Thursday, March 31, 2011

ಮನಪಾ ಶೇ.15 ಆಸ್ತಿ ತೆರಿಗೆ ಏರಿಕೆ

ಮಂಗಳೂರು,ಮಾರ್ಚ್.31:ಮಂಗಳೂರು ಮಹಾನಗರ ಪಾಲಿಕೆ ನಗರ ಬೆಳವಣಿಗೆ ಹಾಗೂ ಅಭಿವೃದ್ಧಿ ದೃಷ್ಠಿಯಿಂದ ನಿಯಮಾನುಸಾರ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಿಸುವ ನಿಯಮದಂತೆ ಕನಿಷ್ಠ ಶೇಕಡಾ 15 ರಷ್ಟು ಆಸ್ತಿ ತೆರಿಗೆಯನ್ನು ಎಪ್ರಿಲ್ 1 ರಿಂದ ಜಾರಿಗೆ ಬರುವಂತೆ ಏರಿಸಲಾಗಿದೆಯೆಂದು ಮಂಗಳೂರು ಮಹಾನಗರಪಾಲಿಕೆ ಮಹಾ ಪೌರರಾದ ಪ್ರವೀಣ್ ರವರು ತಿಳಿಸಿದ್ದಾರೆ.

ಅವರು ಇಂದು ತಮ್ಮ ಪಾಲಿಕೆಯ ಕಚೇರಿ ಯಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾ ಡುತ್ತಾ ಈ ವಿಷಯ ತಿಳಿಸಿ ದರು.ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ 2008-09ನೇ ಸಾಲಿನಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಜಾರಿಗೊಳಸಲಾಗಿದ್ದು 31-3-2011 ಕ್ಕೆ ಮೂರು ವರ್ಷಗಳ ಅವಧಿಯು ಮುಗಿಯುವುದರಿಂದ ಆಸ್ತಿ ತೆರಿಗೆಯನ್ನು ಶೇ.15 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆಯೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ರಾಷ್ಟ್ರದಲ್ಲಿ ಮಂಗಳೂರು ಮಹಾನಗರಪಾಲಿಕೆ ಘನ ತ್ಯಾಜ್ಯ ವಿಲೇವಾರಿ ಮಾದರಿಯಾಗಿದ್ದು, ಒಂದು ಸಾವಿರ ಚದರಡಿಗಿಂತ ಕಡಿಮೆ ಇರುವ ಕಟ್ಟಡಗಳು ತಿಂಗಳಿಗೆ ರೂ.10 ,1000 ದಿಂದ 3000 ಚದರಡಿ ಇರುವ ಕಟ್ಟಡಗಳಿಗೆ ತಿಂಗಳಿಗೆ 30 ರೂ. ಮತ್ತು 3000 ಚದರಡಿಗಿಂತಲೂ ಹೆಚ್ಚಿಗೆ ಇರುವ ಕಟ್ಟಡಗಳು ತಿಂಗಳಿಗೆ 50 ರೂ.ನಂತೆ ಘನತ್ಯಾಜ್ಯ ವಿಲೇವಾರಿ ಸೆಸ್ನ್ನು ಪಾವತಿಸಬೇಕಾಗಿರುತ್ತದೆ. ವಾಣಿಜ್ಯ ಕಟ್ಟಡಗಳು 1000 ಚದರಡಿಯಿಂದ 5000 ಚದರಡಿ ವರೆಗೆ ವಿಸ್ತೀರ್ಣ ಹೊಂದಿರುವ ಕಟ್ಟಡಗಳು ತಿಂಗಳಿಗೆ 100 ರಂತೆ 5000 ಚದರಡಿಗಳಿಗೂ ಮೇಲ್ಪಟ್ಟ ಕಟ್ಟಡಗಳು ತಿಂಗಳಿಗೆ 200 ರೂ.ಗಳಂತೆ ಸೆಸ್ ಪಾವತಿಸಬೇಕಾಗಿದೆ. ಕೈಗಾರಿಕೆಗಳು 1000 ಚದರಡಿಗಿಂತ ಕಡಿಮೆ ಇದ್ದರೆ ತಿಂಗಳಿಗೆ 100 ರೂ.ಗಳಂತೆ 1000 ದಿಂದ 5000 ಚದರಡಿ ವರೆಗೂ ರೂ. 200 ರಂತೆ ಹಾಗೂ 5000 ಚದರಡಿಗೆ ಮೇಲ್ಪಟ್ಟ ಕೈಗಾರಿಕಾ ಸಂಕೀರ್ಣಗಳು ತಿಂಗಳಿಗೆ ರೂ.300 ರಂತೆ ಸೆಸ್ ನ್ನು ವಿಧಿಸಲಾಗುವುದು.
ಹೊಟೇಲು,ಕಲ್ಯಾಣಮಂಟಪ,ಆಸ್ಪತ್ರೆ ಮುಂತಾದವುಗಳು 10000 ಚದರಡಿಗಿಂತಲೂ ಹೆಚ್ಚಿದ್ದಲ್ಲಿ ತಿಂಗಳಿಗೆ ರೂ .300 ರಂತೆ, 10000 ದಿಂದ 50000 ಚದರಡಿ ವರೆಗೂ ತಿಂಗಳಿಗೆ ರೂ.500 ಹಾಗೂ 50000ಚದರಡಿಕ್ಕಿಂತ ಹೆಚ್ಚಿನ ಕಟ್ಟಡಗಳು ತಿಂಗಳಿಗೆ 1000 ರೂ.ಗಳ ಸೆಸ್ ನ್ನು ಭರಿಸಬೇಕಾಗುತ್ತದೆಯೆಂದು ಮಹಾನಗರಪಾಲಿಕೆ ಆಯುಕ್ತರಾದ ಡಾ. ವಿಜಯ ಪ್ರಕಾಶ ತಿಳಿಸಿರುತ್ತಾರೆ.
ಘನತ್ಯಾಜ್ಯ ವಿಲೇವಾರಿಗೆ ಮಂಗಳೂರು ಮಹಾನಗರಪಾಲಿಕೆಗೆ ವಾರ್ಷಿಕ 12 ಕೋಟಿ ರೂ.ಗಳ ವೆಚ್ಚ ಬರುತ್ತದೆ. ಆದರೆ ಸೆಸ್ ಮೂಲಕ ವಸೂಲಾಗಲಿರುವ ಮೊತ್ತ ರೂ.3 ರಿಂದ 3.5 ಕೋಟಿ ಮಾತ್ರ ಆಗಿದ್ದು, ಬಾಕಿ ಮೊತ್ತವನ್ನುಪಾಲಿಕೆಯ ಇತರೇ ಆದಾಯ ಮೂಲಗಳಿಂದ ಭರಿಸಲಾಗುವುದೆಂದು ಆಯುಕ್ತರು ತಿಳಿಸಿದರು.
ನಗರದ 24 ಉದ್ಯಾನವನಗಳಲ್ಲಿ ಈಗಾಗಲೇ 17 ಉದ್ಯಾನವನಗಳನ್ನು ವಿವಿಧ ಮೂಲಗಳಿಂದ ಹಾಗೂ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಿಂದ ಅಭಿವೃದ್ಧಿ ಪಡಿಸಲಾಗಿದ್ದು, ಉಳಿದವುಳನ್ನು ಸಹ ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದೆಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಪಾಲಿಕೆ ಉಪಮೇಯರ್ ಗೀತಾ ಎಂ.ನಾಯಕ್ ಮತ್ತು ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ಸರಕಾರಿ ಭೂಮಿ ಅತಿಕ್ರಮಣ:ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ

ಮಂಗಳೂರು,ಮಾರ್ಚ್.31: ಜಿಲ್ಲೆಯಾದ್ಯಂತ ಸರಕಾರಿ ಭೂಮಿಯ ಅತಿಕ್ರಮಣವನ್ನು
ತೆರವುಗೊಳಿಸುವ ಕಾರ್ಯ ನಡೆಸುತ್ತಿರುವ ಜಿಲ್ಲಾ ಡಳಿತ ಮಂಗ ಳೂರು ನಗರ ದಲ್ಲೂ ಅತಿ ಕ್ರಮಣ ಗಳನ್ನು ತೆರವು ಮಾಡುವ ಕಾರ್ಯಾ ಚರಣೆ ನಡೆಸಿತು.ನಗರದ ಸರ್ಕಿಟ್ ಹೌಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಕಳೆದ ಸುಮಾರು 20 ವರ್ಷ ಗಳಿಂದ ಸರಕಾರಿ ಭೂಮಿಯನ್ನು ಅತಿಕ್ರಮಿಸಿ ನಡೆಸ ಲಾಗುತ್ತಿದ್ದ ಪೆಟ್ರೋಲ್ ಪಂಪನ್ನು ಜಿಲ್ಲಾಡಳಿತ ತೆರವುಗೊಳಿಸಿತು. ತೆರವು ಕಾರ್ಯಾಚರಣೆಯಲ್ಲಿ ಮಂಗಳೂರು ಉಪ ವಿಭಾಗದ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ,ಪ್ರಭಾರ ತಹಶೀಲ್ದಾರ್ ರೋಹಿಣಿ ಸಿಂದೂರಿ ದಾಸರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು,ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧಿಕಾರಿಗಳು ಭಾಗವಹಿಸಿದ್ದರು.

Wednesday, March 30, 2011

ಬಂದರು ಹಾಗೂ ಒಳನಾಡು ಜಲಸಾರಿಗೆ,ಮೀನುಗಾರಿಕೆ ಇಲಾಖೆಗೆ ರೂ.325.15 ಲಕ್ಷ ಹೆಚ್ಚುವರಿ ಅನುದಾನ

ಮಂಗಳೂರು,ಮಾರ್ಚ್.30:ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ಹಾಗೂ ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರದ 2010-11 ನೇ ಸಾಲಿನಲ್ಲಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಗೆ 8 ಕಾಮಗಾರಿಗಳ ಅನುಷ್ಠಾನಕ್ಕಾಗಿ ರೂ.123.45 ಲಕ್ಷ ಹಾಗೂ ಮೀನುಗಾರಿಕಾ ಇಲಾಖೆಗೆ 14 ಕಾಮಗಾರಿಗಳಿಗೆ ರೂ.201.70ಲಕ್ಷ,ಹೆಚ್ಚುವರಿ ಅನುದಾನ ಒದಗಿಸಿದೆಯೆಂದು ರಾಜ್ಯದ ಜೀವಿಶಾಸ್ತ್ರ,ಪರಿಸರ,ಬಂದರು,ವಿಜ್ಞಾನ ಮತ್ತು ತಂತ್ರಜ್ಞಾನ,ಮೀನುಗಾರಿಕೆ ಹಾಗೂ ಜಲಸಾರಿಗೆ ಸಚಿವರಾದ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ತಿಳಿಸಿರುತ್ತಾರೆ.

ಮಂಗಳೂರು ತಣ್ಣೀರುಬಾವಿ ಬೆಂಗ್ರೆ ಮಹಾಜನ ಸಂಘದ ಬಳಿ ಹೊಸ ಪ್ರಯಾಣಿಕರ ಜೆಟ್ಟಿ ನಿರ್ಮಾಣಕ್ಕೆ ರೂ.19.50 ಲಕ್ಷ,ಮಂಗಳೂರು ತಾಲ್ಲೂಕು ಹಳೆ ಬಂದರು ಪ್ರದೇಶದ ದೇವಿ ಮರೈನ್ ಬಳಿ ಮೀನುಗಾರ ಮಹಿಳೆಯರ ಅನುಕೂಲಕ್ಕಾಗಿ ಕಾರ್ಗೋ, ಪ್ರಯಾಣಿಕರ ಜೆಟ್ಟಿ ನಿರ್ಮಾಣ ಹಾಗೂ ಬದಿ ಕಟ್ಟುವಿಕೆಗೆ ರೂ.15 ಲಕ್ಷ, ಮಂಗಳೂರು ತಾಲೂಕು ಬೊಳಿಯಾರು ಗ್ರಾಮದ ಜಳಕದಕಟ್ಟಿ ಎಂಬಲ್ಲಿ ಪ್ರಯಾಣಿಕರ ಜೆಟ್ಟಿ ನಿರ್ಮಾಣಕ್ಕೆ ರೂ.19.75 ಲಕ್ಷ , ಬಂದರು ವೃತ್ತದ ಕಾಂಕ್ರೀಟೀಕರಣಕ್ಕಾಗಿ ರೂ.15.00 ಲಕ್ಷ,ಹಳೇಬಂದರು ಪ್ರದೇಶದ ಬಿಎಂಡಿ ಫೇರಿ ಬದಿ ಕಟ್ಟುವುದು ಹಾಗೂ ತಂಗುದಾಣ ಅಭಿವೃದ್ಧಿ ಕಾಮಗಾರಿಗೆ ರೂ.10ಲಕ್ಷ,ಪಾಲಿಕೆ ವ್ಯಾಪ್ತಿಯ ನಾಯರ್ ಕೆರೆ ಎಂಬಲ್ಲಿ ಸಣ್ಣ ಧೋಣಿಗಳ ನಾವೆಯ ಸೌಕರ್ಯಕ್ಕಾಗಿ ಒಂದು ಸಣ್ಣ ಸೇತುವೆ ನಿರ್ಮಾಣ ಕಾಮಗಾರಿಗೆ 15.00 ಲಕ್ಷ,ತಣ್ಣೀ ರುಬಾವಿ ಬೆಂಗ್ರೆ ಕೋರ್ದಬ್ಬು ದೈವಸ್ಥಾನ ಬಳಿ ಪ್ರಯಾಣಿಕರ ಜೆಟ್ಟಿ ನಿರ್ಮಾಣಕ್ಕೆ 19.20 ಲಕ್ಷ ಹಾಗೂ ಪಾಲಿಕೆ ವ್ಯಾಪ್ತಿಯ ಸುಲ್ತಾನ್ ಬತ್ತೇರಿ ಪ್ರಯಾಣಿಕರ ಜೆಟ್ಟಿಯ ಪೋರ್ಟ್ ಬಳಿ ಬದಿ ನಿರ್ಮಾಣಕ್ಕೆ 10 ಲಕ್ಷ ಸೇರಿ ಒಟ್ಟು 123.45 ಲಕ್ಷ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಗೆ ಹೆಚ್ಚುವರಿ ಅನುದಾನ ನೀಡಲಾಗಿದೆ.
ಮೀನುಗಾರಿಕಾ ಇಲಾಖೆಗೆ ಬಿಡುಗಡೆ ಮಾಡಲಾದ ಹೆಚ್ಚುವರಿ ಅನುದಾನದಿಂದ ಮಂಗಳೂರು ತಾಲೂಕು ಬೈಕಂಪಾಡಿ ಮೀನಕಳಿಯ ಮುಖ್ಯ ರಸ್ತೆ ಕಾಂಕ್ರೀಟೀಕರಣಕ್ಕಾಗಿ 19.50ಲಕ್ಷ ಪಣಂಬೂರು ಮೀನಕಳಿಯ ಕೂರಿಕಟ್ಟೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ರೂ.18.50 ಲಕ್ಷ ತಣ್ಣೀರುಬಾವಿ ಬೇಂಗ್ರೆ ರಸ್ತೆ ಕಾಂಕ್ರೀಟೀಕರಣಕ್ಕಾಗಿ (ತೀರಾ ಹಾಳಾದ ಭಾಗ)ರೂ.19.ಲಕ್ಷ,ತಣ್ಣೀರುಬಾವಿ ತೋಟ ಬೇಂಗ್ರೆ ಮುಖ್ಯ ರಸ್ತೆ ಆಯ್ದ ಭಾಗಗಳಿಗೆ ಪುನರಪಿ ಡಾಂಬರೀಕರಣಕ್ಕೆ ರೂ.18.50 ಲಕ್ಷ ,ತಣ್ಣೀರುಬಾವಿ ಕಸಬಾ ಬೇಂಗ್ರೆ ಮುಖ್ಯ ರಸ್ತೆ ಪುನರಪಿ ಡಾಂಬರೀಕರಣ ಸಲುವಾಗಿ ರೂ.19 ಲಕ್ಷ,ಪಾಲಿಕೆ ವ್ಯಾಪ್ತಿ ಕುಳಾಯಿ ಹೊಸಬೆಟ್ಟು,ಸಮುದ್ರ ಕಿನಾರೆ ರಸ್ತೆಯ ಸದಾಶಿವ ನಗರದಿಂದ ಲೈಟ್ ಹೌಸ್ ಹಿಲ್ಸ್ ರಾಷ್ಟ್ರೀಯ ಹೆದ್ದಾರಿವರೆಗೆ ಪುನರಪಿ ಡಾಂಬರೀಕರಣಕ್ಕಾಗಿ ರೂ.19.80ಲಕ್ಷ, ಮಹಾನಗರಪಾಲಿಕೆ ವ್ಯಾಪ್ತಿಯ ತಣ್ಣಿರುಬಾವಿ ಬೆಂಗ್ರೆ ನಾಯರ್ ಕೆರೆ ರಸ್ತೆ ಅಭಿವೃದ್ಧಿ 10.00 ಲಕ್ಷ,ಮೀನಕಳಿಯ ಕೂರಿಕಟ್ಟ ರಸ್ತೆ 10.00 ಲಕ್ಷ,ಹಳೆಯಂಗಡಿ ವ್ಯಾಪ್ತಿಯ ಹಳೆ ಬಸ್ ನಿಲ್ದಾಣದಿಂದ ಪಾವಂಜೆ ವಾಸುಹಿತ್ಲು ವರೆಗೆ ರಸ್ತೆ ದುರಸ್ತಿ 8.00ಲಕ್ಷ, ಪಾವಂಜೆ ಸೇತುವೆ ಬಳಿಯಿಂದ ಅರಂಭವಾಗಿ ಸಸಿಹಿತ್ಲು ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ, ಮೂಲ್ಕಿ ಮಾನಂಪಾಡಿ ಕಿಲ್ಪಾಡಿ ರಸ್ತೆ ಪುನರಪಿ ಡಾಂಬರೀಕರಣ 19.60 ಲಕ್ಷ,ಉಳ್ಳಾಲ ನಗರ ಪಂಚಾಯತ್ ಕೋಟೆಪುರ ಅಳೆವೆ ಬಾಗಿಲು ಮೀನುಗಾರಿಕಾ ರಸ್ತೆ ಕಾಂಕ್ರೀಟೀಕರಣ 19.80 ಲಕ್ಷ, ಹಳೆಯಂಗಡಿ ವ್ಯಾಪ್ತಿಯ ಕೂಳುವೈಲು ರಸ್ತೆ ಕಾಂಕ್ರೀಟೀಕರಣ 10.00ಲಕ್ಷ ರೂ.ಗಳ ಅನುದಾನ ಸೇರಿ ಒಟ್ಟು 201.70ಲಕ್ಷ ಹೆಚ್ಚುವರಿ ಅನುದಾನವನ್ನು ಒದಗಿಸಲಾಗಿದೆ.

