Saturday, June 30, 2012

ಕೊಲ್ಲಿಯಲ್ಲಿ ಜನಸಂಪರ್ಕ ಸಭೆ- ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಮಂಗಳೂರು, ಜೂನ್.30:ಬೆಳ್ತಂಗಡಿಯ ಅರಣ್ಯ ಪ್ರದೇಶಗಳ ವ್ಯಾಪ್ತಿಯ 11 ಗ್ರಾಮಗಳಲ್ಲಿ ಮೂಲಭೂತಸೌಕರ್ಯ ಕೊರತೆ ಎದುರಿಸುತ್ತಿರುವವರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿ ಅರ್ಹರಿಗೆ ಸವಲತ್ತುಗಳನ್ನು ವಿತರಿಸುವ ಅರ್ಥಪೂರ್ಣ ಜನಸಂಪರ್ಕ ಸಭೆಯನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಬೆಳ್ತಂಗಡಿಯ ಕೊಲ್ಲಿಯಲ್ಲಿ ಆಯೋಜಿಸಿತ್ತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಎಲ್ಲಾ ಇಲಾಖೆಗಳ ಸಮನ್ವಯ ಹಾಗೂ ಪೂರ್ವಸಿದ್ಧತೆಯೊಂದಿಗೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಿಶೇಷ ಅಭಿನಂದನೆ ಸಲ್ಲಿಸಿದರು.
ಇಲ್ಲಿನ ಜನರಿಗಾಗಿ ಆರೋಗ್ಯ ಇಲಾಖೆ ವತಿಯಿಂದ ಮೊಬೈಲ್ ವಾಹನ, ಮೊಬೈಲ್ ರೇಷನ್ ವಾಹನ ಸೇವೆಯನ್ನು ನಿಯಮಿತವಾಗಿ ನೀಡಲು ಜಿಲ್ಲಾಡಳಿತ ಬದ್ಧ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು. ಕಳೆದ ಎಂಟು ತಿಂಗಳಲ್ಲಿ ಜಿಲ್ಲಾಡಳಿತ ಜನಸಂಪರ್ಕ ಸಭೆ ಆಯೋಜಿಸಿ ಜನರ ಸಮಸ್ಯೆಗಳನ್ನು ಆಲಿಸಿ ಕಾನೂನು ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿಯೂ ಹೇಳಿದ ಎಲ್ಲ ಭರವಸೆಗಳನ್ನು ಈಡೇರಿಸುವ ಬದ್ಧತೆಯನ್ನು ಜಿಲ್ಲಾಧಿಕಾರಿಗಳು ಸಭೆಯಲ್ಲಿ ನೀಡಿದರು.
ಕುತ್ಲೂರು, ನಾರಾವಿಯಲ್ಲಿರುವವರಿಗೆ ಮಿನಿ ಹೈಡ್ರೋ ಕ್ಲಿನಿಕ್ ಯೋಜನೆಗಳ ಮೂಲಕ ವಿದ್ಯುತ್ ನೀಡುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ನಿಂದ 36 ಲಕ್ಷದ ವಿವಿಧ ಕಾಮಗಾರಿಗಳನ್ನು ರೂಪಿಸುವುದಾಗಿ ಹೇಳಿದರು. ಕುತ್ಲೂರು, ನಾರಾವಿಗೆ ಇಬ್ಬರು ಗ್ರಾಮಸಹಾಯಕರನ್ನು ನೇಮಿಸಿದ ಆದೇಶವನ್ನು ದೇವಪ್ಪ ಮಲೆಕುಡಿಯ ಮತ್ತು ಸುಧಾಕರ ಮಲೆಕುಡಿಯ ಅವರಿಗೆ ನೀಡಿದರು.
ಆಶ್ರಮ ಶಾಲೆಯಲ್ಲಿ ಅಡುಗೆಯವರಿಗೆ ನಾಲ್ಕು ಹುದ್ದೆ, 9 ಶಿಕ್ಷಕರ ಹುದ್ದೆಯನ್ನು ಅರ್ಹರಿಗೆ ನೀಡಲಾಯಿತು. ಕೆ ಎಸ್ ಆರ್ ಟಿಸಿಯಲ್ಲಿ ಉದ್ಯೋಗ ಪಡೆಯಲು ತರಬೇತಿ, ಮುಂದಿನ ಒಂದು ತಿಂಗಳೊಳಗಾಗಿ ಎಲ್ಲ ಸೌರ ವಿದ್ಯುತ್ ಸೌಲಭ್ಯ ಹೊಂದಿರುವ ಮನೆಗಳಲ್ಲಿ ಸೋಲಾರ್ ನ್ನು ಸರಿಪಡಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಸ್ಥಳೀಯ ಮೆಸ್ಕಾಂ ಮತ್ತು ಕಂದಾಯ ಇಲಾಖೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ತಕ್ಷಣ ತಮ್ಮನ್ನು ಸ್ಥಳೀಯರು ಸಂಪರ್ಕಿಸಬಹುದು ಎಂದ ಜಿಲ್ಲಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿಗಳನ್ನು ಸರ್ಕಾರ ನೀಡುತ್ತಿದ್ದು, ಆಸಕ್ತರು ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದರು.
ರಾಷ್ಟ್ರೀಯ ಉದ್ಯಾನವನದೊಳಗೆ ವಾಸಿಸುತ್ತಿರುವವರನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂಬುದನ್ನು ಜನಸಂಪರ್ಕ ಸಭೆಯಲ್ಲಿ ಸ್ಪಷ್ಟ ಪಡಿಸಿದ ಜಿಲ್ಲಾಧಿಕಾರಿಗಳು, ವೈಯಕ್ತಿಕ ಆಸಕ್ತಿಯಿಂದ, ಸ್ವ ಇಚ್ಛೆಯಿಂದ ಬಂದರೆ ಸೂಕ್ತ ಪರಿಹಾರ ನೀಡಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಗ್ರಾಮದ ಸಮಗ್ರ ಪರಿಚಯ ತಮಗಿದ್ದು, ಉತ್ತಮ ಆರಂಭ ಇಂದಾಗಿದೆ. ಯೋಜನೆಗಳ ಸಮರ್ಪಕ ಅನುಷ್ಠಾನ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು.
ಸಭೆಗೆ ಆಗಮಿಸಿದ ಸ್ಥಳೀಯರು ಹಕ್ಕುಪತ್ರ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಬೇಡಿಕೆಯನ್ನು ಮುಂದಿಟ್ಟರು.
ಎಸ್ ಪಿ ಅಭಿಷೇಕ್ ಗೋಯಲ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಪೊಲೀಸ್ ಇಲಾಖೆ ನಕ್ಸಲ್ ಸಮಸ್ಯೆಗಳ ಮೂಲ ಕಂಡು ಹುಡುಕಿ, ಸಾಮಾಜಿಕ ಸಮಸ್ಯೆಗಳು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗದಂತೆ ತಡೆಯಲು ಇಲಾಖೆ ಜಿಲ್ಲಾಡಳಿತದ ನೆರವನ್ನು ಕೋರಿತ್ತು ಎಂದರು. ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾಗ್ಯಲಕ್ಮೀ ಬಾಂಡ್, ಆತ್ಮ ಯೋಜನೆಯಲ್ಲಿ ವಿವಿಧ ಸವಲತ್ತುಗಳ ಚೆಕ್ಕು ವಿತರಣೆ, ತೋಟಗಾರಿಕಾ ಇಲಾಖೆಯಿಂದ ಸಸಿ ವಿತರಣೆ,ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಹಾಯ ಧನದ ಚೆಕ್ಕು ಸೇರಿದಂರೆ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಿಸಲಾಯಿತು. ಜಿ.ಪಂ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ವೈಲ್ಡ್ ಲೈಫ್ ಡಿಸಿಎಫ್ ಪ್ರಕಾಶ್ ,ಪುತ್ತೂರು ಎಎಸ್ಪಿ ಎಂ.ಎನ್. ಅನುಚೇತ್, ಪುತ್ತೂರು ಉಪವಿಭಾಗದಾಕಾರಿ ಸುಂದರ ಭಟ್, ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Thursday, June 28, 2012

ಪದ್ಮಯ್ಯ ನಾಯಕ್ ರಿಗೆ ಆತ್ಮೀಯ ಬೀಳ್ಕೊಡುಗೆ

ಮಂಗಳೂರು,ಜೂನ್.28:ಜಿಲ್ಲೆಯಲ್ಲಿ ಕೃಷಿಗೆ ಪೂರಕ ವಾತಾವರಣವಿದ್ದರೂ, ಕೃಷಿ ಕ್ಷೇತ್ರದಿಂದ ಮಾನವ ಸಂಪನ್ಮೂಲ ವಿಮುಖವಾಗುತ್ತಿದೆ; ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಿದ್ದರಿಂದ ಮತ್ತೆ ಕೃಷಿಕರನ್ನು ಕೃಷಿಯತ್ತ ಸೆಳೆಯುವುದು ಸಾಧ್ಯ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ಅವರು ಹೇಳಿದರು.
ಬುಧವಾರ ಸಂಜೆ ವಾರ್ತಾ ಇಲಾಖೆಯಲ್ಲಿ ಕೃಷಿ ಇಲಾಖೆಯ ಸಹೋದ್ಯೋಗಿಗಳು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಇಲಾಖೆಯು ಕೃಷಿಪರ ಕೆಲಸಗಳಿಂದ ಜಿಲ್ಲೆಯಲ್ಲಿ ಗುರುತಿಸಲ್ಪಡಬೇಕು. ಎಲ್ಲ ಸಹದ್ಯೋಗಿಗಳ ಸಹಕಾರದಿಂದ ಇಲಾಖೆ ಕೃಷಿಕರಿಂದ ಗುರುತಿಲ್ಪಡಬೇಕು. ಮುಂದೆ ಬರುವ ಅಧಿಕಾರಿಗಳಿಗೂ ಎಲ್ಲ ಸಹಕಾರ ನೀಡಬೇಕು ಎಂದು ಕೊಪ್ಪಳಕ್ಕೆ ವರ್ಗಾವಣೆಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪದನ್ನೋತಿ ಹೊಂದಿ ಚಿಂಚೋಳಿಗೆ ವರ್ಗಾವಣೆಯಾದ ಗುರುಶಾಂತ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಕೃಷಿ ಇಲಾಖೆಯ ಎಲ್ಲ ಸಹದ್ಯೋಗಿಗಳು ಜಿಲ್ಲೆಯಿಂದ ಆಗಮಿಸಿದ್ದರು.

'ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಿ'


ಮಂಗಳೂರು,ಜೂನ್. 28: ಉಗ್ರಗಾಮಿ ಚಟುವಟಿಕೆ ಮತ್ತು ನಕಲಿ ನೋಟ್ ಚಲಾವಣೆಗಿಂತ ಹೀನ ಮತ್ತು ಅಪಾಯಕಾರಿಯಾದುದು ಮಾದಕ ದ್ರವ್ಯ ಸಾಗಾಣಿಕೆ ಜಾಲ; ಇದು ನಮ್ಮ ಮುಂದಿನ ಜನಾಂಗವನ್ನೇ ಹಾಳುಗೆಡಹುವಂತಹುದು. ಈ ಜಾಲವನ್ನು ತಡೆಯಲು ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆಯ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿದೆ; ಇದರ ಜೊತೆಗೆ ಪತ್ತೆ ಹಚ್ಚುವಿಕೆಗೆ ಇನ್ನಷ್ಟು ಆದ್ಯತೆ ನೀಡಬೇಕಿದೆ. ಸೌಕರ್ಯಗಳ ಸದುಪಯೋಗವಾಗಬೇಕಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಎಡಿಜಿಪಿ (ಅಪರಾಧ) ಎ ಎಂ ಪ್ರಸಾದ್ ಅವರು, ಪೊಲೀಸ್ ಇಲಾಖೆ ರಾಜ್ಯದಲ್ಲಿ ಮಾದಕ ವಸ್ತು ಜಾಲ ಪತ್ತೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ರಾಜ್ಯದಲ್ಲಿ ದಾಖಲಿಸಿರುವ ಪ್ರಕರಣ ಮತ್ತು ಬಂಧಿಸಿದವರ ಮಾಹಿತಿ ನೀಡಿದ ಅವರು, ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ತಾಣ ಮಂಗಳೂರು ಮತ್ತು ಮಣಿಪಾಲದಲ್ಲಿ ಈ ನಿಟ್ಟಿನಲ್ಲಿ ವ್ಯವಸ್ಥಿತಿ ಕಾರ್ಯಾಚರಣೆಗೆ ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ನುಡಿದರು. ಕಮಿಷನರೇಟ್ ಮತ್ತು ಪಾಲಿಕೆ ಆರೋಗ್ಯ ವಿಭಾಗ ಶಾಲಾ ಕಾಲೇಜುಗಳ ಸುತ್ತಳತೆಯಲ್ಲಿ ಇಂತಹ ಚಟುವಟಿಕೆಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕೆಂದು ಸಮಿತಿ ಸದಸ್ಯರು ಹೇಳಿದರಲ್ಲದೆ, ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಶಿಕ್ಷಕರು ಸಹಕಾರ ನೀಡಬೇಕೆಂದರು. ಹೆತ್ತವರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕೆಂಬ ಸಲಹೆಯೂ ಸಭೆಯಲ್ಲಿ ಪ್ರತಿಧ್ವನಿಸಿತು.
ಜಿಲ್ಲೆಯಲ್ಲಿ ರಕ್ಷಿತಾರಣ್ಯಗಳಲ್ಲಿ ವಾಸಿಸುವವರು ಸ್ವಯಂ ಪ್ರೇರಿತರಾಗಿ ಹೊರಬರುವಂತೆ ಅತ್ಯುತ್ತಮ ಪ್ಯಾಕೇಜ್ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕ ಒಕ್ಕಲೆಬ್ಬಿಸುವಿಕೆ ಸಲ್ಲ ಎಂಬ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾಯಿತು.
ಅಪರ ಕಾರ್ಯದರ್ಶಿ (ಅಭಿವೃದ್ಧಿ) ಕೌಶಿಕ್ ಮುಖರ್ಜಿ ಅವರು ಮಾತನಾಡಿ, ಅರಣ್ಯ ಇಲಾಖೆ ಕಾನೂನು ಮತ್ತು ಉತ್ತಮ ಪುನರ್ವಸತಿ ಮಾದರಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರಲ್ಲದೆ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಮಸ್ಯೆಗೆ ಸಲಹೆಗಳನ್ನು ನೀಡಿದರು. ಅರ್ಜಿ ಸಮಿತಿಯು ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಪಡೆಯುವುದಾಗಿ ಹೇಳಿತು. ಕಂದಾಯ ಇಲಾಖೆಯಲ್ಲಿ ಆಸ್ತಿ ನೋಂದಣಿ ಭೂಮಿ-ಕಾವೇರಿ ಜಾರಿ, ಡಾಟಾ ಎಂಟ್ರಿ ಮುಂತಾದ ಪ್ರಗತಿ ಕಾರ್ಯಗಳ ಪರಿಶೀಲನೆ ಮತ್ತು ಈ ಬಗ್ಗೆ ಪ್ರತ್ಯೆಕ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಭೆ ತೀರ್ಮಾನಿಸಿತು. ನಮ್ಮ ನೆರೆ ಜಿಲ್ಲೆ ಕಾಸರಗೋಡು ಇ ಗವರ್ನನೆನ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ಅದರಲ್ಲೂ ಮುಖ್ಯವಾಗಿ ಮಹಾನಗರಪಾಲಿಕೆ ಇ ಗವರ್ನನೆನ್ಸ್ ನ್ನು ಅಳವಡಿಸಲಿ ಎಂದು ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಅವರು ಸಲಹೆ ಮಾಡಿದರು. ಸಭೆಯಲ್ಲಿ ಸದಸ್ಯರಾದ ಅಪ್ಪಚ್ಚು ರಂಜನ್, ಪಿ ಎಂ ಅಶೋಕ್, ಲಾಲಾಜಿ ಆರ್ ಮೆಂಡನ್, ಎಂ ಸತ್ಯನಾರಾಯಣ, ಬಿ ಬಿ ರಾಮಸ್ವಾಮಿ ಗೌಡ, ಸುರೇಶ್ ಗೌಡ, ಅಪರ ಕಾರ್ಯದರ್ಶಿ ಎಂ ಮಂಜುನಾಥ್, ಅಧೀನ ಕಾರ್ಯದರ್ಶಿ ಮಲ್ಲಪ್ಪ ಬಿ ಕಾಳೆ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಧರ್,ರಾಜ್ಯ ಪೋಲಿಸ್ ಮಹಾ ನಿರ್ದೇಶಕ( ಹಂಗಾಮಿ) ಲಾಲ್ ರೊಕೊಮೊ ಪಚಾವೋ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಉಡುಪಿ ಜಿಲ್ಲಾಧಿಕಾರಿ ಡಾ ಎಂ ಟಿ ರೇಜು, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್, ನಗರ ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ,ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅಭಿಷೇಕ್ ಗೋಯಲ್, ಮನಾಪ ಆಯುಕ್ತರಾದ ಡಾ ಹರೀಶ್ ಕುಮಾರ್ ಅವರನ್ನೊಳಗೊಂಡಂತೆ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖಾ ಅಧಿಕಾರಿಗಳು, ಉಪಸ್ಥಿತರಿದ್ದರು.

