Wednesday, June 30, 2010

ಜಿಲ್ಲಾ ಜಾಗೃತಿ- ಉಸ್ತುವಾರಿ ಸಮಿತಿ ಸಭೆ ; ರಸ್ತೆ, ಮೂಲಭೂತ ಅಭಿವೃದ್ಧಿ ಬಗ್ಗೆ ಚರ್ಚೆ

ಮಂಗಳೂರು, ಜೂನ್.30 ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ಹೊಸ 1351 ರಸ್ತೆಗಳ ಪ್ರಸ್ತಾಪ, ಎನ್ಆರ್ಇಜಿಎ ಯೋಜನೆಯಡಿ ಬಿಪಿಎಲ್, ಪರಿಶಿಷ್ಟ ಜಾತಿ ವರ್ಗದವರಿಗೆ ಆದ್ಯತೆ, ಎಂಆರ್ಪಿಎಲ್ಗಾಗಿ ಸಾರ್ವಜನಿಕ ರಸ್ತೆ ಹಣ ವ್ಯಯದ ಬಗ್ಗೆ, ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತಂತೆ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಚಚಿಸಲ್ಪಟ್ಟಿತು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ವೈ) ಯ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್, ಪಿಎಂಜಿಎಸ್ವೈ ನಡಿ ಎಂಟನೆ ಹಂತದ ವರೆಗಿನ ಕಾಮಗಾರಿಗಳ ವಿವರ ನೀಡಿದರು. ಈ ಯೋಜನೆ ಯಡಿ ಎಂಟನೆ ಹಂತ (ಫೇಸ್ 8) ದವರೆಗೆ ಜಿಲ್ಲೆಗೆ ಮಂಜೂರಾಗಿದ್ದ 810.03 ಕಿ.ಮೀ. ಉದ್ದದ ಒಟ್ಟು 138 ರಸ್ತೆಗಳಡಿ 739.63 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳು ಪೂರ್ಣವಾಗಿದ್ದು, 118 ರಸ್ತೆ ಕಾಮಗಾರಿಗಳು ಸಂಪೂರ್ಣ ವಾಗಿದೆ ಎಂದು ತಿಳಿಸಿದರು.
ಈಗಾಗಲೆ ಗುಡ್ಡಕಾಡು ಪ್ರದೇಶಗಳಲ್ಲಿ ಗ್ರಾಮಗಳ ನಡುವೆ ಸಂಪರ್ಕವೇರ್ಪಡದ ರಸ್ತೆಗಳ ನಿಮಾಣಕ್ಕಾಗಿ ಸವೆ ನಡೆಸಿ ಕೇಂದ್ರ ಸರಕಾರಕ್ಕೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಂಚಾಯತ್ ಮಟ್ಟದಲ್ಲಿ ಜಿಲ್ಲೆಯಾದ್ಯಂತ ಒಟ್ಟು 1351 ಹೊಸ ರಸ್ತೆಗಳ ನಿಮಾಣದ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರಸ್ತೆಗಳ ಒಟ್ಟು ಉದ್ದ 3493 ಕಿ.ಮೀ. ಆಗಿರುತ್ತದೆ ಎಂದು ಇಂಜಿನಿಯರ್ ತಾಲೂಕುವಾರು ವಿವರ ನೀಡಿದರು. (ತಾಲೂಕುವಾರು ವಿವರ: ಮಂಗಳೂರು- 580 ರಸ್ತೆಗಳು- 1052 ಕಿ.ಮೀ., ಬೆಳ್ತಂಗಡಿ- 299 ರಸ್ತೆಗಳು- 999.95 ಕಿ.ಮೀ., ಬಂಟ್ವಾಳ- 325 ರಸ್ತೆಗಳು- 692.17 ಕಿ.ಮೀ., ಪುತ್ತೂರು- 107 ರಸ್ತೆಗಳು- 449 ಕಿ.ಮೀ., ಸುಳ್ಯ- 112 ರಸ್ತೆಗಳು- 449.9 ಕಿ.ಮೀ.)
ಅಧಿಕಾರಿಗಳು ಸಭೆಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ಸರಕಾರಕ್ಕೆ ಸೂಕ್ತ ವರದಿ ನೀಡುವುದರಿಂದ ಹಣ ಬಿಡುಗಡೆ ಆಗಲು ಸಾಧ್ಯ ಎಂದರು. ಮುಂದಿನ ಸಭೆಯಲ್ಲಿ ಈ ರೀತಿಯ ತಪ್ಪುಗಳು ಆಗದಂತೆ ಜಾಗೃತೆ ವಹಿಸುವಂತೆ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಯೋಜನೆಯಡಿ ಗ್ರಾಮ ಮಟ್ಟದಲ್ಲಿ 10 ಲಕ್ಷದವರೆಗಿನ ಅನುದಾನವನ್ನು ಒಂದು ಲಕ್ಷಕ್ಕೆ ಇಳಿಕೆ ಮಾಡಲಾಗಿದೆ. ಸರಕಾರವು ಕೆಲವೊಂದು ಬದಲಾವಣೆಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಕೆಲಸ ಬೇಕಾದ ಫಲಾನುಭವಿಗಳು ತಮ್ಮ ಉದ್ಯೋಗ ಕಾರ್ಡನ್ನು ಕಂಪ್ಯೂಟರ್ ಮೂಲಕ ದೃಢೀಕರಿಸಿಕೊಳ್ಳಬೇಕಾಗಿದೆ ಎಂದರು.
ಪ್ರಸ್ತುತ ಈ ಯೋಜನೆಯಡಿ ಕಳೆದ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 2200.334 ಲಕ್ಷ ರೂ ವೆಚ್ಚದಲ್ಲಿ 19130 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 472 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 82567 ಉದ್ಯೋಗ ಕಾಡಗಳನ್ನು ವಿತರಿಸಲಾಗಿದೆ ಎಂದವರು ತಿಳಿಸಿದರು.
ಸಾರ್ವಜನಿಕ ಉಪಯೋಗದ ಸುಮಾರು ಒಂದು ಕೋಟಿ ರೂ ವೆಚ್ಚದ ರಸ್ತೆಯೊಂದನ್ನು ಎಂ.ಆರ್.ಪಿ.ಎಲ್ ಸಂಸ್ಥೆಯು ತನ್ನ ವಶಕ್ಕೆ ಪಡೆದಿದ್ದ ಬಗ್ಗೆ ಏಳು ತಿಂಗಳ ಹಿಂದೆ ಸಭೆಯಲ್ಲಿ ಪ್ರಸ್ತಾಪಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಯಾವುದೇ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ರಸ್ತೆಯೊಂದನ್ನು ಕಂಪನಿ ತನ್ನ ವಶಕ್ಕೆ ಪಡೆದಿದೆ. ಈ ಬಗ್ಗೆ ಆ ಕಂಪನಿಯು ಬೇರೆ ರಸ್ತೆಯೊಂದನ್ನು ನಿಮಿಸಬೇಕು ಅಥವಾ ಹಣವನ್ನು ಪಾವತಿಸಬೇಕೆಂದು ತಿಳಿಸಲಾಗಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದಾಗ, ಪರಿಶೀಲನೆ ಮಾಡಿ ಹಣ ಪಾವತಿಸಲು ಹೇಳುವುದಾಗಿ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿ ಪ್ರತಿಕ್ರಿಯಿಸಿದರಾದರೂ ಸಮಾಧಾನಗೊಳ್ಳದ ಸಂಸದರು, ಇಂದು ಎಂ.ಆರ್.ಪಿ.ಎಲ್ ನವರು , ನಾಳೆ ಎಸ್ಇಝೆಡ್ನವರು ಅಭಿವೃದ್ಧಿ ಹೆಸರಿನಲ್ಲಿ ಸರಕಾರದ ಹಣವನ್ನು ನುಂಗಬಾರದು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಮುಂದುವರಿದು ಮಾತನಾಡಿದ ಸಂಸದರು, ಮುಂದಿನ 15 ದಿನಗಳೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ, ಇಲ್ಲವಾದರೆ ನಾನೇ ವ್ಯವಸ್ಥೆ ಮಾಡುತ್ತೇನೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಉಪಾಧ್ಯಕ್ಷ ಜಗನ್ನಾಥ ಸಾಲಿಯಾನ್ ಉಪಸ್ಥಿತರಿದ್ದರು.

Saturday, June 26, 2010

ದೇಶಕ್ಕೆ ಮಾದರಿ ಕರ್ನಾಟಕ ಪೊಲೀಸ್: ಡಾ.ಅಜಯ ಕುಮಾರ್ ಸಿಂಹ

ಮಂಗಳೂರು,ಜೂನ್ 26:ರಾಜ್ಯ ಪೊಲೀಸ್ ಇಲಾಖೆ ಉತ್ತಮ, ಜನಪರ ಕಾರ್ಯಗಳಿಂದ ರಾಷ್ಟ್ರದ ಗಮನವನ್ನು ಸೆಳೆದಿದ್ದು ಪ್ರಧಾನಿ ಹಾಗೂ ಗೃಹ ಸಚಿವರಿಂದ ಪ್ರಶಂಸೆಯನ್ನು ಪಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಮತ್ತು ಮಹಾನಿರ್ದೇಶಕರಾದ ಡಾ.ಅಜಯ ಕುಮಾರ್ ಸಿಂಹ ಹೇಳಿದರು.

ಅವರಿಂದು ನಗರದಲ್ಲಿ ಕಮಿಷನರೇಟ್ ಕಟ್ಟಡದ ಉದ್ಘಾಟನಾ ಸಮಾ ರಂಭದಲ್ಲಿ ಮಾತ ನಾಡುತ್ತಾ, ಪೋಲಿಸ್ ಇಲಾಖೆ ಜನರ ಸಹಕಾರ ಹಾಗೂ ಜನಪರ ನಡೆಯಿಂದ ಜನ ಸ್ನೇಹಿ ಯಾಗಿದ್ದು ಇತರ ರಾಜ್ಯಗಳು ಕರ್ನಾಟಕದ ಮಾದರಿಯನ್ನು ಅನುಸರಿಸ ಬೇಕೆಂದು ಕೇಂದ್ರ ಗೃಹ ಸಚಿವರು ಇತರ ರಾಜ್ಯಗಳ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದರು.ಜನರಿಂದ ದೂರು ಸ್ವೀಕರಿಸುವ ರೀತಿ, ಕಳವಾದ ವಸ್ತುಗಳನ್ನು ನ್ಯಾಯ ಲಯದಿಂದ ಪಡೆದು ಫಿರ್ಯಾದು ದಾರರಿಗೆ ತಲುಪಿಸಲು ಕೈಗೊಂಡ ಕ್ರಮಕ್ಕ ಜನತೆಯಿಂದ ಶ್ಲಾಘನೆ ವ್ಯಕ್ತವಾಗಿದೆ ಎಂದರು. ಕಳೆದ ಒಂದು ವರ್ಷದ ಅವಧಿಯಲ್ಲಿ 53 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಅದರ ಮಾಲಿಕರಿಗೆ ಹಿಂದಿರುಗಿಸ ಲಾಗಿದೆ. ಕಮಿಷನರೇಟ್ ಕಚೇರಿಯನ್ನು ಪ್ರವೇಶಿಸುವ ಪ್ರದೇಶದಲ್ಲಿ ದೂರುಗಳನ್ನು ಹಿಡಿದು ಬರುವವರ ನೋವಿಗೆ ಸ್ಪಂದಿಸಲು ದೂರುಗಳನ್ನು ಸ್ವೀಕರಿಸಿ, ಹಿಂಬರಹ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತೀ 3ನೇ ಭಾನುವಾರ ಪೊಲೀಸ್ ಸ್ಟೇಷನ್ ನಲ್ಲಿ ಜನಸ್ಪಂದನ ದಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯ ಪೊಲೀಸ್ ಇಲಾಖೆ ತನ್ನ ನಗುಮೊಗದ ಸೇವೆಯಿಂದ ಜನಪ್ರಿಯ ವಾಗುತ್ತಿದೆ. ಜನರ ನಂಬುಗೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಇಲಾಖೆ ಮುಂದುವರಿಸಬೇಕು ಎಂದು ಅವರು ಹೇಳಿದರು.

ಅವಕಾಶಗಳನ್ನು ಸದುಪಯೋಗಪಡಿಸಿ ಉದ್ಯಮಿಗಳಾಗಿ:ಸಚಿವ ಪಾಲೆಮಾರ್

ಮಂಗಳೂರು,ಜೂ.26:ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಪ್ರವಾಸೋದ್ಯಮ ಇಲಾಖೆ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವ ಉದ್ಯೋಗಾಕಾಂಕ್ಷಿಗಳು ಉದ್ಯಮಿಗಳಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.


ಅವರಿಂದು ಪ್ರವಾಸೋದ್ಯಮ ಇಲಾಖೆ 09-10 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ವಕಾಶ ಕಲ್ಪಿಸುವ ಸದು ದ್ದೇಶದಿಂದ ಶೇ.50 ಧನ ಸಹಾಯ ನೀಡಿ ಪ್ರವಾಸಿ ಟ್ಯಾಕ್ಸಿಗಳನ್ನು ಖರೀದಿಸಿ,ವಿತರಿಸುವ ಸಮಾ ರಂಭದಲ್ಲಿ ಮಾತ ನಾಡುತ್ತಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರು ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಯಶಸ್ವಿ ಉದ್ಯಮಿ ಗಳಾಗಲು ವೈಯಕ್ತಿಕ ನೆಲೆಯಲ್ಲಿ ಸಲಹೆ ಸಹಾಯ ನೀಡಲು ಸಿದ್ಧ ಎಂದ ಅವರು, ಎಲ್ಲ ಇಲಾಖೆಗಳಲ್ಲೂ ಶೇ.22 ರಷ್ಟು ಮೀಸಲಾತಿಯಿದ್ದು, ಸರ್ಕಾರ ಸಾಮಾಜಿಕ ಸಮಾನತೆಗೆ ಪೂರಕ ಹಲವು ಯೋಜನೆಗಳನ್ನು ಹಮ್ಮಿ ಕೊಂಡಿದೆ.ಯುವಕರು ಕೀಳರಿಮೆ ಯನ್ನು ತೊರೆದು ಮುನ್ನುಗ್ಗ ಬೇಕೆಂದು ಹೇಳಿದ ಅವರು, ಯುವಕರನ್ನು ಹುರಿದುಂಬಿಸಲು ತರಬೇತಿ ನೀಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಯ ಬೇಕಿದೆ ಎಂದರು.
ಪರಿಶಿಷ್ಟ ಜಾತಿಯಡಿ ಅದ್ಯಪಾಡಿಯ ಮನೋಜ್ ಕುಮಾರ್, ಸುಳ್ಯದ ಅಜ್ಜಾವರ ಗ್ರಾಮದ ದಿವಾಕರ, ಪುತ್ತೂರು ನೆಕ್ಕಿಲಾಡಿಯ ಗಣೇಶ್ ನಾಯ್ಕ್, ಮಂಗಳೂರು ಬಡಗುಳಿಪಾಡಿಯ ರಾಜೇಶ್ ನಾಯ್ಕ್, ಮುಲ್ಕಿಯ ಮಂಜುನಾಥ್ ಆರ್, ದೆಲಂತಬೆಟ್ಟಿನ ಗಂಗಾಧರ, ಮೂಡಬಿದ್ರಿ ಮಾರ್ಪಾಡಿಯ ಮಾಧವ, ಮಂಗಳೂರಿನ ಗಣೇಶಚಂದ್ರ, ಡಿ.ಕೃಷ್ಣ, ಮೂಡುಶೆಡ್ಡೆಯ ಜಗದೀಶ್, ಬೆಳ್ತಂಗಡಿ ನಿಡ್ಲೆಯ ಗಣೇಶ, ನಂತೂರಿನ ಸಂದೀಪ್ ಇವರಿಗೆ ಹಾಗೂ ಪರಿಶಿಷ್ಟ ಪಂಗಡದಡಿ ಸುಳ್ಯದ ದೇವಚಳ್ಳ ರಮೇಶ್, ಪುತ್ತೂರಿನ ಸಂಪ್ಯದ ಪದ್ಮನಾಭ ನಾಯ್ಕ್ ಇವರಿಗೆ ಟಾಟಾ ಇಂಡಿಕಾ- ಡಿ ಎಲ್ ಇ III ಪ್ರವಾಸಿ ಟ್ಯಾಕ್ಸಿ ವಿತರಿಸಲಾಯಿತು. 3,55,160 ರೂ.ಗಳ ವಾಹನ ವಿತರಿಸಲಾಗಿದ್ದು, ಶೇ.50 ರಷ್ಟು ಸಹಾಯಧನವನ್ನು ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗಿದೆ. ಜಿಲ್ಲೆಯಿಂದ ಇನ್ನೂ ನಾಲ್ಕು ಅಭ್ಯರ್ಥಿಗಳ ಆಯ್ಕೆ ಪ್ರಗತಿಯಲ್ಲಿದೆ.
ಮೇಯರ್ ರಜನಿ ದುಗ್ಗಣ್ಣ ಸಮಾರಂಭದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಆದಿಲಕ್ಷ್ಮಮ್ಮ ಉಪಸ್ಥಿತರಿದ್ದರು.

