Friday, March 11, 2011

ಪ್ಲಾಸ್ಟಿಕ್ ಮುಕ್ತ ಮಂಗಳೂರಿಗಾಗಿ ಆಂದೋಲನ-ಸುಭೋದ್ ಯಾದವ್

ಮಂಗಳೂರು,ಮಾರ್ಚ್.11:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಪ್ಲಾಸ್ಟಿಕ್ ಕೈಚೀಲಗಳ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇದರ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕೈಚೀಲ ಬಳಕೆ ನಿಷೇಧ ಆದೇಶ ಕಟ್ಟುನಿಟ್ಟಾಗಿ ಅನುಷ್ಠಾನಕ್ಕಾಗಿ ವಿಶೇಷ ಆಂದೋಲನ ಹಮ್ಮಿಕೊಳ್ಳುವುದಾಗಿ ದ.ಕ.ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಈ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಈ ಹಿಂದೆ 20 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಚೀಲ ಬಳಕೆಗೆ ನಿಷೇಧ ಹೇರಲಾಗಿತ್ತು.ಆದರೆ ಇತ್ತೀಚಿನ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ 40 ಮೈಕ್ರನ್ ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುವಂತಿಲ್ಲ ಎಂಬುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದು,ಯಾರಾದರೂ ಈ ಆದೇಶ ಉಲ್ಲಂಘಿಸಿ 40 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಳಸಿದರೆ ಅಂತಹವರು ಕಾನೂನು ಕ್ರಮ ಎದುರಿಸಬೇಕಲ್ಲದೆ ರೂ.250/- ಗಳ ಜುಲ್ಮಾನೆಯನ್ನು ವಿಧಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.ಮೊದಲ ಬಾರಿಯ ತಪ್ಪಿಗೆ ರೂ.250/- ಜುಲ್ಮಾನೆ ನಂತರದ ತಪ್ಪಿಗೆ ರೂ.250/- ಮೊತ್ತ ಹೆಚ್ಚಾಗುವುದರ ಜೊತೆಗೆ ವ್ಯಾಪಾರ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ತಿಳಿಸಿದರು.
ಬಳಕೆಯಲ್ಲಿರುವ ಪ್ಲಾಸ್ಟಿಕ್ ನ ಗಾತ್ರ ಪರೀಕ್ಷಿಸಲು ಮೈಕ್ರಾನ್ ಮೀಟರ್ ಗಳನ್ನು ಸ್ವಯಂಸೇವಾ ಸಂಸ್ಥೆಗಳಾದ ಲಯನ್ಸ್ ನಿಂದ 5 ಹಾಗೂ ಚೇಂಬರ್ ಆಫ್ ಕಾಮರ್ಸ್ ನಿಂದ 5 ಸೆಟ್ ಗಳು ಉಚಿತವಾಗಿ ಒದಗಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ. ಕಲಿಯದವರಿಗಿಂತ ಕಲಿತವರೇ ಪರಿಸರಕ್ಕೆ ಅನಗತ್ಯ ಪ್ಲಾಸ್ಟಿಕ್ ಸೇರಿಸುತ್ತಿರುವುದು ವಿಷಾಧಕರ ಎಂದ ಜಿಲ್ಲಾಧಿಕಾರಿಗಳು ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ನಿಷೇಧಕ್ಕಾಗಿ ಸಾರ್ವಜನಿಕರು ಮುಂದಾಗಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜನಶಿಕ್ಷಣ ಕೇಂದ್ರದ ಶೀನಶೆಟ್ಟಿ,ಪ್ರಾದ್ಯಾಪಕಿ ವಿನುತ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ ,ಡಿಡಿಪಿಐ ಚಾಮೇಗೌಡ ಮುಂತಾದವರು ಉಪಸ್ಥಿತರಿದ್ದರು.