Tuesday, June 26, 2012

" ಸಕಾಲ " ನಾಟಕದ ಮೂಲಕ ಜನಜಾಗೃತಿ ಆಂದೋಲನ

ಮಂಗಳೂರು,ಜೂನ್.26: ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ಕರ್ನಾಟಕ ನಾಗರಿಕ ಸೇವಾ ಖಾತ್ರಿ ಮಸೂದೆ-2011( ಸಕಾಲ ) ರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ " ಸಕಾಲ ' ಜನಜಾಗೃತಿ ನಾಟಕ ಬಂಟ್ವಾಳ ತಾಲೂಕಿನಾದ್ಯಂತ ನಡೆಯುತ್ತಿದೆ.
ದ.ಕ.ಜಿಲ್ಲಾ ವಾರ್ತಾಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಈ ನಾಟಕವನ್ನು ಬಿ.ಸಿ.ರೋಡಿನ ಸಂಸಾರ ಜೋಡುಮಾರ್ಗ ತಂಡ ಅಭಿನಯಿಸುತ್ತಿದ್ದು, ಈಗಾಗಲೇ 10ಕ್ಕೂ ಅಧಿಕ ಗ್ರಾ.ಪಂ.ವ್ಯಾಪ್ತಿಯಲ್ಲಿ ತನ್ನ ಪ್ರದರ್ಶನವನ್ನು ನೀಡಿದೆ.
ಬಂಟ್ವಾಳ ತಾಲೂಕಿನ ಬಾಳೆಪುಣಿಯಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ಪ್ರಕಾಶ್ ರವರಿಂದ ಉದ್ಘಾಟಿಸಲ್ಪಟ್ಟ ಈ ಜನಜಾಗೃತಿ ನಾಟಕವು ಈಗಾಗಲೇ ಬಾಳೆಪುಣಿ, ಪಿಲಾತಬೆಟ್ಟು, ಕಾವಳಮೂಡೂರು, ನಾವೂರು, ಸರಪಾಡಿ, ಕುರ್ನಾಡು, ಕಣಂತೂರು, ಮಂಚಿ, ಬಿ.ಸಿ.ರೋಡು, ಇರಾ, ಗೋಳ್ತಮಜಲು, ಬಾಳ್ತಿಲ ಹಾಗೂ ಮಾಣಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತನ್ನ ಪ್ರದರ್ಶನಗಳನ್ನು ನೀಡಿದೆ.
ಮೂರು ತಿಂಗಳ ಕಾಲ ನಡೆಯುವ ಈ ಜನಜಾಗೃತಿ ಅಭಿಯಾನದ ಮೂಲಕ ಸಂಸಾರ ತಂಡವು ಜಿಲ್ಲೆಯಾದ್ಯಂತ 60ಪ್ರದರ್ಶನಗಳನ್ನು ನೀಡಲಿದೆ.ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಸೇವೆ-ಸೌಲಭ್ಯಪಡೆಯಲು ಪಡುತ್ತಿರುವ ಪಾಡನ್ನು ಎತ್ತಿಹಿಡಿದಿರುವ ಈ ನಾಟಕವು ಕಚೇರಿಯೊಳಗೆ ಅಧಿಕಾರಿಗಳು ಪಡುತ್ತಿರುವ ಸಂಕಷ್ಠ, ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವನೆಯನ್ನು ನೇರವಾಗಿ ಪ್ರತಿಪಾದಿಸುತ್ತದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರರೂಪವಾಗಿ ಸಕಾಲದ ಮೂಲಕ ತ್ವರಿತ-ತುರ್ತು ಸೇವೆಯನ್ನು ಪಡೆಯುವ ಸಾಧ್ಯತೆಯನ್ನು ನಾಟಕವು ಹಾಡು, ನೃತ್ಯ, ಮಾತುಕತೆಯ ಮೂಲಕ ಚರ್ಚಿಸುತ್ತದೆ.
ರಂಗಕಲಾವಿದ ಮೌನೇಶ್ ವಿಶ್ವಕರ್ಮ ಸಂಚಾಲಕತ್ವದ ಸಂಸಾರ ಜೋಡುಮಾರ್ಗ ತಂಡದಲ್ಲಿ ಪತ್ರಕರ್ತರಾದ , ಸಂಶುದ್ದೀನ್ ಸಂಪ್ಯ, ಗೋಪಾಲ ಅಂಚನ್,ಸಂದೀಪ್ ಸಾಲ್ಯಾನ್, ಆಕಾಶವಾಣಿ ಕಲಾವಿದ ಕೃಷ್ಣಯ್ಯ ಲಾಲ, ಶಶಿಧರ ಬಾಚಕೆರೆ, ಪ್ರತಿಮಗೋಪಾಲ ಅಂಚನ್, ಧನರಾಜ್ ಮಾಮೇಶ್ವರ, ಸುನಿಲ ಜಾರಂದಗುಡ್ಡೆ, ನಿತೇಶ್ ಬಾಳ್ತಿಲ ಕಲಾವಿದರಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಯವರ ಮಾರ್ಗದರ್ಶನದಲ್ಲಿ ಅಭಿಯಾನ ನಡೆಯುತ್ತಿದ್ದು, ವಾರ್ತಾಇಲಾಖೆಯ ಫ್ರಾನ್ಸಿಸ್ ಲೂಯಿಸ್ ತಂಡದ ಜೊತೆಗೆ ಸಾಥ್ ನೀಡುತ್ತಿದ್ದಾರೆ.

"ಉತ್ತಮ ಸಮಾಜ ನಿರ್ಮಾಣ ವೈದ್ಯಾಧಿಕಾರಿಗಳ ಪಾತ್ರ ಹಿರಿದು''

ಮಂಗಳೂರು,ಜೂನ್.26: ಸದೃಢ ಸಮಾಜ,ಬಲಿಷ್ಠ ದೇಶ ನಿರ್ಮಾಣ ಮಾಡುವಲ್ಲಿ ವೈದ್ಯಾಧಿಕಾರಿಗಳ ಪಾತ್ರ ಹಿರಿದು. ಸಮಾಜದಲ್ಲಿ ವೈದ್ಯಾಧಿಕಾರಿಗಳ ವೃತ್ತಿ ಉತ್ತಮವೆಂದು ಮಂಗಳೂರಿನ ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್ರವರು ತಿಳಿಸಿದರು.
ಅವರು ಇಂದು ಬೆಳಿಗ್ಗೆ ಮಂಗಳೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ತಾಲೂಕು ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ನಡೆದಿರುವ ವಿಶ್ವ ಆರೋಗ್ಯ ದಿನಾಚರಣೆ ಮತ್ತು ತಾಲೂಕು ಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ನಗರೀಕರಣದಿಂದ ಜೀವನದಲ್ಲಿ ಆರೋಗ್ಯವಂತರು ಕಡಿಮೆಯಾಗುತ್ತಿದ್ದಾರೆ. ಮಧುಮೇಹ,ರಕ್ತದೊತ್ತಡದಂತಹ ಕಾಯಿಲೆಗಳು ಮನೆಮನೆಯಲ್ಲೂ ಇರುವ ಕಾಯಿಲೆಯಾಗಿದೆ. ಆದ್ದರಿಂದ ಆರೋಗ್ಯವಂತರಾಗಿರಲು ವ್ಯಕ್ತಿಯು ಸದಾ ಸಕರಾತ್ಮಕ ಚಿಂತನೆಯನ್ನು ಮಾಡುವುದು ಅವಶ್ಯ. ತಿಂದುಂಡ ಆಹಾರವನ್ನು ಕರಗಿಸಲು ಪ್ರಯತ್ನಿಸಬೇಕು ಮತ್ತು ಮಿತ ಆಹಾರ ಸೇವಿಸಿ ಸ್ವಾಭಾವಿಕವಾಗಿ ದೊರೆಯುವ ಆಹಾರವನ್ನೇ ಹೆಚ್ಚಾಗಿ ಸೇವಿಸಬೇಕು ಮತ್ತು ಎಲ್ಲರಿಗೂ ಯಾವಾಗಲೂ ಒಳ್ಳೆಯದನ್ನೇ ಯೋಚನೆ ಮಾಡುವುದರಿಂದ ಆರೋಗ್ಯವಂತರಾಗಿರಲು ಸಾಧ್ಯವೆಂದು ಅವರು ಸೂಚನೆ ನೀಡಿದರು. ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಈ ಇಲಾಖೆಯಲ್ಲಿ ನಿಯಮಾನುಸಾರ ಶ್ರದ್ಧೆಯಿಂದ ಕೆಲಸ ಮಾಡಿರುವವರಿಗೆ ಪುರಸ್ಕಾರ ಮಾಡಿರುವುದು ಅದ್ಭುತವೆಂದು ನುಡಿದರು.

ಸಮಾರಂಭದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭವ್ಯಗಂಗಾಧರ್ ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಹಲವಾರು ಯೋಜನೆಗಳಿದ್ದು, ಇದನ್ನು ಜನರಿಗೆ ತಲುಪಿಸುವ ಕಾರ್ಯ ಆಗಬೇಕು.ಇಂದಿಗೂ ಗ್ರಾಮೀಣ ಪ್ರದೇಶದ ಜನರಿಗೆ ಈ ಬಗ್ಗೆ ಮಾಹಿತಿ ಕಡಿಮೆ ಇರುತ್ತದೆ. ಇದನ್ನು ತಿಳಿಸುವ ಕೆಲಸ ಆಗಬೇಕಾಗಿದೆ. ಈ ಯೋಜನೆ ಪ್ರಾರಂಭವಾಗಿ 7 ವರ್ಷ ಸಂದರೂ ಹೆಚ್ಚಿನ ಸಾಧನೆ ಆಗಿಲ್ಲವೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ
ಡಾ.ಓ.ಶ್ರೀರಂಗಪ್ಪ ಮಾತನಾಡಿ ವೃದ್ಧರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು ಅವರಿಗೆ ಔಷಧಿಗಿಂತ ಪ್ರೀತಿ ಮುಖ್ಯವಾಗಿದೆ. ಈ ಇಲಾಖೆಯಲ್ಲಿ ಚೆನ್ನಾಗಿ ಕೆಲಸ ಮಾಡಿದವರಿಗೆ ಪ್ರಶಸ್ತಿ ನೀಡುವುದರಿಂದ ಇನ್ನು ಮುಂದೆ ಇದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಲು ಪ್ರೋತ್ಸಾಹ ನೀಡಿದಂತಾಗುವುದೆಂದು ತಿಳಿಸಿದರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಾದ ರೋಹಿದಾಸ್ ಮಾತನಾಡಿ ಮಿತ ಆಹಾರ ಆರೋಗ್ಯವಂತರಾಗಿರಲು ಸಾಧ್ಯ ಮತ್ತು ಯಾವಾಗಲೂ ಚಟುವಟಿಕೆಯಿಂದಿರುವುದರಿಂದ ಆರೋಗ್ಯವಂತರಾಗಬಹುದೆಂದು ತಿಳಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣವನ್ನು ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ ರುಕ್ಷ್ಮಿಣಿ ಮಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ವೈದ್ಯಾಧಿಕಾರಿ ಡಾ. ರತ್ನಾಕರ್ ಸ್ವಾಗತಿಸಿದರು. ಕೊನೆಯಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ ವಂದಿಸಿದರು.

ಆರೋಗ್ಯ ದಿನಾಚರಣೆ ಪ್ರಶಸ್ತಿ ಪಡೆದವರು

ಮಂಗಳೂರು,ಜೂನ್. 26 :ವಿಶ್ವ ಆರೋಗ್ಯ ದಿನಾಚರಣೆ ಸಮಾರಂಭದಲ್ಲಿ 15 ಮಂದಿ ಸರಕಾರಿ ನೌಕರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.2011-12 ನೇ ಸಾಲಿನ ಆರೋಗ್ಯ ಇಲಾಖೆಯ ತಾಲೂಕು ಮಟ್ಟದ ಪ್ರಶಸ್ತಿ ಪಡೆದವರ ವಿವರ ಇಂತಿದೆ.
ಉತ್ತಮ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸವಿತ,ಉತ್ತಮ ಪ್ರಸೂತಿ ತಜ್ಞೆ -ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದ ಡಾ.ರಶ್ಮಿ ಎಂ.ಎನ್.
ಉತ್ತಮ ಮಕ್ಕಳ ತಜ್ಞರು-ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಕೃಷ್ಣ, ಉತ್ತಮ ವೈದ್ಯಾಧಿಕಾರಿ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ನವೀನ್ ಕುಮಾರ್. ವಿ. ಉತ್ತಮ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ-ಅತ್ತೂರು ಆರೋಗ್ಯ ಕೇಂದ್ರದ ಶ್ರೀಮತಿ ಜೆಸಿಂತ ಲೋಬೋ, ಉತ್ತಮ ಹಿರಿಯ ಪುರುಷ ಆರೋಗ್ಯ ಸಹಾಯಕ ,ಕುಡುಪು ಆರೋಗ್ಯ ಕೇಂದ್ರದ ಸೆಬೆಸ್ಟಿಯನ್ ರೇಗೋ, ಉತ್ತಮ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ -ಅಂಬ್ಲಮೊಗರು ಆರೋಗ್ಯ ಕೇಂದ್ರದ ಶ್ರೀಮತಿ ಕುಸುಮ, ಉತ್ತಮ ಕಿರಿಯ ಪುರುಷ ಆರೋಗ್ಯ ಸಹಾಯಕ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ರುದ್ರಪ್ಪ ಬಿ.ತಿಮ್ಮಾಪುರ್, ಉತ್ತಮ ಶುಶ್ರೂಷಕಿ -ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಶ್ರೀಮತಿ ಕುಮುದ,ಉತ್ತಮ ಶ್ರುಶ್ರೂಷಕಿ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀಮತಿ ರೋಸಮ್ಮ.ಪಿ.ಉತ್ತಮ ಔಷಧಿ ವಿತರಕ ಅತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವಿಷ್ಣುರಾಜ್,ಉತ್ತಮ ಲ್ಯಾಬ್ ಟೆಕ್ನಿಷಿಯನ್ ಅಡ್ಯಾರ್ ಆರೋಗ್ಯ ಕೇಂದ್ರದ ಅಹಮ್ಮದ್ ಶರೀಫ್, ಉತ್ತಮ ನೇತ್ರ ಸಹಾಯಕ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದ ಮಹೇಶ್, ಉತ್ತಮ ಲಿಪಿಕ ನೌಕರ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀಮತಿ ನಾರಾಯಣಿ ,ಉತ್ತಮ ವಾಹನ ಚಾಲಕ ಮಂಗಳೂರು ತಾಲೂಕು ಆರೋಗ್ಯ ಕೇಂದ್ರದ ಸತೀಶ್, ಉತ್ತಮ ಗ್ರೂಪ್ ಡಿ ನೌಕರ ಬೊಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಸುರೇಂದ್ರ ಪೂಜಾರಿ ಇವರುಗಳಿಗೆ ಪ್ರಶಸ್ತಿ ನೀಡಲಾಯಿತು.
ಉತ್ತಮ ಆರೋಗ್ಯ ಕೇಂದ್ರವೆಂದು ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಯ್ಕೆ ಮಾಡಿ ಡಾ.ನವೀನ್ ಕುಮಾರ್ ,ಉತ್ತಮ ಉಪ ಆರೋಗ್ಯ ಕೇಂದ್ರವೆಂದು ಮೂಳೂರು ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡಿ ಡಾ ಸುನೀತ ಗಾಂವ್ಕರ್ ಪ್ರಶಸ್ತಿ ಸ್ವೀಕರಿಸಿದರು. ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿರುವ ಶ್ರೀಮತಿ ಲ್ಯಾನ್ಸಿಲೋಬೋ ಇದೀಗ ಕುಷ್ಠ ನಿವಾರಣಾಧಿಕಾರಿ ಮತ್ತು ಅಂಧತ್ವ ನಿವಾರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಪ್ರಶಸ್ತಿ ನೀಡಲಾಯಿತು.