ಶಾಂತಿ ಸುವ್ಯವಸ್ಥೆಯಿಂದ ಜಿಲ್ಲೆಯ ಅಭಿವೃದ್ಧಿ: ಗೃಹ ಸಚಿವ ಡಾ.ವಿ. ಎಸ್. ಆಚಾರ್ಯ

ಮಂಗಳೂರು,ಜೂ.26:ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸಬಲೀಕರಣಗೊಳಿಸಲು ಪೂರಕ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಿದ್ದು, ಶಾಂತಿ ಸುವ್ಯವಸ್ಥೆಯಿಂದ ಅಭಿವೃದ್ಧಿ ಎಂಬುದನ್ನು ಮನಗಂಡಿರುವ ಆಡಳಿತ ಪೊಲೀಸ್ ಇಲಾಖೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಗೃಹ ಮತ್ತು ಮುಜರಾಯಿ ಸಚಿವ ಡಾ. ವಿ.ಎಸ್. ಆಚಾರ್ಯ ಹೇಳಿದರು.

ಅವರಿಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು. ಪಶ್ಚಿಮದ ಹೆಬ್ಬಾಗಿ ಲಾಗಿರುವ ಜಿಲ್ಲೆಯ ಭವಿಷ್ಯತ್ತನ್ನು ಹಾಗೂ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಮಗಳೂರು ಕಮಿಷನರೇಟನ್ನು ರೂಪಿಸ ಲಾಗಿದೆ. 4012 ನಾಗರಿಕ ಪೊಲೀಸರ(ಸಿವಿಲ್ ಕಾನ್ಸಟೇಬಲ್ಸ್) ನೇಮಕಾತಿಗ ಪ್ರಕ್ರಿಯೆ ಈಗಾಗಲೇ ಆರಂಭ ಗೊಂಡಿದೆ.400 ಸಬ್ ಇನ್ಸ್ ಪೆಕ್ಟರ್ ಗಳ ನೇಮಕಕ್ಕೆ ಅಂತಿಮ ಆದೇಶ ಸದ್ಯದಲ್ಲೇ ಹೊರ ಬೀಳಲಿದೆ. ಹೊಸದಾಗಿ 600 ಪೊಲೀಸ್ ಕಾನ್ಸಟೇಬಲ್ ಗಳ ನೇಮಕಕ್ಕೆ ಆರ್ಥಿಕ ಇಲಾಖೆಯಿಂದ ಅನುಮತಿ ದೊರಕಿದೆ. ಮಂಗಳೂರಿನ ಕಮಿಷನರೇಟ್ ಇತರ ಜಿಲ್ಲೆಗಳಿಗೆ ಮಾದರಿ ಯಾಗಬೇಕಿದೆ. ಜಿಲ್ಲೆಯ 28 ಪೊಲೀಸ್ ಸ್ಟೇಷನ್ ಗಳಲ್ಲಿ 17 ಪೊಲೀಸ್ ಸ್ಟೇಷನ್ ಗಳು ಕಮಿಷನರೇಟ್ ವ್ಯಾಪ್ತಿಗೆ ಬರಲಿದ್ದು 2011 ಜನವರಿ 26ರೊಳಗೆ 3 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಕಮಿಷನರೇಟ್ ಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದರು. ಪುತ್ತೂರು ವಿಭಾಗವನ್ನು ವಿಭಜಿಸಿ ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಸಬ್ ಡಿವಿಷನ್ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಆಚಾರ್ಯ ಹೇಳಿದರು. ಹುಬ್ಬಳ್ಳಿ ಮತ್ತು ಮೈಸೂರು ಪೊಲೀಸ್ ಕಮಿಷನರೇಟ್ ಗಳ ವ್ಯಾಪ್ತಿ ವಿಸ್ತರಿಸಲು ಅಧಿಕಾರಿಗಳು ಪ್ರಸ್ತಾವ ಮಂಡಿಸಿದ್ದು ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು, ಪೊಲೀಸ್ ಇಲಾಖೆಯ ಅಭಿವೃದ್ಧಿಗೆ ಶಕ್ತಿಮೀರಿ ಯತ್ನಿಸುತ್ತಿದ್ದು ಇಲಾಖಾ ವಾಹನಗಳ ನಿರ್ವಹಣೆಗೆ ಪ್ರತ್ಯೇಕ ಸರ್ವಿಸ್ ಸ್ಟೇಷನ್ ಅಗತ್ಯವಿದೆ,ಸದ್ಯದಲ್ಲೇ ಈ ಬೇಡಿಕೆಯನ್ನು ಈಡೇರಿ ಸಲಾಗುವುದು ಎಂದರು. ಹೊಸ ಜೈಲು ನಿರ್ಮಾಣಕ್ಕೆ ಜಿಲ್ಲಾಡಳಿತ 50 ಎಕರೆ ಜಮೀನನ್ನು ಒದಗಿಸಿದೆ. ಬಂದರು ಅಧಿಕಾರಿಯ ಬಂಗಲೆಯನ್ನು ಪೊಲೀಸರಿಗೆ ನೀಡಲಾಗುವುದು. ನಗರದ ಹೃದಯ ಭಾಗದಲ್ಲಿ ಅವರಿಗೆ ಕಾರ್ಯಾನುಕೂಲಕ್ಕೆ ಅನುಕೂಲ ವಾಗುವಂತೆ ಎಲ್ಲ ಸೌಲಭ್ಯಗಳನ್ನು ಒದಗಿಸ ಲಾಗುವುದೆಂದು ಹೇಳಿದರು. ಪೊಲೀಸ್ ವಸತಿಗೃಹದ ಬಗ್ಗೆಯೂ ಗಮನಹರಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದರು. ಇಲಾಖೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಉತ್ತಮ ಕೆಲಸ ಮಾಡುತ್ತಿರುವುದಾಗಿ ಪ್ರಶಂಸೆಯ ಮಾತು ಗಳನ್ನಾಡಿದರು.ಸಂಸತ್ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಡಿ.ವಿ.ಸದಾ ನಂದ ಗೌಡ, ಶಾಸಕ ರಾದ ಅಭಯ ಚಂದ್ರ ಜೈನ್, ರಮಾನಾಥ ರೈ, ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಪಶ್ಚಿಮ ವಲಯ ಐಜಿಪಿ ಗೋಪಾಲ ಬಿ ಹೊಸೂರು, ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ವಾಗತಿಸಿ, ಉಪ ಆಯುಕ್ತ ಆರ್. ರಮೇಶ್ ವಂದಿಸಿದರು.

Friday, June 25, 2010

ಮಲೇರಿಯಾ ಬಗ್ಗೆ ಜಾಗೃತರಾಗಿರಿ: ನಾಗೇಂದ್ರ ಸ್ವಾಮಿ

ಮಂಗಳೂರು, ಜೂನ್ 25: ರೋಗ ಬಂದ ನಂತರ ಶುಶ್ರೂಷೆ ಪಡೆಯುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಬುದ್ಧಿವಂತಿಕೆ; ಮಳೆಗಾಲದಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಆರಂಭವಾಗಲಿದ್ದು ಪ್ರತಿಯೊಬ್ಬರು ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾದ ಎಂ. ನಾಗೇಂದ್ರ ಸ್ವಾಮಿ ಹೇಳಿದರು.
ಇಂದು ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢ ಶಾಲೆಯಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶ ನಾಲಯ, ವಾರ್ತಾ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, ವಿದ್ಯಾದಾಯಿನಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಲೇರಿಯಾ ನಿಯಂತ್ರಣ ಮಾಸಾಚರಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು.ಮಕ್ಕಳು ಮಳೆಗಾಲದಲ್ಲಿ ಹರಡುವ ರೋಗಗಳ ಬಗ್ಗೆ ತಿಳಿದುಕೊಂಡು ಮನೆಗಳಲ್ಲಿ, ಅಕ್ಕಪಕ್ಕದ ಪರಿಸರದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡುವುದರಿಂದ ಸಾಮಾಜಿಕ ಜಾಗೃತಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಅನಾಫಿಲಿಸ್ ಸೊಳ್ಳೆಯಿಂದ ಬರುವ ಮಲೇರಿಯಾವನ್ನು ಪತ್ತೆ ಹಚ್ಚಲು ಇಂದು ಆಧುನಿಕ ಸೌಲಭ್ಯಗಳಿದ್ದು, ರೋಗ ಆರಂಭದಲ್ಲೇ ಚಿಕಿತ್ಸೆ ಪಡೆದರೆ ರೋಗವನ್ನು ಗುಣಪಡಿಸಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿ ಸೊಳ್ಳೆಯ ಕಡಿತದಿಂದ ರಕ್ಷಿಸಿಕೊಳ್ಳುವ ಬಗ್ಗೆ ಹಾಗೂ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ರೀತಿಯನ್ನು ವಿವರಿಸಿದರು. 2004ರಿಂದ ಜಿಲ್ಲೆಯಲ್ಲಿ ಮಲೇರಿಯಾ ರೋಗ ಕಡಿಮೆಯಾಗಿದ್ದು, ಜ್ವರ ಬಂದಲ್ಲಿ ತಕ್ಷಣ ರಕ್ತ ಪರೀಕ್ಷೆ ಮಾಡಿಸುವುದರಿಂದ ಚಿಕಿತ್ಸೆ ಪಡೆಯುವುದು ಸುಲಭ ಎಂದರು.ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಪ್ರೊ. ಗಿರಿಧರ್ ಹತ್ವಾರ್, ಸಂಚಾಲಕರಾದ ಶ್ರೀಮತಿ ಉಮಾದೇವಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅರಣ್ ಕುಮಾರ್ ಅವರು ಮಲೇರಿಯಾ ಬಗ್ಗೆ ಉಪನ್ಯಾಸ ನೀಡಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೇಶವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹೇಮಲತಾ ಕಾರ್ಯಕ್ರಮ ಸಂಯೋಜಿಸಿದ್ದರು. ಕ್ಷೇತ್ರ ಪ್ರಚಾರಾಧಿಕಾರಿ ಟಿ.ಬಿ. ನಂಜುಂಡ ಸ್ವಾಮಿ ಸ್ವಾಗತಿಸಿದರು. ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಈ ಸಂಬಂಧ ಕ್ಷೇತ್ರ ಪ್ರಚಾರ ಇಲಾಖೆ ವತಿಯಿಂದ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ನಾಲ್ಕು ಬಹುಮಾನಗಳನ್ನು ನೀಡಲಾಯಿತು. ಆರೋಗ್ಯ ಇಲಾಖೆ ವತಿಯಿಂದ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.

Thursday, June 24, 2010

'ಸ್ವಚ್ಛ ಪರಿಸರದಿಂದ ಆರೋಗ್ಯವಂತ ಸಮಾಜ'

ಮಂಗಳೂರು, ಜೂನ್ 24:ಸ್ವಚ್ಛತೆಯ ಪಾಠ ಮಕ್ಕಳಿಗೆ ಎಳೆವೆಯಲ್ಲೇ ಕಲಿಸಬೇಕು. ಮನೆ, ವಠಾರ, ಶಾಲಾ ಸ್ವಚ್ಛತೆಯಿಂದ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಿದ್ದರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಕ್ಷೇತ್ರ ಪ್ರಚಾರಾಧಿಕಾರಿ ಟಿ ಬಿ. ನಂಜುಂಡಸ್ವಾಮಿ ಹೇಳಿದರು.

ಅವರಿಂದು ಮಂಗಳೂರು ತಾಲೂಕಿನ ಬಡಗುಳಿ ಪಾಡಿ ಗ್ರಾಮದ ಗುರು ಕಂಬಳದ ಎಕೆಯು ಪ್ರೌಢ ಶಾಲೆಯಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶ ನಾಲಯ ಮತ್ತು ವಾರ್ತಾ ಇಲಾಖೆ ಏರ್ಪಡಿಸಿದ್ದ ಪರಿಸರ ದಿನಾಚರಣೆ ಸಂಬಂಧ ವಿಚಾರ ಸಂಕಿರಣದಲ್ಲಿ ಮಾತ ನಾಡುತ್ತಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲೇ, ಮಕ್ಕಳು ನಮ್ಮ ಭವಿಷ್ಯ ಈ ಮಕ್ಕಳಿಗೆ ಪಠ್ಯದ ಜೊತೆಗೆ ಪರಿಸರದ ಬಗ್ಗೆ ಮಾಹಿತಿ ನೀಡುವುದು ಎಲ್ಲರ ಕರ್ತವ್ಯ ಎಂದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಓಸ್ವಾಲ್ಡ್ ರೋಡ್ರಿಗಸ್ ಅವರು, ಮಕ್ಕಳು ಶುಭ್ರವಾಗಿದ್ದು, ಶಾಲಾ ಆವರಣದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದರು. ಎಲ್ಲೆಂದರಲ್ಲಿ ಕಸ ಹಾಕುವುದು; ಅಸ್ವಚ್ಛ ಪರಿಸರದಿಂದ ಆರೋಗ್ಯದ ಮೇಲಾಗುವ ಹಾನಿಯ ಬಗ್ಗೆ ಮಕ್ಕಳಿಗೆ ವಿವರಿಸಿದರು.
ಸಮಾರಂಭದ ಮುಖ್ಯ ಅತಿಥಿ ಯಾಗಿದ್ದ ವಾರ್ತಾಧಿಕಾರಿ ರೋಹಿಣಿ ಮಕ್ಕಳನ್ನು ಉದ್ದೇಶಿಸಿ ಮಾತ ನಾಡಿದರು. ನಿವೃತ್ತ ಶಿಕ್ಷಕ ಅನಂತರಾಮ ಅವರು ಸಂಪನ್ಮೂಲ ವ್ಯಕ್ತಿ ಯಾಗಿದ್ದರು. ಕಾರ್ಯ ಕ್ರಮದಲ್ಲಿ ಪರಿಸರ ಸಂಬಂಧ ಏರ್ಪಡಿಸಲಾದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ನೌರೀನ್, ಸುನೇವಾ, ಮರ್ಝೀಯಾಭಾನು, ಅಥಾವುಲ್ಲಾ ಅವರಿಗೆ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಪ್ರಚಾರ ಇಲಾಖಾ ವತಿಯಿಂದ ಸ್ವಚ್ಛತೆ ಮತ್ತು ಆರೋಗ್ಯ ಕುರಿತ ಚಲನ ಚಿತ್ರ ಪ್ರದರ್ಶಿಸಲಾಯಿತು. ವಾರ್ತಾ ಇಲಾಖೆ ಜನಪದ ಕಲಾವಿದರು ಸ್ವಚ್ಛತೆ ಕುರಿತ ಪದಗಳನ್ನು ಹಾಡಿದರು. ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾದ ಮಾಧವ ಮಯ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಗಣಿತ ಪ್ರಾಧ್ಯಾಪಕರಾದ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು. ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Wednesday, June 23, 2010