ಕಂದಾಯ ಅಧಿಕಾರಿಗಳ ಸಭೆ,49 ಎಕರೆ ಸರಕಾರಿ ಜಮೀನು ಒತ್ತುವರಿ ತೆರವು: ಸುಬೋಧ್

ಮಂಗಳೂರು,ಮಾರ್ಚ್.30:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒತ್ತುವರಿಗೆ ಒಳಗಾಗಿರುವ 1,203 ಎಕರೆ ಸರಕಾರಿ ಜಮೀನಿನ ಪೈಕಿ 49 ಎಕರೆಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಪರಿಣಾಮ 34 ಪ್ರಕರಣಗಳನ್ನು ಇತ್ಯರ್ಥಪಡಿಸಿದಂತಾಗಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದ್ದಾರೆ.

ಅವರು ಇಂದು ಬುಧವಾರ ತಮ್ಮ ಕಚೇರಿಯಲ್ಲಿ ಸರಕಾರಿ ಜಮೀನು ಒತ್ತುವರಿ ಕುರಿತು ಚರ್ಚಿಸಲು ಕಂದಾಯ ಅಕಾರಿಗಳ ಸಭೆ ನಡೆಸಿದರು.
ಸಭೆಗೆ ಮಾಹಿತಿ ನೀಡಿದ ಜಿಲ್ಲಾಕಾರಿ, ಜಿಲ್ಲೆಯಲ್ಲಿ 245 ಪ್ರಕರಣಗಳಲ್ಲಿ 1,203 ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದೆ. ಇದರಲ್ಲಿ 176 ಪ್ರಕರಣಗಳ 892 ಎಕರೆ ಜಮೀನಿಗೆ ಸಂಬಂಸಿ ತಹಶೀಲ್ದಾರರು ಈಗಾಗಲೇ ನೋಟೀಸು ಜಾರಿಗೊಳಿಸಿರುವರು ಎಂದರು.
ಸರಕಾರಿ ಜಮೀನು ಒತ್ತುವರಿ ಮಾಡಿರುವವರನ್ನು ಅವರೋಹಣ ಯಾದಿಯಲ್ಲಿ ಪಟ್ಟಿ ಮಾಡಿ ಕ್ರಮ ಜರುಗಿಸಬೇಕು. ಶ್ರೀಮಂತರು ಅತಿಕ್ರಮಿಸಿಕೊಂಡಿರುವ ಜಮೀನನ್ನು ಮೊದಲು ತೆರವುಗೊಳಿಸಬೇಕು. ಬಳಿಕ ಬಡವರಿಗೆ ಅನ್ಯಾಯವಾಗದ ರೀತಿಯಲ್ಲಿ ಮಿಕ್ಕ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಸುಬೋಧ್ ಯಾದವ್ ಅಕಾರಿಗಳಿಗೆ ಸೂಚಿಸಿದರು.ತಹಶೀಲ್ದಾರರು ಕೇವಲ ನೋಟೀಸ್ ಜಾರಿ ಮಾಡಿ ಸುಮ್ಮನಿದ್ದರೆ ಸಾಲದು. ಅವರು ಒತ್ತುವರಿ ಜಮೀನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಕಾರಿಗಳು ನಿರ್ದೇಶನ ನೀಡಿದರು.
ಕಠಿಣ ಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ಇಂತಹ 5 ಒತ್ತುವರಿ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಿರುವುದನ್ನು ಜಿಲ್ಲಾಕಾರಿಗಳು ಸಭೆಯ ಗಮನಕ್ಕೆ ತಂದರು.
ಕೆರೆ ಒತ್ತುವರಿ ತೆರವು:
ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳ 12 ಕೆರೆಗಳ ಒತ್ತುವರಿ ತೆರವು ಗೊಳಿಸಲಾಗಿದೆ ಎಂದು ಜಿಲ್ಲಾಕಾರಿಗಳು ಈ ಸಂದರ್ಭ ತಿಳಿಸಿದರು. ಸರಕಾರಿ ಶಾಲಾ ಜಮೀನು ಒತ್ತುವರಿ ಪ್ರಕರಣಗಳಲ್ಲಿ ಶಿಕ್ಷಣಾಧಿಕಾರಿಗಳು ತಹಶೀಲ್ದಾರರೊಂದಿಗೆ ಚರ್ಚಿಸಿ ಜಮೀನಿನ ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಸುಬೋಧ್ ಯಾದವ್ ಸೂಚಿಸಿದರು.
ಸರಕಾರಿ ಜಮೀನು ಒತ್ತುವರಿಯನ್ನು ತೆರವು ಮಾಡುವುದರಿಂದ ಜನತೆಗೆ ಅನುಕೂಲವಾಗಲಿದೆ. ಈ ದಿಸೆಯಲ್ಲಿ ಸಾರ್ವಜನಿಕರು ಕಂದಾಯ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ವಿನಂತಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಕಾರಿ ಪ್ರಭಾಕರ ಶರ್ಮಾ, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಡಾ. ಹರೀಶ್ ಕುಮಾರ್ ಮತ್ತು ತಹಶೀಲ್ದಾರರು ಉಪಸ್ಥಿತರಿದ್ದರು.

Tuesday, March 29, 2011

ಜಿಲ್ಲಾಧಿಕಾರಿ ನಿರ್ಧಾರ;ಪರಿಶಿಷ್ಟರ ಜಮೀನು ಒತ್ತುವರಿ, ಪರಾಭಾರೆ ತಡೆಗೆ ಕಠಿಣ ಕ್ರಮ

ಮಂಗಳೂರು,ಮಾರ್ಚ್.29:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಂಜೂರಾದ ಜಮೀನನ್ನು 15 ವರ್ಷ ಕಡ್ಡಾಯವಾಗಿ ಪರಭಾರೆ ಮಾಡಬಾರದು ಎಂಬ ಕಾನೂನು ಇದೆ. ಆದರೂ ಹಲವು ಕಾರಣಗಳಿಂದ ಇಂತಹ ಜಮೀನು ಪರಾಭಾರೆ ಮತ್ತು ಒತ್ತುವರಿಯಾಗಿರುವುದು ಕಂಡು ಬಂದಿದೆ. ಇಂತಹ ಜಮೀನನ್ನು ಪತ್ತೆ ಹಚ್ಚಿ ಮೂಲ ಹಕ್ಕುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಕಂದಾಯ ಇಲಾಖೆ ಕೈಗೆತ್ತಿಕೊಂಡಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತಿಳಿಸಿದರು.

ಮೂಲ ಹಕ್ಕುದಾರರಿಗೆ ಜಮೀನನ್ನು ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಿಂದ ಹಲವು ಆದೇಶಗಳಾಗಿವೆ. ಆದರೂ ಆದೇಶಗಳು ತಳ ಹಂತದಲ್ಲಿ ಕಾರ್ಯಗತಗೊಳ್ಳದೆ ಮೂಲ ಫಲಾನುಭವಿಗಳಿಗೆ ತೊಂದರೆಯಾಗಿತ್ತು.
ತಳಮಟ್ಟದಲ್ಲಿ ಆಗಿರುವ ವೈಫಲ್ಯವನ್ನು ಮನಗಂಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಡಿ.ಸಿ.ಮನ್ನಾ ಜಮೀನು ಹಾಗೂ ಭೂ ಪರಾಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್ ಆಕ್ಟ್ )ಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಅಧೀನ ಅಧಿಕಾರಿಗಳಿಗೆ ನಿರ್ದೇಶನ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ನಿರ್ದೇಶದನ್ವಯ ಮಂಗಳೂರು ಸಹಾಯಕ ಆಯುಕ್ತರು ವಿಟ್ಲದಲ್ಲಿ ಇಂತಹ ಆರು ಪ್ರಕರಣಗಳ ಬಗ್ಗೆ ಗಮನಹರಿಸಿ ಮೂಲ ಹಕ್ಕುದಾರರಿಗೆ ಜಮೀನನ್ನು ಹಸ್ತಾಂತರಿಸಿದ್ದಾರೆ. ಪಿಟಿಸಿಎಲ್ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ವಿಶೇಷ ಕ್ರಮಗಳನ್ನು ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿಯೇ ಮೀಸಲಾಗಿರುವ ಜಮೀನು ವಿವಿಧ ಕಾರಣಗಳಿಗಾಗಿ ಹಲವರಿಂದ ಒತ್ತುವರಿಯಾಗಿರುವುದು, ಕಂದಾಯ ಇಲಾಖೆಯಿಂದ ಮಂಜೂರಾಗಿರುವುದು ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಿರುವುದು ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿದೆ.ಜಿಲ್ಲೆಯಲ್ಲಿ ಈ ಉದ್ದೇಶಕ್ಕಾಗಿ ಒಟ್ಟು 7,600 ಎಕರೆ ಭೂಮಿ ಮೀಸಲಾಗಿದ್ದು, 5,800 ಎಕರೆ ವಿವಿಧ ಫಲಾನುಭವಿಗಳಿಗೆ ಮಂಜೂರಾಗಿದೆ. ಮೀಸಲಾಗಿರುವ ಮಿಕ್ಕುಳಿದ 1,800 ಎಕರೆ ಜಮೀನಿನಲ್ಲಿ ಬಹುಭಾಗ ಅತಿಕ್ರಮಣಕ್ಕೆ ಒಳಗಾಗಿದ್ದು, ಶೀಘ್ರದಲ್ಲಿಯೇ ಅವುಗಳನ್ನು ತೆರವುಗೊಳಿಸಲಾಗುವದು. ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿರುವ ಜಮೀನನ್ನು ತೆರವು ಪ್ರಕ್ರಿಯೆಯಿಂದ ಹೊರಗಿಡಲಾಗುವುದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಟಿಸಿಎಲ್ ಕಾಯ್ದೆಯ ಜಾರಿ, ಡಿ.ಸಿ.ಮನ್ನಾ ಜಮೀನಿನ ಪುನರ್ಪರಿಶೀಲನೆ ಮತ್ತು ಮೂಲ ಹಕ್ಕುದಾರರಿಗೆ ಜಮೀನು ಹಸ್ತಾಂತರಿಸುವ ಕಾರ್ಯಕ್ರಮವನ್ನು ಬಹಳ ವರ್ಷಗಳ ನಂತರ ದ.ಕ.ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ನ್ಯಾಯಾಲಯ: 4 ತಿಂಗಳಲ್ಲಿ 80 ಪ್ರಕರಣ ಇತ್ಯರ್ಥ

ಮಂಗಳೂರು, ಮಾರ್ಚ್.29:ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ದಾಖಲಾಗುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಕಾಲಮಿತಿ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ.

ಸುಬೋಧ್ ಯಾದವ್ ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಾಲ್ಕು ತಿಂಗಳುಗಳಲ್ಲಿ 80 ಪ್ರಕರಣಗಳನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಿದ್ದಾರೆ. ಸರಾಸರಿ ತಿಂಗಳಿಗೆ 20 ಪ್ರಕರಣಗಳಂತೆ ಇತ್ಯರ್ಥಪಡಿಸಲಾಗಿದೆ. ಸುಬೋಧ್ ಯಾದವ್ ಅಧಿಕಾರ ವಹಿಸಿಕೊಂಡಾಗ 230 ಪ್ರಕರಣಗಳು ಆದೇಶಕ್ಕಾಗಿ ಕಾಯುತ್ತಿದ್ದವು. ಇದರಲ್ಲಿ 2006ರ ಪ್ರಕರಣಗಳೂ ತೀರ್ಪಿಗಾಗಿ ಬಾಕಿ ಇದ್ದವು. ಅಧಿಕಾರ ವಹಿಸಿಕೊಂಡ ಮೊದಲ ತಿಂಗಳಲ್ಲಿ ಚುನಾವಣೆ ಕಾರಣ ಕೋರ್ಟ್ ಕಲಾಪ ನಡೆಸಲಾಗಿಲ್ಲ. ಮುಂದಿನ ಮೂರು ತಿಂಗಳಲ್ಲಿ 230ರಲ್ಲಿ 50 ಪ್ರಕರಣಗಳನ್ನು ವಿಚಾರಣೆಗೊಳಪಡಿಸಿ ಅಂತಿಮ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸೇರ್ಪಡೆಯಾದ 45 ಹೊಸ ಪ್ರಕರಣಗಳಲ್ಲಿ 25 ಪ್ರಕರಣಗಳನ್ನು ವಿಚಾರಣೆಗೊಳಪಡಿಸಿ ಇತ್ಯರ್ಥ ಪಡಿಸಲಾಗಿದೆ. ಮುಂದೆ ವಿಚಾರಣೆ ಮತ್ತು ಆದೇಶಗಳಲ್ಲಿ ವಿಳಂಬವಾಗದಿರಲು ಸೂಕ್ತ ವ್ಯವಸ್ಥೆ ರೂಪಿಸಲಾಗಿದೆ.
2010-11ರಿಂದ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಕಾಲಮಿತಿ ನಿಗದಿಪಡಿಸಿ ಇತ್ಯರ್ಥ ಪಡಿಸಲು ನಿರ್ಧರಿಸಲಾಗಿದೆ. ಎಲ್ಲಾ ಪ್ರಕರಣಗಳ ಮಾಹಿತಿಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಆದೇಶದಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಸಮಗ್ರ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಜಿಲ್ಲಾಧಿಕಾರಿ ನ್ಯಾಯಾಲಯದ ಮೇಲೆ ಜನತೆಯ ವಿಶ್ವಾಸ ಹೆಚ್ಚಾಗಲಿದೆ ಎಂದು ಸುಬೋಧ್ ಯಾದವ್ ತಿಳಿಸಿದ್ದಾರೆ.

ಜೆಪ್ಪು ಮತ್ತು ಅಳಕೆಯಲ್ಲಿ ಮೀನು ಮಾರುಕಟ್ಟೆಗೆ ಶಿಲಾನ್ಯಾಸ

ಮಂಗಳೂರು,ಮಾ.29:ಮೀನು ಮಾರಾಟಗಾರರ ಅನುಕೂಲಕ್ಕೆ ಜೆಪ್ಪು ಮಾರ್ಕೆಟ್ ನಲ್ಲಿ 92.50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಮೀನು ಗಾರಿಕಾ ಅಭಿವೃದ್ದಿ ನಿಗಮದ ಪಾಲು 83.25 ಲಕ್ಷ ರೂ. 1048.49 ಚ. ಮೀ ಕಟ್ಟಡ ನೆಲ ಮತ್ತು ಮೊದಲ ಮಹಡಿ ಯನ್ನು ಹೊಂದಿದೆ. 32 ಅಂಗಡಿ ಗಳಿರುತ್ತವೆ.
ಅಳಕೆ ಮಾರ್ಕೆಟ್ 361.73ಚ.ಮೀಟರ್ ಯೋಜನಾ ವೆಚ್ಚ ರೂ. 58.5 ಲಕ್ಷ. ಎರಡು ಮಹಡಿ ಗಳು. 48ಕೊಠಡಿ ಗಳು. 6 ತಿಂಗ ಳಲ್ಲಿ ನಿರ್ಮಾಣ ಕಾಮಗಾರಿ ಮುಗಿಸ ಬೇಕಿದೆ. ಶಂಕು ಸ್ಥಾಪನೆ ಕಾರ್ಯ ಕ್ರಮದ ಬಳಿಕ ಮಾತ ನಾಡಿದ ಜಿಲ್ಲಾ ಉಸ್ತು ವಾರಿ ಸಚಿ ವರು, ಸ್ಟೇಟ್ ಬ್ಯಾಂಕ್ ಬಳಿ ಇರುವ ಮೀನು ಮಾರ್ಕೆಟ್ ನ್ನು ಕೇಂದ್ರ ಮಾರು ಕಟ್ಟೆಗೆ ಸ್ಥ ಳಾಂತ ರಿಸಲಾ ಗುವುದು. ಸ್ಟೇಟ್ ಬ್ಯಾಂಕ್ ನಲ್ಲಿ ಉದ್ಯಾನವನ ಹಾಗೂ ಆಟದ ಮೈದಾನ ನಿರ್ಮಿಸಲಾಗುವುದು ಎಂದರು. ಸಮಾರಂಭದಲ್ಲಿ ವಿಧಾನಸಭೆಯ ಉಪಸಭಾಪತಿ ಎನ್ ಯೋಗೀಶ್ ಭಟ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ಎಸ್. ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಸುರೇಶ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

