Friday, June 8, 2012

ಮಹಿಳೆಯರಲ್ಲಿ ಆರೋಗ್ಯ ಅರಿವು ಮೂಡಿಸಿ: ಜಿಲ್ಲಾಧಿಕಾರಿ

ಮಂಗಳೂರು,ಜೂನ್.08 : ಸಾಮಾಜಿಕ ಆರೋಗ್ಯವನ್ನು ಗಮನದಲ್ಲಿರಿಸಿ ಮಹಿಳೆಯರಲ್ಲಿ ಹಾಗೂ ಗ್ರಾಮೀಣರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ ಜಿಲ್ಲೆಯಿಂದ ಅಪೌಷ್ಠಿಕ ಮಕ್ಕಳ ಪ್ರಕರಣಗಳು ವರದಿಯಾಗುತ್ತಿದೆ. ಅಪೌಷ್ಠಿಕ ಮಕ್ಕಳ ಪತ್ತೆಗೆ ಪೌಷ್ಠಿಕಾಂಶದ ಕೊರತೆ ಮಾತ್ರ ಕಾರಣವಾಗದೆ, ಮಗುವಿನ ಆರೋಗ್ಯ ತಾಯಿಯ ಗರ್ಭದಿಂದಲೇ ಆರಂಭವಾಗುತ್ತದೆ ಎಂಬ ಅಂಶವನ್ನು ಎಲ್ಲರೂ ಮನಗಾಣಬೇಕು. ಹಾಗಾಗಿ ಹೆಣ್ಣು ಮಕ್ಕಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಅರಿವನ್ನು ಮೂಡಿಸುವ ಮಹತ್ತರ ಹೊಣೆಗಾರಿಕೆ ಆರೋಗ್ಯ ಇಲಾಖೆಗೆ ಇದೆ ಎಂದರು. ಆರೋಗ್ಯ ಇಲಾಖೆಗೆ ಇಂದು 32 ಕೋಟಿಗೂ ಮಿಕ್ಕಿ ಅನುದಾನ ಬರುತ್ತಿದ್ದು, ಜನರ ಆರೋಗ್ಯವನ್ನು ಗಮನದಲ್ಲಿರಿಸಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ರೂಪಿಸಲ್ಪಟ್ಟಿದೆ ಎಂದರು.
ಇಂದಿನ ಪ್ರಶಸ್ತಿ ಪ್ರದಾನ ಸಮಾರಂಭ ಒಳ್ಳೆಯ ಕೆಲಸಗಾರರನ್ನು ಗುರುತಿಸಿದೆ; ಪ್ರೋತ್ಸಾಹಿಸಿದೆ. ಇಂತಹ ಮಾದರಿ ಕಾರ್ಯಕ್ರಮ ಒಳ್ಳೆಯ ಕೆಲಸಕ್ಕೆ ಸ್ಫೂರ್ತಿಯಾಗಲಿ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಮಾತನಾಡಿ, ಶಿಶು ಮರಣ ಪ್ರಮಾಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಇದೆ. ಇಲಾಖೆಗಳು ಆರ್ಥಿಕ ಮತ್ತು ಭೌತಿಕ ಗುರಿಗೆ ತಮ್ಮನ್ನು ಸೀಮಿತಗೊಳಿಸದೆ ಮಾನವೀಯವಾಗಿ ಕರ್ತವ್ಯ ಪ್ರಜ್ಞೆ ಮೆರೆದರೆ ಆಡಳಿತದ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಮೂಡಲು ಸಾಧ್ಯ ಎಂದರು. ಆರೋಗ್ಯ ಇಲಾಖೆ ಗ್ರಾಮೀಣ ಹಾಗೂ ಹಿಂದುಳಿದ ವರ್ಗದವರನ್ನು ಸ್ಪಂದಿಸಬೇಕು ಎಂದರು.
ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತರು:
ಬೆಳ್ತಂಗಡಿಯ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾದ ಗೀತಾಕುಮಾರಿ, ಸುಳ್ಯ ತಾಲೂಕಿನ ಅರಂತೋಡು ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯಾದ ಎನ್.ಎಲ್ .ಬೇಬಿ, ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯ ಕಿರಿಯ ಪುರುಷ ಆರೋಗ್ಯ ಸಹಾಯಕರಾದ ಅನ್ವರ್ ಹುಸೇನ್, ಪುತ್ತೂರು ತಾಲೂಕಿನ ಕಡಬದ ಹಿರಿಯ ಪುರುಷ ಆರೋಗ್ಯ ಸಹಾಯಕರಾದ ಲಕ್ಷ್ಮಣಗೌಡ, ಮಂಗಳೂರಿನ ಆರೋಗ್ಯ ಶಿಕ್ಷಣಾಧಿಕಾರಿಯಾದ ಜ್ಯೋತಿ, ಬೆಳ್ತಂಗಡಿ ತಾಲೂಕಿನ ಉಜಿರೆ ಪ್ರಾಥಮಿಕ ಕೇಂದ್ರದ ಉತ್ತಮ ಶುಶ್ರೂಷಕಿ ಜೋಯ್ಸ್ ಫೆರ್ನಾಂಡೀಸ್. ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಉತ್ತಮ ಶುಶ್ರೂಷಕಿಯಾದ ಕುಮುದಾ,ಮಂಗಳೂರಿನ ಜಿಲ್ಲಾ ಮಟ್ಟದ ಆಸ್ಪತ್ರೆಯ ಶುಶ್ರೂಷಕಿಯಾದ ಹರಿಣಾಕ್ಷಿ, ಮಂಗಳೂರು ತಾಲೂಕಿನ ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಉತ್ತಮ ವೈದ್ಯಾಧಿಕಾರಿಯಾದ ಡಾ. ನವೀನ್ ಕುಮಾರ್, ಮಂಗಳೂರು ತಾಲೂಕಿನ ಮೂಡಬಿದಿರೆಯ ಸಮುದಾಯ ಆರೋಗ್ಯ ಕೇಂದ್ರದ ಉತ್ತಮ ವೈದ್ಯಾಧಿಕಾರಿ ಡಾ.ರಶ್ಮಿ, ಸುಳ್ಯ ತಾಲೂಕು ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಹೇಮಲತಾ ಕೆ.ಆರ್. ಮತ್ತು ಅದೇ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಕರುಣಾಕರ್ ಕೆ.ವಿ. ,ಮೂಲ್ಕಿ ಆಸ್ಪತ್ರೆಯ ಉತ್ತಮ ಮಕ್ಕಳ ತಜ್ಞ ಡಾ. ಕೃಷ್ಣ, ಸುಳ್ಯದ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಸುಬ್ರಹಣ್ಯ, ಮಂಗಳೂರಿನ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿ (ಎನ್ ಆರ್ ಎಚ್ ಎಮ್) ಡಾ.ಹೇಮಲತಾ ಬಿ.ಸಿ,. ಬಂಟ್ವಾಳದ ಪುದು ಪ್ರಯೋಗಶಾಲಾ ತಂತ್ರಜ್ಞ ಮುಸ್ತಫಾ, ಸುಳ್ಯ ಸಿಎಚ್ಸಿಯ ಉತ್ತಮ ಔಷಧ ವಿತರಕರಾದ ಶಿವರಾಂ, ಸುರತ್ಕಲ್ ನ ಉತ್ತಮ ನೇತ್ರ ಸಹಾಯಕ ಜಗದೀಶ್, ಪುತ್ತೂರಿನ ಉತ್ತಮ ಕ್ಷಕಿರಣ ತಂತ್ರಜ್ಞ ಎಂ.ಶ್ರೀಕೃಷ್ಣ ಭಟ್, ಮಂಗಳೂರಿನ ಉತ್ತಮ ಲಿಪಿಕ ನೌಕರ ಶ್ರೀಮತಿ ಶಾಲಿನಿ, ಮಂಗಳೂರಿನ ಉತ್ತಮ ವಾಹನ ಚಾಲಕರಾದ ಅಬ್ದುಲ್ ಕರೀಂ ,ಸುಳ್ಯದ ಗ್ರೂಪ್ ಡಿ ನೌಕರ ಹುಕ್ರಪ್ಪ ನಾಯಕ್, ಜಿಲ್ಲೆಯ ಉತ್ತಮ ಸರಕಾರಿ ಆಸ್ಪತ್ರೆ -ಪುತ್ತೂರಿನ ಶಾಂತಿಗೂಡು ಉಪಕೇಂದ್ರ ಉತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಉಳ್ಳಾಲ, ಮಂಗಳೂರು ತಾಲೂಕು, ಲೇಡಿಗೋಷನ್ ಆಸ್ಪತ್ರೆ, ಪ್ರಶಸ್ತಿ ಪಡೆಯಿತು.
ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ ಸರೋಜ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಓ ಆರ್ ಶ್ರೀರಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ ರಾಮಕೃಷ್ಣ ರಾವ್ ಸ್ವಾಗತಿಸಿದರು. ಸಂಗೀತ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಾಪೇಗೌಡ ವಂದಿಸಿದರು.