344.91 ಕೋಟಿ ರೂ. ವಾರ್ಷಿಕ ಕ್ರಿಯಾ ಯೋಜನೆಗೆ ಜಿ.ಪಂ ಅನುಮೋದನೆ

ಮಂಗಳೂರು, ಜೂ.23: 2010-11 ನೇ ಸಾಲಿಗೆ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಯೋಜನೆ ಮತ್ತು ಯೋಜನೆತರ ಕಾರ್ಯಕ್ರಮದಡಿ ಒಟ್ಟು 344.91 ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಯೋಜನಾ ಕಾರ್ಯಕ್ರಮದಡಿ 74.07 ಕೋಟಿ ರಾಜ್ಯ ವಲಯದಡಿ, 37.65 ಕೋಟಿ ಅನುದಾನ ಕೇಂದ್ರ ವಲಯದಡಿ ಸೇರಿ ಒಟ್ಟು 111.72, ಯೋಜನೇತರ ಕಾರ್ಯಕ್ರಮದಡಿ ಜಿಲ್ಲೆಗೆ ಒಟ್ಟು 233.19 ಅನುದಾನ ನಿಗದಿಯಾಗಿದೆ.
ಯೋಜನಾ ಕಾರ್ಯ ಕ್ರಮಗಳಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಜಲಾನಯನಕ್ಕೆ ಅನುದಾನ ನಿಗದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ 23 ನೇ ಸಾಮಾನ್ಯ ಸಭೆಯು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.ಬಳಿಕ ವಿವಿಧ ಅಭಿವೃದ್ದಿ ಸಂಬಂಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಅಂಗನ ವಾಡಿಗಳಲ್ಲಿ ಮಕ್ಕಳಿಗೆ ವಿತರಿಸಲಾಗುವ ಪೌಷ್ಠಿಕ ಆಹಾರವು ಮಕ್ಕಳಿಗೆ ತಿನ್ನಲು ರುಚಿಕರವಾಗಿಲ್ಲದ ಜೊತೆಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಆಹಾರ ಸರಬರಾಜಿನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದೆ. ಮಕ್ಕಳ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ ಎಂಬುದಾಗಿ ಜಿಲ್ಲಾ ಪಂಚಾಯತಿನ ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರ ಜೊತೆಗೆ ಉಪಸ್ಥಿತರಿದ್ದ ಶಾಸಕರಿಂದಲೂ ಇಂದು ಗಂಭೀರ ಆರೋಪಗಳು ವ್ಯಕ್ತವಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಯು.ಟಿ.ಖಾದರ್ ಅಂಗನ ವಾಡಿಗಳಿಗೆ ಸರಬ ರಾಜಾಗುತ್ತಿರುವ ಆಹಾರದ ಬಗ್ಗೆ ಬಗ್ಗೆ ಸಮಗ್ರ ತನಿಖೆ ಅಗತ್ಯವಾಗಿದೆ ಎಂದು ಹೇಳಿದರು.ಈ ಬಗ್ಗೆ ವಿಸ್ತೃತ ಚರ್ಚೆಯ ಬಳಿಕ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಗಳ ಅಧ್ಯಕ್ಷರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಿ ಸಮಗ್ರ ತನಿಖೆ ನಡೆಸಿ ಸಮಯಮಿತಿ ನಿಗದಿ ಪಡಿಸಿ ವರದಿ ಸಲ್ಲಿಸಲು ಸಭೆ ನಿರ್ಧರಿಸಿತು.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ; ಸಿಇಒ : ಸರಕಾರಿ ಶಾಲೆಗಳು ಕೆಲವೆಡೆ ಮಕ್ಕಳೇ ಇಲ್ಲದೆ ಮುಚ್ಚುವಂತಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಶಿಕ್ಷಕರೇ ಇಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯತ್ನಿಂದ ವಿಶ್ಲೇಷಣೆ ನಡೆದಿಯೇ ಎಂದು ಸದಸ್ಯರಾದ ಎ.ಸಿ. ಭಂಡಾರಿ ಸಭೆಯ ಆರಂಭದಲ್ಲೇ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದರು. ಉಳಿದ ಸದಸ್ಯರು ಈ ಬಗ್ಗೆ ವಿವರ ಬಯಸಿದರು. ಜಿಲ್ಲೆಯಲ್ಲಿ ಸರಕಾರಿ ಶಾಲೆಗೆ ಬರಲು ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಊಟ, ಸೈಕಲನ್ನು ನೀಡುತ್ತದೆ. ಆದರೆ ಿದರ ಜೊತೆಗೆ ಶಿಕ್ಷಕರನ್ನೂ ನೀಡಬೇಕು ಎಂದು ಸದಸ್ಯ ಪ್ರಮೋದ್ ಕುಮಾರ್ ಆಗ್ರಹಿಸಿದರೆ, ಏಕೋಪಾಧ್ಯಾಯ ಶಾಲೆಗಳಿಗೆ ಕನಿಷ್ಠ ಇಬ್ಬರು ಶಿಕ್ಷಕರನ್ನಾದರೂ ನೀಡುವಂತಾಗಬೇಕು ಎಂದು ಸದಸ್ಯೆ ಮಮತಾ ಗಟ್ಟಿ ಒತ್ತಾಯಿಸಿದರು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಲು ಪೋಷಕರ ಆಂಗ್ಲ ಮಾಧ್ಯಮದ ವ್ಯಾಮೋಹವೂ ಕಾರಣ ಎಂದ ಸದಸ್ಯ ಸುಚರಿತ ಶೆಟ್ಟಿ ಹೇಳಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಶಿವಶಂಕರ್, ಜಿಲ್ಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ 1057 ಶಾಲಾ ಕೊಠಡಿಗಳು ಮಂಜೂರಾಗಿದ್ದು, 23 ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಜಿಲ್ಲೆಯಲ್ಲಿ ಶಿಕ್ಷಕರನ್ನು ನೇಮಿಸಲಾಗಿದೆ.ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಕರು ಸರಕಾರಿ ಶಾಲೆಗಳಲ್ಲಿದ್ದು, ಮೂಲಭೂತ ಸೌಕರ್ಯವೂ ಉತ್ತಮವಾಗಿದೆ. ಪ್ರಸ್ತುತ ಒಟ್ಟಾರೆ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ ಎಂದರು. ಕೆಲವು ನಿಗದಿತ ಶಾಲೆಗಳಲ್ಲಿ ಸಮಸ್ಯೆಗಳಿದ್ದರೆ ಈ ಬಗ್ಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದು ವಾರದೊಳಗೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಇಒ ಶಿವಶಂಕರ್ ಸೂಚಿಸಿದರು.
ತೋಟಗಾರಿಕಾ ಇಲಾಖೆಯಿಂದ ಕೀಟನಾಶಕಗಳನ್ನು ಇತ್ತೀಚೆಗೆ ಬಾವಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸದಾನಂದ ಮಲ್ಲಿ, ಈ ಬಗ್ಗೆ ಜಿಲ್ಲಾ ಮಟ್ಟದ ತಂಡದಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಈ ಬಗ್ಗೆ ಚರ್ಚಿಸಬಹುದು ಎಂದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ, ವೆಂಕಟ್ದಂಬೆಕೋಡಿ ಉಪಸ್ಥಿತರಿದ್ದರು.

Monday, June 21, 2010

ತುಂಬೆ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗುವ ಜಾಗದ ಸರ್ವೆ

ಮಂಗಳೂರು ಜೂನ್ 21: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟಿಗೆ ಸಂಬಂಧಿಸಿದಂತೆ ,ವೆಂಟೆಡ್ ಡ್ಯಾಂನ್ನು ಎತ್ತರಿಸುವುದರಿಂದ ಮುಳುಗಡೆಯಾಗುವ ಜಮೀನಿನ ಬಗ್ಗೆ ಸರ್ವೆ ಕಾರ್ಯ ನಡೆಸಿ ವರದಿ ಸಲ್ಲಿಸಲು ಬೆಂಗಳೂರಿನ ಸ್ಟುಪ್ ಕನ್ಸಲ್ಟೆಂಟ್ಸ್ ಇವರಿಗೆ ವಹಿಸಿಕೊಡಲಾಗಿದ್ದು ,ಈ ಸರ್ವೆ ವರದಿಯನ್ನು ಕೂಡಲೇ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ತಿಳಿಸಿದರು.
ಅವರು ಇಂದು ದಿನಾಂಕ 21-6-10 ರಂದು ಪೂರ್ವಾಹ್ನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಪ್ರಕೃತಿ ವಿಕೋಪದಿಂದ ಹಾನಿಯಾದ ಕೃಷಿಗೆ ನೀಡಲಾಗುವ ಪರಿಹಾರದ ಮೊತ್ತವು ಅತ್ಯಲ್ಪವಾಗಿದ್ದು,ಹೆಚ್ಚು ಪರಿಹಾರ ಧನ ನೀಡುವಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸ ಲಾಗಿದೆಯೆಂದರು .ನಗರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಸ್ಸುಗಳಿಗೆ ಪರವಾನಿಗೆ ನೀಡಿದ್ದರೂ ಬಸ್ಸುಗಳು ಓಡಾಡದೇ ಇರುವುದರಿಂದ ,ಈ ರಸ್ತೆಗಳಿಗೆ ಕೆಎಸ್ಆರ್ಟಿಸಿ ಬಸ್ಸುಗಳನ್ನು ಓಡಿಸಬಹುದಾಗಿದೆ. ಬೆಂದೂರುವೆಲ್ನಲ್ಲಿ ಕೆಎಸ್ಆರ್ಟಿಸಿ ವಶದಲ್ಲಿರುವ ಜಮೀನನ್ನು ಖಾಸಗಿ ಕಂಪೆನಿಗಳಿಗೆ ನೀಡದಂತೆ ಸೂಚಿಸಿದರು.
ಜನಸ್ಪಂದನ ಸಭೆಗಳಲ್ಲಿ ಅಂಗವಿಕಲರಿಗೆ ಆಗುವ ತೊಂದರೆಯನ್ನು ತಪ್ಪಿಸಲು 10 ದಿನ ಮುಂಚಿತವಾಗಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಅವರ ಅರ್ಜಿಗಳನ್ನು ಪಡೆದು, ಜನಸ್ಪಂದನಾ ಸಭೆಗಳಲ್ಲಿ ವಿಲೇ ಮಾಡುವಂತೆ ಸೂಚಿಸಿದರು. ಹತ್ತಿರದ ಕೇರಳ ರಾಜ್ಯಕ್ಕೆ ಸಾಗಾಟ ವಾಗುತ್ತಿರುವ ಮರಳನ್ನು ಕೂಡಲೇ ನಿಲ್ಲಿಸುವಂತೆ ಮತ್ತು ಸ್ಥಳೀಯರಿಗೆ ಮನೆ ಕಟ್ಟಲು ಮರಳು ದೊರೆಯುವಂತಾಗಬೇಕೆಂಬ ಬಂಟ್ವಾಳ ಶಾಸಕರ ಕೋರಿಕೆಗೆ, ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನಿರ್ಮಾಣ ಮಾಡಿ,ಪಂಪ್ ಅಳವಡಿಸುವ ಬಗ್ಗೆ,ಪರಿಶಿಷ್ಟ ಜಾತಿ/ಪಂಗಡದವರ ಅರ್ಜಿಗಳನ್ನು ಬ್ಯಾಂಕಿಗೆ ಕಳುಹಿಸುವ ಬಗ್ಗೆ,ಹಿಂದುಳಿದ ವರ್ಗದವರ ಅರ್ಜಿಗಳನ್ನು ವಿಲೇ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಂಗಳೂರು ಶಾಸಕರಾದ ಯು.ಟಿ .ಖಾದರ್. ಬಂಟ್ವಾಳ ಶಾಸಕರಾದ ರಮಾನಾಥ ರೈ,ಮೂಡಬಿದ್ರೆ ಶಾಸಕರಾದ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಪೊನ್ನುರಾಜ್, ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ, ಸಿಇಒ ಪಿ. ಶಿವಶಂಕರ್, ಎಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಹಾಗೂ ಕೆಡಿಪಿ ಅನುಷ್ಠಾನ ಪರಿಶೀಲನಾ ಸಮಿತಿಗೆ ನಾಮ ನಿರ್ದೇಶನ ಗೊಂಡಿರುವ ಕಸ್ತೂರಿ ಪಂಜ,ಸತೀಶ ಕುಂಪಲ, ರತ್ನಾಕರ ಜೈನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ದ.ಕ. ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿ: 5 ಗ್ರಾ. ಪಂ. ಗಳಲ್ಲಿ ಪೈಲೆಟ್ ಪ್ರಾಜೆಕ್ಟ್

ಮಂಗಳೂರು, ಜೂ.21: ಅತಿವೇಗವಾಗಿ ಬೆಳೆಯುತ್ತಿರುವ ನಗರೀಕರಣದಿಂದ ತ್ಯಾಜ್ಯ ವಿಲೇವಾರಿ ಆಡಳಿತಕ್ಕೆ ಸವಾಲಾಗಿರುವ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ಶ್ರಮವಹಿಸುತ್ತಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರಪಾಲಿಕೆ ತ್ಯಾಜ್ಯ ವಿಲೇಗೆ ಹಲವು ಕ್ರಮಗಳನ್ನು ಕೈಗೊಂಡಿರುವುದಲ್ಲದೆ ಅನುಷ್ಠಾನಕ್ಕೆ ತಂದು ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ನಿಟ್ಟಿನಲ್ಲಿ ಪ್ರಶಂಸಾರ್ಹ ಮಾದರಿಗಳನ್ನು ರೂಪುಗೊಳಿಸಿದ್ದು, ಜಿಲ್ಲೆಯ 5 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪೈಲೆಟ್ ಯೋಜನೆಯಾಗಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ರೂಪಿಸಲು ಯೋಜಿಸಿದೆ.

