Thursday, March 3, 2011

ಅಧಿಕೃತ ವಿತರಕರು ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳಿಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ

ಮಂಗಳೂರು, ಮಾರ್ಚ್.03:ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ನಿಗಮಗಳು ಏಜೆನ್ಸಿಗಳನ್ನು ನೇಮಿಸಿಕೊಂಡು ಅವರ ಮೂಲಕ ನೇರವಾಗಿ ಗ್ರಾಹಕರಿಗೆ ಸಿಲಿಂಡರುಗಳನ್ನು ವಿತರಿಸುವ ವ್ಯವಸ್ಥೆಯಿದೆ. ಇವರ ನಡುವೆ ಗ್ರಾಹಕರಿಗೆ ಸಿಲಿಂಡರ್ ವಿತರಿಸಲು ಮಧ್ಯವರ್ತಿಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಎಚ್ಚರಿಕೆ ನೀಡಿದ್ದಾರೆ.
ಮಧ್ಯವರ್ತಿಗಳು ಕೇವಲ ಲಾಭದ ದೃಷ್ಟಿಯಿಂದ ಮಾತ್ರ ವ್ಯವಹಾರ ನಡೆಸುತ್ತಾರೆಯೇ ಹೊರತು ಅದರಿಂದ ಯಾವುದಾದರೂ ಸಮಸ್ಯೆಗಳು ಅಥವಾ ಅಪಾಯ ಸಂಭವಿಸಿದರೆ ಅದಕ್ಕಾಗಿ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕಲ್ಪಿಸಿಕೊಂಡಿರುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೂಲಕ ಅನಿಲ ಸಿಲಿಂಡರುಗಳ ವ್ಯವಹಾರ ನಡೆಸಿ ಮುಂದೆ ಅನಾಹುತಕ್ಕೆ ಎಡೆ ಮಾಡುವಂತಹ ಪರಿಸ್ಥಿತಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತೈಲ ನಿಗಮಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸಿಲಿಂಡರ್ ವಿತರಣೆಯಲ್ಲಿ ಅನಧಿಕೃತರಿಗೆ ಅವಕಾಶ ನೀಡಬಾರದು ಎಂದು ಸ್ಪಷ್ಟಪಡಿಸಿದ ಅವರು, ಎಲ್ ಪಿ ಜಿ ಕಂಟ್ರೋಲ್ ಆರ್ಡರ್ 2000 ಮತ್ತು ಗ್ಯಾಸ್ ಸಿಲಿಂಡರ್ ರೂಲ್ಸ್ 2004 ಈ ಕಾನೂನಿನ ವ್ಯಾಪ್ತಿಯಡಿ ಬರುತ್ತದೆ. ಸ್ಫೋಟಕ ಇಲಾಖೆ ಪರವಾನಿಗೆ ಕಡ್ಡಾಯವಾಗಿರಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ನಗರದ ಜೆಪ್ಪುವಿನ ಮಾರ್ಕೆಟ್ ಬಳಿಯ ಶ್ರೀ ಆದಿಮಾಯೆ ಗ್ಯಾಸ್ ಏಜೆನ್ಸಿಗೆ ಕಳೆದ ವರ್ಷ 31.10.2010 ರಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಮತ್ತು ಪೊಲೀಸ್ ಇಲಾಖೆ ದಾಳಿ ನಡೆಸಿ ಅನಧಿಕೃತವಾಗಿ ದಾಸ್ತಾನಿರಿಸಿದ್ದ 130 ವಾಣಿಜ್ಯ ಬಳಕೆ ಸಿಲಿಂಡರ್ ಮತ್ತು 4 ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳ ನ್ಯಾಯಾಲಯ ತೀರ್ಪು ನೀಡಿ 130 ಅನಿಲ ತುಂಬಿದ ಸಿಲಿಂಡರ್ ಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಿತ್ತು ಮತ್ತು ಪರವಾನಿಗೆ ಇಲ್ಲದವರಿಗೆ ಸಿಲಿಂಡರ್ ಪೂರೈಕೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ತೈಲ ನಿಗಮಗಳ ಏಜೆನ್ಸಿಗೆ ನಿರ್ದೇಶನ ನೀಡಿತ್ತು.