂಚೂಣಿ ಯಲ್ಲಿದೆ.

Thursday, October 7, 2010

ಬಹುಮತ ಸಾಬೀತು ಪಡಿಸುವೆ: ಮುಖ್ಯಮಂತ್ರಿ ವಿಶ್ವಾಸ

ಮಂಗಳೂರು,ಅ.7:ಸರ್ಕಾರ ಸುಭದ್ರವಾಗಿದ್ದು,ನಾಡಿನ ಅಭಿವೃದ್ಧಿಗೆ ಇನ್ನಷ್ಟು ಸಶಕ್ತವಾಗಿ ಕೆಲಸ ಮಾಡುವ ವಿಶ್ವಾಸವನ್ನು ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವ್ಯಕ್ತಪಡಿಸಿದರು.
ಅವರಿಂದು ಮುಂಜಾನೆ ಕೇರಳದ ಕಣ್ಣೂರಿನ ತಳಿ ಪರಂಬದ ಶ್ರೀ ರಾಜ ರಾಜೇಶ್ವರಿ ದೇವ ಸ್ಥಾನ ಮತ್ತು ಮಡಂಕಾವು ಶ್ರೀ ಭಗವತಿ ದೇವಾ ಲಯ ಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಸಂದರ್ಭ ದಲ್ಲಿ ಮಂಗಳೂರು ವಿಮಾನ ನಿಲ್ದಾಣ ದಕ್ಕೆ ಆಗಮಿಸಿ ಸುದ್ದಿಗಾರ ರೊಂದಿಗೆ ಮಾತ ನಾಡುತ್ತಿದ್ದರು. ತಮ್ಮ ಸರ್ಕಾರಕ್ಕೆ ಅಭಿವೃದ್ಧಿ ಪರ ಶಾಸಕರ ಬೆಂಬಲದ ಭರವಸೆ ಇದೆ.ಹಾಗಾಗಿ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಈ ಶಾಸಕರ ಬೆಂಬಲ ದಿಂದ ತಾವು ಇನ್ನಷ್ಟು ಶಕ್ತಿ ಯೊಂದಿಗೆ ಗೆದ್ದು ಬರುವ ವಿಶ್ವಾಸವನ್ನು ವ್ಯಕ್ತ ಪಡಿಸಿದರು. ಸ್ವಾತಂತ್ರ್ಯ ಬಂದ ಬಳಿಕ ಪ್ರಥಮ ಬಾರಿಗೆ ತಮ್ಮ ನೇತೃತ್ವದ ಸರ್ಕಾರ ಎರಡೂವರೆ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಆಡಳಿತ ವಿರೋಧಿ ವಾತಾ ವರಣ ದಲ್ಲೂ ಸಾಕಷ್ಟು ಕೆಲಸ ವಾಗಿದೆ. ಡಿಸಿಡೆಂಟ್ ಚಟುವಟಿಕೆ ಗಳಿಗೆ ಇದೇ ಕೊನೆ. ಯಾರೆಲ್ಲ ಇಂತಹ ಚಟುವಟಿಕೆ ಯಲ್ಲಿ ಪಾಲ್ಗೊಂಡಿ ದ್ದಾರೋ ಅವರ ವಿರುದ್ಧ ಕ್ರಮ ಖಚಿತ. ಜನರ ತೀರ್ಮಾನ ಗೌರವಿಸಲು ಸಂಜೆಯ ವರೆಗೂ ಇಂತಹ ಶಾಸಕ ರಿಗೆ ಅವಕಾ ಶವಿದೆ. ಪರಿಸ್ಥಿತಿ ಯನ್ನು ನಿಭಾ ಯಿಸಲು ಹೈಕ ಮಾಂಡ್ ಸಂಪೂರ್ಣ ಅಧಿಕಾರ ತಮಗೆ ನೀಡಿದೆ. ಭೂ ಹಗರಣ ಆರೋಪ ನಿವಾರಿಸಲು ಡಿನೋ ಟಿಫೈ ಸಂಬಂಧ ಯಾವುದೇ ಗೊಂದಲ ನಿವಾ ರಿಸಲು ಇನ್ನು ಮುಂದೆ ಇಂತಹ ಕಡತಗಳ ಪರಿ ಶೀಲನೆಗೆ ಮುಖ್ಯ ಕಾರ್ಯ ದರ್ಶಿಗಳ ಅಧ್ಯಕ್ಷತೆಯಲ್ಲಿ 3 ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಇವರ ನಿರ್ದಾರದ ಬಳಿಕ ಸಹಿ ಹಾಕಲು ನಿನ್ನೆ ಸಂಜೆ ನಿರ್ಧಾರ ಕೈಗೊಳ್ಳಲಾಗಿದೆ. ಮುಂದೆ ಎರಡೂವರೆ ವರ್ಷದ ಬಳಿಕ ಬಿಜೆಪಿಗೆ ಸಂಪೂರ್ಣ ಬಹುಮತ ನೀಡು ವಂತಾಗಲಿ ಪ್ರಜಾ ಪ್ರಭುಗಳು. ಸಂಪೂರ್ಣ ಬಹುಮತದಿಂದ ಸರ್ಕಾರಗಳು ಆಯ್ಕೆಯಾದರೆ ತಮ್ಮ ಸರ್ಕಾರ ಪ್ರಸಕ್ತ ಎದುರಿಸಿ ದಂತಹ ಸಮಸ್ಯೆಗಳು ಉದ್ಭವ ವಾಗುವುದಿಲ್ಲ ಎಂದರು. ಸದ್ಯಕ್ಕೆ ನಾಯ ಕತ್ವ ಬದಲಾವಣೆ ಇಲ್ಲ ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.