Thursday, June 21, 2012

ಮದ್ಯದಿಂದ ವ್ಯಕ್ತಿತ್ವ ವಿಕೃತ: ಡಾ.ಕೆ.ಎನ್.ವಿಜಯಪ್ರಕಾಶ್

ಮಂಗಳೂರು,ಜೂನ್. 21: ಮದ್ಯಪಾನದ ಚಟದಿಂದ ವ್ಯಕ್ತಿತ್ವ ವಿಕೃತವಾಗುತ್ತದೆ. ಮದ್ಯ- ಮಾದಕ ವ್ಯಸನಿಗೆ ತಮ್ಮ ಕುಟುಂಬದ ಯಾರೂ ಬೇಕಾಗಿಲ್ಲ.ತನಗೆ ಮಾದಕ ವಸ್ತು ಸಿಗದಿದ್ದಲ್ಲಿ ಮಾನವೀಯತೆಯನ್ನೇ ಮರೆತು ಮೃಗಗಳಂತೆ ವರ್ತಿಸುತ್ತಾರೆ ಮತ್ತು ಯಾವುದೇ ಮಟ್ಟದ ದುಷ್ಕೃತ್ಯಕ್ಕೆ ಇಳಿಯುತ್ತಾನೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಅವರು ತಮ್ಮ ದುಗುಡ ವ್ಯಕ್ತ ಪಡಿಸಿದ್ದಾರೆ.
ಅವರು ಇಂದು ವಾರ್ತಾ ಇಲಾಖೆ, ಮಂಗಳೂರು,ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಯೋಜನೆ, ಜನ ಶಿಕ್ಷಣ ಟ್ರಸ್ಟ್ ಹಾಗೂ ಬಾಳೆಪುಣಿ ಗ್ರಾಮ ಪಂಚಾ ಯತ್ ಇವರ ಆಶ್ರಯದಲ್ಲಿ ಬಾಳೆಪುಣಿ ಗ್ರಾಮದ ಡಾ.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಮಾದಕ ವಸ್ತು ವಿರೋಧಿ ಮಾಸಾಚರಣೆ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುತ್ತಾ ಈ ವಿಷಯ ತಿಳಿಸಿದರು.
ಒಮ್ಮೆ ಒಬ್ಬ ಮಾದಕ ವಸ್ತು ವ್ಯಸನಿಯಾದರೆ ಆ ವಿಷ ವರ್ತುಲದಿಂದ ಪಾರಾಗುವುದು ತುಂಬಾ ಕಷ್ಟ.ಇದರಿಂದಾಗಿ ವ್ಯಕ್ತಿತ್ವವೇ ಹಾಳಾಗಿ ಸಾಮಾಜಿಕವಾಗಿ ಘನತೆ ಗೌರವಗಳನ್ನು ಕಳೆದುಕೊಂಡು ತನ್ನಿಂದ ತನ್ನ ಇಡೀ ಕುಟುಂಬವೇ ಮಾನಸಿಕ,ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಜರ್ಜರಿತವಾಗಿ ಶೋಷಣೆಗೊಳಪಡಲಿದ್ದಾರೆ. ಇದರಿಂದಾಗಿ ಇಡೀ ಸಮಾಜವೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದ ಅವರು ಮಾದಕ ವಸ್ತು ಸೇವನೆ ವರ್ಜಿಸಿ ಮಾನವಂತರಾಗಿ ಬಾಳುವೆ ಮಾಡಬೇಕೆಂದರು.
ವೈದ್ಯಕೀಯವಾಗಿ ಮಾದಕ ವ್ಯಸನಿಯ ಯಾವ ಅಂಗಾಂಗಗಳೂ ಆರೋಗ್ಯವಾಗಿರುವುದಿಲ್ಲ.ಇಂತಹ ವ್ಯಸನಿಗಳ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿರುತ್ತದೆ. ಶಾಲಾ ಕಾಲೇಜು ಮಕ್ಕಳು ಇಂತಹ ದುಶ್ಚಟಗಳಿಗೆ ಬಲಿಯಾಗದೇ ತಮ್ಮ ಅಮೂಲ್ಯವಾದ ಯುವ ಶಕ್ತಿಯನ್ನು ದೇಶದ ಪ್ರಗತಿಗಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.ಮದ್ಯವರ್ಜಿಸಿ ತನ್ನ ಕುಟುಂಬಕ್ಕೂ ಸಮಾಜಕ್ಕೂ ಹಿತಕಾರಿಯಂತೆ ಜೀವನ ಮಾಡಬೇಕೆಂದರು.