Sunday, March 27, 2011

ಸ್ವಚ್ಛ-ಸುಂದರ ನಗರ: ಜಿಲ್ಲಾಡಳಿತದಿಂದ ಶ್ರಮದಾನ

ಮಂಗಳೂರು,ಮಾರ್ಚ್.27.ಮಂಗಳೂರನ್ನು ಸ್ವಚ್ಛ, ಹಸಿರು ಹಾಗೂ ಪ್ರಗತಿ ಪರ

ನಗರ ವನ್ನಾಗಿ ಮಾಡುವ ಸಲುವಾಗಿ ಆರಂಭ ವಾದ ಸಾಮೂ ಹಿಕ ಶ್ರಮ ದಾನದ ಕಾ ರ್ಯಕ್ಕೆ ಮಂಗ ಳೂರು ನಗರ ಪೋಲಿಸ್ ಆಯುಕ್ತ ರಾದ ಸೀ ಮಂತ್ ಕುಮಾರ್ ಸಿಂಗ್ ಇಂದು ನಗರದ ನೆಹರು ಮೈದಾನಿ ನಲ್ಲಿ ಚಾಲನೆ ನೀಡಿ ದರು.ಜಿಲ್ಲಾ ಡಳಿತ ಮತ್ತು ನಗರ ಪಾಲಿಕೆ ವಿವಿಧ ಸರ್ಕಾರಿ ಇಲಾಖೆ ಗಳು, ಸಾರ್ವ ಜನಿಕ ಸಂಘ ಸಂಸ್ಥೆ ಗಳು ಮತ್ತು ಶಿಕ್ಷಣ ಸಂಸ್ಥೆ ಗಳ ಆಶ್ರಯ ದಲ್ಲಿ ನಗರ ದ 15 ಸ್ಥಳ ಗಳಲ್ಲಿ ಈ ಸ್ವಚ್ಚತೆಯ ಅಭಿಯಾ ನವನ್ನು ಹಮ್ಮಿ ಕೊಂಡಿದೆ.ಜಿಲ್ಲಾಧಿ ಕಾರಿ ಸುಬೋಧ್ ಯಾದವ್,ಜಿಲ್ಲಾ ಪಂಚಾ ಯತ್ ಸಿಇಓ ಶಿವ ಶಂಕರ್,ಜಿಲ್ಲಾ ಪೋಲಿಸ್ ವರಿಷ್ಷಾಧಿಕಾರಿ ಡಾ.ಸುಬ್ರಹ್ಮಣ್ಯೇಶ್ವರ ರಾವ್,ಪಾಲಿಕೆ ಆಯುಕ್ತರಾದ ಡಾ.ಕೆ.ಎನ್ ವಿಜಯ ಪ್ರಕಾಶ್,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ನಿದರ್ಶ ಹೆಗ್ಡೆ ಮತ್ತಿತರ ಗಣ್ಯರು ಈ ಸ್ಚಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Saturday, March 26, 2011

ಅಪಾಯದಂಚಿನಲ್ಲಿರುವ ಜಲಚರಗಳು ವನ್ಯಸಂರಕ್ಷಣಾ ಕಾಯ್ದೆಯಡಿ: ಚಿಕ್ಕೆರೂರ್

ಮಂಗಳೂರು,ಮಾರ್ಚ್. 26: ಪ್ರಕೃತಿಯಲ್ಲಿ ಹುಲಿಗಿರುವಷ್ಟೆ ಆದ್ಯತೆ ಡಾಲ್ಫಿನ್ ಗಳಿಗಿದೆ. ಪ್ರಾಕೃತಿಕ ಸಮತೋಲನ ಕಾಪಾಡುವುದು ವಿವೇಚನೆಯುಳ್ಳ ಮಾನವನ ಕರ್ತವ್ಯ. ಭಾರತ ದೇಶದಲ್ಲಿ ಅಪಾಯದಂಚಿನಲ್ಲಿರುವ ರಾಷ್ಟ್ರ ಪ್ರಾಣಿ ಹುಲಿಗೆ ನೀಡಿರುವ ರಕ್ಷಣೆಯನ್ನೇ ಅಪಾಯದಂಚಿನಲ್ಲಿರುವ ಸಮುದ್ರ ಜೀವಿಗಳು 1972ರ ವನ್ಯಜೀವಿ ಸಂರಕ್ಷಣಾ ಕಾನೂನು ನೀಡಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ ಎಸ್ ಎನ್ ಚಿಕ್ಕೆರೂರ್ ಹೇಳಿದರು.

ಅವರಿಂದು ಮಂಗಳೂರಿನ ಪಣಂಬೂರಿ ನಲ್ಲಿ ಪೊಲೀಸ್ ವರಿಷ್ಠಾಧಿ ಕಾರಿಗಳು ಹಾಗೂ ಮೀನುಗಾರರ ಮುಖಂಡರು, ಮೀನುಗಾರಿಕಾ ಇಲಾಖಾ ಧಿಕಾರಿ ಗಳಿಗೆ ವನ್ಯ ಜೀವಿ ಸಂರಕ್ಷಣಾ ಕಾನೂನಿನಡಿ ಅಪಾಯ ದಂಚಿನ ಲ್ಲಿರುವ ಜಲಚರಗಳ ಸೇರ್ಪಡೆಯ ಕುರಿತು ನೀಡಿದ ಮಾಹಿತಿ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡು ತ್ತಿದ್ದರು. ಮೀನು, ಸರೀಸೃಪಗಳು, ಪಕ್ಷಿ, ಹವಳ ಕೂಡ ಹುಲಿಯಷ್ಟೇ ಸಂರಕ್ಷಣೆಯನ್ನು ಪ್ರತಿಪಾದಿಸುವ ಜೀವಿಗಳಾಗಿವೆ.ಉತ್ತರ ಕನ್ನಡದ ನೇತ್ರಾಣಿ ಗುಡ್ಡೆಯ ಸುತ್ತಮುತ್ತ ಅತ್ಯಪರೂಪದ ಜಲಚರಗಳಿವೆ; ಇವುಗಳ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದರು. ಕಡಲಹಂದಿ, ಡಾಲ್ಫಿನ್, ತಿಮಿಂಗಲ, ಶಾರ್ಕ್, ಕೊಳ್ಜೆ,ಕುರುಡಿ,ತಾಟೆ,ತೊರಕೆ,ಕುದುರೆಮೀನು,ಕಡಲಾಮೆಗಳ ಸಂತತಿ ಅಳಿವಿನಂಚಿನಲ್ಲಿದೆ. ಮೀನುಗಾರರು ಜಾಗೃತರಾದರೆ ಜಲಚರಗಳ ಸಂರಕ್ಷಣೆ ಸಾಧ್ಯ ಎಂದರು. ಹುಲಿ ಸಂರಕ್ಷಣೆಗೆ ಯುನೆಸ್ಕೊ 900 ಕೋಟಿ ರೂ.ಗಳನ್ನು ನೀಡಿದ್ದು 13,000ದಿಂದ ಹುಲಿಗಳು ಇಂದು 3,450ಕ್ಕಿಳಿದಿದೆ. ಚೀತಾ ಇಂದು ನಮ್ಮ ಕಾಡುಗಳಲ್ಲಿ ಇಲ್ಲವೇ ಇಲ್ಲ; ಮೈಸೂರು ಮೃಗಾಲಯದಲ್ಲಿ 2 ಚೀತಾಗಳನ್ನು ಬೇರೆಡೆಯಿಂದ ತಂದು ಸಂತತಿ ಅಭಿವೃದ್ಧಿಗೆ ಯತ್ನಿಸಲಾಗುತ್ತಿದೆ ಎಂದು ಎಸ್.ಪಿ. ಅರಣ್ಯ ಇಲಾಖೆ ಅನ್ವೇಕರ್ ಅವರು ತಿಳಿಸಿದರು. ಬಳಿಕ ಮೀನುಗಾರರು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

Friday, March 25, 2011

ಎ.05 ಬಾಬು ಜಗಜೀವನರಾಂ & ಎ.14 ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ

ಮಂಗಳೂರು,ಮಾರ್ಚ್.25:2011 ನೇ ಸಾಲಿನಲ್ಲಿ ಎಪ್ರಿಲ್ 5 ರಂದು ಬಾಬು ಜಗಜೀವನ ರಾಂ ರವರ 104ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ,
ಎಪ್ರಿಲ್ 14 ರಂದು ಡಾ,ಬಿ.ಆರ್.ಅಂಬೇಡ್ಕರ್ ಅವರ 120 ನೇ ಜನ್ಮ ದಿನಾಚರಣೆಯನ್ನು ನಗರದ ಪುರಭವನದಲ್ಲಿ ಏರ್ಪಡಿಸುವಂತೆ ನಿರ್ಧರಿಸಲಾಯಿತು.
ಇಂದು ದಿನಾಂಕ (25-3-11) ರಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾರವರ ಅಧ್ಯಕ್ಷತೆಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ ಮತ್ತು ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆ ಕುರಿತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಡಾ.ಬಿ.ಆರ್ ಅಂಬೇಡ್ಕರ್ ದಿನಾಚರಣೆಯ ಸಂದರ್ಭದಲ್ಲಿ,ಸರಕಾರದ ವಿವಿಧ ಇಲಾಖೆಗಳಿಂದ ಕೊಡಲ್ಪಡುವ ಕೆಲವೊಂದು ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲು, ಇಲಾಖಾಧಿಕಾರಿಗಳು ಎಪ್ರಿಲ್ 10 ರೊಳಗೆ ವರದಿ ನೀಡುವಂತೆ ಸೂಚಿಸಲಾಯಿತು.ನಗರದ ಎಲ್ಲಾ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಉತ್ಸಾಹದಿಂದ ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಮಾ. 27 ರಂದು ನಗರ ಸ್ವಚ್ಛತೆಗೆ ಮಹಾ ಶ್ರಮದಾನ :ಸುಭೋದ್ ಯಾದವ್

ಮಂಗಳೂರು,ಮಾರ್ಚ್.25:ಹಚ್ಚ ಹಸಿರು ಹಾಗೂ ಪ್ರಗತಿಪರ ಮಂಗಳೂರಿಗಾಗಿ ನಗರದ 25 ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ 9 ತಂಡಗಳಿಂದ ಮಹಾ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಮಾಡಿದ ಸಕಲ ಸಿದ್ಧತೆಗಳು ವ್ಯವಸ್ಥಿತವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ತಿಳಿಸಿದ್ದಾರೆ.ಅವರು ಗುರುವಾರ ಸಂಜೆ(24-3-11)ತಮ್ಮ ಕಚೇರಿಯಲ್ಲಿ ಈ ಸಂಬಂಧ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಘ ಸಂಸ್ಥೆಗಳೊಂದಿಗೆ ಆಗಿರುವ ವ್ಯವಸ್ಥೆಗಳ ಕುರಿತು ಚರ್ಚಿಸಿದರು.ಮಹಾಶ್ರಮದಾನ ಮಾರ್ಚ್ 27 ರಂದು ಬೆಳಿಗ್ಗೆ 7.00 ಗಂಟೆಗೆ ಆರಂಭವಾಗಲಿದೆ. ಬಲ್ಮಠ ಮಿಷನ್ ಕಂಪೌಂಡ್,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ತಾವರದಿಂದ ವೈದ್ಯನಾಥನಗರ, ಟೆಂಪಲ್,ಕದ್ರಿ ಟೋಲ್ಗೇಟ್ ,ನಂತೂರು,ಕದ್ರಿ ಪಾರ್ಕ್,ಕಂಕನಾಡಿ,ಫಾದರ್ ಮುಲ್ಲರ್ಸ್ ಆಸ್ಪತ್ರೆ ಯಿಂದ ನಂದಿಗುಡ್ಡೆಯವರೆಗೆ ,ಸುಭಾಶ್ ನಗರ,ಶ್ರೀನಿವಾಸ ಕಾಲೇಜು ಹಿಂಭಾಗ,ಉರ್ವಸ್ಟೋರ್ಸ್ ಸರಕಾರಿ ಅತಿಥಿಗೃಹಗಳ ಪ್ರದೇಶ ಹಾಗೂ ಹ್ಯಾಟ್ ಹಿಲ್,ಹೊನ್ನಕಟ್ಟೆಯಿಂದ ಕಾನ,ಜಿಲ್ಲಾಧಿಕಾರಿಗಳ ಕಚೇರಿ ಆವರಣ,ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣ,ಬೈಕಂಪಾಡಿ ಕೈಗಾರಿಕಾ ಪ್ರದೇಶಗಳಲ್ಲದೆ ಇನ್ನೂ ಅನೇಕ ಕಡೆ ಮಹಾಶ್ರಮದಾನ ನಡೆಯಲಿದೆ.ಈ ಮಹಾ ಶ್ರಮ ದಾನದಲ್ಲಿ ಎನ್ಎಸ್ಎಸ್, ಕೆನರಾ ಚೇಂಬರ್ ಆಫ್ ಕಾಮರ್ಸ್ ,ಹ್ಯೂಮನಿಟೇರಿಯನ್ ಸೊಸೈಟಿ, ರಾಜ್ಯ ಸರಕಾರಿ ನೌಕರರ ಸಂಘ,ಸ್ಕೌಟ್ಸ್ ಗೈಡ್ಸ್,ಮಹಾನಗರಪಾಲಿಕೆ ಸಿಬ್ಬಂದಿ,ಪೊಲೀಸ್ ಯೂತ್ ಕ್ಲಬ್,ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ,ರೋಟರಿ ಕ್ಲಬ್, ವಿದ್ಯಾರ್ಥಿ ಸಂಘ,ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ಸ್ಥಳೀಯರು ಜನಪ್ರತಿನಿಧಿಗಳು ಸಹ ಭಾಗವಹಿಸಲು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಎಪ್ರಿಲ್ ಕೊನೇ ವಾರದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕಡಲತಡಿ(ಬೀಚ್) ಪರಿಸರ ಸ್ವಚ್ಛತಾ ಆಂದೋಲನ ಹಾಗೂ ಜೂನ್, ಜುಲೈ ತಿಂಗಳ ಮುಂಗಾರು ಸಮಯದಲ್ಲಿ ಬೃಹತ್ ಸಸಿ ನೆಡುವ ವನಮಹೋತ್ಸವ ಕಾರ್ಯಕ್ರಮ ಸಹ ಹಮ್ಮಿಕೊಳ್ಳುವ ಮೂಲಕ ಇಡೀ ಜಿಲ್ಲೆ ಹಸಿರಿನಿಂದ ಸ್ವಚ್ಚವಾಗಿ ಕಂಗೊಳಿಸುವಂತೆ ಮಾಡಲಾಗುವುದೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.

Thursday, March 24, 2011

ಪ್ರತಿಭಾ ಪಲಾಯನ ತಡೆಯಿರಿ :ಪ್ರೊ.ಟಿ.ಸಿ.ಶಿವಶಂಕರಮೂರ್ತಿ

ಮಂಗಳೂರು,ಮಾರ್ಚ್.24:ಹೆಚ್ಚು ಸಂಬಳದಾಸೆಗೆ ನಮ್ಮಲ್ಲಿರುವ ಅದ್ಬುತವಾದ ಪ್ರತಿಭಾವಂತರು ವಿದೇಶಗಳಿಗೆ ಹೋಗುತ್ತಿರುವುದರಿಂದ ನಮ್ಮಲ್ಲಿ ವಿಜ್ಞಾನ ತಂತ್ರಜ್ಞಾನ ಸಂಶೋಧನಾ ಕಾರ್ಯಗಳು ಕುಂಠಿತವಾಗುತ್ತಿವೆ.ಇದನ್ನು ಹೋಗಲಾಡಿಸಲು ನಾವು ನಮ್ಮ ವಿಜ್ಞಾನ ಪದವೀಧರರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪ್ರತಿಭಾ ಪಲಾಯನ ತಪ್ಪಿಸಬೇಕೆಂದು ಮಂಗಳಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಕರೆನೀಡಿದ್ದಾರೆ.

