Friday, March 11, 2011

ಸಾಮಾಜಿಕ ಭದ್ರತಾ ಯೋಜನೆ ಎಪ್ರಿಲ್ 20 ರೊಳಗೆ ವರದಿ ನೀಡಿ-ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಮಾರ್ಚ್.11:ಕರ್ನಾಟಕ ಸರ್ಕಾರ ಸಮಾಜದ ಅಸಹಾಯಕರಿಗೆ ನಿರ್ಗತಿಕರಿಗೆ ಕೊಡಮಾಡುತ್ತಿರುವ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುತ್ತಿರುವ ವಿಧವಾ ವೇತನ,ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳ ಫಲಾನುಭವಿಗಳ ಕುರಿತು ಸಮೀಕ್ಷೆ ನಡೆಸಲು ಹಾಗೂ ವರದಿ ನೀಡಲು ಜಿಲ್ಲಾಧಿಕಾರಿಗಳು ಕಂದಾಯ ಇಲಾಖಾಧಿಕಾರಿಗಳಿಗೆ ಇಂದು ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದರು.
ಬಹಳಷ್ಟು ಮಂದಿ ಮೃತಪಟ್ಟಿದ್ದು, ಇನ್ನೂ ಅವರ ಹೆಸರಲ್ಲಿ ಬೇರೊಬ್ಬರು ಹಣ ಪಡೆಯುತ್ತಿದ್ದಾರೆ, ಹಲವರು ಸರ್ಕಾರಕ್ಕೆ ಮೋಸ ಮಾಡಿ ಎರಡೆರಡು ಕಡೆ, ಒಂದಕ್ಕಿಂತ ಎರಡು ವಿಧದ ಮಾಸಾಶನಗಳನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ಗಮನಿಸಿರುವುದರಿಂದ ದ.ಕ. ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಮೀಕ್ಷಾ ಕಾರ್ಯ ನಡೆಸಿ ಎಪ್ರಿಲ್ 20 ರೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಅನುಷ್ಠಾನಾಧಿಕಾರಿಗಳಿಗೆ ತಿಳಿಸಿದ್ದಾರೆ. ದ.ಕ. ಜಿಲೆಯಲ್ಲಿ ಪ್ರಸ್ತುತ 67649 ಜನ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಮಾಸಾಶನ ಪಡೆಯುತ್ತಿದ್ದಾರೆ ಈ ಅಂಕೆಸಂಖ್ಯೆಗಳು ಕಂದಾಯ ಇಲಾಖೆಗೂ ಖಜಾನೆಯಲ್ಲಿರುವುದಕ್ಕೂ ವ್ಯತ್ಯಾಸವಿರುವ ಬಗ್ಗೆ ಪರಿಶೀಲಿಸಿ ಎರಡೂ ಒಂದೇ ರೀತಿ ಇರುವಂತೆ ಕ್ರಮ ವಹಿಸಲು ಸಹ ಸೂಚಿಸಿದ್ದಾರೆ. ಗ್ರಾಮ ಮಟ್ಟದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಅಥವಾ ಇನ್ನಿತರ ಗ್ರಾಮ ಮಟ್ಟದ ಅಧಿಕಾರಿಗಳ ನೆರವಿನಿಂದ ಮಾಹಿತಿಗಳನ್ನು ನಿಗಧಿತ ನಮೂನೆಯಲ್ಲಿ ಸಂಗ್ರಹಿಸಬೇಕಾಗಿದೆ. ಇದಕ್ಕಾಗಿ 89000 ಡಾಟಾ ಎಂಟ್ರಿ ಫಾರಂಗಳನ್ನು ಜಿಲ್ಲೆಯಾದ್ಯಂತ ಸರಬರಾಜು ಮಾಡಲಾಗಿದೆ.