ಸಂಸ ದರಾದ ನಳಿನ್ ಕುಮಾರ್ ಕಟೀಲ್,ರಾಘ ವೇಂದ್ರ,ಸಚಿವ ರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಮ ಚಂದ್ರ ಗೌಡ,ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ಐಜಿಪಿ ಅಲೋಕ್ ಮೋಹನ್,ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮಾ,ನಗರ ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Wednesday, October 6, 2010

ಅ.10 ರಂದು 109 ನೇ ಕಾರಂತ ಹುಟ್ಟುಹಬ್ಬ

ಮಂಗಳೂರು,ಅ.06:ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಅ.10 ರಂದು ರವಿವಾರ ಪುರಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ದಿವಂಗತ ಡಾ.ಕೋಟ ಶಿವರಾಮ ಕಾರಂತ ಅವರ 109ನೇ ಹುಟ್ಟುಹಬ್ಬವನ್ನು ಆಚರಿಸಲಾಗುವುದು.
ಅಂದು ಸಂಜೆ 5 ಗಂಟೆಗೆ ಸಮಾರಂಭವನ್ನು ಜೀವಿಶಾಸ್ತ್ರ,ಪರಿಸರ, ಬಂದರು ಮತ್ತು ಮುಜರಾಯಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಉದ್ಘಾಟಿಸುವರು. ಹಿರಿಯ ವಿದ್ವಾಂಸ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಭಾಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ ಕಾರಂತ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅಪರಾಹ್ನ 2.30ರಿಂದ ಶ್ರೀ ದುರ್ಗಾ ಮಕ್ಕಳ ಮೇಳ ಮತ್ತು ಕೆನರಾ ಹೈಸ್ಕೂಲ್ ಉರ್ವಾ ಮಕ್ಕಳಿಂದ ತೆಂಕುತಿಟ್ಟು ಯಕ್ಷಗಾನ ಬಯಲಾಟ ಪಾಂಚಜನ್ಯ ಹಾಗೂ ಸಂಜೆ 6.30ರಿಂದ ಕೃಷ್ಣ ಯಾಜಿ ಬಳಕ ಶ್ರೀ ಸಾಲಿಗ್ರಾಮ ಮೇಳ ಇವರಿಂದ ಬಡಗುತಿಟ್ಟು ಯಕ್ಷಗಾನ ಬಯಲಾಟ ಜಾಂಬವತಿ ಕಲ್ಯಾಣ ಜರುಗಲಿದೆ.
ಸಾಧಕ ಡಾ.ಅಮೃತರಿಗೆ 'ಕಾರಂತ ಪುರಸ್ಕಾರ'
ತಮ್ಮ ಸತ್ವಪೂರ್ಣ ವೈವಿಧ್ಯ ಮಯ ಮತ್ತು ಅಸಾಧರಣ ಸಾಂಸ್ಕೃತಿಕ ಸಾಧನೆಗಳಿಂದ ವಿಶಿಷ್ಟರೆನಿಸಿರುವ ಡಾ. ಅಮೃತ ಸೋಮೇಶ್ವರ ಅವರು ಮಂಗಳೂರಿನಲ್ಲಿ ಶಿವರಾಮ ಕಾರಂತ ಜನ್ಮದಿನ ಸಮಾರಂಭದಂದು ಕಾರಂತ ಪುರಸ್ಕಾರ ದಿಂದ ಸನ್ಮಾನಿತರಾಗಲಿದ್ದಾರೆ.