ಅವರು ಇಂದು ವಿಜ್ಞಾನ ಮತ್ತು ತಂತ್ರ ಜ್ಞಾನ ದಾರ್ಶ ನಿಕ ಸಮೂಹ, ಮಾಹಿತಿ , ಜೈವಿಕ ತಂತ್ರ ಜ್ಞಾನ,ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆ, ಕರ್ನಾ ಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ, ಮಂಗ ಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತಾ ಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ಏರ್ಪಡಿಸಿದ್ದ ಪದವಿ ಕಾಲೇಜು ಗಣಿತಶಾಸ್ತ್ರ ಬೋಧಕರ ರಾಜ್ಯ ಮಟ್ಟದ ಬೋಧನಾಂಗ ಅಭಿವೃದ್ಧಿ ಕುರಿ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಭಾರತ ವಿಶ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 3ನೇ ಅತೀ ದೊಡ್ಡ ರಾಷ್ಟ್ರ .ಆದರೆ ಇಲ್ಲಿಯ ಸಾಕ್ಷರತೆ ಪ್ರಮಾಣ ಕೇವಲ ಶೇಕಡ 56 ಮಾತ್ರ.ಕಳೆದ 130 ವರ್ಷಗಳಲ್ಲಿ ವಿಜ್ಞಾನ ತಂತ್ರಜ್ಞಾನಗಳ ಸಂಶೋಧನೆಗೆ ಕೇವಲ 3 ಜನರಿಗೆ ಮಾತ್ರ ನೋಬಲ್ ಲಭಿಸಿದೆ.5 ವರ್ಷಗಳಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ವಿಜ್ಞಾನ ತಂತ್ರಜ್ಞಾನ ನಿಯತಕಾಲಿಕೆಗಳಲ್ಲಿ ಕೇವಲ 16 ಲೇಖನಗಳು ಪ್ರಕಟವಾಗಿವೆ. ಚೀನಾದಲ್ಲಿ 96,ಬ್ರೆಜಿಲ್ ನಲ್ಲಿ 36 ಪ್ರಬಂಧಗಳು ಪ್ರಕಟವಾಗಿವೆ. ಇವುಗಳನ್ನು ಗಮನಿಸಿದರೆ ನಮ್ಮ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಕಾಳಜಿ/ಆಸಕ್ತಿ ಕಡಿಮೆಯಾಗುತ್ತಿರುವ ಅಂಶ ಗೋಚರಿಸುತ್ತಿದೆ. ಆದ್ದ ರಿಂದ ನಾವು ಶುದ್ಧ ವಿಜ್ಞಾನ ಮತ್ತು ತಂತ್ರ ಜ್ಞಾನಗಳ ಸಂಶೋಧನೆ ಯತ್ತ ವಿದ್ಯಾರ್ಥಿ ಗಳನ್ನು ಆಕರ್ಷಿಸ ಬೇಕು. ವಿಜ್ಞಾನ ಮತ್ತು ತಂತ್ರ ಜ್ಞಾನ ಗಳ ಸಂಶೋ ಧನೆಗಳು ಇಲ್ಲದ್ದಿ ದ್ದಲ್ಲಿ ನಮ್ಮ ಆರ್ಥಿ ಕತೆಗೆ ಬಹು ದೊಡ್ಡ ಪೆಟ್ಟು ಬೀಳ ಲಿದೆ. ನಮ್ಮ ಪ್ರೌಢಶಾಲೆಯಲ್ಲಿ ಶೇ.50 ರಲ್ಲಿ ವಿಜ್ಞಾನ ಪ್ರಯೋಗಾಲಯಗಳು ಇಲ್ಲ. ಆದ್ದರಿಂದ ನಾವು ನಮ್ಮ ಶಾಲಾ ಶಿಕ್ಷಣ ಪದವಿ ತರ ಗತಿ ಗಳಲ್ಲಿ ವಿಜ್ಞಾನ ವಿಷಯಗಳತ್ತ ವಿದ್ಯಾರ್ಥಿಗಳು ಧಾವಿಸಲು ಕ್ರಮ ಕೈಗೊಳ್ಳಬೇಕು.ನಮ್ಮ ಹೆಸರಾಂತ ವಿಶ್ವ ವಿದ್ಯಾ ಲಯಗಳಿಗಿಂತ ಐಐಟಿ,ಐಐಎಸ್ಸಿ ಸಂಸ್ಥೆಗಳಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.
ವಿಶ್ವವಿದ್ಯಾಲಯಗಳಿಗೆ ಸಂಶೋಧನೆಗಳಿಗಾಗಿ ಹೆಚ್ಚಿನ ಅನುದಾನ ನೀಡದ ಹೊರತು ಮೂಲ ವಿಜ್ಞಾನ ತಂತ್ರಜ್ಞಾನಗಳ ಸಂಶೋಧನೆಗಳನ್ನು ಕೈಗೊಳ್ಳಲು ಕಷ್ಟವಾಗಲಿದೆ ಎಂದರು.ಪ್ರಾಧ್ಯಾಪಕರು,ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯದನ್ನು ಬೋಧಿಸಿ ಎಂದ ಅವರು ಇಡೀ ಮನುಕುಲದ ಒಳಿತಿಗಾಗಿ ಶಿಕ್ಷಣ ಕ್ಷೇತ್ರ ಭೃಷ್ಠಚಾರದಿಂದ ಮುಕ್ತವಾಗಿರಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಪ್ರೊ.ಎಚ್.ಆರ್.ನಟರಾಜ್ ಅರಸ್ ಅವರು ಮಾತನಾಡಿ ಶಿಕ್ಷಕ ವೃಂದ ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆಯಂತಾಗದೆ ಸುಲಲಿತವಾಗಿ ಬೋಧಿಸಬೇಕು ಎಂದರು.ಪ್ರೊ.ಪರಮೇಶ್ವರ ಭಟ್,ಅಧ್ಯಕ್ಷರು,ಗಣಿತಶಾಸ್ತ್ರ ವಿಭಾಗ,ಮಂಗಳೂರು ವಿಶ್ವವಿದ್ಯಾನಿಲಯ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕೊಚ್ಚಿನ್ ವಿಶ್ವವಿದ್ಯಾನಿಲಯದ ಪ್ರೊ.ಎ.ವಿಜಯಕುಮಾರ್ ದಿಕ್ಸೂಚಿ ಭಾಷಣ ಮಾಡಿದರು. ಶ್ರೀಮತಿ ಸವಿತಾ ಎಲ್ಲರಿಗೂ ಸ್ವಾಗತ ಕೋರಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಗಣಿತ ಪ್ರಾಧ್ಯ್ಯಾಪಕರು ಆಗಮಿಸಿದ್ದರು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ನಿರ್ದೇಶನ

ಮಂಗಳೂರು,ಮಾರ್ಚ್.24:ಪ್ರಾದೇಶಿಕ ಸಾರಿಗೆ ಪ್ರಾಧಿಕಾರವುನಗರ ಸಾರಿಗೆಮತ್ತು ಇತರ ಬಸ್ಸುಗಳಲ್ಲಿ ,ಮುಂದಿನ ಬಾಗಿಲಿನ ಪ್ರವೇಶವನ್ನು ಹೆಂಗಸರಿಗೆ ಮತ್ತು ಹಿಂದಿನ ಬಾಗಿಲಿನ ಪ್ರವೇಶವನ್ನು ಗಂಡಸರಿಗೆ ಸೀಮಿತಗೊಳಿಸುವ ಷರತ್ತನ್ನು ವಿಧಿಸಿರುತ್ತದೆ. ಆದ್ದರಿಂದ ಮಹಿಳೆಯರು ಬಸ್ಸಿನ ಮುಂಭಾಗದ ಬಾಗಿಲಿನಲ್ಲಿ ಹತ್ತಿ ಅದರಲ್ಲಿ ಕೆಳಗಿಳಿಯುವುದು ಮತ್ತು ಪುರುಷ ಪ್ರಯಾಣಿಕರು ಹಿಂದಿನ ಬಾಗಿಲಿನಲ್ಲಿ ಹತ್ತಿ ಕೆಳಗಿಳಿಯುವ ಪದ್ಧತಿಯನ್ನು ಹಾಗೂ ಕಾರ್ಯದರ್ಶಿ ,ಪ್ರಾದೇಶಿಕ ಸಾರಿಗೆ ಪ್ರಾಧಿಕಾರದವರ ನಡವಳಿ 29-7-1993 ರಲ್ಲಿ ನೀಡಿರುವ ನಿರ್ದೇಶನದಂತೆ ಬಸ್ಸುಗಳಲ್ಲಿ ಬಲಬದಿಯ ಚಾಲಕನ ಹಿಂಭಾಗದ 2 ಆಸನಗಳುಳ್ಳ 3 ಸಾಲುಗಳನ್ನು ಅಥವಾ 3 ಆಸನಗಳುಳ್ಳ 2 ಸಾಲುಗಳನ್ನು ಮಹಿಳೆಯರಿಗೆ ಮೀಸಲಿಟ್ಟಿರುವುದನ್ನು ಅನುಷ್ಠಾನಗೊಳಿಸುವಂತೆ ಸಾರ್ವಜನಿಕರಿಗೆ ಹಾಗೂ ಬಸ್ಸು ಪ್ರವರ್ತಕರಿಗೆ ಸೂಚಿಸಲಾಗಿದೆಯೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.

Wednesday, March 23, 2011

ದಕ್ಷಿಣ ಏಷ್ಯಾ ಪ್ರಾದೇಶಿಕ ಒಕ್ಕೂಟದ ಕಾರ್ಯಾಗಾರಕ್ಕೆ ಚಾಲನೆ

ಮಂಗಳೂರು,ಮಾರ್ಚ್.23:ಸಮುದಾಯ ಮತ್ತು ಬಡವರ ಪರವಾಗಿರುವ ಸಹಕಾರಿ ತತ್ವಗಳನ್ನು ಪ್ರೋತ್ಸಾಹಿಸಲು ಹಾಗೂ ಯುವಜನಾಂಗವನ್ನು ಸಹಕಾರಿ ತತ್ವದತ್ತ ಆಕರ್ಷಿಸಲು ಮಂಗಳೂರು ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾ ಪ್ರಾದೇಶಿಕ ಒಕ್ಕೂಟದ ಸಹಕಾರಿಗಳ ಮೂರು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಭಾರತ ರಾಷ್ಟ್ರೀಯ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಪಾಲ್ ಸಿಂಗ್ ಅವರು ಹೇಳಿದರು.

ಇಂದು ಮಂಗ ಳೂರು ವಿಶ್ವ ವಿದ್ಯಾ ನಿಲ ಯದ ಎಂಬಿಎ ಸೆಮಿ ನಾರ್ ಹಾಲ್ ನಲ್ಲಿ ದಕ್ಷಿಣ ಏಷ್ಯಾ ಪ್ರಾ ದೇಶಿಕ ಒಕ್ಕೂ ಟದ ಸಹ ಕಾರಿ ಗಳ ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಬಾಂಗ್ಲಾ, ಬೂತಾನ್, ಇಂಡೋ ನೇಷಿಯಾ, ಜಪಾನ್, ಮಲೇ ಷಿಯಾ, ಥ್ಯೆ ಲ್ಯಾಂಡ್ ಸೇ ರಿದಂತೆ ಸುಮಾರು 9 ದೇಶ ಗಳಿಂದ ಪ್ರತಿ ನಿಧಿಗಳು ಆಗ ಮಿಸಿದ್ದು, ಸಂವಾದ ಮತ್ತು ಸಹಕಾರಿ ಯೋಜನೆಗಳ ಬಗ್ಗೆ ಸವಿವರವಾಗಿ ಕಾರ್ಯಾಗಾರದಲ್ಲಿ ಚರ್ಚಿಸುವುದಾಗಿ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಸಹಕಾರಿ ಸಂಘಗಳ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಅವರು, ಸಹಕಾರಿ ನೀತಿಯನ್ನು ಮೊತ್ತ ಮೊದಲನೆಯದಾಗಿ ರೂಪಿಸಿದ ರಾಜ್ಯ ಕರ್ನಾಟಕ. ವ್ಯವಸಾಯ ಕ್ಷೇತ್ರ, ಹಾಲು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರಿಗಳು ಯಶಸ್ವಿಯಾಗಿದ್ದಾರೆ. ಸಹಕಾರಿಗಳನ್ನು ಪ್ರಸಕ್ತ ಸಂದರ್ಭದಲ್ಲಿ ಸಕ್ರಿಯವಾಗಿಸಲು ಯುವ ಜನಾಂಗ ಮತ್ತು ಮಹಿಳೆಯರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಪ್ರತಿಪಾದಿಸಿದರು.ಕ್ಯಾಂಪಸ್ ಕೋ ಆಪರೇಷನ್ ಮೂವಮೆಂಟ್ ಇಂದಿನ ಅಗತ್ಯ ಎಂದ ಅವರು, ಪ್ರಸಕ್ತ ಸನ್ನಿವೇಶದಲ್ಲಿ ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರ ಆಯೋಜಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಮಲೇಷಿಯಾದ ಮಲಯ ವಿಶ್ವವಿದ್ಯಾಲಯದ ಪ್ರೊ. ಮೊಹಮ್ಮದ್ ಆಲಿ ಹಸನ್ ಅವರು ಕಾರ್ಯಾಗಾರದ ಉದ್ದೇಶದ ಬಗ್ಗೆ ವಿವರಿಸಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ಟಿ ಸಿ ಶಿವಶಂಕರ ಮೂರ್ತಿ ಅವರು, 260 ವರ್ಷಗಳ ಸಹಕಾರಿ ತತ್ವದ ಇತಿಹಾಸ ಹಾಗೂ ಇಂತಹ ಉತ್ತಮ ಕಾರ್ಯಾಗಾರವನ್ನು ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕರಾವಳಿಯಲ್ಲೂ ಮೊಳಹಳ್ಳಿ ಶಿವರಾಮ್ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ನ್ಯಾಷನಲ್ ಕೋ ಆಪರೇಟಿವ್ ಯೂನಿಯನ್ ಆಫ್ ಇಂಡಿಯಾದ ಚೀಫ್ ಎಕ್ಸಿಕ್ಯೂಟಿವ್ ಅನಿತಾ ಮಾನ್ಚಂದಾ, ರಾಜ್ಯ ವಲಯದ ಎಂ.ಡಿ.ಕೆ. ಎ ವೆಂಕಟೇಶ್, ರಿಜಿಸ್ಟ್ರಾರ್ ಡಾ. ಚಿನ್ನಪ್ಪ ಗೌಡ ಅವರು ಉಪಸ್ಥಿತರಿದ್ದರು. ಡಾ. ಟಿ ವೈ ಮಲ್ಲಯ್ಯ ಅವರು ಸ್ವಾಗತಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥರಾದ ಮುಷ್ತಿಯಾರಿ ಬೇಗಂ ವಂದಿಸಿದರು.

Tuesday, March 22, 2011

'ಪತ್ರಿಕೋದ್ಯಮಕ್ಕೆ ವಿಶ್ವಾಸಾರ್ಹತೆ ಬಹುಮುಖ್ಯ'

ಮಂಗಳೂರು,ಮಾರ್ಚ್.22: ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಂಗವೆಂದು ಪರಿಗಣಿಸಲ್ಪಟ್ಟಿರುವ ಪತ್ರಿಕೋದ್ಯಮ ಇಂದು ಬಿಕ್ಕಟ್ಟಿನ ಸನ್ನಿವೇಶವನ್ನು ಎದುರಿಸುತ್ತಿದ್ದು, ಪತ್ರಿಕೋದ್ಯಮದಲ್ಲಿ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವುದು ಪ್ರಮುಖ ಸವಾಲಾಗಿದೆ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ಮಂಗ ಳೂರು ವಿಶ್ವ ದ್ಯಾನಿ ಲಯದ ಸಮೂಹ ಸಂವ ಹನ ಹಾಗೂ ಪತ್ರಿ ಕೋದ್ಯಮ ವಿ ಭಾಗವು ನವ ದೆಹಲಿ ಯ ಯುಜಿಸಿ ಸ್ಯಾಪ್ ಅನು ದಾನಿತ ಆಶ್ರಯ ದಲ್ಲಿ ಮಂಗ ಳ ಗಂಗೋ ತ್ರಿಯ ಸೆನೆಟ್ ಹಾಲ್ ನಲ್ಲಿ ನಿಂದು ಆ ರಂಭ ಗೊಂಡ `ಮಾಧ್ಯಮ, ರಾಜ ಕೀಯ ಹಾಗೂ ಸಂಸ್ಕೃತಿ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಆಶಯ ಭಾಷಣ ಮಾಡುತ್ತಿದ್ದರು.ವೃತ್ತಿ ಉದ್ಯಮವಾದಾಗ, ಆದ್ಯತೆಗಳು ಬದಲಾದಾಗ, ಲಾಭವೇ ಅಲ್ಲಿ ಮುಖ್ಯವಾಗುತ್ತದೆ. ಉತ್ಪಾದನೆ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಸಿಗುವ ವಸ್ತುವಿದ್ದಿದ್ದರೆ ಅದು ಪತ್ರಿಕೆ ಮಾತ್ರ. ಪತ್ರಿಕೆಯನ್ನು 3 ರೂ.ಗೆ ಖರೀದಿಸುವ ಓದುಗನಿಗಿಂತಲೂ ಅದರ ಉತ್ಪಾದನೆಯ ವೆಚ್ಚದ ಉಳಿದ ಭಾಗವನ್ನು ಭರಿಸುವ ಕಂಪೆನಿಗಳ ಹಿತ ಕಾಯುವುದು ಮುಖ್ಯವಾಗುತ್ತದೆ. ಸಕಾರಾತ್ಮಕ, ಜನಪರ ಎಂದು ಹೇಳುವ ಸುದ್ದಿಗಳಿಗೆ ಆದ್ಯತೆ ಇರುವುದಿಲ್ಲ.ಪತ್ರಿಕೆಯಲ್ಲಿ ಓದುಗರ ಪಾಲ್ಗೊಳ್ಳುವಿಕೆಯ ಪ್ರಾಮ್ಯುಖತೆಯಿಂದ ಸ್ವಲ್ಪ ಬದಲಾವಣೆ ಸಾಧ್ಯವಿದೆ ಎಂದ ಅವರು, ಇತರ ವೃತ್ತಿಗಳಿಂದ ಭಿನ್ನ ಪತ್ರಿಕೋದ್ಯಮ. ಇಲ್ಲಿ ಪತ್ರಕರ್ತ ತಾನು ಹೇಳುವುದನ್ನು ಪಾಲಿಸಬೇಕಾಗುತ್ತದೆ; ಇಲ್ಲದಿದ್ದರೆ ಪರಿಣಾಮ ಶೂನ್ಯ ಎಂದು ಅಭಿಪ್ರಾಯಪಟ್ಟರು.ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ನಿವೃತ್ತ ನ್ಯಾಯಾಧೀಶ ಎಮ್.ಎಫ್. ಸಲ್ದಾನಾ ಅವರು, ನ್ಯಾಯಾಂಗ ಮತ್ತು ಪತ್ರಿಕೋದ್ಯಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬದಲಾವಣೆ ಸುಲಭ ಸಾಧ್ಯವಲ್ಲ; ಆದರೆ ನಿರಂತರವಾಗಿ ಒಳಿತನ್ನು ಪ್ರತಿಪಾದಿಸುವುದರಿಂದ ನಿಧಾನವಾಗಿಯಾದರೂ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮತ್ತು ಕಾರ್ಯಕ್ರಮದ ಸಂಯೋಜಕ ಪ್ರೊ. ಜಿ.ಪಿ. ಶಿವರಾಂ ಸ್ವಾಗತಿಸಿದರು. ಡಾ. ವಹೀದಾ ಸುಲ್ತಾನ್ ವಂದಿಸಿದರು

Sunday, March 20, 2011

ಲಕ್ಷ್ಮಿಮಚ್ಚಿನರಿಗೆ ಗ್ರಾಮೀಣ ವರದಿಗಾರಿಕೆಯ ಪ.ಗೋ ಪ್ರಶಸ್ತಿ

ಮಂಗಳೂರು,ಮಾರ್ಚ್.20:ಪತ್ರಿಕಾ ಸ್ವಾತಂತ್ರ್ಯ, ಸ್ವತಂತ್ರ್ಯ ನ್ಯಾಯಾಂಗ, ಸ್ವಚ್ಛ ಮತ್ತು ಪ್ರಾಮಾಣಿಕ ಆಡಳಿತ ಪ್ರಜಾಪ್ರಭುತ್ವದ ಆದ್ಯತೆಗಳು. ಎಲ್ಲಿ ಪತ್ರಿಕಾ ರಂಗ ಸ್ವತಂತ್ರವಾಗಿರುತ್ತದೋ ಅಲ್ಲಿ ಉತ್ತಮ ಕೆಲಸಗಳಾಗುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ವಿ. ಎಸ್ ಆಚಾರ್ಯ ಅವರು ಹೇಳಿದರು.

ಅವರಿಂದು ಮಂಗ ಳೂರಿನ ಪ್ರೆಸ್ ಕ್ಲಬ್ ನಲ್ಲಿ ಗ್ರಾ ಮೀಣ ವರದಿ ಗಾರಿ ಕೆಗೆ ಕೊಡ ಮಾಡುವ 2010-11ನೇ ಸಾಲಿನ ಪ.ಗೋ ಪ್ರಶಸ್ತಿ ಯನ್ನು ಉದಯ ವಾಣಿಯ ಬೆಳ್ತಂಗಡಿ ತಾಲೂಕಿನ ವರದಿ ಗಾರ ಲಕ್ಷ್ಮೀ ಮಚ್ಚಿನ ಅವರಿಗೆ ಪ್ರದಾನ ಮಾಡಿ ಮಾತನಾಡುತ್ತಿದ್ದರು. ಸ್ವಾಭಾವಿಕ ಪ್ರತಿಭೆಯ ಜೊತೆ ಶ್ರಮವೂ ಸೇರಿದಾಗ ಉತ್ತಮ ಫಲ ದೊರೆಯುತ್ತದೆ. ಸಮಾಜಕ್ಕೆ ಉಪಕಾರವಾಗುವಂತಹ ವರದಿಗಳನ್ನು ಪತ್ರಕರ್ತರು ಮಾಡಬೇಕು. ಸಮಾಜಮುಖಿ ಪತ್ರಿಕೆಗಳಿಂದ ಪತ್ರಿಕಾರಂಗಕ್ಕೆ ಗೌರವ ಎಂದ ಅವರು, ಅಭಿವೃದ್ಧಿಗೆ ಪೂರಕವಾಗಿ, ಸಮರ್ಪಕ ಹಾಗೂ ಸಮಗ್ರವಾಗಿ ವರದಿಗಳು ಬರಬೇಕು. ಎಲ್ಲ ವಿಷಯಗಳನ್ನು ನಕರಾತ್ಮಕವಾಗಿ ನೋಡದೆ ಸಕಾರಾತ್ಮಕವಾಗಿ ವರದಿಗಳು ಮೂಡಿಬರಬೇಕು ಎಂದ ಅವರು, ವಿಶ್ಲೇಷಣೆಗಳಿರಲಿ ಬರೀ ವಿರೋಧಗಳಿಂದ ಆದ್ಯತೆ ಮತ್ತು ಸಾಧ್ಯತೆಗಳು ಸೊರಗುತ್ತವೆ ಎಂದರು. ಉತ್ತಮ ವಿಚಾರ, ಜನರು ಹಾಗೂ ಯೋಜನೆಗಳನ್ನು ಎಲ್ಲರೂ ಬೆಂಬಲಿಸ ಬೇಕೆಂದರು. ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಯುಪಿ ಸಿಎಲ್ ಯೋಜನೆ ಬಗ್ಗೆ, ಪಶ್ಚಿಮ ವಾಹಿನಿ, ಮುಜ ರಾಯಿ ಇಲಾಖೆ ಗೆ ಸಂಬಂ ಧಿಸಿ ದಂತೆ ಪತ್ರ ಕರ್ತರ ಪ್ರಶ್ನೆ ಗಳಿಗೆ ಸಚಿ ವರು ಉತ್ತ ರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಮಚ್ಚಿನ ಅವರು, ವರದಿಗಳು ಪ್ರಕಟವಾದಾಗ ಆಡಳಿತ ಅದಕ್ಕೆ ಸ್ಪಂದಿಸಿ ಸಮಸ್ಯೆ ಪರಿಹಾರವಾದರೆ ಅದೇ ವರದಿಗಾರನಿಗೆ ಸಿಗುವ ಉತ್ತಮ ಪ್ರಶಸ್ತಿ ಎಂದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಯು ನರಸಿಂಹ ರಾವ್, ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿಗಳಾದ ಗುರುವಪ್ಪ ಎನ್. ಟಿ. ಬಾಳೆಪುಣಿ,ಪ್ರೆಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ, ಪದ್ಯಾಣ ಗೋಪಾಲಕೃಷ್ಣ ಅವರ ಮಗ ವಿಶ್ವೇಶ್ವರ ಭಟ್ ಅವರು ಉಪಸ್ಥಿತರಿದ್ದರು.

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

ಮಂಗಳೂರು,ಮಾರ್ಚ್.20: ಮಂಗಳೂರು ನಗರದ ಕದ್ರಿ ಉದ್ಯಾನವನದಲ್ಲಿ
ಜಿಲ್ಲಾ ಪಂಚಾ ಯತ್,ತೋಟ ಗಾರಿಕ ಇಲಾಖೆ ಹಾಗೂ ಸಿರಿ ತೋಟ ಗಾರಿಕೆ ಸಂಘ ಗಳ ಸಂ ಯುಕ್ತ ಆಶ್ರಯ ದಲ್ಲಿ ಆಯೋಜಿ ಸಲಾ ಗಿದ್ದ ಫಲಪುಷ್ಪ ಪ್ರದರ್ಶ ನವನ್ನು ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ. ಪಾಲೆ ಮಾರ್ ಅವರು ಶನಿ ವಾರ ಉದ್ಘಾ ಟಿಸಿದರು.ವಿಧಾನ ಸಭಾ ಉಪ ಸಭಾ ಪತಿ ಎನ್. ಯೋಗಿಶ್ ಭಟ್,ಸಂಸದ ನಳಿನ್ ಕುಮಾರ್ ಕಟೀಲ್,ಕರಾ ವಳಿ ಅಭಿ ವೃದ್ದಿ ಪ್ರಾಧಿ ಕಾರದ ಅಧ್ಯಕ್ಷ ಬಿ. ನಾಗ ರಾಜ ಶೆಟ್ಟಿ,ಶಾಸಕ ಯು.ಟಿ. ಖಾದರ್,ತೋಟ ಗಾರಿಕೆ ಇಲಾಖೆ ಯ ಹಿರಿಯ ಸಹಾ ಯಕ ನಿರ್ದೇ ಶಕ ಜೋ ಪ್ರದೀಪ್ ಡಿ'ಸೋಜ,ಮತ್ತಿ ತರ ಗಣ್ಯರು ಕಾರ್ಯ ಕ್ರಮ ದಲ್ಲಿ ಪಾ ಲ್ಗೊಂಡಿ ದ್ದರು.
ಪ್ರದರ್ಶನದಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ಬೇಳೆಸಲಾದ ವಿವಿಧ ರೀತಿಯ ತರಕಾರಿಗಳು, ಅಲಂಕಾರಿಕ ಪುಷ್ಪ ಗಿಡಗಳು,ಔಷಧಿಯ ಸಸ್ಯಗಳು ಮತ್ತು ಯಂತ್ರೋಪಕರಣಗಳನ್ನು ಸಮಗ್ರ ಮಾಹಿತಿಯೊಂದಿಗೆ ಇಡಲಾಗಿದೆ.ಪ್ರಸ್ತುತ ಎಲ್ಲೆಲ್ಲೂ ವಿಶ್ವಕಪ್ ಕ್ರಿಕೆಟ್ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ಪುಷ್ಪಗಳಿಂದ ತಯಾರಿಸಿದ ವಿಶ್ವಕಪ್ ಟ್ರೋಫಿ ಪ್ರಮುಖ ಆಕರ್ಷಣೆಯಾಗಿದೆ.ಸುಮಾರು 10 ಅಡಿ ಎತ್ತರ ವಿರುವ ಈ ಟ್ರೋಫಿಯನ್ನು ಸಿದ್ದಪಡಿಸಲು 9 ಸಾವಿರ ಗುಲಾಬಿ ಹೂ ಗಳನ್ನು ಬಳಸಲಾಗಿದೆ.ಪಕ್ಕದಲ್ಲೇ ಇದಕ್ಕೆ ಪೂರಕವಾಗಿ ಕ್ರಿಕೆಟ್ ಪಿಚ್,ವಿಕೆಟ್, ಬ್ಯಾಟ್ ಮತ್ತು ಬಾಲನ್ನು ಇಡಲಾಗಿದ್ದು,ಫಲ ಪುಷ್ಪಪ್ರದರ್ಶನದ ಪ್ರಮುಖ ಆಕರ್ಷಣೆ ಯಾಗಿದೆ.

Saturday, March 19, 2011

ರಾಜ್ಯ ನೈರ್ಮಲ್ಯ ಪ್ರಶಸ್ತಿ ಪ್ರದಾನ ಸಮಾರಂಭ; ಮಾನ್ಯ ಮುಖ್ಯ ಮಂತ್ರಿಯವರ ಭಾಷಣ

ಮಂಗಳೂರು,ಮಾರ್ಚ್.19:ರಾಜ್ಯ ಮಟ್ಟದ 'ನೈರ್ಮಲ್ಯ ರತ್ನ ಪ್ರಶಸ್ತಿ' ಗೆ ಆಯ್ಕೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಹೊಸಂಗಡಿ ಗ್ರಾಮ ಪಂಚಾಯತ್ ಗೆ ಪ್ರಶಸ್ತಿಯನ್ನು ಇಂದು ಸನ್ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿ ಮಾತನಾಡಿದರು.
ಬ್ಯಾಂಕ್ವೆಟ್ ಹಾಲ್, ವಿಧಾನಸೌಧ.
ಬಂಧುಗಳೆ,
ಗ್ರಾಮೀಣ ಪ್ರದೇಶ ದಲ್ಲಿ ಸಂಪೂರ್ಣ ಸ್ವಚ್ಛತೆ ಸಾಧಿಸಿ ಇತರರಿಗೆ ಮಾದರಿ ಯಾಗಿರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾ ಯಿತಿ ಹಾಗೂ ಜಿಲ್ಲಾ ಪಂಚಾ ಯಿತಿ ಗಳಿಗೆ ನೈ ರ್ಮಲ್ಯ ಹೆಸರಿನ ರಾಜ್ಯ ಮಟ್ಟದ ಪ್ರಶಸ್ತಿ ಯನ್ನು ಸಂತೋಷ ದಿಂದ ನಾನು ಇಂದು ಪ್ರದಾನ ಮಾಡಿ ದ್ದೇನೆ.ರಾಜ್ಯದ ಎಲ್ಲಾ ಭಾಗಗಳ ಪ್ರತಿನಿಧಿ ಗಳಾಗಿ ಇಲ್ಲಿಗೆ ಆಗಮಿ ಸಿರುವ ಪ್ರಶಸ್ತಿ ವಿಜೇತ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾ ಯತ್ ಗಳ ಎಲ್ಲಾ ಅಧ್ಯಕ್ಷರು, ಪದಾಧಿ ಕಾರಿ ಗಳು ಮತ್ತು ಅಧಿ ಕಾರಿ ಮಿತ್ರರಿಗೆ ನನ್ನ ತುಂಬು ಹೃದಯದ ಅಭಿ ನಂದನೆ ಗಳು.ಇಂದು ನಿಮಗೆ ಸಂದಿ ರುವ ಪ್ರಶಸ್ತಿ ನೀವು ಹಾಲಿ ಸಾಧಿ ಸಿರುವ ಸ್ವಚ್ಛತೆ ಯನ್ನು ಇನ್ನೂ ಗುಣಾತ್ಮಕವಾಗಿ ಮುಂದು ವರಿಸಿ ಕೊಂಡು ಹೋಗಲು ಹಾಗೂ ಇತರರೂ ಸಹ ನಿಮ್ಮಿಂದ ಪ್ರೇರಣೆ ಪಡೆದು ಸ್ವಚ್ಛತೆಗೆ ಆದ್ಯತೆ ನೀಡುವಂತಾಗಲಿ ಎಂದು ನಾನು ಆಶಿಸುತ್ತೇನೆ.ಸ್ವಚ್ಛತೆ ಹಾಗೂ ನೈರ್ಮ ಲ್ಯದ ಮಹತ್ವ ವನ್ನು ಅರಿತ ನಮ್ಮ ಸ ರ್ಕಾರ, ಈ ಕ್ಷೇತ್ರ ಗಳಲ್ಲಿ ಗ್ರಾ ಮೀಣ ಜನತೆ ಗೆ ಅರಿವು ಮೂಡಿಸಿ, ಉತ್ತಮ ಸಾಧನೆ ಮಾಡಿದ ವರಿಗೆ ಪ್ರೋ ತ್ಸಾಹ ನೀಡು ವ ಆಶಯ ದಿಂದ ಪ್ರಸಕ್ತ ಸಾಲಿ ನಿಂದ ಈ ನೈ ರ್ಮಲ್ಯ ಪ್ರಶಸ್ತಿ ಗಳನ್ನು ಪ್ರದಾನ ಮಾ ಡುತ್ತಿದೆ.ಪ್ರಶಸ್ತಿ ಯ ಮೊತ್ತ ವಾಗಿ ಪ್ರಥಮ ಸ್ಥಾನಕ್ಕೆ ಗ್ರಾಮ ಪಂಚಾ ಯಿತಿಗೆ 19 ಲಕ್ಷ ರೂ.ಗಳು, ತಾಲ್ಲೂಕು ಪಂಚಾ ಯಿತಿಗೆ 20 ಲಕ್ಷ ರೂ.ಗಳು ಹಾಗೂ ಜಿಲ್ಲಾ ಪಂಚಾ ಯಿತಿಗೆ 30 ಲಕ್ಷ ರೂ.ಗಳ ನಗದು ಬಹು ಮಾನದ ಜೊತೆಗೆ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ಗಳನ್ನು ನೀಡ ಲಾಗಿದೆ.
ಅದೇ ರೀತಿ ದ್ವಿ ತೀಯ ಹಾಗೂ ತೃತಿಯ ಸ್ಥಾನ ಗಳಿಗೂ ಆಕ ರ್ಷಕ ಪ್ರೋ ತ್ಸಾಹ ನೀಡ ಲಾಗು ತ್ತ್ತಿದೆ. ಜೊತೆಗೆ ವಿಭಾಗ ಮಟ್ಟ ದಲ್ಲಿಯೂ ಪ್ರಥಮ, ದ್ವಿ ತೀಯ ಹಾಗೂ ತೃತಿಯ ನೈ ರ್ಮಲ್ಯ ರತ್ನ ಪ್ರಶಸ್ತಿ ಪಡೆದ ಗ್ರಾಮ ಪಂಚಾ ಯಿತಿ ಗಳಿಗೆ ಅನು ಕ್ರಮ ವಾಗಿ ತಲಾ 9, 7, ಮತ್ತು 5 ಲಕ್ಷ ರೂ.ಗಳ ನಗದು ಬಹು ಮಾನ ನೀಡ ಲಾಗಿದೆ.
ನಮ್ಮ ಸರ್ಕಾ ರದ ವತಿ ಯಿಂದ ಇನ್ನು ಮುಂದೆ ಪ್ರತಿ ವರ್ಷ ವೂ ಈ ರೀ ತಿಯ ಪ್ರಶಸ್ತಿ ಗಳನ್ನು ಮುಂದು ವರಿಸಿ ಕೊಂಡು ಹೋ ಗುವ ಮೂಲಕ ಗ್ರಾ ಮೀಣ ನೈ ರ್ಮಲ್ಯ ಕ್ಷೇ ತ್ರಕ್ಕೆ ಇಂಬು ನೀಡುವ ಆಶಯ ನನ್ನದು.ನಮ್ಮ ಸರ್ಕಾ ರದ ಈ ವಿ ನೂತನ ಉಪ ಕ್ರಮ ದಿಂದ ರಾಜ್ಯದ ಎಲ್ಲಾ ಗ್ರಾಮ ಗಳಲ್ಲಿ ನೈ ರ್ಮಲ್ಯ ಹಾಗೂ ಸ್ವಚ್ಛತೆ ಕಾಪಾ ಡಲು ಹೊಸ ಆಯಾಮ ದೊರೆ ಯಲಿದೆ.ನೈ ರ್ಮಲ್ಯ ಪ್ರಶಸ್ತಿ ನೀಡುವ ಪ್ರ ಕ್ರಿಯೆ ಯನ್ನು ಸಮರ್ಥ ವಾಗಿ ಅನು ಷ್ಠಾನ ಗೊಳಿ ಸಿರುವ ಗ್ರಾಮೀ ಣಾಭಿ ವೃದ್ಧಿ ಹಾಗೂ ಪಂಚಾ ಯತ್ ರಾಜ್ ಇಲಾಖೆ ಯ ಸಂ ಬಂಧ ಪಟ್ಟ ಎಲ್ಲ ರಿಗೂ ನನ್ನ ಅಭಿ ನಂದ ನೆಗಳು.
ಆತ್ಮೀಯರೆ,"ಸ್ವಚ್ಛತೆಯಲ್ಲಿ ದೈವತ್ವವಿದೆ" ಎಂಬ ಪ್ರಸಿದ್ಧ ಮಾತು ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವವನ್ನು ಸೂಚಿಸುತ್ತದೆ.
ಹಾಗೆಯೇ "ದೇವರು ಬಡತನವನ್ನು ನೀಡಬಹುದು, ಆದರೆ ಕೊಳಕುತನವನ್ನಲ್ಲ" ಎಂಬ ನಮ್ಮ ಗಾದೆ ಮಾತು ಸಹ ದೈನಂದಿನ ಜೀವನದಲ್ಲಿ ನೈರ್ಮಲ್ಯದ ಅವಶ್ಯಕತೆಯನ್ನು ವ್ಯಕ್ತಪಡಿಸುತ್ತದೆ.
21ನೇ ಶತಮಾನದ 2ನೇ ದಶಕದ ಆರಂಭದ ವೈಜ್ಞಾನಿಕ ಘಟ್ಟದಲ್ಲಿ ಸಮಾಜದ ಒಂದು ವರ್ಗ ಬದುಕುತ್ತಿದ್ದರೆ, ನಮ್ಮ ಗ್ರಾಮೀಣ ಬಂಧು ಭಗಿನಿಯರು ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳಿಂದಲೂ ವಂಚಿತರಾಗಿರುವುದು ನಿಜಕ್ಕೂ ವಿಷಾದಕರ ಅಂಶ.ಸರಿ ಸುಮಾರು ಶೇ.60ರಿಂದ 70ರಷ್ಟು ಮಂದಿ ಗ್ರಾಮೀಣ ಪ್ರದೇಶಗಳಲ್ಲಿಯೇ ವಾಸಿಸುತ್ತಿರುವ ಭಾರತ ದೇಶದಲ್ಲಿ ಹಾಗೆಯೇ ಕರ್ನಾಟಕ ರಾಜ್ಯದಲ್ಲಿ, ಈ ಗ್ರಾಮೀಣ ಸಮುದಾಯಕ್ಕೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿ, ಸೌಲಭ್ಯ ಒದಗಿಸುವ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ.ಇದನ್ನರಿತ ನಮ್ಮ ಸರ್ಕಾರ ಸಂಪೂರ್ಣ ಸ್ವಚ್ಛತಾ ಆಂದೋಲನಕ್ಕೆ ವಿಶೇಷ ಒತ್ತು ನೀಡಿದೆ.ಗ್ರಾಮೀಣ ಪ್ರದೇಶಗಳ ಸ್ವಚ್ಘತೆಗಾಗಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಲು ಹಾಗೂ ಸಂಪೂರ್ಣ ನೈರ್ಮಲ್ಯ ಸಾಧನೆಗೆ ಉತ್ತೇಜನ ನೀಡಲು ನಾವು ಪ್ರಾರಂಭಿಸಿರುವ ನೈರ್ಮಲ್ಯ ಪ್ರಶಸ್ತಿಗಳು ಇದರ ಜೀವಂತ ದ್ಯೋತಕಗಳಾಗಿವೆ.ರಾಜ್ಯಾದ್ಯಂತ 125ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳು, 3 ತಾಲ್ಲೂಕು ಪಂಚಾಯಿತಿಗಳು ಹಾಗೂ 2 ಜಿಲ್ಲಾ ಪಂಚಾಯಿತಿಗಳು ಈ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಮುಂದಿನ 2 ವರ್ಷಗಳ ಒಳಗೆ ಕರ್ನಾಟಕದಾದ್ಯಂತ ಸಂಪೂರ್ಣವಾಗಿ ಬಯಲು ಮಲ ವಿಸರ್ಜನೆಯನ್ನು ಮುಕ್ತಗೊಳಿಸಲು ಪಣ ತೊಟ್ಟಿರುವ ನಮ್ಮ ಸರ್ಕಾರ, ಬಿ.ಪಿ.ಎಲ್ ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 2,500 ರೂ.ಗಳಿಂದ 3,000 ರೂ.ಗಳಿಗೆ ಹೆಚ್ಚಿಸಿದೆ.
ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದ್ದು, ರಾಜ್ಯದ 845 ಗ್ರಾಮ ಪಂಚಾಯಿತಿಗಳು ಹಾಗೂ 4 ತಾಲ್ಲೂಕು ಪಂಚಾಯಿತಿಗಳು ಕೇಂದ್ರ ಸರ್ಕಾರದ ಪ್ರತಿಷ್ಠಿತ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದಿವೆ.
ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸ್ಥಾನಗಳನ್ನು ಮೀಸಲಿಟ್ಟಿರುವ ನಮ್ಮ ಸರ್ಕಾರ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಜನಪ್ರತಿನಿಧಿಗಳ ಮಾಸಿಕ ಗೌರವ ಧನವನ್ನು ಹೆಚ್ಚು ಮಾಡುವ ಮೂಲಕ ಗ್ರಾಮೀಣ ಆಡಳಿತ ವ್ಯವಸ್ಥೆಯ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಅನ್ನು 2011-12ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿ ನಾನು ಮಂಡಿಸಿದ್ದೇನೆ. ಹಾಗೆಯೇ 2011-12ನೇ ಸಾಲಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮಗಳಿಗಾಗಿ 4,385 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಗ್ರಾಮ ಪಂಚಾಯಿತಿಗಳಿಗೆ ವಾರ್ಷಿಕ ಅನುದಾನವನ್ನು 6 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರತಿ ತಾಲ್ಲೂಕು ಪಂಚಾಯಿತಿಗೆ ವಾರ್ಷಿಕ ಒಂದು ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ.
ಇಷ್ಟು ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಂಡು, ಮುಂದಿನ ಎರಡು ವರ್ಷಗಳ ಒಳಗೆ ಸಮಸ್ತ ರಾಜ್ಯದಲ್ಲಿ ಬಯಲು ಮಲ ವಿಸರ್ಜನೆಯಿಂದ ಮುಕ್ತಗೊಳಿಸುವುದೂ ಒಳಗೊಂಡಂತೆ ರಾಜ್ಯದ ಒಟ್ಟಾರೆ ವಿಕಾಸಕ್ಕೆ ನಿಮ್ಮೆಲ್ಲರ ಸಹಕಾರ ಕೋರುತ್ತಾ, ಇಂದಿನ ಪ್ರಶಸ್ತಿ ಪುರಸ್ಕೃತರನ್ನು ಮತ್ತೊಮ್ಮೆ ಅಭಿನಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ನಮಸ್ಕಾರ