Saturday, June 23, 2012

ಜುಲೈ 5`ಶಾಲೆಗಾಗಿ ನಾವು-ನೀವು'

ಮಂಗಳೂರು,ಜೂನ್.23: ಜುಲೈ 5, 2012ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ `ಶಾಲೆಗಾಗಿ ನಾವು-ನೀವು' ಕಾರ್ಯಕ್ರಮ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಅವರು ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸರ್ಕಾರ ಉತ್ತಮ ಶಿಕ್ಷಣಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ವಿವರ ಗಳನ್ನು ನೀಡಿದರು.
ಹಳೆಯ ಪಠ್ಯ ಕ್ರಮ ಗಳನ್ನೆಲ್ಲಾ ಬದಲಿಸಿ ಎಲ್ಲ ಮಕ್ಕಳಿಗೆ ಪ್ರಸಕ್ತ ಪರಿಸ್ಥಿತಿಗೆ ಪೂರಕವಾಗಿ, ಸಮಾನವಾಗಿ ಉತ್ತಮ ಪಠ್ಯಗಳನ್ನು ಒದಗಿಸಲು ಇಲಾಖೆ ಸಿದ್ಧತೆಗಳನ್ನು ನಡೆಸಿದೆ ಎಂದು ಸಚಿವರು ನುಡಿದರು.
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು; ಮೂಲಭೂತ ಸೌಕರ್ಯಗಳಿರಬೇಕು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಜತೆಯಲ್ಲಿ ಸಮಾಜವನ್ನು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ಮಾಡುವುದು ಸರಕಾರದ ಗುರಿಯಾಗಿದೆ ಎಂದು ಶಿಕ್ಷಣ ಸಚಿವರು ಅಭಿಪ್ರಾಯಪಟ್ಟರು.
ಜುಲೈ 5ರಂದು ಸನ್ಮಾನ್ಯ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರು ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸಚಿವರು ಸರಕಾರಿ ಶಾಲೆಗಳಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಶಾಸಕರು ಹಾಗೂ ಎಲ್ಲಾ ಸ್ತರಗಳ ಜನಪ್ರತಿನಿಧಿಗಳು ಕೂಡಾ ಶಾಲೆಗಳ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವರು ಎಂದು ಕಾಗೇರಿ ವಿವರಿಸಿದರು.
ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ನಮ್ಮ ನಿಮ್ಮೆಲ್ಲರ ಕಾರ್ಯಕ್ರಮ.
ಅಂದು ಶಾಲೆಯಲ್ಲಿ ಪೋಷಕರೊಂದಿಗೆ ಸಂವಾದ, ಸಸಿ ನೆಡುವುದು, ಸೌಲಭ್ಯಗಳ ಅವಲೋಕನ ನಡೆಯಲಿದೆ. ಈ ಶೈಕ್ಷಣಿಕ ವರ್ಷದಲ್ಲಿ ಜಾರಿಯಾಗಿರುವ ಶಿಕ್ಷಣ ಹಕ್ಕು ಕಾಯ್ದೆಯ ಮಾಹಿತಿಯನ್ನು ಪೋಷಕರಿಗೆ ನೀಡಲಾಗುವುದು ಎಂದವರು ಹೇಳಿದರು.
ರಾಜ್ಯದ ಎಲ್ಲಾ ಅರ್ಹ ಮಕ್ಕಳು ಶಾಲೆಗೆ ದಾಖಲಾಗುವಂತೆ ನಾವೆಲ್ಲರು ನೋಡಿಕೊಳ್ಳಬೇಕು. ಹಾಗೆ ಶಾಲೆಗೆ ದಾಖಲಾದ ಮಕ್ಕಳು ಕನಿಷ್ಠ 8ನೇ ತರಗತಿಯವರೆಗೆ ಶಾಲೆ ಬಿಡದಂತೆ ನೋಡಿಕೊಳ್ಳುವುದು ಕೂಡಾ ಅಗತ್ಯವಾಗಿದೆ. ಇವೆರಡು ನಾವು ನಿರ್ವಹಿಸ ಬೇಕಾದ ಅತ್ಯಗತ್ಯ ಜವಾಬ್ದಾರಿಗಳು ಎಂದು ಕಾಗೇರಿ ಹೇಳಿದರು.
ಎಲ್ಲಾ ಮಕ್ಕಳು ಉನ್ನತ ಶಿಕ್ಷಣಪಡೆಯಬೇಕೆಂಬುದು ಸರಕಾರದ ಆಶಯ; ಪ್ರಸ್ತುತ ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ಪ್ರತಿಶತ 12ರಿಂದ 13 ಮಾತ್ರ. ಮುಂದಿನ 5 ವರ್ಷಗಳಲ್ಲಿ ಈ ಪ್ರಮಾಣವನ್ನು ಶೇ.25ಕ್ಕೇರಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ `ಶಾಲೆಗಾಗಿ ನಾವು-ನೀವು' ಕಾರ್ಯಕ್ರಮದ ಮೌಲ್ಯಮಾಪನವನ್ನು ಜು.6ರಿಂದ 31ರವರೆಗೆ ಕೈಗೊಳ್ಳಲಾಗುವುದು ಎಂದರು. ಮಕ್ಕಳು ಶಿಕ್ಷಣ ಪಡೆ ಯುವುದನ್ನು ಪ್ರೋತ್ಸಾಹಿಸಲು ಹಾಗೂ ಎಲ್ಲರಿಗೂ ಶಿಕ್ಷಣ ದೊರೆಯಲಿ ಎಂಬ ಒತ್ತಾಸೆಯಿಂದ ವಲಸೆ ಮಕ್ಕಳಿಗೆ ಶಾಲೆಗಳು, ಹೊಸ ಪಠ್ಯಕ್ರಮ ಬೋಧನೆಗೆ ಶಿಕ್ಷಕರಿಗೆ ತರಬೇತಿ, 5 ಲಕ್ಷ ಸೈಕಲ್ ವಿತರಣೆ, ಸಕಾಲದಲ್ಲಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.

ಬಹುಗ್ರಾಮ ಕುಡಿಯುವ ನೀರಿಗೆ 525 ಕೋಟಿ ರೂ. ಕ್ರಿಯಾಯೋಜನೆ

ಮಂಗಳೂರು. ಜೂನ್. 23 : ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಜಿಲ್ಲಾ ಪಂಚಾಯತ್ ನಿಂದ 525 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲಾಗಿದೆ. ರಸ್ತೆಗಳ ನಿರ್ಮಾಣಕ್ಕೆ ಮತ್ತು ತ್ಯಾಜ್ಯ ನಿರ್ವಹಣೆಗೆ 23.01 ಕೋಟಿ ರೂ. ಗಳ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ನಲ್ಲಿ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಭೇಟಿಯ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಆದ್ಯತೆ ಮತ್ತು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಿದ್ದು, ಘನ ಮತ್ತು ದ್ರವ ತ್ಯಾಜ್ಯ ವಿಲೇಗೆ ಮತ್ತು ಸಂಪರ್ಕ ವ್ಯವಸ್ಥೆಗೆ ಅಗತ್ಯ ಅನುದಾನದ ಬೇಡಿಕೆಯನ್ನು ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 42 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 216 ಗ್ರಾಮಗಳ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳು, ಈ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿಶೇಷ ಸಭೆ ನಡೆಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಟಾಸ್ಕ್ ಫೋಸ್ರ್ ಯೋಜನೆಯಡಿ 6 ಕೊಳವೆ ಬಾವಿ ಕಾಮಗಾರಿ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಡೆದಿದ್ದು, 4 ಬೋರ್ ವೆಲ್ ಕೊರೆಯಲಾಗಿದೆ. ಟಾಸ್ಕ್ ಫೋರ್ಸ್ ಯೋಜನೆಯಡಿ ರೂ. 4.80 ಲಕ್ಷ ಮಂಜೂರಾಗಿದ್ದು, 7 ಕಾಮಗಾರಿ ಗುರುತಿಸಿದ್ದು, 5 ಕಾಮಗಾರಿ ಪೂರ್ಣಗೊಂಡಿರುತ್ತದೆ.
ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ 76 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ ಎಂದು ಕೆಡಿಪಿಯಲ್ಲಿ ತಾಲೂಕು ಪಂಚಾಯತ್ ಇಒಗಳು ಮಾಹಿತಿ ನೀಡಿದರು. ಚಾರ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪೃಕೃತ್ತಿದತ್ತವಾದ ಝರಿ ನೀರು ಬಳಸುವ ಯೋಜನೆ ರಾಜ್ಯಕ್ಕೆ ಮಾದರಿ ಎಂದು ಸಿಇಒ ಅವರು ನುಡಿದರು. ಜಿಲ್ಲಾ ಪಂಚಾಯತ್ ಅಧೀನ ಕಚೇರಿಗಳು ಹಾಗೂ ಯೋಜನೆಗಳನ್ನು ರೂಪಿಸುವ ಇಂಜಿನಿಯರಿಂಗ್ ವಿಭಾಗ ಮಳೆ ನೀರು ಕೊಯ್ಲಿಗೆ ಪೂರಕವಾಗಿರಬೇಕೆಂದ ಸಿಇಒ ಅವರು, ಜಲಮೂಲಗಳಿಗೆ ಹಾಗೂ ಶಾಲಾ ವನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಶಾಲಾ ವನಗಳಲ್ಲಿ ನಮ್ಮ ಸ್ಥಳೀಯ ಪಾರಂಪರಿಕ ಹಣ್ಣಿನ ಗಿಡಗಳನ್ನು ಬೆಳೆಯಬೇಕು. ವನಮಹೋತ್ಸವದಂತಹ ಕಾರ್ಯಕ್ರಮಗಳು ಸಾಂಕೇತಿಕವಾಗಿ ಆಗದೆ ಪರಿಣಾಮಕಾರಿಯಾಗಿ ಆಗಬೇಕು. ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಆಲಿಸಲು ಸ್ಥಾಪಿಸಲಾಗಿದ್ದ ಕಂಟ್ರೋಲ್ ರೂಂ ಗಳು ಮಳೆಗಾಲದಲ್ಲಿ ವಿಪತ್ತು ನಿರ್ವಹಣಾ ಘಟಕಗಳಾಗಿ ಮುಂದುವರಿಯಲು, ವಿಕೋಪಗಳ ಬಗ್ಗೆ ಜನರಿಗೆ ಸ್ಪಂದಿಸಲು ಈ ಘಟಕಗಳು ಕಾರ್ಯಪ್ರವೃತ್ತವಾಗಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳು ಹೇಳಿದರು.
ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುವ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗಿದ್ದು ಜಿಲ್ಲಾ ಭೂಗರ್ಭ ಶಾಸ್ತ್ರಜ್ಞರು ಅದಕ್ಕೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಗ್ರಾಮಗಳಲ್ಲಿ ಮನ ಬಂದಂತೆ ಬೋರ್ ವೆಲ್ ಕೊರೆದು ನೀರಿಗಾಗಿ ಹಾಹಾಕಾರ ಸೃಷ್ಟಿಸುವ ಬದಲು ಸಮೀಕ್ಷೆ ಹಾಗೂ ವೈಜ್ಞಾನಿಕ ವರದಿ ಬಂದ ನಂತರ ಬೋರ್ ವೆಲ್ ಕೊರೆಯಲು ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಬಸವ ವಸತಿ, ಇಂದಿರಾ ಆವಾಸ್ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ಯೋಜನೆ ರೂಪಿಸಲಾಗಿದೆ. ಸಮಾಜ ಕಲ್ಯಾಣ ಮತ್ತು ಐಟಿಡಿಪಿ ಇಲಾಖೆ ಯನ್ನೊಳಗೊಂಡಂತೆ ಎಲ್ಲ ಇಲಾಖೆಗಳು ನಿಗದಿತವಾಗಿ ತಮ್ಮ ಇಲಾಖೆಯ ಅಭಿವೃದ್ಧಿ ಯ ಬಗ್ಗೆ ಮಾಹಿತಿ ನೀಡಬೇಕೆಂದರು.
ಘನ ತ್ಯಾಜ್ಯ ವಿಲೇವಾರಿ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಭೂಮಿ ಗುರುತಿಸಿದ್ದು ಯೋಜನೆ ಪ್ರಗತಿಯಲ್ಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ನೋಂದಣಿ ಕಾರ್ಯವು ಯಶಸ್ವಿಯಾಗಿ ಮುಗಿದಿದ್ದು ಮಂಗಳೂರಿನಲ್ಲಿ 9,717, ಬಂಟ್ವಾಳದಲ್ಲಿ 5,993, ಪುತ್ತೂರಿನಲ್ಲಿ 4,927, ಸುಳ್ಯದಲ್ಲಿ 3,427, ಬೆಳ್ತಂಗಡಿಯಲ್ಲಿ 8,941 ಸ್ಮಾಟ್ರ್ ಕಾಡ್ರ್ ಪಡೆದ ಬಿಪಿಎಲ್ ಕುಟುಂಬಗಳು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಮೆಸ್ಕಾಂ ಸಹಕಾರದಿಂದ ತಕ್ಷಣದಿಂದಲೇ ವಿದ್ಯುದೀಕರಣ ಕಾಮಗಾರಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸಿಇಒ ಅವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಧನಲಕ್ಷ್ಮೀ ಜನಾರ್ಧನ್, ಸ್ಥಾಯಿ ಸಮಿತಿ ಸದಸ್ಯರಾದ ಜನಾರ್ಧನ ಗೌಡ, ಈಶ್ವರ ಕಟೀಲ್, ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್, ಮುಖ್ಯ ಲೆಕ್ಕಾಧಿಕಾರಿ ಶೇಕ್ ಲತೀಫ್, ಯೋಜನಾ ನಿರ್ದೇಶಕರಾದ ಸೀತಮ್ಮ ಉಪಸ್ಥಿತರಿದ್ದರು.

