Tuesday, June 26, 2012

" ಸಕಾಲ " ನಾಟಕದ ಮೂಲಕ ಜನಜಾಗೃತಿ ಆಂದೋಲನ

ಮಂಗಳೂರು,ಜೂನ್.26: ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ಕರ್ನಾಟಕ ನಾಗರಿಕ ಸೇವಾ ಖಾತ್ರಿ ಮಸೂದೆ-2011( ಸಕಾಲ ) ರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ " ಸಕಾಲ ' ಜನಜಾಗೃತಿ ನಾಟಕ ಬಂಟ್ವಾಳ ತಾಲೂಕಿನಾದ್ಯಂತ ನಡೆಯುತ್ತಿದೆ.
ದ.ಕ.ಜಿಲ್ಲಾ ವಾರ್ತಾಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಈ ನಾಟಕವನ್ನು ಬಿ.ಸಿ.ರೋಡಿನ ಸಂಸಾರ ಜೋಡುಮಾರ್ಗ ತಂಡ ಅಭಿನಯಿಸುತ್ತಿದ್ದು, ಈಗಾಗಲೇ 10ಕ್ಕೂ ಅಧಿಕ ಗ್ರಾ.ಪಂ.ವ್ಯಾಪ್ತಿಯಲ್ಲಿ ತನ್ನ ಪ್ರದರ್ಶನವನ್ನು ನೀಡಿದೆ.
ಬಂಟ್ವಾಳ ತಾಲೂಕಿನ ಬಾಳೆಪುಣಿಯಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ಪ್ರಕಾಶ್ ರವರಿಂದ ಉದ್ಘಾಟಿಸಲ್ಪಟ್ಟ ಈ ಜನಜಾಗೃತಿ ನಾಟಕವು ಈಗಾಗಲೇ ಬಾಳೆಪುಣಿ, ಪಿಲಾತಬೆಟ್ಟು, ಕಾವಳಮೂಡೂರು, ನಾವೂರು, ಸರಪಾಡಿ, ಕುರ್ನಾಡು, ಕಣಂತೂರು, ಮಂಚಿ, ಬಿ.ಸಿ.ರೋಡು, ಇರಾ, ಗೋಳ್ತಮಜಲು, ಬಾಳ್ತಿಲ ಹಾಗೂ ಮಾಣಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತನ್ನ ಪ್ರದರ್ಶನಗಳನ್ನು ನೀಡಿದೆ.
ಮೂರು ತಿಂಗಳ ಕಾಲ ನಡೆಯುವ ಈ ಜನಜಾಗೃತಿ ಅಭಿಯಾನದ ಮೂಲಕ ಸಂಸಾರ ತಂಡವು ಜಿಲ್ಲೆಯಾದ್ಯಂತ 60ಪ್ರದರ್ಶನಗಳನ್ನು ನೀಡಲಿದೆ.ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಸೇವೆ-ಸೌಲಭ್ಯಪಡೆಯಲು ಪಡುತ್ತಿರುವ ಪಾಡನ್ನು ಎತ್ತಿಹಿಡಿದಿರುವ ಈ ನಾಟಕವು ಕಚೇರಿಯೊಳಗೆ ಅಧಿಕಾರಿಗಳು ಪಡುತ್ತಿರುವ ಸಂಕಷ್ಠ, ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವನೆಯನ್ನು ನೇರವಾಗಿ ಪ್ರತಿಪಾದಿಸುತ್ತದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರರೂಪವಾಗಿ ಸಕಾಲದ ಮೂಲಕ ತ್ವರಿತ-ತುರ್ತು ಸೇವೆಯನ್ನು ಪಡೆಯುವ ಸಾಧ್ಯತೆಯನ್ನು ನಾಟಕವು ಹಾಡು, ನೃತ್ಯ, ಮಾತುಕತೆಯ ಮೂಲಕ ಚರ್ಚಿಸುತ್ತದೆ.
ರಂಗಕಲಾವಿದ ಮೌನೇಶ್ ವಿಶ್ವಕರ್ಮ ಸಂಚಾಲಕತ್ವದ ಸಂಸಾರ ಜೋಡುಮಾರ್ಗ ತಂಡದಲ್ಲಿ ಪತ್ರಕರ್ತರಾದ , ಸಂಶುದ್ದೀನ್ ಸಂಪ್ಯ, ಗೋಪಾಲ ಅಂಚನ್,ಸಂದೀಪ್ ಸಾಲ್ಯಾನ್, ಆಕಾಶವಾಣಿ ಕಲಾವಿದ ಕೃಷ್ಣಯ್ಯ ಲಾಲ, ಶಶಿಧರ ಬಾಚಕೆರೆ, ಪ್ರತಿಮಗೋಪಾಲ ಅಂಚನ್, ಧನರಾಜ್ ಮಾಮೇಶ್ವರ, ಸುನಿಲ ಜಾರಂದಗುಡ್ಡೆ, ನಿತೇಶ್ ಬಾಳ್ತಿಲ ಕಲಾವಿದರಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಯವರ ಮಾರ್ಗದರ್ಶನದಲ್ಲಿ ಅಭಿಯಾನ ನಡೆಯುತ್ತಿದ್ದು, ವಾರ್ತಾಇಲಾಖೆಯ ಫ್ರಾನ್ಸಿಸ್ ಲೂಯಿಸ್ ತಂಡದ ಜೊತೆಗೆ ಸಾಥ್ ನೀಡುತ್ತಿದ್ದಾರೆ.