ಪಡಿತರ ವ್ಯವಸ್ಥೆ: ಜಿಲ್ಲಾಧಿಕಾರಿ ಅಸಮಾಧಾನ

ಮಂಗಳೂರು,ಮಾರ್ಚ್.19:ಜನಸಾಮಾನ್ಯರ ಅನುಕೂಲಕ್ಕಾಗಿ ರೂಪಿಸಿರುವ ಪಡಿತರ ವ್ಯವಸ್ಥೆ ಬಗ್ಗೆ ಇಲಾಖೆಯವರಿಗೇ ಸಮರ್ಪಕ ಮಾಹಿತಿ ಇಲ್ಲ. ಇಂತಹವರಿಂದ ಕಾರ್ಯಕ್ರಮ ವ್ಯವಸ್ಥಿತ ಅನುಷ್ಠಾನ ಹೇಗೆ ಸಾಧ್ಯ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಪ್ರಶ್ನಿಸಿದರು.

ಇಂದು ತಮ್ಮ ಕಚೇರಿ ಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿ ಕಾರಿಗಳು, ಪಡಿತರ ಪೂರೈಕೆ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿದರಲ್ಲದೆ, ಆಹಾರ ನಿರೀಕ್ಷಕರು ಮತ್ತು ಶಿರಸ್ತೇದಾರರ ಕರ್ತವ್ಯ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಫೀಲ್ಡ್ ಲೆವೆಲ್ ನಲ್ಲಿ ಕರ್ತವ್ಯ ನಿರ್ವಹಿಸುವವರು ಕರ್ತವ್ಯವನ್ನು ಅದಕ್ಷತೆಯಿಂದ ಮಾಡುತ್ತಿದ್ದು, ತಕ್ಷಣವೇ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಬೇಕಿದೆ ಎಂದು ಎಚ್ಚರಿಸಿದರು.
ಇಲಾಖೆಯ ಉಪನಿರ್ದೇಶಕರು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನಗಳನ್ನು ತಕ್ಷಣವೇ ನೀಡಬೇಕೆಂದ ಜಿಲ್ಲಾಧಿಕಾರಿಗಳು, ಫೀಲ್ಡ್ ಲೆವಲ್ ನಲ್ಲಾಗುವ ಲೋಪಗಳು ಸರ್ಕಾರದ ನೀತಿ ನಿರೂಪಣೆಯ ಸಂದರ್ಭದಲ್ಲಿ ಪರಿಣಾಮ ಬೀರುತ್ತದೆ. ಇಂತಹ ಲೋಪಗಳಿಗೆ ಅಧಿಕಾರಿಗಳು ಅವಕಾಶ ನೀಡದೆ ಸಮರ್ಪಕವಾಗಿ ಮಾಹಿತಿಯನ್ನು ನೀಡಬೇಕೆಂದರು.ಜಿಲ್ಲೆಯಲ್ಲಿ ಉಳಿದ ತಾಲೂಕುಗಳಿಗೆ ಹೋಲಿಸಿದರೆ ಬೆಳ್ತಂಗಡಿ, ಮಂಗಳೂರಿನಲ್ಲಿ ಸಮಸ್ಯೆಗಳು ಹೆಚ್ಚಿವೆ ಎಂದರು. ವಿದ್ಯುತ್ ಮೀಟರ್ ಮತ್ತು ಪಡಿತರ ಚೀಟಿ ಹೊಂದಾಣಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 3,11,473 ಗ್ಯಾಸ್ ಸಂಪರ್ಕವಿದ್ದು, ಆರ್ ಆರ್ ನಂಬರ್ 2,26,066 ಮಾತ್ರ ಇಲಾಖೆ ಸ್ವೀಕರಿಸಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಉಪನಿರ್ದೇಶಕರು ಹೇಳಿದರು. ಸಿಂಗಲ್ ಸಿಲಿಂಡರ್ ಹಾಗೂ ಡಬ್ಬಲ್ ಸಿಲಿಂಡರ್ ಹೊಂದಿರುವವರ ಮಾಹಿತಿ ಪಟ್ಟಿಯನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪಡಿತರ ಚೀಟಿಗೆ ಸಂಬಂಧಿಸಿದಂತೆ ಪಂಚತಂತ್ರದ ಅಡಿ ಮಾಹಿತಿ ನೀಡಲು ಕಾಲಮಿತಿ ನಿಗದಿಪಡಿಸಿದ ಜಿಲ್ಲಾಧಿಕಾರಿಗಳು, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ಕೆ ಎಸ್ ಎಫ್ ಸಿ ಗೆ ಸಾಗಿಸುವ ಪ್ರಕ್ರಿಯೆ ಹಾಗೂ ಅಲ್ಲಿಂದ ನ್ಯಾಯಬೆಲೆ ಅಂಗಡಿಗೆ ಆಹಾರ ಪೂರೈಕೆ ವ್ಯವಸ್ಥೆಯಲ್ಲಿ ಆಹಾರ ಇಲಾಖೆಯ ಸಿಬ್ಬಂದಿಗಳ ಸಕ್ರಿಯ ಪಾತ್ರ ಇಲ್ಲದಿರುವುದನ್ನು ಗಮನಿಸಿದರು. ಗುಣಮಟ್ಟ ಮತ್ತು ತೂಕದ ವ್ಯವಸ್ಥೆಯಲ್ಲೂ ತಾಂತ್ರಿಕ ಕೌಶಲ್ಯವಿಲ್ಲದ ಸಿಬ್ಬಂದಿಗಳ ಕರ್ತವ್ಯ ನಿರ್ವಹಿಸುವಿಕೆ ಸರಿ ಇಲ್ಲ ಎಂದ ಜಿಲ್ಲಾಧಿಕಾರಿಗಳು, ಎಲ್ಲವೂ ಕೇವಲ ದಾಖಲೆಗಳಲ್ಲಿ ಮಾತ್ರ ಸಾಗುತ್ತಿದ್ದು, ಕಾರ್ಯದಲ್ಲಿ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸೀಮೆ ಎಣ್ಣೆ ಪೂರೈಕೆಯಲ್ಲಿ, ಗ್ಯಾಸ್ ವಿತರಣೆಯಲ್ಲಾಗುವ ಲೋಪಗಳ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಗಮನ ಸೆಳೆದ ಜಿಲ್ಲಾಧಿಕಾರಿಗಳು, ಮೂಲಭೂತ ಕರ್ತವ್ಯಗಳನ್ನೇ ಇಲಾಖೆ ಮಾಡುತ್ತಿಲ್ಲ. ಇಂದಿನ ಲೋಪದೋಷಗಳನ್ನು ಸರಿಪಡಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಜಾಗೃತಿ ಸಮಿತಿಯ ಕಾರ್ಯ ವೈಖರಿ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಸಮಗ್ರ ಮಾಹಿತಿ ಕುರಿತು ಫಲಕಗಳನ್ನು ಹಾಕುವ ಬಗ್ಗೆಯೂ ಆಹಾರ ನಿರೀಕ್ಷಕರು ಗಮನಹರಿಸಬೇಕು ಎಂದರು. ಜಾಗೃತಿ ಸಮಿತಿಯಲ್ಲಿರುವ ಮಹಿಳೆಯರು ನೀಡುವ ಅಭಿಪ್ರಾಯಗಳನ್ನು ಮುಂದಿನ ಸಭೆಯಲ್ಲಿ ತಿಳಿಸಬೇಕು. ಅವರ ಬೇಡಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಪಡಿತರ ಸಂಬಂಧ ದೂರು ದುಮ್ಮಾನ ಸ್ವೀಕರಿಸಲು ಜಿಲ್ಲಾ ಮಟ್ಟದಲ್ಲಿ ಒಂದು ಮೊಬೈಲ್ ನಂಬರ್ ಮತ್ತು ಸಿಬ್ಬಂದಿಯನ್ನು ನೇಮಿಸಬೇಕು ಎಂದು ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು 26 ಗ್ಯಾಸ್ ಏಜೆನ್ಸಿಗಳಿದ್ದು, 17 ಏಜೆನ್ಸಿಗಳು ನಗರದಲ್ಲಿವೆ. ಎಂದು ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಪಂಪ್ ವೆಲ್ ಬಸ್ ನಿಲ್ದಾಣ ನಿರ್ಮಾಣದ ರೂಪುರೇಷೆಗೆ ಸಮಿತಿ ರಚನೆ

ಮಂಗಳೂರು,ಮಾರ್ಚ್.19:ನಗರದ ಸ್ಟೇಟ್ ಬ್ಯಾಂಕ್ ನಲ್ಲಿರುವ ಖಾಸಗಿ ಬಸ್ ನಿಲ್ದಾಣವನ್ನು ಕಂಕನಾಡಿ ಪಂಪ್ ವೆಲ್ ನಲ್ಲಿ ನಿರ್ಮಿಸುವ ವಿಷಯದ ಬಗ್ಗೆ ಚರ್ಚಿಸಲು ಹಾಗೂ ಒಂದು ಒಳ್ಳೆ ವ್ಯವಸ್ಥೆ ಬಗ್ಗೆ ಪ್ಲಾನ್ ತಯಾರಿಸಲು ಸಭೆಯನ್ನು ಕರೆಯಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅವರು ಶುಕ್ರವಾರ(18-3-11)ರಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಹಾನಗರಪಾಲಿಕೆ,ಸಾರಿಗೆ ಇಲಾಖೆ,ಲೋಕೋಪಯೋಗಿ ಇಲಾಖೆ,ಬಸ್ ಮಾಲೀಕರ ಸಂಘದ ಪದಾಧಿಕಾರಿಗಳನ್ನೊಳಗೊಂಡ, ಪಂಪ್ ವೆಲ್ ಬಸ್ ನಿಲ್ದಾಣ ನಿರ್ಮಾಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪಂಪ್ ವೆಲ್ ಬಸ್ ನಿಲ್ದಾಣ ನಿರ್ಮಿಸಲು ಒಂದು ಕಮಿಟಿಯನ್ನು ರಚಿಸಿ,ಅವರ ಅಭಿಪ್ರಾಯವನ್ನು ಸಂಗ್ರಹಿಸಿಕೊಂಡು ವಿಷಯದ ಬಗ್ಗೆ ಖಾತರಿ ಮಾಡಿಕೊಂಡು ನಿಲ್ದಾಣದ ಕಾಮಗಾರಿಯನ್ನು ಮುಂದುವರಿಸಬಹುದಾಗಿದೆಯೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಕಮಿಟಿಯು ವಾರಕ್ಕೊಮ್ಮೆ ಸಭೆ ಸೇರಿ ಬಸ್ ನಿಲ್ದಾಣದ ಪ್ಲಾನ್ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ಕಮಿಟಿಯಲ್ಲಿ ಇಂಜಿನಿಯರ್ , ಕನ್ಸಲ್ಟೆಂಟ್, ಬಸ್ ಮಾಲೀಕರಾದ ರಾಜವರ್ಮ ಬಲ್ಲಾಳ್,ಬಸ್ ಮಾಲೀಕರ ಸಂಘದ ಕಾರ್ಯದರ್ಶಿಗಳಾದ ಅಜೀಜ್ ಪರ್ತಿಪಾಡಿ,ಸಹಾಯಕ ಪ್ರಾದೇಶಿಕ ಅಧಿಕಾರಿ,ಟ್ರಾಫಿಕ್ ಇನ್ಸ್ಪೆಕ್ಟರ್, ಮೂಡಾದ ಅಧಿಕಾರಿ ಸೇರಿದಂತೆ ಒಟ್ಟು ಏಳು ಸದಸ್ಯರ ಒಂದು ಕಮಿಟಿಯನ್ನು ರಚಿಸಲಾಯಿತು. ಈ ಕಮಿಟಿ ಸಭೆ ಸೇರಿ ಬಸ್ ನಿಲ್ದಾಣದ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಿ,ಅದರಂತೆ 15 ದಿನಗಳೊಳಗೆ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಬಹುದೆಂದು ಜಿಲ್ಲಾಧಿಕಾರಿಗಳು ಅಭಿಪ್ರಾಯ ಪಟ್ಟರು.ಕನ್ಸಲ್ಟೆಂಟ್ ಮತ್ತು ಇಂಜಿನಿಯರ್ ರವರು ಬೆಂಗಳೂ ರಿನಲ್ಲಿ ನಿರ್ಮಾಣ ವಾಗಿರುವ ಕೆಲವೊಂದು ಬಸ್ ನಿಲ್ದಾಣ ಗಳನ್ನು ನೋಡಿ ಕೊಂಡು ಪ್ಲಾನ್ ತಯಾರಿಸ ಬಹುದಾಗಿದೆ. ಹೊಸ ಬಸ್ ನಿಲ್ದಾಣದಲ್ಲಿ ಗರಿಷ್ಠ ಪ್ರಮಾಣದ ಬಸ್ ಗಳು ಬಂದು ಹೋಗುವಂತೆ ವ್ಯವಸ್ಥೆಯನ್ನು ಮಾಡಬೇಕೆಂದು ತಿಳಿಸಿದರು.ಮಂಗಳೂರಿನಲ್ಲಿ ಸುಮಾರು 250 ಬಸ್ ಗಳು ದಿನವೊಂದಕ್ಕೆ ಕನಿಷ್ಠ 6 ಬಾರಿಯಾದರೂ ನಿಲ್ದಾಣಕ್ಕೆ ಬಂದು ಹೋಗುತ್ತಿರುತ್ತದೆ. ಅಲ್ಲದೆ ಶಿವಮೊಗ್ಗ,ಉಡುಪಿ,ಕಾಸರಗೋಡು ಮುಂತಾದ ಕಡೆಗಳಲ್ಲಿ ನೀಡಿರುವ ಪರವನಿಗೆಯ ಬಸ್ಸುಗಳು ಕೂಡಾ ಬಂದು ಹೋಗುತ್ತಿರುತ್ತದೆಯೆಂದು ಸಭೆಯಲ್ಲಿ ಚರ್ಚಿಸಲಾಯಿತು.ಮುಂದಿನ 20 ವರ್ಷಗಳ ಬಳಿಕ ಮಂಗಳೂರಿನಲ್ಲಾಗಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಸ್ ನಿಲ್ದಾಣದ ಯೋಜನೆ ರೂಪಿಸುವ ಹೊಣೆಗಾರಿಕೆಯನ್ನು ಸಮಿತಿಗೆ ವಹಿಸಲಾಗಿದೆ. ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ .ಕೆ.ವಿ.ವಿಜಯಪ್ರಕಾಶ್, ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್,ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು,ಲೋಕೋಪಯೋಗಿ ಇಲಾಖೆ ಅಧಿಕಾರಿಗಳು,ಮೂಡಾದ ಆಯಕ್ತ ಮಧುಕರ್ ಗಡ್ಕರ್ ಹಾಗೂ ಬಸ್ ಮಾಲೀಕರುಗಳು ಪಾಲ್ಗೊಂಡಿದ್ದರು.

