Thursday, March 10, 2011

ಜಿಲ್ಲಾ ಮಟ್ಟದ ಹಾಗೂ ಹಿರಿಯ ಅಧಿಕಾರಿಗಳಿಗೆ ಸೂಚನೆ

ಮಂಗಳೂರು,ಮಾರ್ಚ್.10:ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಸಾಂದರ್ಭಿಕ ರಜೆಯಲ್ಲಿ ತೆರಳುವ/ಕೇಂದ್ರಸ್ಥಾನವನ್ನು ಬಿಡುವಾಗ ಮತ್ತು ಬೆಂಗಳೂರು ಯಾ ಇತರ ಕಡೆಗಳಲ್ಲಿ ನಡೆಯುವ ಯಾವುದೇ ಸಭೆಗಳಿಗೆ ಹಾಜರಾಗಲು ಕೇಂದ್ರಸ್ಥಾನವನ್ನು ಬಿಡುವಂತಹ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಾರದೇ ಇರುವುದನ್ನು ಗಮನಿಸಲಾಗಿರುತ್ತದೆ.ಜಿಲ್ಲಾಧಿ ಕಾರಿಯವರು ಚುನಾಯಿತ ಪ್ರತಿನಿಧಿಗಳು,ಹಿರಿಯ ಅಧಿಕಾರಿಗಳು ಮತ್ತು ಕೆಲವು ಸಂದರ್ಭಗಳಲ್ಲಿ ಪತ್ರಕರ್ತರು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಿಚ್ಚಿಸುವ ಸಂದರ್ಭಗಳಲ್ಲಿ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು/ಹಿರಿಯ ಅಧಿಕಾರಿಗಳನ್ನು ಯಾವುದೇ ಸಂದರ್ಭದಲ್ಲಿ ರಜಾ ದಿನಗಳಲ್ಲೂ ಸಹ ದೂರವಾಣಿ ಅಥವಾ ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರದೇ ಇರುವುದು ಹಾಗೂ ಮೊವೈಲ್ ಸ್ವಿಚ್ ಆಫ್ ಆಗಿರುವುದನ್ನು ಸ್ವತ: ಗಮನಿಸಲಾಗಿದೆ. ಇದರಿಂದ ಜಿಲ್ಲಾಧಿಕಾರಿಯವರು ಸಂಬಂಧಪಟ್ಟವರಿಗೆ ಮಾಹಿತಿ ನೀಡಲು ಅಸಾಧ್ಯವಾಗಿರುವುದು ಮಾತ್ರವಲ್ಲದೆ ಜಿಲ್ಲಾಡಳಿತಕ್ಕೆ ಮುಜುಗರ ತರುವಂತಹ ವಿಷಯವು ಆಗಿರುತ್ತದೆ. ಸರಕಾರದ ಮಟ್ಟದಲ್ಲೂ ಕ್ಲಪ್ತ ಸಮಯಕ್ಕೆ ವರದಿ ನೀಡಲು ಅಡಚಣೆಯಾಗಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಇದರಿಂದ ಹಿನ್ನೆಡೆಯಾದಂತಾಗುತ್ತದೆ. ಆದ್ದರಿಂದ ಇನ್ನು ಮುಂದೆ ಯಾವುದೇ ಸಂದರ್ಭಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು/ಹಿರಿಯ ಅಧಿಕಾರಿಗಳು ಮೇಲ್ಕಂಡ ಸಂದರ್ಭದಲ್ಲಿ ಕೇಂದ್ರಸ್ಥಾನವನ್ನು ಬಿಡುವಾಗ ತಪ್ಪದೇ ಜಿಲ್ಲಾಧಿಕಾರಿಯವರ ಗಮನಕ್ಕೆ ತರತಕ್ಕದ್ದು. ಹಾಗೂ ತಮ್ಮ ಮೊಬೈಲ್ ದೂರವಾಣಿಯನ್ನು ತೆರೆದಿಡುವಂತೆ ಸೂಚಿಸಲಾಗಿದೆ. ಅದಲ್ಲದೇ ತಮ್ಮ ಅನುಪಸ್ಥಿತಿಯಲ್ಲಿ ಯಾವ ಅಧಿಕಾರಿಯವರು ದಿನನಿತ್ಯದ ಕಚೇರಿ ಕಾರ್ಯಗಳನ್ನು ನಿರ್ವಹಿಸುತ್ತಾರೆಂಬ ಮಾಹಿತಿಯೊಂದಿಗೆ ಅವರ ಮನೆಯ ದೂರವಾಣಿ ಸಂಖ್ಯೆ ಮತ್ತು ಮೊಬೈಲ್ ದೂರವಾಣಿ ಸಂಖ್ಯೆಯನ್ನು ತಪ್ಪದೇ ತಿಳಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಕ್ಷಿಣಕನ್ನಡ ಜಿಲ್ಲೆ ಮಂಗಳೂರು ಇವರು ಸೂಚಿಸಿದ್ದಾರೆ.