Saturday, March 5, 2011

ವಿಶ್ವಕನ್ನಡ ಸಮ್ಮೇಳನಕ್ಕೆ ಜಿಲ್ಲೆಯಿಂದ ತೇರು

ಮಂಗಳೂರು, ಮಾ.5: ಬೆಳಗಾವಿಯಲ್ಲಿ ಮಾರ್ಚ 11 ರಿಂದ 13 ರವರೆಗೆ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಡುವ ತೇರು ಸಜ್ಜಾಗಿದೆ. ಮಾರ್ಚ್ 7 ರಿಂದ ದ.ಕ. ಜಿಲ್ಲಾ ಯಾತ್ರೆ ಹೊರಡಲಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವ ಕನ್ನಡ ಸಮ್ಮೇಳನದ ಲಾಂಛನದೊಂದಿಗೆ ದ.ಕ. ಜಿಲ್ಲೆಯ ಸಾಂಸ್ಕೃತಿಕ `ತೇರು' ಹಿನ್ನೆಲೆಯಲ್ಲಿರುವಂತೆ ವಿಶ್ವ ಕನ್ನಡ ತೇರನ್ನು ಸಿದ್ಧಗೊಳಿಸಲಾಗುತ್ತಿದೆ. ಮಾ.7ರಂದು ಪೂರ್ವಾಹ್ನ 9.30ಕ್ಕೆ ಕದ್ರಿ ಉದ್ಯಾನವನದಲ್ಲಿ ಯಾತ್ರೆಗೆ ಚಾಲನೆ ನೀಡಲಾಗುವುದು. ಜಿಲ್ಲಾ ಯಾತ್ರೆ ಪೂರ್ಣಗೊಂಡು ಮಾ.10 ರಂದು 3 ಗಂಟೆಗೆ ತೇರು ಬೆಳಗಾವಿ ತಲುಪಲಿದೆ. ಮಾ.11 ರಂದು ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದ.ಕ. ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಯ ಸುಮಾರು 80 ಕಲಾವಿದರು ಪಾಲ್ಗೊಳ್ಳುವರು ಕಂಗೀಲು, ಹುಲಿವೇಷ ಇತ್ಯಾದಿ ಕಲಾ ತಂಡಗಳು ಭಾಗವಹಿಸಲಿವೆ ಎಂದವರು ವಿವರಿಸಿದರು.
ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಸಾರುವ ಸ್ತಬ್ಧಚಿತ್ರಗಳನ್ನು ಅಳವಡಿಸಿಕೊಳ್ಳಲಾಗುವುದು. ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಎಲ್ಲಾ ಅಂಶವನ್ನು ಜಿಲ್ಲೆಯ ತೇರು ಒಳಗೊಳ್ಳಲಿದೆ. ಪ್ರತಿ ತಾಲೂಕಿನಲ್ಲಿ ತೇರನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿಲು ವ್ಯವಸ್ಥೆ ರೂಪಿಸಲಾಗಿದೆ. ಗ್ರಾಮ ಪಂಚಾಯತ್ ಗಳು ಕೂಡ ಇದರಲ್ಲಿ ಭಾಗವಹಿಸಲಿವೆ. ಈ ರಥಕ್ಕೆ ಸುಮಾರು 3.5 ಲಕ್ಷ ವೆಚ್ಚ ತಗುಲಲಿದ್ದು ರೂ.1 ಲಕ್ಷವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒದಗಿಸಿದೆ ಉಳಿದ ಮೊತ್ತವನ್ನು ಸ್ಥಳೀಯ ಸಂಸ್ಥೆಗಳಿಂದ ಕ್ರೋಢೀಕರಿಸಬೇಕಿದೆ ಎಂದು ಶಿವಶಂಕರ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ,ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ್ ಉಪಸ್ಥಿತರಿದ್ದರು.