ಸರ್ಕಾರಿ ಜಮೀನು ಒತ್ತುವರಿ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಯಾ ತಾಲ್ಲೂಕಿನಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿರುವುದರ ಬಗ್ಗೆ ಪ್ರಾಮಾಣಿಕ ವರದಿ ಸಲ್ಲಿಸದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರ ವಿರುದ್ಧ ನಿರ್ದಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕೃತಿ ವಿಕೋಪದಡಿ ನೀಡಲಾಗುವ ಪರಿಹಾರ ಕೇವಲ ನೆರವು ಅಷ್ಟೇ ಆದರೆ ಪೂರ್ಣ ನಷ್ಠ ತುಂಬಿಸಿ ಕೊಡಲಾಗದು ಎಂದು ಅವರು ಈ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ನುಡಿದರು. ಆರಾಧನಾ ಯೋಜನೆಯಡಿ 1991ರಿಂದ 2006-07 ರ ಸಾಲಿನಲ್ಲಿ ಮೊತ್ತ 48,73,244 ಬಾಕಿ ಇದ್ದರೆ 2007-08 ರಿಂದ 2009-10 ರ ವರೆಗೆ 59,48,770 ರೂ ಬಾಕಿ ಇದೆ. ತಹಶೀಲ್ದಾರರು ಈಗಾಗಲೇ ನೀಡಿರುವ ಹಣವನ್ನು ಬಳಸಿರುವ ಬಗ್ಗೆ ಪ್ರಮಾಣ ಪತ್ರ ನೀಡದಿರುವುದರಿಂದ ಜಿಲ್ಲೆಯಲ್ಲಿ ಆರಾಧನಾ ಯೋಜನೆಯಡಿ ಗುಡಿಗೋಪುರಗಳ ದುರಸ್ಥಿಗಾಗಿ 1,08,22,014 ರೂ.ಗಳನ್ನು ವೆಚ್ಚ ಮಾಡಲು ಬಾಕಿ ಇದೆ. ಆದ್ದರಿಂದ ಎಲ್ಲಾ ತಹಶೀಲ್ದಾರರು ಕೂಡಲೇ ತಮ್ಮ ತಾಲೂಕಿಗೆ ಮೀಸಲಿಡುವ ಹಣವನ್ನು ಪಡೆದು ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಂದಾಯ ವಸೂಲಿ: ದಕ್ಷಿಣಕನ್ನಡ ಜಿಲೆಯಲ್ಲಿ 2010-11 ನೇ ಸಾಲಿಗೆ 70 ಕೋಟಿಗೂ ಅಧಿಕ ಕಂದಾಯ ಬಾಕಿ ಇದ್ದು ಕಳೆ ತಿಂಗಳಾಂತ್ಯಕ್ಕೆ 50.25 ಕೋಟಿಗೂಅಧಿಕ ಕಂದಾಯ ವಸೂಲಿ ಮಾಡಲಾಗಿದ್ದು,ಬಾಕಿ 19.84 ಕೋಟಿ ವಸೂಲಾಗಬೇಕಾಗಿದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಸೂಲಾತಿ ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ತಿಳಿಸಿದರು.
ಕಂದಾಯ ಬಾಕಿ ವಸೂಲಿ ಮಾಡುವಾಗ ಬಡವರ ಮನೆ ಆಸ್ತಿ ಜಫ್ತಿ ಮಾಡುವಂತಹ ಕೆಲಸಕ್ಕೆ ಕೈಹಾಕದೆ ಸೌಮ್ಯವಾಗಿ ವರ್ತಿಸಿ ಅವರ ಮನವೊಲಿಸಿ ಕಂದಾಯ ವಸೂಲಿ ಮಾಡಲು ಜಿಲ್ಲಾಧಿಕಾರಿಗಳು ಕಿವಿಮಾತು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಇನ್ನಿತರೆ ಜಿಲ್ಲಾ ಮಟ್ಟದ ಅಧಿಕಾರಿಗಳು,ಉಪವಿಭಾಗಾಧಿಕಾರಿಗಳು,ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.