ಎಪ್ಪತ್ತರ ಹರೆಯದ ಪ್ರೊ. ಅಮೃತ ಸೋಮೇಶ್ವ ರರದ್ದು ವೈವಿಧ್ಯ, ವೈಶಿಷ್ಟ್ಯ ಗುಣ ಮಟ್ಟಗಳಲ್ಲಿ ಬೆರಗುಗೊಳಿಸುವ ಸಾಂಸ್ಕೃತಿಕ ಕಾಯಕ, ಜಾನಪದ ಸಂಗ್ರಹ ಸಂಶೋಧನೆ, ಯಕ್ಷಗಾನ, ಕತೆಕಾದಂಬರಿ, ವಿಮರ್ಶೆ, ಕಾವ್ಯ,ಅನುವಾದ,ನಗೆಬರಹ, ಪ್ರಬಂಧ, ನಾಟಕ, ಗಾದೆ, ಕೋಶರಚನೆ,ಗೀತರಚನೆ, ಬಹುಭಾಷಾ ಸಾಹಿತ್ಯ ವ್ಯವಸಾಯ,ಅಧ್ಯಾಪನ, ಸಂಘಟನೆ, ಮಾರ್ಗದರ್ಶನ, ಉಪನ್ಯಾಸ, ಚಿಂತನ, ಗ್ರಂಥ ಸಂಪಾದನ ಮೊದಲಾದ ಹತ್ತಾರು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಪ್ರವರ್ತಿಸಿ ಐದು ದಶಕಗಳಿಗೂ ಮಿಕ್ಕಿದ ಸಾಧನೆಗೈದವರು. ಕರಾವಳಿ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯ, ವೈಶಿಷ್ಟ್ಯಗಳ ಸಾಧಕ ಪ್ರತಿನಿಧಿಯಾಗಿದ್ದಾರೆ. ಆಸಕ್ತಿ, ಸಾಧನೆ, ವಿಚಾರ ಕಾಯಕಗಳಲ್ಲಿ ಡಾ. ಕಾರಂತರ ಜತೆ ಅನೇಕ ಸಾಮ್ಯಗಳನ್ನು ಹೊಂದಿದ್ದು, ಒಂದು ರೀತಿಯಲ್ಲಿ ಕಾರಂತ ತನದ ಮುಂದುವರಿಕೆ ಯಾಗಿದ್ದಾರೆ. ಜತೆಗೆ ತಮ್ಮ ಸೌಮ್ಯ, ಸರಳ, ಆದರ್ಶ ವ್ಯಕ್ತಿತ್ವದಿಂದಲೂ ನಾಡಿನ ಗೌರವಕ್ಕೆ ಪಾತ್ರರಾದವರು. ತುಳು-ಕನ್ನಡಗಳಲ್ಲಿ ಅಮೃತರು ರಚಿಸಿದ 85 ಕೃತಿಗಳಲ್ಲಿ ಸಾಹಿತ್ಯದ ಹೆಚ್ಚು ಕಡಿಮೆ ಸಕಲ ಪ್ರಕಾರಗಳ ರಚನೆಗಳು ಸೇರಿವೆ. ಯಕ್ಷಗಾನ ಕೃತಿ ಸಂಪುಟ, ಪಾಡ್ದನ ಸಂಪುಟ, ತುಳು ಬದುಕು, ನಾಟಕ ಸಂಪುಟ, ತೀರದ ತೆರೆ(ಕಾದಂಬರಿ), ಕಲೆವಾಲ (ಮಹಾಕಾವ್ಯಾನುವಾದ), ಯಕ್ಷಾಂದೋಳ (ಕಲಾ ವಿಮರ್ಶೆ) ಹೃದಯಾವರ್ತಗಳು, ಭಗವತೀ ಆರಾಧನೆ, ಅಪಾರ್ಥಿನೀ ಕೋಳ, ಮೋಯ ಮಲೆಯಾಳ, ಶಬ್ದಕೋಶ ಇವು ಅಮೃತರ ಕೆಲವು ಮುಖ್ಯ ಕೃತಿಗಳು. ಮಂಗಳೂರು ವಿವಿ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ಕು.ಶಿ.ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ ಸಹಿತ ಹಲವು ಗೌರವಗಳನ್ನು ಪುಸ್ತಕ ಪುರಸ್ಕಾರಗಳನ್ನು ಸಮ್ಮೇಳನ ಅಧ್ಯಕ್ಷತೆಗಳನ್ನು ಪಡೆದಿರುವ ಅಮೃತರದ್ದು ದಣಿವಿರದ ದುಡಿಮೆ, ಆಶ್ಚರ್ಯಕರ ಕ್ರಿಯಾಶೀಲನೆ, ಸಮನ್ವಯ ಮಾರ್ಗದ ಸಂಸ್ಕೃತಿ ನಿಷ್ಠ ನಿಲುವಿನ ದೃಢವೈಚಾರಿಕತೆಯ ಅಮೃತರು ಪಂಥಗುಂಪುಗಳಿಂದ ದೂರವಾಗಿದ್ದು ತನ್ನದಾದ ಮೆಲುದನಿಯ ಗಟ್ಟಿತನ ಹೊಂದಿದವರು, ಬಹುವಿಷಯ ಆಸಕ್ತರು, ಸದಾ ಕುತೂಹಲಿ,ಸದಾ ಹಸನ್ಮುಖಿ, ಅಬ್ಬರವಿಲ್ಲದ ಶಾಂತ ಪ್ರಗಲ್ಭ ವ್ಯಕ್ತಿತ್ವವುಳ್ಳವರು.