ಕಡಲು ಕೊರೆತ ತಡೆಗೆ ಹಸಿರು ಕವಚ ಯೋಜನೆ-ಅನಂತ ಹೆಗಡೆ ಆಶೀಸರ

ಮಂಗಳೂರು,ಜೂನ್. 23 :ಕರ್ನಾಟಕ ರಾಜ್ಯದ ಕರಾವಳಿ ತೀರ ಪ್ರದೇಶದಲ್ಲಿ ಪ್ರತೀ ವರ್ಷ
ಉಂಟಾಗುವ ಸಮುದ್ರ ಕೊರೆತವನ್ನು ತಪ್ಪಿಸಲು ಕಲ್ಲುಗೋಡೆ ನಿರ್ಮಿಸುವ ಬದಲು ಹಸಿರು ಕವಚ ಯೋಜನೆಯಡಿ 160 ಕಿಮೀ. ಉದ್ದದ ಕರಾವಳಿಯಲ್ಲಿ ಮರಗಿಡಗಳನ್ನು ಬೆಳೆಸುವ ಯೋಜನೆಯನ್ನು ಪಶ್ಚಿಮಘಟ್ಟ ಕಾರ್ಯಪಡೆ ಹಮ್ಮಿಕೊಂಡಿದೆಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು ತಿಳಿಸಿದ್ದಾರೆ.
ಅವರು ಇಂದುಪಶ್ಚಿಮಘಟ್ಟ ಕಾರ್ಯಪಡೆ ,ಕರ್ನಾಟಕ ಸಕಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆ,ಮಂಗಳೂರು ವಿಭಾಗ ಇವರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತೆಂಕಿಲದ ಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ವೃಕ್ಷಾರೋಪಣ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ವಿಶ್ವದ 15 ಪ್ರಮುಖ ಪರಿಸರ ತಾಣಗಳಲ್ಲಿ ಮಹಾರಾಷ್ಟ್ರದಿಂದ ಕನ್ಯಾಕುಮಾರಿ ವರೆಗೂ ಹಬ್ಬಿರುವ ಪಶ್ಚಿಮಘಟ್ಟಗಳು ಒಂದು ಜಿಲ್ಲೆಯ ಅಪರೂಪವಾದ ಜೀವ ಸಂಕುಲ.ಮರಗಿಡ ಬಳ್ಳಿ ಮುಂತಾದವುಗಳನ್ನು ನಾವು ರಕ್ಷಿಸಬೇಕಿದೆ.ಪಶ್ಚಿಮಘಟ್ಟ ಅನೇಕ ಜೀವನದಿಗಳ ಉಗಮಸ್ಥಾನ.ನಮ್ಮ ರಾಜ್ಯದ 8 ಜಿಲ್ಲೆಗಳಲ್ಲಿ ಪಶ್ಚಿಮಘಟ್ಟ ಹಂಚಿಕೆಯಾಗಿದೆ ಎಂದರು.
ಅರಣ್ಯ ಇಲಾಖೆ ವತಿಯಿಂದ 16 ಲಕ್ಷ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದ್ದು,5 ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ರೈತರಿಗೆ ಮತ್ತು ಸಾರ್ವಜನಿಕರಿಗೆ ವಿತರಿಸುವುದಾಗಿ ತಿಳಿಸಿದರು.
ನಮ್ಮ ಮಕ್ಕಳಿಗೆ ನಮ್ಮ ನದಿ,ಬೆಟ್ಟ ಗುಡ್ಡ ಮರಗಿಡ,ಪ್ರಾಣಿ ಪಕ್ಷಿಗಳ ಬಗ್ಗೆ ತಿಳಿಸಬೇಕು. ನದಿಗಳಿಂದ ಕಾಡಿನಿಂದ ಏನೇನೂ ಪ್ರಯೋಜನಗಳಿವೆ ಎನ್ನುವುದನ್ನು ಮನದಟ್ಟು ಮಾಡಿಸಬೇಕೆಂದರು. ಪಶ್ಚಿಮಘಟ್ಟ ಕಾರ್ಯಪಡೆ ವತಿಯಿಂದ ಹಸಿರು ಸಮೃದ್ಧಿ ಗ್ರಾಮ ಯೋಜನೆಯ ಮೂಲಕ ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮವನ್ನುಆಯ್ಕೆ ಮಾಡಿ ಅಲ್ಲಿ ಸಂಪೂರ್ಣ ಸಾವಯವ ಕೃಷಿ ಔಷಧ ಸಸ್ಯಗಳನ್ನು ಬೆಳೆಸುವುದರ ಮೂಲಕ ಹಸಿರು ಸಮೃದ್ಧಿ ಗ್ರಾಮವಾಗಿ ಪರಿವರ್ತಿಸಲಾಗುವುದೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಮಾತನಾಡಿ ತಮ್ಮ ಕ್ಷೇತ್ರದಲ್ಲಿ ಗಿಡ ಬೆಳೆಸಲು ತಮ್ಮ ಶಾಸಕರ ಅನುದಾನದಿಂದ ರೂ.2 ಲಕ್ಷ ನೀಡುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಪುತ್ತೂರು ತಾಲೂಕುಪಂಚಾಯತ್ ಅಧ್ಯಕ್ಷರಾದ ಡಿ.ಶಂಭು ಭಟ್,ಪುತ್ತೂರು ಪುರಸಭಾ ಅಧ್ಯಕ್ಷರಾಧ ಶ್ರೀಮತಿ ಕಮಲಾನಂದ,ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಮತಿ ಎಚ್.ಎಸ್.ಸಾವಿತ್ರಿ ,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್.ಶಾಂತಪ್ಪ ಅವರು ಮಾತನಾಡಿದರು. ಉಪರಣ್ಯ ಸಂರಕ್ಷಣಾಧಿಕಾರಿ ಓ.ಪಾಲಯ್ಯ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಔಷಧಿ ಸಸಿಗಳನ್ನು ವಿತರಿಸಲಾಯಿತು.

ಮಳೆಗಾಲದ ಸಾಂಕ್ರಾಮಿಕ ರೋಗ ತಡೆಗೆ ತುರ್ತು ಸಭೆ,ಜುಲೈ 1 ರಿಂದ ಮನೆ ಮನೆ ಭೇಟಿ

ಮಂಗಳೂರು,ಜೂನ್.23: ನಗರದಲ್ಲಿ ಹರಡುತ್ತಿರುವ ಡೆಂಗ್ಯು, ಮಲೇರಿಯಾ ರೋಗ ನಿಯಂತ್ರಣಕ್ಕೆ ಮಹಾನಗರಪಾಲಿಕೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ತುರ್ತು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ನಿರ್ದೇಶನ ನೀಡಿದರು.
ಈ ಸಂಬಂಧ ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಕ್ಕೆ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ಹಾಗೂ ಕಾರ್ಮಿಕರು ಕಾರಣವಾದರೆ ತಕ್ಷಣವೇ ಅಂತಹ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು. ಪಾಲಿಕೆ ಆರೋಗ್ಯ ವಿಭಾಗದಿಂದ 42 ಜನ ಹಾಗೂ ಆರೋಗ್ಯ ಇಲಾಖೆಯಿಂದ 30 ಕಿರಿಯ ಆರೋಗ್ಯ ಸಹಾಯಕರು ಗ್ರಾಮೀಣ ಪ್ರದೇಶದಿಂದ ನಿಯೋಜಿಸಿ,30 ಸ್ವಯಂ ಸೇವಕರು ಜುಲೈ ಒಂದರಿಂದ ತಂಡ ಪ್ರತೀ ಮನೆ ಮನೆಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗ ವನ್ನು ಪತ್ತೆ ಹಚ್ಚಲಿದೆ. ಈ ಕಾರ್ಯಕ್ರಮ ಆಂದೋಲನ ಮಾದರಿ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ರೋಗ ಪತ್ತೆಯಾದ ಪ್ರದೇಶದ ಮನೆಗಳ ರಕ್ತ ಪರೀಕ್ಷೆ ಹಾಗೂ ಆರೋಗ್ಯ ಶಿಕ್ಷಣ ಮತ್ತು ಸೊಳ್ಳೆ ಉತ್ಪತ್ತಿ ಕೇಂದ್ರ ನಾಶಕ್ಕೆ ಒತ್ತು ನೀಡಿ, ಜನರಿಗೆ ತಿಳುವಳಿಕೆ ರೂಪಿಸುವ ಹೊಣೆ ಇಲಾಖೆಗಳದ್ದು ಎಂದು ಜಿಲ್ಲಾಧಿಕಾರಿಗಳು ನುಡಿದರು.
ಕಟ್ಟಡ ನಿಮರ್ಾಣ ಮಾಡುವವರು ತಮ್ಮ ಕಟ್ಟಡಗಳ ಸುತ್ತಮುತ್ತ ನಿಲ್ಲಿಸಿದ ನೀರಿಗೆ ಲಾರ್ವಾ ನಾಶಕ ಔಷಧಿ ಸಿಂಪಡಣೆ, ಕಟ್ಟಡ ಕಾಮಗಾರಿಯಲ್ಲಿ ನಿರತ ಕಾರ್ಮಿಕರಿಗೆ ಸುರಕ್ಷಿತ ವಾಸಸ್ಥಳ, ಸೊಳ್ಳೆ ಪರದೆ ಒದಗಿಸುವ ಹೊಣೆ ಹೊರಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ವೈದ್ಯರು ಅಲಭ್ಯವಿರುವ ಕಾರಣ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕವಾಗಿ ದಕ್ಷ ವೈದ್ಯರೊಬ್ಬರನ್ನು ನಿಯೋಜಿಸಿ ಹೆಚ್ಚುವರಿ ಪ್ರಭಾರ ನೀಡಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಡಿ ಎಚ್ ಒ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಡಿ ಎಚ್ ಒ ಒ ಆರ್ ಶ್ರೀರಂಗಪ್ಪ, ಡಿ ಎಂ ಒ ಡಾ ಅರುಣ್. ಎಂಟಮೋಲಾಜಿಸ್ಟ್(ಕೀಟ ಶಾಸ್ತ್ರ ತಜ್ಞೆ) ಮುಕ್ತಾ, ಡಾ ಸುದರ್ಶನ್, ಹಿರಿಯ ಆರೋಗ್ಯ ನಿರೀಕ್ಷಕ ಜಯರಾಂ ಸೇರಿದಂತೆ ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

Friday, June 22, 2012

ಅರಣ್ಯ ಪ್ರದೇಶದ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ:ಜಿಲ್ಲಾಧಿಕಾರಿ ಸಂವಾದ

ಮಂಗಳೂರು ಜೂನ್ 22: ಬೆಳ್ತಂಗಡಿಯ ಅರಣ್ಯ ಪ್ರದೇಶದ ಸುತ್ತಲಿನ ಒಂಬತ್ತು ಗ್ರಾಮ ಪಂಚಾಯತ್ ನ ಹಿಂದುಳಿದ ಹಾಗೂ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ಮೂಲಕ ಅವರು ಸ್ವಯಂ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಅವರ ಅಭಿವೃದ್ಧಿಗೆ ಪೂರಕವಾಗಿ, ಪ್ರೇರಕವಾಗಿ ನಿಲ್ಲುವ ಭರವಸೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ನೀಡಿದರು.
ಇಂದು ಬೆಳ್ತಂಗಡಿ ತಾಲೂಕು ಪಂಚಾಯತಿಯಲ್ಲಿ ಆದಿವಾಸಿ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಒಂಬತ್ತು ಪಂಚಾಯಿತಿ ಪಿಡಿಒ ಗಳು ಹಾಗೂ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಒಂಬಡ್ಸ್ ಮನ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಆದಿವಾಸಿಗಳ ಅಳಲು ಹಾಗೂ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ತತ್ ಕ್ಷಣದಿಂದ ಜಿಲ್ಲಾಡಳಿತದಿಂದ ಸಾಧ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ನಾವೂರು ಮತ್ತು ಕುತ್ಲೂರಿಗೆ ಜಲವಿದ್ಯುತ್ ಘಟಕ, ಸಂಪರ್ಕ ರಸ್ತೆ, ತರಬೇತಿ, ಅಂಗನವಾಡಿ, ಆರೋಗ್ಯಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ ಅವರು, ಆರೋಗ್ಯ ಶಿಬಿರಗಳನ್ನು ಆಯೋಜಿಸುವುದಾಗಿ ನುಡಿದರು.
ಪ್ರತೀ ತಿಂಗಳು ಪಂಚಾಯತ್ ಸಭೆ ನಡೆಸಿ ಅಭಿವೃದ್ಧಿಯನ್ನು ಪರಿಶೀಲಿಸಬೇಕೆಂದು ಪಿಡಿಒಗಳಿಗೆ ಸೂಚಿಸಿದರು. 2012-13ನೇ ಸಾಲಿನಲ್ಲಿ ಈ ಪ್ರದೇಶ ವ್ಯಾಪ್ತಿಯ ಎಲ್ಲ ಕುಟುಂಬಗಳಿಗೆ ಉದ್ಯೋಗ ಚೀಟಿ ದೊರಕಿಸಿ ಪ್ರತಿಯೊಂದು ಕುಟುಂಬಕ್ಕೂ ಉದ್ಯೋಗ ಹಾಗೂ ಜಮೀನು ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ಒಂಬಡ್ಸ್ ಮನ್ ಶೀನಶೆಟ್ಟಿ ಹೇಳಿದರು.
ಕಾರ್ಕಳದ ಮಿಯಾರಿನ ಮುಂಗುಲಿ ಕೊರಗ ಅವರು ತಮ್ಮ ಯಶೋಗಾಥೆಯನ್ನು ಹಂಚಿಕೊಳ್ಳುವ ಮೂಲಕ ಸಭೆಯಲ್ಲಿ ನೆರೆದವರು ಸ್ವಯಂ ಅಭಿವೃದ್ಧಿಯಾಗುವ ಬಗ್ಗೆ ಪ್ರೇರಪಣೆ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವರಾಮೇಗೌಡ, ತಹಸೀಲ್ದಾರ್ ಕುಸುಮ ಕುಮಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

Thursday, June 21, 2012

'ಸಕಾಲ' ಬೀದಿ ನಾಟಕಕ್ಕೆ ಚಾಲನೆ

ಮಂಗಳೂರು, ಜೂನ್ 21: ಜನರಲ್ಲಿ ಸಕಾಲ ಯೋಜನೆ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ `` ಸಂಸಾರ '' ನಾಟಕ ತಂಡದ ಮೂಲಕ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ದಿನಾಂಕ 21-6-12 ರಿಂದ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಇಂದು ಗ್ರಾಮದ ಡಾ.ಅಂಬೇಡ್ಕರ್ ಭವನದಲ್ಲಿ ಸಕಾಲ ಬೀದಿ ನಾಟಕ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ರವರು ಚಾಲನೆ ನೀಡಿದರು.

ಮದ್ಯದಿಂದ ವ್ಯಕ್ತಿತ್ವ ವಿಕೃತ: ಡಾ.ಕೆ.ಎನ್.ವಿಜಯಪ್ರಕಾಶ್

ಮಂಗಳೂರು,ಜೂನ್. 21: ಮದ್ಯಪಾನದ ಚಟದಿಂದ ವ್ಯಕ್ತಿತ್ವ ವಿಕೃತವಾಗುತ್ತದೆ. ಮದ್ಯ- ಮಾದಕ ವ್ಯಸನಿಗೆ ತಮ್ಮ ಕುಟುಂಬದ ಯಾರೂ ಬೇಕಾಗಿಲ್ಲ.ತನಗೆ ಮಾದಕ ವಸ್ತು ಸಿಗದಿದ್ದಲ್ಲಿ ಮಾನವೀಯತೆಯನ್ನೇ ಮರೆತು ಮೃಗಗಳಂತೆ ವರ್ತಿಸುತ್ತಾರೆ ಮತ್ತು ಯಾವುದೇ ಮಟ್ಟದ ದುಷ್ಕೃತ್ಯಕ್ಕೆ ಇಳಿಯುತ್ತಾನೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಅವರು ತಮ್ಮ ದುಗುಡ ವ್ಯಕ್ತ ಪಡಿಸಿದ್ದಾರೆ.
ಅವರು ಇಂದು ವಾರ್ತಾ ಇಲಾಖೆ, ಮಂಗಳೂರು,ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಯೋಜನೆ, ಜನ ಶಿಕ್ಷಣ ಟ್ರಸ್ಟ್ ಹಾಗೂ ಬಾಳೆಪುಣಿ ಗ್ರಾಮ ಪಂಚಾ ಯತ್ ಇವರ ಆಶ್ರಯದಲ್ಲಿ ಬಾಳೆಪುಣಿ ಗ್ರಾಮದ ಡಾ.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಮಾದಕ ವಸ್ತು ವಿರೋಧಿ ಮಾಸಾಚರಣೆ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುತ್ತಾ ಈ ವಿಷಯ ತಿಳಿಸಿದರು.
ಒಮ್ಮೆ ಒಬ್ಬ ಮಾದಕ ವಸ್ತು ವ್ಯಸನಿಯಾದರೆ ಆ ವಿಷ ವರ್ತುಲದಿಂದ ಪಾರಾಗುವುದು ತುಂಬಾ ಕಷ್ಟ.ಇದರಿಂದಾಗಿ ವ್ಯಕ್ತಿತ್ವವೇ ಹಾಳಾಗಿ ಸಾಮಾಜಿಕವಾಗಿ ಘನತೆ ಗೌರವಗಳನ್ನು ಕಳೆದುಕೊಂಡು ತನ್ನಿಂದ ತನ್ನ ಇಡೀ ಕುಟುಂಬವೇ ಮಾನಸಿಕ,ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಜರ್ಜರಿತವಾಗಿ ಶೋಷಣೆಗೊಳಪಡಲಿದ್ದಾರೆ. ಇದರಿಂದಾಗಿ ಇಡೀ ಸಮಾಜವೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದ ಅವರು ಮಾದಕ ವಸ್ತು ಸೇವನೆ ವರ್ಜಿಸಿ ಮಾನವಂತರಾಗಿ ಬಾಳುವೆ ಮಾಡಬೇಕೆಂದರು.
ವೈದ್ಯಕೀಯವಾಗಿ ಮಾದಕ ವ್ಯಸನಿಯ ಯಾವ ಅಂಗಾಂಗಗಳೂ ಆರೋಗ್ಯವಾಗಿರುವುದಿಲ್ಲ.ಇಂತಹ ವ್ಯಸನಿಗಳ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿರುತ್ತದೆ. ಶಾಲಾ ಕಾಲೇಜು ಮಕ್ಕಳು ಇಂತಹ ದುಶ್ಚಟಗಳಿಗೆ ಬಲಿಯಾಗದೇ ತಮ್ಮ ಅಮೂಲ್ಯವಾದ ಯುವ ಶಕ್ತಿಯನ್ನು ದೇಶದ ಪ್ರಗತಿಗಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.ಮದ್ಯವರ್ಜಿಸಿ ತನ್ನ ಕುಟುಂಬಕ್ಕೂ ಸಮಾಜಕ್ಕೂ ಹಿತಕಾರಿಯಂತೆ ಜೀವನ ಮಾಡಬೇಕೆಂದರು.
ಮದ್ಯಮುಕ್ತರಾಗಿ ಸಮಾಜದಲ್ಲಿ ಇಂದು ಎಲ್ಲರಿಂದ ಆದರಿಸಲ್ಪಡುತ್ತಿರುವ ಪುತ್ತೂರು ಜೀವವಿಮಾ ನಿಗಮದ ಅಧಿಕಾರಿ ವಿಶ್ವನಾಥ ಪೈ ಮಾತನಾಡಿ ಮದ್ಯ ವ್ಯಸನಿಯಾಗಿದ್ದಾಗ ಸಮಾಜ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಅತ್ಯಂತ ಹೇಯವಾಗಿ ಕಾಣುತ್ತಿತ್ತು.ಕಷ್ಟ ಎಂದರೂ 5 ರೂಪಾಯಿ ದೊರಕುತ್ತಿರಲ್ಲಿಲ್ಲ.ಸಾಲದ ಸುಳಿಯಲ್ಲಿ ಬಸವಳಿದಿದ್ದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮದ್ಯವರ್ಜನೆ ಶಿಬಿರ ನನ್ನ ಜೀವನದಲ್ಲಿ ಹೊಸ ಪರಿವರ್ತನೆ ನೀಡಿ ನನ್ನಲ್ಲಿ ಬದುಕುವ ಆಸೆಯನ್ನು ಪ್ರೇರೇಪಿಸಿತು. ಇಂದು ಎಲ್ಲರಿಂದ ಆದರ ಆತಿಥ್ಯಗಳಿಗೆ ಪಾತ್ರನಾಗಿದ್ದೇನೆಯೆಂದು ತಿಳಿಸಿ ಮದ್ಯ ವ್ಯಸನಿ ಹೊರ ಒತ್ತಾಯದಿಂದ ಮದ್ಯವರ್ಜಿಸುವುದಕ್ಕಿಂತ ನಮ್ಮ ಒಳ ಒತ್ತಾಯದಿಂದ ಮದ್ಯವರ್ಜಿಸಿದ್ದಲ್ಲಿ ಅವನು ಜೀವನದಲ್ಲಿ ಸರ್ವಸ್ವವನ್ನು ಸಾಧಿಸಬಹುದೆಂದರು.
ಮತ್ತೊಬ್ಬ ಮದ್ಯ ಮುಕ್ತ ತನಿಯ ಕೊರಗ ಮೊಂಟೆಪದವು ಅವರ ಪರವಾಗಿ ಅವರ ಶ್ರೀಮತಿ ಕಮಲ ಮಾತನಾಡಿ ತನ್ನ ಗಂಡ ಮದ್ಯ ವರ್ಜಿಸಿದ ಕಾರಣ ತಮ್ಮನ್ನು ಗುರ್ತಿಸಿ ಅನೇಕ ಸನ್ಮಾನ ಗಳನ್ನು ನೀಡುತ್ತಿ ದ್ದಾರೆ. ತಾವು ಸಹ 2 ಬಾರಿ ಗ್ರಾಮ ಪಂಚಾ ಯತ್ ಸದಸ್ಯ ರಾಗಿ ಚುನಾಯಿತ ರಾಗಿರು ವುದಾಗಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಕೆ.ರೋಹಿಣಿ ಸ್ವಾಗತಿಸಿದರು. ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಚಂದ್ರಶೇಖರ ಆಜಾದ್ ಅವರು ಧನ್ಯವಾದ ಸಮರ್ಪಿಸಿದರು.
ಸಮಾರಂಭವನ್ನು ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ ಚಂದ್ರಶೇಖರ ಆಳ್ವಾ ವಹಿಸಿದ್ದರು.ಸಮಾರಂಭದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕರಾದ ಮಾದವ ಹಾಗೂ ಹರಿಲಿತ್ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮದ್ಯ ಮುಕ್ತರಾದ ಜೀವವಿಮಾ ಅಧಿಕಾರಿ ವಿಶ್ವನಾಥ ಪೈ ಮತ್ತು ಶ್ರೀ ತನಿಯ ಕೊರಗ ಮೊಂಟೆಪದವು ಇವರನ್ನು ವಾರ್ತಾ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ಮಾದಕ ವಸ್ತು ವಿರೋಧಿ ಜಾಥಾವನ್ನು ಮಾಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ ಒಂಬುಡ್ಸ್ ಮನ್ ಶೀನ ಶೆಟ್ಟಿ ಉದ್ಘಾಟಿಸಿದರು. ಜನಶಿಕ್ಷಣಟ್ರಸ್ಟ್ ಕೃಷ್ಣ ಮೂಲ್ಯ ಉಪಸ್ಥಿತರಿದ್ದರು.