ಜೂನ್ 21ರಂದು ಮೈಸೂರಿನ ಭಗೀರಥ ಸಂಸ್ಥೆ ಗೋಳ್ತ ಮಜಲಿನಲ್ಲಿ ಈ ಸಂಬಂಧ ಗ್ರಾಮ ಪಂಚಾಯಿತಿಗೆ ತರಬೇತಿಯನ್ನು ಆರಂಭಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪಿ. ಶಿವಶಂಕರ್ ಅವರು ಮಾಹಿತಿ ನೀಡಿದರು.
ಯೋಜನೆ ಗಳನ್ನು ಆರಂಭಿಸುವಾಗ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸಕ್ರಿಯವಾಗಿ ಆ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವ ಮೇಲೆ ಯೋಜನೆಯ ಫಲಾಫಲಗಳು ಅಡಗಿವೆ. ಹಾಗಾಗಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿ ಸಿದಂತೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಆರಂಭಿಸುತ್ತಿದ್ದು ಜನರ ಪಾಲ್ಗೊಳ್ಳು ವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲೆಯ ಗೋಳ್ತಮಜಲು, ಧರ್ಮಸ್ಥಳ, ಕಟೀಲು/ಕಿನ್ನಿಗೋಳಿ,ಕೊಣಾಜೆ,ಸುಬ್ರಮಣ್ಯ ಪ್ರದೇಶಗಳಲ್ಲಿ ಇಂತಹ ಘಟಕಗಳನ್ನು ಆರಂಭಿಸಲು ಪೈಲೆಟ್ ಯೋಜನೆ ಗಳನ್ನು ರೂಪಿಸ ಲಾಗಿದೆ ಎಂದರು.
ಈ ಸಂಬಂಧ ಸಾಕಷ್ಟು ಪೂರ್ವ ತಯಾರಿಯನ್ನು ಜಿಲ್ಲಾ ಪಂಚಾಯತ್ ನಡೆಸಿದ್ದು, ಜಿಲ್ಲಾ ನೆರವು ಘಟಕದ ಅಧಿಕಾರಿಗಳ ತಂಡ ಈ ನಿಟ್ಟಿನಲ್ಲಿ ಮೈಸೂರಿನ ಜೆ ಎಸ್ ಎಂ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಈ ಯೋಜನೆ ಗಳನ್ನು ಸ್ಥಳೀಯ ವಾತಾವರಣಕ್ಕೆ ಹೊಂದಿ ಕೊಳ್ಳುವಂತೆ ಸಣ್ಣಪುಟ್ಟ ಮಾರ್ಪಾಟುಗಳನ್ನು ಮಾಡಿ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಿದೆ.
ಜಪಾನ್ ಮೂಲದ ಜೆ ಎಂ ಎಸ್ ಟೆಕ್ನಾಲಜಿ ಮೈಸೂರಿನಲ್ಲಿ ಟ್ರೀಟ್ ಮೆಂಟ್ ಪ್ಲಾಂಟ್ನ್ನು ಆರಂಭಿಸಿದ್ದು ಮಲಿನ ಕೊಳಗಳ ನೀರನ್ನು ಶುದ್ಧೀಕರಿಸಿ ಮರು ಉಪಯೋಗಿಸಲು ಅರ್ಹವಾಗಿಸುವ ರೀತಿ ಪರಿವರ್ತಿಸಲಾಗಿದೆ. ಈ ಬಗ್ಗೆ ಸವಿವರ ಮಾಹಿತಿ ನೀಡಿದ ಅಸಿಸ್ಟೆಂಟ್ ಸೆಕ್ರೆಟರಿಯವರು, ಬಯೋ ಟೆಕ್ನಾಲಜಿ ಯಿಂದಾಗುವ ಅನುಕೂಲಗಳನ್ನು ವಿವರಿಸಿದರಲ್ಲದೆ, ಜೀವ ಸಂಕುಲಕ್ಕೆ ಉಪಕಾರಿಯಾಗುವ ಬ್ಯಾಕ್ಟೀರಿಯಾಗಳಿಂದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದುರ್ವಾಸನೆಯಂತೂ ಇಲ್ಲವೇ ಇಲ್ಲ. ಈ ಬ್ಯಾಕ್ಟೀರಿ ಯಾಗಳಿಗೆ ತ್ಯಾಜ್ಯ ವಸ್ತುಗಳೇ ಮುಖ್ಯ ಆಹಾರ.ಮೈಸೂರಿನಲ್ಲಿ ಮಲಿನ ಕೊಳಗಳನ್ನು ಸ್ವಚ್ಛಗೊಳಿಸಲು ಚರ್ನರ್ಸ್ (ಕಡೆಗೋಲು ಮಾದರಿ ಯಂತ್ರಗಳು) ಪ್ಲಾಂಟ್ಗಳಿಗೆ ಅಳವಡಿ ಸಲಾಗಿದೆ. (ಬಯೋಟೆಕ್) ಜೈವಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ ಬ್ಯಾಕ್ಟೀರಿ ಯಾಗಳು ತ್ಯಾಜ್ಯ ವಿಲೇವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ಬ್ಯಾಕ್ಟೀರಿ ಯಾಗಳು ಮಲಿನವನ್ನು ತಿಂದು ವಾತಾವರಣಕ್ಕೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಜೆ ಎಂ ಎಸ್ ನವರು ರೂಪಿಸಿದ ಜೈವಿಕ ಮಾದರಿಯಿಂದ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ದುರ್ನಾತವಾಗಲೀ, ಕಾಗೆ, ಹದ್ದುಗಳಾಗಲಿ ಇಲ್ಲ. ಇಲ್ಲಿ ಉತ್ಪಾದನೆಯಾದ ಗೊಬ್ಬರಗಳನ್ನು ಇಫ್ಕೋ ಸಂಸ್ಥೆ ಕೆ ಜಿ ಒಂದಕ್ಕೆ 4 ರೂ.ಗಳಂತೆ ಖರೀದಿಸುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ತ್ಯಾಜ್ಯ ಪರಿಹಾರಕ್ಕೆ ಜೆ ಎಂ ಎಸ್ ಕಂಪೆನಿ ಪರಿಹಾರ ಕಂಡು ಹುಡುಕಿದೆ. ಘಟಕಗಳ ಕಾರ್ಯ ನಿರ್ವಹಣೆಗೆ ವಿದ್ಯುತ್ ನ ಅಗತ್ಯವಿಲ್ಲ. ಅತಿ ಕಡಿಮೆ ಕಾರ್ಮಿಕ ಶಕ್ತಿ ಬಳಕೆ. ತಂತ್ರಜ್ಞರ ಅಗತ್ಯವಿಲ್ಲ. ಪರಿಸರ ಸ್ನೇಹಿ. ಪ್ರಕ್ರಿಯೆಯ ಬಳಿಕ ಮತ್ತೆ ಕಲ್ಮಶಗಳನ್ನು ವಾತಾವರಣಕ್ಕೆ ಬಿಡುವ ಸಾಧ್ಯತೆಗಳಿಲ್ಲವೇ ಇಲ್ಲ. ನಿರ್ವಹಣೆ ವೆಚ್ಚ ಅತಿ ಕಡಿಮೆ; ಆದರೆ ಈ ಪ್ರಕ್ರಿಯೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಆಸಕ್ತಿ ಕಳೆದು ಕೊಳ್ಳದಿರುವಿಕೆ ಅತಿ ಮುಖ್ಯವಾಗಿದ್ದು ಕಸದಿಂದ ರಸ ಇಂದಿನ ಅಗತ್ಯವೂ ಆಗಿದೆ.
ಕಸದ ವಿಲೇವಾರಿ ಸಂಗ್ರಹಕ್ಕೆ ಸ್ಥಳ ನಿಗದಿಪಡಿಸುವ ವಿಷಯದಲ್ಲಿ ಜಿಲ್ಲೆಯಲ್ಲಿ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತ ವಾಗುತ್ತಿರುವ ಹಿನ್ನಲೆಯಲ್ಲಿ ಇಂತಹ ದುರ್ವಾಸ ನೆಯಿಂದ ಮುಕ್ತ ತ್ಯಾಜ್ಯ ಘಟಕಗಳು ಜನಸ್ನೇಹಿ ಯಾಗಲು ಸಾಧ್ಯ. ಆದರೆ ನಿರಂತರತೆ ಮತ್ತು ಜನರ ಸಹಕಾರ ಯೋಜನೆಯ ಯಶಸ್ಸಿಗೆ ಅಗತ್ಯ ಎಂದು ಸಿಇಒ ಅವರ ಅಭಿಪ್ರಾಯ. ಯೋಜನೆಗಳು ತಳಮಟ್ಟದಿಂದ ರೂಪುಗೊಂಡದ್ದು ಇನ್ನೊಂದು ಪ್ರಶಂಸಾರ್ಹ ಸಂಗತಿ.

Sunday, June 20, 2010

ಸಾಮಾಜಿಕ ಜಾಗೃತಿಯಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ: ಡಾ. ಕೆ.ಎನ್. ವಿಜಯಪ್ರಕಾಶ್

ಮಂಗಳೂರು, ಜೂನ್.20:ಕಣ್ತುಂಬ ಕನಸುಗಳನ್ನು ತುಂಬಿ ವಿದ್ಯಾರ್ಜನೆಗೆ ಹೋಗುವ ಎಳೆಯ ಮಕ್ಕಳು ಒಂದೆಡೆಯಾದರೆ, ಆಸೆ ಕಂಗಳೊಂದಿಗೆ ಈ ಮಕ್ಕಳನ್ನು ನೋಡುವ ಎಳೆಯ ಮಕ್ಕಳು ಹಲವು. ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇಂತಹ ಚಿತ್ರಗಳು ಸಾಮಾನ್ಯ; ಆದರೆ ಇಂತಹ ಅಸಮಾನ ಸಮಾಜ ವ್ಯವಸ್ಥೆ ಸುಧಾರಣೆಗೆ ಮಾಹಿತಿ ಕೊರತೆ, ಕಾನೂನಿನ ಅರಿವಿಲ್ಲದಿರುವಿಕೆ ಮುಖ್ಯ ಕಾರಣ ಎಂದು ಮಂಗಳೂರು ಮಹಾ ನಗರಪಾಲಿಕೆ ಆಯುಕ್ತ ಡಾ. ಕೆ.ಎನ್. ವಿಜಯಪ್ರಕಾಶ್ ಹೇಳಿದರು.

ಅವರಿಂದು ವಾರ್ತಾ ಇಲಾಖೆ, ಜೆಸಿಐ ಸುರತ್ಕಲ್ ಮತ್ತು ಕಾರ್ಮಿಕ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ 'ಬಾಲ ಕಾರ್ಮಿಕತೆ-ಸಾಮಾಜಿಕ ಅನಿಷ್ಟ' ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಸುರತ್ಕಲ್ ಗಣೇಶುಪುರ ಕೈಕಂಬದ ಸಮುದಾಯ ಭವನದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಮಾಜಿಕ ಸಮಾನತೆ ಗಾಗಿ ಸರಕಾರ ಉಚಿತ, ಕಡ್ಡಾಯ ಶಿಕ್ಷಣ, ಉಚಿತ ವಸತಿ, ವಸತಿ ಸಹಿತ ಶಾಲೆಗಳು ಸೇರಿದಂತೆ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ. ಅರ್ಹರು ಇವುಗಳ ಸದ್ಬಳಕೆ ಮಾಡಬೇಕು. ಉತ್ತಮ ಶಿಕ್ಷಣ, ಸಂಸ್ಕಾರದಿಂದ ಉನ್ನತ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಸಾಮಾಜಿಕ ಆಂದೋಲನ ಮತ್ತು ಮಾಹಿತಿ ಹಾಗೂ ಜಾಗೃತಿಯಿಂದ ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಸಾಧ್ಯ ಎಂದರು.ಜೆಸಿಐ ಸುರತ್ಕಲ್ ನ ಅಧ್ಯಕ್ಷ ಶ್ರೀ ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಹಿರಿಯ ಕಾರ್ಮಿಕ ನಿರೀಕ್ಷಕ ಶ್ರೀ ಸತ್ಯ ನಾರಾಯಣ ಅವರು, ಶಿವಕಾಶಿಯ ಪಟಾಕಿ ಉದ್ಯಮದಲ್ಲಿ ಸಂಭವಿಸಿದ ಅವಘಡದಲ್ಲಿ 39 ಮಕ್ಕಳು ದುರ್ಮರಣಕ್ಕೀಡಾದ ಬಳಿಕ ಮಾಧ್ಯಮ ಹಾಗೂ ಅಲ್ಲಿನ ಸ್ಥಳೀಯ ವಕೀಲರೊಬ್ಬರ ಹೋರಾಟ ಬಾಲಕಾರ್ಮಿಕ ಪದ್ಥತಿ ನಿರ್ಮೂಲನೆಗೆ ಹಾಗೂ ಈ ಸಂಬಂಧ ಸದೃಢ ಕಾನೂನು ರೂಪು ಗೊಂಡದ್ದನ್ನು ವಿವರಿಸಿದರು. ಬಾಲ ಕಾರ್ಮಿಕ ಪದ್ಧತಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಕಾರಣ ವಾಗಿದ್ದು ಕಡ್ಡಾಯ ಶಿಕ್ಷಣ ಇಂದು ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆಗೆ ಕಾರಣವಾಗಿದೆ ಎಂದರು. ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒಂದು ಸವಾಲಾಗಿ ಪರಿಣಮಿಸಿದ್ದು, ಬಾಲ ಕಾರ್ಮಿಕರನ್ನು ನೇಮಿಸುವವರ ವಿರುದ್ಧ ಕಾನೂನು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪೂರಕ ವಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿ ಯೊಂದೇ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎಂದರು. ಎಂ ಆರ್ ಪಿ ಎಲ್ ನ ಎಂಪ್ಲಾಯಿಸ್ ಯೂನಿಯನ್ ನ ಅಧ್ಯಕ್ಷ ಶ್ರೀ ದಯಾನಂದ ಪ್ರಭು, ಜೆ. ಸಿ. ದತ್ತಾತ್ರೇಯ, ಜೆ.ಸಿ ನಿಕಟಪೂರ್ವ ಅಧ್ಯಕ್ಷ ಸೀತಾರಾಮ್ ರೈ ವೇದಿಕೆಯಲ್ಲಿದ್ದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಇಲಾಖೆಯ ಸಂಗೀತ ಕಲಾವಿದ ಜನಾರ್ಧನ ಮತ್ತು ತಂಡದಿಂದ ಬಾಲ ಕಾರ್ಮಿಕ ವಿರೋಧಿ ನೀತಿಯ ಬಗ್ಗೆ ಹಾಡುಗಳನ್ನು ಹಾಡಿದರು. ಕರಾವಳಿ ಜಾನಪದ ತಂಡದಿಂದ ಬೀದಿ ನಾಟಕ ಏರ್ಪಡಿಸಲಾಗಿತ್ತು. ಜೆಸಿ ಪ್ರಶಾಂತ್ ಧನ್ಯವಾದ ಅರ್ಪಿಸಿದರು.

Thursday, June 17, 2010

ಕೃತಕ ನೆರೆಗೆ ಕಾರಣವಾದ ಅತಿಕ್ರಮಣ ತೆರವು

ಮಂಗಳೂರು, ಏಪ್ರಿಲ್ 17:ಮಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಕಣ್ಣೂರು, ಪಡೀಲು, ಅಡ್ಯಾರು, ಉಜ್ಜೋಡಿ ಪ್ರದೇಶಗಳು ನೀರಿನಿಂದಾ ವೃತವಾಗಿದ್ದು, ನಿವಾಸಿಗಳ ತುರ್ತು ಕರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ತಕ್ಷಣವೇ ನೆರೆ ಪೀಡಿತ ಜಾಗಗಳಿಗೆ ತೆರಳಿ ಪರಿಶೀಲನೆ ನಡೆಸಿ ನೀರು ಹೋಗಲು ನಿರ್ಮಿಸಿದ್ದ ತೋಡುಗಳ ಮೇಲಿನ ನಿರ್ಮಾಣ ತೆರವಿಗೆ ಕ್ರಮ ಕೈಗೊಂಡರು.
ಉಜ್ಜೋಡಿಯ ನಿರ್ಮಲಾ ಸರ್ವಿಸ್ ಸ್ಟೇಷನ್, ರೋನ್ಸನ್ ಸರ್ವಿಸ್ ಸ್ಟೇಷನ್ ಚರಂಡಿಯನ್ನು ಅತಿಕ್ರಮಿಸಿ ನಿರ್ಮಾಣ ಮಾಡಿದ್ದ ಅತಿಕ್ರಮಗಳನ್ನು ಪಾಲಿಕೆಯಿಂದ ಜೆಸಿಬಿ ತರಿಸಿ ಒಡೆಸಿ ಹಾಕಿಸಿದರಲ್ಲದೆ, ತೋಡುಗಳನ್ನು ತೆರವು ಗೊಳಿಸಿ ನೀರು ಹೋಗಲು ಅವಕಾಶ ಮಾಡಿ ಕೊಡಲಾಯಿತು. ಇಂತಹುದೇ ಅತಿಕ್ರಮಣ ಗಳಿಂದ ಹಲವು ಕಡೆ ನೀರು ನಿಲ್ಲುತ್ತಿದ್ದು, ಪಡೀಲು ಅಡ್ಯಾರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ಮಾಣ ದಿಂದಲೂ ಸರಾಗ ನೀರು ಹರಿಯಲು ತೊಂದರೆ ಯಾಗಿದ್ದು, ಪ್ರಾಧಿಕಾ ರದವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ನಿರ್ದೆಶಿಸಿದರು. ಮೇಯರ್ ರಜನಿ ದುಗ್ಗಣ್ಣ ಈ ಸಂದರ್ಭದಲ್ಲಿ ಜೊತೆಗಿದ್ದು ಜನತೆಯ ಸಮಸ್ಯೆ ಆಲಿಸಿದರು.

Wednesday, June 16, 2010

ನಗರ ಹಸಿರೀಕರಣ: ನಾಗರೀಕರಿಗೆ ಉಚಿತ ಗಿಡ

ಮಂಗಳೂರು,ಜೂ.16:ನಗರೀ ಕರಣದಿಂದ ವಾತಾ ವರಣದ ಉಷ್ಣತೆ ಹೆಚ್ಚುತ್ತಿದ್ದು, ಪರಿಸರ ಸಮತೋ ಲನವನ್ನು ಕಾಯ್ದು ಕೊಳ್ಳಲು ಅರಣ್ಯ ಇಲಾಖೆ 20,000 ಗಿಡಗಳನ್ನು ನಗರದಲ್ಲಿ ನೆಟ್ಟು ಬೆಳೆಸಲು ಉದ್ದೇಶಿಸಿದೆ ಎಂದು ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ವಿಜಯ ಕುಮಾರ್ ತಿಳಿಸಿದರು.
ಅವರಿಂದ ಈ ಸಂಬಂಧದ ಪತ್ರಿಕಾ ಗೋಷ್ಠಿಯಲ್ಲಿ ನಾಗರೀಕರ ಸಹಕಾರವನ್ನು ಕೋರಿದ್ದು, ನಗರದಲ್ಲಿ ಮರಗಳನ್ನು ಬೆಳೆಸಲು 20 ವಿಧದ ಸಸಿಗಳನ್ನು ಸಿದ್ದಪಡಿಸಲಾಗಿದ್ದು, ಬಾದಾಮ, ಹಲಸು,ಹೆಬ್ಬಲಸು, ದೇವದಾರು, ಧೂಪ ಹಾಗೂ ಹೂಮರಗಳಿವೆ.
ಶಾಲಾ ಕಾಲೇಜು ಗಳಲ್ಲಿ, ಸಂಸ್ಥೆಗಳ ಆವರಣದಲ್ಲಿ, ಕೈಗಾರಿಕಾ ಆವರಣ ಗಳಲ್ಲಿ ಗಿಡಗಳನ್ನು ಬೆಳೆಸ ಲಾಗುವುದು. ಮಹಾ ನಗರ ಪಾಲಿಕೆ ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೋರಿದೆ. ಪಡೀಲು ನರ್ಸರಿಯಲ್ಲಿ ಗಿಡಗಳು ಲಭ್ಯವಿದೆ. ಅರಣ್ಯ ಇಲಾಖೆ ಬಳಿ ನಾಗರೀಕರು ಸಸಿಗಳನ್ನು ಕೇಳಿದರೆ ತಕ್ಷಣದಲ್ಲೇ ಒದಗಿಸ ಲಾಗುವುದು ಎಂದರು.

