Thursday, March 10, 2011

ಜನಪರ ಯೋಜನೆಗಳನ್ನು ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ

ಮಂಗಳೂರು, ಮಾರ್ಚ್.10: ವಾಜಪೇಯಿ ವಸತಿ ಯೋಜನೆಯಡಿ ನಿವೇಶನಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸರ್ಕಾರದ ಮಾರ್ಗದರ್ಶನದಂತೆ ಬಡವರಿಗೆ ಮನೆ ನಿರ್ಮಿಸಲು ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು.

ಇಂದು ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯ ನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಅತಿ ಕಡಿಮೆ ಅವಧಿಯಲ್ಲಿ ಅಗತ್ಯ ನಿವೇಶನಗಳನ್ನು ಹೆಚ್ಚು ಮುತುವರ್ಜಿ ವಹಿಸಿ ಗುರುತಿಸಲಾಗಿದ್ದು ಇದರ ಸದ್ಬಳಕೆಯಾಗಬೇಕು. ಸಮೀಕ್ಷೆ ಹಾಗೂ ನಕಾಶೆ ಸಿದ್ಧಪಡಿಸಿ; ಕಾರಣಗಳನ್ನು ನೀಡದೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು. ಸುರತ್ಕಲ್, ಕುಂಜತ್ ಬೈಲ್, ಪದವುಗಳಲ್ಲಿ ನಿವೇಶನ ಗುರುತಿಸಲಾಗಿದ್ದು, ಮುಂದಿನ ಕಾರ್ಯಯೋಜನೆಯ ಬಗ್ಗೆ ಚರ್ಚಿಸಲಾಯಿತು.
ಪ್ರಥಮ ಹಂತದಲ್ಲಿ 17 ರಸ್ತೆಗಳಲ್ಲಿ 13 ರಸ್ತೆಗಳು ಸಂಪೂರ್ಣಗೊಂಡಿದೆ ಎಂದು ಪಾಲಿಕೆ ಅಭಿಯಂತರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ನಗರಪಾಲಿಕೆಗೆ ಜನಪರ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಸರ್ವ ಸಹಕಾರ ನೀಡುತ್ತಿದ್ದು, ಪ್ರಮುಖ ರಸ್ತೆಯಾದ ಎಂ ಜಿ ರಸ್ತೆ, ಪಿವಿಎಸ್ ಜಂಕ್ಷನ್ ಏಕಮುಖ ಸಂಚಾರಕ್ಕೆ ಕಳೆದೆರಡು ತಿಂಗಳಿಂದ ಅವಕಾಶ ಮಾಡಿಕೊಡಲಾಗಿದ್ದು, ಮಾರ್ಚ್ 15ರೊಳಗೆ ಕಾಮಗಾರಿ ಮುಗಿಸಬೇಕು. ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆಗೆ ಅವಕಾಶವಿಲ್ಲ ಎಂದ ಜಿಲ್ಲಾಧಿಕಾರಿಗಳು ರಾತ್ರಿ ವೇಳೆ ಕಾಮಗಾರಿ ಮುಗಿಸಿ ಎಂದು ಸೂಚಿಸಿದರು. ಪಡೀಲ್ - ಬಜಾಲ್ ರಸ್ತೆ, ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ರಸ್ತೆಗಳ ಬಗೆ, ರೈಲ್ವೇ ಬ್ರಿಡ್ಜ್ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಹಂಪನಕಟ್ಟೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಲ್ಲಿ 1,000 ಕಾರುಗಳನ್ನು ಪಾರ್ಕು ಮಾಡುವ ಯೋಜನೆಯಿದೆ; ಬಳಿಕ ಫ್ಲೈ ಓವರ್ ನಿರ್ಮಿಸುವ ಪ್ರಸ್ತಾಪದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಎಂ ಆರ್ ಪಿ ಎಲ್ -ಸುರತ್ಕಲ್ ರಸ್ತೆಯ ಅನಿವಾರ್ಯತೆಯ ಬಗ್ಗೆ ಐಒಸಿಗೆ ತಕ್ಷಣವೇ ಪತ್ರ ಬರೆಯಲು ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು. ಪಂಪ್ ವೆಲ್ ನಲ್ಲಿ ನಿರ್ಮಿಸಲುದ್ದೇಶಿಸಿರುವ ಬಸ್ ನಿಲ್ದಾಣದ ಸಂಬಂಧ ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲು ಸಭೆಯಲ್ಲಿ ನಿರ್ಧರಿಸ ಲಾಯಿತು. ಮಾರ್ಕೆಟ್ ನಿರ್ಮಾಣ, ಭವಂತಿ ಸ್ಟ್ರೀಟ್, ಸುರತ್ಕಲ್- ಬಿ.