Tuesday, June 19, 2012

ಜನನಿ ಸುರಕ್ಷಾ ಯೋಜನೆಯಡಿ 8309 ಹೆರಿಗೆಗಳಿಗೆ ರೂ.64.34ಲಕ್ಷ ವೆಚ್ಚ

ಮಂಗಳೂರು, ಜೂನ್.19 :ತಾಯಿ ಮಕ್ಕಳ ಆರೋಗ್ಯ ಸುಧಾರಣೆಗೆ ಕರ್ನಾಟಕ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ ತಾಯಿ ಭಾಗ್ಯ ಯೋಜನೆಯೂ ಒಂದಾಗಿದ್ದು,ಇದರ ಮೂಲಕ ಜನನಿ ಸುರಕ್ಷಾಯೋಜನೆ,ತಾಯಿ ಭಾಗ್ಯ,ಪ್ರಸೂತಿ ಆರೈಕೆ,ಮಡಿಲು ಮತ್ತು ತಾಯಿ ಭಾಗ್ಯ ಪ್ಲಸ್ ಯೋಜನೆಗಳ ಮೂಲಕ ಹೆರಿಗೆ ಸಮಯದಲ್ಲಿ ತಾಯಿ ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜನನಿ ಸುರಕ್ಷಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ 8309 ಹೆರಿಗೆಗಳನ್ನು ಸುರಕ್ಷಿತವಾಗಿ ನಡೆಸಲು 2011-12 ನೇ ಸಾಲಿನಲ್ಲಿ ಒಟ್ಟು ರೂ.64,34,900/- ಗಳನ್ನು ವೆಚ್ಚ ಮಾಡಲಾಗಿದೆ. ಇವರಲ್ಲಿ 6127 ಸಾಮಾನ್ಯ ಕುಟುಂಬಕ್ಕೆ ಸೇರಿದವರು,1424 ಪರಿಶಿಷ್ಟ ಜಾತಿ ಹಾಗೂ 758 ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ.
ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು 3438 ಫಲಾನುಭವಿಗಳಿಗೆ ಈ ಯೋಜನೆಯಲ್ಲಿ ರೂ.26,03,400 ಗಳನ್ನು ವೆಚ್ಚ ಮಾಡಿದ್ದರೆ, ಸುಳ್ಯ ತಾಲೂಕಿನಲ್ಲಿ 902 ಫಲಾನುಭವಿಗಳಿಗೆ ಒಟ್ಟು 7,11,700 ಗಳನ್ನು ವೆಚ್ಚ ಮಾಡಲಾಗಿದೆ.ಉಳಿದಂತೆ ಬಂಟ್ವಾಳ ತಾಲೂಕಿನಲ್ಲಿ 1534 ಫಲಾನುಭವಿಗಳಿಗೆ 12,39,700 ರೂ. ಪುತ್ತೂರು ತಾಲೂಕಿನ 1324 ಫಲಾನುಭವಿಗಳಿಗೆ 10,27,700 ರೂ.ಗಳು ಹಾಗೂ ಬೆಳ್ತಂಗಡಿ ತಾಲೂಕಿನ 1111 ಫಲಾನುಭವಿಗಳಿಗೆ 8,52,400 ರೂ.ಗಳನ್ನು ವೆಚ್ಚ ಮಾಡಲಾಗಿದೆ.
ಜನನಿ ಸುರಕ್ಷಾ ಯೋಜನೆಯು ಈ ಹಿಂದೆ ಜಾರಿಯಲ್ಲಿದ್ದ ರಾಷ್ಟ್ರೀಯ ಹೆರಿಗೆ ಭತ್ಯೆ ಯೋಜನೆಯ ಮುಂದುವರಿದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಬಿಪಿಎಲ್ ಕುಟುಂಬಗಳ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಸಂದರ್ಭದಲ್ಲಿ ಆರ್ಥಿಕ ಸಹಾಯ ಒದಗಿಸುವ ಉದ್ದೇಶ ಹೊಂದಿದೆ.
ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆಗೊಳಿಸುವುದು,ಎಲ್ಲಾ ಗರ್ಭಿಣಿಯರಿಗೆ ಗುಣಾತ್ಮಕ ವೈದ್ಯಕೀಯ ಸೇವೆ ಮಾಡುವುದು.ಈ ದಿಸೆಯಲ್ಲಿ ಹಿಂದುಳಿದ ಗುಡ್ಡಗಾಡು ಪ್ರದೇಶದ ಮತ್ತು ಕಠಿಣ ಪ್ರದೇಶಗಳ ಗರ್ಭಿಣಿ ಮಹಿಳೆಯರಿಗೆ ಆದ್ಯತೆ ನೀಡುವುದು,ಸಣ್ಣ ಕುಟುಂಬಕ್ಕೆ ಪ್ರೋತ್ಸಾಹ ಇವೇ ಮೊದಲಾದ ಉದ್ದೇಶಗಳಿಂದ ಈ ಯೋಜನೆ ಜಾರಿಗೆ ತರಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆಯಲ್ಲಿ ಹೆರಿಗೆ ಆದಲ್ಲಿ ರೂ.500/- ಗ್ರಾಮೀಣಪ್ರದೇಶದವರಿಗೆ ಆಸ್ಪತ್ರೆಯಲ್ಲಿ ಹೆರಿಗೆಯಾದಲ್ಲಿ ರೂ.700/- ನಗರ ಪ್ರದೇಶದವರು ಆಸ್ಪತ್ರೆಯಲ್ಲಿ ಹೆರಿಗೆಗೆ ಒಳಗಾದಲ್ಲಿ ರೂ.600/- ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದಲ್ಲಿ ರೂ.1500/- ಸಂಭಾವನೆ ನೀಡಲಾಗುತ್ತದೆ.
ಈ ಯೋಜನೆಯಲ್ಲಿ ಸೌಲಭ್ಯ ಪಡೆಯಬಯಸುವವರು ಕಡ್ಡಾಯವಾಗಿ ಬಡತನ ರೇಖೆಗಿಂತ ಕೆಳಗಿನ ಕುಟುಂಬದವರಾಗಿದ್ದು,ಬಿಪಿಎಲ್ ಕಾರ್ಡ್ ಹೊಂದಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಎಪಿಎಲ್ ಕಾರ್ಡ್ ಹೊಂದಿದ್ದರೂ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಸಂಭಾವನೆಯನ್ನು ಮೊದಲ ಹಾಗೂ ಎರಡನೇ ಜೀವಂತ ಜನನಕ್ಕೆ ಮಾತ್ರ ನೀಡಲಾಗುವುದು. ಮೂರನೇ ಅಥವಾ ತದನಂತರದ ಹೆರಿಗೆಯಾಗಿದ್ದು, ಮೊದಲ ಅಥವಾ ಎರಡನೇ ಮಗ ಜೀವಂತವಿಲ್ಲದಿದ್ದಲ್ಲಿ ಎರಡು ಜೀವಂತ ಜನನಕ್ಕೆ ಹೆರಿಗೆ ಸಂಭಾವನೆ ನೀಡಲಾಗುವುದು.
ಸರ್ಕಾರಿ ಆಸ್ಪತ್ರೆ, ಸರ್ಕಾರದಿಂದ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಆದರೂ ಸಂಭಾವನೆ ದೊರಕಲಿದೆ.

Sunday, June 17, 2012

ಶಿರಾಡಿಘಾಟ್ ;ಸುರಂಗ ರಸ್ತೆಗೆ ಚಿಂತನೆ: ಯೋಗಿಶ್ ಭಟ್

ಮಂಗಳೂರು,ಜೂನ್.17:ಮುಖ್ಯಮಂತ್ರಿಗಳು ಇತ್ತೀಚೆಗೆ ಶಿರಾಡಿ ಘಾಟ್ ಗೆ ತೆರಳಿ ರಸ್ತೆ ಪರಿಶೀಲಿಸಿರುವ ಹಿನ್ನೆಲೆಯಲ್ಲಿ ಆ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಸಿದ್ಧಗೊಂಡಿದೆ. ಪಿಪಿಪಿ ಆಧಾರದಲ್ಲಿ ಸುರಂಗ ರಸ್ತೆ ನಿರ್ಮಿಸಲು ಚಿಂತನೆ ನಡೆದಿದೆ ಎಂದು ವಿಧಾನಸಭೆಯ ಉಪಸಭಾಪತಿ ಎನ್. ಯೋಗೀಶ್ ಭಟ್ ತಿಳಿಸಿದ್ದಾರೆ.
ಅವರುಶನಿವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಘಾಟ್ ರಸ್ತೆಯನ್ನು ಕೂಡಾ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆ ಗೇರಿಸ ಲಾಗುವುದು. ರೂ.674.53 ಕೋಟಿಯ ಪ್ರಸ್ತಾವನೆಯು ಹಾಸನದಿಂದ ಬಿ.ಸಿ.ರೋಡು ತನಕದ ರಸ್ತೆಯನ್ನು ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆಯನ್ನು ಒಳಗೊಂಡಿದೆ ಎಂದರು.
ಸಿದ್ಧ ಪಡಿಸಲಾದ ಪ್ರಸ್ತಾವನೆಯನ್ನು ಶೀಘ್ರ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಯೋಜನೆಯ ವೆಚ್ಚ ಭರಿಸಲಿವೆ. ಘಾಟ್ ರಸ್ತೆಯ ಸುರಂಗ ಮಾರ್ಗವನ್ನು ನಿರ್ಮಿಸಲು ಜಪಾನ್ ಕಂಪೆನಿಯೊಂದು ಆಸಕ್ತಿ ವಹಿಸಿದ್ದು, ಮಾತ್ರವಲ್ಲದೆ ಇತರ ಕಂಪೆನಿಗಳು ಮುಂದೆ ಬಂದಿವೆ ಎಂದು ಭಟ್ ನುಡಿದರು.

