Friday, March 25, 2011

ಮಾ. 27 ರಂದು ನಗರ ಸ್ವಚ್ಛತೆಗೆ ಮಹಾ ಶ್ರಮದಾನ :ಸುಭೋದ್ ಯಾದವ್

ಮಂಗಳೂರು,ಮಾರ್ಚ್.25:ಹಚ್ಚ ಹಸಿರು ಹಾಗೂ ಪ್ರಗತಿಪರ ಮಂಗಳೂರಿಗಾಗಿ ನಗರದ 25 ಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ 9 ತಂಡಗಳಿಂದ ಮಹಾ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಮಾಡಿದ ಸಕಲ ಸಿದ್ಧತೆಗಳು ವ್ಯವಸ್ಥಿತವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ತಿಳಿಸಿದ್ದಾರೆ.ಅವರು ಗುರುವಾರ ಸಂಜೆ(24-3-11)ತಮ್ಮ ಕಚೇರಿಯಲ್ಲಿ ಈ ಸಂಬಂಧ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಘ ಸಂಸ್ಥೆಗಳೊಂದಿಗೆ ಆಗಿರುವ ವ್ಯವಸ್ಥೆಗಳ ಕುರಿತು ಚರ್ಚಿಸಿದರು.ಮಹಾಶ್ರಮದಾನ ಮಾರ್ಚ್ 27 ರಂದು ಬೆಳಿಗ್ಗೆ 7.00 ಗಂಟೆಗೆ ಆರಂಭವಾಗಲಿದೆ. ಬಲ್ಮಠ ಮಿಷನ್ ಕಂಪೌಂಡ್,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ತಾವರದಿಂದ ವೈದ್ಯನಾಥನಗರ, ಟೆಂಪಲ್,ಕದ್ರಿ ಟೋಲ್ಗೇಟ್ ,ನಂತೂರು,ಕದ್ರಿ ಪಾರ್ಕ್,ಕಂಕನಾಡಿ,ಫಾದರ್ ಮುಲ್ಲರ್ಸ್ ಆಸ್ಪತ್ರೆ ಯಿಂದ ನಂದಿಗುಡ್ಡೆಯವರೆಗೆ ,ಸುಭಾಶ್ ನಗರ,ಶ್ರೀನಿವಾಸ ಕಾಲೇಜು ಹಿಂಭಾಗ,ಉರ್ವಸ್ಟೋರ್ಸ್ ಸರಕಾರಿ ಅತಿಥಿಗೃಹಗಳ ಪ್ರದೇಶ ಹಾಗೂ ಹ್ಯಾಟ್ ಹಿಲ್,ಹೊನ್ನಕಟ್ಟೆಯಿಂದ ಕಾನ,ಜಿಲ್ಲಾಧಿಕಾರಿಗಳ ಕಚೇರಿ ಆವರಣ,ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣ,ಬೈಕಂಪಾಡಿ ಕೈಗಾರಿಕಾ ಪ್ರದೇಶಗಳಲ್ಲದೆ ಇನ್ನೂ ಅನೇಕ ಕಡೆ ಮಹಾಶ್ರಮದಾನ ನಡೆಯಲಿದೆ.ಈ ಮಹಾ ಶ್ರಮ ದಾನದಲ್ಲಿ ಎನ್ಎಸ್ಎಸ್, ಕೆನರಾ ಚೇಂಬರ್ ಆಫ್ ಕಾಮರ್ಸ್ ,ಹ್ಯೂಮನಿಟೇರಿಯನ್ ಸೊಸೈಟಿ, ರಾಜ್ಯ ಸರಕಾರಿ ನೌಕರರ ಸಂಘ,ಸ್ಕೌಟ್ಸ್ ಗೈಡ್ಸ್,ಮಹಾನಗರಪಾಲಿಕೆ ಸಿಬ್ಬಂದಿ,ಪೊಲೀಸ್ ಯೂತ್ ಕ್ಲಬ್,ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ,ರೋಟರಿ ಕ್ಲಬ್, ವಿದ್ಯಾರ್ಥಿ ಸಂಘ,ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ಸ್ಥಳೀಯರು ಜನಪ್ರತಿನಿಧಿಗಳು ಸಹ ಭಾಗವಹಿಸಲು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಎಪ್ರಿಲ್ ಕೊನೇ ವಾರದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕಡಲತಡಿ(ಬೀಚ್) ಪರಿಸರ ಸ್ವಚ್ಛತಾ ಆಂದೋಲನ ಹಾಗೂ ಜೂನ್, ಜುಲೈ ತಿಂಗಳ ಮುಂಗಾರು ಸಮಯದಲ್ಲಿ ಬೃಹತ್ ಸಸಿ ನೆಡುವ ವನಮಹೋತ್ಸವ ಕಾರ್ಯಕ್ರಮ ಸಹ ಹಮ್ಮಿಕೊಳ್ಳುವ ಮೂಲಕ ಇಡೀ ಜಿಲ್ಲೆ ಹಸಿರಿನಿಂದ ಸ್ವಚ್ಚವಾಗಿ ಕಂಗೊಳಿಸುವಂತೆ ಮಾಡಲಾಗುವುದೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.