Friday, March 11, 2011

ಚುನಾವಣೆ ವೇಳಾ ಪಟ್ಟಿ ಪ್ರಕಟ

ಮಂಗಳೂರು,ಮಾರ್ಚ್.11:ಬೆಂಗಳೂರು ಕೃಷಿ ಮಾರಾಟ ಇಲಾಖೆ ನಿರ್ದೇಶಕರ ಆದೇಶದಂತೆ ದಕ್ಷಿಣಕನ್ನಡ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಗೆ ಚುನಾವಣೆಯನ್ನು ನಡೆಸಲಾಗುವುದು. ಅದರಂತೆ ಮಂಗಳೂರು,ಬಂಟ್ವಾಳ ಮತ್ತು ಬೆಳ್ತಂಗಡಿ ಮಾರುಕಟ್ಟೆ ಪ್ರದೇಶದ ಕೃಷಿಕರ ಕ್ಷೇತ್ರದಿಂದ ಒಟ್ಟು 11 ಸ್ಥಾನಕ್ಕೆ ಮಾರುಕಟ್ಟೆ ಪ್ರದೇಶದ ವರ್ತಕರ ಕ್ಷೇತ್ರದಿಂದ,ಸಹಕಾರಿ ಸಂಘಗಳ ಕ್ಷೇತ್ರದಿಂದ ಹಾಗೂ ಕೃಷಿ ಹುಟ್ಟುವಳಿಗಳ ಮಾರಾಟ ವ್ಯವಹಾರದಲ್ಲಿ ತೊಡಗಿರುವ ಸಂಸ್ಕರಣ ಸಹಕಾರಿ ಸಂಘಗಳ ಕ್ಷೇತ್ರದಿಂದ ತಲಾ ಒಂದೊಂದು ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ. ನಾಮಪತ್ರಗಳನ್ನು ಬೆಳಿಗ್ಗೆ 11 ರಿಂದ 3 ಗಂಟೆಯ ವರೆಗೆ ಮಂಗಳೂರು,ಬಂಟ್ವಾಳ ಮತ್ತು ಬೆಳ್ತಂಗಡಿಯ ಆಯಾಯ ತಾಲ್ಲೂಕುಗಳ ತಹಶೀಲ್ದಾರ್ರಿಗೆ ಸಲ್ಲಿಸಬಹುದಾಗಿದೆ.
ನಾಮ ಪತ್ರ ಸಲ್ಲಿಸಲು 25-3-11 ಕೊನೆಯ ದಿನ.ನಾಮಪತ್ರ ಪರಿಶೀಲನೆ 28-3-11,ಉಮೇದುವಾರಿಕೆ ಹಿಂತೆಗೆದುಕೊಳ್ಳಲು 31-3-11 ಹಾಗೂ ಅಗತ್ಯವಿದ್ದಲ್ಲಿ 24-4-11 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಚುನಾವಣೆ ನಡೆಯಲಿದೆ.ಮತಗಳ ಎಣಿಕೆಯನ್ನು ದಿನಾಂಕ 26-4-11 ರಂದು ಪೂ.8 ಗಂಟೆಯಿಂದ ಮಂಗಳೂರು ಕದ್ರಿ ಪಾಲಿಟೆಕ್ನಿಕ್ನಲ್ಲಿ,ಬಂಟ್ವಾಳ ತಾಲೂಕು ಕಚೇರಿ ಸಭಾಭವನದಲ್ಲಿ, ಬೆಳ್ತಂಗಡಿ ಹಳೇಕೋಟೆ ವಾಣಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.ದಿನಾಂಕ 28-4-11 ರೊಳಗೆ ಚುನಾವಣಾಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕಾಗಿದೆ.
ಮಂಗಳೂರು,ಬಂಟ್ವಾಳ ಮತ್ತು ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮತದಾರರ ಪಟ್ಟಿ,ಚುನಾವಣಾ ಕ್ಷೇತ್ರದ ಮೀಸಲಾತಿ ವಿವರ,ಮತದಾನ ಕೇಂದ್ರಗಳ ಪಟ್ಟಿ,ನಾಮಪತ್ರ ಸಲ್ಲಿಸುವ ನಮೂನೆ ಇತ್ಯಾದಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದ ಆಸಕ್ತ ಮತದಾರರು ಚುನಾವಣಾಧಿಕಾರಿಯಾದ ಆಯಾಯ ತಾಲೂಕು ತಹಶೀಲ್ದಾರರನ್ನು ಸಂಪರ್ಕಿಸಿ ಪಡೆಯಬಹುದಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.