Wednesday, June 13, 2012

ನಿತ್ಯ ವಿದ್ಯಾರ್ಥಿ ಉತ್ತಮ ಶಿಕ್ಷಕ: ಸಿಇಒ ವಿಜಯಪ್ರಕಾಶ್

ಮಂಗಳೂರು, ಜೂನ್.13 : ಪ್ರಸಕ್ತ ವ್ಯವಸ್ಥೆಯಲ್ಲಿ ಎಲ್ಲರನ್ನು ಒಗ್ಗೂಡಿಸಿ, ವಿಶೇಷ ನಾಯಕತ್ವ ಗುಣದೊಂದಿಗೆ ಶಾಲಾಭಿವೃದ್ಧಿಯೊಂದನ್ನೇ ಮಂತ್ರವಾಗಿಸಿ ದುಡಿದ ಟೀಚರ್ ಚಂದ್ರಾವತಿ ರೈ ಅವರು ಇಂದಿನ ಶಿಕ್ಷಕರಿಗೆ ಉತ್ತಮ ಮಾದರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು.ಅವರಿಂದು ಮಂಗಳೂರಿನ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ ರೈ ಅವರನ್ನು ಗೌರವಿಸಿ ಅಭಿನಂದಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಾಲಾಭಿವೃದ್ಧಿಗಾಗಿ ಅವರು ನೀಡಿದ ಕೊಡುಗೆ, ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ತುಂಬಲು ಅವರು ದುಡಿದ ರೀತಿ ಇತರರಿಗೆ ಮಾದರಿಯಾಗಿದ್ದು, ಎಲ್ಲ ಶಿಕ್ಷಕರು ಇದೇ ಮಾದರಿಯನ್ನು ಅಳವಡಿಸಿಕೊಂಡಲ್ಲಿ ಜಿಲ್ಲೆಯ ಸಕರ್ಾರಿ ಶಾಲೆಗಳ ಗುಣಮಟ್ಟ ಅದ್ವಿತೀಯವಾಗಲಿದೆ ಎಂದರು. ಜಿಲ್ಲಾ ಪಂಚಾಯತ್ ಸಮಾಜದ ಅತಿ ಮುಖ್ಯ ವಿಭಾಗವಾದ ಶಿಕ್ಷಣ ಇಲಾಖೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದು, ಶಿಕ್ಷಕರು, ಶಾಲೆಗಳ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಲಾಗಿದೆ. ಶಾಲೆಗಳು ದೇಶದ ಭವಿಷ್ಯವನ್ನು ರೂಪಿಸುವ ಕೇಂದ್ರಗಳಾಗಿದ್ದು, ಉತ್ತಮ ಕೆಲಸ ಮಾಡುವ ಶಿಕ್ಷಕರನ್ನು, ಶಾಲೆಗಳನ್ನು ಗುರುತಿಸುವುದಕ್ಕೆ ಆದ್ಯತೆಯನ್ನು ನೀಡಿದೆ ಎಂದರು.ಜಿಲ್ಲೆಯ ಕನಿಷ್ಠ 500 ಶಾಲೆಗಳಲ್ಲಿ ಶಾಲಾವನ ನಿರ್ಮಾಣ, ಕೃಷಿ ದರ್ಶನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಕ್ಕಳಲ್ಲಿ ಪರಿಸರ ಪ್ರಜ್ಞೆ , ತೋಟಗಾರಿಕೆ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ದೂರಗಾಮಿ ಪರಿಣಾಮ ಬೀರುವ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.ಮುಲ್ಲಕಾಡು ಶಾಲೆಯ ಎಸ್ ಡಿ ಎಂಸಿಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರಶಂಸಿಸಿದ ಸಿಒಒ ಅವರು, ಅಧ್ಯಕ್ಷರಾದ ಸಂಜೀವ್ ಟೈಲರ್ ಅವರ ಬದ್ಧತೆಯನ್ನು ಶ್ಲಾಘಿಸಿದರು. ಶಿಕ್ಷಕರು ಸಮಾಜಕ್ಕೆ ನೀಡುವ ಕೊಡುಗೆ ಅಮೋಘ ಎಂಬುದನ್ನು ಮನಗಾಣಬೇಕು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಟೀಚರ್ ಚಂದ್ರಾವತಿ ರೈ ಅವರು ತಮ್ಮ ಜೀವಿತಾವಧಿಯ ಅತ್ಯಮೂಲ್ಯ ಕ್ಷಣ ಇದು ಎಂದರು. ಕರ್ತವ್ಯದ ವೇಳೆ ಸಹಕಾರ ನೀಡಿದ ಪ್ರತಿಯೊಬ್ಬರನ್ನೂ ಅವರು ಸ್ಮರಿಸಿದರು.ವಿದ್ಯಾಂಗ ಉಪನಿರ್ದೇಶಕ ಮೋಸೆಸ್ ಜಯಶೇಖರ್,ಸರ್ವಶಿಕ್ಷಣ ಅಭಿಯಾನದ ಪೀತಾಂಬರ್, ವಿದ್ಯಾ, ದಾನಿಗಳಾದ ಗಿರಿಜಾತೆ ಭಂಡಾರಿ, ಎಸ್ ಡಿ ಎಂಸಿ ಯ ಸದಸ್ಯರಾದ ಮೊಹಮ್ಮದ್ ಅವರನ್ನೊಳಗೊಂಡಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗೀತಾ ದೇವದಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಹರಿಣಾ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ಐರಿನ್ ವಂದಿಸಿದರು.