ಕರಾವಳಿಗೆ 387 ಕಿ.ಮೀ. ಪರ್ಯಾಯ ರಸ್ತೆ:ಬಿ.ನಾಗರಾಜ ಶೆಟ್ಟಿ

ಮಂಗಳೂರು,ಜೂನ್.17: ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿಮಾಜಾಳಿವರೆಗೆ ಒಟ್ಟು 387 ಕಿ.ಮೀ. ಉದ್ದದ ಮೀನುಗಾರಿಕಾ ರಸ್ತೆ ನಿರ್ಮಾಣದ ಶಕ್ಯತಾ ವರದಿ ಶನಿವಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿರುವುದಾಗಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ಮಂಗಳೂರಿನ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳೂರಿನ ಮಿಲೇನಿಯಂ ಗ್ಲೋಬಲ್ ಸರ್ವೇಯರ್ ಮತ್ತು ಬೆಂಗಳೂರಿನ ಕನ್ಸೋರ್ಟಿಯಂ ಸಂಸ್ಥೆಗಳು ಶಕ್ಯತಾ ವರದಿಯನ್ನು ಸಿದ್ದ ಪಡಿಸಿವೆ. ಹತ್ತು ಸಂಪುಟಗಳ ವರದಿಯನ್ನು ಪ್ರಾಧಿಕಾರ ಶೀಘ್ರ ಸರಕಾರಕ್ಕೆ ಸಲ್ಲಿಸಲಿದೆ. ಶಕ್ಯತಾ ವರದಿಯಂತೆ ಪ್ರಸ್ತಾವಿತ ಯೋಜನೆಗೆ ರೂ.780 ಕೋಟಿ ವೆಚ್ಚವಾಗಲಿದೆ ಎಂದು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ವಿವರಿಸಿದರು.ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಚರ್ಚೆಗಳು ನಡೆದು ಯೋಜನೆಗೆ ಅಂತಿಮ ರೂಪು ನೀಡಲಾಗಿದೆ ಎಂದರು.
ಅತ್ರಾಡಿ ರಾಜ್ಯ ಹೆದ್ದಾರಿಯನ್ನು ಮಣಿಪಾಲದಿಂದ ಬಜ್ಪೆಯವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ದಿ ಪಡಿಸುವ ಸಾಧ್ಯತಾ ವರದಿ ಈಗಾಗಲೇ ಸರಕಾರಕ್ಕೆ ಸಲ್ಲಿಕೆಯಾಗಿದೆ. ರೂ.580 ಕೋಟಿಗಳ ಈ ಯೋಜನೆಯನ್ನು ರೂ.300 ಕೋಟಿಗಳಿಗೆ ಅನುಷ್ಠಾನ ಮಾಡಲು ಸರಕಾರ ತಾತ್ವಿಕವಾಗಿ ಒಪ್ಪಿದೆ. ಇದೇ ಜೂ.12ರಂದು ಮುಖ್ಯಮಂತ್ರಿಗಳು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮ (ಎನ್ಎಫ್ ಪಿ ಬಿ) ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ರೂ.11 ಕೋಟಿ ವೆಚ್ಚದಲ್ಲಿ ಹತ್ತು ಮಹಿಳಾ ಮೀನು ಮಾರುಕಟ್ಟೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಸೇರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಒಟ್ಟು ಅನುದಾನದ ಶೇ.90 ಭಾಗ ಕೇಂದ್ರ ಸರಕಾರದ್ದಾಗಿರುತ್ತದೆ. ಶೇ.10 ರಾಜ್ಯ ಸರಕಾರದ ಪಾಲಾಗಿರುತ್ತದೆ ಎಂದು ನಾಗರಾಜ ಶೆಟ್ಟಿ ವಿವರಿಸಿದರು.
ಪಡುಬಿದ್ರೆಯಲ್ಲಿ ನಿರ್ಮಾಣದ ಹಂತದಲ್ಲಿರುವ 80 ಲಕ್ಷ ರೂ. ಅಂದಾಜು ವೆಚ್ಚದ ಮೊದಲ ಮಹಿಳಾ ಮೀನು ಮಾರುಕಟ್ಟೆ ಆಗಸ್ಟ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ಏಳು ಮಾರುಕಟ್ಟೆಗಳನ್ನು ಡಿಸೆಂಬರ್ ಕೊನೆಯೊಳಗೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ಪ್ರಸ್ತುತ ಸಾಲಿನಲ್ಲಿ ಮತ್ತೆರಡು ಮಹಿಳಾ ಮೀನು ಮಾರುಕಟ್ಟೆಗಳನ್ನು ನಿಮರ್ಿಸಲಾಗುವುದು ಎಂದು ಶೆಟ್ಟಿ ಹೇಳಿದರು.
ಮಂಗಳಾ ಕಾರ್ನಿಷ್: ಮಂಗಳೂರು ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಂಗಳಾ ಕಾರ್ನಿಷ್ ವರ್ತುಲ ರಸ್ತೆಗಾಗಿ ಭೂಮಾಪನ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸೋಮವಾರದಿಂದ (ಜೂ.18)ಸಮೀಕ್ಷೆ ಆರಂಭಿಸಲಿವೆ. ಯೋಜನೆಯ ಶಕ್ಯತಾ ವರದಿಗಾಗಿ ಮೂಡಾದಿಂದ ಗ್ಲೋಬಲ್ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ ಶೆಟ್ಟಿಯವರು ಮೂರು ಜಿಲ್ಲೆಗಳಲ್ಲಿ ಕಾಲು ಸಂಕಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ ಎಂದ ನಾಗರಾಜ ಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದ ಅಭಿವೃದ್ಧಿಗೂ ಪ್ರಾಧಿಕಾರ ಆಸಕ್ತಿ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸಭಾಧ್ಯಕ್ಷರಾದ ಎನ್. ಯೋಗೀಶ್ ಭಟ್, ಪ್ರಾಧಿಕಾರದ ಸದಸ್ಯ ರವೀಂದ್ರನಾಥ್ ಹೆಗ್ಡೆ ಮತ್ತು ಕಾರ್ಯದರ್ಶಿ ಕೆ. ಪ್ರಭಾಕರ ರಾವ್ ಉಪಸ್ಥಿತರಿದ್ದರು.

Saturday, June 16, 2012

ನಗರ ಪ್ರದೇಶಗಳ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್: ಪೊನ್ನುರಾಜ್

ಮಂಗಳೂರು, ಜೂ.16: ನಿಖರವಾದ ಮತ್ತು ಉತ್ತಮ ನಿರ್ವಹಣೆಗೆ ಒಳಪಟ್ಟ ಭೂದಾಖಲೆಗಳು ಆರ್ಥಿಕ ವ್ಯವಸ್ಥೆಯ ಸುಗಮ ನಿರ್ವಹನೆಗೆ ಅಗತ್ಯವಾಗಿದ್ದು, ಇನ್ನು ಮುಂದೆ ಎಲ್ಲ ಭೂವ್ಯವಹಾರಗಳಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಲಾಗುವುದು ಎಂದು ಭೂಮಿ ಮತ್ತು ಯುಪಿಒಆರ್ ಕಾರ್ಯದರ್ಶಿ ವಿ.ಪೊನ್ನುರಾಜ್ ಅವರು ಹೇಳಿದರು.
ಅವರಿಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಗರ ಆಸ್ತಿಗಳ ನಕ್ಷೆ ಮತ್ತು ಹಕ್ಕು ದಾಖಲೆಗಳನ್ನು ಸಿದ್ಧಪಡಿಸುವ ಯೋಜನೆ ಬಗ್ಗೆ ಸವಿವರ ಮಾಹಿತಿ ನೀಡಿದರಲ್ಲದೆ, ಮಂಗಳೂರಿನ ನಾಗರಿಕರು ಯೋಜನೆಯನ್ನು ಯಶಸ್ವಿ ಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.ಈಗಾಗಲೇ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ ಮತ್ತು ಬಳ್ಳಾರಿಗಳಲ್ಲಿ ಖಾಸಗಿ ಸಂಸ್ಥೆಯಾದ ಇನ್ಫೋಟೆಕ್ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ ಎಂದರು.
ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಸಮರ್ಪಕವಾಗಿವೆ. ಆದರೆ ನಗರ ಆಸ್ತಿಗೆ ಯಾವುದೇ ಹಕ್ಕು ದಾಖಲೆ ಇಲ್ಲದಿರುವುದರಿಂದ ಸಾರ್ವಜನಿಕರು ಖಾತಾ ದಾಖಲೆಯನ್ನು ಹಕ್ಕು ದಾಖಲೆ ಎಂದು ಪರಿಗಣಿಸಲಾಗುತ್ತಿದೆ. ಆರ್ ಟಿ ಸಿ ದಾಖಲೆ ಇದ್ದರೂ ಬಹು ಅಂತಸ್ತಿನ ಕಟ್ಟಡಗಳಿಗೆ ಲಭ್ಯವಿರುವುದಿಲ್ಲ. ಜಮೀನಿಗೆ ಮಾತ್ರ ಲಭ್ಯವಾಗಿರುತ್ತದೆ. ಪಿಆರ್ ಕಾರ್ಡ್ ಜಾರಿಗೆ ಬಂದ ಮೇಲೆ ಭೂಪರಿವರ್ತಿತ ಜಮೀನಿಗೆ ಆರ್ ಟಿ ಸಿಯನ್ನು ಸ್ಥಗಿತಗೊಳಿಸಲಾಗುವುದು. ಭೂಪರಿವರ್ತಿತ ನಕ್ಷೆಯನ್ನು ಇನ್ನು ಮುಂದೆ ಯು ಪಿ ಆರ್ ನಿಂದ ತಯಾರಿಸಲಾಗುವುದು. ಮುಂದೆ ಎಲ್ಲಾ ಭೂ ವ್ಯವಹಾರಗಳಿಗೆ ಪಿಆರ್ ಕಾರ್ಡ್ ಕಡ್ಡಾಯವಾಗಲಿದೆ ಎಂದು ಅವರು ಹೇಳಿದರು.
ಈ ಯೋಜನೆಯಿಂದಾಗಿ ಆಸ್ತಿದಾರರು ಸೂಕ್ತ ನಕ್ಷೆಯೊಂದಿಗೆ ಶಾಸನಬದ್ಧ ಆಸ್ತಿ ದಾಖಲೆಗಳನ್ನು ಪಡೆಯಬಹುದಾಗಿದೆ. ಆಸ್ತಿಗಳ ಮಾರಾಟದ ಸಂದರ್ಭದಲ್ಲಿ ಪರಸ್ಪರ ಮೋಸ ಹೋಗುವುದು ತಪ್ಪಲಿದೆ. ಅಳತೆ, ಹಕ್ಕು ಮತ್ತು ಎಲ್ಲೆಗಳನ್ನೊಳಗೊಂಡಂತೆ ಪಾರದರ್ಶಕತೆಯೊಂದಿಗೆ ನಕ್ಷೆ ತಯಾರಿಸುವುದರಿಂದ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಲಿದೆ. ಅಕ್ರಮ ನೋಂದಣಿ ಕಾರ್ಯ ನಿಯಂತ್ರಿಸಬಹುದಾಗಿದೆ. ಗುತ್ತಿಗೆ ಅಡಮಾನಕ್ಕೆ ಒಳಪಡುವ ಆಸ್ತಿಗಳ ಮಾಹಿತಿ ಸಂಗ್ರಹಣೆ ಮತ್ತು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಸರಕಾರಿ ಆಸ್ತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ಪತ್ತೆ ಹಚ್ಚಿ ಸಂರಕ್ಷಿಸಬಹುದಾಗಿದೆ. ಹಕ್ಕು ದಾಖಲೆಗಳ ಸಿದ್ಧಪಡಿಸುವಿಕೆಯು ಸುಗಮವಾದ ಆಸ್ತಿಯ ಹಕ್ಕು ವರ್ಗಾವಣೆಗೆ ಅವಕಾಶ ಕಲ್ಪಿಸುತ್ತದೆ. ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳು ಸುಲಭವಾಗಿ ಸಾಲ ನೀಡಲು ಅವಕಾಶವಾಗುತ್ತದೆ. ಸುವ್ಯವಸ್ಥಿತ ಆಸ್ತಿ ದಾಖಲೆಗಳ ನಿರ್ವಹಣೆ ನಗರ ಪ್ರದೇಶಗಳ ಭೂವ್ಯಾಜ್ಯಗಳನ್ನು ನಿವಾರಿಸಲಿದೆ ಎಂದ ಅವರು ಯೋಜನೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ನಗರದಲ್ಲಿ ಅಂದಾಜು 2 ಲಕ್ಷ ಆಸ್ತಿಗಳನ್ನು ಈ ಯೋಜನೆಗೆ ಒಳಪಡಿಸಲಾಗುವುದು. ಹೈದರಾಬಾದ್ ಇನ್ಫೋಟೆಕ್ ಎಂಟರ್ಪ್ರೈಸಸ್ ಲಿಮಿಟೆಡ್ ಎಂಬ ಖಾಸಗಿ ಸರ್ವೆ ಕಂಪನಿಯು ಇಲಾಖೆಯ ಸಹಯೋಗೊಂದಿಗೆ ಕಾರ್ಯ ನಿರ್ವಹಿಸಲಿದೆ. ಸಂಸ್ಥೆಯು ಎಲ್ಲಾ ಆಸ್ತಿಗಳನ್ನು ಅಳತೆ ಮಾಡಿ, ನಕ್ಷೆ ತಯಾರಿಸಿ ಆಸ್ತಿಗಳಿಗೆ ಸಂಬಂಧಿಸಿದಂತೆ ಮಾಲಕತ್ವದ ಮಾಹಿತಿಯನ್ನು ಎಲ್ಲಾ ಮೂಲಗಳಿಂದ ಸಂಗ್ರಹಿಸಿ ಮಾಹಿತಿ ಕೋಶ ಸಿದ್ಧಪಡಿಸಲಿದೆ.
ಮೊದಲ ಹಂತದಲ್ಲಿ 64 ಪ್ರಾಥಮಿಕ ನಿಯಂತ್ರಣ ಬಿಂದುಗಳು, 160 ದ್ವಿತೀಯ ಹಂತದ ನಿಯಂತ್ರಣ ಬಿಂದುಗಳನ್ನು ಮತ್ತು ಎಲ್ಲಾ ರಸ್ತೆಗಳು ಸೇರುವ ಸ್ಥಳಗಳನ್ನು ಲಭ್ಯತೆಯನುಸಾರ ತೃತೀಯ ಹಂತದ ನಿಯಂತ್ರಣ ಬಿಂದುಗಳನ್ನು ಸ್ಥಾಪಿಸಿ ಅವುಗಳನ್ನು ಡಿಜಿಪಿಎಸ್ ಮತ್ತು ಇಟಿಎಸ್ ಉಪಕರಣ ಬಳಸಿ ಮಾಹಿತಿ ಪಡೆಯಲಾಗಿದೆ. 32 ಗ್ರಾಮಗಳ ನಕ್ಷೆಗಳನ್ನು ಗಣಕೀಕರಣಗೊಳಿಸಿ ಜಿಯೋ ರೆಫರೆನ್ಸ್ ಪಡೆಯಲಾಗಿದೆ. ಈವರೆಗೆ 1250 ಆಸ್ತಿಗಳನ್ನು ಅಳತೆ ಮಾಡಿ ನಕ್ಷೆ ನಿಗದಿಪಡಿಸಲಾಗಿದೆ. ಅಲ್ಲದೆ, ನಗರಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಕಂದಾಯ ಇಲಾಖೆಯಿಂದ ಪ್ರತಿಯೊಂದು ಆಸ್ತಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ಮಾಹಿತಿ ಕೋಶ ಸಿದ್ಧಪಡಿಸಲಾಗಿರುತ್ತದೆ. ಪ್ರಸ್ತುತ ಈ ಯೋಜನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದವರು ಹೇಳಿದರು.
ಈ ಯೋಜನೆಗೆ ಸಂಬಂಧಿಸಿ ಸಾರ್ವಜನಿಕರು ಕರ್ನಾಟಕ ಭೂಕಂದಾಯ ಅಧಿನಿಯಮ 1966ರ ನಿಯಮ 84(4)ರ ಪ್ರಕಾರ ನೋಟೀಸು ಜಾರಿಗೊಂಡಾಗ ತಮ್ಮ ಆಸ್ತಿಗಳ ಬಗ್ಗೆ ಇರುವ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಇಲಾಖೆಗೆ ಹಾಜರುಪಡಿಸಬೇಕಾಗುತ್ತದೆ.
ಹಾಜರುಪಡಿಸಬೇಕಾದ ದಾಖಲೆಗಳು:
* ಕ್ರಯಪತ್ರ/ಖರೀದಿಪತ್ರ
* ಕಂದಾಯ ಕಟ್ಟಿದ ರಶೀದಿ/ ಕಂದಾಯ ಸಲ್ಲಿಸಿರುವ ಬಗ್ಗೆ ರಶೀದಿ
* ಆಸ್ತಿ ಋಣಭಾರ ಪತ್ರ (ಇ.ಸಿ.)
* ಮುನ್ಸಿಪಲ್ ಖಾತೆ ಪತ್ರದ ನಕಲು/ ಪಹಣಿ ಪತ್ರಿಕೆ
* ನಿವೇಶನ ಹಂಚಿಕೆ ಪತ್ರ
* ನಿವೇಶನ ಸ್ವಾಧೀನ ಪತ್ರ
* ಭೂಪರಿವರ್ತನೆ (ಅಲಿನೇಶನ್) ಆದೇಶ ನಕಲು- ಲೇ ಔಟ್ ನಕಾಶೆ ಪ್ರತಿ ನಕಲು
ಈ ದಾಖಲೆಗಳ ಝೆರಾಕ್ಸ್ ಪ್ರತಿ (ಎಲ್ಲ) ಅಥವಾ ಇರುವ ದಾಖಲೆಗಳ ಪ್ರತಿಯನ್ನು ಸಂಬಂಧಪಟ್ಟ ಇಲಾಖೆಯವರು ಅಳತೆಗೆ ಬಂದ ಸಂದರ್ಭ ಹಾಜರುಪಡಿಸಬೇಕು ಎಂದು ಪೊನ್ನುರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಅಪರ ಜಿಲ್ಲಾಧಿಕಾರಿ ದಯಾನಂದ್, ಮನಪಾ ಆಯುಕ್ತ ಹರೀಶ್ ಕುಮಾರ್ ಮತ್ತಿತರ ಅದಿಕಾರಿಗಳು ಉಪಸ್ಥಿತರಿದ್ದರು.