Monday, October 4, 2010

ಗ್ರಾಮಸಭೆ ಮತದಾರರ ಹಕ್ಕು: ಸಿಇಒ ಶಿವಶಂಕರ್

ಮಂಗಳೂರು, ಅಕ್ಟೋಬರ್ 04 : ಜಾಗೃತ ಜನರಿಂದ ಮಾತ್ರ ವಿಕೇಂದ್ರೀಕೃತ ವ್ಯವಸ್ಥೆಯ ಪ್ರಮುಖ ವ್ಯವಸ್ಥೆಯಾಗಿರುವ ಗ್ರಾಮಸಭೆಗಳು ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗ್ರಾಮಸಭಾ ವರ್ಷಾಚರಣೆ 2009-10ರ ಅಂಗವಾಗಿ ಏರ್ಪಡಿಸಿದ್ದ ಪಂಚಾಯತ್ ರಾಜ್ ಕುರಿತು ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಯಾರಿಗೆ ಬೇಕು ಗ್ರಾಮಸಭೆ ಎಂಬುದನ್ನೇ ಮುಖ್ಯ ಪ್ರಶ್ನೆ ಯಾಗಿಸಿ, ನಾಗರೀಕರ ಸಕ್ರಿಯ ಪಾಲ್ಗೊ ಳ್ಳುವಿಕೆ ಮಾತ್ರ ಗ್ರಾಮ ಸಭೆಗೆ ನಿರೀಕ್ಷಿತ ಯಶಸ್ಸನ್ನು ತಂದು ಕೊಡಲು ಸಾಧ್ಯ ಎಂದ ಸಿಇಒ ಅವರು, ಜನರನ್ನು ಕತ್ತಲೆ ಯಲ್ಲಿರಿಸಿ ನಡೆಸುವ ಅಭಿವೃದ್ಧಿ ಕಾಮ ಗಾರಿಗಳು ನಿರೀಕ್ಷಿತ ಫಲ ನೀಡುವುದು ಅಸಾಧ್ಯ ಎಂದರು.ಗ್ರಾಮ ಪಂಚಾಯತ್ ಗಳು ಫಲಾನು ಭವಿಗಳ ಗುರುತಿ ಸುವಿಕೆ, ಆದ್ಯತೀಕರಣ ಮತ್ತು ಆಯ್ಕೆ ನಿರ್ದಿಷ್ಟ ಮಾರ್ಗ ಸೂತ್ರಗಳನ್ನು ಅಳವಡಿ ಸುವು ದರಿಂದ ಇಲ್ಲಿನ ನಿರ್ಣಯಗಳು ಪರಿಣಾಮ ಕಾರಿಯಾ ಗಿರುತ್ತದೆ. ಸಬ್ಜೆಕ್ಟಿವಿಟಿ ಬಿಟ್ಟು ಅಬ್ಜೆಕ್ಟಿವಿಟಿಗೆ ಹೆಚ್ಚಿನ ಆದ್ಯತೆ ನೀಡು ವಂತಾಗ ಬೇಕು. ಜನರಿಗೆ ವ್ಯವಸ್ಥೆಯ ಮೇಲಿನ ನಿರಾಸಕ್ತಿ ಫಲಾನು ಭವಿಗಳ ಕೊರತೆಗೆ ಎಡೆ ಮಾಡಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸರಕಾರೇತರ ಸಂಘಸಂಸ್ಥೆಗಳ ಪ್ರೋತ್ಸಾಹಕಾರಿ ಕರ್ತವ್ಯ ನಿರ್ವಹಣೆ ಇಲ್ಲಿ ಅಗತ್ಯ ಎಂದರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿಯನ್ನು, ಉನ್ನತೀಕರಣವನ್ನೊಂದು ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿಯ ಹೊಸ ಪರಿಭಾಷೆಯನ್ನು ಬರೆಯಬೇಕು. ಗ್ರಾಮಕ್ಕೆ ಮುಂದಿನ ಐದು ವರ್ಷಗಳಲ್ಲಿ ಏನೇನು ಅಗತ್ಯವಿದೆಯೆಂಬುದನ್ನು ಮನಗಂಡು ಮೊದಲೇ ಯೋಜನೆ ರೂಪಿಸುವಂತಾಗಬೇಕು ಎಂದರು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಒಂಬಡ್ಸ ಮನ್ ಎನ್. ಶೀನ ಶೆಟ್ಟಿ ಅವರು, ಗ್ರಾಮಸಭೆಗಳು ಸಂಘರ್ಷಗಳ ತಾಣವಾಗದೆ ಸಂವಾದಗಳ ತಾಣವಾಗಬೇಕು. ಗ್ರಾಮಸಭೆಗಳಲ್ಲಿ ವಿಶ್ವಾಸ ಮೂಡಿ, ತಳಮಟ್ಟದಿಂದ ವ್ಯವಸ್ಥೆ ಸಶಕ್ತವಾದರೆ ಮಾತ್ರ ವಿಕೇಂದ್ರೀಕೃತ ವ್ಯವಸ್ಥೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದರು. ಇಚ್ಛಾಶಕ್ತಿ, ಜ್ಞಾನ ಮತ್ತು ಕ್ರಿಯಾಶಕ್ತಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು. ವಿಷಯ ಮಂಡನೆ ಮಾಡಿದ ಪತ್ರಕರ್ತ ಎನ್ ಟಿ ಗುರು ವಪ್ಪ ಬಾಳೆ ಪುಣಿ ಅವರು, ಗ್ರಾಮ ಸಭೆಗಳ ನಿರ್ಣಯಗಳ ಬಗ್ಗೆ, ಕಾರ್ಯ ಸೂಚಿಗಳ ಬಗ್ಗೆ, ಪ್ರಸಕ್ತ ಇರುವ ವ್ಯವಸ್ಥೆಯ ಬಗ್ಗೆ ಅವ ಲೋಕಿಸಿದಾಗ ಸಮಾ ಧಾನಕಾರ ಕಾರ್ಯ ವ್ಯವಸ್ಥೆ ಇಲ್ಲ ಎಂದರು. ಗ್ರಾಮಸಭೆಗಳು ಜನರ ಉತ್ಸವ ಗಳಾಗಬೇಕು. ಇಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಅಗತ್ಯ ಪ್ರಾಮ್ಯುಖತೆ ದೊರೆಯಬೇಕು. ಮಾನವ ಸಂಪನ್ಮೂಲಗಳ ಸದ್ಬಳಕೆ ಯಾಗಬೇಕು ಎಂದು ಅವರು ತಮ್ಮ ವಿಷಯ ಮಂಡನೆಯಲ್ಲಿ ತಿಳಿಸಿದರು. ಗ್ರಾಮಸಭೆಗಳಲ್ಲಿ ಸಾಮೂಹಿಕ ಚರ್ಚೆಗಳಾಗಬೇಕು. ವೇದಿಕೆಗಳಿರಬಾರದು. ಕಂದಾಯ ಗ್ರಾಮಕ್ಕೊಂದು ಗ್ರಾಮಸಭೆಗಳನ್ನು ಆಯೋಜಿಸಬೇಕು ಎಂದು ಸಲಹೆ ಮಾಡಿದರು..
ಕಾರ್ಯಾ ಗಾರದ ಸಭಾ ಕಾರ್ಯ ಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಸಂತೋಷ್ ಕುಮಾರ್ ಭಂಡಾರಿ ಅವರು, ಗ್ರಾಮ ಸಭೆಗೆ ಆದ್ಯತೆ ನೀಡಿ; ಗ್ರಾಮೀಣರ ಮೂಲಭೂತ ಸೌಕರ್ಯ ಗಳನ್ನು ಈಡೇರಿಸಿ, ಗ್ರಾಮ ಸಭೆಗಳು ಜನರಿಗೆ ಸವಲತ್ತು ದೊರಕುವ ಸಭೆ ಗಳಾಗಲಿ ಎಂದರು.ಜಿಲ್ಲಾ ಪಂಚಾಯತ್ ಸದಸ್ಯರಾದ ಎ ಸಿ ಭಂಡಾರಿ, ಉಪಕಾರ್ಯದರ್ಶಿ ಕೆ. ಶಿವರಾಮೇಗೌಡ, ಮುಖ್ಯ ಲೆಕ್ಕಾಧಿಕಾರಿ ಎ. ಎಸ್ ರಾಮದಾಸ್, ಯೋಜನಾ ನಿರ್ದೇಶಕರಾದ ಸೀತಮ್ಮ ವೇದಿಕೆಯಲ್ಲಿದ್ದರು. ಕ್ಷೇತ್ರ ಪ್ರಚಾರಾಧಿಕಾರಿ ಟಿ ಬಿ ನಂಜುಂಡಸ್ವಾಮಿ ಸ್ವಾಗತಿಸಿದರು. ಮುಖ್ಯ ಯೋಜನಾಧಿಕಾರಿ ಟಿ.ಜೆ ತಾಕತ್ ರಾವ್ ವಂದಿಸಿದರು.

ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಬನ್ನಿ:ನಕ್ಸಲರಿಗೆ ಐಜಿಪಿ ಅಲೋಕ್ ಮೋಹನ್ ಕರೆ

ಮಂಗಳೂರು,ಅ.04: ಶಸ್ತ್ರ ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಮತ್ತು ಸರ್ಕಾರದ ನಕ್ಸಲ್ ಪ್ಯಾಕೆಜನ್ನು ಬಳಸಿಕೊಂಡು ಉತ್ತಮ ನಾಗರಿಕರಾಗಿ ಎಂದು ಪಶ್ಚಿಮ ವಲಯ ಪೋಲಿಸ್ ಮಹಾನಿರೀಕ್ಷಕರಾದ ಅಲೋಕ್ ಮೋಹನ್ ಅವರು ನಕ್ಸಲರಿಗೆ ಕರೆ ನೀಡಿದ್ದಾರೆ.
ಮಂಗಳೂರಿ ನಲ್ಲಿನ ತಮ್ಮ ಕಚೇರಿ ಯಲ್ಲಿಂದು ಮಾದ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜದ ಮುಖ್ಯ ವಾಹಿನಿಗೆ ಬರಲು ಈ ಯೋಜನೆ ಒಂದು ಉತ್ತಮ ಅವಕಾಶ ಎಂದರು. ನಕ್ಸಲ್ ಚಟುವಟಿಕೆ ಗಳಲ್ಲಿ ತೊಡಗಿ ರುವವರನ್ನು Red Zone(ಪಟ್ಟಿ ಮಾಡಲಾಗಿರುವ ಭೂಗತ ಸದಸ್ಯರು),Grey Zone(ಪಟ್ಟಿ ಮಾಡಲಾಗದ ಭೂಗತ ಸದಸ್ಯರು) ಹಾಗೂ Green Zone (ನಕ್ಸಲ್ ಚಟುವಟಿಕೆಗಳಲ್ಲಿ ಸಮಾಜದಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳು) ಎಂಬ ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. 2010 ರ ಜೂನ್ 19 ರಂದು ಪ್ರಕಟಗೊಂಡಿರುವ ನಕ್ಸಲ್ ಶರಣಾಗತಿ ಪ್ಯಾಕೇಜ್ ಹಿನ್ನೆಲೆಯಲ್ಲಿ ಈಗಾಗಲೇ ಶೃಂಗೇರಿ ಪ್ರದೇಶದಲ್ಲಿ ನಕ್ಸಲರ ನಾಯಕನಾಗಿ ಗುರುತಿಸಲ್ಪಟ್ಟಿದ್ದ ವೆಂಕಟೇಶ್ ಎಂಬಾತ ಕೆಲ ದಿನಗಳ ಹಿಂದಷ್ಟೆ ಶೃಂಗೇರಿಯಲ್ಲಿ ಪೋಲಿಸರಿಗೆ ಶರಣಾಗತ ನಾಗಿರುವುದು ಸಂತಸದ ವಿಷಯ ಎಂದರು. ಪ್ರಸ್ತುತ ಶರಣಾಗತನಾಗಿರುವ ವೆಂಕಟೇಶ್ Red zone ನ ಗಂಪಿಗೆ ಸೇರಲ್ಪಟ್ಟಿದ್ದು, ಶರಣಾಗತಿ ಯಾಗಿರುವುದರಿಂದ ಈತನ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಭರವಸೆ ನೀಡಲಾಗಿದೆ ಎಂದು ಐಜಿಪಿ ತಿಳಿಸಿದರು.ಶರಣಾ ಗತನಾದ ನಕ್ಸಲ್ ವ್ಯಕ್ತಿಯ ಮೇಲಿನ ಪ್ರಕರಣಗಳನ್ನು ಎಷ್ಟು ಸಮಯ ದೊಳಗೆ ಹಿಂದಕ್ಕೆ ತೆಗೆಯ ಲಾಗುವುದು ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಐಜಿಪಿ ಅಲೋಕ್ ಮೋಹನ್, ಶರಣಾಗತಿ ಹೊಂದಿದ ನಕ್ಸಲ್ ವ್ಯಕ್ತಿಯ ಮೇಲಿನ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಸರಕಾರ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಿದೆ ಎಂದರು. ಮಾತ್ರವಲ್ಲದೆ, ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭ ಕೆಲವೊಂದು