ಮದ್ಯಮುಕ್ತರಾಗಿ ಸಮಾಜದಲ್ಲಿ ಇಂದು ಎಲ್ಲರಿಂದ ಆದರಿಸಲ್ಪಡುತ್ತಿರುವ ಪುತ್ತೂರು ಜೀವವಿಮಾ ನಿಗಮದ ಅಧಿಕಾರಿ ವಿಶ್ವನಾಥ ಪೈ ಮಾತನಾಡಿ ಮದ್ಯ ವ್ಯಸನಿಯಾಗಿದ್ದಾಗ ಸಮಾಜ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಅತ್ಯಂತ ಹೇಯವಾಗಿ ಕಾಣುತ್ತಿತ್ತು.ಕಷ್ಟ ಎಂದರೂ 5 ರೂಪಾಯಿ ದೊರಕುತ್ತಿರಲ್ಲಿಲ್ಲ.ಸಾಲದ ಸುಳಿಯಲ್ಲಿ ಬಸವಳಿದಿದ್ದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮದ್ಯವರ್ಜನೆ ಶಿಬಿರ ನನ್ನ ಜೀವನದಲ್ಲಿ ಹೊಸ ಪರಿವರ್ತನೆ ನೀಡಿ ನನ್ನಲ್ಲಿ ಬದುಕುವ ಆಸೆಯನ್ನು ಪ್ರೇರೇಪಿಸಿತು. ಇಂದು ಎಲ್ಲರಿಂದ ಆದರ ಆತಿಥ್ಯಗಳಿಗೆ ಪಾತ್ರನಾಗಿದ್ದೇನೆಯೆಂದು ತಿಳಿಸಿ ಮದ್ಯ ವ್ಯಸನಿ ಹೊರ ಒತ್ತಾಯದಿಂದ ಮದ್ಯವರ್ಜಿಸುವುದಕ್ಕಿಂತ ನಮ್ಮ ಒಳ ಒತ್ತಾಯದಿಂದ ಮದ್ಯವರ್ಜಿಸಿದ್ದಲ್ಲಿ ಅವನು ಜೀವನದಲ್ಲಿ ಸರ್ವಸ್ವವನ್ನು ಸಾಧಿಸಬಹುದೆಂದರು.
ಮತ್ತೊಬ್ಬ ಮದ್ಯ ಮುಕ್ತ ತನಿಯ ಕೊರಗ ಮೊಂಟೆಪದವು ಅವರ ಪರವಾಗಿ ಅವರ ಶ್ರೀಮತಿ ಕಮಲ ಮಾತನಾಡಿ ತನ್ನ ಗಂಡ ಮದ್ಯ ವರ್ಜಿಸಿದ ಕಾರಣ ತಮ್ಮನ್ನು ಗುರ್ತಿಸಿ ಅನೇಕ ಸನ್ಮಾನ ಗಳನ್ನು ನೀಡುತ್ತಿ ದ್ದಾರೆ. ತಾವು ಸಹ 2 ಬಾರಿ ಗ್ರಾಮ ಪಂಚಾ ಯತ್ ಸದಸ್ಯ ರಾಗಿ ಚುನಾಯಿತ ರಾಗಿರು ವುದಾಗಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಕೆ.ರೋಹಿಣಿ ಸ್ವಾಗತಿಸಿದರು. ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಚಂದ್ರಶೇಖರ ಆಜಾದ್ ಅವರು ಧನ್ಯವಾದ ಸಮರ್ಪಿಸಿದರು.
ಸಮಾರಂಭವನ್ನು ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ ಚಂದ್ರಶೇಖರ ಆಳ್ವಾ ವಹಿಸಿದ್ದರು.ಸಮಾರಂಭದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕರಾದ ಮಾದವ ಹಾಗೂ ಹರಿಲಿತ್ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮದ್ಯ ಮುಕ್ತರಾದ ಜೀವವಿಮಾ ಅಧಿಕಾರಿ ವಿಶ್ವನಾಥ ಪೈ ಮತ್ತು ಶ್ರೀ ತನಿಯ ಕೊರಗ ಮೊಂಟೆಪದವು ಇವರನ್ನು ವಾರ್ತಾ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ಮಾದಕ ವಸ್ತು ವಿರೋಧಿ ಜಾಥಾವನ್ನು ಮಾಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ ಒಂಬುಡ್ಸ್ ಮನ್ ಶೀನ ಶೆಟ್ಟಿ ಉದ್ಘಾಟಿಸಿದರು. ಜನಶಿಕ್ಷಣಟ್ರಸ್ಟ್ ಕೃಷ್ಣ ಮೂಲ್ಯ ಉಪಸ್ಥಿತರಿದ್ದರು.