Thursday, June 28, 2012

'ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಿ'


ಮಂಗಳೂರು,ಜೂನ್. 28: ಉಗ್ರಗಾಮಿ ಚಟುವಟಿಕೆ ಮತ್ತು ನಕಲಿ ನೋಟ್ ಚಲಾವಣೆಗಿಂತ ಹೀನ ಮತ್ತು ಅಪಾಯಕಾರಿಯಾದುದು ಮಾದಕ ದ್ರವ್ಯ ಸಾಗಾಣಿಕೆ ಜಾಲ; ಇದು ನಮ್ಮ ಮುಂದಿನ ಜನಾಂಗವನ್ನೇ ಹಾಳುಗೆಡಹುವಂತಹುದು. ಈ ಜಾಲವನ್ನು ತಡೆಯಲು ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆಯ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿದೆ; ಇದರ ಜೊತೆಗೆ ಪತ್ತೆ ಹಚ್ಚುವಿಕೆಗೆ ಇನ್ನಷ್ಟು ಆದ್ಯತೆ ನೀಡಬೇಕಿದೆ. ಸೌಕರ್ಯಗಳ ಸದುಪಯೋಗವಾಗಬೇಕಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಎಡಿಜಿಪಿ (ಅಪರಾಧ) ಎ ಎಂ ಪ್ರಸಾದ್ ಅವರು, ಪೊಲೀಸ್ ಇಲಾಖೆ ರಾಜ್ಯದಲ್ಲಿ ಮಾದಕ ವಸ್ತು ಜಾಲ ಪತ್ತೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ರಾಜ್ಯದಲ್ಲಿ ದಾಖಲಿಸಿರುವ ಪ್ರಕರಣ ಮತ್ತು ಬಂಧಿಸಿದವರ ಮಾಹಿತಿ ನೀಡಿದ ಅವರು, ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ತಾಣ ಮಂಗಳೂರು ಮತ್ತು ಮಣಿಪಾಲದಲ್ಲಿ ಈ ನಿಟ್ಟಿನಲ್ಲಿ ವ್ಯವಸ್ಥಿತಿ ಕಾರ್ಯಾಚರಣೆಗೆ ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ನುಡಿದರು. ಕಮಿಷನರೇಟ್ ಮತ್ತು ಪಾಲಿಕೆ ಆರೋಗ್ಯ ವಿಭಾಗ ಶಾಲಾ ಕಾಲೇಜುಗಳ ಸುತ್ತಳತೆಯಲ್ಲಿ ಇಂತಹ ಚಟುವಟಿಕೆಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕೆಂದು ಸಮಿತಿ ಸದಸ್ಯರು ಹೇಳಿದರಲ್ಲದೆ, ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಶಿಕ್ಷಕರು ಸಹಕಾರ ನೀಡಬೇಕೆಂದರು. ಹೆತ್ತವರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕೆಂಬ ಸಲಹೆಯೂ ಸಭೆಯಲ್ಲಿ ಪ್ರತಿಧ್ವನಿಸಿತು.
ಜಿಲ್ಲೆಯಲ್ಲಿ ರಕ್ಷಿತಾರಣ್ಯಗಳಲ್ಲಿ ವಾಸಿಸುವವರು ಸ್ವಯಂ ಪ್ರೇರಿತರಾಗಿ ಹೊರಬರುವಂತೆ ಅತ್ಯುತ್ತಮ ಪ್ಯಾಕೇಜ್ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕ ಒಕ್ಕಲೆಬ್ಬಿಸುವಿಕೆ ಸಲ್ಲ ಎಂಬ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾಯಿತು.
ಅಪರ ಕಾರ್ಯದರ್ಶಿ (ಅಭಿವೃದ್ಧಿ) ಕೌಶಿಕ್ ಮುಖರ್ಜಿ ಅವರು ಮಾತನಾಡಿ, ಅರಣ್ಯ ಇಲಾಖೆ ಕಾನೂನು ಮತ್ತು ಉತ್ತಮ ಪುನರ್ವಸತಿ ಮಾದರಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರಲ್ಲದೆ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಮಸ್ಯೆಗೆ ಸಲಹೆಗಳನ್ನು ನೀಡಿದರು. ಅರ್ಜಿ ಸಮಿತಿಯು ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಪಡೆಯುವುದಾಗಿ ಹೇಳಿತು. ಕಂದಾಯ ಇಲಾಖೆಯಲ್ಲಿ ಆಸ್ತಿ ನೋಂದಣಿ ಭೂಮಿ-ಕಾವೇರಿ ಜಾರಿ, ಡಾಟಾ ಎಂಟ್ರಿ ಮುಂತಾದ ಪ್ರಗತಿ ಕಾರ್ಯಗಳ ಪರಿಶೀಲನೆ ಮತ್ತು ಈ ಬಗ್ಗೆ ಪ್ರತ್ಯೆಕ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಭೆ ತೀರ್ಮಾನಿಸಿತು. ನಮ್ಮ ನೆರೆ ಜಿಲ್ಲೆ ಕಾಸರಗೋಡು ಇ ಗವರ್ನನೆನ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ಅದರಲ್ಲೂ ಮುಖ್ಯವಾಗಿ ಮಹಾನಗರಪಾಲಿಕೆ ಇ ಗವರ್ನನೆನ್ಸ್ ನ್ನು ಅಳವಡಿಸಲಿ ಎಂದು ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಅವರು ಸಲಹೆ ಮಾಡಿದರು. ಸಭೆಯಲ್ಲಿ ಸದಸ್ಯರಾದ ಅಪ್ಪಚ್ಚು ರಂಜನ್, ಪಿ ಎಂ ಅಶೋಕ್, ಲಾಲಾಜಿ ಆರ್ ಮೆಂಡನ್, ಎಂ ಸತ್ಯನಾರಾಯಣ, ಬಿ ಬಿ ರಾಮಸ್ವಾಮಿ ಗೌಡ, ಸುರೇಶ್ ಗೌಡ, ಅಪರ ಕಾರ್ಯದರ್ಶಿ ಎಂ ಮಂಜುನಾಥ್, ಅಧೀನ ಕಾರ್ಯದರ್ಶಿ ಮಲ್ಲಪ್ಪ ಬಿ ಕಾಳೆ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಧರ್,ರಾಜ್ಯ ಪೋಲಿಸ್ ಮಹಾ ನಿರ್ದೇಶಕ( ಹಂಗಾಮಿ) ಲಾಲ್ ರೊಕೊಮೊ ಪಚಾವೋ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಉಡುಪಿ ಜಿಲ್ಲಾಧಿಕಾರಿ ಡಾ ಎಂ ಟಿ ರೇಜು, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್, ನಗರ ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ,ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅಭಿಷೇಕ್ ಗೋಯಲ್, ಮನಾಪ ಆಯುಕ್ತರಾದ ಡಾ ಹರೀಶ್ ಕುಮಾರ್ ಅವರನ್ನೊಳಗೊಂಡಂತೆ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖಾ ಅಧಿಕಾರಿಗಳು, ಉಪಸ್ಥಿತರಿದ್ದರು.