Thursday, March 17, 2011

98 ನೋಂದಾಯಿಸಲ್ಪಡದ ಖಾಸಗೀ ವೈದ್ಯಕೀಯ ಸಂಸ್ಥೆಗಳನ್ನು ಮುಚ್ಚಲು ನೋಟೀಸ್

ಮಂಗಳೂರು, ಮಾರ್ಚ್.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ನೋಂದಾಯಿಸಲ್ಪಡದ ಖಾಸಗೀ ವೈದ್ಯಕೀಯ ಸಂಸ್ಥೆಗಳನ್ನು ಮುಚ್ಚಲು ನೋಟೀಸ್ ನೀಡಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸೂಚಿಸಿದರು.ಇಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಸರ್ಕಾರದ ಕಾನೂನನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಅನುಷ್ಠಾನಕ್ಕೆ ನಿರ್ದೇಶನ ನೀಡಿದ್ದು, ಆದೇಶ ಪಾಲನೆಗೆ ಎಲ್ಲ ರೀತಿಯ ನೆರವನ್ನು ನೀಡುವುದಾಗಿಯೂ ಘೋಷಿಸಿದರು.

ಸೆಕ್ಷನ್ 22 ರಡಿಯಲ್ಲಿ ಅಂತಿಮ ನೋಟೀಸು ನೀಡಲು ಸೂಚಿಸಿದ್ದು, ಪಾಲನೆಗೆ ಸಮಯಮಿತಿ ನಿಗದಿಗೊಳಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹೇಳಿದರು. ಮಂಗಳೂರಿನಲ್ಲಿ 69, ಬಂಟ್ವಾಳದಲ್ಲಿ 14, ಪುತ್ತೂರಿನಲ್ಲಿ 9, ಸುಳ್ಯದಲ್ಲಿ 5, ಬೆಳ್ತಂಗಡಿಯಲ್ಲಿ 1 ನೋಂದಾಯಿಸಲ್ಪಡದ ಅನಧಿಕೃತ ಸಂಸ್ಥೆಗಳನ್ನು ಗುರುತಿಸಲಾಗಿದೆ. 772 ಸಂಸ್ಥೆಗಳಿಗೆ ನ್ಯೂನತೆ ಸರಿಪಡಿಸುವಂತೆ ನೋಟೀಸು ಜಾರಿ ಮಾಡಲಾಗಿದೆ. 79 ಸಂಸ್ಥೆಗಳು ನೋಂದಾವಣೆಗೆ ಅರ್ಹವಾಗಿವೆ. 24 ಅಕ್ಟೋಬರ್ 2010ರ ಬಳಿಕ 3 ಬಾರಿ ನೋಂದಾವಣೆಗೆ ಅವಕಾಶ ನೀಡಿ ಸಮಯಾವಕಾಶದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಸಂಸ್ಥೆಗಳಿಗೆ ಇನ್ನಷ್ಟು ಕಾಲಾವಕಾಶ ನೀಡುವ ಬಗ್ಗೆ ಚಿಂತಿಸಲೂ ಸಹ ಸಾಧ್ಯವಿಲ್ಲ ಎಂದ ಜಿಲ್ಲಾಧಿಕಾರಿಗಳು, ಅನಧಿಕೃತ ಸಂಸ್ಥೆಗಳನ್ನು ಮುಚ್ಚಿಬಿಡಿ ಎಂದರು. ಇದುವರೆಗೆ ಮಂಗಳೂರಿನಿಂದ 940 ಅಜರ್ಿಗಳು ಬಂದಿದ್ದು, 384 ಸಂಸ್ಥೆಗಳನ್ನು ಸಮಿತಿ ಪರಿಶೀಲಿಸಿದೆ. ಇನ್ನುಳಿದ ಸಂಸ್ಥೆಗಳ ಪರಿಶೀಲನೆಗೆ ಈಗಾಗಲೇ 5 ತಂಡ ರಚಿಸಿದ್ದು, ಇನ್ನೂ ಹೆಚ್ಚಿನ ತಂಡ ರಚಿಸಲು ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. ಬಂಟ್ವಾಳದಲ್ಲಿ 184 ಅರ್ಜಿಗಳು ಬಂದಿದು, 179 ಸಂಸ್ಥೆಗಳನ್ನು ಸಮಿತಿ ಪರಿಶೀಲಿಸಿದೆ. ಪುತ್ತೂರಿನಲ್ಲಿ 179 ಅರ್ಜಿಗಳು ಬಂದಿದ್ದು, 179 ಪರಿಶೀಲನೆಯಾಗಿದೆ. ಸುಳ್ಯದಲ್ಲಿ 96ರಲ್ಲಿ 84 ಪರಿಶೀಲಿಸಲಾಗಿದೆ. ಬೆಳ್ತಂಗಡಿಯಲ್ಲಿ 106ರಲ್ಲಿ 73 ಪರಿಶೀಲಿಸಲಾಗಿದೆ. ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು, ಐ ಎಂ ಎ ಡಾಕ್ಟರ್ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.