Tuesday, June 5, 2012

ನಗರ ವಿದ್ಯಾರ್ಥಿಗಳಿಗೆ ಕೃಷಿ ತೋಟಗಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ-ಡಾ.ವಿಜಯಪ್ರಕಾಶ್

ಮಂಗಳೂರು,ಜೂನ್.05:ಕಾಂಕ್ರೀಟ್ ಕಾಡುಗಳಂತಿರುವ ನಗರ ಪ್ರದೇಶದ ಮಕ್ಕಳಿಗೆ ಕೃಷಿ ತೋಟಗಾರಿಕೆ ಕುರಿತಂತೆ ರಚನಾತ್ಮಕ ಅರಿವು ಮೂಡಿಸುವ ಉದ್ದೇಶದಿಂದ ಅವರನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಭತ್ತ,ರಾಗಿ,ಹಣ್ಣು ತರಕಾರಿ ಮುಂತಾದ ಬೆಳೆಗಳನ್ನು ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲು ಯೋಜಿಸಲಾಗಿದೆಯೆಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ತಿಳಿಸಿದ್ದಾರೆ.
ಅವರು ಇಂದು ದ.ಕ.ಜಿಲ್ಲಾಡಳಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ ಹಾಗೂ ಮಾತಾ ಅಮೃತಾನಂದ ಮಯಿ ಮಠ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಪುರಭವನದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಾನವನ ದುರಾಸೆ ಫಲವಾಗಿ ಪ್ರಕೃತಿ ಬರಡಾಗುತ್ತಿದೆ,ಜೀವ ರಾಶಿಗಳಿಗೆ ನೆಲೆ ಇಲ್ಲದಂತಾಗುತ್ತಿದೆ. ಆದ್ದರಿಂದ ಪ್ರಕೃತಿಯನ್ನು ನಾವು ಮಾತೃ ಸದೃಶವಾಗಿ ಕಾಣುವ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡಬೇಕು ,ನಮ್ಮಶಾಲಾ ವಿದ್ಯಾಥರ್ಿಗಳಿಗೆ ಪರಿಸರದ ಸಂರಕ್ಷಣೆ ಕುರಿತು ಮನವರಿಕೆ ಮಾಡಿದಲ್ಲಿ ಅವರು ನಮ್ಮ ಪರಿಸರವನ್ನು ಅತ್ಯಂತ ಕಾಳಜಿಯಿಂದ ರಕ್ಷಣೆ ಮಾಡುವ ಕಾರ್ಯದಲ್ಲಿ ಮುಂದಾಗಲಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿವುಂಟು ಮಾಡಲಾಗುತ್ತಿದೆ.ಪರಿಸರ ಕಲುಷಿತಕ್ಕೆ ಕಲಿಯದವರಿಗಿಂತ ಕಲಿತವರೇ ಹೆಚ್ಚು ಕಾರಣರಾಗುತ್ತಿದ್ದಾರೆ.ಕನಿಷ್ಠ ನಾಗರೀಕ ಜ್ಞಾನವಿದ್ದರೂ ನಾವು ನಮ್ಮ ಪರಿಸರ ರಕ್ಷಿಸಬಹುದೆಂದರು.ವಾಹನಗಳನ್ನು ಅಗತ್ಯಕ್ಕಿಂತ ಹೆಚ್ಚಿಗೆ ಬಳಸುವ ಮೂಲಕ ಪ್ರದೂಷಣೆ ಹೆಚ್ಚಿ ಅನೇಕ ಶ್ವಾಸಕೋಶ ಕಾಯಿಲೆಗಳು ಹರಡಲಿದೆ.ಸುಗಮ ಸಂಚಾರ ಹೆಸರಿನಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮರಗಿಡಗಳ ನಾಶ ಆಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಹಿರಿಯ ಪರಿಸರ ಅಧಿಕಾರಿ ಸಿ.ಡಿ.ಕುಮಾರ್. ಮಂಗಳೂರು ಪೆಟ್ರೋ ಕೆಮಿಕಲ್ಚ್ ನಿರ್ದೇಶಕರು ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಎ.ಜಿ.ಪೈ ,ಅಮೃತಾನಂದ ಮಯೀ ಮಠದ ಬ್ರಹ್ಮಚಾರಿಣಿ ಮಂಗಳಾ ಚೈತನ್ಯ ಮುಂತಾದವರು ಹಾಜರಿದ್ದರು.
ಜೀವರಾಜ ಸೊರಕೆ ಸ್ವಾಗತಿಸಿದರು. ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ನಿಖಿಲ್ ನವ್ಯ ಮತ್ತು ಹರ್ಷ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಅನುಷಾ.ಎಸ್..ರಮ್ಯಾ.ಎಸ್. ವಿಶಾಲ್ ಇವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು.