Tuesday, June 5, 2012

ಬಿತ್ತನೆಗೆ ಮುಂಚೆ ಬೀಜೋಪಚಾರ -ಡಾ.ಪದ್ಮಯ್ಯ ನಾಯ್ಕ

ಮಂಗಳೂರು, ಜೂನ್.05: ರೈತರು ಹೆಚ್ಚಿನ ಇಳುವರಿಗೆ ಹಾಗೂ ಕೀಟ ರೋಗ ಭಾದೆಗಳಿಂದ ಮುಕ್ತವಾದ ಬೆಳೆಗಳನ್ನು ಬೆಳೆಯಲು ಬಿತ್ತನೆಗೆ ಮುಂಚೆ ಕೃಷಿ ಇಲಾಖೆ ಸಲಹೆ ಮೇರೆಗೆ ಬೀಜೋಪಚಾರ ಮಾಡಿಯೇ ಬಿತ್ತನೆ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರಾದ ಡಾ.ಪದ್ಮಯ್ಯ ನಾಯ್ಕ ರೈತರಿಗೆ ಸಲಹೆ ನೀಡಿದ್ದಾರೆ.
ಅವರು ಸೋಮವಾರ ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ 2012 ರ ಮುಂಗಾರು ಹಂಗಾಮಿನ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟ ನಾಶಕಗಳ ಬಳಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಬಿತ್ತನೆಗೆ ಮೊದಲು ಬೀಜೋಪಚಾರ ಮಾಡುವುದರಿಂದ ಬೆಳೆಗೆ ಕೀಟ ರೋಗ ಬಾಧೆ ಕಡಿಮೆಯಾಗಿ ರೈತರು ಕೀಟ ನಾಶಕ ರೋಗ ನಿವಾರಕಗಳಿಗೆ ವೆಚ್ಚ ಮಾಡುವ ಹಣ ಉಳಿತಾಯವಾಗಲಿದೆ ಹಾಗೂ ಬೆಳೆಯೂ ಸಹ ರಾಸಾಯನಿಕಗಳಿಂದ ಮುಕ್ತವಾಗಿರುತ್ತದೆಯೆಂದರು.
ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ಡಾ.ಹೆಚ್.ಹನುಮಂತಪ್ಪ ಅವರು ಬೀಜೋಪಚಾರ ವಿಧಾನಗಳ ಬಗ್ಗೆ ವಿವರಿಸಿದರು. ಡಾ.ಹರೀಶ್ ಶೆಣೈ,ಕೀಟ ತಜ್ಞರಾದ ಡಾ.ಪ್ರಭಾಕರ ಇವರು ಸುರಕ್ಷಿತ ಕೀಟ ನಾಶಕಗಳ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಡಾ ಕೆ.ನಾರಾಯಣ ಶೆಟ್ಟಿ ಬೀಜೋಪಚಾರ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.