Thursday, March 10, 2011

20 ದಿವಸಗಳೊಳಗೆ ಗುತ್ತಿಗೆದಾರರಿಗೆ ಹಣಪಾವತಿ ಕಡ್ಡಾಯ: ಜಿಲ್ಲಾಧಿಕಾರಿ

ಮಂಗಳೂರು.ಮಾರ್ಚ್,10: ಮುಖ್ಯಮಂತ್ರಿಯ ವಿಶೇಷ ಅನುದಾನದಡಿ ಮಹಾನಗರಪಾಲಿಕೆಗೆ ದೊರೆತ ನೂರು ಕೋಟಿ ರೂ. ಅನುದಾನದಡಿ ಕಾಮಗಾರಿ ಕೈಗೊಂಡು ಸಂಪೂರ್ಣಗೊಳಿಸಿದ ಕಾಮಗಾರಿಗಳ ಗುತ್ತಿಗೆದಾರರಿಗೆ 20 ದಿವಸಗಳೊಳಗಾಗಿ ಹಣ ಪಾವತಿಸಬೇಕೆಂದು ಪಾಲಿಕೆಯ ಅಭಿಯಂತರರುಗಳಿಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೂಚಿಸಿದರು.
ಇಂದು ಮಹಾ ನಗರ ಪಾಲಿಕೆಯಲ್ಲಿ ಏರ್ಪಡಿಸಿದ್ದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಗರದಲ್ಲಿ ವಿವಿಧ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿದರಲ್ಲದೆ, ಎಲ್ಲ ಕೆಲಸಗಳಿಗೂ ಕಾಲಮಿತಿ ನಿಗದಿಪಡಿಸಿದರು. ಮಹಾನಗರಪಾಲಿಕೆಯ ಇಂಜಿನಿಯರ್ ಗಳು ಕಾಮಗಾರಿ ಮುಗಿಸಿದ ಬಳಿಕ ಬಿಲ್ ಪಾವತಿಸಲು ವಿಳಂಬ ಮಾಡುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಗುತ್ತಿಗೆದಾರರಿಂದ ಸಮರ್ಪಕವಾಗಿ ಕೆಲಸ ಮಾಡಿಸಿಕೊಳ್ಳುವುದು ಹಾಗೂ ಮಾರ್ಗದರ್ಶನ ನೀಡುವುದು ಅಧಿಕಾರಿಗಳ ಹೊಣೆ ಎಂದರು. ಮಹಾನಗರಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೇವಲ ಒಂದು ದಿನ ದೊಳಗೆ ಬಿಲ್ ಗಳು ಪಾಸಾಗುತ್ತಿದ್ದು,ಇತರ ವಿಭಾಗ ಗಳಲ್ಲಿ 2ರಿಂದ ಮೂರು ತಿಂಗಳು ಬಿಲ್ ವಿವಿಧ ಕಾರಣಗಳಿಗಾಗಿ ಬಾಕಿ ಇರುವುದನ್ನು ಜಿಲ್ಲಾಧಿಕಾರಿಗಳು ಗಮನಿಸಿ ತಕ್ಷಣವೇ ಈ ಸಂಬಂಧ ಸುತ್ತೋಲೆಯನ್ನು ಸಂಬಂಧಪಟ್ಟ ಎಲ್ಲ ಅಭಿಯಂತರರಿಗೆ ನೀಡಲು ಹೇಳಿದರು. ಕಾಲಮಿತಿಗೆ ಸಂಬಂಧಿಸಿದಂತೆ 7ಹಂತಗಳಲ್ಲಿ 18 ದಿನಗಳೊಳಗಾಗಿ ಕರ್ತವ್ಯವನ್ನು ಹಂಚಿದ್ದು, ಕರ್ತವ್ಯಲೋಪ ಗಮನಕ್ಕೆ ಬಂದರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು. ಮೊದಲನೆ ಯದಾಗಿ ಗುಣಮಟ್ಟದ ಕೆಲಸ ಮುಗಿಸಿದ ವರದಿ, ಎರಡನೆಯ ಹಂತ ಥಡ್ರ್ ಪಾರ್ಟಿ ಇನ್ಸ್ ಪೆಕ್ಷನ್, ಮೂರನೆಯ ಹಂತ ಬಿಲ್ ತಯಾರಿಕೆ, ನಾಲ್ಕನೇ ಹಂತ ಬಿಲ್ ನ್ನು ಅಕೌಂಟ್ಸ್ ಸೆಕ್ಷನ್ ಗೆ ಸಲ್ಲಿಕೆ, ಮಹಾನಗರಪಾಲಿಕೆ ಆಯುಕ್ತರ ಅನುಮೋದನೆ, ಜಿಲ್ಲಾಧಿಕಾರಿಗಳ ಅನುಮೋದನೆ ಬಳಿಕ ಹಣ ಪಾವತಿಯಾಗಲಿದೆ. ತಿಂಗಳಿಗೊಮ್ಮೆ ಪಾಲಿಕೆ ಆಯುಕ್ತರು ಗುತ್ತಿಗೆದಾರರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಬಹುದು ಎಂದರು. ಈ ಸಂಬಂಧ ಯಾವುದೇ ತೊಂದರೆಗಳಾದರೆ ನೇರವಾಗಿ ಪಾಲಿಕೆ ಆಯುಕ್ತರನ್ನು ಅಥವಾ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಡಾ. ಕೆ.ಎನ್. ವಿಜಯಪ್ರಕಾಶ್ ಹಾಗೂ ಪಾಲಿಕೆಯ ಅಭಿವೃದ್ಧಿ ಕೋಶದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
ನಿರ್ಮಾಣ ತ್ಯಾಜ್ಯ ಎಸೆದವರ ವಿರುದ್ಧ ಎಫ್ ಐ ಆರ್ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ: ನಗರದಲ್ಲೆಡೆ ಮನಸ್ಸಿಗೆ ತೋಚಿದಂತೆ ನಿರ್ಮಾಣ ತ್ಯಾಜ್ಯ ಎಸೆಯುವವರ ವಿರುದ್ಧ ಪ್ರಕರಣ ದಾಖಲಿಸಲು ಈಗಾಗಲೇ ಪಾಲಿಕೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಸೂಚನೆ ನೀಡಿದ್ದರೂ ಯಾವುದೇ ಪ್ರಕರಣ ದಾಖಲಾಗಿಲ್ಲ; ಆದರೆ ನಿರ್ಮಾಣ ತ್ಯಾಜ್ಯಗಳು ಐತಿಹಾಸಿಕ, ಪ್ರವಾಸಿ ಕೇಂದ್ರವಾದ ಸುಲ್ತಾನ ಬತ್ತೇರಿಯಲ್ಲೂ ಎಸೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪ್ರಕರಣ ದಾಖಲಿಸದಿದ್ದರೆ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಎಚ್ಚರಿಕೆ ನೀಡಿದ್ದಾರೆ.
ಹೀಗೆ ಅಕ್ರಮವಾಗಿ ನಿರ್ಮಾಣ ತ್ಯಾಜ್ಯ ಎಸೆಯುವವರ ಬಗ್ಗೆ ನಿಗಾ ಇರಿಸಿ ಎರಡು ಪ್ರಕರಣ ದಾಖಲಿಸಿ, ಶಿಕ್ಷೆಗೊಳಪಡಿಸಿದರೆ ಉಳಿದವರು ತಮ್ಮ ಎಚ್ಚರದಲ್ಲಿರುತ್ತಾರೆ ಎಂದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಈ ಸಂಬಂಧ ನಿರ್ಲಕ್ಷ್ಯ ವಹಿಸಿದರೆ ಸಾರ್ವಜನಿಕ ಕರ್ತವ್ಯ ಲೋಪ ಕಾನೂನಿನಡಿ ಕಠಿಣ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು. ತಕ್ಷಣವೇ ಈ ಸಂಬಂಧ ಕಾರ್ಯಾನ್ಮುಖ ವಾಗಲು ಅಧಿಕಾರಿಗಳಿಗೆ ಸೂಚಿಸಿದರು.