Tuesday, June 15, 2010

ಕೃತಕ ನೆರೆ ತಡೆಗೆ ಮನಪಾ ಸನ್ನದ್ದ

ಮಂಗಳೂರು,ಜೂನ್15:ಮಳೆಯಿಂದಾಗಿ ನಗರದಲ್ಲಿ ಉಂಟಾಗುವ ಕೃತಕ ನೆರೆ ಸಮಸ್ಯೆಯನ್ನು ಪರಿಹರಿಸಲು ಪಾಲಿಕೆ ಜಂಟಿ ಆಯುಕ್ತರ ನೇತ್ರತ್ವದಲ್ಲಿ ಟಾಸ್ಕ್ ಫೊರ್ಸ್ ರಚಸಿದ್ದು, ದಿನದ 24 ಗಂಟೆಯೂ ಈ ಕಾರ್ಯಪಡೆ ನಾಗರಿಕರ ನೆರವಿಗೆ ಸ್ಪಂದಿಸಲಿದೆ ಎಂದು ಮಂಗಳೂರು ಮಹಾ ನಗರ ಪಾಲಿಕಾ ಆಯುಕ್ತರಾದ ಡಾ. ವಿಜಯ ಪ್ರಕಾಶ್ ಹೇಳಿದರು.
ಈ ಸಂಬಂಧ ಇಂದು ಮೇಯರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಕರೆದು ತುರ್ತು ಸಂದರ್ಭಗಳಲ್ಲಿ ಸಮನ್ವ ಯತೆಯಿಂದ ಕರ್ತವ್ಯ ನಿರ್ವಹಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಅಗ್ನಿ ಶಾಮಕ ಪಡೆಯನ್ನು ಬೆಂಕಿ ಆರಿಸಲು ಮಾತ್ರ ಬಳಸದೆ, ನಾಗರಿಕರು ಮನೆಯೊಳಗೆ ನೀರು ನುಗ್ಗಿದ ಸಂದರ್ಭಗಳಲ್ಲಿ ಕೂಡ ನೆರವನ್ನು ಪಡೆಯ ಬಹುದು.ಎಲ್ಲಾ ಪ್ರದೇಶಗಳಲ್ಲಿ ಪಾಲಿಕೆಯ ಆರೊಗ್ಯ ಇಲಾಖೆಯ ಏಳು ವೈದ್ಯರ ಜೊತೆಗೆ, ಜಿಲ್ಲಾ ಕುಟುಂಬ ಮತ್ತು ಆರೊಗ್ಯ ಇಲಾಖಾ ವೈದ್ಯರ ನೆರವನ್ನು ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.ಬೆಂಗ್ರೆ ಪ್ರದೇಶದಲ್ಲಿ ವೈದ್ಯರ ಪ್ರತ್ಯೇಕ ತಂಡವನ್ನು ನಿಯೋಜಿಸಿರುವುದಾಗಿ ಆಯುಕ್ತರು ಹೇಳಿದರು. ಮೀನುಗಾರಿಕಾ ಇಲಾಖೆಯಿಂದ ಉಳ್ಳಾಲ, ಪಣಂಬೂರು, ಸಸಿಹಿತ್ತಲು ಪ್ರದೇಶ ಗಳಲ್ಲಿ ವಿಶೇಷ ದೋಣಿಗಳನ್ನು ಮತ್ತು ಜೀವ ರಕ್ಷಕರನ್ನು ಸನ್ನದ್ದ ವಾಗಿಡಲಾಗಿದೆ ಎಂದು ಮೀನುಗಾರಿಕಾ ಉಪ ನಿರ್ದೇಶಕರು ತಿಳಿಸಿದರು.ಪೋಲಿಸ್,ಆರ್ ಟಿ ಓ, ಕೆ ಎಸ್ ಆರ್ ಟಿ ಸಿ,ಮೆಸ್ಕಾಂ, ಸೇರಿದಂತೆ ಎಲ್ಲಾ ಇಲಾಖೆಗಳು ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಬೇಕೆಂದು ಆಯುಕ್ತರು ಮನವಿ ಮಾಡಿದರು. ಉಪಮೇಯರ್, ಪಾಲಿಕೆ ಅಧಿಕಾರಿಗಳು,ಗೃಹ ರಕ್ಷಕ ದಳ ಮತ್ತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ದ.ಕ : 235 ಹೆಕ್ಟೇರ್ ವಿಸ್ತೀರ್ಣದಲ್ಲಿ ಭತ್ತ ನಾಟಿ

ಮಂಗಳೂರು,ಜೂ.15:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35,000 ಹೆಕ್ಟೇರ್ ಭತ್ತ ಕೃಷಿ ಪ್ರದೇಶ ವಿಸ್ತೀರ್ಣವಿದ್ದು, ಪ್ರಸಕ್ತ ಮುಂಗಾರು ಹಂಗಾಮಿನ ಆರಂಭದಲ್ಲಿ 235 ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ ನಾಟಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಪದ್ಮಯ ನಾಯ್ಕ್ ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ 32,583 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು ಪ್ರಸಕ್ತ ಸಾಲಿನಲ್ಲೂ ಭತ್ತದ ಕೃಷಿ ಈ ವ್ಯಾಪ್ತಿಯಲ್ಲಿ ಬೆಳೆಯ ಬಹುದು ಎಂದು ಅಂದಾಜಿ ಸಲಾಗಿದೆ. ಮಂಗಳೂರಿನಲ್ಲಿ 12,500 ಗುರಿ ಇದ್ದು, ಇಂದಿನವರೆಗೆ 126 ಹೆ., ಬಂಟ್ವಾಳದಲ್ಲಿ 9,600 ಎಕರೆಯಲ್ಲಿ ಭತ್ತ ಕೃಷಿ ಬೆಳೆಯುವ ಗುರಿ ಇದ್ದು, 28ಹೆ. ಇಂದಿನವರೆಗೆ ಸಾಧನೆಯಾಗಿದೆ. ಬೆಳ್ತಂಗಡಿಯಲ್ಲಿ 8,510 ವ್ಯಾಪ್ತಿ ಪ್ರದೇಶವಿದ್ದು, 63 ಹೆಕ್ಟೇರ್ ನಲ್ಲಿ ಬೆಳೆಯಲಾಗಿದೆ. ಪುತ್ತೂರು ಗುರಿ 3,900 ರಲ್ಲಿ 12 ಹೆಕ್ಟೇರ್ ನಲ್ಲಿ ನಾಟಿಯಾಗಿದೆ. ಸುಳ್ಯದಲ್ಲಿ 490 ಹೆಕ್ಟೇರ್ ವಿಸ್ತೀರ್ಣವಿದ್ದು, 6 ಹೆಕ್ಟೇರ್ ನಲ್ಲಿ ಬೆಳೆಯ ಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ರೈತರು ಸಸಿಮಡಿ ತಯಾರಿ ನಡೆಸಿದ್ದು, ಕೆಲವು ಕಡೆ ನಾಟಿ ಪ್ರಗತಿಯಲ್ಲಿದೆ. ಜುಲೈ ಅಂತ್ಯದಿಂದ ಆಗಸ್ಟ್ ಪ್ರಥಮ ವಾರದವರೆಗೂ ನಾಟಿ ಕಾರ್ಯ ಪ್ರಗತಿ ಯಲ್ಲಿರುತ್ತದೆ. ಈಗಾಗಲೇ ಸಬ್ಸಿಡಿಯಡಿ 294.35 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ಒದಗಿಸಿದ್ದು, ಬಿತ್ತನೆ ಬೀಜದ ಕೊರತೆಯಿಲ್ಲ ಎಂದಿರುವ ಅವರು, ಜಿಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ತಾಲೂಕು ಸಹಾಯಕ ನಿರ್ದೇಶಕರ ಕಚೇರಿಗಳನ್ನು ರೈತರು ಬಿತ್ತನೆ ಬೀಜಕ್ಕಾಗಿ ಸಂಪರ್ಕಿಸಬಹುದು ಎಂದಿದ್ದಾರೆ. ಮುಖ್ಯ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (ಅಕ್ಕಿ) ಸಹಾಯ ಧನದಡಿ ಬಿತ್ತನೆ ಬೀಜ ಲಭ್ಯವಿದೆ.
ರೈತರಿಗೆ ಸಲಹೆ: ರೈತರು ಮುಖ್ಯ ಗದ್ದೆ ತಯಾರಿಗೆ ಕಳೆ ಸಸ್ಯಗಳನ್ನು ಪೂರ್ತಿಯಾಗಿ ಮಣ್ಣಿಗೆ ಸೇರುವಂತೆ ನೋಡಿ ಕೊಳ್ಳುವುದರಿಂದ ಕಳೆಯ ಬಾಧೆಯನ್ನು ತಡೆಯಬಹುದು. ಕೊಟ್ಟಿಗೆ ಗೊಬ್ಬರ ಸೇರಿಸುವುದಾದಲ್ಲಿ ಕೊನೆಯ ಉಳುಮೆಗೆ ಮೊದಲು ಸೇರಿಸಬೇಕು. ಕಾಂಪೋಸ್ಟ್ ಬಳಕೆ ಉತ್ತಮ. ಬಿತ್ತನೆ ಬೀಜವನ್ನು ಸಸಿ ಮಾಡಿ ಮಾಡುವ ಮೊದಲು ಕಾರ್ಬನ್ ಡೈಝಿಮ್ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಳಸಿದ್ದಲ್ಲಿ ಶಿಲೀಂಧ್ರ ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ.
ಸಸಿಮಡಿಯಾದ 21 ದಿನಗಳಲ್ಲಿ ನಾಟಿಗೆ ಭತ್ತದ ಸಸಿಗಳನ್ನು ಕಿತ್ತು ನಾಟಿ ಮಾಡಬೇಕು; ಪ್ರತೀ ಗುಣಿಗೆ 2ರಿಂದ 3ಸಸಿಗಳನ್ನು ತೇಲಿಸಿ ನಾಟಿ ಮಾಡಬೇಕು;ಮುಖ್ಯ ಗದ್ದೆಗೆ ಅರಳಿದ ಚಿಪ್ಪು ಸುಣ್ಣವನ್ನು ಎಕರೆಗೆ 200 ಕೆ ಜಿಯಂತೆ ಬಳಸಬಹುದು ಎಂದು ಸಲಹೆ ನೀಡಿರುವ ಅವರು, ಶಿಲಾರಂಜಕವನ್ನು ಬಳಕೆ ಮಾಡುವುದಾದಲ್ಲಿ ಸುಣ್ಣದ ಬಳಕೆ ಅವಶ್ಯವಿಲ್ಲ ಎಂದಿದ್ದಾರೆ.ಕೂಲಿಯಾಳುಗಳ ಕೊರತೆ ಎದುರಿಸುತ್ತಿರುವ ಈ ದಿನಗಳಲ್ಲಿ ಪವರ್ ಟಿಲ್ಲರ್, ಕಳೆತೆಗೆಯುವ ಯಂತ್ರ, ಸಿಂಪಡಣಾ ಯಂತ್ರಗಳನ್ನು ಬಳಸಲು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಿದರೆ ಈ ಸವಲತ್ತುಗಳಿಗೆ ಅನುದಾನ ಒದಗಿಸಿದಾಗ ನೆರವು ಶೀಘ್ರವಾಗಿ ಬಳಸಲು ಸಾಧ್ಯವಿದೆ.

Monday, June 14, 2010

ಪ್ರಾಕೃತಿಕ ವಿಕೋಪ ನಿರ್ವಹಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ಸಭೆ

ಮಂಗಳೂರು,ಜೂ.14:ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಮಳೆಗಾಲ ಆರಂಭದ 10 ರಿಂದ 15 ದಿನಗಳ ಕಾಲ ಉದ್ಭವಿಸುವ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಏರ್ಪಡಿಸ ಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜನವಸತಿ ಪ್ರದೇಶದಲ್ಲಿ ನೆರೆ ಸಂಭವಿಸಿದಾಗ ಹಾಗೂ ಎನ್ ಎಚ್ ಐ ರಸ್ತೆಗಳ ಕಾಮಗಾರಿ ಯಿಂದಾಗಿರುವ ಕೃತಕ ನೆರೆ ಬಗ್ಗೆ, ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಾಗ ಅಧಿಕಾರಿಗಳು ಸ್ಪಂದಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲಾಧಿ ಕಾರಿಯವರ ಕಚೇರಿಯಲ್ಲಿ ಈಗಾಗಲೇ ಜಿಲ್ಲಾ ವಯರ್ ಲೆಸ್ ಕಂಟ್ರೋಲ್ ರೂಂ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ಬರುವ ಅಹವಾಲು, ಸಂದೇಶಗಳನ್ನು ಸ್ವೀಕರಿಸಿ, ಮುತುರ್ವಜಿಯಿಂದ ಕಾರ್ಯ ಪ್ರವೃತ್ತ ರಾಗಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಡದಿರಲು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಹಾಗೂ ಸಹಾಯಕ ದಂಡಾಧಿಕಾರಿಗಳ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.ಮಂಗಳೂರು ನಗರ ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶಗಳಲ್ಲಿ ಸಂಭವಿಸುವ ಕೃತಕ ನೆರೆ ಹಾನಿ ನಿಭಾಯಿಸಲು ಅಂತಹ ಪ್ರದೇಶಗಳನ್ನು ಗುರುತಿಸಿ ಏರಿಯಾವೈಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗಂಜಿ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಂಡಿದೆ. 3 ಹೊಸ ದೋಣಿಗಳನ್ನು ಜಿಲ್ಲಾಡಳಿತ ಖರೀದಿಸಿದೆ. 75 ಹೋಮ್ ಗಾರ್ಡ್ ನವರನ್ನು ಈಗಾಗಲೇ ನೇಮಿಸಲಾಗಿದೆ. ಅಗ್ನಿ ಶಾಮಕ ದಳ ಹಾಗೂ ಹೋಂ ಗಾರ್ಡ್ಸ್, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಮೆಸ್ಕಾಂ ಜೊತೆ ಸಮನ್ವಯ ಸಾಧಿಸಿ ಜನಜೀವನಕ್ಕೆ ತೊಂದರೆ ಯಾಗದಂತೆ ಕಾರ್ಯೋನ್ಮುಖವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ರಕ್ಷಣಾ ಕಾರ್ಯಕ್ಕೆ ದೋಣಿಗಳ ಜೊತೆ ಟ್ರಕ್ ನ ಅಗತ್ಯವಿದೆ;ಶಿರಾಡಿಯಲ್ಲಿ ಕ್ರೈನ್ ಮತ್ತು ಜೆಸಿಬಿ ಯೊಂದನ್ನು ಸಿದ್ಧಪಡಿಸಿ ಇರಿಸಲು ಸಚಿವರು ಸೂಚಿಸಿದರು. ಸುಳ್ಯ,ಪುತ್ತೂರುಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪುತ್ತೂರು ಸಹಾಯಕ ದಂಡಾಧಿ ಕಾರಿಯವರಿಗೆ ಸಲಹೆ ನೀಡಲಾಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಲಮಿತಿ ನಿಗದಿಪಡಿಸಿ, ಜನರಿಗೆ ತೊಂದರೆ ಯಾಗದಂತೆ ತೀವ್ರ ಆಸಕ್ತಿಯಿಂದ ಕರ್ತವ್ಯ ನಿರ್ವಹಿಸಿ ಎಂದು ಸಚಿವರು ಸೂಚಿಸಿದರು. ಚತುಷ್ಪಥ ರಸ್ತೆ ನಿರ್ಮಾಣದಿಂದ ಆಗಿರುವ ತೊಂದರೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.ನಂತೂರು ರಾಷ್ಟ್ರೀಯ ಹೆದ್ದಾರಿ 13 ಕಾಮಗಾರಿಗೆ ಸಂಬಂಧಿಸಿದಂತೆ ಇದ್ದ ಅಡೆತಡೆಗಳು ನಿವಾರಿಸಲ್ಪಟ್ಟಿದ್ದು ಕೊರಗ ಮನೆಗಳಿಗೆ ಪರಿಹಾರ ಹಾಗೂ ಸ್ಥಳಾಂತರದ ಬಗ್ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಆಯುಕ್ತರು ಡಾ. ವಿಜಯ ಪ್ರಕಾಶ್, ಸಿಇಒ ಶಿವಶಂಕರ್, ಸಹಾಯಕ ದಂಡಾಧಿಕಾರಿಗಳು, ತಹಸೀಲ್ದಾರರು, ಪಾಲಿಕೆ ಸ್ಥಾಯಿ ಸಮಿತಿ ಸದಸ್ಯರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮೀನುಗಾರಿಕಾ ಬಂದರು 3 ನೇ ಹಂತ ಯೋಜನೆ 57 ಕೋಟಿ ರೂ.; ಸಚಿವ ಪಾಲೇಮಾರ್

ಮಂಗಳೂರು,ಜೂನ್ 14:ಮೀನುಗಾರರ ಮೂಲಭೂತ ಸೌಕರ್ಯಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು,ಮಂಗಳೂರು ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ದಿಗೆ ವಿಶೇಷ ಯೊಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ರಾಜ್ಯ ಬಂದರು,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಹೇಳಿದರು.