ಸಿ ರೋಡ್ ರಸ್ತೆ, ಕಣ್ಣೂರು- ಕೂಳೂರುಗಳಲ್ಲಿ ಮಳೆಗಾಲ ಆರಂಭವಾಗುವ ಮುನ್ನವೇ ಕಾಮಗಾರಿಗಳನ್ನು ಮುಗಿಸಬೇಕು. ಎನ್ ಎಚ್ ಎ ಯವರು ಕಿರು ನಾಲೆಗಳನ್ನು ಸರಿಯಾಗಿ ನಿರ್ಮಿಸದಿದ್ದರೆ ಕಾಮಗಾರಿ ಮುಂದುವರಿಸಲು ಅನುಮತಿ ನೀಡಬೇಡಿ ಎಂದು ಅಭಿಯಂತರರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜನಪರವಾಗಿ ಕರ್ತವ್ಯ ನಿರ್ವಹಿಸಿ ಎಂದರು.
ರಸ್ತೆಬದಿಗಳಲ್ಲಿ ಅನಿಲ ತುಂಬಿದ ಟ್ಯಾಂಕರ್ಗಳ ನಿಲುಗಡೆಗೆ ಅವಕಾಶವಿಲ್ಲ:
ಸುರತ್ಕಲ್- ಎಂ ಆರ್ ಪಿಎಲ್ ರಸ್ತೆಯಲ್ಲಿ ಅಕ್ರಮವಾಗಿ ಅನಿಲ ತುಂಬಿದ ಟ್ಯಾಂಕರ್ ಗಳು ರಸ್ತೆಯುದ್ದಕ್ಕೂ ನಿಂತಿರುವ ಸಂಬಂದ ವರದಿ ಕಳುಹಿಸಿಕೊಡಲು ಸೂಚಿಸಿದ್ದರೂ ಅಧಿಕಾರಿಗಳಿಂದ ವರದಿ ಬಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಸಂಬಂಧ ವರದಿಯನ್ನು ಆಧರಿಸಿ ನಿಷೇಧಾಜ್ಞೆ ಹೊರಡಿಸುವ ಅಗತ್ಯವನ್ನು ಸಭೆಗೆ ತಿಳಿಸಿದರು.
ಅನಿಲ ತುಂಬಿದ ಬುಲೆಟ್ ಟ್ಯಾಂಕರ್ ಗಳು ಕಂಪೆನಿಯ ಒಳಗಿಂದ ಹೊರಗಡೆ ರಸ್ತೆಯಲ್ಲಿ ಎರಡು ದಿನ ಅಕ್ರಮವಾಗಿ ರಸ್ತೆಯುದ್ದಕ್ಕೂ ನಿಲ್ಲಿಸಿದರೆ ಆಗುವ ಅನಾಹುತಗಳನ್ನು ವಿವರಿಸಿದರಲ್ಲದೆ ಈ ಟ್ಯಾಂಕರ್ ಗಳ ಚಾಲಕರು, ಸಿಬ್ಬಂದಿಗಳು ರಸ್ತೆಯನ್ನೆ ಮನೆಯಾಗಿಸಿ ಜನರಿಗೆ, ವಾಹನ ಚಾಲಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಸಾರ್ವಜನಿಕ ರಸ್ತೆಯ ಬದಿಗಳಲ್ಲಿ ಇಂತಹ ಚಟುವಟಿಕೆಗಳಿಗೆ ಪಾಲಿಕೆ ಅವಕಾಶ ನೀಡಬಾರದು; ತಕ್ಷಣವೇ ವರದಿ ಕಳುಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.
ವೈಜ್ಞಾನಿಕ ಕಸ ವಿಲೇವಾರಿಯಲ್ಲಿ ಲೋಪ: ವೈಜ್ಞಾನಿಕ ಕಸ ವಿಲೇವಾರಿ ಅನುಷ್ಠಾನ ಅಸಮರ್ಪಕವಾಗಿದ್ದು, ಸಮಸ್ಯೆ ಪರಿಹಾರವಾಗದಿರಲು ಕಾರಣವೇನು ಎಂದ ಜಿಲ್ಲಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಆರೋಗ್ಯ ಸಹಾಯಕರನ್ನು ಮಲಿನ ಪರಿಸರ ಕಂಡು ಬಂದರೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಸಮರ್ಪಕ ಅನುಷ್ಠಾನವಾಗಬೇಕು ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದರು. ತಕ್ಷಣವೇ ಆರೋಗ್ಯ ನಿರೀಕ್ಷಕರು ಸಂಬಂಧಪಟ್ಟ ಎಲ್ಲ ಸಿಬ್ಬಂದಿಗಳ ಸಭೆ ಕರೆದು ಸೂಕ್ತ ಸೂಚನೆ ನೀಡಬೇಕೆಂದು ಸೂಚಿಸಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ ಕೆ ಎನ್ ವಿಜಯಪ್ರಕಾಶ್ ಅವರು ಉಪಸ್ಥಿತರಿದ್ದು, ಮಾಹಿತಿ ನೀಡಿದರು.