Tuesday, June 19, 2012

ಜನನಿ ಸುರಕ್ಷಾ ಯೋಜನೆಯಡಿ 8309 ಹೆರಿಗೆಗಳಿಗೆ ರೂ.64.34ಲಕ್ಷ ವೆಚ್ಚ

ಮಂಗಳೂರು, ಜೂನ್.19 :ತಾಯಿ ಮಕ್ಕಳ ಆರೋಗ್ಯ ಸುಧಾರಣೆಗೆ ಕರ್ನಾಟಕ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ ತಾಯಿ ಭಾಗ್ಯ ಯೋಜನೆಯೂ ಒಂದಾಗಿದ್ದು,ಇದರ ಮೂಲಕ ಜನನಿ ಸುರಕ್ಷಾಯೋಜನೆ,ತಾಯಿ ಭಾಗ್ಯ,ಪ್ರಸೂತಿ ಆರೈಕೆ,ಮಡಿಲು ಮತ್ತು ತಾಯಿ ಭಾಗ್ಯ ಪ್ಲಸ್ ಯೋಜನೆಗಳ ಮೂಲಕ ಹೆರಿಗೆ ಸಮಯದಲ್ಲಿ ತಾಯಿ ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜನನಿ ಸುರಕ್ಷಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ 8309 ಹೆರಿಗೆಗಳನ್ನು ಸುರಕ್ಷಿತವಾಗಿ ನಡೆಸಲು 2011-12 ನೇ ಸಾಲಿನಲ್ಲಿ ಒಟ್ಟು ರೂ.64,34,900/- ಗಳನ್ನು ವೆಚ್ಚ ಮಾಡಲಾಗಿದೆ. ಇವರಲ್ಲಿ 6127 ಸಾಮಾನ್ಯ ಕುಟುಂಬಕ್ಕೆ ಸೇರಿದವರು,1424 ಪರಿಶಿಷ್ಟ ಜಾತಿ ಹಾಗೂ 758 ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದಾರೆ.
ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು 3438 ಫಲಾನುಭವಿಗಳಿಗೆ ಈ ಯೋಜನೆಯಲ್ಲಿ ರೂ.26,03,400 ಗಳನ್ನು ವೆಚ್ಚ ಮಾಡಿದ್ದರೆ, ಸುಳ್ಯ ತಾಲೂಕಿನಲ್ಲಿ 902 ಫಲಾನುಭವಿಗಳಿಗೆ ಒಟ್ಟು 7,11,700 ಗಳನ್ನು ವೆಚ್ಚ ಮಾಡಲಾಗಿದೆ.ಉಳಿದಂತೆ ಬಂಟ್ವಾಳ ತಾಲೂಕಿನಲ್ಲಿ 1534 ಫಲಾನುಭವಿಗಳಿಗೆ 12,39,700 ರೂ. ಪುತ್ತೂರು ತಾಲೂಕಿನ 1324 ಫಲಾನುಭವಿಗಳಿಗೆ 10,27,700 ರೂ.ಗಳು ಹಾಗೂ ಬೆಳ್ತಂಗಡಿ ತಾಲೂಕಿನ 1111 ಫಲಾನುಭವಿಗಳಿಗೆ 8,52,400 ರೂ.ಗಳನ್ನು ವೆಚ್ಚ ಮಾಡಲಾಗಿದೆ.
ಜನನಿ ಸುರಕ್ಷಾ ಯೋಜನೆಯು ಈ ಹಿಂದೆ ಜಾರಿಯಲ್ಲಿದ್ದ ರಾಷ್ಟ್ರೀಯ ಹೆರಿಗೆ ಭತ್ಯೆ ಯೋಜನೆಯ ಮುಂದುವರಿದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಬಿಪಿಎಲ್ ಕುಟುಂಬಗಳ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಸಂದರ್ಭದಲ್ಲಿ ಆರ್ಥಿಕ ಸಹಾಯ ಒದಗಿಸುವ ಉದ್ದೇಶ ಹೊಂದಿದೆ.
ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆಗೊಳಿಸುವುದು,ಎಲ್ಲಾ ಗರ್ಭಿಣಿಯರಿಗೆ ಗುಣಾತ್ಮಕ ವೈದ್ಯಕೀಯ ಸೇವೆ ಮಾಡುವುದು.ಈ ದಿಸೆಯಲ್ಲಿ ಹಿಂದುಳಿದ ಗುಡ್ಡಗಾಡು ಪ್ರದೇಶದ ಮತ್ತು ಕಠಿಣ ಪ್ರದೇಶಗಳ ಗರ್ಭಿಣಿ ಮಹಿಳೆಯರಿಗೆ ಆದ್ಯತೆ ನೀಡುವುದು,ಸಣ್ಣ ಕುಟುಂಬಕ್ಕೆ ಪ್ರೋತ್ಸಾಹ ಇವೇ ಮೊದಲಾದ ಉದ್ದೇಶಗಳಿಂದ ಈ ಯೋಜನೆ ಜಾರಿಗೆ ತರಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆಯಲ್ಲಿ ಹೆರಿಗೆ ಆದಲ್ಲಿ ರೂ.500/- ಗ್ರಾಮೀಣಪ್ರದೇಶದವರಿಗೆ ಆಸ್ಪತ್ರೆಯಲ್ಲಿ ಹೆರಿಗೆಯಾದಲ್ಲಿ ರೂ.700/- ನಗರ ಪ್ರದೇಶದವರು ಆಸ್ಪತ್ರೆಯಲ್ಲಿ ಹೆರಿಗೆಗೆ ಒಳಗಾದಲ್ಲಿ ರೂ.600/- ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದಲ್ಲಿ ರೂ.1500/- ಸಂಭಾವನೆ ನೀಡಲಾಗುತ್ತದೆ.
ಈ ಯೋಜನೆಯಲ್ಲಿ ಸೌಲಭ್ಯ ಪಡೆಯಬಯಸುವವರು ಕಡ್ಡಾಯವಾಗಿ ಬಡತನ ರೇಖೆಗಿಂತ ಕೆಳಗಿನ ಕುಟುಂಬದವರಾಗಿದ್ದು,ಬಿಪಿಎಲ್ ಕಾರ್ಡ್ ಹೊಂದಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಎಪಿಎಲ್ ಕಾರ್ಡ್ ಹೊಂದಿದ್ದರೂ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಸಂಭಾವನೆಯನ್ನು ಮೊದಲ ಹಾಗೂ ಎರಡನೇ ಜೀವಂತ ಜನನಕ್ಕೆ ಮಾತ್ರ ನೀಡಲಾಗುವುದು. ಮೂರನೇ ಅಥವಾ ತದನಂತರದ ಹೆರಿಗೆಯಾಗಿದ್ದು, ಮೊದಲ ಅಥವಾ ಎರಡನೇ ಮಗ ಜೀವಂತವಿಲ್ಲದಿದ್ದಲ್ಲಿ ಎರಡು ಜೀವಂತ ಜನನಕ್ಕೆ ಹೆರಿಗೆ ಸಂಭಾವನೆ ನೀಡಲಾಗುವುದು.
ಸರ್ಕಾರಿ ಆಸ್ಪತ್ರೆ, ಸರ್ಕಾರದಿಂದ ನೋಂದಣಿಯಾದ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಆದರೂ ಸಂಭಾವನೆ ದೊರಕಲಿದೆ.