ಷರತ್ತುಗಳಿಗೆ ಕೂಡಾ ಆತ ಬದ್ದನಾಗಿರಬೇಕಾಗುತ್ತದೆ. ಜೊತೆಗೆ ಆತನಿಗೆ ಸರ್ಕಾರದ ರಕ್ಷಣೆಯನ್ನೂ ಖಾತರಿ ಪಡಿಸಲಾಗುತ್ತದೆ. ಶರಣಾಗತರಾಗುವ ನಕ್ಸಲರು ಸಾಲ ಸೌಲಭ್ಯ, ಭೂಮಿ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಈ ಪ್ಯಾಕೇಜ್ ನ ಅಡಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಅಯೋಧ್ಯೆ ವಿವಾದಿತ ಭೂಮಿಯ ಬಗ್ಗೆ ನ್ಯಾಯಾಲಯದ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಜಿಲ್ಲೆಯ ಜನತೆ ಶಾಂತಿಯನ್ನು ಕಾಯ್ದುಕೊಂಡದ್ದಕ್ಕೆ ಈ ಸಂದರ್ಭ ಸಂತಸ ವ್ಯಕ್ತಪಡಿಸಿದರು.

Saturday, October 2, 2010

ಮುಡಿಪು ಘನತ್ಯಾಜ್ಯ ಘಟಕ ರಾಜ್ಯಕ್ಕೆ ಮಾದರಿ: ಸಚಿವ ಪಾಲೆಮಾರ್

ಮಂಗಳೂರು,ಅಕ್ಟೋಬರ್ 2:ಜನರ ಕಳಕಳಿ ಪರಿಸರದತ್ತ ಹೊರಳಲಿ, ಪರಿಸರ ಮಾಲಿನ್ಯ ಸಮಸ್ಯೆ ಪರಿಹರಿಸಲು ಜನಜಾಗೃತಿಯೊಂದೇ ಪರಿಹಾರ ಎಂದು ಬಂದರು, ಪರಿಸರ,ಮುಜರಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಹೇಳಿದರು.

ಅವರಿಂದು ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪುವಿನಲ್ಲಿ ಕುರ್ನಾಡು ಗ್ರಾಮ ಪಂಚಾ ಯಿತಿ,ದ.ಕ.ಜಿ.ಪಂ, ಬಂಟ್ವಾಳ ತಾಲೂಕು ಪಂಚಾಯಿತಿ, ವರ್ತಕರ ಸಂಘ ಮುಡಿಪು, ಜನ ಶಿಕ್ಷಣ ಟ್ರಸ್ಟ್ ನ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸ ಲಾದ ಘನತ್ಯಾಜ್ಯ ವಿಲೇವಾರಿ ನಿರ್ವಹಣ ಘಟಕ ಉದ್ಘಾಟಿಸಿ ಮಾತನಾ ಡುತ್ತಿದ್ದರು.ಈಗಾಗಲೇ ಎಲ್ಲಾ ದೇವಾಲ ಯಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸ ಲಾಗಿದ್ದು, ಇದನ್ನು ಎಲ್ಲ ಧಾರ್ಮಿಕ ಕೇಂದ್ರ, ಉದ್ಯಾನ ಹಾಗೂ ಮೃಗಾಲ ಯಗಳಿಗೂ ವಿಸ್ತರಿಸ ಲಾಗುವುದು. ಪ್ಲಾಸ್ಟಿಕ್ ನಿಂದಾಗುವ ಅನಾಹುತ, ಸರಿಯಾದ ತ್ಯಾಜ್ಯ ವಿಲೇವಾರಿ ಯಿಲ್ಲದೆ ಅಂತರ್ ಜಲ ಹಾಳಾ ಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ ಸಚಿವರು, ಉತ್ತಮ, ಸದೃಢ ಭಾರತ ನಿರ್ಮಾಣಕ್ಕೆ ಪರಿಸರ ಕಾಪಿಡುವ ಅಗತ್ಯವನ್ನು ಪ್ರತಿ ಪಾದಿಸಿದರು.ರಾಜ್ಯದ 9 ಲಕ್ಷ ಮಕ್ಕಳು ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋ ಜನವನ್ನು ಪಡೆದಿದ್ದು, ಅ.19 ರಂದು ನಮ್ಮ ಜಿಲ್ಲೆಯಲ್ಲೂ ಮಕ್ಕಳ ಹೆತ್ತವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದರು.
ಇಂದು ಮುಡಿಪು ವಿನಲ್ಲಿ ಗಾಂಧೀ ಜಯಂತಿ ಯಂದು ಸ್ವಾಸ್ಥ್ಯ ಸಮಾಜಕ್ಕೆ ಪೂರಕ ಕೆಲಸಕ್ಕೆ ಮುನ್ನುಡಿ ಬರೆದಿದ್ದು, ಇಂತಹ ಕೆಲಸಗಳು ನಿರಂತ ರವಾಗಿ ನಡೆಯಲಿ; ಇದಕ್ಕೆ ಸರ್ಕಾರದ ವತಿಯಿಂದ ಸರ್ವ ಸಹಾಯ ನೀಡುವ ಘೋಷಣೆ ಯನ್ನು ಸಚಿವರು ಮಾಡಿದರು. ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಶಂಕು ಸ್ಥಾಪನೆ ಹಾಗೂ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಶಾಸಕ ಯು ಟಿ ಖಾದರ್ ಅವರು, ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರ ಸಹಕಾರ ವನ್ನು ಪ್ರಶಂಸಿ ಸಿದರು.ಗ್ರಾಮೀಣರಲ್ಲಿ ಸ್ವಚ್ಛತೆ ಪರಿಕಲ್ಪನೆ ನಿರಂತರ ವಾಗಿರಲಿ ಎಂದರು. ಭಾಗ್ಯಲಕ್ಸ್ಮಿ ಯೋಜನೆಯಡಿ ಮಕ್ಕಳ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಜಿ ಪಂ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರು ಉದ್ಘಾಟಿಸಿ ಮಾತನಾಡಿದರು.ಪ್ಲಾಸ್ಟಿಕ್ ಪರ್ವತವನ್ನು ಉಪಾದ್ಯಕ್ಷ ಜಗನ್ನಾಥ್ ಸಾಲಿಯಾನ್ ಅವರು ಉದ್ಘಾಟಿಸಿದರು. ಸಿಇಒ ಪಿ.ಶಿವಶಂಕರ್ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡ ದವರಿಗೆ ತೆಂಗಿನ ಗಿಡ ವಿ ತರಿಸಿ ಜಿಲ್ಲಾ ಪಂಚಾಯತ್ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿಗೆ ನೀಡಿರುವ ಆದ್ಯತೆ ಹಾಗೂ ಅದಕ್ಕೆ ಗ್ರಾಮೀಣರ ಸಹಕಾರದ ಅಗತ್ಯದ ಬಗ್ಗೆ ಗಮನ ಸೆಳೆದರು.ತಾಲೂಕು ಪಂಚಾಯತ್ ಉಪಾಧ್ಯಕ್ಷ ಚಂದ್ರಹಾಸ ಕರ್ಕೆರಾ ಅವರು ಸ್ವಚ್ಛತಾ ವೃಂದಾವನ ಉದ್ಘಾಟಿಸಿದರು.ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಸಂಜೀವ ನಾಯ್ಕ್ ಅವರು 8 ದಿನಗಳಲ್ಲಿ ಈ ವೃಂದಾವನವನ್ನು ನಿರ್ಮಿಸುವ ಕಾಯಕದಲ್ಲಿ ನಿರತರಾಗಿದ್ದರು.ಉದ್ಯೋಗ ಖಾತ್ರಿ ಯೋಜನೆ ಕೆಲಸಗಾರರಿಗೆ ಕೆಲಸದ ಆದೇಶ ಪತ್ರ ವಿತರಣೆ ಯನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಬಾಬು ಅವರು ನೀಡಿದರು.ಕುರ್ನಾಡು ಪಂಚಾಯತ್ ಅಧ್ಯಕ್ಷ ಸೂಫಿ ಕುಂಞ ಸ್ವಾಗತಿಸಿದರು.ವರ್ತಕರ ಸಂಘದ ಅಧ್ಯಕ್ಷ ರಮೇಶ್ ಶೇಣವ ,ತಾ.ಪಂ ಸದಸ್ಯರಾದ ಸೇಸಪ್ಪ ಟೈಲರ್, ಪ್ರವೀಣ್ ಆಳ್ವ, ಉಮ್ಮರ ಪಜೀರ್ ಉಪಸ್ಥಿತರಿದ್ದರು.