Thursday, March 17, 2011

ಪ್ರವಾಸೋದ್ಯಮ ಕಾಮಗಾರಿಗಳ ಪ್ರಗತಿ ಪರಿಶಿಲನೆ

ಮಂಗಳೂರು,ಮಾರ್ಚ್.17: ದಕ್ಷಿಣಕನ್ನಡ ಜಿಲ್ಲೆಯ ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಯವರೆಗೆ ತೂಗು ಸೇತುವೆ ನಿರ್ಮಾಣವನ್ನು ಪೂರೈಸಲು , ಅನುದಾನಕ್ಕೆ ಮಂಜೂರಾತಿ ದೊರಕಿದ್ದು, ಕೂಡಲೇ ಕೆಲಸವನ್ನು ಪೂರೈಸುವಂತೆ ನಿರ್ಮಿತಿ ಕೇಂದ್ರದವರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು. ಅವರು ಮಾರ್ಚ್,16 ರಂದು ಪ್ರವಾಸೋದ್ಯಮ ಇಲಾಖೆಯಿಂದ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ದಕ್ಷಿಣಕನ್ನಡ ಜಿಲ್ಲೆಯ ಪಣಂಬೂರು, ತಣ್ಣಿರುಬಾವಿ ಬೀಚ್,ಉಳ್ಳಾಲ ಸೋಮೇಶ್ವರ ಕಡಲತೀರ ಅಭಿವೃದ್ಧಿ ಕಾಮಗಾರಿಗಳನ್ನು ಮೇ 31ರೊಳಗೆ ಪೂರೈಸುವಂತೆ ತಿಳಿಸಿದರು. ಬೆಳ್ತಂಗಡಿಯ ಜಮಲಾಬಾದ ಕೋಟೆಯ ಪ್ರದೇಶದಲ್ಲಿ ಕುಡಿಯುವ ನೀರು, ಮೆಟ್ಟಿಲುಗಳ ದುರಸ್ತಿ ಮತ್ತು ಸಂಪರ್ಕ ರಸ್ತೆಯನ್ನು ಮಾಡುವರೇ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಇರುವುದಾಗಿ ಚರ್ಚಿಸಲಾಯಿತು.ಈ ಬಗ್ಗೆ ಅನುಮತಿಯನ್ನು ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಲ್ಲದೇ ಸರಕಾರದ ವತಿಯಿಂದ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಪ್ರವಾಸೋದ್ಯಮ ಮಾಹಿತಿಗಳನ್ನೊಳಗೊಂಡ ಕೈಪಿಡಿಯನ್ನು ಪ್ರವಾಸೋದ್ಯಮ ಇಲಾಖೆಯಲ್ಲಿರುವ ಅನುದಾನದಲ್ಲಿ,ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಯಾರಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಈ ಕೈಪಿಡಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸಾಂಸ್ಕೃತಿಕ ವಿಚಾರಗಳು, ಪ್ರವಾಸೋದ್ಯಮ ಸ್ಥಳಗಳ ವಿವರ,ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳ ವಿವರ, ನಕ್ಷೆಗಳು,ಎಲ್ಲಾ ವಿವರಗಳು ಈ ಕೈಪಿಡಿಯಲ್ಲಿ ಒಳಗೊಂಡಿರತಕ್ಕದ್ದು ಎಂದು ಸೂಚಿಸಿದರು.
ಸಭೆಯಲ್ಲಿ ಸಹಾಯಕ ನಿರ್ದೇಶಕರಾದ ಮಹೇಶ್,ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು,ನಿರ್ಮಿತಿ ಕೇಂದ್ರದ ಅಧಿಕಾರಿಗಳು,ಪಿಲಿಕುಳ ನಿಸರ್ಗಧಾಮದವರು ಉಪಸ್ಥಿತರಿದ್ದರು.