Thursday, March 31, 2011

ಮನಪಾ ಶೇ.15 ಆಸ್ತಿ ತೆರಿಗೆ ಏರಿಕೆ

ಮಂಗಳೂರು,ಮಾರ್ಚ್.31:ಮಂಗಳೂರು ಮಹಾನಗರ ಪಾಲಿಕೆ ನಗರ ಬೆಳವಣಿಗೆ ಹಾಗೂ ಅಭಿವೃದ್ಧಿ ದೃಷ್ಠಿಯಿಂದ ನಿಯಮಾನುಸಾರ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಿಸುವ ನಿಯಮದಂತೆ ಕನಿಷ್ಠ ಶೇಕಡಾ 15 ರಷ್ಟು ಆಸ್ತಿ ತೆರಿಗೆಯನ್ನು ಎಪ್ರಿಲ್ 1 ರಿಂದ ಜಾರಿಗೆ ಬರುವಂತೆ ಏರಿಸಲಾಗಿದೆಯೆಂದು ಮಂಗಳೂರು ಮಹಾನಗರಪಾಲಿಕೆ ಮಹಾ ಪೌರರಾದ ಪ್ರವೀಣ್ ರವರು ತಿಳಿಸಿದ್ದಾರೆ.

ಅವರು ಇಂದು ತಮ್ಮ ಪಾಲಿಕೆಯ ಕಚೇರಿ ಯಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾ ಡುತ್ತಾ ಈ ವಿಷಯ ತಿಳಿಸಿ ದರು.ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ 2008-09ನೇ ಸಾಲಿನಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಜಾರಿಗೊಳಸಲಾಗಿದ್ದು 31-3-2011 ಕ್ಕೆ ಮೂರು ವರ್ಷಗಳ ಅವಧಿಯು ಮುಗಿಯುವುದರಿಂದ ಆಸ್ತಿ ತೆರಿಗೆಯನ್ನು ಶೇ.15 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆಯೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ರಾಷ್ಟ್ರದಲ್ಲಿ ಮಂಗಳೂರು ಮಹಾನಗರಪಾಲಿಕೆ ಘನ ತ್ಯಾಜ್ಯ ವಿಲೇವಾರಿ ಮಾದರಿಯಾಗಿದ್ದು, ಒಂದು ಸಾವಿರ ಚದರಡಿಗಿಂತ ಕಡಿಮೆ ಇರುವ ಕಟ್ಟಡಗಳು ತಿಂಗಳಿಗೆ ರೂ.10 ,1000 ದಿಂದ 3000 ಚದರಡಿ ಇರುವ ಕಟ್ಟಡಗಳಿಗೆ ತಿಂಗಳಿಗೆ 30 ರೂ. ಮತ್ತು 3000 ಚದರಡಿಗಿಂತಲೂ ಹೆಚ್ಚಿಗೆ ಇರುವ ಕಟ್ಟಡಗಳು ತಿಂಗಳಿಗೆ 50 ರೂ.ನಂತೆ ಘನತ್ಯಾಜ್ಯ ವಿಲೇವಾರಿ ಸೆಸ್ನ್ನು ಪಾವತಿಸಬೇಕಾಗಿರುತ್ತದೆ. ವಾಣಿಜ್ಯ ಕಟ್ಟಡಗಳು 1000 ಚದರಡಿಯಿಂದ 5000 ಚದರಡಿ ವರೆಗೆ ವಿಸ್ತೀರ್ಣ ಹೊಂದಿರುವ ಕಟ್ಟಡಗಳು ತಿಂಗಳಿಗೆ 100 ರಂತೆ 5000 ಚದರಡಿಗಳಿಗೂ ಮೇಲ್ಪಟ್ಟ ಕಟ್ಟಡಗಳು ತಿಂಗಳಿಗೆ 200 ರೂ.ಗಳಂತೆ ಸೆಸ್ ಪಾವತಿಸಬೇಕಾಗಿದೆ. ಕೈಗಾರಿಕೆಗಳು 1000 ಚದರಡಿಗಿಂತ ಕಡಿಮೆ ಇದ್ದರೆ ತಿಂಗಳಿಗೆ 100 ರೂ.ಗಳಂತೆ 1000 ದಿಂದ 5000 ಚದರಡಿ ವರೆಗೂ ರೂ. 200 ರಂತೆ ಹಾಗೂ 5000 ಚದರಡಿಗೆ ಮೇಲ್ಪಟ್ಟ ಕೈಗಾರಿಕಾ ಸಂಕೀರ್ಣಗಳು ತಿಂಗಳಿಗೆ ರೂ.300 ರಂತೆ ಸೆಸ್ ನ್ನು ವಿಧಿಸಲಾಗುವುದು.
ಹೊಟೇಲು,ಕಲ್ಯಾಣಮಂಟಪ,ಆಸ್ಪತ್ರೆ ಮುಂತಾದವುಗಳು 10000 ಚದರಡಿಗಿಂತಲೂ ಹೆಚ್ಚಿದ್ದಲ್ಲಿ ತಿಂಗಳಿಗೆ ರೂ .300 ರಂತೆ, 10000 ದಿಂದ 50000 ಚದರಡಿ ವರೆಗೂ ತಿಂಗಳಿಗೆ ರೂ.500 ಹಾಗೂ 50000ಚದರಡಿಕ್ಕಿಂತ ಹೆಚ್ಚಿನ ಕಟ್ಟಡಗಳು ತಿಂಗಳಿಗೆ 1000 ರೂ.ಗಳ ಸೆಸ್ ನ್ನು ಭರಿಸಬೇಕಾಗುತ್ತದೆಯೆಂದು ಮಹಾನಗರಪಾಲಿಕೆ ಆಯುಕ್ತರಾದ ಡಾ. ವಿಜಯ ಪ್ರಕಾಶ ತಿಳಿಸಿರುತ್ತಾರೆ.
ಘನತ್ಯಾಜ್ಯ ವಿಲೇವಾರಿಗೆ ಮಂಗಳೂರು ಮಹಾನಗರಪಾಲಿಕೆಗೆ ವಾರ್ಷಿಕ 12 ಕೋಟಿ ರೂ.ಗಳ ವೆಚ್ಚ ಬರುತ್ತದೆ. ಆದರೆ ಸೆಸ್ ಮೂಲಕ ವಸೂಲಾಗಲಿರುವ ಮೊತ್ತ ರೂ.3 ರಿಂದ 3.5 ಕೋಟಿ ಮಾತ್ರ ಆಗಿದ್ದು, ಬಾಕಿ ಮೊತ್ತವನ್ನುಪಾಲಿಕೆಯ ಇತರೇ ಆದಾಯ ಮೂಲಗಳಿಂದ ಭರಿಸಲಾಗುವುದೆಂದು ಆಯುಕ್ತರು ತಿಳಿಸಿದರು.
ನಗರದ 24 ಉದ್ಯಾನವನಗಳಲ್ಲಿ ಈಗಾಗಲೇ 17 ಉದ್ಯಾನವನಗಳನ್ನು ವಿವಿಧ ಮೂಲಗಳಿಂದ ಹಾಗೂ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಿಂದ ಅಭಿವೃದ್ಧಿ ಪಡಿಸಲಾಗಿದ್ದು, ಉಳಿದವುಳನ್ನು ಸಹ ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದೆಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಪಾಲಿಕೆ ಉಪಮೇಯರ್ ಗೀತಾ ಎಂ.ನಾಯಕ್ ಮತ್ತು ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.