Saturday, June 26, 2010

ಅವಕಾಶಗಳನ್ನು ಸದುಪಯೋಗಪಡಿಸಿ ಉದ್ಯಮಿಗಳಾಗಿ:ಸಚಿವ ಪಾಲೆಮಾರ್

ಮಂಗಳೂರು,ಜೂ.26:ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಪ್ರವಾಸೋದ್ಯಮ ಇಲಾಖೆ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವ ಉದ್ಯೋಗಾಕಾಂಕ್ಷಿಗಳು ಉದ್ಯಮಿಗಳಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.


ಅವರಿಂದು ಪ್ರವಾಸೋದ್ಯಮ ಇಲಾಖೆ 09-10 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ವಕಾಶ ಕಲ್ಪಿಸುವ ಸದು ದ್ದೇಶದಿಂದ ಶೇ.50 ಧನ ಸಹಾಯ ನೀಡಿ ಪ್ರವಾಸಿ ಟ್ಯಾಕ್ಸಿಗಳನ್ನು ಖರೀದಿಸಿ,ವಿತರಿಸುವ ಸಮಾ ರಂಭದಲ್ಲಿ ಮಾತ ನಾಡುತ್ತಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರು ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಯಶಸ್ವಿ ಉದ್ಯಮಿ ಗಳಾಗಲು ವೈಯಕ್ತಿಕ ನೆಲೆಯಲ್ಲಿ ಸಲಹೆ ಸಹಾಯ ನೀಡಲು ಸಿದ್ಧ ಎಂದ ಅವರು, ಎಲ್ಲ ಇಲಾಖೆಗಳಲ್ಲೂ ಶೇ.22 ರಷ್ಟು ಮೀಸಲಾತಿಯಿದ್ದು, ಸರ್ಕಾರ ಸಾಮಾಜಿಕ ಸಮಾನತೆಗೆ ಪೂರಕ ಹಲವು ಯೋಜನೆಗಳನ್ನು ಹಮ್ಮಿ ಕೊಂಡಿದೆ.ಯುವಕರು ಕೀಳರಿಮೆ ಯನ್ನು ತೊರೆದು ಮುನ್ನುಗ್ಗ ಬೇಕೆಂದು ಹೇಳಿದ ಅವರು, ಯುವಕರನ್ನು ಹುರಿದುಂಬಿಸಲು ತರಬೇತಿ ನೀಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಯ ಬೇಕಿದೆ ಎಂದರು.
ಪರಿಶಿಷ್ಟ ಜಾತಿಯಡಿ ಅದ್ಯಪಾಡಿಯ ಮನೋಜ್ ಕುಮಾರ್, ಸುಳ್ಯದ ಅಜ್ಜಾವರ ಗ್ರಾಮದ ದಿವಾಕರ, ಪುತ್ತೂರು ನೆಕ್ಕಿಲಾಡಿಯ ಗಣೇಶ್ ನಾಯ್ಕ್, ಮಂಗಳೂರು ಬಡಗುಳಿಪಾಡಿಯ ರಾಜೇಶ್ ನಾಯ್ಕ್, ಮುಲ್ಕಿಯ ಮಂಜುನಾಥ್ ಆರ್, ದೆಲಂತಬೆಟ್ಟಿನ ಗಂಗಾಧರ, ಮೂಡಬಿದ್ರಿ ಮಾರ್ಪಾಡಿಯ ಮಾಧವ, ಮಂಗಳೂರಿನ ಗಣೇಶಚಂದ್ರ, ಡಿ.ಕೃಷ್ಣ, ಮೂಡುಶೆಡ್ಡೆಯ ಜಗದೀಶ್, ಬೆಳ್ತಂಗಡಿ ನಿಡ್ಲೆಯ ಗಣೇಶ, ನಂತೂರಿನ ಸಂದೀಪ್ ಇವರಿಗೆ ಹಾಗೂ ಪರಿಶಿಷ್ಟ ಪಂಗಡದಡಿ ಸುಳ್ಯದ ದೇವಚಳ್ಳ ರಮೇಶ್, ಪುತ್ತೂರಿನ ಸಂಪ್ಯದ ಪದ್ಮನಾಭ ನಾಯ್ಕ್ ಇವರಿಗೆ ಟಾಟಾ ಇಂಡಿಕಾ- ಡಿ ಎಲ್ ಇ III ಪ್ರವಾಸಿ ಟ್ಯಾಕ್ಸಿ ವಿತರಿಸಲಾಯಿತು. 3,55,160 ರೂ.ಗಳ ವಾಹನ ವಿತರಿಸಲಾಗಿದ್ದು, ಶೇ.50 ರಷ್ಟು ಸಹಾಯಧನವನ್ನು ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗಿದೆ. ಜಿಲ್ಲೆಯಿಂದ ಇನ್ನೂ ನಾಲ್ಕು ಅಭ್ಯರ್ಥಿಗಳ ಆಯ್ಕೆ ಪ್ರಗತಿಯಲ್ಲಿದೆ.
ಮೇಯರ್ ರಜನಿ ದುಗ್ಗಣ್ಣ ಸಮಾರಂಭದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಆದಿಲಕ್ಷ್ಮಮ್ಮ ಉಪಸ್ಥಿತರಿದ್ದರು.