Thursday, June 14, 2012

ಹಾಜಬ್ಬ ಅಕ್ಷರ ಸಂತ : ನಳಿನ್ ಕುಮಾರ್ ಕಟೀಲ್

ಮಂಗಳೂರು,ಜೂನ್.14: ಹಾಜಬ್ಬರ ಶಾಲೆಯೆಂದೇ ಹೆಸರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ ನ್ಯೂಪಡ್ಪು ಜಿಲ್ಲಾ ಪಂಚಾಯತ್ ಸಂಯುಕ್ತ ಪ್ರೌಢಶಾಲೆಯ ಅಭಿವೃದ್ಧಿಗೆ ರೂ.15 ಲಕ್ಷ ಅನುದಾನ ಒದಗಿಸುವುದಾಗಿ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಇಂದು ಹರೇಕಳ ನ್ಯೂಪಡ್ಪುನ ಜಿಲ್ಲಾ ಪಂಚಾಯತ್ ಸಂಯುಕ್ತ ಪ್ರೌಢಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರೂ.5 ಲಕ್ಷವನ್ನು ತನ್ನ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ದಿ ನಿಧಿಯಿಂದ ಭರಿಸಲಾಗುವುದು. ಮಿಕ್ಕ ರೂ.10 ಲಕ್ಷವನ್ನು ದಾನಿಗಳಿಂದ ಮತ್ತು ಉದ್ಯಮಿಗಳಿಂದ ಒದಗಿಸಿ ಕೊಡಲಾಗುವುದು ಎಂದು ಸಂಸದರು ಉದ್ಘಾಟನಾ ಸಮಾರಂಭ ಸಭೆಯಲ್ಲಿ ಭರವಸೆ ನೀಡಿದರು.
ನಾನು ಆಧ್ಯಾತ್ಮ ಸಂತರನ್ನು ಕಂಡಿದ್ದೇನೆ; ಧಾರ್ಮಿಕ ಸಂತರಿಗೇನು ಕಡಿಮೆ ಇಲ್ಲ.ಆದರೆ ಶಿಕ್ಷಣ ಕ್ಷೇತ್ರದ ಸಂತರನ್ನು ಹರೇಕಳ ಹೊರತು ಬೇರೆಲ್ಲೂ ಕಂಡಿಲ್ಲ. ಹರೇಕಳ ಹಾಜಬ್ಬ ಈ ದೇಶದ ಶಿಕ್ಷಣ ಸಂತ. ಅವರು ತಮ್ಮ ಸರ್ವಸ್ವವನ್ನೂ ಸಮಾಜಕ್ಕಾಗಿ ಸಮರ್ಪಿಸಿದ ಫಕೀರ ಎಂದು ಲೋಕಸಭಾ ಸದಸ್ಯರು ಬಣ್ಣಿಸಿದರು.
ಶಿಕ್ಷಣ ಕಾಶಿ ದಕ್ಷಿಣ ಕನ್ನಡ ಜಿಲ್ಲೆ ಆದರೆ ನಮ್ಮಲ್ಲಿ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ. ಮೌಲ್ಯಯುತ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದ ಅವರು, ಮುಂದಿನ ದಿನಗಳಲ್ಲಿ ಅಕ್ಷರ ಸಂತ ಹಾಜಬ್ಬ ಶಿಕ್ಷಣ ಕ್ಷೇತ್ರದ ನಕ್ಷತ್ರವಾಗಿ ಮಿನುಗಲಿದ್ದಾರೆ ಎಂದು ನಳಿನ್ ಕುಮಾರ್ ನುಡಿದರು.
ಮಾಧ್ಯಮಗಳು ಹಾಜಬ್ಬರವರನ್ನು ಬೆಂಬಲಿಸಿದ ಪರಿಣಾಮವಾಗಿ ನ್ಯೂಪಡ್ಪು ಸರಕಾರಿ ಶಾಲೆಗೆ ಸಹಾಯ ಹರಿದು ಬಂತು ಎಂದು ಹೇಳಿದ ಸಂಸತ್ ಸದಸ್ಯರು ಇಂದು ಸರಕಾರಿ ಶಾಲೆಗಳು ಸಂಕಷ್ಟದಲ್ಲಿವೆ. ವಿದ್ಯಾರ್ಥಿಗಳ ಕೊರತೆ ಇದೆ. ಜನ ಪ್ರತಿನಿಧಿ ಗಳಿಂದಾ ಗಲೀ, ಶಿಕ್ಷಕ ರಿಂದಾಗಲಿ ಸರಕಾರಿ ಶಾಲೆ ಗಳನ್ನು ಉಳಿಸಲಾಗದು. ಸರಕಾರಿ ಶಾಲೆಗಳ ಅಳಿವು-ಉಳಿವು ಪೋಷಕರ ಕೈಯಲ್ಲಿದೆ. ಹಾಜಬ್ಬರ ಶಾಲೆಯನ್ನು ಉಳಿಸಿ ಬೆಳೆಸಲು ಪೋಷಕರು ಹಾಗೂ ಸ್ಥಳಿಯ ಜನತೆ ಕಂಕಣ ಬದ್ಧರಾಗ ಬೇಕು ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಹರೇಕಳ ಹಾಜಬ್ಬ ಇದು ನನ್ನ ಶಾಲೆಯಲ್ಲ; ಸರಕಾರಿ ಶಾಲೆ. ನಾನು ಐದು ರೂಪಾಯಿ ಬೆಲೆ ಬಾಳದ ಮನುಷ್ಯ. ದಾನಿಗಳು, ಜನ ಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು ಮತ್ತು ಮಾಧ್ಯಮಗಳು ಸಹಕಾರ ನೀಡುವ ಮೂಲಕ ನನ್ನನ್ನು ದೊಡ್ಡ ಜನ ಮಾಡಿದ್ದಾರೆ. ಇದು ಸರಕಾರಿ ಶಾಲೆಯಾಗಿಯೇ ಗುರುತಿಸಲ್ಪಡಲಿ. ಶಾಲೆಗೆ ಆವರಣ ಗೋಡೆ ಆಗ ಬೇಕು. ಆಟದ ಮೈದಾನದ ಆವಶ್ಯಕತೆ ಇದೆ. ರಸ್ತೆಯನ್ನು ಅಭಿವೃದ್ಧಿ ಪಡಿಸ ಬೇಕಾಗಿದೆ.