Friday, June 15, 2012

ಶಿಶುಗಳ ಸಂರಕ್ಷಣೆಗೆ "ಬಾಲ ಸಂಜೀವಿನಿ''

ಮಂಗಳೂರು,ಜೂನ್. 15:ಕರ್ನಾಟಕ ಸರ್ಕಾರ 'ಎಲ್ಲರಿಗೂ ಆರೋಗ್ಯ'ಎಂಬ ಧ್ಯೇಯವನ್ನು ಹೊಂದಿ ರಾಜ್ಯದ ಎಲ್ಲಾ ಜನ ಬಡವ ಬಲ್ಲಿದರೆಲ್ಲರೂ ಆರೋಗ್ಯ ಪೂರ್ಣರಾಗಿರುವಂತೆ ಅನೇಕ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ಸುವರ್ಣ ಆರೋಗ್ಯ ಅಭಿಯಾನ,ಗರ್ಭಿಣಿಯರ ರಕ್ಷಣೆಗೆ ಸುವರ್ಣ ಆರೋಗ್ಯ ಅಭಿಯಾನ,ಗರ್ಭಿಣಿಯರ ಆರೋಗ್ಯ ರಕ್ಷಣೆಗೆ ಜನನಿ ಸುರಕ್ಷಾ ಯೋಜನೆ, ಆಗ ತಾನೆ ಜನಿಸಿದ ಮಗುವಿನಿಂದ 06 ವರ್ಷದೊಳಗಿನ ಶಿಶುಗಳ ಆರೋಗ್ಯ ರಕ್ಷಣೆಗೆ ``ಬಾಲ ಸಂಜೀವಿನಿ'' ಹೀಗೆ ಹತ್ತು ಹಲವು ಆರೋಗ್ಯ ರಕ್ಷಣಾ ಯೋಜನೆಗಳು ಅನುಷ್ಠಾನವಾಗುತ್ತಿವೆ.
ಬಾಲ ಸಂಜೀವಿನಿ ಯೋಜನೆ: ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ 06 ವರ್ಷದೊಳಗಿನ ಮಕ್ಕಳಿಗೆ ರಾಜ್ಯದ ಆಯ್ದ 5 ಆಸ್ಪತ್ರೆಗಳಲ್ಲಿ 3 ನೇ ಹಂತದ ಚಿಕಿತ್ಸೆಯನ್ನು ಈ ಯೋಜನೆಯಡಿ ಒದಗಿಸಲಾಗುವುದು. 3ನೇ ಹಂತ ಚಿಕಿತ್ಸೆ ಆವಶ್ಯವಿರುವ ಮಕ್ಕಳಿಗೆ ಗರಿಷ್ಠ 35,000/- ಹಾಗೂ ನವಜಾತ ಶಿಶುಗಳ ಆರೈಕೆಗೆ ಮತ್ತು ಚಿಕಿತ್ಸೆಗೆ ಗರಿಷ್ಠ ರೂ.50,000/- ಗಳನ್ನು ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ವೆಚ್ಚ ಭರಿಸಲಿದೆ.
ಉದ್ದೇಶ:ಕಡುಬಡತನದ 3ನೇ ಹಂತದ ತುರ್ತು ಚಿಕಿತ್ಸೆ ಒದಗಿಸುವುದು,ಮಕ್ಕಳ ಆರೋಗ್ಯ ರಕ್ಷಣೆ,ಮಕ್ಕಳ ತಾಯಂದಿರಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಮಗುವಿನ ಆರೈಕೆಯಲ್ಲಿ ಸಬಲರನ್ನಾಗಿಸುವುದು,ಆರೋಗ್ಯ ಸೇವೆಗಳ ಮೂಲಕ ಹಾಗೂ ಉತ್ತಮ ಪೌಷ್ಠಿಕ ಆಹಾರವನ್ನು ಒದಗಿಸುವುದರ ಮೂಲಕ ಸಶಕ್ತರನ್ನಾಗಿಸುವುದು.
ಸೌಲಭ್ಯ ಪಡೆಯಲು ಅರ್ಹತೆ: 3ನೇ ಹಂತದ ತುರ್ತು ಚಿಕಿತ್ಸೆ ಆವಶ್ಯವಿರುವ ನ್ಯೂನತೆಗೆ ಒಳಗಾಗಿರುವ ಮಕ್ಕಳು,ಅಂಗನವಾಡಿ ಕೇಂದ್ರದಲ್ಲಿ ದಾಖಲಾಗಿರುವ 6 ವರ್ಷದೊಳಗಿನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳು ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಕಾರ್ಯಕ್ರಮದ ಅನುಷ್ಠಾನ:- ಪ್ರಾಥಮಿಕ ಆರೋಗ್ಯ ಕೇಂದ್ರ ಸಾರ್ವಜನಿಕ ಆಸ್ಪತ್ರೆಗಳ ಮೂಲಕ ನೀಡುವ ಚಿಕಿತ್ಸೆಯಲ್ಲಿ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಾರದಿದ್ದಲ್ಲಿ ಸಂಬಂಧಿಸಿದ ವೈದ್ಯಾಧಿಕಾರಿಗಳು 3ನೇ ಹಂತದ ಚಿಕಿತ್ಸೆಗಾಗಿ ಶಿಶು/ಮಕ್ಕಳನ್ನು ಸಂಬಂಧಿಸಿದ ಆಸ್ಪತ್ರೆಗಳಿಗೆ ಶಿಫಾರಸು ಮಾಡುವರು. ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಗುರುತಿಸುವುದು ಹಾಗೂ ಶಿಫಾರಸು ಮಾಡುವುದು(ಮಾಹಿತಿ ಸೇವೆ ಪತ್ರದೊಂದಿಗೆ) ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆ,ಮೇಲ್ವಿಚಾರಕಿ/ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ.
ಪ್ರಾರಂಭಿಕವಾಗಿ ರಾಜ್ಯದಲ್ಲಿ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ,ಬೆಳಗಾವಿಯ ಡಾ.ಪ್ರಭಾಕರ ಕೋರೆ ಉಚಿತ ಆಸ್ಪತ್ರೆ,ಗುಲ್ಬರ್ಗಾದ ಎಂ.ಆರ್.ಮೆಡಿಕಲ್ ಕಾಲೇಜು-ಬಸವೇಶ್ವರ ಮತ್ತು ಸಂಗಮೇಶ್ವರ ಆಸ್ಪತ್ರೆ,ಮಂಗಳೂರಿನ ಲೇಡಿಗೋಷನ್ ಮತ್ತು ವೆನ್ಲಾಕ್ ಆಸ್ಪತ್ರೆ ಹಾಗೂ ಕಸ್ತೂರ್ ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ವಿಶೇಷ ಸಂದರ್ಭಗಳಲ್ಲಿ ಯಾವುದೇ ಜಿಲ್ಲೆಯ ಮಗುವಿಗೆ ಮೇಲ್ಕಂಡ 5 ಘಟಕಗಳ ಪೈಕಿ ಯಾವುದೇ ಘಟಕಗಳಲ್ಲಿ ಚಿಕಿತ್ಸೆ ನೀಡಬಹುದಾಗಿರುತ್ತದೆ.
ಚಿಕಿತ್ಸೆಗೆ ಗುರುತಿಸಿರುವ ಆರೋಗ್ಯ ಸಮಸ್ಯೆಗಳು: ತೀವ್ರತರನಿಮೋನಿಯಾ 2)ಎನ್ಸೆಫಿಲೈಟೀಸ್ಮೆನೆಂಜೈಟೀಸ್ 3)ಕ್ಲಿಷ್ಠಕರಮಲೇರಿಯಾ 4)ಅನಿಮಿಯಾ(ರಕ್ತಹೀನತೆ) 5)ಡಯಾಬಿಟೀಸ್(ಮಧುಮೇಹ) 6)ಯುರಿನಲ್ ಸಮಸ್ಯೆಗಳು -ಮೂತ್ರಕೋಶ/ಕಿಡ್ನಿಸಮಸ್ಯೆ 7)ನವಜಾತ ಶಿಶುವಿನ ಲೆವೆಲ್ -3 ಚಿಕಿತ್ಸೆ 8)ಲಿವರ್ ತೊಂದರೆ 9)ನ್ಯೂರೋಲಾಜಿಕಲ್ ಡಿಸಾರ್ಡರ್ಸ್ 10)ಸೆಕೆಂಡರಿ ಮಾಲ್ ನ್ಯೂಟ್ರಿಷನ್ 11) ಕ್ಲಿಷ್ಟ ಅತಿಸಾರ 12) ಮಗುವಿನ ಶಸ್ತ್ರ ಚಿಕಿತ್ಸೆ 13) ವಿಷಜಂತು ಕಡಿತಕ್ಕೆ ಚಿಕಿತ್ಸೆ 14) ವಿಷ ಸೇವನೆ 15)ಹೃದಯ ಸಂಬಂಧಿರೋಗಗಳು(ಶಸ್ತ್ರಚಿಕಿತ್ಸೆ ಹೊರತುಪಡಿಸಿ)16)ತೀವ್ರ ಸೋಂಕುರೋಗಗಳು 17)ರಕ್ತ ಸಂಬಂಧರೋಗಗಳು ಹಾಗೂ 18)ಅಪಘಾತ ಚಿಕಿತ್ಸೆ
ಪಡೆಯಬಹುದಾದ ಸೌಲಭ್ಯಗಳು:ತಜ್ಞ ವೈದ್ಯರಸಲಹೆಯಂತೆಚಿಕಿತ್ಸೆಒದಗಿಸಲಾಗುವುದು,ಒಳರೋಗಿಯಾಗಿ ದಾಖಲಾದ ಸಂದಭ್ದಲ್ಲಿ ಮಗುವಿನೊಡನೆ ತಂಗಲು ಒಬ್ಬರಿಗೆ (ತಾಯಿ/ಪೋಷಕರಿಗೆ)ಅವಕಾಶವಿದೆ.ಪ್ರತೀದಿನ ರೂ.100/-ರಂತೆ ಭತ್ಯೆ ಹಾಗೂ ವಾಸ್ತವಿಕ ಪ್ರಯಾಣ ವೆಚ್ಚ ತಾಯಿ/ಪೋಷಕರಿಂಗೆ ನೀಡಲಾಗುವುದು.
ಸೌಲಭ್ಯ ಪಡೆಯಲು ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಮೇಲ್ವಿಚಾರಕಿಯರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಭೇಟಿಯಾಗಿ ಪಡೆಯಬಹುದಾಗಿದೆ.
ದಕ್ಷಿಣಕನ್ನಡ ಜಿಲ್ಲೆಯನ್ನು ಪೈಲೆಟ್ ಯೋಜನೆಯಲ್ಲಿ ಸೇರಿಸಿದ್ದು ಇಲ್ಲಿ ವೆನ್ಲಾಕ್ ಮತ್ತು ಲೇಡಿಗೋಷನ್ ಹಾಗೂ ಕೆಎಂಸಿ ಆಸ್ಪತ್ರೆಗಳಲ್ಲಿ ಬಾಲ ಸಂಜೀವಿನಿ ಚಿಕಿತ್ಸೆ ಲಭ್ಯವಿದೆ.ಯೋಜನೆ 2011 ರ ಎಪ್ರಿಲ್ ನಿಂದ ಜಾರಿಗೆ ಬಂದಿದ್ದು,ಮೇಲಿನ ಮೂರು ಆಸ್ಪತ್ರೆಗಳಲ್ಲಿ 2012 ರ ಮಾಚ್ರ್ ಅಂತ್ಯದ ವರೆಗೆ ಒಟ್ಟು 606 ಶಿಶು/ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ಇವರ ಚಿಕಿತ್ಸೆಗೆ ಒಟ್ಟು ರೂ.54.85 ಲಕ್ಷ ವೆಚ್ಚವಾಗಿದ್ದುಯ ಇದರಲ್ಲಿ ಪ್ರಯಾಣ ವೆಚ್ಚ ಹಾಗೂ ದಿನಭತ್ಯೆಗಾಗಿ ರೂ.8.52 ಲಕ್ಷ ಹಾಗೂ ಔಷಧೋಪಚಾರಗಳಿಗಾಗಿ ರೂ.46.33 ಲಕ್ಷ ವೆಚ್ಚವಾಗಿದೆಯೆಂದು ಬಾಲ ಸಂಜೀವಿನಿ ಸಮನ್ವಯಾಧಿಕಾರಿ ಶ್ರೀಮತಿ ವೀಣಾ ತಿಳಿಸಿದ್ದಾರೆ.