ಬೆಂಗ್ರೆ ಪ್ರದೇಶದಿಂದ ಮಂಗಳೂರು ನಗರಕ್ಕೆ ಫೆರ್ರಿ ಸೌಲಭ್ಯ ಒದಗಿ ಸುತ್ತಿರುವ ಬೆಂಗ್ರೆ ಮಹಾ ಜನಸಭಾ ತನ್ನ ರಜತಾ ಮಹೋ ತ್ಸವದ ಆಚರಣೆಯ ಸಂದರ್ಭದಲ್ಲಿ 28 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 'ಜನನಿ ಗಂಗಾ' ಪ್ರಯಾಣಿಕರ ಬೋಟನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವರು,ಮಂಗಳೂರು ಮೀನುಗಾರಿಕಾ ಬಂದರಿನ ಮೂರನೇ ಹಂತದ ವಿಸ್ತರಣಾ ಯೋಜನೆಯನ್ನು ಸಿದ್ದಪಡಿಸಲಾಗಿದೆ. 57 ಕೋಟಿ ರೂಪಾಯಿಗಳ ಯೋಜನೆಯನ್ನು ಅನು ಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.ಶೀಘ್ರದಲ್ಲೇ ಈ ಕಾಮಗಾರಿ ಆರಂಭ ವಾಗಲಿದೆ ಎಂದರು.ಬೆಂಗ್ರೆ ಮತ್ತು ಧಕ್ಕೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಜೆಟ್ಟಿ ನಿರ್ಮಾಣ ಮಾಡಲು 20 ಲಕ್ಷ ರೂಪಾಯಿಗಳನ್ನು ಸರ್ಕಾರ ನೀಡಿದೆ. ಈ ಎರಡು ಪ್ರದೇಶಗಳನ್ನು ಸಂಪರ್ಕಿಸುವ ಬಹು ನಿರೀಕ್ಷಿತ ತೂಗು ಸೇತುವೆ ನಿರ್ಮಾಣ ಮಾಡಲು 40 ಲಕ್ಷ ರೂಪಾಯಿ ಗಳನ್ನು ಬಿಡುಗಡೆ ಯಾಗಿದ್ದು, ಉಳಿದ ಹಣ ಹಂತ ಹಂತವಾಗಿ ನೀಡಲಾಗುವುದು ಎಂದರು. ಮನಪಾ ಸದಸ್ಯೆ ಶಕುಂತಲ ಡಿ.ಕರ್ಕೇರಾ, ಫೆರ್ರಿ ಅಧ್ಯಕ್ಷ ಚೇತನ್ ಬೆಂಗ್ರೆ,ಮಹಾ ಜನ ಸಂಘದ ಅಧ್ಯಕ್ಷ ವಿಜಯ ಬೆಂಗ್ರೆ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Sunday, June 13, 2010

ಕಡಲ್ಕೊರೆತ ತಡೆಯಲು 911 ಕೋಟಿ ರೂ.ಗಳ ವಿಶೇಷ ಯೋಜನೆ: ಸಚಿವ ಕೃಷ್ಣ ಜೆ.ಪಾಲೇಮಾರ್

ಮಂಗಳೂರು, ಜೂ. 13: ಸರ್ಕಾರ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಕಡಲ್ಕೊರೆತವನ್ನು ತಡೆಗಟ್ಟಲು ಕೇಂದ್ರ ಸರಕಾರದ ಸಹಕಾರದೊಂದಿಗೆ 911 ಕೋಟಿ ರೂಪಾಯಿಗಳ ಶಾಶ್ವತ ಯೋಜನೆಯನ್ನು ರೂಪಿಸಿದ್ದು,ಸೆಪ್ಟೆಂಬರ್ ತಿಂಗಳಿನಿಂದ ಕಾಮಾಗಾರಿ ಆರಂಭವಾಗಲಿದೆ ಎಂದು ರಾಜ್ಯ ಬಂದರು,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುರಿವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ಹೇಳಿದರು.
ಇಂದು ಉಳ್ಳಾಲ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಪತ್ರಕರ್ತರ ಜತೆ ಮಾತ ನಾಡುತ್ತಾ, ಕಳೆದ ವರ್ಷ ತಾತ್ಕಾಲಿಕವಾಗಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದ್ರದ ತಟಕ್ಕೆ ಬಂಡೆ ಕಲ್ಲು, ಗೋಣಿ ಚೀಲವನ್ನು ಹಾಕಿ ಕಡಲ್ಕೊರೆತ ತಡೆಯಲು ಪ್ರಯತ್ನಿಸಲಾಗಿತ್ತು.ಅದು ಹೆಚ್ಚಿನ ಪ್ರಯೋಜನ ಬೀರದ ಕಾರಣ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲೆಗಿತ್ತು.ಇದೀಗ ಎಡಿಬಿ ನೆರವಿನೊಂದಿಗೆ 911 ಕೋಟಿ ರೂಪಾಯಿಗಳ ಯೋಜನೆಗೆ ತಾತ್ವಿಕ ಒಪ್ಪಿಗೆ ದೊರೆತ್ತಿದೆ. ಜರ್ಮನ್ ತಾಂತ್ರಿಕತೆಯ ಈ ಯೋಜನೆಯಿಂದ ಕಡಲ್ಕೊರೆತವನ್ನು ಶಾಶ್ವತವಾಗಿ ತಡೆಗಟ್ಟಲಾಗುವುದು.ಪ್ರಥಮ ಹಂತದಲ್ಲಿ ಉಳ್ಳಾಲಕ್ಕೆ 223 ಕೋಟಿ ರೂಪಾಯಿ ಮಂಜೂರು ಮಾಡಲಾಗುತ್ತದೆ.ಮಳೆಗಾಲ ಕಳೆದ ಕೂಡಲೇ ಸೆಪ್ಟೆಂಬರಿನಿಂದ ಈ ಕಾಮಗಾರಿ ಆರಂಭ ಗೊಳ್ಳಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ 75:25 ಅನು ಪಾತದಲ್ಲಿ ನಡೆಯಲಿರುವ ಈ ಯೋಜನೆ ಅನುಷ್ಠಾನಕ್ಕೆ ಬಂದರೆ, ಉಳ್ಳಾಲ ಸಹಿತ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ಸ್ಥಳಿಯ ಶಾಸಕ ಯು. ಟಿ. ಖಾದರ್, ಉಳ್ಳಾಲ ಪುರ ಸಭೆಯ ಅಧ್ಯಕ್ಷ ಇಸ್ಮಾಯೀಲ್, ಉಪಾಧ್ಯಕ್ಷ ದಿನೇಶ್ ರೈ, ಜಿಲ್ಲಾ ಪಂಚಾ ಯತ್ ಸದಸ್ಯೆ ಸುಷ್ಮಾ ಜನಾರ್ಧನ್, ಕೌನ್ಸಿಲರ್ ಗಳಾದ ಮುಹ ಮ್ಮದ್ ಮುಕ್ಕಚೇರಿ, ಸ್ಟೆಲ್ಲಾ ಡಿಸೋಜ, ಮುಸ್ತಫಾ, ರಝಿಯಾ ಇಬ್ರಾಹಿಂ, ಕುಂಞಿಮೋನು,ಮತ್ತು ಬಂದರು ಅಧಿಕಾರಿಗಳು ಉಪಸ್ಥಿತರಿದ್ದು ಸಚಿವರಿಗೆ ಅಗತ್ಯ ಮಾಹಿತಿ ನೀಡಿದರು.

ಉಳ್ಳಾಲದಲ್ಲಿ "ಮನೆ ಬಾಗಿಲಿಗೆ ನಿಗಮ'"ಕಾರ್ಯಕ್ರಮ

ಮಂಗಳೂರು, ಜೂ. 13:ಸರ್ಕಾರ ನೀಡುವ ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಫನಾನುಭವಿಗಳು ಪಡೆದುಕೊಳ್ಳಬೇಕು ಮತ್ತು ಕ್ಲಪ್ತ ಸಮಯದಲ್ಲಿ ಮರುಪಾವತಿಸುವ ಮೂಲಕ ನಿಗಮದ ಉದ್ದೇಶಕ್ಕೆ ಸಹಕಾರ ನೀಡಬೇಕು ಎಂದು ರಾಜ್ಯ ಬಂದರು,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ಕರೆ ನೀಡಿದರು.

ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮವು ಉಳ್ಳಾಲದ ಕೋಟೆಪುರದ ಸೈಯದ್ ಮದನಿ ಶಾಲೆಯಲ್ಲಿ ಇಂದು ಹಮ್ಮಿಕೊಂಡ `ಮನೆ ಬಾಗಿಲಿಗೆ ನಿಗಮ' ಕಾರ್ಯ ಕ್ರಮದಲ್ಲಿ ಸ್ವ ಸಹಾಯ ಸಂಘಗಳ 137 ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಚೆಕ್ ವಿತರಿಸಿದರು.ಮೈಕ್ರೋ ಕ್ರೆಡಿಟ್ ಮತ್ತು ಶ್ರಮಶಕ್ತಿ ಯೋಜನೆಯಡಿ ಒಟ್ಟು 12.37 ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಿಸಿ ಮಾತನಾಡಿದ ಸಚಿವರು ಈ ಹಿಂದಿನ ಸರಕಾರಗಳು ನೀಡುತ್ತಿರುವ ಸವಲತ್ತು ಗಳಿಗಿಂತ ಬಿಜೆಪಿ ಸರಕಾರ ಹೆಚ್ಚು ನೆರವು ನೀಡುತ್ತಿದೆ.ಅದನ್ನು ಸದುಪಯೋಗ ಆಗಬೇಕು.ಆಗ ಮಾತ್ರ ಸರ್ಕಾರದ ಯೋಜನೆಗಳು ಫಲ ಪ್ರದವಾಗುತ್ತವೆ ಎಂದು ಪಾಲೆಮಾರ್ ನುಡಿದರು. ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕರ್ ರಾಜ್ಯ ಬಿಜೆಪಿ ಸರಕಾರ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಈ ಬಾರಿ ಒಟ್ಟು 251 ಕೋಟಿ ರೂಪಾಯಿ ಮಂಜೂರು ಮಾಡಿದೆ. ಅದರಲ್ಲಿ 60 ಕೋಟಿ ರೂಪಾಯಿಯನ್ನು ನಿಗಮಕ್ಕೆ ನೀಡಿದೆ. ಅದನ್ನು ರಾಜ್ಯದ 42 ಸಾವಿರ ಅಲ್ಪ ಸಂಖ್ಯಾತ ಫಲಾನು ಭವಿಗಳಿಗೆ ನೀಡಲಾಗುವುದು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2800 ಫಲಾನು ಭವಿಗಳನ್ನು ಗುರುತಿಸಲಾಗಿದ್ದು, 4.70 ಲಕ್ಷ ರೂಪಾಯಿಯನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ನುಡಿದರು.
ಶಾಸಕ ಯು.ಟಿ.ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಪುರಸಭೆಯ ಅಧ್ಯಕ್ಷ ಇಸ್ಮಾಯೀಲ್, ಉಪಾಧ್ಯಕ್ಷ ದಿನೇಶ್ ರೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಯು.ಎಚ್. ಫಾರೂಕ್ ಮತ್ತಿತರರದ್ದರು. ನಂತರ ದೇರಳಕಟ್ಟೆಯಲ್ಲೂ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುಲ್ ಅಝೀಜ್ ಮಲಾರ್ ಮತ್ತಿತರರು ಈ ಸಂದರ್ಭ ಹಾಜರಿದ್ದರು

Saturday, June 12, 2010

ಮಳೆ ವರದಿ: ಜೂನ್ 12

ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು ಇಂದು ಬೆಳಗ್ಗಿನ ಮಾಹಿತಿಯಂತೆ ಮಂಗಳೂರಿನಲ್ಲಿ 14.0 ಮಿ.ಮೀ, ಪುತ್ತೂರಿನಲ್ಲಿ 14.0, ಬಂಟ್ವಾಳದಲ್ಲಿ 94.0, ಸುಳ್ಯದಲ್ಲಿ 1.4 ಹಾಗೂ ಬೆಳ್ತಂಗಡಿಯಲ್ಲಿ 11.4ಮಿ.ಮೀ ಮಳೆ ದಾಖಲಾಗಿದೆ. ಸಹಾಯವಾಣಿ:2220584.

'ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾಮಾಜಿಕ ಬದ್ಧತೆ ಅಗತ್ಯ'

ಮಂಗಳೂರು, ಏಪ್ರಿಲ್ 12:ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸಾಮಾಜಿಕ ಹೊಣೆಯಾಗಿದ್ದು 14 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ ಎಂದು ಮಂಗಳೂರು ನಗರ ಪೋಲಿಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು.

ಸಂತ ಅಲೋಷಿಯಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚ ರಣೆಯನ್ನು ಉದ್ಘಾಟಿಸಿ ಸಿಂಗ್ ಮಾತನಾಡುತ್ತಿದ್ದರು. ಮಕ್ಕಳಿಂದ ಉತ್ಪಾದಿಸಲ್ಪಟ್ಟ ವಸ್ತುಗಳನ್ನ ಖರೀದಿಸದೆ, ಮಕ್ಕಳನ್ನು ಗೃಹಕೃತ್ಯಗಳಿಗೆ ಬಳಸಿಕೊಳ್ಳದೆ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸ ಬೇಕೆಂದರು. ಬಾಲಕಾರ್ಮಿಕ ಪದ್ಧತಿ ಮಕ್ಕಳ ಮಾರಾಟಕ್ಕೂ ಪ್ರೋತ್ಸಾಹ ನೀಡುತ್ತಿದ್ದು, ಕಾನೂನು ಪ್ರಕಾರ ಅಪರಾಧಗಳೆಂದು ಪರಿಗಣಿಸ ಲ್ಪಟ್ಟವನ್ನು ಸಮಾಜ ಪ್ರೋತ್ಸಾಹಿ ಸಬಾರದು ಎಂದ ಅವರು, ವಿಚಾರ ಜೂನ್ 12ರ ಈ ದಿನಾಚರಣೆ ಸಮಾಜಕ್ಕೆ ಸೂಕ್ತ ಸಂದೇಶವನ್ನು ನೀಡಬೇಕೆಂದರು. ಮುಖ್ಯ ಅತಿಥಿಗಳಾಗಿದ್ದ ಮನಾಪ ಆಯುಕ್ತರಾದ ಡಾ. ಕೆ.ಎಸ್. ವಿಜಯಪ್ರಕಾಶ್ ಅವರು ಮಾತನಾಡಿ, ವಿದ್ಯೆ, ಅವಕಾಶ ವಂಚಿತ ಜನರ ಬಗ್ಗೆ ಉಳ್ಳವರು ಚಿಂತಿಸಬೇಕು. ಸಮಸ್ಯೆಗೆ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆ ತಮ್ಮದೇ ಕೊಡುಗೆ ನೀಡಿದ್ದು, ಈ ಸಮಸ್ಯೆ ನಿವಾರಣೆಗೆ ಸಾಮಾಜಿಕ ಸಮಾನತೆಗೆ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಉಚಿತ ಶಿಕ್ಷಣದಿಂದ ಹಿಡಿದು ಆರೋಗ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಸಾಮಾಜಿಕ ಅನಿಷ್ಠಗಳನ್ನು ನಿವಾರಿಸಲು ಆಂದೋಲನ ಮಾದರಿ ಕಾರ್ಯಕ್ರಮ ಗಳಾಗಬೇಕೆಂದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್. ಆರ್. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಸಾವಿರ ಮಕ್ಕಳ ಪಾಲಕರಿಂದ ಬಾಲಕಾರ್ಮಿಕ ಪದ್ಧತಿ ವಿರೋಧಿಸಿ ಘೋಷಣಾ ಪತ್ರವನ್ನು ಸ್ವೀಕರಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ವಿ.ಪಾಟೀಲ್, ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಅಪ್ಪಯ್ಯ ಸಿಂಧಿ ಹಟ್ಟಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಾಮೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಎ. ಶಕುಂತಲ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್. ಪಿ.ಚಂಗಪ್ಪ ಮಾತನಾಡಿದರು. ಶಾಲಾ ಮುಖ್ಯೋಪಾ ಧ್ಯಾಯರಾದ ವಂದನೀಯ ಮೆಲ್ವಿನ್ ಪಿಂಟೋ ಉಪಸ್ಥಿತರಿದ್ದರು. ಶಾಲೆಯ ಸಂಪನ್ಮೂಲ ವ್ಯಕ್ತಿಯಾಗಿ ಎಂ. ಪುರುಷೋತ್ತಮ ಭಟ್ ಮಾತನಾಡಿದರು. ಕಾರ್ಮಿಕ ಅಧಿಕಾರಿ ಗೋಪಾಲಗೌಡ ಸ್ವಾಗತಿಸಿದರು. ಹಿರಿಯ ನಿರೀಕ್ಷಕ ಕೆ. ಎಸ್. ಸತ್ಯ ನಾರಾಯಣ ವಂದಿಸಿದರು.