ನೀರು ಹರಿದು ಹೋಗಲು ಒಳ ಚರಂಡಿ ವ್ಯವಸ್ಥೆ ಆಗ ಬೇಕು. ನನ್ನ ಕನಸುಗಳು ಪರಿಪೂರ್ಣಗೊಳ್ಳಲು ಇನ್ನೂ ಅಂದಾಜು ಐವತ್ತು ಲಕ್ಷ ರೂ. ಬೇಕು. ಜನ ಪ್ರತಿನಿಧಿಗಳು, ದಾನಿಗಳು ಸಹಕರಿಸ ಬೇಕು ಎಂದು ಹಾಜಬ್ಬ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಅವರು, ಯಾರು ಏನೇ ಹೇಳಲಿ; ನ್ಯೂ ಪಡ್ಪು ಜಿಲ್ಲಾ ಪಂಚಾಯತ್ ಸಂಯುಕ್ತ ಪ್ರೌಢ ಶಾಲೆ ಹಾಜಬ್ಬರ ಶಾಲೆಯೆಂದೇ ಗುರುತಿಸಲ್ಪಡುತ್ತದೆ. ಶಾಲೆಯ ಪ್ರಗತಿಗೆ ಅವರ ಶ್ರಮ ಊಹಿಸಲಸಾಧ್ಯ. ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜಬ್ಬರ ಶ್ರಮವನ್ನು ಸದುಪಯೋಗ ಪಡಿಸಿ ಕೊಳ್ಳ ಬೇಕು ಎಂದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶಾಲೆಯ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಕೊಡಲಾಗುವುದು. ಜಿಲ್ಲಾ ಪಂಚಾಯತ್ ಸದಸ್ಯರ ಅನುದಾನದಿಂದ ಆಟದ ಮೈದಾನ ಅಭಿವೃದ್ಧಿ ಪಡಿಸಲಾಗುವುದು ಎಂದರಲ್ಲದೆ ಸರಕಾರ, ದಾನಿಗಳ ಮತ್ತು ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಶಾಲೆಗಳನ್ನು ಹೇಗೆ ಅಭಿವೃದ್ಧಿ ಪಡಿಸ ಬಹುದು ಎಂಬುದಕ್ಕೆ ಹಾಜಬ್ಬರವರು ಮಾದರಿಯಾಗಿದ್ದರೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್.ಕರೀಂ, ತಾ.ಪಂ.ಸದಸ್ಯ ಮಹಮ್ಮದ್ ಮುಸ್ತಾಫ, ಕೆಎಸ್ಆರ್ ಪಿ ಕಮಾಡೆಂಟ್ ರಾಮದಾಸ್ ಗೌಡ, ಹರೇಕಳ ಗ್ರಾ.ಪಂ. ಅದ್ಯಕ್ಷೆ ರಶೀದಾ, ಗ್ರಾಮ ಪಂಚಾಯತ್ ಸದಸ್ಯರಾದ ಎಚ್.ಸಾಲಿ, ಮಜೀದ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿಶ್ವನಾಥ ಶೆಟ್ಟಿ, ದಾನಿಗಳಾದ ಬಿ.ಕುಂಞ ಅಹಮ್ಮದ್ ದೇರಳಕಟ್ಟೆ, ಇಬ್ರಾಹಿಂ ಎಸ್.ಕೆ ಮಂಗಳೂರು, ಕೆ.ಎಸ್.ಇಬ್ರಾಹಿಂ, ಪ್ರಸಾದ್ ರೈ ಕಲ್ಲಿಮಾರು, ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್, ನ್ಯೂ ಪಡ್ಪು ಮಸೀದಿಯ ಖತೀಬರಾದ ಮುಹಮ್ಮದ್ ಸಹದಿ, ಡಿಡಿಪಿಐ ಮೋಸೆಸ್ ಜಯಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ಪ್ರೌಢ ಶಾಲೆಯ ಶಿಕ್ಷಕರ ವತಿಯಿಂದ ಹಾಜಬ್ಬರವರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಹ ಶಿಕ್ಷಕಿ ಸುರೇಖಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವೀಣಾ ಜೆ.ಎಚ್ ವರದಿ ವಾಚಿಸಿದರು ಮತ್ತು ವಂದಿಸಿದರು.