Tuesday, June 26, 2012

"ಉತ್ತಮ ಸಮಾಜ ನಿರ್ಮಾಣ ವೈದ್ಯಾಧಿಕಾರಿಗಳ ಪಾತ್ರ ಹಿರಿದು''

ಮಂಗಳೂರು,ಜೂನ್.26: ಸದೃಢ ಸಮಾಜ,ಬಲಿಷ್ಠ ದೇಶ ನಿರ್ಮಾಣ ಮಾಡುವಲ್ಲಿ ವೈದ್ಯಾಧಿಕಾರಿಗಳ ಪಾತ್ರ ಹಿರಿದು. ಸಮಾಜದಲ್ಲಿ ವೈದ್ಯಾಧಿಕಾರಿಗಳ ವೃತ್ತಿ ಉತ್ತಮವೆಂದು ಮಂಗಳೂರಿನ ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್ರವರು ತಿಳಿಸಿದರು.
ಅವರು ಇಂದು ಬೆಳಿಗ್ಗೆ ಮಂಗಳೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ತಾಲೂಕು ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ನಡೆದಿರುವ ವಿಶ್ವ ಆರೋಗ್ಯ ದಿನಾಚರಣೆ ಮತ್ತು ತಾಲೂಕು ಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ನಗರೀಕರಣದಿಂದ ಜೀವನದಲ್ಲಿ ಆರೋಗ್ಯವಂತರು ಕಡಿಮೆಯಾಗುತ್ತಿದ್ದಾರೆ. ಮಧುಮೇಹ,ರಕ್ತದೊತ್ತಡದಂತಹ ಕಾಯಿಲೆಗಳು ಮನೆಮನೆಯಲ್ಲೂ ಇರುವ ಕಾಯಿಲೆಯಾಗಿದೆ. ಆದ್ದರಿಂದ ಆರೋಗ್ಯವಂತರಾಗಿರಲು ವ್ಯಕ್ತಿಯು ಸದಾ ಸಕರಾತ್ಮಕ ಚಿಂತನೆಯನ್ನು ಮಾಡುವುದು ಅವಶ್ಯ. ತಿಂದುಂಡ ಆಹಾರವನ್ನು ಕರಗಿಸಲು ಪ್ರಯತ್ನಿಸಬೇಕು ಮತ್ತು ಮಿತ ಆಹಾರ ಸೇವಿಸಿ ಸ್ವಾಭಾವಿಕವಾಗಿ ದೊರೆಯುವ ಆಹಾರವನ್ನೇ ಹೆಚ್ಚಾಗಿ ಸೇವಿಸಬೇಕು ಮತ್ತು ಎಲ್ಲರಿಗೂ ಯಾವಾಗಲೂ ಒಳ್ಳೆಯದನ್ನೇ ಯೋಚನೆ ಮಾಡುವುದರಿಂದ ಆರೋಗ್ಯವಂತರಾಗಿರಲು ಸಾಧ್ಯವೆಂದು ಅವರು ಸೂಚನೆ ನೀಡಿದರು. ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಈ ಇಲಾಖೆಯಲ್ಲಿ ನಿಯಮಾನುಸಾರ ಶ್ರದ್ಧೆಯಿಂದ ಕೆಲಸ ಮಾಡಿರುವವರಿಗೆ ಪುರಸ್ಕಾರ ಮಾಡಿರುವುದು ಅದ್ಭುತವೆಂದು ನುಡಿದರು.

ಸಮಾರಂಭದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭವ್ಯಗಂಗಾಧರ್ ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಹಲವಾರು ಯೋಜನೆಗಳಿದ್ದು, ಇದನ್ನು ಜನರಿಗೆ ತಲುಪಿಸುವ ಕಾರ್ಯ ಆಗಬೇಕು.ಇಂದಿಗೂ ಗ್ರಾಮೀಣ ಪ್ರದೇಶದ ಜನರಿಗೆ ಈ ಬಗ್ಗೆ ಮಾಹಿತಿ ಕಡಿಮೆ ಇರುತ್ತದೆ. ಇದನ್ನು ತಿಳಿಸುವ ಕೆಲಸ ಆಗಬೇಕಾಗಿದೆ. ಈ ಯೋಜನೆ ಪ್ರಾರಂಭವಾಗಿ 7 ವರ್ಷ ಸಂದರೂ ಹೆಚ್ಚಿನ ಸಾಧನೆ ಆಗಿಲ್ಲವೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ
ಡಾ.ಓ.ಶ್ರೀರಂಗಪ್ಪ ಮಾತನಾಡಿ ವೃದ್ಧರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು ಅವರಿಗೆ ಔಷಧಿಗಿಂತ ಪ್ರೀತಿ ಮುಖ್ಯವಾಗಿದೆ. ಈ ಇಲಾಖೆಯಲ್ಲಿ ಚೆನ್ನಾಗಿ ಕೆಲಸ ಮಾಡಿದವರಿಗೆ ಪ್ರಶಸ್ತಿ ನೀಡುವುದರಿಂದ ಇನ್ನು ಮುಂದೆ ಇದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಲು ಪ್ರೋತ್ಸಾಹ ನೀಡಿದಂತಾಗುವುದೆಂದು ತಿಳಿಸಿದರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಾದ ರೋಹಿದಾಸ್ ಮಾತನಾಡಿ ಮಿತ ಆಹಾರ ಆರೋಗ್ಯವಂತರಾಗಿರಲು ಸಾಧ್ಯ ಮತ್ತು ಯಾವಾಗಲೂ ಚಟುವಟಿಕೆಯಿಂದಿರುವುದರಿಂದ ಆರೋಗ್ಯವಂತರಾಗಬಹುದೆಂದು ತಿಳಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣವನ್ನು ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ ರುಕ್ಷ್ಮಿಣಿ ಮಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ವೈದ್ಯಾಧಿಕಾರಿ ಡಾ. ರತ್ನಾಕರ್ ಸ್ವಾಗತಿಸಿದರು. ಕೊನೆಯಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ ವಂದಿಸಿದರು.