ನಗರದ ಸಿಟಿ ಬಸ್ ಪ್ರಥಮ ಸ್ಟೇಜಿನ ದರ ಏರಿಕೆ

ಮಂಗಳೂರು,ಮಾರ್ಚ್.19:ಪ್ರಾದೇಶಿಕ ಸಾರಿಗೆ ಪ್ರಾಧಿಕಾರ,ದ.ಕ.ಮಂಗಳೂರು ಇವರು ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಸಿಟಿ ಬಸ್ಸುಗಳ ನಗರ ಹಾಗೂ ಗ್ರಾಮಾಂತರ ಪ್ರಯಾಣ ದರವನ್ನು ಪ್ರಥಮ ಸ್ಟೇಜಿನಲ್ಲಿ ರೂ.4.00 ರಿಂದ ರೂ.4.50 ಕ್ಕೆ ದಿನಾಂಕ 16-3-11 ರಂದು ಪರಿಷ್ಕರಣೆ ಮಾಡಿರುತ್ತದೆ. ಬಾಕಿ ಉಳಿದ ಸ್ಟೇಜಿನಲ್ಲಿ ಪರಿಷ್ಕರಣೆ ಮಾಡದೇ 21-1-11 ರ ದರ ಪರಿಷ್ಕರಣಾ ಪಟ್ಟಿಯಂತೆಯೇ ಮುಂದುವರಿಯುವುದೆಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.
ನಗರ ಸಿಟಿ ಬಸ್ ದರ :
ಸ್ಟೇಜ್ ನಂಬ್ರ ದೂರ ಕಿ.ಮೀ.ಗಳಲ್ಲಿ 21-1-11 ರಂದು ನಿಗಧಿ ಪಡಿಸಿದ ದರ 16-3-11ರಂದು ನಿಗಧಿಪಡಿಸಿದ ದರ
1 0.1-2.0 4.0 4.50
2 2.1-4.0 5.0 5.0
3 4.1-6.0 6.0 6.0
4 6.1-8.0 7.0 7.0
5 8.1-10.0 7.0 7.0
6 10.1-12.0 8.0 8.0
7 12.1-14.0 8.0 8.0
8 14.1-16.0 9.0 9.0
9 16.1-18.0 9.0 9.0
10 18.1-20.0 10.0 10.0
ಗ್ರಾಮಾಂತರ ಸಿಟಿ ಬಸ್ ದರ:-
ಸ್ಟೇಜ್ ನಂಬ್ರದೂರ ಕಿ.ಮೀ.ಗಳಲ್ಲಿ21-1-11 ರಂದು ನಿಗಧಿ ಪಡಿಸಿದ ದರ16-3-11ರಂದು ನಿಗಧಿಪಡಿಸಿದ ದರ
1 0.1-2.0 4.0 4.50
2 2.1-4.0 5.0 5.0
3 4.1-6.0 6.0 6.0
4 6.1-8.0 6.0 6.0
5 8.1-10.0 7.0 7.0
6 10.1-12.0 7.0 7.0
7 12.1-14.0 8.0 8.0
8 14.1-16.0 9.0 9.0
9 16.1-18.0 10.0 10.0
10 18.1-20.0 11.0 11.0
11 20.1-22.0 12.0 12.0
12 22.1-24.0 13.0 13.0
13 24.1-26.0 14.0 14.0
14 26.1-28.0 15.0 15.0

ಮಹಿಳೆಯರ ಸಂರಕ್ಷಣೆಗೆ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ರಚನೆ

ಮಂಗಳೂರು,ಮಾರ್ಚ್.19:ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಹಾಗೂ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕಾನೂನು ಮತ್ತು ಸುವ್ಯವಸ್ಥೆ,ಆರೋಗ್ಯ ಮತ್ತು ಮಾನವ ಸಂಪನ್ಮೂಲಗಳು ಹಾಗೂ ಇತರೆ ಇಲಾಖೆಗಳು ಒದಗಿಸುತ್ತಿರುವ ಸೇವೆಗಳ ನಡುವೆ ಪರಿಣಾಮಕಾರಿ ಸಮನ್ವಯ ಮಾಡಲು ಹಾಗೂ ನಿಯಮಿತವಾಗಿ ಪರಿಶೀಲಿಸಲು ಈ ಕೆಳಕಂಡ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ.
ತಾಲ್ಲೂಕು ತಹಶೀಲ್ದಾರರು ಅಧ್ಯಕ್ಷರಾಗಿದ್ದು,ಸದಸ್ಯರು ಗಳಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯರು,ಅರಕ್ಷಕ ವೃತ್ತ ನಿರೀಕ್ಷಕರು,ಸರ್ಕಾರಿ ಸಹಾಯಕ ಅಭಿಯೋಜಕರು,ತಾಲ್ಲೂಕು ಆರೋಗ್ಯಾಧಿಕಾರಿಗಳು, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರು,ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಕಾರ್ಯ ನಿರ್ವಹಿಸುತ್ತಿರುವ ಒಂದು ಸೇವಾ ಸಂಸ್ಥೆ, ಹಾಗೂ ಒಂದು ರಕ್ಷಣಾ ಗೃಹದ ತಲಾ ಒಬ್ಬೊಬ್ಬ ಪ್ರತಿನಿಧಿಯನ್ನು ಅಧ್ಯಕ್ಷರು ನಾಮನಿರ್ದೇಶನ ಮಾಡುವರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ತಾಲ್ಲೂಕು ಸಂರಕ್ಷಣಾಧಿಕಾರಿಗಳು ಸಮಿತಿ ಸದಸ್ಯ ಕಾರ್ಯದರ್ಶಿ ಗಳಾಗಿರುತ್ತಾರೆ.
ಈ ಸಮಿತಿಯು ನೊಂದ ಮಹಿಳೆಯರಿಗೆ ನ್ಯಾಯ ಒದಗಿಸುವಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸ್ಥಾಪಿಸುವುದಾಗಿದೆಯೆಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪನಿರ್ದೇಶಕರು ತಿಳಿಸಿರುತ್ತಾರೆ.

'ಹೈನುಗಾರಿಕೆ ಪ್ರೋತ್ಸಾಹಿಸಲು 19795 ಫಲಾನುಭವಿಗಳಿಗೆ 14.33 ಕೋಟಿ ರೂ. ವಿತರಣೆ'

ಮಂಗಳೂರು,ಮಾರ್ಚ್.19:ಹೈನುಗಾರಿಕೆ ಲಾಭದಾಯಕವಾಗಿಸಲು ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ ರೂ.2ರಂತೆ ಪ್ರೋತ್ಸಾಹಧನವನ್ನು 9-9-2008ರಿಂದ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಈವರೆಗೆ ಪಶುಸಂಗೋಪನೆ ಇಲಾಖೆ 19,795 ಫಲಾನುಭವಿಗಳಿಗೆ 14.33 ಕೋಟಿ ರೂ. ವಿತರಿಸಿದೆ ಎಂದು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕರಾದ ಡಾ. ಕೆ. ವಿ ಹಲಗಪ್ಪ ಅವರು ಹೇಳಿದರು.ಅವರು ಮಾರ್ಚ್ 18 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ವಾರ್ತಾ ಇಲಾಖೆ ಮತ್ತು ಕನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, ವಿಸ್ತರಣಾ ಶಿಕ್ಷಣ ಕೇಂದ್ರ ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಇವರು ಆಯೋಜಿಸಿದ್ದ 'ಸಮಗ್ರ ಕೃಷಿಯಲ್ಲಿ ಹೈನುಗಾರಿಕೆ' ಕುರಿತ ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡಿದರು.ಇಲಾಖೆಯ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಜಿಲ್ಲೆಯಲ್ಲಿ 2007ರ ಜಾನುವಾರು ಗಣತಿ ಪ್ರಕಾರ ಒಟ್ಟು 6,65,520 ಜಾನುವಾರುಗಳಿವೆ. ಹಸುಗಳು ಒಟ್ಟು 3,96,609, ಎಮ್ಮೆ 15,119, ಕುರಿ 307, ಮೇಕೆ 25,749, ಹಂದಿ 5332, ನಾಯಿ 2,21,401, ಇತರೆ 1003, ಹಾಗೂ ಕುಕ್ಕುಟ 13.22,880. ಇಂತಹ ವಿವಿಧ ಜಾನುವಾರುಗಳ ಆರೋಗ್ಯ ರಕ್ಷಣೆ ಇಲಾಖೆಯ ಧ್ಯೇಯವಾಗಿದೆ ಎಂದರು. ಕೋಳಿ ಸಾಕಣೆ, ಹಂದಿ ಸಾಕಣೆ, ಮೇವು ಅಭಿವೃದ್ಧಿ, ಕ್ಷೇತ್ರಾಭಿವೃದ್ದಿಗೆ ಪ್ರೋತ್ಸಾಹ ಧನದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೋಳಿ ಸಾಕಣೆಗೆ ವಿಫುಲ ಅವಕಾಶವಿದ್ದು, ಇಲಾಖೆಯಿಂದ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸ್ವಸಹಾಯ ಸಂಘದ ಸದಸ್ಯರಿಗೆ ಈ ಕೇಂದ್ರದ ಮೂಲಕ ಗಿರಿರಾಜ ಕೋಳಿಗಳನ್ನು ನೀಡುವ ವ್ಯವಸ್ಥೆಯಿದೆ ಎಂದರು. ಜಾನುವಾರು ವಿಮಾ ಯೋಜನೆಯ ಲಾಭವನ್ನು ಕೃಷಿಕರಿಗೆ ವಿವರಿಸಿದರು.
ಪರಿಶಿಷ್ಟ ಜಾತಿ/ಪಂಗಡಗಳ ರೈತರಿಗೆ ರಾಜ್ಯ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ 2 ಮಿಶ್ರ ತಳಿ ಹಸು ಖರೀದಿಗೆ ಘಟಕ ವೆಚ್ಚ 70,000ಗಳಲ್ಲಿ ಶೇ. 60 ಸಹಾಯಧನ (42,000), ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಗಿರಿಜನ ಉಪಯೋಜನೆಯಡಿ ಶೇ. 75ರಷ್ಟು (52,500) ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿಯ ಅರ್ಹ ಫಲಾನುಭವಿಗಳಿಗೆ ಮಿಶ್ರತಳಿ ಹಸು ಘಟಕ, ಗಿರಿರಾಜ ಕೋಳಿ ಘಟಕಗಳನ್ನು ನೀಡುವ ಅವಕಾಶವಿದೆ. ಘಟಕ ವೆಚ್ಚದ ಶೇ. 60ರಷ್ಟು ಸಹಾಯಧನವಿರುತ್ತದೆ. ಅದೇ ರೀತಿ ಕೋಳಿ ಘಟಕಕ್ಕೆ ಒಟ್ಟು ವೆಚ್ಚ ರೂ. 500 ಅದರಲ್ಲಿ 300 ಸಹಾಯಧನವಿರುತ್ತದೆ. ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ ಬಗ್ಗೆ ಸವಿವರ ಮಾಹಿತಿಯನ್ನು ಪವರ್ ಪಾಯಿಂಟ್ ಮೂಲಕ ರೈತರಿಗೆ ನೀಡಿದರು. ಬಳಿಕ ರೈತರ ಬೇಡಿಕೆಯಂತೆ ಏಪ್ರಿಲ್ ತಿಂಗಳಲ್ಲಿ ಸುಳ್ಯದಲ್ಲಿ ದನ ಮೇಳ ಆಯೋಜಿಸುವುದಾಗಿಯೂ ಉಪನಿರ್ದೇಶಕರು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮೀನುಗಾರಿಕಾ ಮಹಾವಿದ್ಯಾಲಯದ ಮಾಜಿ ವಿಸ್ತರಣಾ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಶಿವಾನಂದ ಮೂರ್ತಿಯವರು ಸಮಗ್ರ ಕೃಷಿಗೆ ರೈತರು ಒತ್ತು ನೀಡುವುದರಿಂದಾಗುವ ಅನುಕೂಲಗಳನ್ನು ವಿವರಿಸಿದರು. ಬೆಳ್ಳಾರೆ ಗ್ರಾಮಪಂಚಾಯತ್ ಅಧ್ಯಕ್ಷರಾದ ಮಾಧವ ಗೌಡ ಅವರು ಸಂಕಿರಣ ಉದ್ಘಾಟಿಸಿ, ಮಾಹಿತಿ ಕಾರ್ಯಕ್ರಮಗಳ ಸದುಪಯೋಗ ಪಡೆಯುವಂತೆ ಸಲಹೆ ಮಾಡಿದರು. ತಾಲೂಕು ಪಂಚಾಯತ್ ಸದಸ್ಯರಾದ ಅನಿಲ್ ರೈ, ಬೆಳ್ಳಾರೆ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಕಂದಸ್ವಾಮಿ, ವಿಸ್ತರಣಾ ಕೇಂದ್ರದ ಮುಖ್ಯಸ್ಥರಾದ ಡಾ. ಎಚ್. ಎನ್. ಆಂಜನೇಯಪ್ಪ ಅವರು ಮುಖ್ಯ ಅತಿಥಿಗಳಾಗಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು. ಮೀನುಗಾರಿಕಾ ವಿಶ್ವವಿದ್ಯಾಲಯದ ಮಲ್ಲೇಶ್ ಅವರು ವಂದಿಸಿದರು.

Friday, March 18, 2011

ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ಉದ್ಯಾನವನ ನಿರ್ವಹಣೆ

ಮಂಗಳೂರು,ಮಾ.18: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಸಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಸ್ತೆ ಉದ್ಯಾನವನ ನಿರ್ವಹಣೆ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಾಲನೆ ನೀಡಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗುರುತಿಸಲಾದ 22 ಪ್ರಮುಖ ರಸ್ತೆಗಳು ಹಾಗೂ ಐದು ಉದ್ಯಾನವನಗಳ ನಿರ್ವಹಣೆಗಾಗಿ ಕಂಕನಾಡಿ ಕರಾವಳಿ ವೃತ್ತದಿಂದ ಪಂಪ್ ವೆಲ್ ವೃತ್ತದವರೆಗಿನ ರಸ್ತೆ ನಿರ್ವಹಣೆಗಾಗಿ ದುರ್ಗಾ ಫೆಸಿಲಿಟೀಸ್ ಸಂಸ್ಥೆ ಮುಂದೆ ಬಂದಿದೆ. ಸಭೆಯಲ್ಲಿ ವಿವಿಧ ಬ್ಯಾಂಕ್ ಹಾಗೂ ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಈಗಾಗಲೇ 15 ಪ್ರಮುಖ ರಸ್ತೆಗಳ ಕಾಂಕ್ರಿಟೀಕರಣ ಪೂರ್ಣಗೊಂಡಿದೆ. ನಗರವನ್ನು ಸುಂದರವಾಗಿಡುವುದರ ಜೊತೆ ರಸ್ತೆಗಳನ್ನು, ಉದ್ಯಾನವನಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾರ್ವಜನಿಕ ಸಂಘ ಸಂಸ್ಥೆಗಳು, ಉದ್ಯಮದಾರರು, ರಾಷ್ಟ್ರೀಕೃತ ಬ್ಯಾಂಕ್ ಗಳು ಆಸಕ್ತಿ ವಹಿಸುವುದರೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಕೋಶದ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾ.27: ಮನಪಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ವಿಶೇಷ ಅಭಿಯಾನ