Thursday, June 14, 2012

ಹಾಜಬ್ಬ ಅಕ್ಷರ ಸಂತ : ನಳಿನ್ ಕುಮಾರ್ ಕಟೀಲ್

ಮಂಗಳೂರು,ಜೂನ್.14: ಹಾಜಬ್ಬರ ಶಾಲೆಯೆಂದೇ ಹೆಸರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ ನ್ಯೂಪಡ್ಪು ಜಿಲ್ಲಾ ಪಂಚಾಯತ್ ಸಂಯುಕ್ತ ಪ್ರೌಢಶಾಲೆಯ ಅಭಿವೃದ್ಧಿಗೆ ರೂ.15 ಲಕ್ಷ ಅನುದಾನ ಒದಗಿಸುವುದಾಗಿ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಇಂದು ಹರೇಕಳ ನ್ಯೂಪಡ್ಪುನ ಜಿಲ್ಲಾ ಪಂಚಾಯತ್ ಸಂಯುಕ್ತ ಪ್ರೌಢಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರೂ.5 ಲಕ್ಷವನ್ನು ತನ್ನ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ದಿ ನಿಧಿಯಿಂದ ಭರಿಸಲಾಗುವುದು. ಮಿಕ್ಕ ರೂ.10 ಲಕ್ಷವನ್ನು ದಾನಿಗಳಿಂದ ಮತ್ತು ಉದ್ಯಮಿಗಳಿಂದ ಒದಗಿಸಿ ಕೊಡಲಾಗುವುದು ಎಂದು ಸಂಸದರು ಉದ್ಘಾಟನಾ ಸಮಾರಂಭ ಸಭೆಯಲ್ಲಿ ಭರವಸೆ ನೀಡಿದರು.
ನಾನು ಆಧ್ಯಾತ್ಮ ಸಂತರನ್ನು ಕಂಡಿದ್ದೇನೆ; ಧಾರ್ಮಿಕ ಸಂತರಿಗೇನು ಕಡಿಮೆ ಇಲ್ಲ.ಆದರೆ ಶಿಕ್ಷಣ ಕ್ಷೇತ್ರದ ಸಂತರನ್ನು ಹರೇಕಳ ಹೊರತು ಬೇರೆಲ್ಲೂ ಕಂಡಿಲ್ಲ. ಹರೇಕಳ ಹಾಜಬ್ಬ ಈ ದೇಶದ ಶಿಕ್ಷಣ ಸಂತ. ಅವರು ತಮ್ಮ ಸರ್ವಸ್ವವನ್ನೂ ಸಮಾಜಕ್ಕಾಗಿ ಸಮರ್ಪಿಸಿದ ಫಕೀರ ಎಂದು ಲೋಕಸಭಾ ಸದಸ್ಯರು ಬಣ್ಣಿಸಿದರು.
ಶಿಕ್ಷಣ ಕಾಶಿ ದಕ್ಷಿಣ ಕನ್ನಡ ಜಿಲ್ಲೆ ಆದರೆ ನಮ್ಮಲ್ಲಿ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ. ಮೌಲ್ಯಯುತ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದ ಅವರು, ಮುಂದಿನ ದಿನಗಳಲ್ಲಿ ಅಕ್ಷರ ಸಂತ ಹಾಜಬ್ಬ ಶಿಕ್ಷಣ ಕ್ಷೇತ್ರದ ನಕ್ಷತ್ರವಾಗಿ ಮಿನುಗಲಿದ್ದಾರೆ ಎಂದು ನಳಿನ್ ಕುಮಾರ್ ನುಡಿದರು.
ಮಾಧ್ಯಮಗಳು ಹಾಜಬ್ಬರವರನ್ನು ಬೆಂಬಲಿಸಿದ ಪರಿಣಾಮವಾಗಿ ನ್ಯೂಪಡ್ಪು ಸರಕಾರಿ ಶಾಲೆಗೆ ಸಹಾಯ ಹರಿದು ಬಂತು ಎಂದು ಹೇಳಿದ ಸಂಸತ್ ಸದಸ್ಯರು ಇಂದು ಸರಕಾರಿ ಶಾಲೆಗಳು ಸಂಕಷ್ಟದಲ್ಲಿವೆ. ವಿದ್ಯಾರ್ಥಿಗಳ ಕೊರತೆ ಇದೆ. ಜನ ಪ್ರತಿನಿಧಿ ಗಳಿಂದಾ ಗಲೀ, ಶಿಕ್ಷಕ ರಿಂದಾಗಲಿ ಸರಕಾರಿ ಶಾಲೆ ಗಳನ್ನು ಉಳಿಸಲಾಗದು. ಸರಕಾರಿ ಶಾಲೆಗಳ ಅಳಿವು-ಉಳಿವು ಪೋಷಕರ ಕೈಯಲ್ಲಿದೆ. ಹಾಜಬ್ಬರ ಶಾಲೆಯನ್ನು ಉಳಿಸಿ ಬೆಳೆಸಲು ಪೋಷಕರು ಹಾಗೂ ಸ್ಥಳಿಯ ಜನತೆ ಕಂಕಣ ಬದ್ಧರಾಗ ಬೇಕು ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಹರೇಕಳ ಹಾಜಬ್ಬ ಇದು ನನ್ನ ಶಾಲೆಯಲ್ಲ; ಸರಕಾರಿ ಶಾಲೆ. ನಾನು ಐದು ರೂಪಾಯಿ ಬೆಲೆ ಬಾಳದ ಮನುಷ್ಯ. ದಾನಿಗಳು, ಜನ ಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು ಮತ್ತು ಮಾಧ್ಯಮಗಳು ಸಹಕಾರ ನೀಡುವ ಮೂಲಕ ನನ್ನನ್ನು ದೊಡ್ಡ ಜನ ಮಾಡಿದ್ದಾರೆ. ಇದು ಸರಕಾರಿ ಶಾಲೆಯಾಗಿಯೇ ಗುರುತಿಸಲ್ಪಡಲಿ. ಶಾಲೆಗೆ ಆವರಣ ಗೋಡೆ ಆಗ ಬೇಕು. ಆಟದ ಮೈದಾನದ ಆವಶ್ಯಕತೆ ಇದೆ. ರಸ್ತೆಯನ್ನು ಅಭಿವೃದ್ಧಿ ಪಡಿಸ ಬೇಕಾಗಿದೆ.ನೀರು ಹರಿದು ಹೋಗಲು ಒಳ ಚರಂಡಿ ವ್ಯವಸ್ಥೆ ಆಗ ಬೇಕು. ನನ್ನ ಕನಸುಗಳು ಪರಿಪೂರ್ಣಗೊಳ್ಳಲು ಇನ್ನೂ ಅಂದಾಜು ಐವತ್ತು ಲಕ್ಷ ರೂ. ಬೇಕು. ಜನ ಪ್ರತಿನಿಧಿಗಳು, ದಾನಿಗಳು ಸಹಕರಿಸ ಬೇಕು ಎಂದು ಹಾಜಬ್ಬ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಅವರು, ಯಾರು ಏನೇ ಹೇಳಲಿ; ನ್ಯೂ ಪಡ್ಪು ಜಿಲ್ಲಾ ಪಂಚಾಯತ್ ಸಂಯುಕ್ತ ಪ್ರೌಢ ಶಾಲೆ ಹಾಜಬ್ಬರ ಶಾಲೆಯೆಂದೇ ಗುರುತಿಸಲ್ಪಡುತ್ತದೆ. ಶಾಲೆಯ ಪ್ರಗತಿಗೆ ಅವರ ಶ್ರಮ ಊಹಿಸಲಸಾಧ್ಯ. ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜಬ್ಬರ ಶ್ರಮವನ್ನು ಸದುಪಯೋಗ ಪಡಿಸಿ ಕೊಳ್ಳ ಬೇಕು ಎಂದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶಾಲೆಯ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಕೊಡಲಾಗುವುದು. ಜಿಲ್ಲಾ ಪಂಚಾಯತ್ ಸದಸ್ಯರ ಅನುದಾನದಿಂದ ಆಟದ ಮೈದಾನ ಅಭಿವೃದ್ಧಿ ಪಡಿಸಲಾಗುವುದು ಎಂದರಲ್ಲದೆ ಸರಕಾರ, ದಾನಿಗಳ ಮತ್ತು ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಶಾಲೆಗಳನ್ನು ಹೇಗೆ ಅಭಿವೃದ್ಧಿ ಪಡಿಸ ಬಹುದು ಎಂಬುದಕ್ಕೆ ಹಾಜಬ್ಬರವರು ಮಾದರಿಯಾಗಿದ್ದರೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್.ಕರೀಂ, ತಾ.ಪಂ.ಸದಸ್ಯ ಮಹಮ್ಮದ್ ಮುಸ್ತಾಫ, ಕೆಎಸ್ಆರ್ ಪಿ ಕಮಾಡೆಂಟ್ ರಾಮದಾಸ್ ಗೌಡ, ಹರೇಕಳ ಗ್ರಾ.ಪಂ. ಅದ್ಯಕ್ಷೆ ರಶೀದಾ, ಗ್ರಾಮ ಪಂಚಾಯತ್ ಸದಸ್ಯರಾದ ಎಚ್.ಸಾಲಿ, ಮಜೀದ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿಶ್ವನಾಥ ಶೆಟ್ಟಿ, ದಾನಿಗಳಾದ ಬಿ.ಕುಂಞ ಅಹಮ್ಮದ್ ದೇರಳಕಟ್ಟೆ, ಇಬ್ರಾಹಿಂ ಎಸ್.ಕೆ ಮಂಗಳೂರು, ಕೆ.ಎಸ್.ಇಬ್ರಾಹಿಂ, ಪ್ರಸಾದ್ ರೈ ಕಲ್ಲಿಮಾರು, ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್, ನ್ಯೂ ಪಡ್ಪು ಮಸೀದಿಯ ಖತೀಬರಾದ ಮುಹಮ್ಮದ್ ಸಹದಿ, ಡಿಡಿಪಿಐ ಮೋಸೆಸ್ ಜಯಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ಪ್ರೌಢ ಶಾಲೆಯ ಶಿಕ್ಷಕರ ವತಿಯಿಂದ ಹಾಜಬ್ಬರವರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಹ ಶಿಕ್ಷಕಿ ಸುರೇಖಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವೀಣಾ ಜೆ.ಎಚ್ ವರದಿ ವಾಚಿಸಿದರು ಮತ್ತು ವಂದಿಸಿದರು.

ದ.ಕ.ಸಂಸದರ ನಿಧಿಯಿಂದ ರೂ.17.37 ಲಕ್ಷ ಬಿಡುಗಡೆ

ಮಂಗಳೂರು,ಜೂನ್.14:ಸಂಸತ್ ಸದಸ್ಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದ.ಕ.ಜಿಲ್ಲೆಯ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ರವರ 2010-11 ನೇ ಸಾಲಿನ 2 ಹಾಗೂ 2011-12 ನೇ ಸಾಲಿನ 8 ಕಾಮಗಾರಿಗಳಿಗೆ ಮಂಜೂರಾಗಿದ್ದ ಒಟ್ಟು 28.00 ಲಕ್ಷ ರೂ.ಗಳಲ್ಲಿ ಇದೀಗ ರೂ. 17.37 ಲಕ್ಷಗಳನ್ನು ಬಿಡುಗಡೆ ಮಾಡಿ ಸಂಬಂಧಿಸಿದವರಿಗೆ ಚೆಕ್ ಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
2010-11 ನೇ ಸಾಲಿನಲ್ಲಿ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನೀರ ಚಿಲುಮೆ ಅರ್ಬಿ ಪರಿಶಿಷ್ಟ ಪಂಗಡದ ಕಾಲೊನಿ ರಸ್ತೆ ಅಭಿವೃದ್ಧಿಗೆ ಮಂಜೂರಾಗಿದ್ದ ರೂ.2.00 ಲಕ್ಷದಲ್ಲಿ ರೂ.1.50 ಲಕ್ಷ ಬಿಡುಗಡೆ ಮಾಡಿ ಚೆಕ್ ನ್ನು ಸಂಬಂಧಿಸಿದವರಿಗೆ ವಿತರಿಸಲಾಗಿದೆ. ಇದೇ ತಾಲೂಕಿನ ಮೇಲಂತಬೆಟ್ಟುವಿನ ಮುಂಡೂರು-ಮೇಲಂತಬೆಟ್ಟು ರಸ್ತೆ ಅಭಿವೃದ್ಧಿಗಾಗಿ ರೂ.2.00 ಲಕ್ಷ ಮಂಜೂರಾಗಿದ್ದು ರೂ.1.50 ಲಕ್ಷ ಬಿಡುಗಡೆಯಾಗಿದೆ.
2011-12 ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಎವಲ್ತ್ತೋಡಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 3.00 ಲಕ್ಷ ಮಂಜೂರಾಗಿದ್ದು ರೂ.2.25 ಲಕ್ಷ ಬಿಡುಗಡೆಯಾಗಿದೆ.ಮುಂಡಾಜೆ ಗ್ರಾಮದ ಚಾಮುಂಡಿ ನಗರದ ಅಂಗನವಾಡಿ ಕಟ್ಟಡ ರಚನೆಗೆ ರೂ.2.00 ಲಕ್ಷ ಮಂಜೂರಾಗಿ ಅದರಲ್ಲಿ ಇದೀಗ ರೂ.1.50 ಲಕ್ಷ ಬಿಡುಗಡೆಯಾಗಿದೆ. ಕಳಿಯ ಗ್ರಾಮದ ನೆಲ್ಲಿಕಟ್ಟೆ-ಉಬರಡ್ಕ ರಸ್ತೆ ಅಭಿವೃದ್ಧಿ ಮತ್ತು ಮೋರಿ ನಿರ್ಮಾಣಕ್ಕಾಗಿ ರೂ.1.00 ಲಕ್ಷ ಮಂಜೂರಾಗಿತ್ತು. ಇದರಲ್ಲಿ ರೂ.75 ಸಾವಿರಗಳನ್ನು ಬಿಡುಗಡೆ ಮಾಡಿದೆ. ಮಿತ್ತಬಾಗಿಲು ಗ್ರಾಮ ಪಂಚಾಯತ್ ಕಡಿರುದ್ಯಾವರ ಕೊಡಿಯಾಲ್ ಬೈಲ್ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ರಚನೆಗೆ ರೂ.0.75 ಸಾವಿರ ಬಿಡುಗಡೆ ,ಉಜಿರೆ ಗ್ರಾಮದ ನೀರಚಿಲುಮೆ ಅರ್ಬಿ ರಸ್ತೆ ಅಭಿವೃದ್ಧಿ ಮುಂದುವರಿದ ಕಾಮಗಾರಿಗೆ ರೂ.0.75 ಸಾವಿರ ಬಿಡುಗಡೆಯಾಗಿದೆ. ಮಂಗಳೂರಿನ ವಿಶ್ವ ವಿದ್ಯಾನಿಲಯ ಕಾಲೇಜಿನ ಬಿಸಿನೆಸ್ ಮ್ಯಾನೇಜ್ಮೆಂಟ್ ಕಟ್ಟಡದ ಮೊದಲ ಮಹಡಿ ಮತ್ತು ಮಹಿಳಾ ಕೊಠಡಿ ನಿರ್ಮಾಣದ ಕಾಮಗಾರಿಗೆ ಮಂಜೂರಾಗಿದ್ದ ರೂ.10 ಲಕ್ಷದಲ್ಲಿ ರೂ.5.00 ಲಕ್ಷ ಬಿಡುಗಡೆಯಾಗಿದೆ. ಬಂಗ್ರಕೂಳೂರು ವಾರ್ಡ್ ಬಳಿ ಕಂಪೌಂಡು ರೇಖಾ ಶೆಟ್ಟಿಯವರ ಮನೆ ಬಳಿ ಚರಂಡಿ ರಚನೆಗೆ ರೂ.1.12 ಲಕ್ಷ ಬಿಡುಗಡೆ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿಯಿಂದ ಕರ್ಮಾನು ಮಂಜಿನಗಡ್ಡೆ ವರೆಗಿನ ರಸ್ತೆ ಕಾಂಕ್ರೀಟೀಕರಣಕ್ಕೆ ಮಂಜೂರಾಗಿದ್ದ ರೂ.5.00 ಲಕ್ಷಗಳಲ್ಲಿ ರೂ.3.75 ಲಕ್ಷ ಬಿಡುಗಡೆ ಮಾಡಲಾಗಿದೆ.

Wednesday, June 13, 2012

ನಿತ್ಯ ವಿದ್ಯಾರ್ಥಿ ಉತ್ತಮ ಶಿಕ್ಷಕ: ಸಿಇಒ ವಿಜಯಪ್ರಕಾಶ್

ಮಂಗಳೂರು, ಜೂನ್.13 : ಪ್ರಸಕ್ತ ವ್ಯವಸ್ಥೆಯಲ್ಲಿ ಎಲ್ಲರನ್ನು ಒಗ್ಗೂಡಿಸಿ, ವಿಶೇಷ ನಾಯಕತ್ವ ಗುಣದೊಂದಿಗೆ ಶಾಲಾಭಿವೃದ್ಧಿಯೊಂದನ್ನೇ ಮಂತ್ರವಾಗಿಸಿ ದುಡಿದ ಟೀಚರ್ ಚಂದ್ರಾವತಿ ರೈ ಅವರು ಇಂದಿನ ಶಿಕ್ಷಕರಿಗೆ ಉತ್ತಮ ಮಾದರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು.ಅವರಿಂದು ಮಂಗಳೂರಿನ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ ರೈ ಅವರನ್ನು ಗೌರವಿಸಿ ಅಭಿನಂದಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಾಲಾಭಿವೃದ್ಧಿಗಾಗಿ ಅವರು ನೀಡಿದ ಕೊಡುಗೆ, ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬಲು ಅವರು ದುಡಿದ ರೀತಿ ಇತರರಿಗೆ ಮಾದರಿಯಾಗಿದ್ದು, ಎಲ್ಲ ಶಿಕ್ಷಕರು ಇದೇ ಮಾದರಿಯನ್ನು ಅಳವಡಿಸಿಕೊಂಡಲ್ಲಿ ಜಿಲ್ಲೆಯ ಸಕರ್ಾರಿ ಶಾಲೆಗಳ ಗುಣಮಟ್ಟ ಅದ್ವಿತೀಯವಾಗಲಿದೆ ಎಂದರು. ಜಿಲ್ಲಾ ಪಂಚಾಯತ್ ಸಮಾಜದ ಅತಿ ಮುಖ್ಯ ವಿಭಾಗವಾದ ಶಿಕ್ಷಣ ಇಲಾಖೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದು, ಶಿಕ್ಷಕರು, ಶಾಲೆಗಳ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಲಾಗಿದೆ. ಶಾಲೆಗಳು ದೇಶದ ಭವಿಷ್ಯವನ್ನು ರೂಪಿಸುವ ಕೇಂದ್ರಗಳಾಗಿದ್ದು, ಉತ್ತಮ ಕೆಲಸ ಮಾಡುವ ಶಿಕ್ಷಕರನ್ನು, ಶಾಲೆಗಳನ್ನು ಗುರುತಿಸುವುದಕ್ಕೆ ಆದ್ಯತೆಯನ್ನು ನೀಡಿದೆ ಎಂದರು.ಜಿಲ್ಲೆಯ ಕನಿಷ್ಠ 500 ಶಾಲೆಗಳಲ್ಲಿ ಶಾಲಾವನ ನಿರ್ಮಾಣ, ಕೃಷಿ ದರ್ಶನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಕ್ಕಳಲ್ಲಿ ಪರಿಸರ ಪ್ರಜ್ಞೆ , ತೋಟಗಾರಿಕೆ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ದೂರಗಾಮಿ ಪರಿಣಾಮ ಬೀರುವ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.ಮುಲ್ಲಕಾಡು ಶಾಲೆಯ ಎಸ್ ಡಿ ಎಂಸಿಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರಶಂಸಿಸಿದ ಸಿಒಒ ಅವರು, ಅಧ್ಯಕ್ಷರಾದ ಸಂಜೀವ್ ಟೈಲರ್ ಅವರ ಬದ್ಧತೆಯನ್ನು ಶ್ಲಾಘಿಸಿದರು. ಶಿಕ್ಷಕರು ಸಮಾಜಕ್ಕೆ ನೀಡುವ ಕೊಡುಗೆ ಅಮೋಘ ಎಂಬುದನ್ನು ಮನಗಾಣಬೇಕು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಟೀಚರ್ ಚಂದ್ರಾವತಿ ರೈ ಅವರು ತಮ್ಮ ಜೀವಿತಾವಧಿಯ ಅತ್ಯಮೂಲ್ಯ ಕ್ಷಣ ಇದು ಎಂದರು. ಕರ್ತವ್ಯದ ವೇಳೆ ಸಹಕಾರ ನೀಡಿದ ಪ್ರತಿಯೊಬ್ಬರನ್ನೂ ಅವರು ಸ್ಮರಿಸಿದರು.ವಿದ್ಯಾಂಗ ಉಪನಿರ್ದೇಶಕ ಮೋಸೆಸ್ ಜಯಶೇಖರ್,ಸರ್ವಶಿಕ್ಷಣ ಅಭಿಯಾನದ ಪೀತಾಂಬರ್, ವಿದ್ಯಾ, ದಾನಿಗಳಾದ ಗಿರಿಜಾತೆ ಭಂಡಾರಿ, ಎಸ್ ಡಿ ಎಂಸಿ ಯ ಸದಸ್ಯರಾದ ಮೊಹಮ್ಮದ್ ಅವರನ್ನೊಳಗೊಂಡಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗೀತಾ ದೇವದಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಹರಿಣಾ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ಐರಿನ್ ವಂದಿಸಿದರು.