Friday, June 11, 2010

ಗುಣಾತ್ಮಕ ಬದಲಾವಣೆಗೆ ತಂತ್ರಜ್ಞರ ಸಲಹೆ ಅಗತ್ಯ: ಡಾ. ವಿ.ಎಸ್. ಆಚಾರ್ಯ

ಮಂಗಳೂರು,ಜೂ.11:ರಾಜ್ಯ ಅಭಿವೃದ್ಧಿಪಥದಲ್ಲಿ ಮುನ್ನುಗ್ಗುತ್ತಿದ್ದು,ಬದಲಾವಣೆಯ ವೇಗ, ವ್ಯಾಖ್ಯಾನ ಬದಲಾಗುತ್ತಿರುವ ಸಂದರ್ಭದಲ್ಲಿ ಎಲ್ಲ ಕ್ಷೇತ್ರದ ಪರಿಣತರ ಸೇವೆಯ ಅಗತ್ಯವನ್ನು ಮನಗಂಡ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ವಿಶೇಷ ಕಾರ್ಯಪಡೆ ರಚನೆಗೆ ಆದ್ಯತೆ ನೀಡಿತು ಎಂದು ಗೃಹಮಂತ್ರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ವಿ.ಎಸ್. ಆಚಾರ್ಯ ಅವರು ಹೇಳಿದರು.
ಅವರು ನಗರದ ಟಿ ವಿ ರಮಣ ಪೈ ಕನ್ವೆಂನ್ಷನ್ ಸೆಂಟರ್ ನಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಗುಣಮಟ್ಟ ಖಾತರೀಕರಣ ಹಾಗೂ ಉನ್ನತೀಕರಣದ ಸಾಮಗ್ರಿಗಳ ಬಗೆಗಿನ ವಸ್ತು ಪ್ರದರ್ಶನ ಮತ್ತು ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದರು. ಯೋಜನೆಗಳನ್ನು ರೂಪಿಸುವಾಗ, ಅನುಷ್ಠಾನಕ್ಕೆ ತರುವಾಗ ಪ್ರಾದೇಶಿಕ ವೈವಿಧ್ಯತೆಯನ್ನು ಗಮನದಲ್ಲಿರಿಸಿಬೇಕು. ಎಲ್ಲೆಡೆಗೂ ಒಂದೇ ಮಾನದಂಡವನ್ನು ಅನುಸರಿಸ ಬಾರದೆಂಬುದನ್ನು ವಿವರಿಸಿದ ಸಚಿವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ವೇಗಕ್ಕನು ಸಾರವಾಗಿ ಬೆಳೆಯದಿದ್ದರೆ ಹಿಂದುಳಿಯುವುದು ನಿಸ್ಸಂಶಯ ಎಂದರು.ರಾಜ್ಯ ಶಿಕ್ಷಣ,ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದರೂ, ಮೂಲಭೂತ ಸೌಕರ್ಯ, ಅದರಲ್ಲೂ ಆರ್ಥಿಕ ಮೂಲಭೂತ ಸೌಕರ್ಯಗಳ ಕ್ಷೇತ್ರದಲ್ಲಿ ಬಹಳಷ್ಟು ಹಿಂದುಳಿದಿದ್ದೇವೆ. ಗುಣಮಟ್ಟದ ವಿಷಯಕ್ಕೆ ಬಂದಾಗ ನಾವು ಸಾಧಿಸಬೇಕಾದುದು ಬಹಳಷ್ಟಿದೆ ಎಂಬುದು ಸ್ಷಪ್ಟ ಎಂದು ಸಚಿವರು ನುಡಿದರು.
ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಆದ್ಯತೆ:ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಬೇಕಾದ ಆದ್ಯತೆ ನೀಡುತ್ತಿಲ್ಲ ಎಂಬ ಕೊರಗನ್ನು ಇಂದೂ ವ್ಯಕ್ತಪಡಿಸಿದ ಸಚಿವರು, ಈ ಕ್ಷೇತ್ರಕ್ಕೆ ವಿಶೇಷವಾಗಿ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಬೇಕು; ವಿಶ್ವೇಶ್ವರಯ್ಯನಂತಹವರು ಮತ್ತೆ ಹುಟ್ಟಿ ಬರಲಿಲ್ಲ; ಅಂತಹ ವಿಜ್ಞಾನಿಗಳ ಅಗತ್ಯವನ್ನು ಪ್ರತಿಪಾದಿಸಿದ ಸಚಿವರು, ಪ್ರತಿಭಾನ್ವಿತರ ಅಗತ್ಯ ಈ ಕ್ಷೇತ್ರಕ್ಕಿದೆ. ಈ ಕ್ಷೇತ್ರವನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದರು.
ಕಾರ್ಯಾಗಾರಗಳು, ಬುಲೆಟಿನ್ ಗಳು ಇಂಜಿನಿಯರ್ ಗಳಿಗೆ ಹೊಸ ಆತ್ಮವಿಶ್ವಾಸ ತುಂಬಲು ನೆರವಾಗಲಿ ಎಂದು ಹಾರೈಸಿದರು. ರಾಜ್ಯವು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದಲ್ಲದೆ, ಇನ್ನೈದು ವರ್ಷಗಳಲ್ಲಿ ಇತರರಿಗೆ ಮಾರಾಟ ಮಾಡುವ ಹಂತ ತಲುಪಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದರು. ಸಂಶೋಧನೆಗಳಿಲ್ಲದೆ ಅಭಿವೃದ್ಧಿಯಿಲ್ಲ ಇದಕ್ಕೆ ವಿಜ್ಞಾನಿಗಳ ಕೊಡುಗೆ ಅಗತ್ಯ ಎಂಬುದನ್ನು ಅವರು ನುಡಿದರು. ಅಧ್ಯಕ್ಷತೆ ವಹಿಸಿದ್ದ ಕಾಮಗಾರಿ ಗುಣ ಭರವಸೆ ಪಡೆಯ ಅಧ್ಯಕ್ಷ ಡಾ ಸಿ.ಎಸ್. ವಿಶ್ವನಾಥ್ ಅವರು, ಇಂಜಿನಿಯರ್ ಗಳಿಗೆ ತಂತ್ರಜ್ಞಾನ ಕುರಿತ ಅರಿವನ್ನು ಹೆಚ್ಚಿಸುವ ಯತ್ನಗಳಾಗಬೇಕು; ಅವಕಾಶಗಳನ್ನು ಕೊಡಬೇಕು ಎಂದರು.ಕಾರ್ಯಪಡೆಯ ಎಲ್ಲ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಿಲ್ಲಾಡಳಿತ ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ ಎಂದರು. ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಕೇಂದ್ರ ಸರ್ಕಾರ ವಿಶ್ವಬ್ಯಾಂಕ್ ನೆರವು ಪಡೆದು ಯೋಜನೆ ರೂಪಿಸಲಿದೆ ಎಂದರು.

Thursday, June 10, 2010

ಕಾಮಾಗಾರಿ ಗುಣಮಟ್ಟವೇ, ಸಮಾಜಕ್ಕೆ ಉತ್ತಮ ಕೊಡುಗೆ; ಸಚಿವ ಉದಾಸಿ

ಮಂಗಳೂರು,ಜೂ.10: ಸರ್ಕಾರದ ಕಾಮಗಾರಿಗಳಲ್ಲಿ ಗುಣಮಟ್ಟ ಖಾತರೀಕರಣ ಹಾಗೂ ಪರಿಸರ ಸ್ನೇಹಿ ಯೋಜನೆಗಳಿಗೆ ಆದ್ಯತೆ ನೀಡಲು ತಂತ್ರಜ್ಞರ ಹಾಗೂ ಸಂಶೋಧಕರ ಮಾರ್ಗದರ್ಶನದೊಂದಿಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಕಾರ್ಯಾಗಾರ ಅಗತ್ಯ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಹೇಳಿದರು.

ನಗರದ ಟಿ ವಿ ರಮಣಪೈ ಕನ್ವೆಂಷನ್ ಸೆಂಟರ್ ನಲ್ಲಿ ಕಾಮಗಾರಿ ಗುಣ ಭರವಸೆ ಕಾರ್ಯಪಡೆ ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಲಾದ ಸರ್ಕಾರದ ಕಾಮಗಾರಿಗಳಲ್ಲಿ ಗುಣಮಟ್ಟ ಖಾತರೀಕರಣ ಹಾಗೂ ಉನ್ನತೀಕರಣದ ಸಾಮಗ್ರಿಗಳ ಬಗ್ಗೆ ವಸ್ತುಪ್ರದರ್ಶನ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರತಿಯೊಬ್ಬ ಅಧಿಕಾರಿಗೂ ಸಾಮಾಜಿಕ ಬದ್ಧತೆಯಿದ್ದು ಕಾಮಗಾರಿಗಳಲ್ಲಿ ನಿರಂತರ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಅವರು ಸಲಹೆ ಮಾಡಿದರು. ಮರ,ಉಸುಕಿಗೆ ಪರ್ಯಾಯವಾಗಿ ಹೊಸ ಸಂಶೋಧನೆಯನ್ನು ಕಂಡುಹುಡುಕಿದ್ದು ಪರಿಸರ ಸಂರಕ್ಷಣೆಯ ಬಗ್ಗೆಯೂ ಇಲಾಖೆ ಗಮನ ಹರಿಸಿದೆ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿದ್ದ ಶಾಸಕ ಎನ್ ಯೋಗೀಶ್ ಭಟ್ ಅವರು, ವ್ಯವಸ್ಥೆಯಲ್ಲಿರುವ ಲೋಪಗಳ ಬಗ್ಗೆ ಅಧ್ಯಯನ ಮಾಡಿ ಇಂತಹ ಕಾರ್ಯಾ ಗಾರಗಳನ್ನು ಏರ್ಪಡಿಸುವ ಮುಖಾಂತರ ಇಚ್ಛಾ ಶಕ್ತಿಯಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕಿದೆ ಎಂದರು. ಸಂಸದ ನಳಿನ್ ಕುಮಾರ್ ಅವರು, ಕಾರ್ಯಾನುಷ್ಠಾನದ ಅಗತ್ಯವನ್ನು ಪ್ರತಿಪಾದಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಎನ್. ಲಕ್ಷ್ಮಣ್ ರಾವ್ ಪೇಶ್ವೆ, ಮುಖ್ಯ ಇಂಜಿನಿಯರ್ ಸಿ.ಮೃತ್ಯುಂಜಯ ಸ್ವಾಮಿ ಅಧೀಕ್ಷಕ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ,ಇಂಜಿನಿಯರ್ ಗಳಾದ ಬೆಲದ್, ಬಿ.ಆರ್ ಎಸ್ ಕಿರಣ್ ಶಂಕರ್, ಬಾವೀಕಟ್ಟಿ ಅವರು ಉಪಸ್ಥಿತರಿದ್ದರು. ಕಾಮಗಾರಿ ಗುಣ ಭರವಸೆ ಕಾರ್ಯಪಡೆ ಸದಸ್ಯ ಮಹಾದೇವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರವೀಂದ್ರನಾಥ್ ಸ್ವಾಗತಿಸಿದರು.

Wednesday, June 9, 2010

ಮಂಗಳೂರಿಗರಿಗೆ ಒಂದೇ ಸೂರಿನಡಿ ಹಲವು ಸೇವೆಗೆ 'ಮಂಗಳೂರು ಒನ್'

ಮಂಗಳೂರು,ಜೂ.9:ಮಂಗಳೂರಿನ ನಾಗರೀಕರಿಗೆ ಒಂದೇ ಸೂರಿನಡಿ ಹಲವು ಸೇವೆಗಳನ್ನು ನೀಡಲು ನಗರದ 3 ಕಡೆಗಳಲ್ಲಿ 85 ಲಕ್ಷ ರೂ. ವೆಚ್ಚದಲ್ಲಿ 3 ಮಂಗಳೂರು ಒನ್ ಸೇವಾ ಕೇಂದ್ರಗಳನ್ನು ಆರಂಭಿಸಿದೆ. ನಾಗರೀಕರ ಸೇವೆಗಾಗಿ ಮನಾಪದ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ನ ಪಾಲೆಮಾರ್ ಅವರು ಇಂದು ಸೇವಾ ಕೇಂದ್ರವನ್ನು ಉದ್ಘಾಟಿಸಿ, ದೇಶಕ್ಕೆ ದಕ್ಷಿಣ ಕನ್ನಡ ಮಾದರಿಯಾಗಬೇಕೆಂದರು.ಕಾರ್ಯ ಕ್ರಮದಲ್ಲಿ ಉಪ ಸ್ಥಿತರಿದ್ದ ನಗರಾ ಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರು ಮಾತ ನಾಡಿ, ಕರ್ನಾಟಕ ಇ-ಗವರ್ನೆನ್ಸ್ ನಲ್ಲಿ ಅಗ್ರೇಸರ ರಾಜ್ಯವಾಗಿ ಹೊರ ಹೊಮ್ಮಿದೆ ಎಂದರು.ಸೇವಾ ಕೇಂದ್ರವನ್ನು ಸದಾ ಸುಸ್ಥಿತಿ ಯಲ್ಲಿಡುವ ಬಗ್ಗೆ ಹಾಗೂ ಜನ ಸ್ನೇಹಿ ಯಾಗಿರಿಸಿ ಕೊಳ್ಳುವ ಬಗ್ಗೆ ಸಂಬಂಧ ಪಟ್ಟವರು ಜಾಗರೂ ಕರಾಗಿ ಕರ್ತವ್ಯ ನಿಭಾ ಯಿಸ ಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಯೋಗೀಶ್ ಭಟ್ ಅವರು, ಭ್ರಷ್ಟಾಚಾರ ಮುಕ್ತ ಹಾಗೂ ಪಾರ ದರ್ಶಕ ವ್ಯವಸ್ಥೆಗೆ ಇ- ಆಡಳಿತ ಪ್ರಮುಖ ಪಾತ್ರ ವಹಿಸಿದೆ ಎಂದರು.ಡಾ. ವಿ.ಎಸ್ .ಆಚಾರ್ಯ ಶುಭ ಹಾರೈಸಿದರು.
ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಮೇಯರ್ ರಜನಿ ದುಗ್ಗಣ್ಗ, ಉಪಮೇಯರ್ ರಾಜೇಂದ್ರ ಕುಮಾರ್, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಅಬೂಬಕ್ಕರ್ ಉಪಸ್ಥಿತರಿದ್ದರು. ಇ-ಆಡಳಿತ ಪ್ರಧಾನ ಕಾರ್ಯದರ್ಶಿ ಎಂ.ಎನ್ ವಿದ್ಯಾಶಂಕರ್ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಡಾ. ಕೆ.ಎನ್. ವಿಜಯ ಪ್ರಕಾಶ್ ಸ್ವಾಗತಿಸಿದರು. ಇ- ಆಡಳಿತದ ಸಿಇಒ ಡಾ. ಡಿ.ಎಸ್. ರವೀಂದ್ರನ್ ಧನ್ಯವಾದ ಸಮರ್ಪಿಸಿದರು.ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಕಾನೂನು ಉಲ್ಲಂಘಕರಿಗೆ ಬೆಂಬಲ ಬೇಡ;ಸಚಿವ ಸುರೇಶ್ ಕುಮಾರ್

ಮಂಗಳೂರು,ಜೂ.9:ಮಂಗಳೂರು ಮಹಾನಗರಪಾಲಿಕೆ ಇತರರಿಗೆ ಮಾದರಿಯಾಗಬೇಕಿದ್ದು, ನಿಯಮಗಳನ್ನು ಪಾಲಿಸಿ ನಗರ ಬೆಳೆಯಬೇಕು. ಕಾನೂನು ಉಲ್ಲಂಘಿಸುವವರಿಗೆ ಬೆಂಬಲ ನೀಡದೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ನಗರಾಭಿವೃದ್ಧಿ,ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಸ್.ಸುರೇಶ್ ಕುಮಾರ್ ಹೇಳಿದರು.

ಅವರಿಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮಹಾ ನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತ ನಾಡುತ್ತಿದ್ದರು. ನಗರಪಾಲಿಕೆ ತನ್ನ ವ್ಯಾಪ್ತಿಯಲ್ಲಿರುವ ಅಧಿಕಾರವನ್ನು ಬಳಸಿಕೊಂಡು ಟ್ರೇಡ್ ಲೈಸನ್ಸ್ ನೀಡಿಕೆ ಬಗ್ಗೆ ಎಚ್ಚರಿಕೆ ವಹಿಸಿದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು. ವಾಣಿಜ್ಯ ಕಟ್ಟಡಗಳು ಸೇರಿದಂತೆ ಬೃಹತ್ತ್ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ನಿಗದಿತ ಪ್ರದೇಶದಲ್ಲಿ ಕಟ್ಟಡದ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಫಲಕಗಳನ್ನು ಹಾಕಲು ಸಲಹೆ ಮಾಡಿದ ಸಚಿವರು, ಪಾರ್ಕಿಂಗ್ ಸ್ಥಳ ದುರುಪ ಯೋಗದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಪಾರ್ಕಿಂಗ್ ಪಾಲಿಸಿ ಕುರಿತು ಬೈ ಲಾ ಮಾಡುವ ಬಗ್ಗೆ ಹೇಳಿದ ಅವರು ನಗರದಲ್ಲಿ ರಸ್ತೆಯನ್ನು ಪಾರ್ಕಿಂಗ್ ಪ್ಲೇಸ್ ಆಗಿ ಪರಿವರ್ತಿ ಸುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 112 (ಸಿ) ಕಾನೂನು ಪಾಲಿಕೆಯ ಕರ್ತವ್ಯ ನಿರ್ವಹಣೆಗೆ ಪೂರಕವಾಗಿದ್ದು, ಅದರ ದುರು ಪಯೋಗವಾಗ ಬಾರದೆಂದು ಸ್ಪಷ್ಟ ಪಡಿಸಿದ ಸಚಿವರು, ನಗರ ಪಾಲಿಕೆ ಉತ್ತಮ ಕೆಲಸಗಳಿಂದ ಪ್ರಚಾರ ಪಡೆಯಬೇಕೇ ವಿನ: ಇಂಜಿನಿಯರ್ ಗಳ ಹೊಡೆದಾಟದ ಮೂಲಕ ಅಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದರಲ್ಲದೆ, ವಿಚಾರಣಾ ವರದಿಯನ್ನು 15 ದಿವಸಗಳೊಳಗೆ ನೀಡಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಪಾಲಿಕೆಯು ಕೈಗೊಳ್ಳುತ್ತಿರು ಜನಸ್ನೇಹಿ ಯೋಜನೆಗಳ ಬಗ್ಗೆ ಜನರ ಫೀಡ್ ಬ್ಯಾಕ್ ಪಡೆಯಬೇಕೆಂದು ಸಲಹೆ ಮಾಡಿದ ಸಚಿವರು, ಪಾಲಿಕೆಯ ಉತ್ತಮ ಕೆಲಸಗಳಿಗೆ ಅಭಿನಂದನೆ ಸಲ್ಲಿಸಲು ಮರೆಯಲಿಲ್ಲ. ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಸಮವಸ್ತ್ರ, ಪೌರ ಕಾರ್ಮಿಕರಿಗೆ ಗ್ರೂಪ್ ಇನ್ಷೂರೆನ್ಸ್ ಮಾಡಿಸಲು, ಎಲ್ಲ ಉದ್ದಿಮೆದಾರರ ಸಮೀಕ್ಷೆ ನಡೆಸಿ, ತೆರಿಗೆ ಸಂಗ್ರಹಿ ಸಬೇಕೆಂದು ತಾಕೀತು ಮಾಡಿದರು. ನೀರಿನ ತೆರಿಗೆ ಪಾವತಿ ಬಗ್ಗೆ ವನ್ ಟೈಮ್ ಸೆಟಲ್ ಮೆಂಟ್ ಮಾಡ ಬೇಕೆಂದ ಅವರು,ನಗರದಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು. ಪಾಲಿಕೆಯ ಸದಸ್ಯರಿಗೆ ಗೌರವಧನ ಹೆಚ್ಚಳದ ಮತ್ತು ಪಾಲಿಕೆಗೆ ಅವಶ್ಯವಿರುವ ಸಿಬಂದಿಗಳ ಕೊರತೆಯನ್ನು ನೀಗಿಸುವ ಭರವಸೆಯನ್ನು ಸಭೆಯಲ್ಲಿ ಸಚಿವರು ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಯೋಗೀಶ್ ಭಟ್ ಅವರು ಸಲಹೆ ನೀಡಿ, ನಗರ ಯೋಜನೆ, ರಿಂಗ್ ರೋಡ್ ಹಾಗೂ ಎನ್ ಎಂ ಪಿ ಟಿ ಯಂತಹ ಬೃಹತ್ತ ಉದ್ದಿಮೆಗಳಿಂದ ನಗರದ ಅಭಿವೃದ್ಧಿಗೆ ಕೊಡುಗೆಯನ್ನು ಪಡೆಯಬೇಕೆಂದು ಸಲಹೆ ಮಾಡಿದರು.
ಸಭೆಯಲ್ಲಿ ಪಾಲನಾ ವರದಿ ಮಂಡಿಸಿದ ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್ ಅವರು, ಮಂಗಳೂರಿನಲ್ಲಿ ವಾಹನ ನಿಲುಗಡೆ ದೊಡ್ಡ ಸಮಸ್ಯೆಯಾಗಿದ್ದು, ಅನಧಿಕೃತ ನಿರ್ಮಾಣ ತಡೆಗೆ ಕ್ರಮ. ನಿಲುಗಡೆಗೆ ಕಾದಿರಿಸಿದ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿರುವುದಕ್ಕೆ ಕೆ.ಎಂ.ಸಿ ಕಾಯಿದೆಯನ್ವಯ ಸೂಕ್ತ ಕ್ರಮ; ಮೂಡಾದ ಸಹಯೋಗದೊಂದಿಗೆ ಹಂಪನಕಟ್ಟೆಯಲ್ಲಿ ಮನಾಪಕ್ಕೆ ಸೇರಿದ ಸುಮಾರು 1.55 ಎಕರೆ ಜಾಗದಲ್ಲಿ 500 ಕಾರು ತಂಗುದಾಣಕ್ಕೆ ಅವಕಾಶವಿರುವ ಬಹು ಅಂತಸ್ತು ಕಾರು ತಂಗುದಾಣ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡಿದರು.ನಗರದ ಬಹುಮುಖ್ಯ ಸಮಸ್ಯೆಯಾದ ಘನ ತಾಜ್ಯ ವಿಲೆವರಿಗಾಗಿ ಪಚ್ಚನಾಡಿಯಲ್ಲಿ 77.93 ಎಕ್ರೆ ಜಮೀನನ್ನು ಖರೀದಿಸಲಾಗಿದೆ.ಕುಡ್ಸೆಂಪ್ ಯೋಜನೆಯಡಿ 9.39 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಯಾನಿಟರಿ ಲ್ಯಾಂಡ್ ಫಿಲ್ ಮಾಡಲಾಗಿದೆ. ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ತಡೆಗಟ್ಟಲು ತುರ್ತಾಗಿ ಮಣ್ಣಿನ ಹೊದಿಕೆ ಹೊದಿಸಿ ನೀರು ಸಿಂಪಡನೆಗೆ ವ್ಯವಸ್ಥೆ ಮಾಡಲಾಗಿದೆ. ವೈಜ್ಞಾನಿಕ ಮಣ್ಣಿನ ಹೊದಿಕೆಗೆ 2.50 ಕೋಟಿ ರೂ. ಅಂದಾಜು ಪಟ್ಟಿ ಸಿದ್ಧಪಡಿಸಿದೆ. 12ನೇ ಹಣಕಾಸು ಯೋಜನೆಯಡಿ ಈಗಾಗಲೇ ಟೆಂಡರ್ ಕರೆದು ರೂ. ಒಂದು ಕೋಟಿ ಅಂದಾಜು ವೆಚ್ಚದಲ್ಲಿ ಹೆಚ್ಚುವರಿ ಕಾಂಪೋಸ್ಟ್ ಕಾಂಕ್ರೀಟ್ ಅಂಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಶಾಲಾ-ಕಾಲೇಜುಗಳಲ್ಲಿ ಘನ ತಾಜ್ಯ ವಿಲೇವರಿ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗಿದೆ. 31.3.10 ರವರೆಗೆ ಜಾಹೀರಾತು ಶುಲ್ಕವಾಗಿ 75.76 ಲಕ್ಷ ಶುಲ್ಕ ವಸೂಲು ಮಾಡಲಾಗಿದೆ. ಉದ್ದಿಮೆ ಪರವಾನಿಗೆಯಡಿ ರೂ. 77 ಲಕ್ಷ ವಸೂಲು ಮಾಡಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸರ್ವೇ ನಡೆಸಿ ಉದ್ದಿಮೆ ಪರವಾನಿಗೆಗಳನ್ನು ನವೀಕರಿಸುವ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಸಚಿವರಿಗೆ ತಿಳಿಸಿದರು.ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಲ್ಯಾಬ್ ಸ್ಥಾಪಿಸುವ ಬಗ್ಗೆ ಈಗಾಗಲೇ ಟೆಂಡರ್ ಕರೆದಿದ್ದು ಯಾರೂ ಭಾಗವಹಿಸದ ಕಾರಣ ಮರು ಟೆಂಡರ್ ಕರೆಯಲು ಕ್ರಮವಹಿಸಲಾಗಿದೆ ಎಂದರು. ನಗರಪಾಲಿಕೆ ಒಟ್ಟು 126 ಎಂ ಎಲ್ ಡಿ ನೀರು ಸರಬರಾಜು ಮಾಡುತ್ತಿದ್ದು,12 ಎಂ ಎಲ್ ಡಿ ನೀರನ್ನು ಉಳ್ಳಾಲ ಮತ್ತು ಮುಲ್ಕಿಗೆ ನೀಡಲಾಗುತ್ತಿದೆ. ಒಳಚರಂಡಿ ವ್ಯವಸ್ಥೆಯನ್ನು ಶೇಕಡ 75 ರಷ್ಟು ಕುಡ್ಸೆಂಪ್ ಯೋಜನೆಯಡಿ ಅಳವಡಿಸಲಾಗುತ್ತಿದ್ದು, 369 ಕಿ.ಮೀ ಒಳಚರಂಡಿ ವ್ಯವಸ್ಥೆಯಲ್ಲಿ 267.3 ಕಿ.ಮೀ. ಮುಕ್ತಾಯಗೊಂಡಿದೆ. ಒಳಚರಂಡಿ ವ್ಯವಸ್ಥೆಗೆ 214.47 ಕೋಟಿ ಗುತ್ತಿಗೆ ಮೊತ್ತ ನೀಡಿದ್ದು, 142.2 ಕೋಟಿ ಖರ್ಚಾಗಿರುತ್ತದೆ. 2010ರೊಳಗೆ ಕಾಮಗಾರಿ ಮುಗಿಯಲಿದೆ ಎಂಬ ಮಾಹಿತಿ ನೀಡಿದರು. ವಿದ್ಯುತ್ ಉಳಿಸಲು ಹಾಗೂ ಬೀದಿ ದೀಪಗಳ ನಿರ್ವಹಣೆಗೆ ಕಂಪ್ಯೂಟರೈಸ್ಡ್ ರಿಮೋಟ್ ಕಂಟ್ರೋಲ್ ಸ್ಟ್ರೀಟ್ ಲೈಟ್ ಮಾನಿಟರಿಂಗ್ ಸಿಸ್ಟಮ್ ಅನ್ನು ಪಿ ವಿ ಎಸ್ ನಿಂದ ಲೇಡಿಹಿಲ್ ವೃತ್ತದವರೆಗೆ ಪ್ರಾಯೋಗಿಕವಾಗಿ ಅಳವಡಿಸಲು ಕ್ರಮ ಜರುಗಿಸಲಾಗಿದೆ. ತುಂಬೆ ಕಿಂಡಿ ಅಣೆಕಟ್ಟಿಗೆ 7 ಕೋಟಿ ರೂ.ಗಳನ್ನು ಮನಾಪದಿಂದ ಪಾವತಿಸಲಾಗಿದೆ.ನಗರ ಪಾಲಿಕೆ ವ್ಯಾಪ್ತಿಯ ಕೊಳಚೆ ಪ್ರದೇಶಗಳ ಅಭಿವೃದ್ದಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮನಾಪದ ವಿನೂತನ ಯೋಜನೆಯಡಿ ದೈಹಿಕ ಅಶಕ್ತರು ಹಾಗೂ ಹಿರಿಯ ನಾಗರೀಕರಿಗೆ ಅರ್ಜಿ ಸಲ್ಲಿಸಲು ಆಶಾ ಚಾವಡಿ, ದೈಹಿಕ ಅಶಕ್ತರು ಹಾಗೂ ಹಿರಿಯ ನಾಗರೀಕರಿಗೆ ವಿಶೇಷವಾದ ಅರ್ಜಿ ಸ್ವೀಕಾರ ಕೇಂದ್ರವನ್ನು ತೆರೆಯಲಾಗುವುದು. ಜನರ ದೂರು ದುಮ್ಮಾನ ಪರಿಹರಿಸಲು 24 ಗಂಟೆ ಸಹಾಯ ವಾಣಿಯಲ್ಲದೆ ಎನ್ ಎಸ್ ಎಸ್, ರೋಟರಿ ಕ್ಲಬ್ ಮತ್ತು ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಲೇರಿಯಾ ನಿರ್ಮೂಲನೆ, ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮೊದಲ ಹಂತದ ಕಾಮಗಾರಿಗಳ ಪೂರ್ಣಗೊ ಳಿಸುವಿಕೆಗೆ ಹಾಗೂ ಪಾದಚಾರಿ ಸ್ನೇಹಿ ಮೂಲಭೂತ ಸೌಕರ್ಯ ಗಳಾದ ಚರಂಡಿ, ಫುಟ್ ಪಾತ್ ನಿರ್ಮಾಣಕ್ಕೆ ಎರಡನೇ ಹಂತದಡಿ ಇನ್ನು 100 ಕೋಟಿ ರೂ. ಅನುದಾನದ ಅಗತ್ಯವನ್ನು ಶಾಸಕರು ಸಭೆ ಯಲ್ಲಿಟ್ಟರು.ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ಸಭೆಯಲ್ಲಿ ನಗರಾಭಿವೃದ್ಧಿಗೆ ಪೂರಕ ಮಾಹಿತಿ ನೀಡಿದರಲ್ಲದೆ, ಯೋಜನೆಗಳನ್ನು ರೂಪಿಸುವಾಗ ಭವಿಷ್ಯವನ್ನು ಗಮನದಲ್ಲಿರಿಸಿ ಹಾಗೂ ಕಾನೂನು ಪಾಲಿಸಿ ಎಂದು ಮಾರ್ಗದರ್ಶನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು ಪಾಲನೆ ಸಂದರ್ಭದಲ್ಲಿ ನಾಗರೀಕರಿಗೆ ಸಮಯವಕಾಶ ಹಾಗೂ ಮಾಹಿತಿ ನೀಡಿ ಎಂದರು. ಜಿಲ್ಲಾಧಿಕಾರಿ ಪೊನ್ನುರಾಜ್ ಅವರು ನಗರಾಭಿವೃದ್ಧಿ ಸಚಿವರಿಗೆ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಪೂರಕ ಮಾಹಿತಿಗಳನ್ನು ನೀಡಿದರು. ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್ ಪಾಲಿಕೆ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಬಳಿಕ ಸಚಿವರು ಜ್ಯೋತಿಯಲ್ಲಿ ನಿರ್ಮಿಸಲಾದ ಸುಸ್ಜಜ್ಜಿತ ಬಸ್ ನಿಲ್ದಾಣ ವೀಕ್ಷಿಸಿದರು.