ಮಂಗಳೂರು,ಮಾರ್ಚ್.18: ಮಂಗಳೂರು ಮಹಾನಗರ ವ್ಯಾಪ್ತಿಯ ಆಯ್ದ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ವಿಶೇಷ ಅಭಿಯಾನವನ್ನು ಮಾರ್ಚ್ 27 ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಪಾಲಿಕೆ ವ್ಯಾಪ್ತಿ ಯಲ್ಲಿ ಒಂಭತ್ತು ಪ್ರದೇಶ ಗಳಲ್ಲಿ ವಿವಿಧ ಸಂಘ ಸಂಸ್ಥೆ ಗಳು ಹಾಗೂ ಸಾರ್ವ ಜನಿಕ ಸಹ ಭಾಗಿತ್ವ ದೊಂದಿಗೆ ಒಂದು ದಿನದ ಸಾಮೂಹಿಕ ಶುಚಿತ್ವದ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಎನ್ನೆಸ್ಸೆಸ್ ತಂಡದವರು ಬಲ್ಮಠ ಮಿಶನ್ ಕಂಪೌಂಡ್ ಅತ್ತಾವರ, ಕೆಎಂಸಿ, ಪ್ರದೇಶದ ರಸ್ತೆ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಎಂ.ಸಿ.ಆರ್.ಟಿ. ಸಂಘಟನೆಯವರು ಕದ್ರಿ ಟೋಲ್ ಗೇಟ್ ನಿಂದ ನಂತೂರು ಪ್ರದೇಶ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಜೆಪ್ಪು ಸಂಘಟನೆಯವರು, ಫಾದರ್ ಮುಲ್ಲರ್ ಆಸ್ಪತ್ರೆ, ನಂದಿಗುಡ್ಡೆ ಪ್ರದೇಶ, ಕ್ಯಾಂಪಸ್ ಫ್ರಂಟ್ ಇಂಡಿಯಾದ ವತಿಯಿಂದ ಶ್ರೀನಿವಾಸ ಕಾಲೇಜು ಹಿಂಭಾಗ, ಸುಭಾಷ್ ನಗರ ಪ್ರದೇಶ, ಸರಕಾರಿ ನೌಕರರ ಸಂಘಟನೆಯಿಂದ ಉರ್ವಸ್ಟೋರ್, ಹ್ಯಾಟ್ ಹಿಲ್, ಪೊಲೀಸ್ ಯೂತ್ ಕ್ಲಬ್ ವತಿಯಿಂದ ಹೊನ್ನಕಟ್ಟೆ, ಕಾನ ರಸ್ತೆ ಪ್ರದೇಶ, ಗೃಹ ರಕ್ಷಕ ದಳ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಜಿಲ್ಲಾಧಿಕಾರಿ ಎಸ್ಪಿ, ಐಜಿಪಿ ಕಚೇರಿ ಆವರಣ, ಬೈಕಂಪಾಡಿ ರೋಟರಿ ಕ್ಲಬ್ ವಿದ್ಯಾರ್ಥಿ ಸಂಘ, ಗೃಹರಕ್ಷಕದಳ ಮತ್ತು ಬೈಕಂಪಾಡಿ ಕೈಗಾರಿಕಾ ಪ್ರದೇಶ ಸಂಘಟನೆ ವತಿಯಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದೆ ಬಂದಿದ್ದಾರೆ. ಮಂಗಳೂರು ಪರಿಸರದಲ್ಲಿ ಶಾಶ್ವತವಾಗಿ ಸ್ವಚ್ಛತೆಯನ್ನು ಕಾಪಾಡಲು ಜನಜಾಗೃತಿ ಮುಖ್ಯ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಸ್ಥಳೀಯ ಜನರನ್ನು ಸೇರಿಸಿ ತಮ್ಮ ಪರಿಸರದಲ್ಲಿ ಕಸಕಡ್ಡಿ, ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಜಾಗೃತಿ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಅಭಿಯಾನದಲ್ಲಿ ಅಧಿಕಾರಿಗಳೊಂದಿಗೆ ಸ್ಥಳೀಯರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ತಮ್ಮ ಪರಿಸರವನ್ನು ತಾವು ಶುಚಿಯಾಗಿಟ್ಟುಕೊಳ್ಳಬೇಕೆಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿಸುವುದು ಮತ್ತು ಆ ಮೂಲಕ ಮಂಗಳೂರಿನಲ್ಲಿ ಜನಸಹಭಾಗಿತ್ವದಲ್ಲಿ ಶಾಶ್ವತವಾಗಿ ಶುಚಿತ್ವವನ್ನು ಕಾಪಾಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಉಳಿದ ಪ್ರದೇಶಗಳಲ್ಲೂ ಮುಂದಿನ ಹಂತದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆಸಕ್ತ ಸಂಘ ಸಂಸ್ಥೆಗಳು, ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಡಾ. ವಿಜಯ ಪ್ರಕಾಶ್ ಸ್ವಾಗತಿಸಿ, ಅಭಿಯಾನದ ಬಗ್ಗೆ ವಿವರ ನೀಡಿದರು.

Thursday, March 17, 2011

98 ನೋಂದಾಯಿಸಲ್ಪಡದ ಖಾಸಗೀ ವೈದ್ಯಕೀಯ ಸಂಸ್ಥೆಗಳನ್ನು ಮುಚ್ಚಲು ನೋಟೀಸ್

ಮಂಗಳೂರು, ಮಾರ್ಚ್.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ನೋಂದಾಯಿಸಲ್ಪಡದ ಖಾಸಗೀ ವೈದ್ಯಕೀಯ ಸಂಸ್ಥೆಗಳನ್ನು ಮುಚ್ಚಲು ನೋಟೀಸ್ ನೀಡಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸೂಚಿಸಿದರು.ಇಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಸರ್ಕಾರದ ಕಾನೂನನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಅನುಷ್ಠಾನಕ್ಕೆ ನಿರ್ದೇಶನ ನೀಡಿದ್ದು, ಆದೇಶ ಪಾಲನೆಗೆ ಎಲ್ಲ ರೀತಿಯ ನೆರವನ್ನು ನೀಡುವುದಾಗಿಯೂ ಘೋಷಿಸಿದರು.

ಸೆಕ್ಷನ್ 22 ರಡಿಯಲ್ಲಿ ಅಂತಿಮ ನೋಟೀಸು ನೀಡಲು ಸೂಚಿಸಿದ್ದು, ಪಾಲನೆಗೆ ಸಮಯಮಿತಿ ನಿಗದಿಗೊಳಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹೇಳಿದರು. ಮಂಗಳೂರಿನಲ್ಲಿ 69, ಬಂಟ್ವಾಳದಲ್ಲಿ 14, ಪುತ್ತೂರಿನಲ್ಲಿ 9, ಸುಳ್ಯದಲ್ಲಿ 5, ಬೆಳ್ತಂಗಡಿಯಲ್ಲಿ 1 ನೋಂದಾಯಿಸಲ್ಪಡದ ಅನಧಿಕೃತ ಸಂಸ್ಥೆಗಳನ್ನು ಗುರುತಿಸಲಾಗಿದೆ. 772 ಸಂಸ್ಥೆಗಳಿಗೆ ನ್ಯೂನತೆ ಸರಿಪಡಿಸುವಂತೆ ನೋಟೀಸು ಜಾರಿ ಮಾಡಲಾಗಿದೆ. 79 ಸಂಸ್ಥೆಗಳು ನೋಂದಾವಣೆಗೆ ಅರ್ಹವಾಗಿವೆ. 24 ಅಕ್ಟೋಬರ್ 2010ರ ಬಳಿಕ 3 ಬಾರಿ ನೋಂದಾವಣೆಗೆ ಅವಕಾಶ ನೀಡಿ ಸಮಯಾವಕಾಶದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಸಂಸ್ಥೆಗಳಿಗೆ ಇನ್ನಷ್ಟು ಕಾಲಾವಕಾಶ ನೀಡುವ ಬಗ್ಗೆ ಚಿಂತಿಸಲೂ ಸಹ ಸಾಧ್ಯವಿಲ್ಲ ಎಂದ ಜಿಲ್ಲಾಧಿಕಾರಿಗಳು, ಅನಧಿಕೃತ ಸಂಸ್ಥೆಗಳನ್ನು ಮುಚ್ಚಿಬಿಡಿ ಎಂದರು. ಇದುವರೆಗೆ ಮಂಗಳೂರಿನಿಂದ 940 ಅಜರ್ಿಗಳು ಬಂದಿದ್ದು, 384 ಸಂಸ್ಥೆಗಳನ್ನು ಸಮಿತಿ ಪರಿಶೀಲಿಸಿದೆ. ಇನ್ನುಳಿದ ಸಂಸ್ಥೆಗಳ ಪರಿಶೀಲನೆಗೆ ಈಗಾಗಲೇ 5 ತಂಡ ರಚಿಸಿದ್ದು, ಇನ್ನೂ ಹೆಚ್ಚಿನ ತಂಡ ರಚಿಸಲು ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. ಬಂಟ್ವಾಳದಲ್ಲಿ 184 ಅರ್ಜಿಗಳು ಬಂದಿದು, 179 ಸಂಸ್ಥೆಗಳನ್ನು ಸಮಿತಿ ಪರಿಶೀಲಿಸಿದೆ. ಪುತ್ತೂರಿನಲ್ಲಿ 179 ಅರ್ಜಿಗಳು ಬಂದಿದ್ದು, 179 ಪರಿಶೀಲನೆಯಾಗಿದೆ. ಸುಳ್ಯದಲ್ಲಿ 96ರಲ್ಲಿ 84 ಪರಿಶೀಲಿಸಲಾಗಿದೆ. ಬೆಳ್ತಂಗಡಿಯಲ್ಲಿ 106ರಲ್ಲಿ 73 ಪರಿಶೀಲಿಸಲಾಗಿದೆ. ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು, ಐ ಎಂ ಎ ಡಾಕ್ಟರ್ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ

ಮಂಗಳೂರು,ಮಾರ್ಚ್.17: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೂತನ ಸ್ಥಾಯಿ ಸಮಿತಿಗಳಿಗೆ ಗುರುವಾರ ನಡೆದ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ನಾಲ್ಕು ಸ್ಥಾಯಿ ಸಮಿತಿಗಳಿಗಷ್ಟೆ ಸದಸ್ಯರ ಆಯ್ಕೆ ನಡೆಯಿತು.
ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಪ್ರಥಮ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಪ್ರಕ್ರೀಯೆ ನಡೆಯಿತು.
ಜಿ.ಪಂ.ಸ್ಥಾಯಿ ಸಮಿತಿಗೆ ಆಯ್ಕೆ:
1.ಸಾಮಾನ್ಯ ಸ್ಥಾಯಿ ಸಮಿತಿ
ಧನಲಕ್ಷ್ಮೀ ಜನಾರ್ಧನ(ಅಧ್ಯಕ್ಷೆ), ಫಕೀರ ಎಂ., ಸಂಪತ್ ಕುಮಾರ್ ರೈ, ಸುನಿತಾ ಸುಚರಿತ ಶೆಟ್ಟಿ, ನಳಿನಿ ಶೆಟ್ಟಿ, ಮಮತಾ ಗಟ್ಟಿ, ದೇವರಾಜ್ ಕೆ.ಎಸ್.(ಸದಸ್ಯರು).
2.ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ
ಶೈಲಜಾ ಭಟ್(ಅಧ್ಯಕ್ಷೆ), ಆಶಾ ತಿಮ್ಮಪ್ಪ ಗೌಡ, ದೇವಕಿ ಸಂಜೀವ ಗೌಡ, ಆರ್.ಚೆನ್ನಪ್ಪ ಕೋಟ್ಯಾನ್, ರಿತೇಶ್ ಶೆಟ್ಟಿ, ಪ್ರಕಾಶ್, ಸರಸ್ವತಿ ಕಾಮತ್(ಸದಸ್ಯರು).
3.ಸಾಮಾಜಿಕ ನ್ಯಾಯ ಸಮಿತಿ
ಜನಾರ್ದನ ಗೌಡ, ಕೆ.ಮೀನಾಕ್ಷಿ ಮಂಜುನಾಥ್, ಬಾಲಕೃಷ್ಣ ಸುವರ್ಣ, ಕೆ.ಕೊರಗಪ್ಪ ನಾಯ್ಕ್, ಸಿ.ಕೆ.ಚಂದ್ರಕಲಾ, ಎನ್.ಎಸ್.ಕರೀಂ, ಮೆಲ್ವಿನ್ ಡೋಜ.
4.ಶಿಕ್ಷಣ ಮತ್ತು ಆರೋಗ್ಯ ಸಮಿತಿ
ಈಶ್ವರ್ ಕಟೀಲ್, ಸತೀಶ್ ಕುಂಪಲ, ಸಾವಿತ್ರಿ ಎಚ್.ಎಸ್., ಜಯಶ್ರೀ, ಗಿರಿಜ, ಎಂ.ಎಸ್.ಮಹಮ್ಮದ್, ಯಶವಂತಿ ಆಳ್ವ.
ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿ ಶೋಧನೆ ಮತ್ತು ಯೋಜನಾ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ ಮತ್ತು ಶಿಕ್ಷಣ ಮತ್ತು ಆರೋಗ್ಯ ಸಮಿತಿಗೆ ಸದಸ್ಯರ ಆಯ್ಕೆ ಸುಲಲಿತವಾಗಿ ನಡೆಯಿತು. ಕೃಷಿ ಮತ್ತು ಕೈಗಾರಿಕಾ ಸಮಿತಿಗೆ ಆಯ್ಕೆಯಲ್ಲಿ ಗೊಂದಲ ನಡೆಯಿತು. ಅಧ್ಯಕ್ಷೆ ಶೈಲಜಾ ಭಟ್ ಸಭೆಯನ್ನು ಅರ್ಧ ತಾಸು ಮುಂದೂಡಿದರು. ಈ ನಡುವೆ ಪಕ್ಷದ ಇತರ ಸದಸ್ಯರೊಂದಿಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಶೈಲಜಾ ಭಟ್ ಸಮಸ್ಯೆ ಬಗೆಹರಿಸಲು ಯತ್ನಿಸಿದರು.ಅಪರಾಹ್ನ 3.20ಕ್ಕೆ ಮತ್ತೆ ಸಭೆ ಆರಂಭಗೊಂಡಿತು. ಆದರೆ ಸರಿಯಾದ ನಿರ್ಣಯ ಕೈಗೊಳ್ಳಲು ಅಸಾಧ್ಯವಾದ ಕಾರಣ ಅವರು ಸಭೆಯನ್ನು ಮುಂದೂಡಿ ಶೀಘ್ರದಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ತಿಳಿಸಿದರು. ಇದರಿಂದ ಕೃಷಿ ಮತ್ತು ಕೈಗಾರಿಕಾ ಸಮಿತಿಯ ಆಯ್ಕೆ ಪ್ರಕ್ರಿಯೆ ಗೊಂದಲದಲ್ಲೇ ಕೊನೆಗೊಂಡಿತು.

ಪ್ರವಾಸೋದ್ಯಮ ಕಾಮಗಾರಿಗಳ ಪ್ರಗತಿ ಪರಿಶಿಲನೆ

ಮಂಗಳೂರು,ಮಾರ್ಚ್.17: ದಕ್ಷಿಣಕನ್ನಡ ಜಿಲ್ಲೆಯ ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಯವರೆಗೆ ತೂಗು ಸೇತುವೆ ನಿರ್ಮಾಣವನ್ನು ಪೂರೈಸಲು , ಅನುದಾನಕ್ಕೆ ಮಂಜೂರಾತಿ ದೊರಕಿದ್ದು, ಕೂಡಲೇ ಕೆಲಸವನ್ನು ಪೂರೈಸುವಂತೆ ನಿರ್ಮಿತಿ ಕೇಂದ್ರದವರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು. ಅವರು ಮಾರ್ಚ್,16 ರಂದು ಪ್ರವಾಸೋದ್ಯಮ ಇಲಾಖೆಯಿಂದ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ದಕ್ಷಿಣಕನ್ನಡ ಜಿಲ್ಲೆಯ ಪಣಂಬೂರು, ತಣ್ಣಿರುಬಾವಿ ಬೀಚ್,ಉಳ್ಳಾಲ ಸೋಮೇಶ್ವರ ಕಡಲತೀರ ಅಭಿವೃದ್ಧಿ ಕಾಮಗಾರಿಗಳನ್ನು ಮೇ 31ರೊಳಗೆ ಪೂರೈಸುವಂತೆ ತಿಳಿಸಿದರು. ಬೆಳ್ತಂಗಡಿಯ ಜಮಲಾಬಾದ ಕೋಟೆಯ ಪ್ರದೇಶದಲ್ಲಿ ಕುಡಿಯುವ ನೀರು, ಮೆಟ್ಟಿಲುಗಳ ದುರಸ್ತಿ ಮತ್ತು ಸಂಪರ್ಕ ರಸ್ತೆಯನ್ನು ಮಾಡುವರೇ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಇರುವುದಾಗಿ ಚರ್ಚಿಸಲಾಯಿತು.ಈ ಬಗ್ಗೆ ಅನುಮತಿಯನ್ನು ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಲ್ಲದೇ ಸರಕಾರದ ವತಿಯಿಂದ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಪ್ರವಾಸೋದ್ಯಮ ಮಾಹಿತಿಗಳನ್ನೊಳಗೊಂಡ ಕೈಪಿಡಿಯನ್ನು ಪ್ರವಾಸೋದ್ಯಮ ಇಲಾಖೆಯಲ್ಲಿರುವ ಅನುದಾನದಲ್ಲಿ,ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಯಾರಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಈ ಕೈಪಿಡಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸಾಂಸ್ಕೃತಿಕ ವಿಚಾರಗಳು, ಪ್ರವಾಸೋದ್ಯಮ ಸ್ಥಳಗಳ ವಿವರ,ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳ ವಿವರ, ನಕ್ಷೆಗಳು,ಎಲ್ಲಾ ವಿವರಗಳು ಈ ಕೈಪಿಡಿಯಲ್ಲಿ ಒಳಗೊಂಡಿರತಕ್ಕದ್ದು ಎಂದು ಸೂಚಿಸಿದರು.
ಸಭೆಯಲ್ಲಿ ಸಹಾಯಕ ನಿರ್ದೇಶಕರಾದ ಮಹೇಶ್,ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು,ನಿರ್ಮಿತಿ ಕೇಂದ್ರದ ಅಧಿಕಾರಿಗಳು,ಪಿಲಿಕುಳ ನಿಸರ್ಗಧಾಮದವರು ಉಪಸ್ಥಿತರಿದ್ದರು.